ಕಳೆದ ಶನಿವಾರ ಜಗತ್ತಿನಾದ್ಯಂತ ಬೌದ್ಧರು ತಮ್ಮ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣ
ದಿನವಾದ ವೈಶಾಖ ಶುದ್ಧ ಪೌರ್ಣಮಿಯನ್ನು ಆಚರಿಸಿದರು. ಭಗವಾನ್ ಬುದ್ಧನ ಬದುಕಿನಲ್ಲಿ
ಹಾಗೆಯೇ ಬೌದ್ಧರ ಬದುಕಿನಲ್ಲಿ ಈ ದಿನಕ್ಕೆ ವಿಶೇಷ ಅರ್ಥವಿದೆ.
ಬುದ್ಧ ಹುಟ್ಟಿದ್ದು, ತನ್ನ ಅರಮನೆಯನ್ನು ತೊರೆದದ್ದು, ಬೋಧಿಯನ್ನು ಪಡೆದದ್ದು ಮತ್ತು ಮಹಾನಿರ್ವಾಣವನ್ನು ಹೊಂದಿದ್ದು-ಎಲ್ಲವೂ ವೈಶಾಖ ಶುದ್ಧ ಪೌರ್ಣಮಿಯಂದೇ. ಈ ಸಲದ ಆಚರಣೆ ವಿಶೇಷವಾಗಿತ್ತು.
ಏಕೆಂದರೆ ಇದು ಭಗವಾನ್ ಬುದ್ಧ ಬೋಧಿಯನ್ನು ಪಡೆದ ಚರಿತ್ರಾರ್ಹ ಘಟನೆಯ 2600ನೇ ವರ್ಷ. ಹೀಗಾಗಿ ಶ್ರಿಲಂಕಾದಲ್ಲಿ ಕಳೆದ ವರ್ಷವಿಡೀ ಬೋಧಿಯ 2600ನೇ ವರ್ಷದ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಕಪಿಲವಸ್ತು ಎಂಬ ಸಣ್ಣ ಗಣರಾಜ್ಯದಲ್ಲಿ 2600ವರ್ಷಗಳಿಗಿಂತ ಹಿಂದೆ ಹುಟ್ಟಿದ ಒಬ್ಬ ಅರಸು ಕುಮಾರ ಬೋಧಿಸಿದ ಧರ್ಮ ಇವತ್ತು ಇಡೀ ಜಗತ್ತನ್ನು ವ್ಯಾಪಿಸಿದೆ. ಧರ್ಮಾನಂದ ಕೋಸಂಬಿಯವರು ಹೇಳಿದ ಹಾಗೆ ಬೌದ್ಧ ಧರ್ಮ ಭಾರತ ವಿಶ್ವಕ್ಕೆ ನೀಡಿದ ಅತ್ಯಂತ ಮೌಲಿಕ ಕೊಡುಗೆ.
ಬುದ್ಧನ ಮಹಾ ಪರಿನಿರ್ವಾಣದ ನಂತರ ಕೆಲವೇ ಶತಮಾನಗಳಲ್ಲಿ ಅದು ಶ್ರಿಲಂಕೆಗೆ ವ್ಯಾಪಿಸಿತು. ಮೊದಲನೆ ಸಹಸ್ರಮಾನದ ಕೊನೆಯವರೆಗೆ ಪೂರ್ವ ಏಷಿಯಾದ ಬಹುಭಾಗಗಳಿಗೆ ನಂತರ ಮಧ್ಯ ಏಷಿಯಾದ ಹಲವು ಪ್ರಾಂತಗಳಿಗೆ ಹಬ್ಬಿ ಜಗತ್ತಿನ ಅತ್ಯಂತ ವ್ಯಾಪಕ ಧರ್ಮವಾಗಿ ಬೆಳೆದ ಬೌದ್ಧ ಧರ್ಮ ಎರಡನೆ ಸಹಸ್ರಮಾನದ ಕೊನೆಗೆ ಯೂರೋಪನ್ನು ಪ್ರವೇಶಿಸಿತು.
ಆನಂತರ ಅಮೆರಿಕಾಕ್ಕೂ ಪ್ರವೇಶಿಸಿತು. ಬೌದ್ಧಧರ್ಮ ಇಂದು ಅಮೆರಿಕದ ಜನಪ್ರಿಯ ಧರ್ಮಗಳಲ್ಲಿ ಕ್ರೈಸ್ತ ಧರ್ಮದ ನಂತರ ಎರಡನೆಯ ಸ್ಥಾನದಲ್ಲಿದೆ. ಇಷ್ಟಾದರೂ ತನ್ನ ಹುಟ್ಟುನಾಡಾದ ಭಾರತದಲ್ಲಿ ಖಿಲವಾಯಿತೆನ್ನಲಾದರೂ, ಕಳೆದ ಶತಮಾನದಲ್ಲಿ ಡಾ.ಅಂಬೇಡ್ಕರ್ ಅವರ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ಬಹು ದೊಡ್ಡ ಸಂಖ್ಯೆಯಲ್ಲಿ ದಲಿತರು ಪ್ರವೇಶಿಸಿದರು. ಇವತ್ತು ಜಗತ್ತಿನ ಮೂರನೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರ ಧರ್ಮವಾಗಿದೆ.
ಬೌದ್ಧ ಧರ್ಮದ ಇನ್ನೊಂದು ವಿಶೇಷವೆಂದರೆ ಯಾವುದೇ ಬಲ ಪ್ರಯೋಗವಿಲ್ಲದೆ ಅತ್ಯಂತ ವ್ಯಾಪಕ ಧರ್ಮವಾಗಿ ಬೆಳೆದದ್ದು. ಇದನ್ನು ಜಪಾನಿನ ಆಧುನಿಕ ಕವಿ ತಹಕಾ ಹೀಗೆ ಬಣ್ಣಿಸುತ್ತಾನೆ:`ಎರಡು ಸಾವಿರ ವರ್ಷ ಬುದ್ದ ಬೆಳಕು ಕಂಡಾಗಿಂದ ಸೂರ್ಯನ ಮುಖವೂ ಪೂರ್ತಿ ಬದಲಾಗಿದೆ`
ಬೌದ್ಧ ಧರ್ಮದ ಇತಿಹಾಸದಲ್ಲಿ ರಕ್ತಪಾತವಾಗಲೀ, ಧರ್ಮಯುದ್ಧಗಳಾಗಲೀ ಎಂದೂ ಘಟಿಸಿಲ್ಲ. ಆದರೂ ಅದು ಇಷ್ಟೊಂದು ಲೋಕಪ್ರಿಯವಾಗಲು ಕಾರಣವೇನು? ಹೆಚ್ಚೂಕಡಿಮೆ ಬುದ್ಧನ ಕಾಲದಲ್ಲೇ ಭಗವಾನ್ ಮಹಾವೀರ ಪ್ರಚಾರಕ್ಕೆ ತಂದ ಜೈನ ಧರ್ಮ ಭಾರತದ ಗಡಿಗಳನ್ನು ದಾಟಿ ಹೋಗಲೇ ಇಲ್ಲ.
ಧರ್ಮ ಪ್ರಚಾರವಾಗಬೇಕಾದರೆ ಹಣ ಮತ್ತು ಬಲದ ನೆರವಿನಿಂದಲೇ ಸಾಧ್ಯ ಎಂಬುದು ಇಂದಿನ ಬುದ್ಧಿಜೀವಿಗಳ ಅಂಬೋಣ. ಈ ಮಾತು ಕೆಲವು ಧರ್ಮಗಳ ವಿಷಯದಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ ನಿಜ. ಎಲ್ಲ ಕಾಲಕ್ಕೂ ಅಲ್ಲ. ಕ್ರೈಸ್ತ ಧರ್ಮ ರೋಮ್‌ಗೆ ಬಂದಾಗ ಅದು ಬಡವರ ಧರ್ಮವಾಗಿತ್ತು. ಶ್ರಿಮಂತರ, ಬಲಾಢ್ಯರ ಧರ್ಮವಾಗಿದ್ದು ಆಮೇಲೆ.
ಐದು ಮಂದಿ ಅನುಯಾಯಿಗಳಿಂದ ಪ್ರಾರಂಭವಾದ ಬೌದ್ಧ ಧರ್ಮ ಇಷ್ಟು ಜಗದ್ವ್ಯಾಪಿಯಾಗಲು ಕಾರಣ ಬುದ್ಧನ ಬೋಧನೆಗಳ ಸರಳತೆ ಮತ್ತು ಮಾನವಪರತೆ. ಬುದ್ಧನ ಕಾಲ ಭಾರತದ ಇತಿಹಾಸದಲ್ಲಿ, ಇಡೀ ಜಗತ್ತಿನಲ್ಲಿ ದಾರ್ಶನಿಕತೆಯ ಬಹು ದೊಡ್ಡ ಮಂಥನದ ಯುಗ. ಜೈನ ಧರ್ಮವನ್ನೂ ಒಳಗೊಂಡು ಸುಮಾರು 62 ದಾರ್ಶನಿಕ ಪಂಥಗಳು ಆಗ ಭಾರತದಲ್ಲಿ ಪ್ರಚಾರದಲ್ಲಿದ್ದವು.
ಇದು ಬುದ್ಧನ ಅನುಯಾಯಿಗಳಿಗೂ ಆಗಾಗ ತಲೆಕೆಡಿಸುತ್ತಿತ್ತು. ಒಬ್ಬ ಶಿಷ್ಯ ಬುದ್ಧನನ್ನು ಹೀಗೆ ಪ್ರಶ್ನಿಸುತ್ತಾನೆ: ಭಂತೆ, ನೀವು ಒಂದು ಧರ್ಮವೆನ್ನುತ್ತಿದ್ದೀರಿ, ಆ ನಾಥಪುತ್ತ (ಮಹಾವೀರ) ಇನ್ನೊಂದನ್ನು ಹೇಳುತ್ತಾನೆ. ಮಖ್ಖಲಿ ಗೋಸಲ ಇನ್ಯಾವುದನ್ನೋ ಹೇಳುತ್ತಾನೆ. ನಾವು ಯಾರನ್ನು ನಂಬಬೇಕು? ಅದಕ್ಕೆ ಭಗವಾನ್ ನೀಡಿದ ಉತ್ತರ ಇದು: ಯಾರನ್ನೂ ನಂಬಬೇಡಿ.
ನಾನು ಹೇಳಿದೆನೆಂದು ನಾನು ಹೇಳಿದ್ದನ್ನೂ ನಂಬಬೇಡಿ; ನಾಥಪುತ್ತ ಹೇಳಿದನೆಂದು ಅವನು ಹೇಳಿದ್ದನ್ನು ನಂಬಬೇಡಿ; ಗೋಸಲ ಹೇಳಿದ್ದನ್ನು ಅವನು ಹೇಳಿದ್ದೆಂದು ನಂಬಬೇಡಿ. ಎಲ್ಲವನ್ನು ನಿಮ್ಮ ಅನುಭವದಲ್ಲಿ ಪರೀಕ್ಷಿಸಿ ಆಮೇಲೆ ಒಪ್ಪಿಕೊಳ್ಳಿ. ಇಷ್ಟು ಜನ ಹೇಳಿದ ಬೇರೆ ಬೇರೆ ಮಾರ್ಗಗಳಲ್ಲಿ ಯಾವುದರಿಂದ ನಿಮಗೆ ದುಃಖ ನೀಗುವುದೋ, ಆನಂದ ದೊರಕುವುದೋ ಅದನ್ನು ಆತುಕೊಳ್ಳಿ.
ಎಲ್ಲ ಮನುಷ್ಯರ ನಿತ್ಯಾನುಭವದ ಮೇಲೆ ನಿಂತ ಅನುಭವಮುಖಿ ಸರಳ ಪರಿಕಲ್ಪನೆಗಳ ಆಧಾರದ ಮೇಲೆ ಲಿಂಗ, ಜಾತಿ, ದೇಶ ಪ್ರಬೇಧಗಳ ಹೊರತಾಗಿ ಸರ್ವರೂ ಅನುಸರಿಸಬಹುದಾದ ಬೌದ್ಧಧರ್ಮ ಸಹಜವಾಗಿಯೇ ಬಹುಸಂಖ್ಯೆಯ ಜನತೆಗೆ ಒಪ್ಪಿಗೆಯಾಯಿತು.
ಬುದ್ಧ ಶಾಸನದ ಬುನಾದಿ ಇತರ ಧರ್ಮಗಳಲ್ಲಿರುವಂತೆ ಕಾಣದ, ಕಲ್ಪಿಸಿದ ದೇವರುದಿಂಡರ ಮೇಲೆ ನಿಂತಿರಲಿಲ್ಲ. ದುಃಖವೆಂಬುದು ಎಲ್ಲರ ಅನುಭವ. ಅಲ್ಲಿಂದಲೇ ಬುದ್ಧನ ಬೋಧನೆ ಶುರುವಾಗುವುದು. ಮಾನವರ ಮನಸ್ಸು ಇಷ್ಟವಾದ್ದನ್ನು ಬಯಸುತ್ತದೆ, ಇಷ್ಟವಲ್ಲದ್ದನ್ನು ಒಲ್ಲೆನೆನ್ನುತ್ತದೆ.
ಆದ್ದರಿಂದಲೇ ದುಃಖ. ಸುಖ,ವ್ಯಸನಗಳೆರಡೂ ನಶ್ವರವೆಂಬ ಸರಳ ಸತ್ಯವನ್ನು ನಾವು ಒಪ್ಪದಿರುವುದರಿಂದ ಯೌವನದಲ್ಲಿ ಬಾಲ್ಯಕ್ಕಾಗಿ, ವಾರ್ಧಕ್ಯದಲ್ಲಿ ಯೌವನಕ್ಕಾಗಿ, ಮುಪ್ಪಿನಲ್ಲಿ ಮತ್ತೆ ಬಾಲ್ಯ-ಯೌವನಗಳಿಗಾಗಿ ಹಪಹಪಿಸತೊಡಗುತ್ತೇವೆ. ಪ್ರಿಯರಿಗಾಗಿ ಕನಲುತ್ತೇವೆ; ಅಪ್ರಿಯರ ಬಗ್ಗೆ ಹೇಸುತ್ತೇವೆ.
ಬೇಕು ಬೇಡಗಳ ಹೊಡೆತಗಳ ನಡುವೆ ಆಯಾಸಗೊಳ್ಳುತ್ತೇವೆ. ಸುಖ-ವ್ಯಸನಗಳೆರಡಕ್ಕೂ ಆಧಾರವಾದ ಅನಿತ್ಯವಾದ, ಅನಾತ್ಮವಾದಗಳನ್ನು ಬುದ್ಧ ತನ್ನ ಬೋಧನೆಯ ಕೇಂದ್ರದಲ್ಲಿರಿಸಿ, ರೋಗಕ್ಕೆ ಮದ್ದನ್ನು ಹುಡುಕುವ ವೈದ್ಯನ ಹಾಗೆ ದುಃಖದ ಕಾರಣವನ್ನು ಮತ್ತದರ ನಿವಾರಣೆಯ ಮಾರ್ಗವನ್ನು ಬೋಧಿಸಿದ.
ಅವನು ಚಾರ್ವಾಕರಂತೆ ಸುಖಕ್ಕೆ ಅಂಟಿಕೊಳ್ಳಲಿಲ್ಲ; ಅಥವಾ ಗೋಸಲನಂತೆ ನಿಯತಿವಾದಿಯಾಗಲಿಲ್ಲ; ಇತರ ಪಂಥಗಳಂತೆ ನಮ್ಮಷ್ಟೇ ಅನಿತ್ಯರಾದ ದೇವರುಗಳನ್ನು, ಸ್ವರ್ಗ-ನರಕಗಳನ್ನು ಆಶ್ರಯಿಸಲಿಲ್ಲ. ಕಂತೆಪುರಾಣ, ಕಂದಾಚಾರಗಳಿಂದ, ನರಕಭೀತಿಯಿಂದ ಮನಸ್ಸುಗಳನ್ನು ಬಿಡುಗಡೆಗೊಳಿಸಿದ. ಇದು ಬುದ್ಧ ಬೋಧಿಸಿದ ಧರ್ಮ. ಇಲ್ಲಿ ಧರ್ಮವೆಂಬ ಪದದ ಅರ್ಥ ಅನಿತ್ಯಮೂಲವಾದ ವಿಶ್ವಸತ್ಯ.
ಬುದ್ಧ ಬೋಧಿಸಿದ ಎಂಟು ಮೆಟ್ಟಿಲ ಹಾದಿಯನ್ನು ಅನುಸರಿಸಿದವನು ನಿರ್ವಾಣವೆಂಬ ದುಃಖವಿರಹಿತವಾದ ಅನಿರ್ವಚನೀಯ ನೆಲೆಯನ್ನು ತಲುಪಬಹುದೆಂಬ ಸಂದೇಶವನ್ನು ಬುದ್ಧ ಜಗತ್ತಿಗೆ ಸಾರಿದ.
ಈ ಸರಳ ಸತ್ಯಾಧಾರಿತ ಪಂಥ ಹಿಂಸೆ ಮತ್ತು ಸಂಘರ್ಷಗಳಿಂದ ತುಂಬಿದ್ದ ಬುದ್ಧನ ಕಾಲದಲ್ಲೇ ಎಲ್ಲರನ್ನೂ ಸೆಳೆಯಿತು. ಬ್ರಾಹ್ಮಣರು, ವಣಿಕರು, ಕ್ಷತ್ರಿಯರು ಮಾತ್ರವಲ್ಲದೆ ಜನ ಸಾಮಾನ್ಯರೂ ಈ ಹೊಸ ಧರ್ಮದತ್ತ ಆಕರ್ಷಿತರಾದರು. ತನ್ನ ತತ್ವಗಳನ್ನು ಸರ್ವರಿಗೂ ಶ್ರುತಪಡಿಸಲೋಸುಗ ಭಗವಾನನು ಬುದ್ಧ ಸಂಘವನ್ನು ಸ್ಥಾಪಿಸಿದ. ಮುಂದೆ ಭಾರತದಲ್ಲಿ ಬೌದ್ಧಧರ್ಮ ಖಿಲವಾಗಿದ್ದಕ್ಕೆ ಹಲವು ಕಾರಣಗಳನ್ನು ಹೇಳಲಾಗಿದೆ.
ಒಂದು ವರ್ಗದ ಜನರ ಕುತಂತ್ರ ಮತ್ತು ಕುಟಿಲತೆಗಳೇ ಮೂಲ ಕಾರಣವೆಂದು ಕೆಲವರ ಸರಳ ತೀರ್ಮಾನ. ಆದರೆ ಧರ್ಮಾನಂದ ಕೋಸಂಬಿಯವರು ಸೂಚಿಸುವ ಕಾರಣ ಹೆಚ್ಚು ಸಮಂಜಸವಾಗಿ ತೋರುತ್ತದೆ. ಬುದ್ಧನ ಕಾಲದಲ್ಲೇ ರಾಜಾಶ್ರಯ ಪಡೆಯತೊಡಗಿದ್ದ ಬೌದ್ಧಧರ್ಮ ಅವನ ನಂತರದ ಕಾಲದಲ್ಲಿ ಹೆಚ್ಚಿನ ರಾಜಾಶ್ರಯ ಪಡೆದು ಧನ, ಕನಕ, ವಸ್ತುವಾಹನ, ಅನುಭವರಹಿತ ಶುಷ್ಕಪಾಂಡಿತ್ಯಗಳ ಹೊರೆಯಡಿ ಮುಗ್ಗರಿಸಿತೆಂದು ಅವರು ಹೇಳುತ್ತಾರೆ.
ಮುಂದೆ ಬೌದ್ಧಧರ್ಮ ಹೀನಾಯಾನ-ಮಹಾಯಾನವಾಗಿ ಒಡೆದು, ಅವುಗಳಲ್ಲಿ ಅಸಂಖ್ಯಾತ ಕವಲುಗಳು, ಉಪ ಕವಲುಗಳು ಮೂಡಿ ಯಾವುದು ಬುದ್ಧ ಹೇಳಿದ್ದು, ಯಾವುದು ಹೇಳದೇ ಇದ್ದದ್ದು ಎಂಬುದು ಕಲಸುಕಲಸಾಗುತ್ತಿದ್ದಾಗ ಸುಮಾರು ಎರಡನೆ ಶತಮಾನದಲ್ಲಿ ಆರ್ಯ ನಾಗಾರ್ಜುನನು ಬುದ್ಧ ಶಾಸನದ ಸರಳ ಮೂಲೋದ್ದೇಶಗಳನ್ನು ಮತ್ತೆ ಸ್ಥಾಪಿಸುವುದಕ್ಕೋಸ್ಕರ ತನ್ನ ಮಾಧ್ಯಮಿಕ ಪಂಥವನ್ನು ಪ್ರಚಾರ ಮಾಡಿದ.
ಶೂನ್ಯವನ್ನು ಒಂದು ತಾತ್ವಿಕ ಪರಿಕಲ್ಪನೆಯಾಗಿ ಸ್ಥಾಪಿಸಿ ಮಾನವ ಚಿಂತನೆಗೆ ಹೊಸ ತಿರುವು ನೀಡಿದ. ಆದರೆ ಇಷ್ಟು ಹೊತ್ತಿಗಾಗಲೇ ಬೌದ್ಧಧರ್ಮ ಭಾರತದಲ್ಲಿ ಜನಪ್ರಿಯವಾಗುವ ಅವಕಾಶಗಳನ್ನು ಕಳೆದುಕೊಂಡಿತ್ತು. ಮುಂದೆ ಚಾಲ್ತಿಗೆ ಬಂದ ನಾಥ-ಸಿದ್ಧ ಮತ್ತು ಜನಪ್ರಿಯ ಭಕ್ತಿಪಂಥಗಳು ಬೌದ್ಧತತ್ವದ ಹಲವು ಮೌಲಿಕ ಅಂಶಗಳನ್ನು ಸಾಕಷ್ಟು ಹೀರಿಕೊಂಡಿದ್ದವು.
ಮುಂದೆ ಬೌದ್ಧಧರ್ಮ ಉಜ್ವಲವಾಗಿ ಬೆಳೆಯತೊಡಗಿದ್ದು ಭಾರತದ ಹೊರಗೆ. ಮೊದಲ ಸಹಸ್ರಮಾನದ ಕೊನೆಯವರೆಗೆ ಚೀಣಾ, ಮ್ಯಾನ್ಮಾರಿನಿಂದ ಹಿಡಿದು ಪೂರ್ವ ಏಷಿಯಾದ ಆ ತುದಿಯಲ್ಲಿರುವ ಜಪಾನಿನವರೆಗೂ ಅದರ ವರ್ಚಸ್ಸು ವ್ಯಾಪಿಸಿತು.
ಹೋದಹೋದ ಕಡೆ ಬುದ್ಧಧರ್ಮ ನಿಂತನೀರಾಗಿ ಉಳಿಯಲಿಲ್ಲ. ಆಯಾ ದೇಶಗಳ, ಪ್ರದೇಶಗಳ ಪ್ರಭಾವಗಳನ್ನು ಹೀರಿಕೊಂಡಿತು. ಹೊಸ ಧರ್ಮದ ಚೌಕಟ್ಟಿನಲ್ಲಿ ಅಲ್ಲಲ್ಲಿನ ದೇವ-ದೇವಿಯರ, ಸ್ವರ್ಗ-ನರಕಗಳ ಪರಿಕಲ್ಪನೆಗಳನ್ನು ಅಳವಡಿಸಿಕೊಂಡಿತು.
ಅದೇ ಸಮಯದಲ್ಲಿ ಅನಿತ್ಯತೆ, ಅನಾತ್ಮವಾದಗಳ ಮೇಲಿನ ಮೂಲ ಒತ್ತನ್ನು ಬಿಟ್ಟುಕೊಡಲಿಲ್ಲ. ಇವತ್ತು ಜಪಾನಿನಲ್ಲಿ ನಾಲ್ಕು ಮುಖ್ಯ ಪಂಥಗಳಿದ್ದರೂ ಒಟ್ಟು ಐವತ್ತಿಕ್ಕಿಂತ ಹೆಚ್ಚು ಸಣ್ಣ ಪಂಥಗಳು ಮತ್ತು ಉಪ ಪಂಥಗಳಿವೆ. ಒಂದು ವಿಶ್ವವ್ಯಾಪಿ ಬೃಹತ್ ಆಲದ ಮರದಂತೆ ಹಬ್ಬಿಕೊಂಡಿರುವ ಬುದ್ಧ ಧರ್ಮದ ಮೂಲಕಾಂಡವನ್ನು ಇಂದು ಹುಡುಕುವುದು ಸುಲಭವಲ್ಲ.
ಶ್ರಿಲಂಕಾ, ಮ್ಯಾನ್ಮಾರ್, ಥಾಯ್‌ಲ್ಯಾಂಡ್‌ಗಳ ಥೇರವಾದ ಬುದ್ಧಧರ್ಮ, ಟಿಬೆಟ್ಟಿನ ತಾಂತ್ರಿಕ ಬೌದ್ಧ ಪಂಥಗಳು, ಚೀಣಾದ ಬುದ್ಧ ಧರ್ಮಗಳು, ಜಪಾನಿನ ಝೆನ್ ಅಥವಾ ರಿಂಗೋಕ್ಯೆ ಪಂಥ ಈ ಎಲ್ಲ ಶಾಖೆಗಳು ಪ್ರತ್ಯೇಕ ಧರ್ಮಗಳೆನ್ನುವಷ್ಟರಮಟ್ಟಿಗೆ ಭಿನ್ನವಾಗಿಬಿಟ್ಟಿವೆ. ಥೇರವಾದ ದುಃಖ ನಿವಾರಣೆಗಾಗಿ ಮದಿರೆ, ಕಾಮ ತ್ಯಾಗವನ್ನು ಬೋಧಿಸಿದರೆ, ಟಿಬೆಟ್ಟಿನ ತಾಂತ್ರಿಕ ಪಂಥಗಳು ಅವನ್ನೂ ಸಾಧನೆಯ ಉಪಾಯಗಳನ್ನಾಗಿ ಬಳಸುತ್ತವೆ.
ಶಾಂತಿಯ ಪ್ರತೀಕವಾದ ಬೌದ್ಧಧರ್ಮದಲ್ಲಿದ್ದೂ ಝೆನ್ ಪಂಥ ಜಪಾನಿನ ಸಮರಕಲೆಗಳನ್ನು ತನ್ನ ಭಾಗಗಳನ್ನಾಗಿ ಮಾಡಿಕೊಂಡಿದೆ. ಆದರೂ ಅನಿತ್ಯತೆ ಮತ್ತು ಕರುಣೆಯ ಮೇಲಿನ ಅವಧಾರಣೆಯಿಲ್ಲದ ಯಾವ ಪಂಥವೂ ಬೌದ್ಧಧರ್ಮದಲ್ಲಿ ಇಲ್ಲ.
ಜಪಾನಿನ ಸುಖಾವತಿ ಪಂಥಗಳಂತವನ್ನು ಹೊರತುಪಡಿಸಿದರೆ ಬೌದ್ಧಧರ್ಮದಲ್ಲಿ ಪ್ರಾರ್ಥನೆಯ ಮೇಲೆ ಒತ್ತು ನೀಡಲಾಗಿಲ್ಲ.
ಬುದ್ಧನು ಜಗತ್ತಿಗೆ ನೀಡಿದ ತ್ರಿರತ್ನಗಳಾದ ಶೀಲ, ಸಮಾಧಿ, ಪ್ರಜ್ಞಾಗಳಲ್ಲಿ ಧ್ಯಾನ ಕೇಂದ್ರ ಸ್ಥಾನದಲ್ಲಿದೆ. ದುಃಖವೆನ್ನುವುದು ಮನೋಮೂಲವಾದ್ದರಿಂದ, ಆ ಮನಸ್ಸಿನ ಆಸೆಯೆಂಬ ವ್ಯಾಧಿಗೆ ಧ್ಯಾನವೇ ಔಷಧಿ.
ಧ್ಯಾನ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡಿ ಬೌದ್ಧಧರ್ಮ ಮಾನವ ಸ್ವಾಸ್ಥ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಬುದ್ಧ ಶಾಸನದ ಮೂಲಧಾರಣೆಗಳಲ್ಲಿ ಒಂದಾದ ಶಾಂತಿ ಪ್ರಿಯತೆ ಜಗತ್ತಿನ ಹಿಂಸೆಯನ್ನು ಅದೆಷ್ಟೋ ಪಟ್ಟು ಕಡಿಮೆ ಮಾಡಿದೆ. ಯುದ್ಧಪ್ರಿಯನಾದ ಅಶೋಕ ಶಾಂತಿಪ್ರಿಯನಾಗುವಂತೆ ಪ್ರೇರೇಪಿಸಿದ್ದೂ ಬೌದ್ಧಧರ್ಮವೇ.
ಬೌದ್ಧ ಧರ್ಮ ಮಾನವೀಯ ಚಿಂತನೆ ಮತ್ತು ಕಲೆಗಳಿಗೆ ನೀಡಿದ ಕೊಡುಗೆಯೂ ಅಪಾರ. ನಾಗಾರ್ಜುನನ ಶೂನ್ಯವಾದ ಮಾನವ ಚಿಂತನೆಯಲ್ಲಿ ಒಂದು ದೊಡ್ಡ ಮುನ್ನೆಗೆತ. ಸಂಸ್ಕೃತ ಕಾವ್ಯ-ನಾಟಕಗಳ ಮೊದಲಿನಲ್ಲಿ ಬೌದ್ಧಧರ್ಮದ ಪ್ರಭಾವವಿದೆ. ಭಾರತದ ಈಶಾನ್ಯದ ಭಾಷೆ-ಸಂಸ್ಕೃತಿ-ಧರ್ಮಗಳ ಮೂಲ ಮಾತೃಕೆಯಾದ `ಚರಿಯಾಪದ`ದಲ್ಲಿಯೂ ಬೌದ್ಧಧರ್ಮದ ಪ್ರಭಾವಗಳನ್ನು ಹುಡುಕಬಹುದು.
ಗಾಂಧಾರಯುಗದ ನಂತರ ಪ್ರಚಾರಕ್ಕೆ ಬಂದ ಧ್ಯಾನಿ ಬುದ್ಧ ಪ್ರತಿಮೆಗಳು ಸಂಸ್ಕೃತ ರಸ ಮೀಮಾಂಸೆಯಲ್ಲಿ ಶಾಂತರಸದ ಪರಿಕಲ್ಪನೆಗೆ ಅನುವು ಮಾಡಿಕೊಟ್ಟವು. ಟಿಬೆಟ್ಟಿನ ತನ್ಕಾ ಚಿತ್ರಕಲೆ, ಪಶ್ಚಿಮ ಹಿಮಾಲಯದ, ಅಜಂತಾ ಎಲ್ಲೋರಗಳ ಭಿತ್ತಿ ಚಿತ್ರಗಳು, ಚೀಣಾ,
ಕೊರಿಯಾ ಮತ್ತು ಜಪಾನಿನ ಪ್ರಕೃತಿ ಚಿತ್ರಗಳು, ಜಪಾನಿನ ಹಾಯ್ಕು ಕಾವ್ಯ ಮತ್ತು ಇತರ ಕಲೆಗಳಾದ ಕರಾಟೆ, ಜೂಡೋ, ಕೆಂಡೋ, ಚಹಾ ಸಮಾರಂಭ, ಇಕೆಬಾನ ಮುಂತಾದ ಕಲೆಗಳ ಹಿಂದೆ ಬೌದ್ಧ ಧರ್ಮದ ಸ್ಫೂರ್ತಿಯಿದೆ. ಈ ಪೌರ್ವಾತ್ಯ ಕಲೆಗಳು ಇಪ್ಪತ್ತನೆ ಶತಮಾನದಲ್ಲಿ ಪಶ್ಚಿಮಕ್ಕೆ ರವಾನೆಯಾಗಿ ಅಲ್ಲಿನ ಆಧುನಿಕ ಕಲೆಗಳ ನಿರ್ಮಿತಿಗೆ ನೆರವಾಗಿವೆ.
ಹೀಗೆ ಬೌದ್ಧ ಧರ್ಮ ನಶ್ವರವೆಂದು ತಾನು ಕರೆದ ಜಗತ್ತನ್ನು ಹೆಚ್ಚು ಸಹ್ಯವಾಗಿಯೂ ಸುಂದರವಾಗಿಯೂ ಮಾಡಿದೆ. ಆದ್ದರಿಂದಲೇ ಬುದ್ಧ ಹೇಳಿದ್ದು: ಧರ್ಮ ಮೊದಲಿನಲ್ಲಿ ಸುಂದರ, ನಡುವಿನಲ್ಲಿ ಸುಂದರ, ಕೊನೆಯಲ್ಲಿಯೂ ಸುಂದರ. ಎರಡೂವರೆ ಸಾವಿರ ವರ್ಷಗಳ ಹಿಂದೆ ಈ ಪೃಥ್ವಿಯನ್ನು ಬೆಳಗತೊಡಗಿದ ಬುದ್ಧ ವೈಶಾಖ ಶುದ್ಧ ಪೂರ್ಣಿಮೆಯ ಬೆಳಕು ಇಂದಿಗೂ ಜಗತ್ತನ್ನು ಬೆಳಗುತ್ತಿದೆ.

ಎಚ್.ಎಸ್. ಶಿವಪ್ರಕಾಶ
ಕೃಪೆ : ಪ್ರಜಾವಾಣಿ
No comments:
Post a Comment