ಬಿ.ವಿ. ವೀರಭದ್ರಪ್ಪ
ಏಪ್ರಿಲ್ ೧೪ರಂದು ದಾವಣಗೆರೆಯಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುವ ಅವಕಾಶ ನನಗೆ ದೊರಕಿತ್ತು. ಈ ಸಾರಿಯ ಅಂಬೇಡ್ಕರ್ ಜಯಂತಿ, ಅಂಬೇಡ್ಕರ್ ಜನ್ಮಶತಾಬ್ದಿ ವರ್ಷದ ಆರಂಭೋತ್ಸವವೂ ಆಗಿರುವುದರಿಂದ ಅದಕ್ಕೊಂದು ವಿಶೇಷ ಕಳೆ ಬಂದಿತ್ತು. ರಾಜ್ಯ ಸಭಾ ಸದಸ್ಯ ಕೆ.ಜಿ. ಮಹೇಶ್ವರಪ್ಪ ಮತ್ತು ಸ್ಥಳೀಯ ಲಾ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಎಸ್.ಎಚ್. ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆ ಸಭೆಗೆ ನಗರದ ಶಾಸಕ ಯಜಮಾನ್ ಮೋತಿ ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.
ಅಸ್ಪೃಶ್ಯತೆಯ ಮೂಲವನ್ನು ವಿವರಿಸುತ್ತಾ ನಾನು ಗೋಮಾಂಸ ಸೇವನೆಯೆ ಅಸ್ಪೃಶ್ಯತೆಗೆ ಮುಖ್ಯ ಕಾರಣವಾಯಿತು, ಆದರೆ ವೇದ ಕಾಲದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲ ಆರ್‍ಯರು. ಗೋಮಾಂಸ ಸೇವಿಸುತ್ತಿದ್ದರು; ನಂತರ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿ ಆರ್‍ಯರು ಗೋಮಾಂಸ ತಿನ್ನುವುದನ್ನು ಕೈಬಿಟ್ಟರು. ಜಾತಿಭ್ರಷ್ಟ ರಾಗಿ ಊರ ಹೊರಗೆ ವಾಸಿಸುತ್ತಿದ್ದ ಜನ ಸತ್ತ ಹಸುಗಳ ಮಾಂಸ ತಿನ್ನುವುದನ್ನು ಮುಂದುವರಿಸಿದ್ದರಿಂದ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟರು- ಎಂದು ಅಂಬೇಡ್ಕರರ ’ಅಸ್ಪೃಶ್ಯರು’ (untouchables) ಗ್ರಂಥವನ್ನು ಉಲ್ಲೇಖಿಸುತ್ತಾ ಮಾತನಾಡಿದೆ.
ಹಿಂದೂಗಳು, ಪವಿತ್ರವೆಂದು ಭಾವಿಸುವ ಗ್ರಂಥಗಳನ್ನು ಅರ್ಥ ಮಾಡಿ ಕೊಳ್ಳಲು ಅಂಬೇಡ್ಕರರ ಕೃತಿಗಳು ತಮ್ಮ ಅನನ್ಯ ಒಳನೋಟದಿಂದ ನೆರವು ನೀಡುತ್ತವೆ. ಮಹಾರಾಷ್ಟ್ರ ಸರ್ಕಾರವು ಅವರ ಸಮಗ್ರ ಬರಹಗಳನ್ನು ಎಂಟು ಸಂಪುಟಗಳಲ್ಲಿ ಪ್ರಕಟಿಸಿ, ಬಹುದಿನದ ಕೊರೆತೆಯನ್ನು ಹೋಗಲಾಡಿಸಿದೆ. ಬಾಬಾ ಸಾಹೇಬರ ಜನ್ಮ ಶತಾಬ್ಧಿ ವರ್ಷದಲ್ಲಿ ಕರ್ನಾಟಕ ಸರ್ಕಾರ ಅವರ ಕೃತಿಗಳ ಕನ್ನಡ ಆವೃತ್ತಿಯನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ಅವುಗಳನ್ನು ಜನರಿಗೆ ಒದಗಿಸುವ ಅಗತ್ಯವನ್ನು ನಾನು ಒತ್ತಿ ಹೇಳಿದೆ.
ಸಭೆಯ ನಂತರ ಕೆಲವು ತರುಣರು ವಿನಯದಿಂದಲೇ ನನ್ನ ಬಳಿ ಬಂದು "ಬ್ರಾಹ್ಮಣರು ಗೋಮಾಂಸಾಹಾರಿಗಳಾಗಿದ್ದರು ಎಂಬುದಕ್ಕೆ ಆಧಾರವೇನು?" ಎಂದು ಪ್ರಶ್ನಿಸತೊಡಗಿದರು. "ಬ್ರಾಹ್ಮಣರು ಪವಿತ್ರವೆಂದು ಭಾವಿಸುವ ಧರ್ಮಗ್ರಂಥಗಳೇ ಆಧಾರ" ಎಂದೆ. "ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಬರದಿದ್ದರೆ ನಿಮ್ಮ ಹಿರಿಯರನ್ನು ಕೇಳಿ ತಿಳಿದುಕೊಳ್ಳಿ. ಅಂಬೇಡ್ಕರ್ ತಮ್ಮ ಗ್ರಂಥಗಳಲ್ಲಿ ಕೊಟ್ಟಿರುವ ಉಲ್ಲೇಖಗಳನ್ನು ನಿಮ್ಮ ಮನೆಯಲ್ಲಿ ಅಥವಾ ಮಠಗಳಲ್ಲಿರುವ ಧರ್ಮಗ್ರಂಥಗಳೊಡನೆ ಹೋಲಿಸಿ ನೋಡಿ ನಿಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಿ" ಎಂದು ಹೇಳಿದೆ. ನಾನು ಹೇಳಿದ್ದನ್ನೆಲ್ಲಾ ಹಾಗೆ ಒಪ್ಪಿಕೊಳ್ಳದೆ ನನ್ನ ಹೇಳಿಕೆಗಳನ್ನು ಅನುಮಾನಿಸುವ ಅವರ ಸಂಶಯ ಪ್ರವೃತ್ತಿಯನ್ನು ನಾನು ಮೆಚ್ಚಿಕೊಂಡೆ.
ಹಿಂದೂಗಳ ಸಾಮಾಜಿಕ ಇತಿಹಾಸದ ಒಂದು ಮುಖ ಮಾತ್ರ ವೈಭವೀಕರಣಗೊಂಡು, ಅದರ ಉಳಿದ ಮುಖಗಳ ವಸ್ತುನಿಷ್ಠ ಅರಿವಿಗೆ ಬಾಧಕವಾಗಿದೆ. ಅಂಬೇಡ್ಕರ್ ಅಸ್ಪೃಶ್ಯತೆಯ ಮೂಲವನ್ನು ಶೋಧಿಸಲು ತೊಡಗಿ ವೇದಗಳು, ಬ್ರಾಹ್ಮಣಗಳು ಮತ್ತು ಗೃಹ್ಯಸೂತ್ರಗಳನ್ನು ಜಾಲಾಡಿಸಿದ್ದಾರೆ. ಅಸ್ಪೃಶ್ಯತೆ ಹೇಗೆ ಉಗಮವಾಯಿತು ಎಂದು ತಿಳಿಯುವ ಮೊದಲು ಅವರು ತಾವೇ ಹಾಕಿಕೊಂಡ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳ ಬೇಕಾಯಿತು. ಇವು ಅವರ ಪ್ರಶ್ನೆಗಳು:
೧. ಹಿಂದೂಗಳು ಎಂದೂ ಗೋಮಾಂಸ ತಿನ್ನುತ್ತಿರಲಿಲ್ಲವೆ?
೨. ಹಿಂದೂಗಳು ಗೋಮಾಂಸ ತಿನ್ನುವುದನ್ನು ಕೈಬಿಡಲು ಕಾರಣವೇನು?
೩. ಬ್ರಾಹ್ಮಣರು ಸಸ್ಯಾಹಾರಿಗಳಾಗಲು ಕಾರಣವೇನು?
೪. ಗೋಮಾಂಸ ಸೇವನೆ ಅದೇಕೆ ಅಸ್ಪೃಶ್ಯತೆಗೆ ಕಾರಣವಾಯಿತು?
೨. ಹಿಂದೂಗಳು ಗೋಮಾಂಸ ತಿನ್ನುವುದನ್ನು ಕೈಬಿಡಲು ಕಾರಣವೇನು?
೩. ಬ್ರಾಹ್ಮಣರು ಸಸ್ಯಾಹಾರಿಗಳಾಗಲು ಕಾರಣವೇನು?
೪. ಗೋಮಾಂಸ ಸೇವನೆ ಅದೇಕೆ ಅಸ್ಪೃಶ್ಯತೆಗೆ ಕಾರಣವಾಯಿತು?
ಅಂಬೇಡ್ಕರ್‌ರ ಸಂಶೋಧನೆಯ ಸಾರವನ್ನು ಸಂಕ್ಷೀಪ್ತವಾಗಿ ನಾಲ್ಕು ಭಾಗಗಳಲ್ಲಿ ಮುಂದೆ ಕೊಡಲಾಗಿದೆ.
ಹಿಂದೂಗಳು, ಹಿಂದೆಂದೂ ಹಸುವಿನ ಮಾಂಸ ತಿನ್ನುತ್ತಿರಲಿಲ್ಲವೆ? ಎಂಬ ಪ್ರಶ್ನೆಗೆ ಬ್ರಾಹ್ಮಣನಿರಲಿ, ಬ್ರಾಹ್ಮಣೇತರನಿರಲಿ, ಪ್ರತಿಯೊಬ್ಬ ಸವರ್ಣೀಯ ಹಿಂದುವೂ ’ಇಲ್ಲ, ಎಂದೂ ಇಲ್ಲ’ ಎಂದು ಉತ್ತರಿಸುತ್ತಾನೆ. ಒಂದು ದೃಷ್ಟಿಯಿಂದ ಅವನು ಸರಿ. ಬಹುಕಾಲದಿಂದ ಹಿಂದೂಗಳು ಹಸುವಿನ ಮಾಂಸ ತಿಂದಿಲ್ಲ. ಸವರ್ಣೀಯ ಹಿಂದೂ, ಈ ಅಭಿಪ್ರಾಯ ಹೊಂದಿದ್ದರೆ ಆ ಬಗ್ಗೆ ಜಗಳ ಬೇಕಿಲ್ಲ. ಆದರೆ ಬ್ರಾಹ್ಮಣ ಪಂಡಿತರು, ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲವಷ್ಟೇ ಅಲ್ಲ, ಅವರು ಸದಾ ಹಸುವನ್ನು ಪವಿತ್ರವೆಂದು ಭಾವಿಸಿದ್ದರು ಮತ್ತು ಗೋಹತ್ಯೆಯನ್ನು ಸದಾ ವಿರೋಧಿಸಿದ್ದರು ಎಂದಾಗ ಮಾತ್ರ ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ.
ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲ ಮತ್ತು ಗೋಹತ್ಯೆಗೆ ವಿರೋಧಿಗಳಾಗಿದ್ದರು ಎಂಬುದಕ್ಕೆ ಸಾಂಪ್ರದಾಯಕ ಪಂಡಿತರು ಕೊಡುವ ಆಧಾರ ಗಳೇನು?
ಋಗ್ವೇದದಲ್ಲಿ ಎರಡು ಆಧಾರಗಳಿವೆ; ಒಂದರಲ್ಲಿ ಹಸುವನ್ನು ’ಅಘ್ನ್ಯ’ ಎಂದರೆ ’ಕೊಲೆಗೆ ಅರ್ಹವಲ್ಲದ್ದು’ ಎಂದು ಕರೆಯಲಾಗಿದೆ (1 - 164 27;iv-1,6; v-82;8 vii-69, 71; x-87) ಇನ್ನೊಂದು ಉದಾಹರಣೆಯಲ್ಲಿ ಗೋವನ್ನರುದ್ರಮಾತೆ, ವಸು ಪುತ್ರಿ, ಆದಿತ್ಯರ ಸಹೋದರಿ ಮತ್ತು ಅಮೃತಕೇಂದ್ರ ಎನ್ನಲಾಗಿದೆ. (viii-101,15; viii-101,16)
ಪ್ರಾಣಿವಧೆ ಮತ್ತು ಗೋಮಾಂಸ ಸೇವನೆ ಸಂಬಂಧವಾಗಿ ಶತಪಥ ಬ್ರಾಹ್ಮಣದಲ್ಲಿ ಹೀಗಿದೆ. ( iii-1.2.21)
"ಆತ ಹಸು ಅಥವಾ ಎತ್ತನ್ನು ತಿನ್ನದಿರಲಿ. ಈ ಪೃಥ್ವಿಯ ಎಲ್ಲಕ್ಕೂ ಹಸು ಮತ್ತು ಎತ್ತು ಆಧಾರ... ಆತ ಈ ಕಾರಣದಿಂದ ಹಸು ಮತ್ತು ಎತ್ತಿನ ಮಾಂಸ ತಿನ್ನಲಾಗದು."
ಆಪಸ್ತಂಭ ಗೃಹ್ಯಸೂತ್ರದಲ್ಲೂ ಇಂತಹ ಕೆಲವು ಶ್ಲೋಕಗಳಿವೆ.
ಹಿಂದೂಗಳು ಗೋಮಾಂಸ ತಿನ್ನುತ್ತಿರಲಿಲ್ಲ ಎಂಬ ಬಗ್ಗೆ ಇವು ಆಧಾರ. ಈ ಆಧಾರಗಳಿಂದ ಯಾವ ತೀರ್ಮಾನಕ್ಕೆ ಬರಬಹುದು?
ಋಗ್ವೇದದ ಆಧಾರದ ವಿಚಾರದಲ್ಲಂತೂ ಅದನ್ನು ತಪ್ಪಾಗಿ ಓದಿ ಅಪಾರ್ಥ ಮಾಡಿಕೊಳ್ಳುವುದರ ಮೂಲಕ ತಪ್ಪು ತೀರ್ಮಾನಕ್ಕೆ ಬರಲಾಗಿದೆ. ಋಗ್ವೇದದದಲ್ಲಿ ಗೋವನ್ನು ’ಅಘ್ನ್ಯ’ ಎಂದು ಕರೆಯಲಾಗಿದೆ. ಈ ಗುಣ ವಾಚಕವು ಹಾಲು ಕೊಡುವ ಹಸುವಿಗೆ ಸಂಬಂಧಿಸಿದೆ. ಅಂಥ ಹಸುವನ್ನು ಕೊಲ್ಲಬಾರದೆಂದಿದೆ. ಋಗ್ವೇದವು ಹಸುವನ್ನು ಗೌರವದಿಂದ ಕಂಡಿದೆ ಎಂಬುದು ನಿಜ. ಕೃಷಿಕರಾದ ’ಇಂಡೋ-ಆರ್‍ಯನ’ರ ಸಮಾಜದಲ್ಲಿ ಹಸುವಿನ ಬಗ್ಗೆ ಇಂಥ ಗೌರವ ಇರಬೇಕಾದುದು ಸಹಜ. ಈ ಪ್ರಯೋಜನ ಹಸುವನ್ನು ಆಹಾರಕ್ಕಾಗಿ ಕೊಲ್ಲಲು ಆರ್‍ಯರಿಗೆ ಅಡ್ಡಿಯಾಗಲಿಲ್ಲ. ವಾಸ್ತವವಾಗಿ ಗೋವು ಪವಿತ್ರವಾದುದರಿಂದಲೇ ಅದನ್ನು ಕೊಲ್ಲಲಾಗುತ್ತಿತ್ತು. ಧರ್ಮ ಶಾಸ್ತ್ರಗಳ ಇತಿಹಾಸಕಾರ ಪಿ.ವಿ. ಕಾಣೆ ಹೇಳುತ್ತಾರೆ:
"ವೇದ ಕಾಲದಲ್ಲಿ ಗೋವು ಪವಿತ್ರವಾಗಿರಲಿಲ್ಲವೆಂದೇನೂ ಅಲ್ಲ. ಬದಲಾಗಿ ಅದು ಪವಿತ್ರವೆನಿಸಿದ್ದರಿಂದಲೇ ಗೋಮಾಂಸ ಸೇವಿಸಬೇಕೆಂದು ವಾಜಸನೇಯಿ ಸಂಹಿತದಲ್ಲಿ ಸಾರಿದೆ." (ಧರ್ಮ ಶಾಸ್ತ್ರ ವಿಚಾರ (ಮರಾಠಿ) ಪುಟ-೧೮೦)
ಋಗ್ವೇದ ಕಾಲದಲ್ಲಿ ಆರ್‍ಯರು ಆಹಾರಕ್ಕಾಗಿ ಗೋವನ್ನು ಕೊಂದು ಗೋಮಾಂಸವನ್ನು ಭಕ್ಷಿಸುತ್ತಿದ್ದರು ಎಂಬುದು ಸುಸ್ಪಷ್ಟವಾಗಿದೆ. ಋಗ್ವೇದ (x-86.14)ದಲ್ಲಿ ಇಂದ್ರ ಹೇಳುತ್ತಾನೆ: "ಅವರು ಹದಿನೈದು ಮತ್ತು ಇಪ್ಪತ್ತು ಎತ್ತುಗಳನ್ನು ಅಡುಗೆ ಮಾಡುತ್ತಾರೆ." ಅಗ್ನಿಗೆ ಕುದುರೆಗಳು, ಎತ್ತುಗಳು, ಕೋಣಗಳು, ಗೊಡ್ಡುಹಸುಗಳು ಮತ್ತು ಟಗರುಗಳನ್ನು ಆಹುತಿ ಕೊಡುತ್ತಾರೆ. (x-91.14) ಗೋವುಗಳನ್ನು ಕತ್ತಿ ಅಥವಾ ಕೊಡಲಿಯಿಂದ ಕಡಿಯುತ್ತಾರೆಂದು ತಿಳಿದು ಬರುತ್ತದೆ (x-72.6)
ತೈತ್ತಿರೀಯ ಬ್ರಾಹ್ಮಣದಲ್ಲಿ ಹೇಳಲಾದ ಕಾಮ್ಯೇಷ್ಟಿಗಳಲ್ಲಿ ಹಸು ಮತ್ತು ಎತ್ತುಗಳ ಬಲಿಯನ್ನಷ್ಟೇ ಅಲ್ಲ, ಯಾವ ದೇವತೆಗಳಿಗೆ ಈ ಗೋವು ಮತ್ತು ಎತ್ತುಗಳನ್ನು ಹೇಗೆ ಬಲಿಕೊಡುತ್ತಿದ್ದರು ಎಂಬ ಬಗ್ಗೆಯೂ ವಿವರಿಸಲಾಗಿದೆ. ವಿಷ್ಣುವಿಗೆ ಕುಳ್ಳಎತ್ತನ್ನು ಬಲಿಕೊಡಬೇಕು. ಬಾಗಿದ ಕೋಡುಗಳ ಹಾಗೂ ಹಣೆಯ ಮೇಲೆ ಮಚ್ಚೆ ಇರುವ ಎತ್ತನ್ನು ಇಂದ್ರನಿಗೆ, ಕಪ್ಪು ಹಸುವನ್ನು ಪೂಷಾನನಿಗೆ, ಕಂಪು ಹಸುವನ್ನು ರುದ್ರನಿಗೆ ಬಲಿಕೊಡ ಬೇಕು. ತೈತ್ತಿರೀಯ ಬ್ರಾಹ್ಮಣವು ’ಪಂಚ ಶರದೀಯ ಸೇವಾ’ ಎಂಬ ಇನ್ನೊಂದು ಬಲಿಯ ಬಗ್ಗೆ ತಿಳಿಸಿದೆ. ಅದರಲ್ಲಿ ಮುಖ್ಯ ಅಂಶವೇನೆಂದರೆ; ಐದು ವರ್ಷ ವಯಸ್ಸಿನ ಕುಳ್ಳಗಿರುವ ೧೭ ಹೋರಿಗಳ ಮತ್ತು ಮೂರು ವರ್ಷ ವಯಸ್ಸಿನ ಅನೇಕ ಕುಳ್ಳ ಕರುಗಳ ಬಲಿ.
ಆಪಸ್ತಂಭ ಧರ್ಮಸೂತ್ರದಲ್ಲಿ "ಹಸು ಮತ್ತು ಎತ್ತುಗಳು ಪವಿತ್ರವಾದವು. ಆದುದರಿಂದ ಅವುಗಳನ್ನು ತಿನ್ನಬಹುದು. (೧,೫,೧೪,೨೯) ಎಂದಿದೆ."
ಗೃಹ್ಯ ಸೂತ್ರಗಳಲ್ಲಿ ಮಧುಪರ್ಕದ ಬಗೆಗೆ ವಿಸ್ತಾರವಾಗಿ ಹೇಳಲಾಗಿದೆ. ಆರ್‍ಯರಲ್ಲಿ ಗಣ್ಯ ಅತಿಥಿಗಳನ್ನು ಸತ್ಕರಿಸುವ ಸಮಾರಂಭ ಒಂದು ಪದ್ಧತಿಯಾಗಿ ಪರಿಣಮಿಸಿತ್ತು. ಈ ಸತ್ಕಾರದಲ್ಲಿ ಅತಿ ಮುಖ್ಯವಾದುದು ಮಧುಪರ್ಕ ಅರ್ಪಣೆ. ವಿವಿಧ ಗೃಹ್ಯಸೂತ್ರಗಳಲ್ಲಿ ಮಧುಪರ್ಕದಲ್ಲಿ ಸೇರಿಸುವ ವಸ್ತುಗಳ ಬಗ್ಗೆ ವಿವರಗಳು ಕಂಡುಬರುತ್ತವೆ. ಹೆಚ್ಚಿನ ಗೃಹ್ಯಸೂತ್ರಗಳ ಪ್ರಕಾರ ಮಧುಪರ್ಕ ಸ್ವೀಕರಿಸಲು ಅರ್ಹರಾದವರು ಆರು ಮಂದಿ: ೧) ಋತ್ವಿಜ ಅಂದರೆ ಯಜ್ಞಕ್ಕಾಗಿ ಆಹ್ವಾನಿತನಾದ ಬ್ರಾಹ್ಮಣ. ೨) ಆಚಾರ್ಯ ಅಂದರೆ ಗುರು; ೩) ವರ, ೪) ರಾಜ, ೫) ಸ್ನಾತಕ ಅಂದರೆ ಆಗತಾನೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿದವನು ಮತ್ತು ೬) ಅತಿಥೇಯನಿಗೆ ಪ್ರಿಯನಾದವನು. ಋತ್ವಿಜ, ರಾಜ ಮತ್ತು ಆಚಾರ್ಯ ಇವರಿಗೆ, ಆಗಮಿಸಿದಾಗಲೆಲ್ಲಾ ಮಧುಪರ್ಕ ಅರ್ಪಿಸಬೇಕು. ಉಳಿದವರಿಗೆ ವರ್ಷಕ್ಕೊಮ್ಮೆ ಅರ್ಪಿಸಿದರೆ ಸಾಕು!
ಮಧುಪರ್ಕವನ್ನು ಯಾವ ಯಾವ ವಸ್ತುಗಳಿಂದ ತಯಾರಿಸುತ್ತಾರೆ ? ಆ ವಸ್ತುಗಳ ಬಗೆಗೆ ಭಿನ್ನಾಭಿಪ್ರಾಯವಿದೆ. ಅಶ್ವಲಾಯನ ಮತ್ತು ಆಪಸ್ತಂಭ ಗೃಹ್ಯ ಸೂತ್ರಗಳು ಜೇನು, ಮೊಸರು, ಅಥವಾ ತುಪ್ಪ ಮೊಸರು ಮಿಶ್ರಣಗಳನ್ನು ಸೂಚಿಸಿದೆ. ಪರಾಶರ ಗೃಹ್ಯಸೂತ್ರ ಮೊಸರು, ಜೇನು ಮತ್ತು ತುಪ್ಪಗಳನ್ನು ಸೂಚಿಸಿದೆ. ಕೌಶಿಕವು ಒಂಭತ್ತು ಬಗೆಯ ವಸ್ತುಗಳನ್ನು ಸೂಚಿಸಿದೆ.
ಮಧುಪರ್ಕದಲ್ಲಿ ಮಾಂಸವಿಲ್ಲದಿರಬಾರದು ಎಂದು ವೇದವು ಸಾರಿದೆಯಾಗಿ, ಹಸುವನ್ನು ಹಗ್ಗ ಕಳಚಿ ಹಟ್ಟಿಯಿಂದ ಹೊರಗೆ ಬಿಟ್ಟಿದ್ದರೆ ಆಡಿನ ಮಾಂಸ ಅಥವಾ ಪಾಯಸ ಅರ್ಪಿಸಬೇಕೆಂದು ಮಾಧವ ಗೃಹ್ಯ ಸೂತ್ರ (೧,೯,೨.೨) ಹೇಳುತ್ತದೆ. ಹಸುವನ್ನು ಕೈಬಿಟ್ಟಿದ್ದಲ್ಲಿ ಆಡು ಅಥವಾ ಟಗರಿನ ಮಾಂಸವನ್ನಾಗಲಿ, ಜಿಂಕ ಇತ್ಯಾದಿ ಕಾಡು ಪ್ರಾಣಿಗಳ ಮಾಂಸವನ್ನಾಗಲಿ ಅರ್ಪಿಸಬಹುದೆಂದು ಬೋಧಾಯನ ಗೃಹ್ಯಸೂತ್ರ (೧,೨,೫೧-೫೪) ತಿಳಿಸಿ ಮಾಂಸವಿಲ್ಲದೆ ಮಧುಪರ್ಕವೇ ಇಲ್ಲ ಅಥವಾ ಮಾಂಸ ನೀಡಲು ಅಸಾಧ್ಯವಾದರೆ ಬೀಸಿದ ಧಾನ್ಯದ ಅಡುಗೆ ಅರ್ಪಿಸಬಹುದು ಎಂದಿದೆ.
ಮಧುಪರ್ಕದ ಮುಖ್ಯಭಾಗ ಮಾಂಸ, ಅದರಲ್ಲೂ ಗೋಮಾಂಸ ಎಂಬುದು ವಿಶದವಾಯಿತು.
ಅತಿಥಿಗಾಗಿ ಗೋಹತ್ಯೆ ಮಾಡುವ ಪದ್ಧತಿ ಅದೆಷ್ಟು ರೂಢಿಯಲ್ಲಿತ್ತೆಂದರೆ ಅತಿಥಿಯನ್ನು ’ಗೋ-ಘ್ನ’ ಎಂದರೆ ಗೋಹಂತಕ ಎಂದು ಕರೆಯಲಾಗುತ್ತಿತ್ತು. ಗೋಹತ್ಯೆಯನ್ನು ತಡೆಯಲು ಅಶ್ವಲಾಯನ ಗೃಹ್ಯಸೂತ್ರವು ಅತಿಥಿಯು ಮನೆಗೆ ಬಂದಾಗ ಹಸುವನ್ನು ಹಟ್ಟಿಯಿಂದ ಹೊರಗೆ ಅಟ್ಟಬೇಕೆಂದು ಸೂಚಿಸಿದೆ. ಅಂದರೆ ಆಗ ಅತಿಥಿ ಸತ್ಕಾರದ ನಿಯಮದಿಂದ ಹೊರತಾಗಬಹುದು.
ಅಶ್ವಲಾಯನ ಗೃಹ್ಯಸೂತ್ರವು ಹೇಳುವ ಶವಸಂಸ್ಕಾರದ ಪದ್ಧತಿಯನ್ನು ಪರಿಶೀಲಿಸೋಣ.
"ಚಮಚ, ಕತ್ತಿ, ಅರೆಯುವ ಕಲ್ಲು, ಪಾತ್ರೆ, ಉರಿಯುವ ಕೊಳ್ಳಿ ಮತ್ತು ಕುಳಿ ಇರುವ ಸಾಧನಗಳಲ್ಲಿ ಬೆಣ್ಣೆ ಇತ್ಯಾದಿಗಳನ್ನು ಮೃತನ ದೇಹದ ಒಂದೊಂದು ಭಾಗದಲ್ಲಿ ಇಡಬೇಕು.
ಅನಂತರ ಹೆಣ್ಣು ಪ್ರಾಣಿಯ ಜಠರದ ವಪೆಯನ್ನು ತೆಗೆದು ಅದರಿಂದ ಮೃತನ ತಲೆ ಮತ್ತು ಬಾಯಿಗಳನ್ನು ಮುಚ್ಚುತ್ತಾ "ಅಗ್ನಿಯಿಂದ ನಿನ್ನನ್ನು ರಕ್ಷಿಸುವ ಅಸ್ತ್ರವಿದು, ಗೋವಿನಿಂದ ದೊರೆತಿದೆ" ಎಂಬ ಋಗ್ವೇದ (x-16.7)ದ ಮಂತ್ರವನ್ನು ಉಚ್ಚರಿಸಬೇಕು. ಪ್ರಾಣಿಯ ಪಿತ್ತಕೋಶವನ್ನು ತೆಗೆದು ಅದನ್ನು ಮೃತನ ಕೈಗಳ ಮೇಲೆ, ಪ್ರಾಣಿಯ ಹೃದಯವನ್ನು ಮೃತನ ಹೃದಯದ ಮೇಲೆ ಇಡಬೇಕು. ಇಡೀ ಪ್ರಾಣಿಯ ಪ್ರತಿಯೊಂದು ಅಂಗವನ್ನು ಮೃತನ ಭಿನ್ನ ಅಂಗಗಳ ಮೇಲೆ ಇರಿಸಿ, ಚರ್ಮದಿಂದ ಅದನ್ನು ಮುಚ್ಚಿ ’ಅಗ್ನಿ ಈ ಪಾತ್ರೆಯನ್ನು ಉರುಳಿಸಬೇಡ’ ಎಂಬ ಋಗ್ವೇದ (x-16.8) ಮಂತ್ರವನ್ನು ಹೇಳಬೇಕು. ದಕ್ಷಿಣ ಭಾಗದ ಅಗ್ನಿಗೆ ’ಓಂ ಅಗ್ನೇ ಸ್ವಾಹಾ’ ಎಂಬ ಮಂತ್ರ ಹೇಳುತ್ತಾ ಮೃತನ ಎದೆಯನ್ನು ಮುಟ್ಟಿ "ಇದರಿಂದ ನೀನು ಜನಿಸಿದ್ದೀಯ ನಿನ್ನಿಂದ ಈತ ಜನಿಸುವಂತಾಗಲಿ ಸ್ವರ್ಗದ ಕಡೆಗೆ ನಡೆಯಲಿ" ಎನ್ನುತ್ತಾನೆ.
ಮೇಲೆ ಉದ್ಧರಿಸಲಾದ ಮಂತ್ರಗಳಿಂದ ಪ್ರಾಚೀನ ಇಂಡೋ ಆರ್ಯನರಲ್ಲಿ ಯಾವೊಬ್ಬನು ಮೃತನಾದಾಗ ಒಂದು ಪ್ರಾಣಿಯನ್ನು ಕೊಂದು ಅದರ ದೇಹದ ವಿವಿಧ ಭಾಗಗಳನ್ನು ಮೃತನ ದೇಹದ ವಿವಿಧ ಭಾಗಗಳ ಮೇಲಿರಿಸಿ ಅನಂತರ ಶವ ದಹನ ನಡೆಸುತ್ತಿದ್ದರೆಂಬುದು ವೇದ್ಯ ವಾಗುತ್ತದೆ.
ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆಗಳಿಗೆ ಇವು ಆಧಾರಗಳಾಗಿವೆ. ಪ್ರಾರಂಭದಲ್ಲ ಹೇಳಿದ ಕೆಲವು ಆಧಾರಗಳು, ಗೋವು ಕೊಲ್ಲಲು ಅರ್ಹವಾದುದಲ್ಲ ಎಂದು ಹೇಳಿದರೆ ಅನಂತರದ ಅನೇಕ ಆಧಾರಗಳು ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಗೆ ಆಧಾರಗಳಾಗಿವೆ. ಹಾಗಿದ್ದರೆ ಇವುಗಳಲ್ಲಿ ಯಾವುದು ನಿಜ? ಹಿಂದೂಗಳು ಗೋಹತ್ಯೆ ಮತ್ತು ಗೋಮಾಂಸ ಸೇವನೆಗೆ ವಿರೋಧಿಗಳಾಗಿದ್ದರು ಎಂಬ ಬಗೆಗೆ ಶತಪಥ ಬ್ರಾಹ್ಮಣ ಮತ್ತು ಆಪಸ್ತಂಬ ಗೃಹ್ಯಸೂತ್ರಗಳನ್ನು ಉದಾಹರಿಸುತ್ತಾರೆ.
ಆದರೆ ಅಲ್ಲಿ ಮಿತಿ ಇಲ್ಲದ ಗೋಹತ್ಯೆ ಕೂಡದೆಂಬ ಬಗೆಗೆ ಮಾತ್ರ ಸೂಚನೆ ಇರುವಂತಿದೆ. ಅಷ್ಟೇ ಅಲ್ಲ, ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯು ಸಾಮಾನ್ಯ ನೀತಿಯಾಗಿತ್ತೆಂದು ಮೇಲಿನ ಗ್ರಂಥಗಳಿಂದ ತಿಳಿದುಬರುತ್ತದೆ. ಮಿತಿ ಇಲ್ಲದ ಗೋಹತ್ಯೆಯ ವಿರುದ್ಧ ಮಾಡಿದ ಉಪದೇಶಗಳು ಹೆಚ್ಚು ಸಂದರ್ಭದಲ್ಲಿ ಯಾರ ಕಿವಿಗೂ ಬೀಳಲಿಲ್ಲ ಎಂಬುದು ಮಹಾಋಷಿ ಯಾಜ್ಞವಲ್ಕ್ಯನ ನಡತೆಯಿಂದ ತಿಳಿದು ಬರುತ್ತದೆ. ಮೇಲೆ ಉದಾಹರಿಸಲಾದ ಶತಪಥ ಬ್ರಾಹ್ಮಣದ ಮೊದಲ ಮಂತ್ರ ವಾಸ್ತವವಾಗಿ ಯಾಜ್ಞವಲ್ಕ್ಯನನ್ನು ಸಂಬೋಧಿಸಿ ಹೇಳಿದ್ದಾಗಿದೆ. ಈ ಉಪದೇಶಕ್ಕೆ ಯಾಜ್ಞವಲ್ಕ್ಯನ ಪ್ರತಿಕ್ರಿಯೆ ಏನು? ಉಪದೇಶ ಕೇಳಿದ ಬಳಿಕ ಆತ ಹೇಳಿದ; "ನಾನಂತೂ ಎಳೆಯ ದಾಗಿದ್ದರೆ ತಿನ್ನುವವನೇ".
ಒಂದು ಕಾಲದಲ್ಲಿ ಹಿಂದೂಗಳು ಅಪಾರವಾಗಿ ಗೋವುಗಳನ್ನು ಕೊಂದು ಗೋಮಾಂಸ ಭಕ್ಷಿಸುತ್ತಿದ್ದರು ಎಂಬುದಕ್ಕೆ ವೇದಗಳು ಮತ್ತು ಬ್ರಾಹ್ಮಣಗಳ ನಂತರ ಬೌದ್ಧ ಸೂತ್ರಗಳಲ್ಲಿ ಬರುವ ಯಜ್ಞದ ವರ್ಣನೆಗಳು ವಿವರವಾದ ಆಧಾರಗಳನ್ನು ಒದಗಿಸುತ್ತದೆ. ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಕೊಲೆ ಮಾಡುತ್ತಿದ್ದ ಪ್ರಾಣಿಗಳ ಸಂಖ್ಯೆ ಅಪಾರವಾಗಿತ್ತು. ಉದಾಹರಣೆಗೆ ’ಕುಟದಂತ ಸುತ್ತ’ ನೋಡಬಹುದು. ಕುಟದಂತನೆಂಬ ಬ್ರಾಹ್ಮಣನು ತನ್ನನ್ನು ಪರಿವರ್ತಿಸಿದ ಬುದ್ಧನನ್ನು ವಂದಿಸುತ್ತಾ ಅಂಥ ಯಜ್ಞಗಳಲ್ಲಿ ಆಗುತ್ತಿದ್ದ ಅಪಾರ ಪ್ರಾಣಿಹತ್ಯೆಗಳ ಬಗೆಗೆ ಸೂಚ್ಯವಾಗಿ ಹೇಳುತ್ತಾನೆ.
ನಾನು, ನಾನು ಸಹ, ಪೂಜ್ಯನಾದ ಗೌತಮನನ್ನು ನನ್ನ ಮಾರ್ಗ ದರ್ಶಕ ನನ್ನಾಗಿ ಸ್ವೀಕರಿಸಿ ಅವನ ತತ್ತ್ವ ಮತ್ತು ಧರ್ಮಗಳನ್ನು ಅನುಸರಿ ಸುತ್ತೇನೆ. ಪೂಜ್ಯನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿ, ಇಂದಿನಿಂದ ನನ್ನ ಜೀವನಪರ್‍ಯಂತ ಆತನನ್ನು ನನ್ನ ಮಾರ್ಗದರ್ಶಕನನ್ನಾಗಿ ಸ್ವೀಕರಿಸುವೆ. ನಾನು ಸಹ, ಪೂಜ್ಯ ಗೌತಮ, ನನ್ನಲ್ಲಿನ ೭೦೦ ಹೋರಿಗಳು, ೭೦೦ ಎತ್ತುಗಳು, ೭೦೦ ಎಳೆಯ ಹಸುಗಳು, ೭೦೦ ಮೇಕೆಗಳು ಮತ್ತು ೭೦೦ ಟಗರುಗಳನ್ನು ಬಿಡುಗಡೆ ಮಾಡಿದ್ದೇನೆ. ಅವುಗಳಿಗೆ ನಾನು ಜೀವದಾನ ಮಾಡಿದ್ದೇನೆ. ಅವು ಹುಲ್ಲುತಿಂದು ತಿಳಿಯಾದ ನೀರು ಕುಡಿದು ಪ್ರಶಾಂತ ವಾತಾವರಣದಲ್ಲಿ ಸ್ವೇಚ್ಛೆಯಿಂದ ತಿರುಗಾಡಲಿ."
ಕೋಸಲದ ಅರಸನಾದ ’ಪ್ರಸೇನಜಿತ್’ ಎಂಬುವನು ನಡೆಸಿದ ಯಜ್ಞದ ವಿಸ್ತಾರ ವರ್ಣನೆಯನ್ನು ನಾವು ’ಸಂಯುಕ್ತ ನಿಕಾಲಯದಲ್ಲಿ’ ಕಾಣ ಬಹುದು. ೫೦೦ ಹೋರಿಗಳು, ೫೦೦ ಕರುಗಳು ಅನೇಕ ಎತ್ತುಗಳು ಮತ್ತು ಟಗರುಗಳನ್ನು ವಧಾಸ್ತಂಭದಲ್ಲಿ ಕೊಲೆಮಾಡಲಾಯಿತೆಂದು ಹೇಳಲಾಗಿದೆ.
ಈ ಆಧಾರಗಳಿಂದ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಒಂದು ಕಾಲದಲ್ಲಿ ಮಾಂಸವನ್ನಷ್ಟೇ ಅಲ್ಲ, ಗೋಮಾಂಸ ಭಕ್ಷಿಸುತ್ತಿದ್ದರೆಂದು ನಾವು ತಿಳಿಯಬಹುದು.
ಕೃಪೆ : ವಿಚಾರ ಮಂಟಪ ಬ್ಲಾಗ್
No comments:
Post a Comment