Friday, May 11, 2012

ಮೀಸಲಾತಿ ಚರ್ಚೆಯ ಮುಂದುವರಿಕೆ ! ನೀವೇನಂತೀರೀ ?

ಐಜೂರ ಮತ್ತು ಶ್ರೀಕಾಂತ ಅವರಿಗೆ ಫೇಸ್ ಬುಕ್ಕಿನಲ್ಲಿ ವಾಗ್ವಾದ ನಡೆದಾಗ ನಾನು ಮಧ್ಯೆ ಪ್ರವೇಶಿಸಿ ಸಲಹೆ, ಸೂಚನೆ ನೀಡಿದೆ. ಆದರೆ ಇಡಿ ಅಭಿಪ್ರಾಯಗಳನ್ನು (ಶ್ರೀನಿವಾಸ ಎಂ.ವ್ಹಿ. ಅವರು ತಾವೇ ಆ ಪೋಸ್ಟಗಳನ್ನು ತೆಗೆದಿರುವುದಾಗಿ ನನ್ನೊಂದಿಗೆ ಮೊಬೈಲ್ ಮಾತುಕತೆಯಲ್ಲಿ ಹೇಳಿದ್ದಾರೆ ! ) ಅಳಿಸಿ ಹಾಕಲಾಯಿತು !

ಮೀಸಲಾತಿಯ  ಬಗ್ಗೆ ಚರ್ಚೆ ನಡೆದಾಗ ನಾನು ಏನೂ ಹೇಳಿದರೂ ಅರ್ಥ ಮಾಡಿಕೊಳ್ಳದ ಮೇಲೆ ನಾನು ಹೇಳಿದ್ದು, ಸರಿಯಾದ ಗ್ರಹಿಕೆಗಳು ಇರದಿದ್ದ ಪಕ್ಷದಲ್ಲಿ ಯಾರು ಏನು ಹೇಳಿದರೂ ರುಚಿಸುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಒಂದು ಮಾತು ಹೇಳಿದ್ದಾರೆ ಶ್ರೀಕಾಂತ, 'ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು' ಈ ಮಾತಿನರ್ಥ ಮಾಡಿಕೊಂಡು ಬದುಕಿ ; ಮನುಷ್ಯರನ್ನು ಮನುಷ್ಯರೆಂದು ಪರಿಗಣಿಸಿ ಮಾತನಾಡಿ, ವಂಶಪಾರಂಪರ್ಯವಾಗಿ ಬಂದ ಕೊಳಕುತನವನ್ನು ಇನ್ನಾದರೂ ಬಿಟ್ಟು ಹೊರಬನ್ನಿ. ಕೇವಲ ವಿತಂಡವಾದ ಹೂಡುವುದು ನಮ್ಮ ಕೆಲಸವಲ್ಲ ; ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ ; ಯಾಕೆ ಹೀಗಿದೆ ಎಂಬ ಬಗ್ಗೆ ವಾಸ್ತವದ ನೆಲೆಯಲ್ಲಿ ವಿಚಾರ ಮಾಡಿ. ಬುದ್ಧಿ ಸ್ಥಿಮಿತತೆಯನ್ನು ಕಳೆದುಕೊಂಡಂತೆ ವರ್ತಿಸುವುದರಿಂದ ಯಾವುದೇ ಪ್ರಯೋಜನಗಳಿಲ್ಲ. ಮನುಷ್ಯನ ಹೃದಯ ಗೆಲ್ಲಿ. ತಾಳ್ಮೆ ಇದ್ದರೆ ಒಂದಿಷ್ಟು ಓದಿಕೊಂಡು ಅರಿವು ಪಡೆದುಕೊಳ್ಳಿ ; ಇಲ್ಲವೆ ವಾಸ್ತವದ ಸಮಾಜವನ್ನು ಸುತ್ತು ಹಾಕಿ ಬನ್ನಿ ! ಏನೇನೂ ಸಾಧ್ಯವಿಲ್ಲ ಎಂದಾದರೆ ಸುಮ್ಮನಿರಿ ; ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ.

ಇದನ್ನು Mahadev Hadapad and Anilkumar Ogennavar ಮಾಡಿದರು. ಆನಂತರ  ಶ್ರೀಕಾಂತ್ ಎಂ ಅವರು  ನಾನು ಖಂಡಿತ ವಿತ್ತಂಡ ವಾದ ಮಾಡಲಿಲ್ಲ, ನಾವು ಮುಂದೆ ಎನು ಮಾಡಿದರೆ ಇದು ಸರಿ ಹೋಗಬಹುದೆಂದು ಹೇಳಿದೆ ಅಷ್ಟೇ, ನೀವು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಷ್ಟೇ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದು ನನಗೆ ಕಸಿವಿಸಿಯುಂಟು ಮಾಡಿತು. ಅದಕ್ಕೆ ನಾನು, ಇನ್ನೊಮ್ಮೆ ಓದಿ ಶ್ರೀಕಾಂತ ! ನಿಮ್ಮ ಹೆಸರಿದೆ ಅಲ್ಲಿ. ಆದರೆ ಅದು ಕೇವಲ ನಿಮಗಷ್ಟೆ ಅಲ್ಲ ; ಎಲ್ಲರಿಗೂ ಅನ್ವಯಿಸಿಯೇ ನಾನು ಆ ಮಾತುಗಳನ್ನು ಬರೆದಿದ್ದೇನೆ. ನಿಜ ಹೇಳಬೇಕು ಅಂದ್ರೆ ನೀವು ಹೇಳುವ ಮಾತುಗಳು ನಿಜವಾಗಿಯೂ ಅರ್ಥವಾಗುತ್ತ ಇಲ್ಲ ; ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ನೀವೇನು ಅದಕ್ಕೆ ಜವಾಬ್ದಾರ ಆಗೋದು ಬೇಡ ; ನಿಶ್ಚಿಂತೆಯಿಂದ ಇರಿ ಎಂದು ಪ್ರತಿಕ್ರಿಯಿಸಿದೆ.

ಮತ್ತೇ ಕಿರಿಕಿರಿ ಮಾಡಿದ ಶ್ರೀಕಾಂತ್ ಎಂ ಅವರು, ಕಾಲ ಕಾಲ ಎಂದು ಮುಂದೂಡಿ ೬೦ ವರ್ಷಕ್ಕೆ ತಂದಿದ್ದೀರಾ ಮತ್ತಷ್ಟು ವರ್ಷಗಳು ಹೀಗೆ ಕಾಯೋಣ ಇದೇ ರೀತಿ ಜಾತಿ ಜಾತಿ ಎಂದೆ ಇರೋಣ ಎನ್ನುತ್ತೀರಾ, ಆಗಬಹುದು, ನಮ್ಮ ಮುಂದಿನ ಪೀಳಿಗೆಗೂ ಇದನ್ನೇ ಧಾರೆ ಎರೆದು ಹೋಗೋಣ ಅಲ್ಲವೇ ಎಂದು ಕೇಳಿದರು. ಅದಕ್ಕೆ ನಾನು, ಮತ್ತೇ ಮತ್ತೇ ಅದೇ ಯಾಕೆ ಹಾಡುತ್ತೀರಿ ? ನನ್ನ ಜಾತಿ ಯಾವುದೆಂದು ನಿಮಗೆ ಗೊತ್ತಿಲ್ಲ ; ನಿಮ್ಮ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ. ಆದರೂ ಜಾತಿಯನ್ನು ಯಾಕೆ ನಡುವೆ ಎಳೆದು ತರುತ್ತಿದ್ದೀರೋ ತಿಳೀತಾ ಇಲ್ಲ  ಎಂದು ಪ್ರತಿಕ್ರಿಯಿಸಿದೆ.

ಆದರೂ ಬಿಡದ ಶ್ರೀಕಾಂತ್ ಎಂ ಅವರು, ಅಲ್ಲಿ ನನ್ನ ಹೆಸರನ್ನು ನೋಡಿದೆ, ನೀವು ಜಾತಿ ಅನ್ನೋ ಪದ ಬಿಟ್ಟು ಬನ್ನಿ ಎಲ್ಲವೂ ಅರ್ಥ ಆಗುತ್ತೆ, ನೀವು ಹೇಳಿದ ಹಾಗೇನೆ ಜನ ಯಾವುದಕ್ಕೂ ಜವಾಬ್ದಾರರಾಗದೆ ನಿಶ್ಚಿಂತೆಯಿಂದ ನಿದ್ರೆ ಮಾಡಿ ಮಾಡಿದರಿಂದಲೇ ಇಂದಿನ ಸ್ಥಿತಿಗೆ ಕಾರಣ ಎಂಬ ಅಪವಾದ ಹೇರಿದರು. ಮಧ್ಯೆ ಪ್ರವೇಶಿಸಿದ Srinivasa MV ಅವರು, ಮಾನ್ಯ ಸಿದ್ದರಾಮ್ ಕರಣೀಕರಲ್ಲಿ ಮನವಿ: ಕನ್ನಡ ಕಟ್ಟೆಯಲ್ಲಿ ಕೆಲವರು ಪೂರ್ವಾಗ್ರಹಪೀಡಿತ ಮನೋಪ್ರವೃತ್ತಿಯಿಂದ ಮಾತ್ರವೇ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಈ ರೀತಿ ಯಾವುದೇ ಗೂಪ್‌ನಲ್ಲಿ ಆಗುವುದು ಸರಿಯಿಲ್ಲ. ಏಕತಾನತೆಯಿಂದ ಕೂಡಿದ, ಕೇವಲ ದೋಷಾರೋಪಣೆಗಳಿಗೆ ಎಡೆಮಾಡಿಕೊಡುವ ಇಂತಹ ಪ್ರಕಟಣೆಗಳಿಂದ ಏನು ಸಾಧಿಸುವರು. ನಿಮ್ಮಂತೆ ಬಹಳ ಜನಕ್ಕೆ ಬೇಸರ. ನಮ್ಮ ಮನಶಾಂತಿಯನ್ನು ನಾವು ಕೆಡಸಿಕೊಳ್ಳುವುದು ಬೇಡ ಎಂಬುದಾಗಿ ಸಲಹೆ ನೀಡಿದರು. ಯಾಕೆಂದರೆ 'ಕನ್ನಡ ಕಟ್ಟೆ' ಗ್ರೂಪ್ ಆರಂಭಿಸಿದವರು ಅವರೇ !


ಅಷ್ದರೊಳಗೆ ನನ್ನ ಪ್ರತಿಕ್ರಿಯೆಯಿಂದ ಬೆಸರಗೊಂಡ ಶ್ರೀಕಾಂತ್ ಎಂ ಅವರು, ಖಂಡಿತ ನಮ್ಮ ಜಾತಿಗಳ ಬಗ್ಗೆ ಮತ್ತೊಬ್ಬರಿಗೆ ಗೊತ್ತಿಲ್ಲ, ಆದರೆ ಈ ಚರ್ಚೆ ಪ್ರಾರಂಭಕ್ಕೆ ಕಾರಣವಾಗಿದ್ದೇ ಈ ಜಾತೀಯತೆ ಅಲ್ಲವೇ ಎಂಬುದಾಗಿ ಪ್ರಶ್ನೆ ಎಸೆದಿದ್ದರು !

ಅದಕ್ಕೆ ಮತ್ತೇ Srinivasa MV ಅವರು ಮಧ್ಯೆ ಪ್ರವೇಶಿಸಿ,  ಶ್ರೀಕಾಂತ್ ಅವರೆ ಇನ್ನು ಈ ಚರ್ಚೆ ಮುಂದುವರಿಯುವುದು ಬೇಡ ಎಂದು ಹೇಳಿದರು. ಆದರೆ ಪುರೋಗಾಮಿ ನೆಲೆಯ ನಾನು, ಚರ್ಚೆ ಇರಬೇಕು ; ಆದರೆ ಆರೋಗ್ಯಕರ ಚರ್ಚೆ ಬರಬೇಕು ಎಂದು ಹೇಳಿದೆ.

ಶ್ರೀಕಾಂತ್ ಎಂ ಅವರು  ‎Srinivasa MV ಮಾತನ್ನು ಒಪ್ಪಿಕೊಂಡು ಸರಿ ಸಾರ್ ಎಂದರು !

ಈ ಬಗ್ಗೆ ಮತ್ತೇ ಚರ್ಚೆ ಸುರುವಾಯಿತು. Ajith Sheregar ಅವರು ellarigu ondu prashne ondu groupina uddesha enagirbeku?? ಎಂದು ಪ್ರಶ್ನೆ ಎಸೆದರು !

Srinivasa MV ಅವರು,  'ನಾವು ನಾಗರೀಕರಾಗಿರಬೇಕು. ಪರಸ್ಪರ ದ್ವೇಷ ಅಸೂಯೆಗಳನ್ನು ಬೆಳಸಿಕೊಳ್ಳುವುದು ಸರಿಯಿಲ್ಲ'  ಎಂಬ ಹೇಳಿಕೆ ನೀಡಿದರು.

ಆನಂತರ Srinivasa MV ಅವರು ನನ್ನ ಮೊಬೈಲಿಗೆ ಕಾಲ್ ಮಾಡಿ ಶ್ರೀಕಾಂತ ಹೇಳಿದ ವಿಚಾರಗಳ ಪುನರುಚ್ಛಾರ ಮಾಡಿದರು. ನಾನು ಹೊರಗೆ ಹೋಗುವ ಗಡಿಬಿಡಿಯಲ್ಲಿದ್ದರೂ ಮಾತಾಡಿ ಅವರು ಹೇಳಿದ್ದೇ ಸರಿ ಎಂದು ಬಿಟ್ಟೆ ! ಅವರ ಮನಸ್ಸು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ ಅಷ್ಟೆ !
       
       ಮತ್ತೇ ನಾನು 'ಕನ್ನಡ ಕಟ್ಟೆ' ಮೂಲಕ ಹೀಗೆ ಹೇಳಿರುವೆ,  'ಶ್ರೀನಿವಾಸಜೀ, ನಿಮ್ಮ ವಿಚಾರಗಳು ತುಂಬ ಅಮೋಘವಾಗಿವೆ. ಮೀಸಲಾತಿ ಚರ್ಚೆಯನ್ನು ಬೇರೆ ದಾರಿಗೆ ಎಳೆಯುವ ಅವಶ್ಯಕತೆ ಇಲ್ಲ. ಶ್ರೀಕಾಂತ ಅವರಿಗೆ ನಾನು ಹೇಳಿದ್ದು ಸರಿಯಾಗಿಯೇ ಇದೆ. ನೀವು ಕಾಮೆಂಟ್ ನ್ನು ಗಮನಿಸಿಲ್ಲ ಎನಿಸುತ್ತದೆ. ನೀವು ನನ್ನ ಜೊತೆ ಫೋನ್ ಸಂಪರ್ಕ ಮಾಡಿದಾಗ ನಾನು ಹೇಳಿದ ವಿಚಾರಗಳು ಮತ್ತು ನಾನು ನಡೆದು ಬಂದ ದಾರಿಯ ವಿಚಾರಗಳು ಭಿನ್ನ. ನೀವು ಹಿರಿಯರು. ನಿಮ್ಮ ಬಗ್ಗೆ ಗೌರವ ಇದೆ. ದಯವಿಟ್ಟು ಮೀಸಲಾತಿಯ ವಿರುದ್ಧ ಮಾತಾಡಬೇಡಿ. ಒಂದಿಡಿ ಸಮೂಹ ನಮ್ಮೆದುರಿಗೆ ಇದೆ. ಅದರ ಬಗ್ಗೆ ದಯವಿಟ್ಟು ತಿಳಿದುಕೊಂಡಿದ್ದೀರಿ ಎಂದುಕೊಂಡಿರುವೆ. ಜಾತಿ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಮತ್ತು ಇರುತ್ತದೆ. ನಾನು ಎಡಪಂಥೀಯ ವಿಚಾರಗಳಿಂದ ಬಂದವನು. ಇಂದಿಗೂ ನಾನು ಅವರನ್ನು ಬೈಯ್ಯುತ್ತೇನೆ. ಆದರೆ ಆ ಬೈಯ್ಯುವಿಕೆಯ ಹಿಂದೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿಗಳು ಇರುತ್ತವೆ. ವಾದ ಮಾಡಿದರೆ ನಾನೂ ಸೋಲುವುದಿಲ್ಲ ; ನೀವೂ ಸೋಲುವುದಿಲ್ಲ ! ಸೋಲು ಏನಿದ್ದರೂ ಕೆಳಹಂತದ ಬದುಕಿನಲ್ಲಿ ಇನ್ನೂ ಜೀವಂತ ಇದ್ದಾರಲ್ಲ ಅವರದು. ಮತ್ತೇ ಮತ್ತೇ ಹೇಳುತ್ತಿದ್ದೇನೆ ಇತಿಹಾಸದ ಪಳಿಯುಳಿಕೆ ನಾವು ಎನ್ನುವ ಅರಿವು ನಮಗಿರಬೇಕು. ಹಿಂದೆ ಇದ್ದ ಪರಿಸ್ಥಿತಿ ಇಂದು ಇಲ್ಲ ಎಂದು ನೀವು ಹೇಳಿದ್ದು ಸರಿ. ನಮಗೆ ಬ್ರಾಹ್ಮಣರ ಬಗ್ಗೆ ಸಿಟ್ಟಿಲ್ಲ ; ಬ್ರಾಹ್ಮಣಶಾಹಿ ಮೇಲಿದೆ. ಅದಕ್ಕೆಂತಲೇ ನಾನು ದಲಿತರು ಮತ್ತು ಬಲಿತರು ಎನ್ನುವ ಪದ ಬಳಸುತ್ತೇನೆ. ಈ ಪದದ ಹಿಂದೆ ಜಾತಿ ವಾಸನೆ ಇಲ್ಲ. ಬಲಿತ ದಲಿತರೂ ಇಂದು ಜಾತಿಯತೆ ಮಾಡುತ್ತಿದ್ದಾರೆ. ಉದಾಹರಣೆ ನಾನು ಕೊಡಬಲ್ಲೆ ; ಸೌಹಾರ್ದದ ಚರ್ಚೆಗೆ ತೆರೆದುಕೊಳ್ಳೋಣ !'

ಇದಕ್ಕೆ ನೀವೇನು ಅಂತೀರಿ ?

Thursday, May 10, 2012

ಡಬ್ಬಿಂಗ್ ಮತ್ತು ವಾದಗಳು !



ಆರಂಭದಲ್ಲಿ ಕೆ.ವಿ.ತಿರುಮಲೇಶ್ ಬರೆದ ಲೇಖನ

ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಗೊತ್ತಿರುವ ಬಹುಸಂಖ್ಯೆಯ ಜನರಿದ್ದಾರೆ. ಅವರಿಗೆ ಈ ಪ್ರೋಗ್ರಾಮುಗಳು ಕನ್ನಡದಲ್ಲಿ ಸಿಗಬೇಕು. ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ. ಅದಲ್ಲ ಎಂದಾದರೆ ಇದನ್ನು ವಿರೋಧಿಸುವ ಜನರು ಮೂಲಕನ್ನಡದಲ್ಲೇ ಇಂಥ ಪ್ರೋಗ್ರಾಮುಗಳನ್ನು ಕೊಡಬೇಕು. ಹಾಗೆ ಕೊಡುವುದು ಸಾಧ್ಯವಿಲ್ಲ ಎಂದಾದರೆ ತೆಪ್ಪಗಿರಬೇಕು.

ಯಾವುದಾದರೊಂದು ಚಾನೆಲ್ ನಲ್ಲಿ ಅಮೀರ್ ಖಾನನ ಅಥವಾ ಡಿಸ್ಕವರಿ ಚಾನೆಲಿನ ಪ್ರೋಗ್ರಾಮುಗಳು ಡಬ್ಬಿಂಗ್ ಆಗಿ ಬಂದರೆ ಕನ್ನಡ ಚಿತ್ರ ನಿರ್ಮಾಪಕರಿಗೆ ಭಯ ಯಾಕೆ? ಅವುಗಳ ಜತೆ ಸ್ಪರ್ಧಿಸಬಲ್ಲ ಪ್ರೋಗ್ರಾಮುಗಳನ್ನು ನೀಡಿರಿ. Or else you will be a dog in the manger!

ಅಮೀರ್ ಖಾನ್ ಗೆ ಕೆಲವೊಂದು ಟಾಪಿಕ್ಸ್ ನೀಡಲು ಈ ಮೂಲಕ ಇಚ್ಛಿಸುತ್ತೇನೆ:

೧. ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳ ಬಗ್ಗೆ ಸಮಾಜ ಅನ್ಯಾಯ ಮಾಡುತ್ತಿದೆಯೇ?

೨. ಸ್ತ್ರೀಯರ ಮೇಲಣ ಅತ್ಯಾಚಾರ ತದೆಗಟ್ಟುವುದು ಹೇಗೆ?

೩. ಅಣು ಇಂಧನದ ವಿನಾ ಲೋಕ ತನ್ನ ಭವಿಷ್ಯವನ್ನು ಕಲ್ಪಿಸುವುದು ಸಾಧ್ಯವೇ?

೪. ಕಾನೂನು ಇದ್ದರೂ ಬಾಲ ಕಾರ್ಮಿಕ ಪದ್ಧತಿ ಯಾಕೆ ನಿಂತಿಲ್ಲ?

೫. ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

೬. ಜಾತೀಯತೆಯನ್ನು ತೊಡೆದು ಹಾಕುವುದು ಸಾಧ್ಯವೇ? ಹೇಗೆ?

೭. ಸಂಸ್ಕೃತಿ ಎಂದರೆ ನಿಜಕ್ಕೂ ಏನು?

೮. ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ

ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?

೯. ಮರಣದಂಡನೆಯನ್ನು ಕಿತ್ತುಹಾಕಬೇಕೇ? ರೇಪ್ ಮಾಡಿ ಶಿರ ತುಂಡರಿಸುವ, ಆಸಿಡ್ ಎರಚಿ ಹೆಂಗಸರ ಭವಿಷ್ಯವನ್ನೇ

ನಾಶಮಾಡುವ ಕ್ರಿಮಿನಲುಗಳಿಗೂ ಮರಣದಂಡನೆ ಬೇಡವೇ?

೧೦. ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ? ಉದಾಹರಣೆಗೆ, ಪ್ರೀತಿ ಮಾಡಲು ಒತ್ತಾಯಿಸುವುದು,

ಸ್ತ್ರೀಯರ ಹಿಂದೆ ಬೀಳುವುದು, ಗುರಿ ಸಾಧಿಸಲು ಏನು ಮಾಡಲೂ ಸಿದ್ಧರಾಗುವುದು.

೧೧. ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

೧೨. ನೀರಿನ ಸಮಸ್ಯೆಯನ್ನು ನೀಗಿಸುವುದು ಹೇಗೆ?

೧೩. ಅಂಗದುರ್ಬಲರನ್ನು ಸಮಾಜ ಹೇಗೆ ನೋಡುತ್ತದೆ?

೧೪. ಸೆಕ್ಸ್ ವರ್ಕರ್ಸ್ ಎಂದು ವೇಶ್ಯೆಯರನ್ನು ನಾಮಕರಣ ಮಾಡುವುದರಿಂದ ವೇಶ್ಯಾಪದ್ಧತಿಯನ್ನು ತಡೆಗಟ್ಟುವುದು ಸಾಧ್ಯವೇ? ಅಥವಾ ತಡೆಗಟ್ಟುವುದೇ ಬೇಡವೇ?!

೧೫. ಪ್ರಜಾಪ್ರಭುತ್ವ ಮತ್ತು ವೋಟ್ ಬ್ಯಾಂಕ್- ಈ ವಿರೋಧಾಭಾಸಕ್ಕೆ ಯಾವ ಪರಿಹಾರ?

ಇಂಥ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಇವನ್ನು ನೀವೂ ಸೂಚಿಸಬಹುದು, ಯೋಚಿಸಬಹುದು, ಇವುಗಳ ಕುರಿತು ಬರೆಯಬಹುದು. ಅಮೀರ್ ಖಾನಿಗೂ ತಿಳಿಸಬಹುದು.

ಡಬ್ಬಿಂಗ್ ನಿಂದ ಕನ್ನಡವೇನೂ ಹಾಳಾಗುವುದಿಲ್ಲ. ಲೋಕದ ಅನೇಕ ಭಾಷೆಗಳಲ್ಲಿ ಅನುವಾದಗಳು, ಡಬ್ಬಿಂಗ್, ಸಬ್-ಟೈಟಲಿಂಗ್ ನಡೀತಿವೆ. ಅವು ಯಾವುದಕ್ಕೂ ಇಲ್ಲದ ಭಯ ಕನ್ನಡಕ್ಕೆ ಯಾಕೆ? ಅದೂ ಅಲ್ಲದೆ ರಕ್ಷಣಾತಂತ್ರದಿಂದ, ದಿಗ್ಭಂಧನದಿಂದ ಯಾವ ಭಾಷೆಯೂ ಯಾವ ಕಲೆ-ವಿಜ್ಞಾನವೂ ಬೆಳೆಯವು. ಕನ್ನಡ ಮೊಲೆಹಾಲಿನಲ್ಲಿ ಎಷ್ಟು ಕಾಲ ಇರಬೇಕು?
ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

 Sandesh S says: excellent 1 ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?

    ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)

    ನಮ್ಮ ಸಿನೆಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆಯೇ?
    ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?
    ಸಂಸ್ಕೃತಿ ಎಂದರೆ ನಿಜಕ್ಕೂ ಏನು? everyone should think about these
  
 Veena Bhat says : ನಿಜ ಸರ್…,ಇಲ್ಲಿ ಭಾಷೆಗಿಂತ ವಿಷಯವೇ ಮುಖ್ಯ.ಈ ಸಮಸ್ಯೆ ಒಂದು ಭಾಷೆಯ ಜನರಿಗೆ ಸೀಮಿತವಾಗಿಲ್ಲ.ಇದು ಇಡೀ ದೇಶ ಎದುರಿಸುತ್ತಿರುವ ಸಮಸ್ಯೆ .ವಿದೇಶೀ ಸಿನಿಮಾಗಳ ,ವಿದೇಶೀ ಸಂಸ್ಕೃತಿಯ ಎಲ್ಲಾ ಕೆಟ್ಟದ್ದನ್ನು ಅನುಕರಣೆ ಮಾಡುವ ನಮ್ಮ ಸಿನೆಮಾಗಳು ಮತ್ತು ವಾಹಿನಿಗಳು ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ?
    ನನ್ನ ಕೆಲವು ಪಾಯಿಂಟ್ಸ್ ಗಳನ್ನು ಇದರೊಂದಿಗೆ ಸೇರಿಸಲು ಇಷ್ಟಪಡುತ್ತೇನೆ ..
    ೧.ಭ್ರಷ್ಟಾಚಾರ ನಿರ್ಮೂಲನ ಸಾಧ್ಯವೇ..?
    ೨.ಲಿವ್ ಇನ್ ರಿಲೇಶನ್ ಶಿಪ್ ನ್ನು ಒಪ್ಪಿಕೊಳ್ಳಬೇಕೆ..?
    ೩.ಸ್ತ್ರೀ ಸಮಾನತೆ ಹೇಗೆ ಸಾಧ್ಯ ?
    ೪ .ಸಲಿಂಗ ವಿವಾಹ ನಮ್ಮ ಸಂಸ್ಕೃತಿಗೆ ವಿರೋಧ ಅಲ್ಲವೆ ? ಇದು ಕುಟುಂಬ ವ್ಯವಸ್ಥೆಗೆ ಮಾರಕ ಅಲ್ಲವೆ ?
    ೫.ಸರಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡುವುದು ಹೇಗೆ ? [ಹೆಚ್ಚಿನವು ಕಡತಗಳಲ್ಲೇ ಉಳಿಯುತ್ತವೆ ]
    ೬.ಬಿಕ್ಷುಕರ ಸಮಸ್ಯೆ -ಬಿಕ್ಷಾಟನೆ ಯನ್ನು ತಡೆಯುವುದು ಹೇಗೆ ?

    ವಸುಧೇಂದ್ರ says: ಪ್ರಿಯ ತಿರುಮಲೇಶ್,
    ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಸ್ಪರ್ಧೆಯಿಲ್ಲದ ಯಾವುದೇ ಚಟುವಟಿಕೆಯೂ ಕಾಲಕ್ರಮೇಣ ಗುಣಮಟ್ಟದಲ್ಲಿ ಕುಸಿಯುತ್ತದೆ. ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು. ಅದಕ್ಕೀಗ ಸ್ವಾತಂತ್ರ್ಯ ಕೊಡೋಣ. ಕಾಡಿನಲ್ಲಿ ಎಲ್ಲ ಪ್ರಾಣಿ ಸಂಕುಲದ ಮಧ್ಯೆ ಅದು ಘರ್ಜಿಸಲಿ. ತನ್ನ ಶಕ್ತಿಯನ್ನು ಮೆರೆಯಲಿ.

    ಮನೆಯಲ್ಲಿ ಅಕ್ಕ ಅತ್ಯಂತ ಪ್ರೀತಿಯಿಂದ ಡಿಸ್ಕವರಿ, ಹಿಸ್ಟರಿ ಛಾನಲ್ಗಳನ್ನು ನೋಡುತ್ತಾಳೆ. ಗಳಿಗೆಗೊಮ್ಮೆ ಅದರ ಆಂಗ್ಲ ವರದಿ ಅರ್ಥವಾಗದೆ ‘ಏನಂತೋ?’ ‘ಏನಂತೋ’ ಎಂದು ನನ್ನನ್ನು ಕೇಳಿದಾಗ, ಕನ್ನಡದಲ್ಲಿ ಅದನ್ನು ನಾವು ಕೊಡುತ್ತಿಲ್ಲವಲ್ಲಾ ಎಂದು ಬೇಸರವಾಗುತ್ತದೆ. ಕಲೆಯ ಆಸ್ವಾದನೆಗೆ ಸೀಮೆಗಳನ್ನು ಒಡ್ಡುವುದು ಅಮಾನವೀಯ. ಒಂಚೂರು ವಿಶಾಲ ಮನೋಭಾವದಿಂದ ಜಗತ್ತನ್ನು ನೋಡೋಣ. ದೇಶ-ವಿದೇಶಗಳಲ್ಲಿ ಎಂತೆಂಥಹ ಅದ್ಭುತ ಸಿನಿಮಾಗಳಿವೆ! ಅವುಗಳನ್ನು ನಮ್ಮವರು ನೋಡುವುದು ಬೇಡವೆ? ವಿದ್ಯಾವಂತರು ಮಾತ್ರ ಆಂಗ್ಲ ಸಬ್-ಟೈಟಲ್ ಹಾಕಿಕೊಂಡು ನೋಡಿಬಿಟ್ಟರೆ ಸಾಕೆ? ನಮ್ಮವರ ಸಿನಿಮಾ ಗ್ರಹಿಕೆ ಗುಣಮಟ್ಟ ಹೆಚ್ಚುವುದು ಯಾವಾಗ? ಲಾಂಗು-ಮಚ್ಚು ಹಿಡಿದುಕೊಂಡು ರಕ್ತ ಚೆಲ್ಲಾಡುವ ನಮ್ಮವರ ಸಿನಿಮಾಗಳು ಬಹು ಕೆಳಮಟ್ಟದಲ್ಲಿವೆ. ಬೇರೆ ರಾಜ್ಯದ ಗೆಳೆಯರ ಮುಂದೆ ಮಾತನಾಡುವಾಗ ನಮ್ಮಲ್ಲಿ ಒಳ್ಳೆಯ ಸಿನಿಮಾಗಳೇ ಇತ್ತೀಚೆಗೆ ಬಂದಿಲ್ಲವೆಂಬ ಕಟು ಸತ್ಯ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ನಾವು ದೇಶದ ಉಳಿದ ರಾಜ್ಯಗಳವರ ಜೊತೆಗೆ ಎದೆಯುಬ್ಬಿಸಿ ಮಾತನಾಡುವಂತಹ ಸಿನಿಮಾಗಳು ನಮಗೆ ಕನ್ನಡದಲ್ಲಿ ಬೇಕು. ಸ್ಪರ್ಧೆಯನ್ನು ಒಡ್ಡದೆ ಅದನ್ನು ಸಾಧಿಸುವುದು ಆಗುವದಿಲ್ಲ.

    ಜಗತ್ತಿನ ಸಕಲೆಂಟು ನುಡಿಯ ಪುಸ್ತಕಗಳನ್ನು ಅನುವಾದ ಮಾಡಿಕೊಂಡರೂ ಕನ್ನಡದ ಸಾಹಿತ್ಯಕ್ಕೆ ಯಾವ ಕೊರೆತೆಯೂ ಆಗಿಲ್ಲ ಅಥವಾ ಅದರಿಂದ ಕನ್ನಡ ಸಂಸ್ಕೃತಿ ನಶಿಸಿಯೂ ಇಲ್ಲ. ದೇಶದಲ್ಲಿ ಹೆಮ್ಮೆಯಿಂದ ತಲೆ ಎತ್ತುವಂತೆ ಈವತ್ತಿಗೂ ನಮ್ಮ ಸಾಹಿತ್ಯವಿದೆ. ಎಂಟು ಜ್ಞಾನಪೀಠಗಳನ್ನು ಪಡೆದಿದೆ. ಹಾಗಿದ್ದ ಮೇಲೆ ಸಿನಿಮಾ ರಂಗದಲ್ಲೇಕೆ ಕಳವಳ? ಗಟ್ಟಿ ಕಾಳುಗಳು ಖಂಡಿತಾ ಉಳಿದು ಕೊಳ್ಳುತ್ತವೆ. ಡಬ್ಬಿಂಗ್ ಅನುಮತಿ ಸಿಕ್ಕರೂ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು ದೇಶ-ವಿದೇಶ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಲೇ ಹೋಗುತ್ತವೆನ್ನುವದರಲ್ಲಿ ನನಗೆ ಅನುಮಾನವಿಲ್ಲ. ಜೊಳ್ಳುಗಳು ಹಾರಿ ಹೋದರೆ ನನಗೆ ಬೇಸರವೇನೂ ಇಲ್ಲ ಬೇಗನೆ ಡಬ್ಬಿಂಗ್ ಬರಲಿ. ಬೇಕಿದ್ದರೆ ಯಾವ ಸಿನಿಮಾ, ಯಾವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರಬಹುದೆಂಬುದನ್ನು ನಿರ್ಧರಿಸುವ ಒಂದು ‘ಪ್ರಾಮಾಣಿಕ’ ಜನರ ಗುಂಪನ್ನು ಮಾಡೋಣ.
 Ahdithcya Kjeevaratmna says: Superb figurative sense.” ಕನ್ನಡ ಸಿನಿಮಾ ಎಂಬ ‘ಹುಲಿಮರಿ’ಯನ್ನು ಬೆಕ್ಕಿನಂತೆ ಮನೆಯಲ್ಲಿ ಹಾಲು-ಅನ್ನ ಕೊಟ್ಟು ಸಾಕಿದ್ದು ಸಾಕು. ಈ ಮನೆಪ್ರೀತಿ ಇನ್ನೂ ಮುಂದುವರೆದರೆ ಅದು ತನ್ನ ಶಿಕಾರಿಯ ಶಕ್ತಿಯನ್ನೇ ಮರೆತುಬಿಟ್ಟೀತು”

        shama, nandibetta says: beautiful vasudhendra sir…. hats off….
     
 ಸಂದೀಪ್ ಕಾಮತ್ says: mir Khan has planned for only 13 episodes friends!
 
  prathibha nandakumar says: sir i agree with you but plse get me ONE slot on any kannada channel i will give you 100% better programme than satyameva jayathe. plse get me one slot plse.. plse… i will do it at half the cost…plse get me one slot… do you get the point? protest dubbing and give a chance for kannada talent.
   

  Dhananjaya says: ello. It is very good to know that you can make a good program compare to SMJ. Who stopped you. you are always to free to make your program. It all depends on your self confidence finally. 
Ananda Prasad says:  ಸತ್ಯಮೇವ ಜಯತೇ ತರಹದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದಕ್ಕಿಂತಲೂ ನಮ್ಮ ಸ್ವಂತ ಚಿಂತನೆಯಲ್ಲೇ ಅದೇ ತರಹದ ಕಾರ್ಯಕ್ರಮಗಳನ್ನು ಅದಕ್ಕಿಂತಲೂ ಚೆನ್ನಾಗಿ ಮಾಡಲು ಸಾಧ್ಯವಿದೆ. ಅದಕ್ಕೆ ಹಣದ ಹಿಂದೆ ಬಿದ್ದಿರುವ ನಮ್ಮ ಟಿವಿ ವಾಹಿನಿಗಳು ಅವಕಾಶ ಕೊಡುವುದಿಲ್ಲ ಅಷ್ಟೇ. ಅದುವೇ ಅಂಥ ಕಾರ್ಯಕ್ರಮಗಳು ಕನ್ನಡದಲ್ಲಿ ಬರದೆ ಇರಲು ಪ್ರಧಾನ ಕಾರಣ. ಕನ್ನಡ ಟಿವಿ ವಾಹಿನಿಗಳು ಮೂಢ ನಂಬಿಕೆಗಳನ್ನು ಬೆಳೆಸುವುದರಲ್ಲಿ ಆಸಕ್ತವಾಗಿವೆಯೇ ಹೊರತು ಜ್ಞಾನ, ವಿಜ್ಞಾನ, ಚಿಂತನೆ ಬೆಳೆಸಲು ಶೇಕಡಾ ಒಂದರಷ್ಟೂ ಪ್ರಯತ್ನಿಸುತ್ತಿಲ್ಲ, ಅದು ಅವುಗಳಿಗೆ ಬೇಕಾಗಿಯೂ ಇಲ್ಲ.
 harsha says: ee thara slot kelodu badalu, youtube nalli nimma show na video upload.. aamir khan video in kannada has 28,000+ views, try to get more views that that.. aga jana yarige support madtha idare antha channel avarige torisa bahudu..adu bittu ee thara slot ge pleading madodu beda!! prove ur talent rather than asking for a chance to showcase it.. 

shivaprakash says: Madam, Getting a slot is purely depend on commercial sense of channels. If our own kannada channels are stupidly telecasting 70% Cinema related bakwaas and nonsense news, do you expect us to watch?…..No way.

Other languages like Tamil and Telugu become popular in the normal life of bengaluru, hubli, shivamogga in last 25-30 years….the reason is hungry audience are running behind creativity…..so they watched creativity and learned other languages, adopted their culture,started forgetting kannada, unfortunately started insulting kannada movies….

You wrote a sentence for Ravi belagere’s mandovi…..”Markwez hindenduu kannadakke ee mattige bandiralilla…”….what does it mean?…do u call it as remake?dubbing?translation?….everything is same….U might have observed by this time…My english is not so good, so i read mandoovi 3-4 times and enjoyed it. So u want me to buy original Markwez, learn english(or any parent language) or Mandovi?….What do u say?
Please dont kill kannada, kannadiga and karnataka by opposing dubbing.

ವಸಂತ says: ಸತ್ಯ ಮೇವ ಜಯತೇ ಮತ್ತು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಅನ್ನುವ ಪರಿಹಾರ !

    ಸತ್ಯ ಮೇವ ಜಯತೇ ಅನ್ನುವ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದಂತೆ ಸುವರ್ಣ ವಾಹಿನಿಯನ್ನು ಕೆಲವು ಖಾಸಗಿ ಸಂಸ್ಥೆಗಳು ತಡೆದರು. ಅದರ ಬೆನ್ನಲ್ಲೇ ಜಗತ್ತಿನ ಜ್ಞಾನ, ಮನರಂಜನೆಯೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಕನ್ನಡ ಪರವೂ, ಗ್ರಾಹಕರಾಗಿ ಅದು ಕನ್ನಡಿಗರ ಹಕ್ಕು ಎಂಬ ಕೂಗು ಬಲು ದೊಡ್ಡ ದನಿಯಲ್ಲೇ ಕಳೆದೆರಡು ವಾರದಲ್ಲಿ ಸಾಮಾಜಿಕ ಸಂಪರ್ಕ ತಾಣಗಳು, ಪತ್ರಿಕೆಗಳು, ಸುದ್ದಿವಾಹಿನಿಗಳು ಸೇರಿದಂತೆ ಹಲವೆಡೆ ಪ್ರತಿಧ್ವನಿಸಿವೆ. ಇದರ ಫಲವೆಂಬಂತೆ ಯಾವುದೇ ಪಾಳೇಗಾರರ ಅಂಕೆಗೆ ಇನ್ನೂ ಸಿಲುಕದ ಯೂ ಟ್ಯೂಬ್ ನಂತಹ ತಾಣದಲ್ಲಿ ಈ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ನೋಡಲಾಗುವಂತಹ ಬದಲಾವಣೆಯನ್ನು ಎಚ್ಚೆತ್ತ ಕನ್ನಡದ ಗ್ರಾಹಕರು ತಂದು ಕೊಂಡಿದ್ದಾರೆ ಅನ್ನಬಹುದು. ಈ ಗೆಲುವು ಕೊಟ್ಟಿರುವ ಸಂದೇಶವೊಂದಿದೆ. ಹೆಚ್ಚೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಯತ್ತ ನಮ್ಮ ಸಮಾಜ ಮುಂದಡಿಯಿಡುತ್ತಿರುವಾಗ ಮತ್ತು ಆ ಬದಲಾವಣೆ ಕನ್ನಡ ನುಡಿಯ ಮುಂದೆ ಹಲವಾರು ಸವಾಲುಗಳನ್ನು ತರುತ್ತಿರುವಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಾಗಿದೆ ಅನ್ನುವುದು.

ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ 
1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಇತರೆಡೆಯಂತೆ ಕನ್ನಡ ಸಮಾಜದಲ್ಲೂ ಹಲವಾರು ಬದಲಾವಣೆಗಳಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುತ್ತಿದ್ದ ದಿನಗಳಿಂದ ಸಾಕಷ್ಟು ಹೊರ ಬಂದು ಮಾರುಕಟ್ಟೆ ಆಧಾರಿತ ವ್ಯವಸ್ಥೆಯೆಡೆಗೆ ಹೆಜ್ಜೆ ಹಾಕಿದ್ದೇವೆ. ಅದರ ಒಳಿತು-ಕೆಡಕುಗಳ ಬಗ್ಗೆ ಇಲ್ಲಿ ಚರ್ಚಿಸುವುದು ಬೇಡ. ಇಲ್ಲಿ ಗಮನಿಸಬೇಕಿರುವುದು ಏನೆಂದರೆ ಈ ಬದಲಾವಣೆ ನಿಲ್ಲದು. ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಹೆಚ್ಚಿನ ಮಝಲುಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ವಲಸೆ,ಹಲ ಸಂಸ್ಕೃತಿಗಳ ದಾಳಿಯಂತಹ
    ಕೆಲ ಸಮಸ್ಯೆಗಳು ಮುಂದೆಯೂ ಇರುತ್ತವೆ, ಅಷ್ಟೇ ಏಕೆ, ಕೆಲ ಮಟ್ಟಿಗೆ ಅವು ಹೆಚ್ಚಲೂ ಬಹುದು. ಈಗ, ಕನ್ನಡದ ಮುಂದಿರುವ ಸವಾಲು ಇದನ್ನು ಎದುರಿಸುವುದು ಹೇಗೆ? ಎಂಬುದು. ನನ್ನ ಪ್ರಕಾರ ಯಾವ ಸರ್ಕಾರ, ಸಾಮಾಜಿಕ ಸಂಘಟನೆಗಳು ಇದಕ್ಕೆ ಪೂರ್ತಿ ಪರಿಹಾರ ಕೊಡಲಾರರು. ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ. ಗ್ರಾಹಕನೊಬ್ಬನೇ ಅದನ್ನು ಬಗ್ಗಿಸಬಲ್ಲ. ಗ್ರಾಹಕನೊಬ್ಬನೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಈ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡದ ಸುತ್ತ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ರೂಪಿಸುವುದೊಂದೇ ಮುಕ್ತ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಅಡುಗೆಮನೆಯ ಭಾಷೆಯಾಗದಂತೆ ತಡೆಯುವ ಪರಿಹಾರ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.

    ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೇ ಪರಿಹಾರ
ನೀವು ಕೇಳಬಹುದು ಅದು ಹೇಗೆ ಎಂದು. ಕಳೆದ ಕೆಲ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹಲವು ಬದಲಾವಣೆಗಳನ್ನು ನೀವು ಸುಮ್ಮನೆ ಗಮನಿಸಿ. 2005ರಲ್ಲಿ ಎಫ್.ಎಮ್ ವಾಹಿನಿಗಳು ಶುರುವಾಗಿ ಕನ್ನಡವನ್ನೇ ಕೈ ಬಿಟ್ಟು ನಡೆಯುತ್ತಿದ್ದಾಗ, ಇಂದಿನ ಯುವಕರಿಗೆ ಹಿಂದಿ,ಇಂಗ್ಲಿಷೇ ಬೇಕು ಅನ್ನುವ ತಪ್ಪು ನಿಲುವಲ್ಲಿದ್ದಾಗ, ಅವರಿಗೆ ಕನ್ನಡಕ್ಕಿರುವ ಮಾರುಕಟ್ಟೆ ವ್ಯಾಪ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಮನವರಿಕೆ ಮಾಡಿ ಕೊಟ್ಟದ್ದು ಕನ್ನಡದ ಗ್ರಾಹಕರೇ. ಇಂದು ಹಲವಾರು ಖಾಸಗಿ ಬ್ಯಾಂಕುಗಳ ಎಟಿಎಮ್, ಐವಿಆರ್, ಕಚೇರಿಗಳಲ್ಲಿ ಹಂತ ಹಂತವಾಗಿ ಕನ್ನಡ ನೆಲೆ ಕಂಡಿದ್ದರೆ ಅದರ ಹಿಂದೆ ಕೆಲಸ ಮಾಡಿದ್ದು ಕನ್ನಡದ ಗ್ರಾಹಕರೇ. ಮಲ್ಟಿಪ್ಲೆಕ್ಸುಗಳಲ್ಲಿ, ಮಾಲುಗಳಲ್ಲಿ, ವಿಮಾನದಲ್ಲಿ, ಮೆಟ್ರೊದಲ್ಲಿ ಹೀಗೆ ಎಲ್ಲೆಲ್ಲಿ ಕನ್ನಡ ಮೂಲೆಗುಂಪಾಗಿತ್ತೋ ಅಲ್ಲೆಲ್ಲ ಅದನ್ನು ತಕ್ಕ ಮಟ್ಟಿಗೆ ಸರಿ ಮಾಡಿದ್ದು ಮತ್ತದೇ ಕನ್ನಡದ ಗ್ರಾಹಕರು. ಸರ್ಕಾರದ ನೂರು ನಿಯಮಗಳಿದ್ದಾಗಲೂ ಆಗದ ಬದಲಾವಣೆಯನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲಾಗಿದ್ದು ಕನ್ನಡ ಗ್ರಾಹಕನ ಹಕ್ಕೊತ್ತಾಯವೊಂದರಿಂದಲೇ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಹಾಗಿದ್ರೆ ಎಲ್ಲ ಸರಿ ಹೋಗಿದೆಯಾ ಎಂದು ಕೇಳಿದರೆ ನನ್ನ ಉತ್ತರ “ಇಲ್ಲ, ಎಲ್ಲವೂ ಸರಿ ಹೋಗಿಲ್ಲ. ಆದರೆ ಸರಿ ಹೋಗಿರುವ ಬಹುತೇಕ ವಿಷಯಗಳು ಕನ್ನಡದಲ್ಲಿ ಸೇವೆಗೆ ಆಗ್ರಹಿಸಿದ ಗ್ರಾಹಕನ ಒತ್ತಾಯದಿಂದಲೇ ಆಗಿದ್ದು” ಅನ್ನುವುದಾಗಿದೆ. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿ. ಈ ಆಯಾಮದಲ್ಲಿ ನೋಡಿದಾಗ ಮಾತ್ರವೇ ಡಬ್ಬಿಂಗ್ ನಿಷೇಧ ಗ್ರಾಹಕನ ಹಕ್ಕಿನ ಉಲ್ಲಂಘನೆ ಅನ್ನುವ ಹಲವು ಕನ್ನಡ ಗ್ರಾಹಕರ ವಾದದ ತಿರುಳು ಅರ್ಥವಾದೀತು.
ಕೊನೆಹನಿ: ಕೊಟ್ಟಿದ್ದನ್ನು ತಗೊಂಡು ಬಿದ್ದಿರು ಅನ್ನುವ ಚಿತ್ರೋದ್ಯಮದ ಹಲವರ ಧೋರಣೆಯ ವಿರುದ್ದ ಸಿಡಿದೆದ್ದು ಸಂಘಟಿತರಾದ ಕನ್ನಡಿಗರು ತಮ್ಮ ಗ್ರಾಹಕ ಅನ್ನುವ ಗುರುತನ್ನು ಒತ್ತಿ ಹೇಳುತ್ತಿರುವುದು ಮತ್ತು ಜಗತ್ತಿನ ಒಳ್ಳೆಯದೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಗ್ರಾಹಕನಾಗಿ ತನ್ನ ಹಕ್ಕು ಎಂದು ಮಾತನಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದುಡ್ಡು ಕೊಟ್ಟು ಮನರಂಜನೆ ಬಯಸುವವನು ಗ್ರಾಹಕನಲ್ಲ ಅವನು ಪ್ರೇಕ್ಷಕ ಅನ್ನುವ ವಿತಂಡವಾದ ಮಾಡುವ ಚಿತ್ರರಂಗದ ಕೆಲ “ಬುದ್ದಿಜೀವಿಗಳು” ಇದನ್ನು ಅರ್ಥ ಮಾಡಿಕೊಂಡು ಗ್ರಾಹಕನ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ನಿಲ್ಲಿಸದೇ ಹೋದರ ಕನ್ನಡ ಗ್ರಾಹಕನ ಉರಿಗಣ್ಣಿಗೆ ಬಲಿಯಾಗಿ ಮನೆ ಸೇರುವುದು ಖಂಡಿತ.
   
ರವಿ ಮೂರ್ನಾಡು, ಕ್ಯಾಮರೂನ್. says: ನಾನು ಬಾಲ್ಯದಿಂದಲೇ ಹಲವು ಭಾಷಾ ಚಲನಚಿತ್ರಗಳನ್ನು ನೋಡುತ್ತಿದ್ದೇನೆ.ಕನ್ನಡ ಚಿತ್ರಗಳನ್ನು ಇತರ ಭಾಷೆಗಳಲ್ಲಿ ನೋಡಿದ್ದೇನೆ. ಇತರ ಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಆಗಿದ್ದನ್ನು ನೋಡಿದ್ದೆನೆ. ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಕೊಂಡು- ಕೊಡಾವಳಿ ಸಂಸ್ಕೃತಿ ಯಾವುದನ್ನೂ ಕಡೆಗಣಿಸಿಲ್ಲ . ಆದರೆ ಸಿನೇಮಾ ಮಾಧ್ಯಕ್ಕೆ ತೆಗೆದುಕೊಂಡಾಗ ವ್ಯಾಪಾರೀಕರಣ ದೃಷ್ಟಿಯಲ್ಲಿ ಹಲವಷ್ಟು ಕೀಳು ಅಭಿರುಚಿಯ ಚಿತ್ರಗಳು ಕನ್ನಡವನ್ನು ಕೆಳದರ್ಜೆಗೆ ತಳ್ಳಿತು ಅಂತ ಹೇಳುವುದಲ್ಲಿ ಸತ್ಯವಿದೆ.
ಅಷ್ಟಾಗಿಯೂ "ಸತ್ಯ ಮೇವ ಜಯತೇ" ಮಾನ್ಯ ಅಮೀರ್ ಖಾನರ ಚಿತ್ರದಲ್ಲಿ ಏನಿದೆ ಅನ್ನುವುದರ ಪರಾಮರ್ಶೆ ನಡೆಯಬೇಕು. ಸಮಾಜವನ್ನು ಬೊಟ್ಟು ಮಾಡಿ ತೋರಿಸುವ ಸಾಮಾಜಿಕ ದೌರ್ಬಲ್ಯಗಳು ಅಲ್ಲಿವೆಯೇ?ಅದಕ್ಕೊಂದು ಸ್ಪಂದನೆ ಇದೆಯೇ? ಇದು ಜನರಿಗೆ ಗೊತ್ತಾಗಬೇಕು.ಏಕಾ ಏಕಿ ” ಡಬ್ಬಿಂಗ್” ಬೇಡ ಅನ್ನುವ ಸಾಮಾಜಿಕ ಪ್ರತಿಷ್ಠೆಯ ಮಾತುಗಳ ಅಗತ್ಯ ಕಾಣುತ್ತಿಲ್ಲ. ಮಾನ್ಯ ಅಮೀರ್ ಖಾನರು ಭ್ರೂಣಹತ್ಯೆಯ ಖಡಕ್ ಸತ್ಯವನ್ನು ಬಿಂಭಿಸುವಾಗ ಅದರ ಬಗ್ಗೆ ಸ್ವಲ್ಪ ಆಲೋಚಿಸಬೇಕು. ರಾಷ್ಟ್ರಕ್ಕೆ ಇದರ ಬಗ್ಗೆ ಸಂದೇಶ ರವಾನಿಸುವಾಗ ಇದು ಜಗತ್ತಿನ ಸಾಮಾಜಿಕ ಕಳಕಳಿ. ಈ ಸಮಸ್ಯೆ ಕರ್ನಾಟಕದಲ್ಲಿ ಜನತೆಗೆ ಕಳಕಳಿಯ ಸಂದೇಶವಾಗಲಾರದೆ?
ಇಲ್ಲಿ ಮಾನ್ಯ ಪ್ರತಿಭಾ ನಂದಕುಮಾರ್ ಅವರು ಕನ್ನಡದಲ್ಲಿ ಅಮೀರ್ ಖಾನರ ” ಸತ್ಯ ಮೇವ ಜಯತೇ” ಚಿತ್ರವೊಂದನ್ನೇ ಡಬ್ಬಿಂಗ್ ಮಾಡುವುದು ಬೇಡ ಅನ್ನುತ್ತಿದ್ದಾರೆಯೇ ಅಥವಾ ಮುಂಬರುವ ಎಲ್ಲಾ ಚಿತ್ರಗಳು ಆ ರೀತಿ ಆಗುವುದು ಬೇಡ ಅನ್ನುತ್ತಿದ್ದಾರೆಯೇ ಅನ್ನುವುದು ಪ್ರಶ್ನೆ. ” ಸತ್ಯಮೇವ ಜಯತೇ” ಚಿತ್ರವೊಂದೇ ಆ ರೀತಿ ಆಗುವುದಾದರೆ , ಅಲ್ಲಿರುವ ಭ್ರೂಣಹತ್ಯೆಯ ಸಾಮಾಜಿಕ ಕಳಕಳಿಯ ಸಂದೇಶ ಕನ್ನಡಿಗರಿಗೆ ರವಾನೆಯಾಗುವುದು ಬೇಡವೇ? ಈ ಭ್ರೂಣಹತ್ಯೆ ನಮ್ಮ ಇತರ ಭಾಷೆ ಗೊತ್ತಿಲ್ಲದ ಕನ್ನಡಿಗರಿಗೆ ಅವಶ್ಯವಾಗಿ ಆಗಬೇಕಿತ್ತು. ಏಕೆಂದರೆ , ವಿದ್ಯಾವಂತರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಸಮಾಜದ ಹಳ್ಳಿಗಳಲ್ಲಿ ಇದರ ಸ್ಪಷ್ಟತೆ ಇನ್ನೂ ಅಂಧಾಕರದಲ್ಲೇ ಇದೆ. ಅದು ಅವರಿರುವಲ್ಲಿಗೆ ತಲುಪಲಿ. ನಾವು ಬೀದಿಯ ಕಸ ಗುಡಿಸುವ ಮೊದಲು ನಮ್ಮ ಮನೆಯ ಕಸವನ್ನು ಗುಡಿಸುವ. ಸೃಜನಶೀಲತೆ, ಬದಲಾವಣೆ,ಸಂದೇಶ ನಮಗೆ ಅವಶ್ಯವಾಗಿ ಬೇಕು. ಅದು ಮಾಧ್ಯಮವಾದರೂ ಸರಿ, ತರಗತಿಯ ಪಾಠವಾದರೂ ಸರಿ, ಅನುಭವವಾದರೂ ಸರಿ.

ಉಷಾ ಕಟ್ಟೆಮನೆ says:  ಸರ್, ನೀವು ಹೇಳಿರುವ ವಿಚಾರಗಳಿಗೆ ನನ್ನ ಸಂಪೂರ್ಣ ಸಹಮತವಿದೆ. ಇದಕ್ಕೆಲ್ಲಾ ಅಮಿರ್ ಖಾನ್ ಯಾಕೆ ಸರ್? ನಮ್ಮ ಕನ್ನಡ ಸಿನೇಮಾ ಇಂಡಸ್ಟ್ರಿಯಲ್ಲಿ ಅಭಿಜಾತ ಪ್ರತಿಭೆಗಳಿಗೇನು ಕೊರತೆಯೇ?
ಈಗ ಡಬ್ಬಿಂಗ್ ವಿರೋಧಿಸುತ್ತಿರುವವರು ನೀವು ಕೊಟ್ಟಿರುವ ಟಾಪಿಕ್ ಗಳನ್ನು ಕೈಗೆತ್ತಿಕೊಂಡು ಕಾರ್ಯಕ್ರಮಗಳನ್ನು ಮಾಡಬಹುದು. ಕನ್ನಡದ ಚಾನಲ್ ಗಳು ಹಳ್ಳಿಹುಡುಗರು ಪ್ಯಾಟೆಗೆ ಬಂದ್ರು, ಇನ್ಯಾರೋ ವಿದೇಶಕ್ಕೆ ಹೋದರು, ಅಲ್ಲಿ ಭೂತಗಳಿವೆಯೇ…? ಅವರ..ಇವರ ಖಾಸಗಿ ಬದುಕು ಹೀಗಂತೆ…. ಹಾಗಂತೆ…! ಎನ್ನುವುದನ್ನೆಲ್ಲಾ ಬಿಟ್ಟು ಸಾಮಾಜಿಕ ಸಮಸ್ಯೆಗಳತ್ತಲೂ ಇಣುಕಿ ನೋಡಬಹುದು… ಆದರೇನು ಮಾಡೋಣ..ಸಾಮಾಜಿಕ ಹೊಣೆಗಾರಿಕೆ ಎಂಬುದು ಈಗ ಪುಸ್ತಕದ ಬದನೆಕಾಯಿಯಾಗಿದೆ..! ಅದು ಸಿನೇಮಾರಂಗಕ್ಕೂ ಬೇಡ…ಚಾನಲ್ ಗಳಿಗೂ ಬೇಡ
   
Ahdithcya Kjeevaratmna says:  Prathibha Nandakumar is partly right. But she must also reckon what happens if Priya Hassan wants the role offered Pakistani actor Veena Malik in a Kannada cinema, or Kannada Dancer’s Association says they will not let mumbai dancers to dance in any Kannada film. Or any senior artist wants to host “Neena Naana” instead of Lakshmi, or wants to do the role offered to Ambika in a Kannada soap. Can Prathibha Nandakumar or Priya Hassan or anybody say for that matter can stop them in our democratic land?

So we should stop counting the chickens before they are hatched.

   
Gubbachchi Sathish says:  idakke nannadondu votide.

ಸಂದೀಪ್ ಕಾಮತ್ says: ಭಾರತದಲ್ಲಿ ಏನು ಹೇಳಿದರು ಅನ್ನೋದಕ್ಕಿಂತ ಮುಖ್ಯ ಯಾರು ಹೇಳಿದರು ಅನ್ನೊದು. ಶಂಖದಿಂದ್ರೇನೇ ಬಂದ್ರೆ ತೀರ್ಥ ಅನ್ನೋ ಹಾಗೆ ! ಆಮೀರ್ ಹೊಸತನ್ನು ಏನೂ ಹೇಳಿಲ್ಲ, ಹೇಳುತ್ತಾನೆ ಅನ್ನೋ ಭರವಸೆಯೂ ನನಗಿಲ್ಲ. ಆದರೆ ಹೇಳಿರೋದು ಆಮೀರ್ ಅನ್ನೋದೆ ಮುಖ್ಯ ಆಗುತ್ತೆ.

ಕೃಪೆ : ಅವಧಿ

ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ


 ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.
ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.
ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.
ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.
ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

- ಆನಂದ ಪ್ರಸಾದ್
ಕೃಪೆ : ವರ್ತಮಾನ

Wednesday, May 09, 2012

ಮಾತ್ಗವಿತೆ-75

ಅನುಗಾಲದ ಅನುರಾಗ ನೀನು
ಮಣಭಾರ ಹೊತ್ತರೂ
ತಪ ಮಾಡಿದ್ದು ಸುಳ್ಳಲ್ಲ !
ಏನಾದರೂ ಆಗಲಿ ಬಿಡು
ಅನುಬಂಧ ಮುರಿಯದು
'ಅನಿ'ಸಿಕೆ ಹುಸಿಯಲ್ಲ ;
ಇನ್ನೂ ಹಸಿಯಾಗಿಯೇ ಇದೆ !

Monday, May 07, 2012

ಧಮ್ಮದೀಕ್ಷೆ ಮತ್ತು ....... !

ನನಗೊಮ್ಮೆ ಕರ್ನಾಟಕದ ಬೌದ್ಧಧರ್ಮಕ್ಕೆ ಸಂಬಂಧಿಸಿದ ಜನರನ್ನೂ ಜಾಗಗಳನ್ನೂ ಕಣ್ಣಾರೆ ಕಾಣುವ ಆಸೆ ಮೊಳೆಯಿತು. ಆಸೆಯನ್ನು ಧಾರವಾಡದ ವೈದ್ಯಮಿತ್ರರಾದ ಡಾ. ಸಂಜೀವ ಕುಲಕರ್ಣಿಯವರಲ್ಲಿ ಹಂಚಿಕೊಂಡೆ. ಬೌದ್ಧಧರ್ಮದ ಬಗ್ಗೆ ಒಳಸೆಳೆತವುಳ್ಳ ಅವರು ಕೂಡಲೇ ಸೈಯೆಂದು ಒಪ್ಪಿಕೊಂಡರು. ಇಬ್ಬರೂ ಸೇರಿ, ತಿರುಗಾಟದ ಪಥವನ್ನೂ ನೋಡಬೇಕಾದ ಜಾಗವನ್ನೂ ಕಾಣಬೇಕಾದ ಜನರನ್ನೂ  ಗುರುತು ಮಾಡಿಕೊಳ್ಳುತ್ತ ತಯಾರಿ ನಡೆಸಲಾರಂಭಿಸಿದೆವು. ಇದರ ಪತ್ತೆಯನ್ನು ಹೇಗೊ ಮಾಡಿದ ಮೈಸೂರಿನ ಗೋವಿಂದಯ್ಯನವರು ನಾನೂ ಬರುತ್ತೇನೆಂದು ಗಂಟುಬಿದ್ದರು. ಕಡೆಗೆ ತಂಡಕ್ಕೆ ತರುಣ ಕವಿ ಅರುಣ್ ಜೋಳದಕೂಡ್ಲಿಗಿಯನ್ನೂ ಸೇರಿಸಿಕೊಂಡೆವು. 
ನಾವು ನಾಲ್ವರು, ಆಕಸ್ಮಿಕವಾಗಿ ಸಮಾಜದ ನಾಲ್ಕು  ಸ್ತರಗಳಿಂದ ಬಂದವರಾಗಿದ್ದು, ಬುದ್ಧನ ನೆಪದಲ್ಲಿ ಒಂದಾಗಿದ್ದೆವು. ಆಯಾ ದಿನ ಸಿಕ್ಕ ಅನುಭವವನ್ನು ನಾಲ್ವರೂ ಸೇರಿ ಚರ್ಚಿಸುತ್ತಿದ್ದೆವು. ಭಿನ್ನಮತಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೆವು. ನಮ್ಮ ಜತೆ ಒಂದು ಹೆಂಜೀವವೂ ಇದ್ದಿದ್ದರೆ, ತಂಡಕ್ಕೆ ಬೇರೊಂದು ಕಣ್ಣು ಒದಗಿರುತ್ತಿತ್ತೇನೊ? ಆದರೆ ಹೊರಡುವಾಗ ಹಾಗೆ ಯಾರೂ ನಮಗೆ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ನಾವು ಈ ದಿಸೆಯಲ್ಲಿ ಚಿಂತಿಸಲಿಲ್ಲ. ಮನೆಮಡದಿ ಯಶೋಧರೆಯ ಹಂಗಿಲ್ಲದೆ ತಿಳಿವಳಿಕೆಯ ಹುಡುಕಾಟಕ್ಕೆ ಹೊರಟ ಬುದ್ಧನ ನಾಡಿನವರು ತಾನೇ ನಾವು?
ಧಾರವಾಡದಿಂದ ಪಯಣ ಆರಂಭಿಸಿ ಕರ್ನಾಟಕವನ್ನು ಅದರಂಚಿನಲ್ಲೇ ಚಲಿಸುತ್ತ ಒಂದು ಸುತ್ತು ಹಾಕಿದೆವು. ಸುಮಾರು 1500 ಕಿಮಿ ಉದ್ದದ 15 ದಿನಗಳ ಪಯಣ. ಇದರಲ್ಲಿ ನಾವು ಬೌದ್ಧ ವಿಹಾರಗಳನ್ನೂ  ಚೈತ್ಯಾಲಯಗಳನ್ನೂ ಬೌದ್ಧಮೂರ್ತಿಗಳನ್ನೂ ಕಂಡೆವು; ಧಮ್ಮಸ್ವೀಕಾರದ ಬಳಿಕ ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಶಾಸನಗಳನ್ನು ಕಂಡೆವು; ಬೌದ್ಧಧರ್ಮದ ಬೋಧನೆ ನಡೆಯುತ್ತಿದ್ದ ಗುರುಕುಲಗಳನ್ನೂ ಬುದ್ಧನ ಹೆಸರಲ್ಲಿ ಕಟ್ಟಲಾಗಿರುವ ಶಿಕ್ಷಣ ಸಂಸ್ಥೆಗಳನ್ನೂ ಭೇಟಿಮಾಡಿದೆವು; ಬೌದ್ಧ ಚಿಂತಕರನ್ನೂ ಭಂತೆಗಳನ್ನೂ ಸಾಧಕರನ್ನೂ ಕಂಡು ಮಾತಾಡಿದೆವು. ತಮ್ಮ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಧಮ್ಮಪ್ರಸಾರ ಕೈಗೊಂಡಿರುವ ಬಿಎಸ್ಪಿ ಕಾರ್ಯಕರ್ತರ ಜತೆ ಚರ್ಚಿಸಿದೆವು. ಬೌದ್ಧಸಂಪ್ರದಾಯದಲ್ಲಿ ಲಗ್ನವಾಗಿರುವ ದಂಪತಿಗಳನ್ನೂ ಧಮ್ಮದೀಕ್ಷೆ ಪಡೆದು ಹೊಸಬದುಕನ್ನು ನಡೆಸುತ್ತಿರುವ ಕುಟುಂಬಗಳನ್ನೂ ಕಂಡೆವು. ಒಟ್ಟಿನಲ್ಲಿ ಅದೊಂದು ಅಪೂರ್ವ ಬೌದ್ಧಯಾನ. 
ಈ ಯಾನದಲ್ಲಿ ಮೂರು ಅಂಶಗಳು ಗೋಚರಿಸಿದವು. 1. ಕರ್ನಾಟಕದಲ್ಲಿ ಒಂದು ಕಾಲಕ್ಕೆ ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದ ಬೌದ್ಧಧರ್ಮವು, ಸದ್ಯಕ್ಕೆ ತನ್ನ ಗತಕಾಲದ ಅವಶೇಷಗಳ ಮೂಲಕ ಉಸಿರೆಳೆಯುತ್ತಿದ್ದ ಪಳೆಯುಳಿಕೆಗಳು 2. ಧಮ್ಮದೀಕ್ಷೆ ಸ್ವೀಕರಿಸಿರುವ ಸಾವಿರಾರು ಜನರ ಬಾಳಿನಲ್ಲಿ ಹೊಸಹೊಸ ರೂಪದಲ್ಲಿ ನೆಲೆಯೂರುತ್ತ ಅದು ಚಿಗುರೊಡೆಯುತ್ತಿದ್ದುದು. 3. ಹಾಗೆ ಚಿಗುರೊಡೆಯುವ ಪ್ರಕ್ರಿಯೆಯಲ್ಲಿ ಮನೆಗಳನ್ನು ಮನಸ್ಸುಗಳನ್ನು ಸಂಬಂಧಗಳನ್ನು ಕೂಡ ಒಡೆದುಕೊಂಡಿರುವುದು. ಒಂದು, ಚರಿತ್ರೆಯ ಸ್ಥಗಿತ ದರ್ಶನವಾದರೆ, ಮತ್ತೆರಡು ವರ್ತಮಾನದ ಚಲನಶೀಲ ದರ್ಶನ; ಒಂದು, ಭಗ್ನತೆಯ ಮುಖವಾದರೆ, ಇನ್ನೆರಡು ಹೊಸಹುಟ್ಟಿನ ಮತ್ತು ಹೊಸಬಿಕ್ಕಟ್ಟಿನ ಮುಖಗಳು. ಒಂದು ಸ್ಮಾರಕಗಳ ಜಗತ್ತಾದರೆ ಇನ್ನೆರಡು ಭಾವನೆಗಳ ಮಾನುಷ ಜಗತ್ತು.
ನಮಗೆ ಕಾಡಿಸುತ್ತಿದ್ದುದು ಧಮ್ಮವು ನೆಲೆಯೂರುತ್ತಿರುವ ಕಡೆ ಹುಟ್ಟಿರುವ ಬಿರುಕು ಮತ್ತು ಬಿಕ್ಕಟ್ಟುಗಳು. ಇವು ಧಮ್ಮದೀಕ್ಷೆ ಪಡೆದ ಕುಟುಂಬದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ; ಕೇರಿ ಮತ್ತು ಕುಟುಂಬಗಳ ನಡುವೆ ಬಿದ್ದಿರುವ ಕಂದರದಲ್ಲಿ ಕಾಣುತ್ತಿದ್ದವು; ದಲಿತರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ರೂಪದಲ್ಲಿದ್ದವು. ಯಾವುದೇ ಹಳೆಯ ರೂಪದ ಜಾಗವನ್ನು ಹೊಸತೊಂದು ಆಕ್ರಮಿಸುವಾಗ, ಇಂತಹ ಸಂಘರ್ಷ ಸಾಮಾನ್ಯ. ಹೊಸತು ಮತ್ತು ಹಳತುಗಳ ಈ ಸಂಘರ್ಷವು ಕೆಲವು ಕಾಲದ ಬಳಿಕ ಸಾಮರಸ್ಯಗೊಂಡು ಮೂರನೆಯ ಹೊಸರೂಪವಾಗಿ ಸಿದ್ಧವಾಗಬಹುದು. ಅಂತಹ ಹೊಸರೂಪವೊಂದು ಸಿದ್ಧವಾಗುವ ತನಕ ಈ ಜಗ್ಗಾಟಗಳು ಸಹಜ. ಆದರೆ ಸಾಮಾಜಿಕ ಧಾರ್ಮಿಕ ಮಾನಸಿಕ ಹಾಗೂ ಸಾಂಸ್ಕೃತಿಕವಾದ ಈ ಜಗ್ಗಾಟಗಳ ನಡುವೆ ಸಿಕ್ಕು ನಲುಗುತ್ತಿರುವವರ ತೊಳಲಾಟ ಮತ್ತು ಹತಾಶೆಗಳನ್ನು ಹೆಚ್ಚಿನವರು ಲೆಕ್ಕಿಸಿದಂತೆ ಕಾಣುತ್ತಿರಲಿಲ್ಲ. ಮಾನವೀಯವೂ ಸಂಕೀರ್ಣವೂ ಆಗಿರುವ ಈ ನೋವು ಸಂಕಟಗಳನ್ನು ಸರಿತಪ್ಪುಗಳೆಂದು ಸರಳವಾಗಿ ತೀರ್ಮಾನಿಸುವುದು ಕಷ್ಟ. ಹೀಗಾಗಿ ಇವು ಯಾಕೆ ಮತ್ತು ಹೇಗೆ  ಮೂಡಿದವು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಬಹುದು.
ಎರಡು ವಾರಗಳ ನಮ್ಮ ಧಮ್ಮಯಾನದಲ್ಲಿ ಧಮ್ಮದೀಕ್ಷೆ ಪಡೆದ ಹತ್ತಾರು ಕುಟುಂಬಗಳನ್ನು ನಾವು ಭೇಟಿ ಮಾಡಿದೆವು. ಇವುಗಳಲ್ಲಿ ಏಳು ದಲಿತ ಕುಟುಂಬಗಳು. ಒಂದು ಬ್ರಾಹ್ಮಣ. ಎರಡು ಬಂಟರವು. ಕೊನೆಯ ಮೂರು ಕರಾವಳಿಯವು; ಮೊದಲ ಏಳು ದಲಿತ ಕುಟುಂಬಗಳು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಗುಲಬರ್ಗ ಜಿಲ್ಲೆಗೆ ಸೇರಿದವು. ಎಲ್ಲ ಕುಟುಂಬಗಳೂ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವು; ಉಡಲುಣ್ಣಲು ಹೋರಾಟವಿಲ್ಲದ ಮಧ್ಯಮವರ್ಗಕ್ಕೆ ಸೇರಿದವು. ಈ ಕುಟುಂಬಗಳ ಜತೆ ನಾವು ಮಾತಾಡಿದೆವು. ಜತೆ ಕುಳಿತು ಊಂಡೆವು. ಅಲ್ಲಿ ನಮಗೆ ನಾಲ್ಕು ಪರಿಯ ದಾಂಪತ್ಯಗಳು ಕಂಡವು.
1. ಇಡಿಯಾಗಿ ಧಮ್ಮೀಕರಣಗೊಂಡಿರುವ ದಾಂಪತ್ಯಗಳು. ಇಲ್ಲಿ ದಂಪತಿಗಳಲ್ಲಿ ಸತಿಪತಿಗಳೊಂದಾದ ಭಕ್ತಿಯ ಸಾಮರಸ್ಯವಿತ್ತು. ಸಮಾನಮನಸ್ಕತೆ ಸಾಧ್ಯವಾಗಿತ್ತು. ಹಳೆಯ ಸಂಪ್ರದಾಯಗಳು ಕೈಬಿಟ್ಟುಹೋಗಿದ್ದವು. ಮಕ್ಕಳಿಗೆ ಬೌದ್ಧಹೆಸರುಗಳನ್ನು ಇಡುವುದೇ ಮುಂತಾಗಿ ಬೌದ್ಧ ಆಚರಣೆಗಳು ಆಚರಣೆಗೆ ಬಂದಿದ್ದವು. ಇವು ದೀಕ್ಷೆಗೊಂಡು ದಶಕಗಳನ್ನೆ ಕಳೆದಿರುವ ಕುಟುಂಬಗಳು. ಗುಲಬರ್ಗದ ಬುದ್ಧವಿಹಾರದಲ್ಲಿದ್ದ ಶ್ರೀಮತಿ ಖರ್ಗೆಯವರಲ್ಲಿ, ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಧರ್ಮದ ಉಮೇದಿತ್ತು. ಆದರೂ ಇಲ್ಲಿ ಹೆಚ್ಚಿನ ಕಡೆ ಗಂಡನೇ ಸಾಧಕನಾಗಿದ್ದು, ಮಡದಿ ಅವನಿಗೆ ಸಹಚರಳಾಗಿ ಹಿಂಬಾಲಿಸಿದಂತೆ ಇತ್ತು.
2. ಇನ್ನೂ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿರುವ ದಾಂಪತ್ಯಗಳು. ಇಲ್ಲಿ ಹೊಸಧರ್ಮದ ಬಗ್ಗೆ ಪೂರಾ ಒಪ್ಪಿಗೆ ಸಾಧ್ಯವಾಗಿರಲಿಲ್ಲ. ಆದರೂ, ಹಳತರ ಜತೆಗೆ ಒಂದು ಬಗೆಯ ಸಾಮರಸ್ಯ ಮಾಡಲು ಯತ್ನ ನಡೆದಿತ್ತು. ಉದಾ.ಗೆ, ಒಂದು ಮನೆಯಲ್ಲಿ ಹೊರಬಾಗಿಲ ಮೇಲೆ ಕೆತ್ತಲಾಗಿದ್ದ ಬುದ್ಧಮೂರ್ತಿಯ ಹಣೆಗೆ ವಿಭೂತಿಯನ್ನು ಬಳಿಯಲಾಗಿತ್ತು. ಅದು ಬುದ್ಧನನ್ನು ಪಳಗಿಸುತ್ತ ಸ್ಥಳೀಕರಿಸುತ್ತಿರುವ ಯತ್ನದಂತೆ ತೋರಿತು; ಇನ್ನೊಂದು ಮನೆಯ ದೇವರಕೋಣೆಯಲ್ಲಿ ಬುದ್ಧನ ಮೂರ್ತಿಯ ಜತೆಗೆ ಅಂಬೇಡ್ಕರ್ ಮತ್ತು ಮಲೆಮಾದೇಶ್ವರನ ಫೋಟೊಗಳನ್ನೂ ಭೇದವಿಲ್ಲದೆ ಇಡಲಾಗಿತ್ತು. ಇವೆಲ್ಲ ಧಮ್ಮದೀಕ್ಷೆ ಪಡೆದು  ಒಂದೆರಡು  ವರ್ಷಗಳಾಗಿದ್ದ ಕುಟುಂಬಗಳು.
3. ಸಾಮರಸ್ಯದ ಸಾಧ್ಯವಾಗಿರದೆ ತೊಳಲಾಟ ನಡೆಯುತ್ತಿರುವ ಕುಟುಂಬಗಳು. ಇಲ್ಲಿ ಧಮ್ಮಸ್ವೀಕಾರದ ವಿಷಯದಲ್ಲಿ ಸತಿಪತಿಗಳು ಸಮಾನ ಮನಸ್ಕರಾಗಿರಲಿಲ್ಲ. ಹೊಸಧಮ್ಮದ ವಿಷಯದಲ್ಲಿ ಗಂಡ ಉತ್ಸಾಹಿಯಾಗಿದ್ದರೆ, ಮಡದಿಯ ಮೊಗದಲ್ಲಿ ಮ್ಲಾನತೆಯಿತ್ತು. ಗಂಡನಿಗೆ ಬೇಸರವಾಗಬಾರದೆಂದೊ ಅಥವಾ  ಭಿನ್ನಮತವನ್ನು ಬಂದವರೆದುರು ತೋರಬಾರದೆಂದೊ ಆಕೆ  `ಅಳುವೇ ತುಟಿಗೆ ಬಂದಂತೆ' ಮೌನವಹಿಸಿದಂತೆ ಕಾಣುತ್ತಿತ್ತು. ಗಂಡನ ಮುಖದಲ್ಲಿ ಮನೆಯಲ್ಲಿ ನೆಲೆಸುತ್ತಿರುವ ಧಮ್ಮಸಂಸ್ಕೃತಿಯ ಬಗ್ಗೆ ಸಂತೋಷದ ಭಾವವಿದ್ದರೆ, ಆಕೆಯ ಮುಖದಲ್ಲಿ ಆತಂಕವಿತ್ತು. ಆಕೆ ಗಂಡನ ಒತ್ತಡಕ್ಕೆ ಬೌದ್ಧ ಆಚರಣೆಗಳನ್ನು ಅನಿವಾರ್ಯವಾಗಿ ಯಾಂತ್ರಿಕವಾಗಿ ಮಾಡುತ್ತಿರುವಂತೆ ತೋರಿತು.
4. ಸಾಮರಸ್ಯ ಸಾಧ್ಯವೇ ಆಗದೆ ಸಂಬಂಧ ಕುಸಿದುಬಿದ್ದಿರುವ ಕುಟುಂಬಗಳು. ಇಲ್ಲಿ ಮಹಿಳೆಯರಿಗೆ  ತಾವು ಹುಟ್ಟಿ ಬೆಳೆದು ಬಂದ ಪಾರಂಪರಿಕ ಧಾರ್ಮಿಕ ಸಂಸ್ಕೃತಿಯನ್ನು ಬಿಟ್ಟುಕೊಡುವುದು ಸಾಧ್ಯವಾಗಿರಿಲ್ಲ. ಅವರಿಗೆ ಬುದ್ಧನ ಬಗ್ಗೆ ಅಸಹನೆಯೇನಿರಲಿಲ್ಲ. ಆದರೆ ತನ್ನನ್ನು ಬಾಲ್ಯದ ದೈವಗಳಿಂದ ಬಿಡಿಸುತ್ತಿರುವ ಮತ್ತು ಬುದ್ಧನನ್ನು ಹೇರುತ್ತಿರುವ ಗಂಡನ ಬಗ್ಗೆ ಅಸಮಾಧಾನವಿತ್ತು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯಿಲ್ಲವಲ್ಲ ಎಂಬ ಕೊರಗು ಒಳಗೊಳಗೇ ಆವಿಗೆಯ ಬೆಂಕಿಯಂತೆ ಸುಳಿಯುತ್ತಿತ್ತು. ಇದು ಒಂದು ಕಡೆ ಲಾವರಸದಂತೆ ಆಸ್ಫೊಟಗೊಂಡಿತು ಕೂಡ. ಕರ್ನಾಟಕದ ಲೀವಿಂಗ್ ಬುದ್ಧಿಸಂನ ಅಧ್ಯಯನಕ್ಕೆ ಹೊರಟ ನಮಗೆ ಇದು ಹೊಸದೊಂದು ತಿಳಿವಿನ ಕೋನವನ್ನು ನೀಡಿತು.
ಈ ಆಸ್ಫೋಟ ಸಂಭವಿಸಿದ್ದು ಒಂದು ದಲಿತ ಕುಟುಂಬದಲ್ಲಿ. ಇಲ್ಲಿ ಗಂಡ ಹೆಂಡತಿಯಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಇವರಲ್ಲಿ ಗಂಡ ಧಮ್ಮದೀಕ್ಷೆ ಸ್ವೀಕರಿಸಿದ್ದರು. ಮಾತ್ರವಲ್ಲ. ಕಾವಿಧರಿಸಿ, ತಮ್ಮ ಹೆಸರನ್ನು ಬದಲಿಸಿಕೊಂಡು ಭಂತೆ ಕೂಡ ಆಗಿದ್ದರು. ಧಮ್ಮ ಪ್ರಸಾರದಲ್ಲಿ ಅತಿ ಉಮೇದಿನಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಕಾಣುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ಮನೆಯಲ್ಲಿ ಇಲ್ಲವೆಂದೂ ಬಿಹಾರದ ಬೌದ್ಧಗಯಾಕ್ಕೆ ಹೋಗಿದ್ದಾರೆಂದೂ ಅವರು ಶಿಷ್ಯರು ತಿಳಿಸಿದರು. ಆದರೂ ಮನೆಗೆ ತೆರಳಿ, ಅವರ ಮಡದಿಯ ಅಭಿಪ್ರಾಯವನ್ನು ಪಡೆಯೋಣವೆಂದು ಹೊರಟೆವು. ಸಂಜೆ ಏಳರ ಹೊತ್ತು. ಭಿಕ್ಕು ಅವರ ಮನೆಗೆ ಹೋಗಿ ಬಾಗಿಲನ್ನು ತಟ್ಟಿದೆವು. ಒಳಗಿಂದ ಒಬ್ಬರು ಮಹಿಳೆ ಬಾಗಿಲನ್ನು ಅರೆತೆಗೆದು ಏನು ಬೇಕಿತ್ತು ಎಂಬಂತೆ ಹುಬ್ಬುನಿರಿಗೆ ಮಾಡಿಕೊಂಡು ನಮ್ಮನ್ನು ನೋಡಿದರು. ಅವರ ಹಣೆಯಲ್ಲಿ ವಿಭೂತಿಯಿತ್ತು. ``ನಾವು ಬೌದ್ಧಧರ್ಮದ ಅಧ್ಯಯನ ಮಾಡುವುದಕ್ಕೆ ಬಂದವರು. ಭಂತೇಜಿಯಿದ್ದರೆ ಅವರ ಜತೆ ಮಾತಾಡಬೇಕಿತ್ತು'' ಎಂದೆವು. `ಬೌದ್ಧ' `ಭಂತೆ' ಎಂಬ ಶಬ್ದಗಳನ್ನು ಕೇಳುತ್ತಿದ್ದಂತೆ ಆಕೆಯ ಮುಖ ಬಿರುಸಾಯಿತು. ಕಣ್ಣು ಕನಲಿದವು. ಗಡುಸಾದ ದನಿಯಲ್ಲಿ ``ನಿಮ್ಮ ಭಂತೇಜಿ ಮನೆಬಿಟ್ಟು ಯಾವುದೋ ದೇಶಕ್ಕೆ ಬುದ್ಧನ್ನ ಹುಡಕ್ಕೊಂಡು ಹೋಗಿದಾರೆ. ಅವರು ಬಂದ್ಮೇಲೆ ಹೊರಗಡೆ ಎಲ್ಲಾದರೂ ಕುಂತು ಮಾತಾಡಿಕೊಳ್ಳಿ ಸಾ. ಈ ಮನೇಲಿ ಅವರ ಸುದ್ದಿ ಮಾತ್ರ ತಗೀಬೇಡಿ. ಬುದ್ಧನ ವಿಷಯ ಎತ್ತಬೇಡಿ. ದಯವಿಟ್ಟು ಹೊರಟುಹೋಗಿ' ಎಂದು ಹೇಳಿದರು. ನಮಗೆ ಎದೆಗೆ ಒದ್ದಂತಾಯಿತು. ಸೂಕ್ಷ್ಮಮನಸ್ಸಿನ ಡಾ.ಸಂಜೀವ್ ಗಾಬರಿಯಿಂದ ``ಗೋವಿಂದಯ್ಯ, ಕಮಾನ್, ಲೆಟಸ್ ಗೋಬ್ಯಾಕ್' ಎಂದರು. ಆದರೆ ಗೋವಿಂದಯ್ಯನವರು ಅದನ್ನು ಕಿವಿಗೆ ಹಾಕಿಕೊಳ್ಳದೆ ``ಮೇಡಂ, ಬೇಜಾರ್ ಮಾಡಕೋಬೇಡಿ. ನಿಮ್ಮ ಯಜಮಾನರು ಇಲ್ಲದೇ ಹೋದರೆ ಏನಂತೆ? ನೀವಿದ್ದೀರಲ್ಲ. ನಿಮ್ಮ ಜೊತೇಲೆ ಮಾತಾಡ್ತೀವಿ. ಈ ಬೌದ್ಧಧರ್ಮದಿಂದ ನಿಮಗೆ ಏನು ಕಷ್ಟವಾಗಿದೆ. ಅದನಾರೂ ಒಸಿ ಹೇಳಿ. ತಿಳಕೊಳ್ಳುವ'' ಎಂದು ನಮ್ರವಾಗಿ ಹೇಳಿದರು. ಆ ಮಹಿಳೆಯ ಕ್ಯಾಣ ಇಳಿದಿರಲಿಲ್ಲ. ``ಇಲ್ಲ ಸಾ, ನೀವು ಕೇಳೋದು ಬ್ಯಾಡ. ನಾನು ಹೇಳೋದೂ ಬ್ಯಾಡ. ಬುದ್ಧನ ಹೆಸರು ಹೇಳಿಕೊಂಡು ಬರೋ ಯಾರ ಹತ್ರಾನೂ ನಂಗೆ ಮಾತಾಡೋಕೆ ಇಷ್ಟವಿಲ್ಲ' ಎಂದರು. ಅದಕ್ಕೆ ಗೋವಿಂದಯ್ಯ ``ಅಮ್ಮಾ, ನನ್ನ ಜತೆ ದೂರದಿಂದ ಬಂದಿರೊ ವಿದ್ವಾಂಸರು ಲೇಖಕರು ಅವರೆ. ಒಂದೈದು ನಿಮಿಷ ನಿಮ್ಮ ಜೊತೆ ಮಾತಾಡ್ತೀವಿ'' ಎಂದು ವಿನಂತಿಸಿದರು. ಫಾಯದೆಯಾಗಲಿಲ್ಲ. ``ನಿಮ್ಮ ಲೇಖಕರನ್ನ ವಿದ್ವಾಂಸರನ್ನ ಕಟ್ಕೊಂಡು ನನಗೇನು ಆಗಬೇಕಿದೆಯಪ್ಪ? ಆ ಬುದ್ಧನಿಂದ ನನ್ನ ಸಂಸಾರವೇ ಹಾಳಾಗಿದೆ. ನಮ್ಮ ಪಾಡಿಗೆ ಬದುಕಲು ನಮಗೆ ಬಿಡಿ. ಈಗ ತಾವು ದಯಮಾಡಿ'' ಎಂದು ತಣ್ಣಗೆ ಆದರೆ ಆಕ್ರೋಶದಿಂದ ಹೇಳಿದರು. ಈಗ ಸಂಜೀವ್ ಗೆ ತಡೆಯಲು ಆಗಲಿಲ್ಲ. ``ತರಿಕೇರಿ, ಏನ್ರೀ ಇದು? ಆ ಹೆಣಮಗಳು ಇಂಡೈರಕ್ಟಾಗಿ ನಮಗ ಗೆಟ್ ಔಟ್ ಅಂತಿದಾರ. ಆದರೂ ನಾವು ಮಾತಾಡ್ತೀವಿ ಅನಲಿಕ್ಕೆ ಹತ್ತಿದೀವಿ. ಅವರಿಗ ತ್ರಾಸ ಕೊಡಬಾರದು. ಗೋವಿಂದಯ್ಯ. ಪ್ಲೀಸ್ ಕಂಬ್ಯಾಕ್'' ಎಂದು ಚಡಪಡಿಸಿದರು. ಆದರೆ ಗೋವಿಂದಯ್ಯ ಬರಲಿಲ್ಲ. ಛಲ ಬಿಡದ ತಿವಿಕ್ರಮನಂತೆ ಆಕೆಯನ್ನು ಒಲಿಸುತ್ತ  ``ಆಯ್ತು ಮೇಡಂ, ನೀವು ನಮ್ಮ ಜೊತ ಮಾತಾಡ್ದೆ ಇದ್ದರೂ ಪರವಾಯಿಲ್ಲ. ಒಂದು ಲೋಟ ನೀರಾದರೂ ಕೊಡಿ ಮತ್ತ'' ಎಂದರು. ನಾನು ಬೈಸಿಕೊಂಡಾದರೂ ಸರಿ, ಈ ಸೋದರಿಯ ಅಳಲಿನ ಮರ್ಮವೇನೆಂದು ಅರಿತೇ ಹೋಗಬೇಕೆಂದು ಭಂಡನಾಗಿ ನಿಂತಿದ್ದೆ.  
ನಮ್ಮ ಗದ್ದಲಕ್ಕೆ ಬೀದಿಯ ಕೆಲವು ಕಿಟಕಿ ಮತ್ತು ಬಾಗಿಲು ಮೆಲ್ಲಗೆ ತೆರೆದುಕೊಂಡು ಗೋಣುಗಳು ಹೊರಚಾಚಿಕೊಂಡವು. ಕೆಲವರು ಸೆಕೆಗೆಂಬಂತೆ ಹೊರಬಂದು ಗಾಳಿ ಹಾಕಿಕೊಳ್ಳುತ್ತ ಅಂಗಳದಲ್ಲಿ ನಿಂತು ಮಸುಗು ಕತ್ತಲೆಯಲ್ಲಿ ನಮ್ಮತ್ತ ನೋಡತೊಡಗಿದರು. ಅಷ್ಟುಹೊತ್ತು ಹೊರಗೇ ನಿಲ್ಲಿಸಿ ಮಾತಾಡಿದ ಆ ಮಹಿಳೆ, ಗೋವಿಂದಯ್ಯನವರ ನೀರಬೇಡಿಕೆ ಈಡೇರಿಸಲು, ಒಳಗೆ ಹೋದರು. ಅದೇ ಹೊತ್ತಲ್ಲಿ ನಾವು ಒಳಗೆ ನುಸುಳಿಕೊಂಡೆವು. ಆಕೆ ಚೊಂಬಿನಲ್ಲಿ ತಂದ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟರು. ಅವರ ವಿಶ್ವಾಸ ಗಳಿಸಲು ಬಾಯಾರಿಕೆ ಇಲ್ಲದಿದ್ದರೂ ಕುಡಿದೆವು. ನಂತರ ತಮ್ಮ ದನಿಗೆ ರೋದನದ ಎಳೆ ಬೆರೆಸಿ, ಆಕೆ ತಮ್ಮ ಕಷ್ಟದ ಚರಿತ್ರೆಯ ಒಂದು ಸಣ್ಣ ಅಧ್ಯಾಯವನ್ನು ತೆಗೆದರು. ``ಸಾ, ನನ್ನ ಕಷ್ಟಾವ ಏನೂಂತ ಹೇಳಲಿ? ನಮ್ಮ ಮನೇವರು ದೀಕ್ಷ ತಕ್ಕಂಡ ಮೇಲ ಮನೆ ಪರಿಸ್ಥಿತಿಯೆ ಬದಲಾಗದೆ. ಅವರು ನಮ್ಮನ್ನ ಬೀದಿಪಾಲು ಮಾಡಿ ತಿರಗಾಟಕ್ಕೆ ಹೋಗವರೆ. ಮನೇನ ನಾನೊಬ್ಬಳೇ ಸಂಭಾಳಿಸಬೇಕು. ನೀ ಸತ್ತ್ಯಾ ಬದುಕಿದೆಯಾ ಅಂತ ಕೇಳಲ್ಲ. ಇರೋದೊಂದು ಈ ಕೂಸಿಗೆ ಏನು ಓದ್ತೀದಿಯಾ ಅಂತ ಕೇಳಕೂ ಅವರಿಗ ಪುರುಸೊತ್ತಿಲ್ಲ. ಯಾವಾಗಲೂ ಬುದ್ಧ ಧಮ್ಮ ದೀಕ್ಷೆ ಅಂತ ಓಡಾಡ್ತವರೆ. ನನ್ನ ಮೇಲೂ ಬುದ್ಧನ್ನ ಹೇರತಾ ಅವರೆ. ನನಗೆ ಅವರ ಬುದ್ಧಬೇಡ. ನನಗೆ ನನ್ನ ಮಂಟೆಸ್ವಾಮೀನೇ ಸಾಕು. ನನಗ ನನ್ನ ಮಾದೇಶ್ವರ ಬೇಕು. ನನಗೂ ನನ್ನದೇ ಧರ್ಮ ಇಲ್ಲವಾ? ನನಗೆ ಮನಶ್ಶಾಂತಿ ಕೊಡೋ ದೇವರ ಪೂಜೆ ಮಾಡುವ ಹಕ್ಕಿಲ್ಲವಾ? ನನಗೂ ಎಲ್ಲರ ಹಾಗೆ ಸಂಸಾರ ಮಾಡಬೇಕು ಅನ್ನೋ ಆಸೆಯಿಲ್ಲವಾ?'' ಎಂದು ಆವೇಶದಿಂದ ಮಾತಾಡತೊಡಗಿದರು. ಅವರಿಗೆ ಅರಿಯದಂತೆ ಕಣ್ಣಲ್ಲಿ ನೀರು ದಳದಳ ಇಳಿಯತೊಡಗಿತು.
ಯಾಕೊ ನನಗೆ ಬುದ್ಧನು ಹೇಳದೆ ಬಿಟ್ಟುಹೋದ ಬಳಿಕ ಶೋಕಿಸಿರಬಹುದಾದ ಯಶೋಧರೆಯ ನೆನಪಾಯಿತು. ಈ ಯಶೋಧರೆಗೆ ಹೊಸ ಧಮ್ಮವು ತನ್ನಿಂದ ತನ್ನ ಗಂಡನನ್ನೂ ತನ್ನ ಮಗುವಿನಿಂದ ಅದರ ತಂದೆಯನ್ನೂ ಕಿತ್ತುಕೊಂಡಿದೆ, ಪರಂಪರೆಯಿಂದ ಬಂದ ದೈವಗಳ ಸಂಬಂಧವನ್ನೂ ಅದು ಕಿತ್ತುಕೊಳ್ಳುತ್ತಿದೆ ಎಂಬ ನೋವಿತ್ತು. ಬಹುಶಃ ಇಸ್ಲಾಮೊ ಕ್ರೈಸ್ತವೊ ಎಲ್ಲ ಹೊಸ ಧರ್ಮಗಳ ಸ್ವೀಕಾರದ ಮೊದಲ ಘಟ್ಟದಲ್ಲಿ ಇಂತಹದೊಂದು ಮಾನಸಿಕ ಭಗ್ನತೆ, ಕೌಟುಂಬಿಕ ಛಿದ್ರತೆ ಸಂಭವಿಸುತ್ತದೆ ಎಂದು ಕಾಣುತ್ತದೆ. ಶರಣ ಧರ್ಮವೂ ಈ ಭಗ್ನತೆಯನ್ನು ಅನುಭವಿಸಿತ್ತು. ಇದನ್ನು ಬಸವಣ್ಣನ ವಚನವೊಂದು ಸೂಚಿಸುತ್ತದೆ: ``ಗಂಡ ಶಿವಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ''; ಸಾಮಾಜಿಕ ಮುಂಚಲನೆಯನ್ನು ನೀಡುವ ಧರ್ಮಗಳನ್ನು ಸಾಮಾನ್ಯವಾಗಿ ಮೊದಲು ಸ್ವೀಕರಿಸುವವರು ಗಂಡಸರೇ ಯಾಕಾಗಿರುತ್ತಾರೆಯೊ? `ಮಲೆಗಳಲ್ಲಿಮದುಮಗಳ'ಲ್ಲೂ ದೇವಯ್ಯನೇ ಕ್ರಿಸ್ತನಾಗಲು ಹೊರಟು ಮನೆ ಪ್ರಕ್ಷುಬ್ಧವಾಗುತ್ತದೆ. ಗಂಡುಮುಖ್ಯವಾಗಿರುವ ನಮ್ಮ ಸಮಾಜದಲ್ಲಿ ನಿರ್ವಾಹವಿಲ್ಲದೆ ಅವರ ಹಿಂದೆ ಮಹಿಳೆಯರು ಹಿಂಬಾಲಿಸಬೇಕು ಇಲ್ಲವೇ ಪ್ರತಿರೋಧ ತೋರಬೇಕು. ಪುರುಷರ ಈ ಏಕಪಕ್ಷೀಯ ನಡತೆ ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಎಲ್ಲ ಹೊಸ ಆಚರಣೆಗಳ ಸಂದರ್ಭದಲ್ಲೂ ಸಂಭವಿಸುತ್ತದೆ. ಸಸ್ಯಾಹಾರದ ಹಿನ್ನೆಲೆಯಿಂದ ಬಂದ ಮೇಲ್ಜಾತಿ ಗಂಡಸರು, ಮಾಂಸಾಹಾರದ ಅಭ್ಯಾಸ ಮಾಡಿಕೊಂಡ ಬಳಿಕ, ತಮ್ಮ ಹೊಸ ಆಹಾರಪದ್ಧತಿಗೆ ನೈತಿಕ ಸಮರ್ಥನೆ ಒದಗಿಸಿಕೊಳ್ಳಲೆಂದು ಅದನ್ನು ಮಡದಿಯರ ಮೇಲೂ ಹೇರುವುದುಂಟು; ಇದಕ್ಕೆ ಪ್ರತಿಯಾಗಿ, ಮೇಲ್ಜಾತಿಯ ಹುಡುಗಿಯನ್ನು ಕಟ್ಟಿಕೊಂಡ ದಲಿತರು ಮಡದಿಗಾಗಿ ಮಾಂಸಾಹಾರ ಬಿಟ್ಟಿರುವ ನಿದರ್ಶನಗಳೂ ಉಂಟು. ಆದರೆ ಇಂತಹ ನಿದರ್ಶನಗಳು ಕಡಿಮೆ.
ಆಹಾರ ಧರ್ಮ ಉಡುಗೆ ಇವುಗಳ ವಿಷಯದಲ್ಲಿ ಏಕಪಕ್ಷೀಯವಾದ ಒತ್ತಾಯವು ವಿಚಿತ್ರ ಪ್ರತಿರೋಧಗಳನ್ನು ಹುಟ್ಟಿಸುತ್ತದೆ. ಸದಾಶಯವಿದ್ದರೂ, ಅದನ್ನು  ಜಾರಿ ತರುವ  ವಿಧಾನವು ಅಸೂಕ್ಷ್ಮವಾಗಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನೇ ತರುತ್ತದೆ. ಆದರೂ ಸಾಮಾನ್ಯವಾಗಿ  ಮಹಿಳೆಯರು ಗಂಡ ಸ್ವೀಕರಿಸಿದ ಧರ್ಮವನ್ನು ಕುರುಡಾಗಿ ಅನುಸರಿಸಲು ಒಪ್ಪದೆ, ತಮ್ಮ ಪಾರಂಪರಿಕ ದೈವ ಧರ್ಮಗಳನ್ನು ಉಳಿಸಿಕೊಂಡಿರುವ ನಿದರ್ಶನಗಳುಂಟು. ಅಕಬರನನ್ನು ವರಿಸಿದರೂ ಜೋಧಾಬಾಯಿ ತನ್ನ ಧಾರ್ಮಿಕತೆಯನ್ನು ಬದಲಿಸಿಕೊಳ್ಳಲಿಲ್ಲ. ರಾಮಾನುಜರ ಪ್ರೇರಣೆಯಿಂದ ಶ್ರೀವೈಷ್ಣವ ಧರ್ಮವನ್ನು ಹೊಯ್ಸಳದೊರೆ ಬಿಟ್ಟಿದೇವನು ಸ್ವೀಕರಿಸಿದರೂ, ಮಡದಿ ಶಾಂತಲೆ ಶೈವಧರ್ಮದಲ್ಲೇ ಮುಂದುವರೆದಳು. ಜೈನಧರ್ಮದಲ್ಲೂ ಹೀಗೆ ಆಯಿತು. ಜೈನನಾದ ಗಂಡ ಜೈನನಾಗದ ಮಡದಿ ಇರುವ ಕುಟುಂಬಗಳ ಬಗ್ಗೆ ಕವಿ ಧರ್ಮಶಿವ ತನ್ನ `ಸಮಯ ಪರೀಕ್ಷೆ'ಯಲ್ಲಿ ಅಸಹನೆಯಿಂದ ಪ್ರಸ್ತಾಪ ಮಾಡುತ್ತಾನೆ. ಲಂಕೇಶರ `ಸಂಕ್ರಾಂತಿ' ನಾಟಕದಲ್ಲಿ ಲಿಂಗದೀಕ್ಷೆ ಸ್ವೀಕರಿಸಿ ಬದಲಾಗಿರುವ ತನ್ನ ಪ್ರಿಯಕರನ್ನು ತಿರಸ್ಕರಿಸುವ ಹೆಣ್ಣಿನ ಪಾತ್ರವೂ; ಕುಲಧರ್ಮವನ್ನು ಬಿಟ್ಟು ಶಿಷ್ಟಧರ್ಮವನ್ನು ಸೇರಿದ ಮಗನನ್ನು ಒಪ್ಪದ ತಂದೆಯ ಪಾತ್ರವೂ ಇದೆ. ಈ ಪಾತ್ರಗಳ ಮೂಲಕ ಸಾಮಾಜಿಕವಾಗಿ ಕ್ರಾಂತಿಕಾರಕವಾದ ಧರ್ಮವು ತನ್ನ ಜಾರಿಯಾಗುವಿಕೆಯಲ್ಲಿ ಮಾಡುತ್ತಿರುವ ವ್ಯಕ್ತಿಗತ ಭಾವನೆಗಳ ಘಾಸಿಯನ್ನು ಚಿತ್ರಿಸುತ್ತದೆ. ನಾಟಕದ ಮಹತ್ವವಿರುವುದು ಅದರ ಕಲಾತ್ಮಕ ಯಶಸ್ಸಿನಲ್ಲಿ ಮಾತ್ರವಲ್ಲ; ಇಂತಹ ಸಾಂಸ್ಕೃತಿಕ ಸಂಕಟಗಳನ್ನು ಪರಿಭಾವಿಸಿರುವುದರಲ್ಲಿ ಕೂಡ.
ಹೊಸಧರ್ಮಗಳ ಸ್ವೀಕಾರವು ಅಸಮಾನತೆಯುಳ್ಳ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕ ಬೇಕುಬೇಡಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದಮನಿತ ಸಮುದಾಯಗಳಿಗೆ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿದೆ; ಆಧ್ಯಾತ್ಮಿಕ ಸಮಾನತೆಯ ಹಂಬಲವನ್ನು ಈಡೇರಿಸುವ ಮಾಧ್ಯಮವಾಗಿದೆ. ಆದರೂ ಹೊಸಧರ್ಮವನ್ನು ಒಳಗೆ ಬಿಟ್ಟುಕೊಳ್ಳುವಲ್ಲಿ ಮಹಿಳೆಯರು ಮತ್ತು ವಯಸ್ಸಾದ ಜನ ಯಾಕೆ ಹಿಂಜರಿಕೆ ತೋರುತ್ತಾರೆ? ಹಳೆಯ ಧರ್ಮವನ್ನು ಬಿಟ್ಟುಕೊಡಲಾಗದ ಜಿಗುಟುತನ ಪ್ರದರ್ಶಿಸುತ್ತಾರೆ? ಅಥವಾ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು' ಎಂಬಲ್ಲಿರುವ ಅಪೇಕ್ಷೆಯೇ ತಪ್ಪಾಗಿದೆಯೊ?
ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ; ವೈಚಾರಿಕ ಪ್ರಜ್ಞೆಯುಳ್ಳ ಗಂಡಸರು ಈ ಬಗೆಯ ಸಂಬಂಧ ನಷ್ಟವನ್ನು ಕೆಲಮಟ್ಟಿಗೆ ಸಹಿಸಬಲ್ಲರು. ಸಾರ್ವಜನಿಕ ಬದುಕಿನಲ್ಲಿರುವ ಅವರಿಗೆ ಪರ್ಯಾಯ ಸಂಬಂಧಗಳು ಸೃಷ್ಟಿಯಾಗುವ ಕಾರಣ, ಇದು ಅಷ್ಟು ದೊಡ್ಡ ಸಮಸ್ಯೆಯೆನಿಸುವುದಿಲ್ಲ. ಆದರೆ ಮನೆ ಮತ್ತು ಕೇರಿಗಳ ಪುಟ್ಟಜಗತ್ತಿನಲ್ಲೇ ಹೆಚ್ಚು ಸಮಯ ಕಳೆಯುವ ಅಷ್ಟೊಂದು ವೈಚಾರಿಕ ಸಿದ್ಧತೆಯಿಲ್ಲದ ಮಹಿಳೆಯರಿಗೆ, ಹೀಗೆ ಸಂಬಂಧ ಕಡಿದುಕೊಂಡು ಬದುಕುವುದು ಕಷ್ಟವಾಗುತ್ತದೆ. ಅದರಲ್ಲೂ ತಾವು ನಂಬಿದ ದೈವವನ್ನು ಕೈಬಿಡಲು ಏನು ಕೇಡಾಗುತ್ತದೆಯೊ ಎಂದು ಮನಸ್ಸು ಅಳುಕುತ್ತದೆ.
ಹಾಗೆಂದು ಮಹಿಳೆಯರು ಹೊಸಧರ್ಮ ಹೊಸದೈವಗಳ ವಿರೋಧಿಗಳಲ್ಲ. ಅವರ ಧಾರ್ಮಿಕ ಉದಾರತೆಗೆ ಮುಸ್ಲಿಮರಲ್ಲದ ಮಹಿಳೆಯರು ದರ್ಗಾ ಮತ್ತು ಮೊಹರಂ ಆಚರಣೆಗಳಲ್ಲಿ ತೊಡಗಿರುವುದು ಅಥವಾ ಗ್ರಾಮೀಣ ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಪ್ರದಾಯಗಳನ್ನು ಅನುಸರಿಸುವುದು ಸಾಕ್ಷಿ. ಅವರು `ಅನ್ಯ' ದೈವಗಳನ್ನು ಹಳತರ ಜತೆಗೇ ಸ್ವೀಕರಿಸಿಯಾರು; ಆದರೆ ಹಳೆಯವನ್ನು ಪೂರಾ ಕೈಬಿಟ್ಟು ಸ್ವೀಕರಿಸಬೇಕೆಂದಾಗ, ಹೊಸಧರ್ಮವು ತಮ್ಮ ನಂಬಿಕೆಯ ಬೇರುಗಳನ್ನು ಅಲುಗಿಸಿದಾಗ, ಅವರಿಗೆ ಕಷ್ಟವಾಗುತ್ತದೆ.
ಧಮ್ಮದೀಕ್ಷೆಯಿಂದ ಬಂಧುಗಳ ಸಾಮಾಜಿಕ ಸಂಬಂಧ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹುಟ್ಟುವ ಬಿರುಕುಗಳನ್ನು ನಿರ್ವಹಿಸುವ ಬೇಕಾದ ಸಾಮಾಜಿಕ ಮತ್ತು ಮಾನಸಿಕ ಮೆಕ್ಯಾನಿಸಂ ಕರ್ನಾಟಕದಲ್ಲಿನ್ನೂ ರೂಪುಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ, ಮಹಿಳೆಯರು ಮೊದಲಿಗರಾಗಿ ಹೊಸಧಮ್ಮ ಸ್ವೀಕರಿಸಿ, ಅದನ್ನು ತಮ್ಮ ಪುರುಷರು ಅನುಸರಿಸುವಂತೆ ಮಾಡಿರುವ ನಿದರ್ಶನವೇ ನಮಗೆ ಸಿಗಲಿಲ್ಲ. ಆದರೆ ದೀಕ್ಷೆತೆಗೆದುಕೊಂಡ ಪುರುಷರು, ತಮ್ಮಂತೆ ಉಳಿದವರೂ ಧಮ್ಮವನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಮಾಡುತ್ತಿರುವುದು ಕಂಡಿತು. ಈ ಒತ್ತಾಯದ ಹಿಂದೆ ಅವರು ಪುರುಷರಾಗಿರುವ, ಯುವಕರಾಗಿರುವ, ನೌಕರಸ್ತರಾಗಿರುವ, ಅಕ್ಷರಸ್ತರಾಗಿರುವ, ಪ್ರಜ್ಞಾವಂತರಾಗಿರುವ ಇಗೊಗಳು ಕೆಲಸ ಮಾಡುತ್ತಿದ್ದವು. ಈ ಇಗೊಗಳು ಪರೋಕ್ಷವಾಗಿ ಉಳಿದವರಲ್ಲಿ ಬೌದ್ಧದ್ವೇಷವನ್ನು ಹುಟ್ಟಿಸಿದಂತಿದ್ದವು. ಅದರಲ್ಲೂ ಧಮ್ಮಕ್ಕೆ ಬಾರದ ಹಿರಿಯ ತಲೆಮಾರಿನವರು ಧಮ್ಮವಂತರಾಗಿರುವ ಮಕ್ಕಳಿಂದ ದೂರವಾಗಿ ಹೊಸ ಅಸ್ಪೃಶ್ಯತೆ ಮತ್ತು ಅನಾಥಪ್ರಜ್ಞೆ ಅನುಭವಿಸುತ್ತಿರುವರೆಂದೂ, ಧಮ್ಮ ಸ್ವೀಕರಿಸಿರುವ ತಲೆಮಾರು ಸ್ವೀಕರಿಸಿದವರ ಜತೆ ಸಹನೆಯಿಂದ ಒಡನಾಟ ಮಾಡುತ್ತಿಲ್ಲವೆಂದೂ ತೋರಿತು. 
ಈ ಬಗೆಯ ಸಾಮಾಜಿಕ ಮಾನವೀಯ ಸಂಬಂಧಗಳ ಬಿರುಕು ಕೇವಲ ಕುಟುಂಬಗಳ ಒಳಗೆ ಮಾತ್ರವಲ್ಲ, ಹೊಸಧರ್ಮ ಸ್ವೀಕಾರ ಮಾಡಿದ ಕುಟುಂಬದ ಜತೆ, ಹಾಗೆ ಸ್ವೀಕಾರ ಮಾಡದೆ ಉಳಿದಿರುವ ಸಮುದಾಯದ ನಡುವೆ ಕೂಡ ಕಾಣಿಸಿತು. ಈಗಾಗಲೇ ಆಧುನಿಕ ತಲೆಮಾರಿನವರ ಶಿಕ್ಷಣ, ಸರ್ಕಾರಿ ಉದ್ಯೋಗ, ನಗರವಾಸ ಮತ್ತು ಮಧ್ಯಮವರ್ಗಕ್ಕೆ ಏರುವಿಕೆಗಳು, ಅನಕ್ಷರಸ್ತ ಗ್ರಾಮೀಣ ಕೆಳವರ್ಗದ ದಲಿತರ ಜತೆಗೆ ಒಂದು ಸಣ್ಣಬಿರುಕನ್ನು ಹುಟ್ಟಿಸಿವೆ; ಈ ಬಿರುಕು ಹೊಸಧರ್ಮ ಸ್ವೀಕಾರದ ಜತೆಗೆ ಮತ್ತಷ್ಟು ಅಗಲವಾಗುತ್ತಿದೆ. ಅನೇಕ ಕಡೆ ಧಮ್ಮಸ್ವೀಕಾರ ಮಾಡಿರುವ ಶಿಷ್ಟ ದಲಿತರು, ಪಾರಂಪರಿಕ ಮತಗಳಲ್ಲೇ ಉಳಿದ ತಮ್ಮ ಬಂಧುಗಳ ಬಗ್ಗೆ ಅವರು ಅಜ್ಞಾನಿಗಳು ಎಂಬ ದನಿಯಲ್ಲಿ ಅನಾದರದಿಂದ ಮಾತಾಡುತ್ತಿದ್ದರು. ತಮ್ಮ ಹಿರೀಕರು ಮಾರಮ್ಮ ಊರಮ್ಮಗಳಿಗೆ ನಡೆದುಕೊಳ್ಳುವುದು, ಕೋಳಿ ಕೋಣ ಬಲಿಕೊಡುವುದು, ಮಾಂಸಾಹಾರ ಮದ್ಯಪಾನ ಮಾಡುವುದು ಇತ್ಯಾದಿಯನ್ನು ಅವರು ಅಸಹನೆಯಿಂದ ಕಾಣುತ್ತಿದ್ದರು. ಇದಕ್ಕೆ ತಕ್ಕಂತೆ ಕೆಲವು ದಲಿತ ಭಂತೆಗಳು ಮಾಂಸಾಹಾರ ಸೇವನೆ ಮತ್ತು ಕುಡಿತಗಳನ್ನು ಹೀನ ಆಚರಣೆಗಳೆಂದೂ ಅವನ್ನು ದಲಿತರು ಬಿಟ್ಟುಬಿಡಬೇಕೆಂದೂ ಪ್ರತಿಪಾದಿಸುತ್ತಿದ್ದರು.
ಧಮ್ಮಸ್ವೀಕಾರದಿಂದ ಹುಟ್ಟಿದ ಈ ಬಿರುಕು, ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಇನ್ನೊಂದು ತೆರನಾಗಿ ಕೆಲಸಮಾಡುತ್ತಿತ್ತು. ಅಲ್ಲಿ ಧಮ್ಮದೀಕ್ಷೆಯನ್ನು ಕೇವಲ ಚಲುವಾದಿಗಳು (ಬಲಗೈ ಹೊಲೆಯರು)  ಮಾಡಿದ್ದರು. ಧಮ್ಮದೀಕ್ಷೆ ಸ್ವೀಕರಿಸಿದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗದಲ್ಲಿ ದೊಡ್ಡದೊಂದು ಬೌದ್ಧ ಚೈತ್ಯಾಲಯ ನಿರ್ಮಿಸಿದ್ದರು. ಬೀದರ್ ಗುಲಬರ್ಗ ಜಿಲ್ಲೆಗಳಲ್ಲಿ ಬಲಗೈಯವರು ಧಮ್ಮದೀಕ್ಷೆ ಪಡೆಯಲು, ಮಹಾರರೇ ಪ್ರಮುಖವಾಗಿರುವ ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿಯೂ ಒಂದು ಕಾರಣ. ಪಾರ್ಟಿಯು ಧಮ್ಮದೀಕ್ಷೆ ಪಡೆದ ಅಂಬೇಡ್ಕರ್ ಅವರನ್ನು ರಾಜಕೀಯ ಸಾಂಸ್ಕೃತಿಕ ನಾಯಕನೆಂದು ಭಾವಿಸಿತು. ಇದು ದಲಿತರ ಎಡಗೈ ಬಣವನ್ನು ಮತ್ತೊಂದು ಬಗೆಯಲ್ಲಿ ಸಂಘಟಿತವಾಗಲು ಪ್ರಚೋದಿಸಿತು. ಒಡೆದ ಬಣಗಳು ದಾಯಾದಿಗಳಂತೆ ಇದ್ದವು. ಬಲಗೈನವರು ಅಂಬೇಡ್ಕರ್ ಅವರನ್ನು ನಾಯಕರನ್ನಾಗಿಸಿಕೊಂಡು ಧಮ್ಮಸ್ವೀಕಾರ ಮಾಡಿದರೆ, ಎಡಗೈವರು ಜಗಜೀವನರಾಮರನ್ನು ನಾಯಕರಾಗಿಸಿಕೊಂಡು ಕ್ರೈಸ್ತಧರ್ಮದತ್ತ ಚಲಿಸಿದ್ದರು. ಹೀಗೆ ಕುಟುಂಬ, ಸಮುದಾಯ ಮತ್ತು ಕೇರಿಗಳ ನಡುವೆ ಧಮ್ಮವು ಬೇರೊಂದು ಬಗೆಯಲ್ಲಿ ಬಿರುಕಿಗೆ ಕಾರಣವಾದಂತೆ ತೋರಿತು. 
ರಹಮತ್, ಅರುಣ್, ಕುಲಕರ್ಣಿ, ಗೋವಿಂದಯ್ಯಹೊಸಧರ್ಮಗಳು ಎಷ್ಟೇ ನಾಗರಿಕವಾಗಿರಲಿ, ದಮನಿತರಿಗೆ ಸಾಮಾಜಿಕ ಚಲನಶೀಲತೆ ಕೊಡುವಂತಹದ್ದಾಗಿರಲಿ, ಅವನ್ನು ಮಾನಸಿಕ ಸಿದ್ಧತೆಯಿಲ್ಲದ ಜನರ ಮೇಲೆ ಹೇರಿದಾಗ ಅವು ಹಿಂಸ್ರಕವಾಗಿ ರೂಪಾಂತರಗೊಳ್ಳುತ್ತವೆ. ಯಾವುದೇ ಕ್ರಾಂತಿಕಾರ ಸಿದ್ಧಾಂತವನ್ನು ಸಹ ಅತ್ಯವರಸರದಲ್ಲಿ ಉತ್ಸಾಹದಲ್ಲಿ ಹೇರಿಕೊಂಡಾಗ ಅನೇಕ ಮಾನವೀಯ ಸೂಕ್ಷ್ಮತೆಗಳು ಕಳೆದುಹೋಗಿಬಿಡುತ್ತವೆ. ಈಗಿನ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿಯಾಗಿರುವ ತಬ್ಲೀಕ್ ಎಂಬ ನವಇಸ್ಲಾಮಿಕ್ ಚಳುವಳಿಯಿಂದ ಸಾವಿರಾರು ಕುಟುಂಬಗಳಲ್ಲಿ ಸತಿಪತಿಗಳೊಂದಾಗದ ಭಕ್ತಿಯು ಏರ್ಪಟ್ಟು, ಮಾನವೀಯ ಸಂಬಂಧಗಳು ಕಂಗೆಟ್ಟಿವೆ. ಧರ್ಮಪ್ರಸಾರಕ್ಕೆ ತಮ್ಮನ್ನು ಬಿಟ್ಟು ತಿಂಗಳುಗಟ್ಟಲೆ ಹೋಗುವ, ಯಾವಾಗಲೂ ಮಸೀದಿಗಳಲ್ಲಿ ಬೀಡುಬಿಟ್ಟಿರುವ ಗಂಡಂದಿರ ವರ್ತನೆಯಿಂದ ಅನೇಕ ಮಹಿಳೆಯರು, ಖಿನ್ನತೆಯಿಂದ ನರಳುತ್ತಿದ್ದಾರೆ. ಕೆಲವರು, ದೇವರ ದಾರಿಯಲ್ಲಿ ಹೋದ ಗಂಡನನ್ನು ಬಿಟ್ಟು ಹೊಸಪುರುಷನನ್ನು ಹುಡುಕಿ ಹೋಗಿರುವುದೂ ಉಂಟು.
ಕರ್ನಾಟಕದಲ್ಲಿ ಸಾಮೂಹಿಕ ಧಮ್ಮದೀಕ್ಷೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಕರ್ನಾಟಕ ಸಾಮಾಜಿಕ ಸಮೀಕರಣವನ್ನು ಬದಲಿಸುವಷ್ಟು ಶಕ್ತವೊ ಅಲ್ಲವೊ, ಅಸ್ಪೃಶ್ಯತೆಯ ಕಾಯಿಲೆಗೆ ಯಾವ ಬಗೆಯ ಮದ್ದೊ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕಾಗಿ ಬೆಲೆ ತೆರುತ್ತಿರುವವರು ಮಾತ್ರ ಮಹಿಳೆಯರಾಗಿದ್ದಾರೆ. ಧಮ್ಮದೀಕ್ಷೆ ನೀಡುತ್ತಿರುವವರು ಈ ಸಾಂಸ್ಕೃತಿಕ  ಬಿಕ್ಕಟ್ಟುಗಳನ್ನು ಪರಿಭಾವಿಸಿದಂತಿಲ್ಲ. ಹೀಗಾಗಿ ನಾವು ಕಂಡ ಬಹುತೇಕ ಯಶೋಧರೆಯರಲ್ಲಿ ಬುದ್ಧನ ಬಗ್ಗೆ ಕೋಪವಿತ್ತು. ಇದಕ್ಕೆ ಕಾರಣವಾಗಿದ್ದು ಧಮ್ಮವಲ್ಲ. ಧಮ್ಮವನ್ನು ನೆಲೆಗೊಳಿಸುತ್ತಿರುವ ವಿಧಾನ.  
ನಮ್ಮ ಬೌದ್ಧಯಾನದಲ್ಲಿ ಅನೇಕ ದಲಿತ ಕುಟುಂಬಗಳಲ್ಲಿ ಧಮ್ಮಸ್ವೀಕಾರವು ಹೊಸ ಆತ್ಮಾಭಿಮಾನವನ್ನು ಹೊಸ ಬದುಕಿನ ಕ್ರಮವನ್ನು ತಂದಿತ್ತಿರುವ ಹಲವಾರು ನಿದರ್ಶನಗಳನ್ನು ನಾವು ಕಂಡೆವು. ಆದರೆ ಎಲ್ಲ ಬಗೆಯ ಪರಿವರ್ತನೆಗಳ ಹೊತ್ತಲ್ಲಿ ಪ್ರತಿರೋಧ ಹತಾಶೆ ಅಸಹಾಯಕತೆ ಕಂಡೆವು. ನಮಗೆ ಬೌದ್ಧಧರ್ಮಕ್ಕೆ ಸೇರಿದ ಶಾಸನ, ವಿಗ್ರಹ ಚೈತ್ಯಾಲಯಗಳು ಭಗ್ನಾವಸ್ಥೆಯಲ್ಲಿ ಇದ್ದುದು ಕಂಗೆಡಿಸಲಿಲ್ಲ; ಧಮ್ಮಸ್ವೀಕಾರದ ವಿಷಯವು ಮನುಷ್ಯರ ಮತ್ತು ಕುಟುಂಬಗಳ ನಡುವೆ ಭಗ್ನತೆ ಹತಾಶೆ ತಂದಿರುವುದು ಕಂಗೆಡಿಸಿತು. ಯಶೋಧರೆಯರ ಕಷ್ಟಗಳಿಗೆ ಕೊನೆಯಿಲ್ಲವೆನಿಸಿತು.


- ರಹಮತ್ ತರೀಕೇರಿ
ಕೃಪೆ : ಕೆಂಡ ಸಂಪಿಗೆ

Man is always great. Because he is the creator of god !

ಮೀಸಲಾತಿ ಹಾಗೆಂದಾಕ್ಷಣ ಬಹುತೇಕರ ಕಣ್ಣು ಕೆಂಪಗಾಗುತ್ತದೆ. ಅವರ ಆ ಕೆಂಪಗಾದ ಕಣ್ಣು ಮೊದಲು ನೋಡುವುದು ದಲಿರತ್ತ. ಈ ಮೀಸಲಾತಿಯಿಂದ ದಲಿತರು ಹೆಚ್ಚಿಕೊಂಡವರೆ, ಈ  ಸಕರ್ಾರದ ಪ್ರತಿಯೊಂದು ಸವಲತ್ತು ಇವರಿಗೇನೆ. ಒಂದು ರೀತಿ ಇವರು ಗೌಮರ್ೆಂಟ್ ಬ್ರಾಹ್ಮಣರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ ಅಂತಹ ಆಕ್ರೋಶವನ್ನು ಮೀಸಲಾತಿ ವ್ಯಾಪ್ತಿಯೊಳಗೆ ಬರುವ ಒಬಿಸಿಗಳೂ ಕೂಡ ವ್ಯಕ್ತಪಡಿಸುತ್ತಾರೆ.!       ಪ್ರಶ್ನೆಯೇನೆಂದರೆ ಮೀಸಲಾತಿ ಎಂಬ ಈ ಪರಿಕಲ್ಪನೆ ಹೊಸದೆ? ದಲಿತರಿಗೆ ಹಿಂದುಳಿದವರಿಗೆ ಈಗ ಸಿಗುತ್ತಿರುವ ಅದು ಹಿಂದೆ ಯಾರಿಗೂ ಸಿಕ್ಕಿಲ್ಲವೇ? ಹಿಂದೆ ಎಂದೂ ಕೂಡ ಅದು ಜಾರಿ ಇರಲಿಲ್ಲವೇ? ಯಾವ ರೂಪದಲ್ಲಾದರೂ ಸರಿ ಅಂತಹ ಒಂದು  ಪದ್ಧತಿ ಈ ದೇಶದಲ್ಲಿ ಅಸ್ತಿತ್ವ ದಲ್ಲಿರಲಿಲ್ಲವೇ? ಹಾಗಿದ್ದರೆ ಅಂತಹ ಮೀಸಲಾತಿಯ ಜನಕ ಯಾರು? ಫಲಾನುಭವಿಗಳಾದರೂ ಯಾರು? ಅಂದು ಜಾರಿಯಾದ ಆ ಮೀಸಲಾತಿಯ ಪರಿಣಾಮವಾದರೂ ಏನು? ಇತ್ಯಾದಿ ಪ್ರಶ್ನೆಗಳು ಪುಂಖಾನು ಪುಂಖವಾಗಿ ಹುಟ್ಟಿಕೊಳ್ಳುತ್ತವೆ. ಅಕ್ಷರಶಃ ನಿಜ, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು ಮನುಸ್ಮೃತಿಯಲ್ಲಿ ಹಾಗು ಅಂತಹ ಮೀಸಲಾತಿ ಪ್ರಥಮ ಫಲಾನುಭವಿಗಳಾದ ಬ್ರಾಹ್ಮಣರಲ್ಲಿ.    ಹಾಗಿದ್ದರೆ ಮನು ಸಂವಿಧಾನ ಬರೆದನೆ? ಮತ್ತು ಅಂತಹ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು, ವಿಧಿಗಳನ್ನು ಸೇರಿಸಿದನೇ? ಮತ್ತು ಅಂತಹ ಸಂವಿಧಾನ ಜಾರಿಯಲ್ಲಿತ್ತೇ? ಯಾರ ಕಾಲದಲ್ಲಿ ಅದು ಜಾರಿಯಲ್ಲಿತ್ತು? ಹೇಗಿತ್ತು? ಯಾವರೀತಿ ಇತ್ತು? ಇತ್ಯಾದಿ ಪ್ರಶ್ನೆಗಳಿಗೆ  ಬಾಬಾಸಾಹೇಬ್ ಡಾ. ಅಂಬೇಡ್ಕರ್ರವರು ತಮ್ಮ ಕ್ರಾಂತಿ ಮತ್ತು ಪ್ರತಿಕ್ರಾಂತಿ ಎಂಬ ಕೃತಿಯಲ್ಲಿ (ಬಾಬಾಸಾಹೇಬರ ಈ ಕೃತಿಯನ್ನು ಉಲ್ಟಾ ಪಲ್ಟಾ ಖ್ಯಾತಿಯ ಚಲನಚಿತ್ರ ನಿದರ್ೇಶಕ ಎನ್.ಎಸ್.ಶಂಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ) ಉತ್ತರ ಕೊಡುತ್ತಾ ಹೋಗುತ್ತಾರೆ.  ಅಂಬೇಡ್ಕರರ ಪ್ರಕಾರ  ಈ  ದೇಶದಲ್ಲಿ ಸಾಮಾಜಿಕ ಮೀಸಲಾತಿ ಜಾರಿಗೆ ತಂದ ಮನುಸ್ಮೃತಿಎಂಬ ಅಘೋಷಿತ ಸಂವಿಧಾನ ಜಾರಿಗೆ ಬಂದದ್ದು ಬೌದ್ಧರಾಗಿದ್ದ  ಮೌರ್ಯ ವಂಶದ  ಕೊನೆಯ ದೊರೆ ಬೃಹದ್ರಥ ಮೌರ್ಯನ್ನು ಕೊಂದು ಶುಂಗವಂಶದ ಮೂಲಕ   ಬ್ರಾಹ್ಮಣರ ಆಳ್ವಿಕೆಗೆ ಅಡಿಪಾಯ ಇಟ್ಟ ಪುಷ್ಯಮಿತ್ರನ ಕಾಲದಲ್ಲಿ. ಪುಷ್ಯಮಿತ್ರನ ಈ ಬ್ರಾಹ್ಮಣ ಕ್ರಾಂತಿ ಕ್ರಿಸ್ತ ಪೂರ್ವ 185 ರಲ್ಲಿ ಜರುಗಿತ್ತೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಬ್ರಾಹ್ಮಣ ಕ್ರಾಂತಿಗೆ ಪೂರಕವಾದ ಕಾನೂನಾದ ಮನುಸ್ಮೃತಿ ರೂಪುಗೊಂಡದ್ದು ಕ್ರಿಸ್ತ ಪೂರ್ವ 170 ರಿಂದ 150 ರ ಅವಧಿಯಲ್ಲಿರಬೇಕು ಎನ್ನುತ್ತಾರೆ ಅಂಬೇಡ್ಕರ್. ಮುಂದುವರಿದು ಅವರು ಮನುಸ್ಮೃತಿ ಎಂಬ ಅಂತಹ ಕಾನೂನಿನ ಜನಕ  ಸುಮತಿಭಾರ್ಗವ ಎಂಬ ಬ್ರಾಹ್ಮಣ, ಮತ್ತದರ ಮೊದಲ ಫಲಾನುಭವಿಗಳು ಬ್ರಾಹ್ಮಣರು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ.      ಹಾಗಿದ್ದರೆ ಬ್ರಾಹ್ಮಣರಿಗೆ ಈ ಪರಿಯ ವ್ಯಾಪಕ ಸವಲತ್ತು  ಕೊಟ್ಟ ಮತ್ತು ಅಂತಹ ಕೊಡುವಿಕೆಯ ಮೂಲಕ  ಇಡೀ ದೇಶವನ್ನು ಸಾಮಾಜಿಕ ಅಸಮಾನತೆಗೆ ತಳ್ಳಿದ ಮನುಧರ್ಮಶಾಸ್ತ್ರದ ಬಗ್ಗೆ ಚಚರ್ಿಸಲು ಯಾರು ಯಾಕೆ ಪ್ರಯತ್ನಿಸಿಲ್ಲ? ಅಥವಾ ವಿಶ್ಲೇಷಿಸಲು ಹೋಗಿಲ್ಲ? ಉತ್ತರ ಸ್ಪಷ್ಟ. ಎಲ್ಲೋ ಒಂದು ಕಡೆ ಅಂತಹ ಚಚರ್ೆಯಾಗಬಾರದು, ತಾವು ಪಡೆಯುತ್ತಿರುವ ಇಂತಹ ಸವಲತ್ತುಗಳು  ಯಾರಿಗೂ ಗೊತ್ತಾಗಬಾರದು ಎಂದು ಕುತ್ಸಿತ ಮನಸ್ಸುಗಳು ತಡೆದಿವೆ. ಇದು ಹೇಗೆ ಎಂದರೆ ಮನುಸ್ಮೃತಿ ಬರೆದದ್ದು ಯಾರು ಎಂದರೆ ಅದು ದೈವ ಮೂಲದ್ದು ಎನ್ನಲಾಗಿದೆ! ಅಂದರೆ ಸಾಕ್ಷಾತ್ ದೇವರೇ ಅದನ್ನು ಬರೆದಿರುವುದರಿಂದ  ಯಾರೂ ಅದನ್ನು ಪ್ರಶ್ನಿಸಬಾರದೆಂದರ್ಥ!  ನಿಜಕ್ಕೂ ಇದು ಅಪಾಯಕಾರಿ ಹುನ್ನಾರ. ಎರಡು ಸಾವಿರ ವರ್ಷಗಳೀಂದ ಕೆಲವೊಂದು ಸಮುದಾಯಗಳು ಪಡೆಯುತ್ತಿರುವ ಅಘೋಷಿತ ಸೌಲಭ್ಯಗಳನ್ನು, ಸಾಮಾಜಿಕ ಮೀಸಲಾತಿಯನ್ನು ಪ್ರಶ್ನಿಸಬಾರದೆಂದರೆ? ಅಂತಹ ಮೀಸಲಾತಿಯಿಂದ  ಈ ದೇಶದಲ್ಲಿ ಉಂಟಾಗಿರುವ  ಸಾಮಾಜಿಕ ಏರುಪೇರುಗಳನ್ನು ಪ್ರಶ್ನಿಸಬಾರದೆಂದರೆ? Never, ಅಂತಹ ಪ್ರಶ್ನೆಗಳನ್ನು ಹೆಚ್ಚು ಹೆಚ್ಚು ಕೇಳಬೇಕು. ಇಲ್ಲದಿದ್ದರೆ ಇನ್ನು ಹತ್ತು ಲಕ್ಷ ವರ್ಷವಾದರೂ ಸರಿ  ಸಮಾಜ ಹೀಗೆಯೇ ಇರುತ್ತದೆ. ಸಾಮಾಜಿಕ ತಾರತಮ್ಯವೂ ತೊಲಗುವುದಿಲ್ಲ, ಸಮಾನತೆಯಂತೂ ಸಾಧ್ಯವೇ ಇಲ್ಲ.    ಹಾಗಿದ್ದರೆ ಇಷ್ಟೊಂದು ಅಪಾಯಕಾರಿ ಎನಿಸುವ ಮನುಸ್ಮೃತಿಯು ಬ್ರಾಹ್ಮಣರಿಗೆ ಕೊಟ್ಟಿರುವುದಾದರೂ ಏನು? ಮನುಸ್ಮೃತಿಯ ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ ಮುಖದಿಂದ ಬಂದವನಾದ್ದರಿಂದ, ಜ್ಯೇಷ್ಠನಾದ್ದರಿಂದ ಮತ್ತು ವೇದವನ್ನು ಹೊಂದಿದವನಾದ್ದರಿಂದ ಬ್ರಾಹ್ಮಣನೇ ಈ ಸೃಷ್ಟಿಯ ಪ್ರಭು, ಈ ಜಗತ್ತಿನಲ್ಲಿರುವುದೆಲ್ಲ ಬ್ರಾಹ್ಮಣನ    ಸೊತ್ತು. ತನ್ನ ಶ್ರೇಷ್ಠ ಜನ್ಮದಿಂದಲೇ ಬ್ರಾಹ್ಮಣನು ಎಲ್ಲಾ ವಸ್ತುಗಳಿಗೂ ಅರ್ಹತೆ ಪಡೆದಿದ್ದಾನೆ, ಅಧ್ಯಯನ, ಅಧ್ಯಾಪನ, ತನಗಾಗಿ ಮತ್ತು ಇತರಿಗಾಗಿ ಯಜ್ಙ ಯಾಗಾದಿಗಳನ್ನು ಮಡುವುದು. ದಾನಕೊಡುವುದು ಮತ್ತು ಸ್ವೀಕರಿಸುವುದು ಇವು ಬ್ರಾಹ್ಮಣನ ಕೆಲಸಗಳು!     ಇಷ್ಟು ಹೇಳಿದ ಮೇಲೆ ಮುಗಿದು ಹೋಯಿತು! ಮನು ಬ್ರಾಹ್ಮಣರನ್ನು ಯಾವ ಸ್ಥಾನದಲ್ಲಿಟ್ಟ ಮತ್ತು ಅವರಿಗೆ ಯಾವ ಯಾವ  ಕೆಲಸಗಳನ್ನು ಮೀಸಲಿಟ್ಟ ಎಂಬುದು ಅರ್ಥವಾಗುತ್ತದೆ. ಇನ್ನು ಬ್ರಾಹ್ಮಣರಿಗೆ ಸಲ್ಲಬೇಕಾದ ಹಣಕಾಸಿಗೆ ಸಂಬಧಪಟ್ಟಂತೆ? ಈ ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿ ಒದಗಿಸುತ್ತವೆ.      ವಿಧ್ವಾಂಸರು ಎಲ್ಲರಿಗೂ ಅಧಿಪತಿಯಾದ್ದರಿಂದ ಬ್ರಾಹ್ಮಣನ ಕಣ್ಣಿಗೆ ಬಿದ್ದ ಪುರಾತನ ನಿಧಿಯು ಆತನಿಗೇ ಸಲ್ಲುತ್ತದೆ, ಅದೇ ರಾಜನಿಗೆ ನಿಧಿ ಸಿಕ್ಕಿದರೆ ಅದರಲ್ಲಿ ಅರ್ಧವನ್ನು ಬ್ರಾಹ್ಮಣರಿಗೆ ಕೊಟ್ಟು ಉಳಿದರ್ಧವನ್ನು ರಾಜಕೋಶಕ್ಕೆ ಸೇರಿಸಬೇಕು! ಇದಿಷ್ಟು ಮನು ಬ್ರಾಹ್ಮಣರಿಗೆ ಹಣಕಾಸು ‘ನಿಧಿ’ಗೆ ಸಂಬಂಧಪಟ್ಟಂತೆ ನೀಡುವ ಹಕ್ಕುಗಳು ಮುಂದುವರಿದು ಮನು    ತನ್ನ ಕಾಲ ಸನ್ನಿಹಿತವಾದಾಗ ರಾಜನು ಎಲ್ಲಾ ಧನವನ್ನು ಬ್ರಾಹ್ಮಣರಿಗೆ ಒಪ್ಪಿಸಿ, ರಾಜ್ಯವನ್ನು ಮಗನಿಗೆ ಒಪ್ಪಿಸಿ ರಣಭೂಮಿಯಲ್ಲಿ ಸಾವು ಪಡೆಯ ಬೇಕು ಎನ್ನುತ್ತಾನೆ.  ಅಂದಹಾಗೆ ಮನು ಬ್ರಾಹ್ಮಣರಿಗೆ ಹಣಕಾಸು ಹಕ್ಕು ನೀಡಿದ.  ಆದರೆ ಈ ಹಣಕಾಸಿನ ಹಕ್ಕಿಗೆ ಕಳಸವಿಟ್ಟಂತೆ ಮನು ಬ್ರಾಹ್ಮಣರಿಗೆ ನೀಡಿದ್ದು ದಕ್ಷಿಣೆ ಮತ್ತು ದಾನದ ಹಕ್ಕು. ಇದು ಹೇಗೆ ಎಂದರೆ ಮನು  ಉದಾರ ದಕ್ಷಿಣೆಗಳನ್ನು ಕೊಟ್ಟು ರಾಜನು ಯಾಗವನ್ನು ಮಾಡಬೇಕು. ಧಮರ್ಾರ್ಥವಾಗಿ ಬ್ರಾಹ್ಮಣರಿಗೆ ಧನ ಭೋಗಾದಿಗಳನ್ನು ಕೊಡಬೇಕು ಎನ್ನುತ್ತಾನೆ . ಮುಂದುವರಿದು ಮನು ಬ್ರಾಹ್ಮಣೇತರರಿಗೆ ಕೊಟ್ಟ ದಾನ ಸಾಮಾನ್ಯ, ಬ್ರಾಹ್ಮಣನಿಗೆ ಕೊಟ್ಟದ್ದು ದುಪ್ಪಟ್ಟು ಫಲಕಾರಿ, ಅಧ್ಯಯನ ಶೀಲ ಬ್ರಾಹ್ಮಣನಿಗೆ ಕೊಟ್ಟ ದಾನ ಶತ ಸಹಸ್ರಫಲವುಳ್ಳದ್ದು, ಅದೇ ವೇದಪಾರಂಗತ ಬ್ರಾಹ್ಮಣನಿಗೆ  ಮಾಡಿದ ದಾನ ಅನಂತ ಫಲಕಾರಿ  ಎಂದು ದಾನವನ್ನು ಶಾಸನಬದ್ಧಗೊಳಿಸುತ್ತಾನೆ. ಇದು ಹೇಗೆ ಎಂದರೆ ಸ್ವತಃ ಅಂಬೇಡ್ಕರ್ರವರೆ ಮನು ಬ್ರಾಹ್ಮಣರಿಗೆ ದಾನದ ಹಕ್ಕು ಕೊಟ್ಟಿದ್ದ.  ಆ ದಾನ ಯಾವಾಗಲೂ ಹಣ ಅಥವಾ ಚಿರಾಸ್ತಿಯಾಗಿರಬೇಕಿತ್ತು. ಆದರೆ ಕಾಲಾಂತರದಲ್ಲಿ, ಬ್ರಾಹ್ಮಣನಿಗೆ ಉಪಪತ್ನಿಯಾಗಿ ಇರಿಸಿಕೊಳ್ಳಲು ಹೆಣ್ಣಿನ ಉಡುಗೊರೆ  ಅಥವಾ ಹಣ ಕೊಟ್ಟು ಬಿಡಿಸಿಕೊಳ್ಳಬಹುದಾದ ಹೆಣ್ಣನ್ನು ಒತ್ತೆಯಾಗಿಡುವ ಕ್ರಿಯೆ ಸಹ ‘ದಾನದ ಕಲ್ಪನೆ’ಗೆ ಸೇರಿತು!  ಎನ್ನುತ್ತಾರೆ.     ಒಟ್ಟಾರೆ ಮನು ನೀಡಿದ ಈ ದಾನದ ಹಕ್ಕಿನಿಂದಾಗಿ ಬ್ರಾಹ್ಮಣರಿಗೆ ಧನ ಧಾನ್ಯವಲ್ಲದೆ ಬೇರೆಯವರ ಮನೆಯ ಹೆಣ್ಣು ಕೂಡ ಧಕ್ಕಿತು! ಹೀಗಿರುವಾಗ ಇದನ್ನು (ಮನುಧರ್ಮಶಾಸ್ತ್ರ) ನಾಗರೀಕ ಕಾನೂನು ಎನ್ನಬೇಕೆ? ಮತ್ತು ಅಂತಹ ಕಾನೂನು ಈಗಲೂ ಅನೌಪಚಾರಿಕವಾಗಿ ಜಾರಿಯಲ್ಲಿರುವುದನ್ನು ಖಂಡಿಸದೆ ಇರಬೇಕೆ?    ಇರಲಿ ಬ್ರಾಹ್ಮಣರಿಗೆ ಶಿಕ್ಷಣ ಮತ್ತು ಆಥರ್ಿಕ ‘ಮೀಸಲಾತಿ’ ನೀಡಿದ ಮನು ಅವರ ರಕ್ಷಣೆಗಾಗಿ ಯಾವ ರೀತಿಯ ‘ಕಾನೂನು’ ರೂಪಿಸಿದ ಎಂದು ಚರ್ಚಿಸೋಣ. ಏಕೆಂದರೆ ಎಲ್ಲರೂ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಯನ್ನು ಟೀಕಿಸುತ್ತಾರೆ. ಅಂತಹ ಕಾಯ್ದೆಯನ್ನು ಆಗಲೇ ಮನು ಬ್ರಾಹ್ಮಣರಿಗೆ ನೀಡಿದ್ದ ಎಂಬುದನ್ನು ಬಹುತೇಕರು ಗಮನಿಸಲು ಹೋಗಿಲ್ಲ! ಅದಕ್ಕೆ ಅವನ ಒಂದೆರಡು ಸಾಲುಗಳನ್ನು ಇಲ್ಲಿ ಹೇಳುವುದಾದರೆ ತನಗೆ ಹಾನಿ ಮಾಡಿದವರ ವಿರುದ್ಧ ಬ್ರಾಹ್ಮಣನು ರಾಜನಿಗೆ ದೂರು ಒಯ್ಯಬೇಕಿಲ್ಲ. ತನ್ನ ಸ್ವಂತ ಬಲದಿಂದಲೇ ಅವರನ್ನು ಶಿಕ್ಷಿಸಬಲ್ಲನು. ಹಾಗೆಯೇ ಮನು  ವರ್ಣಾಶ್ರಮ ಧರ್ಮಕ್ಕೆ ಚ್ಯುತಿಬಂದಾಗ ಅಥವಾ ವಿಪ್ಲವಕಾಲದಲ್ಲಿ ದ್ವಿಜರು ಆತ್ಮ ರಕ್ಷಣೆಗಾಗಿ ಶಸ್ತ್ರ ಹಿಡಿಯಬಲ್ಲರು ಎನ್ನುತ್ತಾನೆ.  ಇವಿಷ್ಟರಿಂದಲೇ ಅರ್ಥವಾಗುತ್ತದೆ, ಬ್ರಾಹ್ಮಣರ ಮೇಲಿನ ದೌರ್ಜನ್ಯಕ್ಕೆ ಬ್ರಾಹ್ಮಣರು ಯಾವ ಕ್ರಮವನ್ನಾದರೂ  ಕೈಗೊಳ್ಳ ಬಹುದಿತ್ತು! ಅಂದಹಾಗೆ ಬ್ರಾಹ್ಮಣರಿಗೆ ನೀಡಲಾದ ಈ ಪರಿಯ ಸ್ವರಕ್ಷಣೆಯ ಹಕ್ಕು  ಯಾವ ಮಟ್ಟದಲ್ಲಿತ್ತೆಂದರೆ ಆತ್ಮ ರಕ್ಷಣೆಗಾಗಿ ಅಥವಾ ದಕ್ಷಿಣೆಗಾಗಿ ಉಂಟಾದ ವ್ಯಾಜ್ಯದಲ್ಲಿ, ಸ್ತ್ರೀಯರು ಮತ್ತು ಬ್ರಾಹ್ಮಣರ ರಕ್ಷಣೆಗಾಗಿ ಬ್ರಾಹ್ಮಣನು ಕೊಲೆ ಮಾಡಿದರೂ ಅಪರಾಧವಲ್ಲ!     ಆಶ್ಚರ್ಯ! ಈ ಜಗತ್ತಿನಲ್ಲಿ ಕೊಲೆ ಮಾಡಿದರೂ ಕೂಡ ಅಪರಾಧವಲ್ಲ! ಮನು ಅಂತಹ ಮಹತ್ತರ ಹಕ್ಕನ್ನು ಬ್ರಾಹ್ಮಣರಿಗೆ ಕೊಟ್ಟಿದ್ದಾನೆ! ಇಂತಹ ಒಂದು ಹಕ್ಕನ್ನು ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರಶ್ನೆ ಎಂದರೆ ಸ್ವರಕ್ಷಣೆಗಾಗಿ ಇಷ್ಟೆಲ್ಲಾ ಹಕ್ಕುಗಳನ್ನು ಕೊಟ್ಟಮೇಲೆ ಅಂತಹ ಸಮುದಾದದ ಮೆಲೆ ದೌರ್ಜನ್ಯವಾದರೂ ಎಲ್ಲಿ ನಡೆಯುತ್ತದೆ? ಹೀಗಿರುವಾಗ ಇಂತಹ ಅನೌಪಚಾರಿಕ ಹಕ್ಕನ್ನು ಪ್ರಶ್ನಿಸದ  ಕುತ್ಸಿತ ಮನಸ್ಸುಗಳು ಎಸ್.ಸಿ./ ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಕೊಂಕು ಮಾತನಾಡುವುದೇಕೆ?   ಒಂದಂತು ನಿಜ ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸುವ ಮೂಲಕ, ಕ್ಷತ್ರಿಯರನ್ನು ಕ್ಷಾತ್ರಕ್ಷೇತ್ರಕ್ಕೆ ಕಳುಹಿಸುವ ಮೂಲಕ, ವೈಶ್ಯರನ್ನು ಕೃಷಿ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಮೀಸಲಿರಿಸುವ ಮೂಲಕ, ಶಿಕ್ಷಣವನ್ನು ತಮಗೆ ಮಾತ್ರ ಮೀಸಲಿರಿಸಿಕೊಳ್ಳುವುದರ ಮೂಲಕ ಬ್ರಾಹ್ಮಣರು ಸಮಾಜದ ದಿಕ್ಕು ತಪ್ಪಿಸಲು ಮತ್ತು ತಪ್ಪು ಮಾರ್ಗದರ್ಶನ ನೀಡಲು ಸ್ವಂತಂತ್ರವಾದ ಏಕೈಕ ಶಿಕ್ಷಿತ ವರ್ಗವಾದರು. ಏಕೆಂದರೆ ಭಾರತೀಯ ಸಮಾಜದಲ್ಲಿ ಇಂತಿಂತಹವರಿಗೆ ಇಂತಹದ್ದೆ ಕೆಲಸ, ಮತ್ತು ಆ ಕೆಲಸ ಮಾಡುವವರು ಇಂತಹದ್ದೆ ಜಾತಿ ಎಂದು ಮಾರ್ಗದರ್ಶನ ನೀಡಿದ್ದು ಅವರೇ ಅಲ್ಲವೆ. ಏಕೆಂದರೆ ಮನು ಎಂದು ಕರೆಸಿಕೊಳ್ಳುವ ಸುಮತಿ ಭಾರ್ಗವನೆಂಬ ಆತ ಬ್ರಾಹ್ಮಣನೇ ಅಲ್ಲವೇ? ಮತ್ತು ಆತ ಬರೆದ ಮನು ಧರ್ಮಶಾಸ್ತ್ರ ಬ್ರಾಹ್ಮಣರ ಏಳ್ಗೆಗಾಗಿಯೇ ಅಲ್ಲವೇ? ಹೀಗಿರುವಾಗ ಮನುಸ್ಮೃತಿಎಂಬ ಪ್ರಾಚೀನ ಕಾಲದ ಕಾನೂನಿನ ಮೂಲಕ ಪಡೆದಿರುವ ಆ ಅಮೂಲ್ಯ ಮೀಸಲಾತಿ ಇರುವಾಗ ಅವರು ಸಮಾಜದಲ್ಲಿ ಉನ್ನತವರ್ಗದವರಾಗಿರದೆ ಇನ್ನೇನಾಗಿರಲು ಸಾಧ್ಯ? ಉನ್ನತವರ್ಗದವರಾಗಿರಲಿ, ಅಭ್ಯಂತರವೇನಿಲ್ಲ. ಅದು ಅವರ ಹಕ್ಕು. ಪ್ರಶ್ನೆ ಏನೆಂದರೆ ಹಿಂದುಳಿದವರ್ಗದವರಿಗೆ ಮತ್ತು ದಲಿತರಿಗೆ ಪ್ರಸ್ತುತ ಸಂವಿಧಾನಬದ್ಧವಾಗಿ ನೀಡಲ್ಪಡುತ್ತಿರುವ ಅದೇ ಹಕ್ಕುಗಳನ್ನು ವಿರೋಧಿಸುವುದೇಕೆ? ಎನ್ನುವುದು. ಮಾತೆತ್ತಿದರೆ ಪ್ರತಿಭೆ, ಪ್ರತಿಭೆ ಎನ್ನುತ್ತಾರೆ. Merit? My foot! D meritಅಥವಾ ಪ್ರತಿಭೆ ಅವರ ವ್ಯಕ್ತಿಗತವಾಗಿ ಬಂದದ್ದಲ್ಲ. ಅದು ಮನುಸ್ಮೃತಿ ಮೂಲಕ ಅವರು ಪಡೆದ ಸಾಮಾಜಿಕ ಮೀಸಲಾತಿಯಿಂದ ಪಡೆದದ್ದು. ಹೀಗಿರುವಾಗ ಅಂತಹದ್ದೆ ಮೀಸಲಾತಿಯನ್ನು, ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಈ ದೇಶದ ಶೋಷಿತ ವರ್ಗಗಳು ಪಡೆದರೆ ಕರುಬುವುದೇಕೆ?   ಒಂದಂತು ನಿಜ, ಮನುಸ್ಮೃತಿ ಸ್ವಯಂಭೂ (ದೈವ ಸ್ವರೂಪಿ) ಇರಬಹುದು. ಆದರೆ ಭಾರತದ ಸಂವಿಧಾನ ಮತ್ತು ಶೋಷಿತರಿಗೆ ಅದು ನೀಡಿರುವ ಹಕ್ಕುಗಳು? ಮಹಾಮಾನವ ಅಂಬೇಡ್ಕರ್ ಸ್ವರೂಪಿ. ಹಾಗಿದ್ದರೆ ಇಲ್ಲಿ ಯಾರು ಗ್ರೇಟ್? ದೈವ ಅಥವಾ ಮಾನವ? Man is always great. Because he is the creator of god!
ರಘೋತ್ತಮ ಹೊ.ಬ

ಸದಾನಂದ ಗೌಡ ಸಂಪುಟ ಹೊರೆ ಸಮಗ್ರ ವಿವರ

 Sadananda Gowda Cabinet Ministers Portfolio Re Shuffle

ಬೆಂಗಳೂರು, ಮೇ.7: ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ, ಖಾತೆ ಹಂಚಿಕೆ, ಸಂಪುಟ ವಿಸ್ತರಣೆ ಇನ್ನೊಂದು ವಾರದಲ್ಲೇ ಆಗಲಿದೆ ಎಂದು ಸೋಮವಾರ(ಮೇ.7) ಮತ್ತೊಮ್ಮೆ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ವಿದೇಶಿ ಪ್ರವಾಸದಲ್ಲಿರುವುದರಿಂದ ಸಂಪುಟ ವಿಸ್ತರಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಕಮ್ಮಿ ಎನ್ನಬಹುದು.

'ಕತ್ತೆಯೂ ಹೊರದಷ್ಟು ಭಾರ ನಾನು ಹೊತ್ತಿದ್ದೇನೆ. ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭದ ಮಾತಲ್ಲ. ಎಲ್ಲಾ ಖಾತೆಗಳಿಗೂ ನ್ಯಾಯ ಸಲ್ಲಿಸಲಾಗುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಅನಿವಾರ್ಯ' ಎಂದು ಸದಾನಂದ ಗೌಡ ಹೇಳಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಿಟಿ ರವಿ ಅವರು ಸಹಿ ಸಂಗ್ರಹ ಕಾರ್ಯ ಮುಗಿಸಿದ್ದು, ಸೋಮವಾರ(ಮೇ.7) ಪಕ್ಷದ ಹಿರಿಯ ನಾಯಕರಿಗೆ ನೀಡುವ ಸಾಧ್ಯತೆಯಿದೆ. ಪಕ್ಷ ನಿಷ್ಠ ಶಾಸಕರು, ಸಚಿವರು ಪಕ್ಷದ ಸಂಘಟನೆಯಲ್ಲಿ ತೊಡಗಲಿ, ಕುರ್ಚಿ ಬಿಟ್ಟು ಬರಲಿ ಎಂದು ಮನವಿ ಸಲ್ಲಿಸುತ್ತಿದ್ದಾರೆ.

Flash Back : ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಶಾಸಕರನ್ನು ಒಟ್ಟುಗೂಡಿಸಿ ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಡಿವಿ ಸದಾನಂದ ಗೌಡರು ಸೇರಿಸಿಕೊಂಡಿದ್ದು ಇಲ್ಲಿ ಸ್ಮರಿಸಬಹುದು.

ಕ್ಯಾಬಿನೆಟ್ ಸಚಿವರು ಅವರ ಕ್ಷೇತ್ರ ಹಾಗೂ ಖಾತೆ ವಿವರ ಹೀಗಿದೆ:

ಸಚಿವರ ಹೆಸರುಕ್ಷೇತ್ರಖಾತೆ
ಡಿ.ವಿ. ಸದಾನಂದ ಗೌಡ-ಹಣಕಾಸು, ಕಂದಾಯ, ಗುಪ್ತಚರ, ಆರೋಗ್ಯ, ಗಣಿಗಾರಿಕೆ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮುಜರಾಯಿ, ಮೂಲ ಸೌಕರ್ಯ, ಯುವಜನ ಸೇವೆ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ಪರಿಸರ, ಮೀನುಗಾರಿಕೆ, ಯೋಜನೆ, ವಾರ್ತಾ ಇಲಾಖೆ, ಬೆಂಗಳೂರು ಅಭಿವೃದ್ಧಿ, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಕ್ಫ್ ಮತ್ತು ಹಜ್ ಇಲಾಖೆ ಬಾಕಿ ಉಳಿದ ಎಲ್ಲಾ ಖಾತೆಗಳು
ಗೋವಿಂದ ಕಾರಜೋಳಮುಧೋಳಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ,
ದಿ. ವಿ.ಎಸ್. ಆಚಾರ್ಯವಿಧಾನಪರಿಷತ್ ಸದಸ್ಯ-
ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪಹಾನಗಲ್PWD, ಬಂದರು ಖಾತೆ ಹೊರತು ಪಡಿಸಿ
ಜಗದೀಶ್ ಶೆಟ್ಟರ್ಹುಬ್ಬಳ್ಳಿಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಗ್ರಾಮೀಣ ನೀರು ಪೂರೈಕೆ
ಆರ್ ಅಶೋಕ್ಪದ್ಮನಾಭ ನಗರಗೃಹ(ಗುಪ್ತಚರ, ಬಂದೀಖಾನೆ ಹೊರತುಪಡಿಸಿ), ಸಾರಿಗೆ
ನಾರಾಯಣಸ್ವಾಮಿಆನೇಕಲ್ಅಲ್ಪಸಂಖ್ಯಾತ ಸಮಾಜ ಕಲ್ಯಾಣ, ಬಂದೀಖಾನೆ
ವಿಶ್ವೇಶ್ವರ ಹೆಗಡೆ ಕಾಗೇರಿಶಿರಸಿಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಹೊರತು ಪಡಿಸಿ
ಬಿಎನ್ ಬಚ್ಚೇಗೌಡಹೊಸಕೋಟೆಕಾರ್ಮಿಕ ಖಾತೆ, ರೇಷ್ಮೆ
ಸುರೇಶ್ ಕುಮಾರ್ರಾಜಾಜಿನಗರಕಾನೂನು
ಎಸ್ ಎ ರವೀಂದ್ರನಾಥ್ದಾವಣಗೆರೆ ಉತ್ತರಸಕ್ಕರೆ, ತೋಟಗಾರಿಕೆ ಹಾಗೂ ಕೃಷಿ
ಎಸ್ ಎ ರಾಮದಾಸ್(ಮೈಸೂರು)ವೈದ್ಯಕೀಯ ಶಿಕ್ಷಣ(ಆರೋಗ್ಯ ಖಾತೆಯಿಂದ)
ಮುರುಗೇಶ್ ನಿರಾಣಿಬಿಳಗಿಮಧ್ಯಮ ಹಾಗೂ ಭಾರಿ ಕೈಗಾರಿಕಾ
ಶೋಭಾ ಕರಂದ್ಲಾಜೆಯಶವಂತಪುರಇಂಧನ, ಆಹಾರ ಮತ್ತು ನಾಗರಿಕ ಸೌಲಭ್ಯ ಪೂರೈಕೆ
ಉಮೇಶ್ ಕತ್ತಿಚಿಕ್ಕೋಡಿಕೃಷಿ
ರೇಣುಕಾಚಾರ್ಯಹೊನ್ನಾಳಿಅಬಕಾರಿ
ಬಸವರಾಜ್ ಬೊಮ್ಮಾಯಿಹಾವೇರಿನೀರಾವರಿ
ರೇವೂನಾಯಕ್ ಬೆಳಮಗಿಗುಲಬರ್ಗ ಗ್ರಾಮೀಣಗ್ರಂಥಾಲಯ, ಸಣ್ಣ ಉಳಿತಾಯ, ಹೈನುಗಾರಿಕೆ
ಸಿಸಿ ಪಾಟೀಲ್ನರಗುಂದ-ಸಂಪುಟದಿಂದ ಕೈ ಬಿಡಲಾಗಿದೆ
ಲಕ್ಷ್ಮಣ್ ಸವದಿಅಥಣಿ-ಸಂಪುಟದಿಂದ ಕೈ ಬಿಡಲಾಗಿದೆ
ಕೃಷ್ಣ ಪಾಲೇಮಾರ್ಮಂಗಳೂರು ಉತ್ತರ-ಸಂಪುಟದಿಂದ ಕೈ ಬಿಡಲಾಗಿದೆ
ವಿ ಸೋಮಣ್ಣವಿಧಾನಪರಿಷತ್ ಸದಸ್ಯವಸತಿ
ಬಾಲಚಂದ್ರ ಜಾರಕಿಹೊಳಿಅರಬಾವಿಪೌರಾಡಳಿತ
ಆನಂದ್ ಆಸ್ನೋಟಿಕರ್ಕಾರವಾರಐಟಿಬಿಟಿ, ವಿಜ್ಞಾನ ತಂತ್ರಜ್ಞಾನ
ಸಿ.ಪಿ ಯೋಗೀಶ್ವರ್ಚನ್ನಪಟ್ಟಣಅರಣ್ಯ
ನರಸಿಂಹ ನಾಯಕ(ರಾಜೂ ಗೌಡ)ಸುರಪುರಸಣ್ಣ ಕೈಗಾರಿಕೆ
ವರ್ತೂರು ಪ್ರಕಾಶ್ಕೋಲಾರಜವಳಿ
Posted by:
ಕೃಪೆ : ಒನ್ ಇಂಡಿಯಾ, ಕನ್ನಡ

ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು...


೧೯೯೨ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.

ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ.ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕರ್ಷಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆವಿಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.

ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಟ್ಯಾಗ್‌ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.

ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚರ್ಚೆಗಳು ೧೯೯೬ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಾಯ್‌ನೀರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.

ಒಬ್ಬ ದಲಿತನೂ ಸಿಗಲಿಲ್ಲ...
ನಾನು ೨೦೦೦ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ ೨೦೦೬ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.

ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್‌ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟುಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.

ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು ೧೯೨೦ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆರ್ಥಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚರ್ಚ್‌ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.

ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್‌ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.

ಎರಡು ಸಲಹೆಗಳು...
ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು.೧೯೭೮ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ‍್ಸ್(ಂSಓಇ) ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೩೦ರಷ್ಟಿದ್ದರೂ ಆ ವರ್ಷ ಶೇಕಡಾ ೪ರಷ್ಟು ಕಪ್ಪು ವರ್ಣೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. ೨೦೦೦ದ ಹೊತ್ತಿಗೆ ಗುರಿ ಶೇಕಡಾ ೨೦ ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. ೨೦೧೧ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವರ್ಣೀಯರು ಶೇಕಡಾ ೧೩ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ ೩೬ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾದವರು ಸೇರಿದ್ದಾರೆ. ಈಗ ಂSಓಇ ತನ್ನ ಗುರಿಯನ್ನು ೨೦೨೦ಕ್ಕೆ ನಿಗದಿಪಡಿಸಿಕೊಂಡಿದೆ.

ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.

ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್‌ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್‌ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.

ನವಯಾನಗಳು ಬೇಕು...
ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆರ್ಥಿಕ ಬೆಂಬಲದಿಂದ ಟ್ರಸ್ಟ್‌ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸರ್ಕಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್‌ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.

ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? ೧೯೬೭ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. ೧೯೭೦ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ ೩೮ ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.

ಇಂಡಿಯಾದ ಟಿ.ವಿ. ಚಾನಲ್‌ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.

ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪೂರ್‌ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು ೩೧ನೇ ಮಾರ್ಚ್ ೨೦೧೨ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ)

-ರಾಬಿನ್ ಜೆಫ್ರಿ
-ಕನ್ನಡಕ್ಕೆ: ಕೆ.ಎಲ್.ಚಂದ್ರಶೇಖರ್ ಐಜೂರ್

ಬುದ್ಧ ಜಯಂತಿ

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದಿಂದ ಧಾರವಾಡದಲ್ಲಿ ಸ್ಥಾಪನೆಯಾದ ಬುದ್ಧ ರಖ್ಖಿತ ಶಾಲೆಯಲ್ಲಿ ಬುದ್ಧ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ನಾನು ಮತ್ತು ಡಾ. ಹಾಜವಗೋಳ ಹಾಜರಿದ್ದು ಮಾತನಾಡಿದೇವು. ಆನಂತರ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಕ್ಕದಲ್ಲಿರುವ ಡಾ. ಬಾಬಾಸಾಹೇಬ ಅಂಬೆಡ್ಕರ್ ಅವರು ಮೂರ್ತಿಗೆ ಹೂಮಾಲೆ ಹಾಕಿ ನಮನ ಸಲ್ಲಿಸಲಾಯಿತು.

Thursday, May 03, 2012

ಈ ದೇಶದ ಕಥೆ ಇಷ್ಟೆ ..... !

ಎಂಥ ಚೆಂದಿತ್ತ ಹಿಂದೂಸ್ತಾನ ಹಿಂಗ್ಯಾಕಾಯಿತೋ ಮೈಲಾರದೇವಾ
ದೇವರು ಹುಟ್ಟಿದ ಭೂಮಿಯ ಮ್ಯಾಲ ರಾಕ್ಷಸರವತಾರೋ ಮೈಲಾರದೇವಾ !

-ಪೋಲೀಸ್ ಪಾಟೀಲರ ಲಾವಣಿಯಿಂದ ಆಯ್ದುಕೊಂಡ ಸಾಲುಗಳು

Tuesday, May 01, 2012

ಉಸ್ಮಾನಿಯ ವಿಶ್ವವಿದ್ಯಾಲಯ : ದನದ ಮಾಂಸದ ತಿನಿಸಿನ ಉತ್ಸವ ಮತ್ತು ವಿರೋಧಿಗಳಿಗೆ ಉತ್ತರ !

Jayapal Hiriyalu ಹೇಳಿದ್ದು,
ಮೊನ್ನೆ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ದನದ ಮಾಂಸದ ತಿನಿಸಿನ ಉತ್ಸವ ಮಾಡಿದ ವಿದ್ಯಾರ್ಥಿಗಳನ್ನ ಮನಸೋ ಇಚ್ಚೆ ಥಳಿಸಲಾಗಿದೆ. ಕೆಲವು Professorsಗಳಿಗೆ ಪೋಲಿಸರ ಕಿರುಕುಳ ಶುರುವಾಗಿದೆ. ಅಂದು ಆಹಾರ ಉತ್ಸವದಲ್ಲಿ ಪಾಲ್ಗೊಂಡವರಾರು ಬಲವಂತದಿಂದ ಹೋದವರಲ್ಲ. ದನದ ಮಾಂಸವನ್ನ ಸೇವಿಸುವುದು ಕೂಡ ಆಹಾರ ಸಂಸ್ಕೃತಿ. ಅವರವರ ಪರಂಪರಾಗತ ಆಹಾರ ಪದ್ದತ್ತಿಯನ್ನ ಮುಂದುವರೆಸುವುದರಲ್ಲಿ ತಪ್ಪೇನಿದೆ. ತಿನ್ನುವ ಆಹಾರದಲ್ಲಿ ಧರ್ಮ ಬೆರೆಸುವ, ಯಜಮಾನ್ಯತೆ ತೋರಿಸುವ ವೈದಿಕ ಗೂಂಡಾಗಿರಿಗೆ ಧಿಕಾರವಿರಲಿ. ನಾಲ್ಕು ಜನ ಒಟ್ಟಿಗೆ ಕುಳಿತುಕೊಂಡು ತಮಗೆ ಇಷ್ಟವಾದ ಆಹಾರ ಸ್ವೀಕರಿಸುವುದಕ್ಕೆ ಆಗುವುದುದಿಲ್ಲವೆಂದರೆ ನಾವು ದೇಶವಾದರು ಹೇಗಾದೇವು....? ಇಂದು ವೈದಿಕರು ತಮ್ಮ ಗೂಂಡಾಗಿರಿಗೆ ಬಳಸಿಕೊಳ್ಳುತ್ತಿರುವುದು ಶೂದ್ರ ಸಮೌದಾಯಗಳನ್ನೆ. ಶೂದ್ರರ ದಬ್ಬಾಳಿಕೆ ರೂಕ್ಷ ಮತ್ತು ಭೌತಿಕ ನೆಲೆಗಟ್ಟಿನಲ್ಲಿರುವಂತದ್ದು, ಆದರೆ ವಂಚನೆಯನ್ನ, ಶೋಷಣೆಯನ್ನ ಬೌದ್ಧಿಕವಾಗಿ ಸಮರ್ಥಿಸಿ ಜೀವಂತವಗಿಡುವ ಸಾಮರ್ಥ್ಯವಿರುವುದು ಈ ವೈದಿಕರಿಗೆ ಮಾತ್ರ ಮತ್ತು ಈ ಮಾರ್ಗದ ಮುಖಾಂತರವೇ ಅಸಂಖ್ಯ ಶೂದ್ರರನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರಗತಿಪರರ ಮೇಲೆ ಮತ್ತು ದಲಿತರ ಮೇಲಿನ ತಮ್ಮ ಕಾರ್ಯಾಚರಣೆಯನ್ನ ಶೂದ್ರರ ಮುಖಾಂತರ ಮಾಡಿಸುತ್ತಿದ್ದಾರೆ. ಥೂ ಇದು ಒಂದು ವ್ಯವಸ್ಥೆಯಾ...!!
ಈ ಅಭಿಪ್ರಾಯಕ್ಕೆ Reginald Soans ಅವರು 
Lord Ram has been replaced by the holly cow, to beat and subjugate the very people who were subjected to oppresion and humiliation for thousands of years, by the grass eating primitives! In the present prevailing socio-political senario in this country, cow has become a deadly weapon in the hands of communal reactionary foces who are hell- bent on turning the clock back. Cow seems to be a double edged weapon against Dalits, minorities and starving shudras as well! Real tregedy of this country is that so called secular state is colluding with the barbarians. Incidentally beef is being eaten by 4/5 of the people world over including this country! ಎಂಬ ಸೂಕ್ತವಾದ ವಿಷಯವೊಂದನ್ನು ಪ್ರತಿಪಾದಿಸಿದ್ದರು.

ಈ ವಿಷಯವನ್ನೇ ಇಟ್ಟುಕೊಂಡು ಕಾಮೇಂಟ್ ಬರೆದಿರುವ  ಭರತ್ ಚಂದ್ರಶೇಕರ್ ಜೈರಾಮ್ ಎನ್ನುವವರು ನಿಮ್ಮ ಸ್ವಾತಂತ್ರದ ಮಾತು ನಿಜ. ಇದಕ್ಕೆ (ಸ್ವತಂತ್ರಕ್ಕೆ) ಅಡ್ಡಿ ಎಂದು ಬರಬಾರದು. ನಾನು ಮಾಂಸಹಾರಿ ವಿರೋದಿಯಲ್ಲ.

ಈ ಘಟನೆ ವೈದಿಕರ ಶೋಷಣೆಯ ವಿಷೆಯ ಹೇಗಾಯಿತು?

ಇದು ರಾಜಕೀಯ ವಿಷೆಯ. ಇಲ್ಲಿ ಸೂಕ್ಷ್ಮತೆಯಿಂದ ವಿಷೆಯವನ್ನು ನೋಡಬೇಕು. ಈ ಘಟನೆ ಒಂದು ರಾಜಕೀಯವಾಗಿ ಪ್ರೆರೆಪಿತಗೊಂಡ ಘಟನೆ. ಇದಕ್ಕೆ ಕುಮಕ್ಕು ಕೊಟ್ಟು ನಡೆಸಿದವರು ಇದ್ದಾರೆ. ಇದನ್ನು ತೋರಿಕೆಗಾಗಿ ಮಾಡಿದವರು ಇದ್ದಾರೆ. ಇವರಿಗೆಲ್ಲ ಸ್ತಳಿಯ ರಾಜಕೀಯಕ್ಕೆ ಒಂದು ವಿಷೆಯ ಬೇಕಿತ್ತು ಇದನ್ನು ಹಿಡ್ಕೊಂದರು.

ನಮಲ್ಲಿ ಅನಾದಿಕಾಲದಿಂದ ಗೋ ಮಾಂಸ ಜನ ತಿನ್ನುತ್ತಿದರೆ. ಇದಕ್ಕೆ ಈಗ್ಯಾಕೆ ವಿರೋದ? ವಿಷೆಯ ರಾಜಕಿಯವಗಿದಕ್ಕೆ ಅಷ್ಟೇ.

ಗಮನಿಸಿ - ನಮಲ್ಲಿ ಗೋ ಮಾಂಸ ತಿನ್ನುವ ಕ್ರಮ ಬೇರೆ. ಗೋವು ಸತ್ತರೆ ಅದನ್ನು ಕಡಿದು ತಿನುತ್ತಾರೆ. ಗೋವನ್ನು ಕೊಂದು ಎಂದು ತಿಂದಿಲ್ಲ. ವಿಷೆಯ ಇರುವುದು ಇಲ್ಲಿ. ಗೋವನ್ನು ಕಡಿಯಬಾರದು ಅನ್ನೋ ಒಂದು ನಂಬಿಕೆ. ಗೋ ಮಾಂಸ ತಿನ್ನೋದಕ್ಕಲ್ಲ. ಹಾಗೇನೆ ನಾವು ಮಂಗನನ್ನು ಕೊಲ್ಲೊಲ್ಲ. ಇದು ನಮ್ಮ ವಾಡಿಕೆ.

ಕಲ್ಲು ಕಂಡರೆ ವಿಗ್ರಹ ಕಾಣೋಲ್ಲ, ವಿಗ್ರಹ ಕಂಡರೆ ಕಲ್ಲು ಕಾಣೋಲ್ಲ. ಗೋವು ಪೂಜ್ಯನಿಯವಾಗಿ ಕಂಡರೆ ಬರಿ ಮಾಂಸದ ಮುದ್ದೆಯಾಗಿ ಕಾಣೋಲ್ಲ. ಬರಿ ಮಾಂಸದ ಮುದ್ದೆಯಾಗಿ ಕಂಡರೆ ಪೂಜ್ಯನಿಯವಗೋಲ್ಲ. ಅದಕ್ಕೆ ಗೋ ಹತ್ತ್ಯೆ ಮಾಡೋಲ್ಲ. ಆದರೆ ಅದು ನೈಸರ್ಗಿಕವಾಗಿ ಸತ್ತ ಮೇಲೆ ಅದನ್ನು ತಿನ್ನಬಹುದು. ಅದರ ಚರ್ಮ ಬಳಸಬಹುದು...... ಎಂದೆಲ್ಲ ಹೇಳಿದ್ದಾರೆ. ಆದರೆ ಈ ಮಾತಿಗೆ ನನ್ನ ವಿರೋಧವಿದೆ. ಅದಕ್ಕೆ ನಾನೂ ಜಯಪಾಲ ಅವರ ವಿಚಾರಕ್ಕೆ ಪೂರಕವಾಗಿಯೇ ಕಾಮೆಂಟ್ ಮಾಡಿದೆ.

ಭರತ್ ಚಂದ್ರಶೇಕರ್ ಜೈರಾಮ್ ಹೇಳಿದ್ದು ನಾನು ಒಪ್ಪೋದಿಲ್ಲ. ತಿನ್ನದವರು ಬೇಡ ಅಂತಾರೆ. ತಿನ್ನುವರಿಗೆ ಅದು ಹೊಟ್ಟೆಯ ಸಮಸ್ಯೆ. ಸತ್ತದ್ದನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ್ಳೆಯದನ್ನೇ ಆರಿಸಿ ಮಾಂಸ ಮಾಡಿ ತಿನ್ನಬೇಕು. ಇಲ್ಲಾಂದ್ರೆ ರೋಗ ಬರುತ್ತೆ ! ನೀವೇ ಹೇಳಿ, ಗಿಡ-ಮರ-ಸಸ್ಯಗಳಲ್ಲೂ ಜೀವ ಇದೆ ಅನ್ನೋದು ವೈಜ್ಞಾನಿಕವಾಗಿ ಸತ್ಯವಾದ ಮಾತಾಗಿದೆಯಲ್ಲವೆ ? ಹಾಗಾಗಿ ಅಲ್ಲಿಯೂ ನಮಗೆ ಪೂಜ್ಯನೀಯ ಎನಿಸುವ ಗಿಡ-ಮರ-ಸಸ್ಯಗಳಿಲ್ಲವೆ ! ತುಳಸಿಯನ್ನು ನಾವು ಎಷ್ಟೊಂದು ಪೂಜೆ ಮಾಡುತ್ತಾವೆ ನಿಮಗೆ ಗೊತ್ತು. ಆದರೆ ಅದರ ಎಲೆಗಳನ್ನು ಹರಿದು ಔಷಧಿಗೆ ಉಪಯೋಗಿಸುವುದು ಕೂಡ ಗೋ ಮಾಂಸ ತಿಂದಂತೆಯಲ್ಲವೆ ? ಇಲ್ಲಿ ತರಕಾರಿ ಇತ್ಯಾದಿಗಳಲ್ಲೂ ಜೀವ ಇರುತ್ತದೆ. ಅವುಗಳನ್ನೂ ತಾಜಾ ಇದ್ದಾಗಲೇ ಮುರಿದು ತಂದು ತಿನ್ನೋದಿಲ್ವೆ. ಅದೂ ಮಹಾಪಾಪವೇ ಅಲ್ವೆ ? ಸತ್ತ ಮೇಲೆ ತಿನ್ನಬೇಕು ಅಂದ್ರೆ ತರಕಾರಿ ಬೆಳೆದು, ಅದರ ಆಯಸ್ಸು ತೀರಿದ ಮೇಲೆ ಮುರಿದು ತನ್ನಷ್ಟಕ್ಕೆ ತಾನೇ ಬೀಳುತ್ತಲ್ಲ, ಆವಾಗ ತಿನ್ನಬಹುದೇ ? ತಾಜಾ ತಾಜಾನೇ ಯಾಕೆ ಬೇಕು ? ಆದ್ದರಿಂದಲೇ ಹೇಳೋದು ಇನ್ನೊಬ್ಬರ ಆಹಾರದ ಬಗ್ಗೆ ಮಾತನಾಡಬಾರದು. ಯಾರು ಏನು ತಿನ್ನುತ್ತಾರೋ ಅದು ಅವರ ಆಹಾರ ಪದ್ಧತಿಯೇ ಆಗಿರುತ್ತದೆ. ಇದರಲ್ಲಿ ರಾಜಕೀಯ ಏನೂ ಇಲ್ಲ. ಸೋಗು ಹಾಕಿಕೊಂಡು ತನ್ನ ಹಿಂದಿನ ಇತಿಹಾಸ ಮರೆತು ಮೆರೆಯುತ್ತಿರುವ ಹಿಂದೂ ಧರ್ಮವೇ ನೇರ ಕಾರಣ. ಯಾವುದಕ್ಕೂ ವಿಚಾರ ಮಾಡಿ !
ಡಾ. ಸಿದ್ರಾಮ ಕಾರಣಿಕ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.