ಬಿ.ವಿ. ವೀರಭದ್ರಪ್ಪ
ಪ್ರಾಚೀನ ಸಮಾಜವು ಅಲೆಮಾರಿಯಾಗಿತ್ತು. ಸಂಚಾರದ ಚಪಲತೆಯಿಂದಾಗಿ ಅದು ಅಲೆಮಾರಿಯಾಗಿರಲಿಲ್ಲ. ಹಸುಗಳೇ ಪ್ರಾಚೀನ ಸಮಾಜದ ಸಂಪತ್ತು. ಪಶು ಪಾಲನೆಗಾಗಿ ಹೊಸ ಹೊಸ ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಹೋಗಬೇಕಾಗಿದ್ದುದರಿಂದ ಪ್ರಾಚೀನ ಸಮಾಜ ಅನಿವಾರ್‍ಯವಾಗಿ ಅಲೆಮಾರಿಯಾಗಬೇಕಾಗಿತ್ತು. ಪ್ರಾಚೀನ ಸಮಾಜ ಕೃಷಿಯ ವಿಧಾನವನ್ನು ಕಂಡುಕೊಂಡಕೊಡಲೆ ತನ್ನ ವಾಸವನ್ನು ಸ್ಥಿರಗೊಳಿಸಿಕೊಂಡಿತು, ಹಸುವಿನಿಂದ ಭೂಮಿಗೆ ಸಂಪತ್ತು ವ್ಯತ್ಯಾಸವಾದೊಡನೆ ಅದು ಒಂದೆಡೆ ನೆಲಸುವಂತಾಯಿತು.
ಎಲ್ಲ ಅನಾಗರಿಕ ಜನಾಂಗವೂ ಒಂದೇ ಬಾರಿಗೆ ಸ್ಥಿರವಾಸಿ ಜೀವನ ಆರಂಭಿಸಲಿಲ್ಲ. ಕೆಲವು ಸ್ಥಿರವಾಗಿ ನೆಲೆ ನಿಂತವು. ಇನ್ನೂ ಕೆಲವು ಅಲೆಮಾರಿ ಜೀವನ ನಡೆಸುತ್ತಿದ್ದುವು. ಈ ಅನಾಗರಿಕ ಗುಂಪುಗಳು ಎಂದಿಗೂ ಶಾಂತಿಯಿಂದ ಬಾಳಲಿಲ್ಲ. ಸದಾ ಅವು ಪರಸ್ಪರ ಹೋರಾಡುತ್ತಿದ್ದುವು. ಅವುಗಳ ಹೋರಾಟಕ್ಕೆ ಮುಖ್ಯವಾದ ಕಾರಣಗಳೆಂದರೆ: ೧. ಹಸುಗಳ ಅಪಹರಣ, ೨. ಸ್ತ್ರೀಯರ ಅಪಹಾರ ಮತ್ತು ೩. ಇತರ ಪಂಗಡಗಳಿಗೆ ಸೇರಿದ ಹೊಲದಲ್ಲಿ ಕಳ್ಳತನದಿಂದ ತಮ್ಮ ಹಸುಗಳನ್ನು ಮೇಯಿಸುವುದು.
ಕೆಲವು ಗುಂಪುಗಳು ಸ್ಥಿರವಾಸ ಆರಂಭಿಸಿದೊಡನೆ ಇಂಥ ಗುಂಪುಗಳ ಮೇಲೆ ಹೋರಾಟ ನಡೆಸುವುದು ಹೆಚ್ಚು ಲಾಭದಾಯಕವೆಂದು ಅಲೆಮಾರೀ ಗುಂಪುಗಳೂ ತಿಳಿದುವು. ಅಲೆಮಾರಿ ಗುಂಪುಗಳ ವಿರುದ್ಧ ಹೋರಾಟಕ್ಕಿಂತ ಸ್ಥಿರವಾಸಿಗಳ ಮೇಲಿನ ಇಂಥ ಹೋರಾಟ ಹೆಚ್ಚು ಲಾಭದಾಯಕವೆನಿಸಿತ್ತು. ಸ್ಥಿರವಾಸಿ ಗುಂಪುಗಳು ಇಮ್ಮಡಿ ಸಂಪತ್ತುಳ್ಳವುಗಳೆಂದು ಅಲೆಮಾರಿ ಗುಂಪುಗಳು ತಿಳಿದಿದ್ದವು. ಅಲೆಮಾರಿಗುಂಪುಗಳಲ್ಲಿದ್ದಂತೆ ಅವುಗಳ ಬಳಿ ಹಸುಗಳಿದ್ದುವು. ಜೊತೆಗೆ ತಮ್ಮಲ್ಲಿರದ ಧಾನ್ಯವೂ ಸ್ಥಿರವಾಸಿಗಳ ಬಳಿ ಇತ್ತು. ಸ್ಥಿರವಾಸಿ ಗುಂಪುಗಳ ಸಂಪತ್ತನ್ನು ಕದಿಯುವ ಬಯಕೆಯಿಂದ ಅಲೆಮಾರಿ ಗುಂಪುಗಳ ವ್ಯವಸ್ಥಿತವಾದ ಆಕ್ರಮಣ ನಡೆಸುತ್ತಿದ್ದವು. ಸ್ಥಿರವಾಸಿ ಗುಂಪುಗಳಿಗೆ ಆ ಸಂಚಾರಿ ಗುಂಪುಗಳ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಹಲವಾರು ತೊಡಕುಗಳಿದ್ದುವು. ಹೆಚ್ಚು ಲಾಭದಾಯಕ ವೃತ್ತಿಯಲ್ಲಿ ತೊಡಗಿದ್ದ ಈ ಸ್ಥಿರವಾಸಿ ಗುಂಪುಗಳು ತಮ್ಮ ನೇಗಿಲುಗಳನ್ನು ಸದಾ ಖಡ್ಗವಾಗಿ ಬಳಸಲು ಸಾಧ್ಯವಿರಲಿಲ್ಲ. ಅಥವಾ ತಮ್ಮ ನಿವಾಸವನ್ನು ತ್ಯಜಿಸಿ ಈ ಧಾಳಿಕಾರರನ್ನು ಬೆನ್ನಟ್ಟಿಕೊಂಡು ಹೋಗುವುದು ಸಾಧ್ಯವಿರಲಿಲ್ಲ.
ಗುಂಪು ಹೋರಾಟದಲ್ಲಿ ಸೋತು ಅಳಿದುಳಿದವರು ಹೊರದೂಡಲ್ಪಟ್ಟ ಭ್ರಷ್ಟ ಜನ (Broken men)ರಾದರು. ಅನಾಗರಿಕ ಜನತಾ ಹೋರಾಟದಲ್ಲಿ ಸೋತು ಓಡಿಹೋದ ಗುಂಪು ಪೂರ್ಣ ನಾಶ ಹೊಂದುತ್ತಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸೋತ ಗುಂಪು ತುಂಡುತುಂಡಾಗುತ್ತಿತ್ತು. ಇದರ ಪರಿಣಾಮವಾಗಿ ಅನಾಗರಿಕ ಕಾಲದಲ್ಲಿ ಎಲ್ಲೆಲ್ಲೂ ಸಂಚರಿಸುವ ಈ ಭ್ರಷ್ಟ ಜನರಗುಂಪುಗಳು ಸದಾ ಇರುತ್ತಿದ್ದುವು.
ಪ್ರಾಚೀನ ಸಮಾಜವು ಮೂಲತಃ ರಕ್ತ ಸಂಬಂಧಿ ಗುಂಪಿನ ಆಧಾರದ ಮೇಲೆ ನಿಂತಿತ್ತೆಂಬುದನ್ನು ಲಕ್ಷಿಸಬೇಕು. ಆ ಸಮಾಜದ ಪ್ರತಿಯೊಬ್ಬನೂ ಆ ಕೂಟಕ್ಕೆ ಸೇರಿದವನು. ಅಂದರೆ ಆ ಗುಂಪಿಗೇ ಒಳಗಾಗಿರುವವನು, ಗುಂಪಿನ ಹೊರಗೆ ನಿಂತ ಯಾವೊಂದು ವ್ಯಕ್ತಿಗೂ ಜೀವನ ಸಾಧ್ಯವಿರಲಿಲ್ಲ. ಒಂದು ಗುಂಪಿನಲ್ಲಿ ಜನಿಸಿದಾತ ಇನ್ನೊಂದು ಗುಂಪು ಸೇರಿ ಅದರ ಸದಸ್ಯನಾಗುವುದೂ ಸಾಧ್ಯವಿರಲಿಲ್ಲ.
ಮೇಲಿನ ವಿವರಣೆಯಿಂದ ಪ್ರಾಚೀನ ಸಮಾಜ ಜೀವನದಲ್ಲಿ ಎರಡು ವರ್ಗಗಳಿದ್ದುವೆಂದು ತಿಳಿದುಬರುತ್ತದೆ. ಒಂದು ಗುಂಪು ಸ್ಥಿರವಾಗಿ ನೆಲೆಸಿದ್ದುದು. ಅಲೆಮಾರಿ ತಂಡಗಳ ಆಕ್ರಮಣಗಳ ಬಗೆಗೆ ಕಾವಲು ನಡೆಸಿ ಅವರನ್ನು ಹಿಂದಕ್ಕಟ್ಟ ಬಲ್ಲವರನ್ನು ಹುಡುಕುತ್ತಿತ್ತು. ಇನ್ನೊಂದು ಗುಂಪು ಸೋತ ಗುಂಪುಗಳಲ್ಲಿ ಅಳಿದುಳಿದು ಭ್ರಷ್ಟರಾದ ಜನಗಳದು, ತಮಗೆ ರಕ್ಷಣೆ ಮತ್ತು ಆಶ್ರಯ ನೀಡಬಲ್ಲವರನ್ನು ಅರಸುತ್ತಿತ್ತು.
ನಮಗೆ ಯಾವೊಂದು ಲಿಖಿತ ಆಧಾರಗಳು ಈ ಬಗೆಗೆ ದೊರೆತಿಲ್ಲವಾದರೂ ಈ ಎರಡು ಗುಂಪುಗಳೂ ಒಂದು ನಿರ್ದಿಷ್ಟ ಒಪ್ಪಂದಕ್ಕೆ ಬಂದಿರಬಹುದೆಂದು ಅಂಬೇಡ್ಕರ್ ಅವರು ಊಹಿಸುತ್ತಾರೆ. ಅಲೆಮಾರಿ ಭ್ರಷ್ಟಜನರ ಗುಂಪು ಸ್ಥಿರವಾಸಿ ಗುಂಪುಗಳ ಕಾವಲಿಗೆ ನಿಂತು ಆಕ್ರಮಣ ಎದುರಿಸಲು ಒಪ್ಪಿರಬಹುದು. ಪ್ರತಿಯಾಗಿ ಸ್ಥಿರವಾಸಿ ಗುಂಪುಗಳು ಇವರಿಗೆ ಆಶ್ರಯ ಮತ್ತು ಆಹಾರ ನೀಡಲು ಸಮ್ಮತಿಸಿರಬಹುದು.
ಈ ಭ್ರಷ್ಟಜನ ಎಲ್ಲಿ ವಾಸ ಮಾಡಬೇಕು? ಸ್ಥಿರವಾಸಿ ಜನರ ಜೊತೆಗೇ ಅಥವಾ ಹೊರಗಡೆಗೆ? ಈ ಸಮಸ್ಯೆ ಇತ್ಯರ್ಥವಾಗುವಲ್ಲಿ ಎರಡು ವಿಚಾರಗಳು ಪ್ರಮುಖ ಪಾತ್ರ ವಹಿಸಿರಬೇಕು. ಒಂದನೆಯದು ರಕ್ತಸಂಬಂಧ. ಪ್ರಾಚೀನ ಸಂಪ್ರದಾಯದಂತೆ ಒಂದೇ ರಕ್ತ ಸಂಬಂಧಿಗಳು ಮಾತ್ರವೆ ಒಂದು ಸಮಾಜದಲ್ಲಿರಲು ಸಾಧ್ಯ. ಗುಂಪಿಗೆ ಸೇರದ ಹಟ್ಟಿಯೊಳಗಡೆ ಪರಕೀಯನಿಗೆ ಪ್ರವೇಶವಿರಲಿಲ್ಲ. ಭ್ರಷ್ಟಜನರು ಪರಕೀಯರು. ಅವರು ಸ್ಥಿರವಾಸಿ ಗುಂಪಿಗಿಂತ ಭಿನ್ನ ಗುಂಪಿಗೆ ಸೇರಿದ್ದವರು. ಈ ಕಾರಣದಿಂದ ಅವರು ಸ್ಥಿರವಾಸಿ ಗುಂಪಿನಜತೆಗೆ ವಾಸಿಸಲು ಅರ್ಹರಾಗಿರುವುದಿಲ್ಲ. ಎರಡನೆಯದಾಗಿ, ಆಯಕಟ್ಟಿನ ದೃಷ್ಟಿಯಿಂದ ನೋಡಿದರೂ ವೈರಿಗುಂಪನ್ನು ಎದುರಿಸಲು ಇವರು ಹಳ್ಳಿಯ ಹೊರಗಡೆ ನೆಲಸುವುದೇ ಸೂಕ್ತವಾಗಿತ್ತು. ಈ ಭ್ರಷ್ಟ ಜನರು ಸ್ಥಿರವಾಸಿ ಗುಂಪಿನಿಂದ ಪ್ರತ್ಯೇಕವಾಗಿ, ದೂರವಾಗಿ, ಹಳ್ಳಿಯ ಹೊರಗಡೆ ನೆಲಸಲು ಈ ಎರಡು ಅಂಶಗಳು ಕಾರಣವಾದುವು.
ಗೋಮಾಂಸ ಭಕ್ಷಣೆಯನ್ನು ಬ್ರಾಹ್ಮಣರು, ಬ್ರಾಹ್ಮಣೇತರರು ಬಿಟ್ಟರು ಹಾಗೂ ಭ್ರಷ್ಟಜನರು ಅದನ್ನು ಬಳಸುತ್ತಾ ಸಾಗಿದರು. ಇದರಿಂದ ಭಿನ್ನ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬನೂ ಗೋಮಾಂಸ ಭಕ್ಷಕನಾಗಿದ್ದ. ನೂತನ ಪರಿಸ್ಥಿತಿಯಲ್ಲಿ ಒಂದು ವರ್ಗ ಮಾಂಸ ಭಕ್ಷಣೆ ಬಿಟ್ಟಿತ್ತು. ಮತ್ತೊಂದು ವರ್ಗ ಭಕ್ಷಿಸುತ್ತಿತ್ತು. ಇದು ಎದ್ದು ಕಾಣುವ ಅಂತರ. ಹಿಂದೆಂದೂ ಯಾವುದೂ ಮಾಡದಂತೆ, ಅದು ಸಮಾಜವನ್ನು ವಿಭಜನೆ ಮಾಡಿತು. ಆದರೂ ಕೂಡ ಅಸ್ಪೃಶ್ಯತೆ ಯನ್ನು ರೂಢಿಗೆ ತರುವಷ್ಟು ತೀವ್ರವಾಗಿ ಈ ಅಂತರವು ಸಮಾಜವನ್ನು ವಿಭಜಿಸಬೇಕಾಗಿರಲಿಲ್ಲ. ಅದೊಂದು ಸಾಮಾಜಿಕ ಭಿನ್ನತೆಯಾಗಿ ಉಳಿಯಬಹುದಾಗಿತ್ತು. ಸಮಾಜದ ವಿವಿಧ ವರ್ಗಗಳು ಆಹಾರದ ವಿಷಯದಲ್ಲಿ ಭಿನ್ನವಾಗಿರುವ ಹಲವಾರು ಉದಾಹರಣೆಗಳಿವೆ. ಒಬ್ಬ ಒಪ್ಪಿದುದನ್ನು ಇನ್ನೊಬ್ಬ ಒಪ್ಪುವುದಿಲ್ಲ. ಆದರೂ ಈ ಭಿನ್ನತೆಯು ಅದರೊಳಗಿನ ಸಂಪರ್ಕವನ್ನೇ ತೊಡೆದು ಹಾಕುವಂತಹುದಾಗಿಲ್ಲ.
ಭಾರತದಲ್ಲಿ ಸ್ಥಿರಜನಾಂಗ ಮತ್ತು ಭ್ರಷ್ಟ ಜನಾಂಗಗಳೊಳಗೆ ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಅಂತರ ಮೂಡಿಬರಲು ವಿಶೇಷ ಕಾರಣ ವೇನಾದರೂ ಇರಲೇ ಬೇಕು. ಗೋಮಾಂಸ ಭಕ್ಷಣೆಯು ಧರ್ಮಾತೀತವಾದುದು. ಕೇವಲ ಅಭಿರುಚಿಯ ಪ್ರಶ್ನೆ ಎಂದಾಗಿದ್ದರೆ, ಗೋಮಾಂಸ ಭಕ್ಷಕರು ಮತ್ತು ಭಕ್ಷಕರಲ್ಲದವರೊಳಗಿನ ಭಿನ್ನತೆ ತಲೆದೋರುತ್ತಲೇ ಇರಲಿಲ್ಲ. ದುರದೃಷ್ಟವಶಾತ್ ಗೋಮಾಂಸ ಭಕ್ಷಣೆಯನ್ನು ಅಭಿರುಚಿಯ ವಿಚಾರವಾಗಿ ಪರಿಗಣಿಸುವ ಬದಲಾಗಿ ಧಾರ್ಮಿಕ ದೃಷ್ಟಿಯಿಂದ ಕಾಣಲಾಯಿತು. ಬ್ರಾಹ್ಮಣರು ಗೋವನ್ನು ಪವಿತ್ರ ಪ್ರಾಣಿಯಾಗಿ ಪರಿಗಣಿಸಿದುದರಿಂದ ಹೀಗಾಯಿತು. ಇದರಿಂದ ಗೋಮಾಂಸ ಭಕ್ಷಣೆ ಪಾಪವೆನಿಸಿತು. ಭ್ರಷ್ಟಜನರು ಪಾಪ ಮಾಡಿದವರಾದುದರಿಂದ ಸಮಾಜದ ಆವರಣದಿಂದ ಹೊರಗುಳಿಯಬೇಕಾಯಿತು.
ಸಮಾಜ ಜೀವನದಲ್ಲಿ ಧರ್ಮದ ಸ್ಥಾನ ಮತ್ತು ಪ್ರಭಾವಗಳ ಬಗೆಗೆ ಅರಿವು ಇಲ್ಲದವರಿಗೆ ಈ ಉತ್ತರವು ತೃಪ್ತಿಕರವಾಗಿ ಕಾಣಲಾರದು. ಧರ್ಮವು ಅಂತಹ ಭಿನ್ನತೆಯನ್ನೇಕೆ ಪರಿಗಣಿಸಬೇಕು ಎಂದು ಅವರು ಪ್ರಶ್ನಿಸಬಹುದು. ಧರ್ಮದ ಸ್ಥಾನ ಮತ್ತು ಪ್ರಭಾವಗಳ ಬಗೆಗೆ ಈ ವಿಷಯಗಳನ್ನು ಅರಿತರೆ ವಿಷಯ ಮನದಟ್ಟಾದೀತು.
ಮೊದಲು ಧರ್ಮದ ವ್ಯಾಖ್ಯೆ ಪರಿಶೀಲಿಸೋಣ. ಎಲ್ಲ ಧರ್ಮಗಳಿಗೂ ಮೂಲಭೂತವಾದ ಒಂದು ವಿಶ್ವವ್ಯಾಪಿಗುಣವಿದೆ. ಅದು ಧರ್ಮಗಳೆಲ್ಲಾ ನಂಬಿಕೆ ಮತ್ತು ಆಚರಣೆಗಳ ಸಂಘಟಿತ ವ್ಯವಸ್ಥೆ ಎಂಬುದು. ಅದು ೧. ಪವಿತ್ರವೆನಿಸಿದುದಕ್ಕೆ ಸಂಬಂಧಿಸಿದುದು ಮತ್ತು ೨. ಅವುಗಳಲ್ಲಿ ನಂಬಿಕೆ ಇರುವವರನ್ನೆಲ್ಲಾ ಒಂದು ಸಮಾಜವಾಗಿ ಸಂಘಟಿಸುವುದು.
ಮೊದಲ ಸೂತ್ರದಂತೆ ಧರ್ಮವು ಮಾನವನ ಮನೋಭಾವದಲ್ಲಿ ಮೂಡಿದ ನಿಜವಾದ ಮತ್ತು ಆದರ್ಶವೆನಿಸಿದ ಎಲ್ಲವುಗಳನ್ನು ಎರಡು ವರ್ಗಗಳಾಗಿ ವಿಂಗಡಿಸುವುದು. ಒಂದು ಪವಿತ್ರವಾದುದು, ಇನ್ನೊಂದು ಅಪವಿತ್ರವಾದುದು.
ಬ್ರಾಹ್ಮಣರು ಗೋವನ್ನು ಪವಿತ್ರ ಪ್ರಾಣಿಯಾಗಿಸಿದರು. ಮೃತ ಗೋವು ಮತ್ತು ಜೀವಂತ ಗೋವುಗಳೊಳಗೆ ವ್ಯತ್ಯಾಸ ಸಾರಲು ಅವರು ಯೋಚಿಸಲಿಲ್ಲ. ಬದುಕಿರಲಿ, ಸತ್ತಿರಲಿ ಗೋವು ಪವಿತ್ರ ಪ್ರಾಣಿ. ಗೋಮಾಂಸ ಭಕ್ಷಣೆಯು ಅನೀತಿಯಷ್ಟೇ ಅಲ್ಲ. ಅದು ಅನೀತಿ, ಅನ್ಯಾಯ ಮಾತ್ರ ಆಗಿದ್ದರೆ ಅದಕ್ಕೆ ಶಿಕ್ಷೆಗಿಂತ ಹೆಚ್ಚಿನದೇನೂ ಅಗತ್ಯವಿರಲಿಲ್ಲ. ಗೋಮಾಂಸ ಭಕ್ಷಣೆ ಪಾಪಕರವೆನಿಸಿತು. ಯಾರೇ ಆಗಲಿ ಹಸುವನ್ನು ನಿಕೃಷ್ಟವಾಗಿ ಕಂಡವರು ಪಾಪಮಾಡಿದ ತಪ್ಪಿಗೆ ಒಳಗಾಗುತ್ತಾರೆ. ಸಂಪರ್ಕಕ್ಕೂ ಅನರ್ಹರಾಗುತ್ತಾರೆ. ಗೋಮಾಂಸ ಭಕ್ಷಿಸುತ್ತಾ ಸಾಗಿದ ಭ್ರಷ್ಟಜನತೆ ಪಾಪ ಮಾಡಿದ ಅಪರಾಧಿಗಳಾದರು.
ಗೋವು ಪವಿತ್ರಪ್ರಾಣಿಯಾಗಿ ಭ್ರಷ್ಟಜನತೆ ಗೋಮಾಂಸ ಭಕ್ಷಣೆ ಮುಂದುವರಿಸಿದಾಗ ಅವರು ಸಂಪರ್ಕಕ್ಕೂ ಅನರ್ಹರಾದರು. ಅಥವಾ ಅಸ್ಪೃಶ್ಯರು ಎಂದೆನಿಸಿದರು.
ಈ ವಿವೇಚನೆ ಅಂತ್ಯಗೊಳಿಸುವ ಮುನ್ನ ಬರಬಹುದಾದ ವಿರೋಧಗಳನ್ನು ಪರಿಶೀಲಿಸಬೇಕಾಗಿದೆ. ಈ ವಿವೇಚನೆಗೆ ಎರಡು ವಿರೋಧಾ ಭಿಪ್ರಾಯಗಳು ಸಾಮಾನ್ಯವಾಗಿ ಬರಬಹುದು. ಒಂದನೆಯದು, ಭ್ರಷ್ಟಜನರು ಸತ್ತ ಹಸುವಿನ ಮಾಂಸ ತಿನ್ನುತ್ತಿದ್ದರು ಎಂಬುದಕ್ಕೆ ಆಧಾರವೇನು ಎಂಬುದು. ಎರಡನೆಯದು, ಬ್ರಾಹ್ಮಣರೂ, ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆ ನಿಲ್ಲಿಸಿದ ಮೇಲೂ ಭ್ರಷ್ಟರೇಕೆ ಗೋಮಾಂಸ ಭಕ್ಷಣೆ ನಿಲ್ಲಿಸಲಿಲ್ಲ ಎಂಬುದು. ಅಸ್ಪೃಶ್ಯತೆಯ ಮೂಲದ ಬಗೆಗೆ ಇಲ್ಲಿ ನಡೆಸಲಾದ ವಿವೇಚನೆಗೆ ಈ ಪ್ರಶ್ನೆಗಳು ಪ್ರಾಮುಖ್ಯ ವಾಗಿವೆಯಾಗಿ ಅವುಗಳಿಗೆ ಉತ್ತರ ನೀಡಬೇಕಾದುದು ಅಗತ್ಯ.
ಮೊದಲ ಪ್ರಶ್ನೆ ಸೂಕ್ತವೂ ಮಹತ್ವದ್ದೂ ಆಗಿದೆ. ಭ್ರಷ್ಟ ಜನತೆ ಮೊದಲಿನಿಂದಲೂ ಗೋಮಾಂಸ ಭಕ್ಷಿಸುತ್ತಿದ್ದರು ಎಂದಾದರೆ ಈ ವಿವೇಚನೆ ಉರುಳೀತು. ಏಕೆಂದರೆ ಅವರು ಮೊದಲಿನಿಂದಲೂ ಗೋಮಾಂಸ ಭಕ್ಷಿ ಸುತ್ತಿದ್ದರು. ಆದರೂ ಕೂಡ ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಿರಲಿಲ್ಲ. ಎರಡನೆಯ ಪ್ರಶ್ನೆ ಮಹತ್ವದ್ದಲ್ಲವಾದರೂ ಸಮಂಜಸವಾದುದು. ಬ್ರಾಹ್ಮಣರು ಗೋಮಾಂಸಭಕ್ಷಣೆ ಕೈಬಿಟ್ಟರು. ಬ್ರಾಹ್ಮಣೇತರರು ಅವರನ್ನೇ ಅನು ಕರಿಸಿದರು ಎಂದಮೇಲೆ ಅದೇಕೆ ಭ್ರಷ್ಟ ಜನರೂ ಹಾಗೆ ಮಾಡಲಿಲ್ಲ? ಗೋವು ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣೇತರರಿಗೆ ಪವಿತ್ರ ಪ್ರಾಣೆಯಾದುದರಿಂದ ಗೋಹತ್ಯೆಯು ಮಹಾಪರಾಧವಾಗಿ ಶಾಸನವಾದ ಮೇಲೂ ಭ್ರಷ್ಟ ಜನರೇಕೆ ಗೋಮಾಂಸ ಭಕ್ಷಣೆ ನಿಲ್ಲಿಸಲಿಲ್ಲ. ಅವರು ಗೋಮಾಂಸ ಭಕ್ಷಿಸದಂತೆ ಮಾಡಿದ್ದರೆ ಅಸ್ಪೃಶ್ಯತೆಯೇ ಇರುತ್ತಿರಲಿಲ್ಲ.
ಮೊದಲ ಪ್ರಶ್ನೆಗೆ ಉತ್ತರ ಹೀಗಿದೆ: ಸ್ಥಿರವಾಸಿ ಜನತೆ ಮತ್ತು ಭ್ರಷ್ಟ ಜನರು ಗೋಮಾಂಸವನ್ನು ಭಕ್ಷಿಸುತ್ತಿದ್ದಾಗಲೂ ಸಹ ಒಂದು ವ್ಯವಸ್ಥೆ ಇತ್ತು. ಸ್ಥಿರವಾಸಿಗಳು ಸಜೀವ ಪ್ರಾಣಿಯ ಹತ್ಯೆಯಿಂದ ದೊರೆತ ಮಾಂಸವನ್ನೂ, ಭ್ರಷ್ಟ ಜನರು ಸತ್ತ ಗೋವಿನ ಮಾಂಸವನ್ನೂ ತಿನ್ನುತ್ತಿದ್ದರು. ಮೃತ ಗೋವಿನ ಮಾಂಸ ಭ್ರಷ್ಟ ಜನರ ಪೂರ್ಣ ಹಕ್ಕು ಬಾಧ್ಯತೆಗೆ ಒಳಗಾಗಿತ್ತು ಎಂದು ತಿಳಿದುಬರುತ್ತದೆ.
ಅಂಬೇಡ್ಕರ್ ಜನಿಸಿದ ಮಹಾರಾಷ್ಟ್ರದ ಮಹಾರ್ ಜಾತಿಯಲ್ಲಿ ಸೂಕ್ತ ಆಧಾರ ದೊರೆಯುತ್ತದೆ. ಮಹಾರ್ ಜನರು ಸತ್ತ ಪ್ರಾಣಿಯನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳುವುದು ತಮ್ಮ ಅಧಿಕಾರ ಎನ್ನುತ್ತಾರೆ. ಹಳ್ಳಿಯ ಪ್ರತಿಯೊಬ್ಬ ಹಿಂದುವಿನ ಹಸು ಸತ್ತಾಗಲು ಅದು ತಮ್ಮ ಹಕ್ಕೆಂದು ಅವರು ಸಾರುತ್ತಾರೆ. ಯಾವೊಬ್ಬ ಹಿಂದುವೂ ತನ್ನ ಹಸು ಸತ್ತಾಗ ಅದರ ಮಾಂಸ ತಿನ್ನುವಂತಿಲ್ಲ. ಗೋಮಾಂಸ ಭಕ್ಷಣೆ ಸಾರ್ವತ್ರಿಕವಾಗಿದ್ದಾಗ, ಹಿಂದೂಗಳು ಗೋಹತ್ಯೆ ಮಾಡಿ ಅದರ ಮಾಂಸ ತಿನ್ನುತ್ತಿದ್ದಾಗ ಮಹಾರ್ ಜನರು ತಾನಾಗಿ ಸತ್ತ ಗೋವಿನ ಮಾಂಸ ತಿನ್ನುತ್ತಿದ್ದರು. ಹಾಗಾದರೆ ಇಂದು ನಿಜ ವಿರುವುದು ಪ್ರಾಚೀನ ಕಾಲದಲ್ಲೂ ನಿಜವಿತ್ತೆ? ಮಹಾರಾಷ್ಟ್ರದಲ್ಲಿ ಸತ್ಯ ವೆನಿಸುವ ಈ ವಿಚಾರ ಭಾರತದಾದ್ಯಂತ ಎಲ್ಲೆಡೆಯೂ ಸ್ಥಿರವಾಸಿ ಮತ್ತು ಭ್ರಷ್ಟ ಜನರೊಳಗಿನ ವ್ಯವಸ್ಥೆಯಾಗಿತ್ತು ಎಂದು ಹೇಳಬಹುದೆ? ಈ ಎರಡು ಪ್ರಶ್ನೆಗಳು ನಮಗೆ ಎದುರಾಗುತ್ತವೆ.
ಈ ಸಂದರ್ಭದಲ್ಲಿ ಮಹಾರ್‌ರೊಳಗಿನ ಪರಂಪರಾಗತ ಪದ್ಧತಿಯೊಂದನ್ನು ಅಂಬೇಡ್ಕರ್ ಅವರು ಉದಾಹರಿಸುತ್ತಾರೆ. ಅದರಂತೆ ಬೀದರ್‌ನ ಮುಸ್ಲಿಂ ಅರಸರು ಹಳ್ಳಿಗಳ ಹಿಂದುಗಳ ವಿರುದ್ಧ ಮಹಾರ್ ಜನರಿಗೆ ೫೨ ಹಕ್ಕುಗಳನ್ನು ನೀಡಿದ್ದರೆನ್ನಲಾಗಿದೆ. ಇವುಗಳನ್ನು ಬೀದರಿನ ಅರಸನೇ ನೀಡಿ ದನೆಂದರೂ ಸಹ ಈ ಹಕ್ಕು ನೀಡಿಕೆಯನ್ನು ಆರಂಭಿಸಿದ ಮೊದಲಿಗೆ ಆತನೇ ಆಗಿರಲಾರ. ಅದು ಹಿಂದಿನಿಂದಲೂ ಆಚರಣೆಯಲ್ಲಿತ್ತು; ಅರಸನು ಅದನ್ನು ಸಮರ್ಥಿಸಿದ ಅಷ್ಟೆ. ಅಂದರೆ ಭ್ರಷ್ಟಜನರು ಸತ್ತಹಸುವಿನ ಮಾಂಸ ತಿನ್ನುವುದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದಿರಬೇಕು. ಅಂಥ ಒಂದು ವ್ಯವಸ್ಥೆ ನಡೆದುಬಂದಿರುವುದಾದರೂ ವಾಸ್ತವವೇ ಎನಿಸುತ್ತದೆ.
ಸ್ಥಿರವಾಸಿ ಸಮಾಜವು ಕೃಷಿ ಮತ್ತು ಪಶುಪಾಲನೆ ಮಾಡುತ್ತಿದ್ದು ಸಂಪತ್ತುಳ್ಳದ್ದಾಗಿತ್ತು. ಭ್ರಷ್ಟ ಜನರು ಜೀವನಕ್ಕೆ ಮಾರ್ಗವಿಲ್ಲದೆ ಸ್ಥಿರವಾಸಿ ಸಮಾಜವನ್ನೆ ಪೂರ್ಣವಾಗಿ ಅವಲಂಬಿಸಿ ಬಾಳಿದ ನಿರ್ಗತಿಕರಾಗಿದ್ದರು. ಇಬ್ಬರಿಗೂ ಮುಖ್ಯ ಆಹಾರ ಗೋಮಾಂಸ. ಸ್ಥಿರವಾಸಿ ಜನಗಳ ಬಳಿ ಹಸುಗಳಿದ್ದುವಾಗಿ ಆಹಾರಕ್ಕಾಗಿ ಅವನ್ನು ಕೊಲೆಮಾಡಲು ಸಾಧ್ಯವಿತ್ತು. ಆದರೆ ಭ್ರಷ್ಟ ಜನರ ಬಳಿ ಹಸುಗಳಿಲ್ಲವಾಗಿ ಅದು ಸಾಧ್ಯವಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭ್ರಷ್ಟ ಜನರಿಗೆ ಅವರು ನಡೆಸುವ ಕಾವಲು ಗಾರಿಕೆಗಾಗಿ ತಮ್ಮಲ್ಲಿ ಸತ್ತ ಪ್ರಾಣಿಗಳನ್ನು ನೀಡಲು ಸ್ಥಿರವಾಸಿ ಜನರು ಒಪ್ಪಿದುದು ಸಹಜವೇ. ಈ ಪದ್ಧತಿಯು ಮಹಾರಾಷ್ಟ್ರಕ್ಕೆ ಮಾತ್ರ ಅನ್ವಯಿಸದೆ ಭಾರತದ ಎಲ್ಲೆಡೆಗೂ ಹರಡಿತ್ತೆಂದೂ ತಿಳಿಯಬಹುದು.
ಮೊದಲ ವಿರೋಧವನ್ನಿದು ಇತ್ಯರ್ಥಗೊಳಿಸುತ್ತದೆ. ಈಗ ಎರಡನೆ ವಿರೋಧವನ್ನು ಪರಿಶೀಲಿಸೋಣ. ಗುಪ್ತ ಸಾಮ್ರಾಟರು ಮಾಡಿದ ಶಾಸನಗಳು ಗೋಹತ್ಯೆ ಮಾಡುವವರನ್ನು ತಡೆಯುವುದಕ್ಕಾಗಿ ರೂಪಿತವಾದುವು. ಅವು ಭ್ರಷ್ಟ ಜನತೆಗೆ ಸಂಬಂಧಿಸಿದುವಲ್ಲ. ಏಕೆಂದರೆ, ಅವರು ಗೋಹತ್ಯೆ ಮಾಡುತ್ತಿರಲಿಲ್ಲ. ಸತ್ತ ಹಸುಗಳನ್ನು ಮಾತ್ರ ತಿನ್ನುತ್ತಿದ್ದರು. ಗೋಹತ್ಯೆ ವಿರೋಧ ಶಾಸನವನ್ನಿದು ಮುರಿಯಲಿಲ್ಲ. ಆದುದರಿಂದ ಸತ್ತ ಹಸುವಿನ ಮಾಂಸ ತಿನ್ನುವ ಪದ್ದತಿ ಮುಂದುವರೆಯಿತು. ಬ್ರಾಹ್ಮಣರೂ, ಬ್ರಾಹ್ಮಣೇತರರೂ ಅಹಿಂಸಾ ದೃಷ್ಟಿಯಿಂದ ಹಸುವಿನ ಮಾಂಸ ತಿನ್ನುವುದನ್ನು ನಿಲ್ಲಿಸಿದರು ಎನ್ನುವುದಾದರೆ, ಭ್ರಷ್ಟ ಜನರ ನೀತಿ ಅಂಥ ಅಹಿಂಸಾ ನೀತಿಗೂ ವಿರೋಧವಾಗಿರಲಿಲ್ಲ. ಗೋಹತ್ಯೆ ಹಿಂಸೆ, ಸತ್ತ ಹಸುವನ್ನು ಕತ್ತರಿಸಿ ತಿನ್ನುವುದು ಹಿಂಸೆಯಲ್ಲ. ಆದುದರಿಂದ ಸತ್ತ ಹಸುವಿನ ಮಾಂಸ ತಿನ್ನುವಲ್ಲಿ ಭ್ರಷ್ಟ ಜನತೆ ಚಿಂತೆಗೊಳಗಾಗಬೇಕಾದ ಪ್ರಮೇಯವೇ ಇರಲಿಲ್ಲ. ಅವರ ನೀತಿಯನ್ನು ಅಹಿಂಸಾ ನೀತಿ ಎಂದಾಗಲೀ, ಶಾಸನಬಾಹಿರವೆಂದಾಗಲೀ ಆಪಾದಿಸುವಂತಿರಲಿಲ್ಲ.
ಅವರು ಅದೇಕೆ ಬ್ರಾಹ್ಮಣರನ್ನೂ, ಬ್ರಾಹ್ಮಣೇತರರನ್ನೂ ಅನು ಕರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಎರಡುಮುಖವಾದುದು. ಮೊದಲನೆಯದಾಗಿ ಈ ಅನುಕರಣೆ ತೀರ ನಷ್ಟದಾಯಕವಾದುದು. ಅವರಿಂದ ನಷ್ಟ ಅನುಭವಿಸಲು ಸಾಧ್ಯವಿರಲಿಲ್ಲ. ಸತ್ತ ಹಸುವಿನ ಮಾಂಸವಿಲ್ಲದೆ ಅವರು ಉಪವಾಸ ಬೀಳ ಬೇಕಾಗಿತ್ತು. ಎರಡನೆಯದಾಗಿ ಪ್ರಾರಂಭದಲ್ಲಿ ಅದೊಂದು ಹಕ್ಕಾಗಿದ್ದರೂ ಸತ್ತ ಪ್ರಾಣಿಯನ್ನು ಹೋರುವುದೀಗ ಹೊಣೆಗಾರಿಕೆಯಾಗಿತ್ತು. ಸತ್ತ ಗೋವನ್ನು ಹೊತ್ತು ಕೊಂಡು ಹೋಗದಿರಲು ಸಾಧ್ಯವಿಲ್ಲವಾಗಿ ಮೊದಲಿನಂತೆಯೇ ಗೋಮಾಂಸವನ್ನು ಆಹಾರಕ್ಕಾಗಿ ಬಳಸುವುದು ಅವರಿಗೆ ಸಹಜವಾಯಿತು.
ಪ್ರಾಚೀನ ಸಾಹಿತ್ಯದಲ್ಲಿ ಅಂತ್ಯವಾಸಿನ್, ಅಂತ್ಯ, ಅಂತ್ಯಜ ಎಂದು ಕರೆಯಲಾದ ಜನರ ಸಾಮಾಜಿಕ ಪರಿಸ್ಥಿತಿಯನ್ನು ನೋಡೋಣ. ಈ ವರ್ಗಗಳ ಜನರು ಇಂದಿನ ಆಧುನಿಕ ದೃಷಿಯ ಅಸ್ಪೃಶ್ಯರಂತಿದ್ದರೆಂದು ಹೇಳಲು ಸಾಧ್ಯವಿಲ್ಲ. ಆದರೂ ಕೂಡ ಅವರನ್ನು ಅಸ್ಪೃಶ್ಯರೆಂದೇ ವರ್ಣಿಸಲಾಗಿತ್ತು. ಧರ್ಮಸೂತ್ರಗಳ ಕಾಲದಲ್ಲಿ ಅಸ್ಪೃಶ್ಯಪದದ ಅರ್ಥವೇ ಬೇರೆಯಾಗಿತ್ತು.
ಈ ಬಗೆಗೆ ಶಾಸ್ತ್ರಗಳು ಸೂಚಿಸಿದ್ದ ಅಶುದ್ಧತೆಯ ಪರಿಹಾರಗಳನ್ನು ಪರಿಶೀಲಿಸಬೇಕಾಗಿದೆ. ಉದಾಹರಣೆಗಾಗಿ ಅಸ್ಪೃಶ್ಯ ವರ್ಗದ ಚಂಡಾಲರ ಪರಿಸ್ಥಿತಿ ಯನ್ನು ಪರಿಶೀಲಿಸಬಹುದು. ಮೊದಲನೆಯದಾಗಿ ಚಂಡಾಲ ಪದವು ಯಾವೊಂದು ನಿರ್ದಿಷ್ಟ ವರ್ಗದ ಜನರನ್ನು ಸೂಚಿಸುತ್ತಿಲ್ಲ. ಒಂದಕ್ಕಿಂತ ಭಿನ್ನವಾದ ಹಲವು ವರ್ಗಗಳ ಜನರಿಗೆ ಈ ಹೆಸರಿತ್ತು. ಧರ್ಮಶಾಸ್ತ್ರಗಳಲ್ಲಿ ಐದು ಬಗೆಯ ಚಂಡಾಲರನ್ನು ಸೂಚಿಸಲಾಗಿದೆ.
೧. ಶೂದ್ರ ತಂದೆ ಮತ್ತು ಬ್ರಾಹ್ಮಣ ತಾಯಿಯಲ್ಲಿ ಜನಿಸಿದವನು. ೨. ಅವಿವಾಹಿತ ಸ್ತ್ರೀಯ ಮಗ, ೩. ಸಗೋತ್ರ ಸ್ತ್ರೀಯಲ್ಲಿ ಜನಿಸಿದವನು, ೪. ಸನ್ಯಾಸಿಯಾದವನು ಮತ್ತೆ ಸಂಸಾರಿಯಾದ ನಂತರ ಅವನಲ್ಲಿ ಜನಿಸಿದವನು, ೫. ಕ್ಷೌರಿಕ ತಂದೆ ಮತ್ತು ಬ್ರಾಹ್ಮಣ ತಾಯಲ್ಲಿ ಜನಿಸಿದವನು.
ಗೌತಮ, ವಶಿಷ್ಠ, ಬೋಧಾಯನ ಮತ್ತು ಮನುಗಳ ಧರ್ಮ ಸೂತ್ರಗಳಲ್ಲಿ ಬ್ರಾಹ್ಮಣನು ಚಂಡಾಲನನ್ನು ಮುಟ್ಟಿದರೆ ಅಶುದ್ಧಿಯಾಗುವುದೆಂದು ಹೇಳಲಾಗಿದೆ. ಆ ಸೂತ್ರಗಳಿಂದ ತಿಳಿದುಬರುವುದೇನೆಂದರೆ; ೧. ಚಂಡಾಲರ ಸ್ಪರ್ಶದಿಂದ ಮೈಲಿಗೆ ಯಾಗುತ್ತಿದ್ದುದು ಬ್ರಾಹ್ಮಣರಿಗೆ ಮಾತ್ರ. ೨. ಬಹುಶಃ ಈ ಮೈಲಿಗೆಯ ನೀತಿಯು ಶುಭ ಸಂದರ್ಭದಲ್ಲಿ ಮಾತ್ರ ಪರಿಗಣಿಸಲ್ಪಡುತ್ತಿತ್ತು.
ಈ ವಿವೇಚನೆ ಸರಿ ಎಂದಾದರೆ ಇದು ಮೈಲಿಗೆಯ ಸಮಸ್ಯೆಯಾಗಿದ್ದು., ಅಸ್ಪೃಶ್ಯತೆಗಿಂತ ಭಿನ್ನವಾಗಿದೆ. ಅಸ್ಪೃಶ್ಯನಾದವನನ್ನು ಯಾವ ಹಿಂದೂವೂ ಸ್ಪರ್ಶಿ ಸುವುದಿಲ್ಲ. ಅಶುದ್ಧನಾದವನು ಬ್ರಾಹ್ಮಣನನ್ನು ಮಾತ್ರ ಮೈಲಿಗೆಯಾಗಿಸುತ್ತಾನೆ. ಅಶುದ್ಧನಾದವನ ಸ್ಪರ್ಶವು ಶುಭಸಂದರ್ಭದಲ್ಲಿ ಮಾತ್ರ ಅಶುದ್ಧವೆನಿಸುತ್ತದೆ. ಆದರೆ ಅಸ್ಪೃಶ್ಯನ ಸಂಪರ್ಕದ ಹೊಲೆ ಸದಾಕಾಲವೂ ಇರುತ್ತದೆ.
ಸ್ಮೃತಿಗಳು ಅಶುದ್ಧವೆಂದು ಹೇಳುವ ಜಾತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪರಿಶಿಷ್ಟವೆಂದು ಘೋಷಿಸಿರುವ ಜಾತಿಗಳ ಪಟ್ಟಿಯೊಡನೆ ಹೋಲಿಸಿ ನೋಡಬಹುದು.
ಸ್ಮೃತಿಗಳಲ್ಲಿ ೧೨ ಅಶುದ್ಧ ಜಾತಿಗಳ ಹೆಸರುಗಳಿದ್ದರೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ೪೨೯ ಇವೆ. ಎರಡರಲ್ಲೂ ಸಾಮಾನ್ಯವಾಗಿರುವುದು ಚರ್ಮಕಾರ ಜಾತಿ ಒಂದೇ!
ಚಮ್ಮಾರ್ ಜಾತಿಯೊಂದೇ ಏಕೆ ಎರಡು ಪಟ್ಟಿಗಳಲ್ಲೂ ಸೂಚಿತವಾಗಿದೆ. ಎರಡು ಪಟ್ಟಿಗಳೂ ಒಂದೇ ವರ್ಗದ ಜಾತಿಗಳನ್ನು ಸೂಚಿಸುತ್ತವೆ ಎಂಬುದು ಉತ್ತರವಲ್ಲ. ಆ ಉತ್ತರ ಸರಿಯಾಗಿದ್ದರೆ ’ ಚಮ್ಮಾರ್’ ಮಾತ್ರವಲ್ಲ, ಸ್ಮೃತಿಗಳಲ್ಲಿ ಕಂಡುಬರುವ ಎಲ್ಲ ಜಾತಿಗಳ ಹೆಸರೂ ಸರ್ಕಾರದ ಪಟ್ಟಿಯಲ್ಲಿರ ಬೇಕು. ಆದರೆ ಹಾಗಿಲ್ಲ. ನಿಜವಾದ ಉತ್ತರವೆಂದರೆ, ಎರಡು ಪಟ್ಟಿಗಳಲ್ಲಿ ಎರಡು ಭಿನ್ನ ವರ್ಗದ ಜಾತಿಗಳ ಹೆಸರುಗಳಿವೆ. ಅಶುದ್ಧ ಎನಿಸಿದ ಜಾತಿಗಳ ಹೆಸರುಗಳು ಸರ್ಕಾರದ ಪಟ್ಟಿಯಲ್ಲಿರಲು ಕಾರಣ, ಹಿಂದೆ ಮೈಲಿಗೆ ಎನಿಸಿದ್ದ ಈ ಜಾತಿಗಳೇ ಮುಂದೆ ಅಸ್ಪೃಶ್ಯರೆನಿಸಿದರು.
ಚಮ್ಮಾರ್ ಜಾತಿ ಎರಡು ಪಟ್ಟಿಯಲ್ಲೂ ಕಂಡುಬರುತ್ತಿದೆ ಎಂದ ಮಾತ್ರಕ್ಕೆ ಮೈಲಿಗೆ ಮತ್ತು ಅಸ್ಪಶ್ಯತೆಗೆ ಭೇದವಿಲ್ಲ ಎಂದು ತಿಳಿಯಬಾರದು. ಬದಲಾಗಿ ಒಂದು ಕಾಲದಲ್ಲಿ ಮೈಲಿಗೆಯುಳ್ಳ ಜಾತಿ ಎಂದೆನಿಸಿದ್ದ ಚಮ್ಮಾರರು ಕಾಲಕ್ರಮೇಣ ಅಸ್ಪೃಶ್ಯರೆನಿಸಿದರು. ಎರಡು ಪಟ್ಟಿಗಳಲ್ಲೂ ಆ ಹೆಸರಿರಲು ಅದೇ ಕಾರಣ. ಸ್ಮೃತಿಗಳಲ್ಲಿ ಹೊಲೆಯುಳ್ಳುವರೆಂದು ಹೇಳಲಾದ ೧೨ ಜಾತಿಗಳಲ್ಲಿ ಕೇವಲ ಚಮ್ಮಾರ ಜಾತಿ ಮಾತ್ರ ಏಕೆ ಅಸ್ಪೃಶ್ಯವೆನಿಸಿತು ಎಂಬುದಕ್ಕೆ ಸಮಾಧಾನ ನೀಡುವುದು ಕಷ್ಟವಲ್ಲ. ಚಮ್ಮಾರ ಮತ್ತು ಇತರ ಜಾತಿಗಳಲ್ಲಿ ಭಿನ್ನತೆ ಉಂಟುಮಾಡಿದ ಅಂಶವೆಂದರೆ ಗೋಮಾಂಸ ಭಕ್ಷಣೆ.
ಗೋವು ಪವಿತ್ರವೆನಿಸಿ, ಗೋಮಾಂಸ ಭಕ್ಷಣೆ ಪಾಪವೆಂದೆನಿ ಸುತ್ತಿದ್ದಾಗ, ಗೋಮಾಂಸ ಭಕ್ಷಿಸುತ್ತಿದ್ದ ಹೊಲೆಯುಳ್ಳವರೆನಿಸಿದ ಜಾತಿಗಳವರು ಅಸ್ಪೃಶ್ಯರೆನಿಸಿದರು. ಚಮ್ಮಾರರು ಮಾತ್ರವೇ ಗೋಮಾಂಸ ಭಕ್ಷಿಸುವ ಜಾತಿಯವ ರಾಗಿದ್ದರು. ಆದುದರಿಂದಲೇ ಅವರ ಹೆಸರು ಎರಡು ಪಟ್ಟಿಗಳಲ್ಲೂ ಕಂಡು ಬರುತ್ತದೆ. ಮೈಲಿಗೆ ಮತ್ತು ಅಸ್ಪೃಶ್ಯರನ್ನು ಪ್ರತ್ಯೇಕಿಸುವ ಗೋಮಾಂಸ ಭಕ್ಷಣೆಯೇ ಅಸ್ಪೃಶ್ಯತೆಯ ಮೂಲ ಎಂಬುದನ್ನು ಖಚಿತಗೊಳಿಸುತ್ತವೆ.
ಅಸ್ಪೃಶ್ಯತೆಯ ಉಗಮವನ್ನು ನಿರ್ಧರಿಸುವಲ್ಲಿ ಅತಿ ಹಿಂದಿನ ಮತ್ತು ಮುಂದಿನ ಎರಡು ರೇಖೆಗಳು ನಮ್ಮ ಮುಂದಿವೆ. ಈಗ ಒಂದು ನಿರ್ದಿಷ್ಟ ಕಾಲವನ್ನು ಅಸ್ಪೃಶ್ಯತೆಯ ಉಗಮದ ಬಗೆಗೆ ನಾವು ನಿರ್ಧರಿಸಬಹುದು. ಅಸ್ಪೃಶ್ಯತೆಯ ಮೂಲವೆನಿಸಿದ ಗೋಮಾಂಸ ಭಕ್ಷಣೆಯ ಪ್ರಶ್ನೆಯನ್ನು ಮೊದಲು ಎತ್ತಿಕೊಂಡರೆ ಆ ಕಾಲ ನಿರ್ಧರಿಸಬಹುದು. ಗೋಮಾಂಸ ಭಕ್ಷಣೆಯ ನಿಷೇಧವನ್ನೇ ಶೋಧನೆಯ ಸಾಧನವಾಗಿ ಅಂಬೇಡ್ಕರ್ ಬಳಸಿಕೊಂಡರು. ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯೊಡನೆ ಅಸ್ಪೃಶ್ಯತೆಯ ಹುಟ್ಟಿಗೆ ನಿಕಟ ಸಂಬಂಧವಿದೆ. ಗೋಹತ್ಯೆ ಯಾವಾಗ ಅಪರಾಧವೆನಿಸಿತು ಮತ್ತು ಗೋಮಾಂಸ ಭಕ್ಷಣೆ ಪಾಪವೆನಿಸಿತು ಎಂದು ನಾವು ಕಂಡುಕೊಂಡರೆ ಅಸ್ಪೃಶ್ಯತೆಯು ಹುಟ್ಟಿದ ಕಾಲ ತಿಳಿಯಬಹುದು.
ಗೋಹತ್ಯೆ ಅಪರಾಧವೆಂದಾಗಲಿ, ಗೋಮಾಂಸ ಭಕ್ಷಣೆ ನಿಷೇಧ ವೆಂದಾಗಲಿ ಮನು (ಕ್ರಿ.ಶ.ಸು. ೨೦೦) ಹೇಳಿಲ್ಲವೆಂಬುದನ್ನು ನಾವು ನೋಡಿದ್ದೇವೆ. ಡಾ.ಡಿ.ಆರ್. ಭಂಡಾರ್‌ಕರ್ ಹೇಳಿರುವಂತೆ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಗುಪ್ತ ಅರಸರು ಗೋಹತ್ಯೆಯನ್ನು ಮಹಾಪರಾಧವೆಂದು ಸಾರಿದರು.
ಆದುದರಿಂದ ವಿಶ್ವಾಸನೀಯವಾಗಿ ಅಸ್ಪೃಶ್ಯತೆಯು, ಕ್ರಿ.ಶ.ಸು. ೪೦೦ ರವೇಳೆಗೆ ಹುಟ್ಟಿತೆಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಭಾರತದ ಇತಿಹಾಸವನ್ನು ಪೂರ್ಣವಾಗಿ ರೂಪಿಸಿದ ಹಾಗೂ ಭಾರತದ ಇತಿಹಾಸ ವಿದ್ಯಾರ್ಥಿಗಳು ವಿಷಾದಕರ ವೆನಿಸಿಸುವಂತೆ ಕೈಬಿಟ್ಟಿರುವ ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮಗಳು ಪರಸ್ಪರ ಮೇಲ್ಮೆಗಾಗಿ ನಡೆಸಿದ ಹೋರಾಟದ ಪರಿಣಾಮವಾಗಿ ಅಸ್ಪೃಶ್ಯತೆ ಹುಟ್ಟಿತು.
ಕೃಪೆ :ವಿಚಾರ ಮಂಟಪ ಬ್ಲಾಗ್
No comments:
Post a Comment