ಡಾ. ಸಿದ್ರಾಮ ಕಾರಣಿಕ
‘ಪ್ರಜಾಪ್ರಭುತ್ವವು ಸಫಲವಾಗಬೇಕಾದರೆ ಸಮಾಜದಲ್ಲಿ ಕಣ್ಣು ಕುಕ್ಕುವ ಅಸಮಾನತೆ ಇರಬಾರದು. ದಬ್ಬಾಳಿಕೆ ಮಾಡುವ ವರ್ಗವಿರಬಾರದು. ದಮನಕ್ಕೆ ಒಳಗಾದ ವರ್ಗವೂ ಇರಬಾರದು. ಎಲ್ಲ ಸೌಲಭ್ಯಗಳನ್ನು ಹೊಂದಿ ಬರೀ ಸುಖದಲ್ಲೇ ಇರುವಂಥವರೂ ಇರಬಾರದು ಮತ್ತು ಕೇವಲ ಕಷ್ಟಗಳನ್ನೇ ಅನುಭವಿಸುವಂಥವರೂ ಇರಬಾರದು’ ಎನ್ನುವ ಮೂಲಕ ಸಾಮಾಜಿಕ ಸಮಾನತೆಯ ಕ್ರಾಂತಿಯನ್ನು ಮೊಳಗಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರರು ನೆನಪಾಗುವುದು ಅವರ ಕ್ರಾಂತಿಯ ಇಂಥ ನಡೆ ಮತ್ತು ನುಡಿಗಳಿಂದಲೇ. ನೋವಿನಲ್ಲೂ ನಲಿವು ಕಂಡ ಈ ದೇಶದ ಮಹಾನ್ ಪುರುಷ ಅವರು. ಸುಸಂಬದ್ಧವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ ಮಹಾನ್ ಚೇತನ ಅವರು. ಸ್ವಾಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಕೆಚ್ಚೆದೆಯ ಹೋರಾಟಗಾರ ಅವರು. ಅವರ ದಿಟ್ಟತನದ ಹೋರಾಟ, ದಣಿವರಿಯದ ಚಳುವಳಿ ಇಂದಿಗೂ ಹೋರಾಟಗಾರರ ದಾರಿದೀಪ.
ಇಂಥ ಹೋರಾಟಗಾರನ ಬದುಕಿನಲ್ಲಿ ಬಹುಪಾಲು ನೋವುಗಳೇ ತುಂಬಿದ್ದವು. ಅವು ಯಾವಾಗಲೂ ಅವರನ್ನು ಕಾಡುತ್ತಲೇ ಇದ್ದವು. ಕೆಲವು ಸಲ ಅವರು ಮಾನಸಿಕವಾಗಿ ಜರ್ಜಿರಿತರಾಗಿದ್ದರು. 1908 ರಲ್ಲಿ ಮಾತೋಶ್ರೀ ರಮಾಯಿಯೊಂದಿಗೆ ವಿವಾಹವಾಯಿತು. ಮುಂದೆ ಹುಟ್ಟಿದ ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಒಂದು, ಒಂದುವರೆ ವರ್ಷಗಳಲ್ಲೇ ತೀರಿಕೊಂಡಿದ್ದು ಅವರಿಗೆ ಆಘಾತವನ್ನುಂಟು ಮಾಡಿತ್ತು. ಮೊದಲ ಮಗ ಯಶವಂತನನ್ನು ಹೊರತುಪಡಿಸಿದರೆ, ರಮೇಶ, ಇಂದುಮತಿ, ಗಂಗಾಧರ, ರಾಜರತ್ನ ಇನ್ನಿಲ್ಲವಾಗಿದ್ದರು. ಹಾಗಾಗಿಯೇ ಯಶವಂತನನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಯಾವುದಕ್ಕೂ ಹೆಚ್ಚು ಒತ್ತಾಯಿಸಲಿಲ್ಲ. ಇರುವ ಒಬ್ಬ ಮಗನಾದರೂ ಕಣ್ಣಮುಂದೆ ಸುಖವಾಗಿ ಇರಲಿ ಎಂಬುದು ಅವರ ಆಶಯವಾಗಿತ್ತು. 1935 ರಲ್ಲಿ ಮಾತೋಶ್ರೀ ರಮಾಯಿ ತೀರಿಕೊಂಡಾಗಲಂತೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ತಾನು ನೆಚ್ಚಿದ ಹೆಂಡತಿ, ತನ್ನನ್ನು, ತನ್ನ ಸಂಸಾರವನ್ನು ಸಂಭಾಳಿಸಿದ ಮಹಾಮಾತೆ ಇನ್ನಿಲ್ಲವಾದಾಗ ಅವರ ರೋಧನ ಮುಗಿಲು ಮುಟ್ಟಿತ್ತು. ಎಷ್ಟೋ ಸಲ ರಮಾಯಿಯನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಹೋಗಿ ಮನಸ್ಸು ಬಿಚ್ಚಿ ಕಣ್ಣೀರು ಹಾಕುತ್ತಿದ್ದರು. ಆನಂತರದಲ್ಲಿ ಸುಧಾರಿಸಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಮತ್ತೇ ಹೋರಾಟದ ಹಾದಿಗೆ ಮರಳಿದರು.
ದಲಿತರು ಸ್ವಾಭಿಮಾನಿಯಾಗಿ ಬದುಕಬೇಕು. ಸಾಮಾಜಿಕವಾಗಿ ಸಮಾನತೆಯಿಂದ ನಳಿನಳಿಸಬೇಕು ಎಂಬ ವಿಚಾರದಿಂದ ಬಿಡುವಿಲ್ಲದ ಹೋರಾಟ ಅವರದಾಗಿತ್ತು. ಕೆಲವು ಸಂಘಟನೆಗಳನ್ನು ಕಟ್ಟಿ ಬೆಳೆಸಿದಂತೆ ರಾಜಕೀಯ ಪಕ್ಷಗಳನ್ನೂ ಕಟ್ಟಿದರು. ಕೇಂದ್ರ ಸರಕಾರದಲ್ಲಿ ಮಂತ್ರಿಯೂ ಆದರು. ಆದರೆ ಪಟ್ಟಭದ್ರರ ಸಚಿವ ಸಂಪುಟದಲ್ಲಿ ಅವರು ಬಹಳ ಕಾಲ ಇರಲಾಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಂಪ್ರದಾಯಿಕ ಜನರನ್ನು ಅವರು ಎದುರಿಸಿದರು. ಇನ್ನೊಂದು ಮಹತ್ವದ ವಿಚಾರವೆಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಜೊತೆ ಹೆಜ್ಜೆ ಹಾಕಬೇಕಾದ ಎಷ್ಟೋ ದಲಿತ-ದಮನಿತರೂ ದ್ವೇಷವನ್ನು ಸಾಧಿಸತೊಡಗಿದ್ದು ! ಎರಡೂ ಕಡೆಯ ವಿರೋಧಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ತಕ್ಕ ಪ್ರತಿಕ್ರಿಯೆ ನೀಡುತ್ತಲೇ ದೃಢವಾಗಿ ನಿಂತರು. ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿರುದ್ಧ ನಿರಂತರವಾಗಿ ಮಸಲತ್ತು ನಡೆಸಿಯೇ ಇದ್ದರು. ಆದರೆ ಯಾವುದಕ್ಕೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಧೃತಿಗೆಡಲಿಲ್ಲ. ಆದರೂ ಚುನಾವಣೆಗಳಲ್ಲಿ ಅವರು ಸೋಲು ಅನುಭವಿಸಬೇಕಾಯಿತು.
ಈ ಎಲ್ಲ ಸಂಗತಿಗಳ ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಆರ್ಥಿಕ ಪರಿಸ್ಥಿತಿ ಕೂಡ ತುಂಬ ಹದಗೆಟ್ಟಿತ್ತು. ಆದರೂ ಹೋರಾಟದ ಹಾದಿಯನ್ನು ಬಿಡದೇ ಸಾಲ ಮಾಡಿಕೊಂಡೇ ದಲಿತ-ದಮನಿತರ ಹಕ್ಕಿಗಾಗಿ ಹೋರಾಟ ನಡೆಸಿದರು ; ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ದಲಿತ-ದಮನಿತರ ಆಶಾಕಿರಣವಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 6ನೆಯ ಡಿಸೆಂಬರ್ 1956 ರಂದು ದೆಹಲಿಯಲ್ಲಿ ತೀರಿಕೊಂಡಾಗ ಅವರು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಐದು ವರ್ಷಗಳೂ ಗತಿಸಿರಲಿಲ್ಲ. ಅವರ ಪಾರ್ಥಿವ ಶರೀರವನ್ನು ಮುಂಬಾಯಿಗೆ ತೆಗೆದುಕೊಂಡು ಹೋಗಲು ಮನೆಯಲ್ಲಿ ಹಣವೇ ಇರಲಿಲ್ಲ ! ಈ ದೇಶದ ಸಂವಿಧಾನ ರಚಿಸಿದ ಮಹಾನ್ ಚಿಂತಕ ಎಂಬುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದ ಅಂದಿನ ಸಾರಿಗೆ ಮತ್ತು ಸಂಪರ್ಕ ಖಾತೆಯ ಮಂತ್ರಿಗಳು ದೇಹ ಸಾಗಿಸಲು ಹಣ ಬರಿಸುವಂತೆ ಕೇಳಿದ್ದರು ; ಆ ಮಂತ್ರಿ ಕೂಡ ದಲಿತರೇ ಆಗಿದ್ದರು ಎಂಬುದು ಮಾತ್ರ ಇತಿಹಾಸದ ವ್ಯಂಗ್ಯ ! ಇದು ಈ ದೇಶದ ರಾಜಕೀಯ ಸಂವಿಧಾನಶಿಲ್ಪಿಗೆ ತೋರಿದ ಅಗೌರವ ಕೂಡ.
‘ಜನರು ಆದರ್ಶಗಳಿಗಾಗಿ ಭವಿಷ್ಯದತ್ತ ನೋಡುವ ಬದಲು ಇತಿಹಾಸದತ್ತ ನೋಡಬೇಕು. ಜನರು ಸ್ವತಂತ್ರವಾಗಿ ಚಿಂತನೆ ಮಾಡದೆ, ಅನುಭವಗಳಿಂದ ಪಾಠ ಕಲಿಯದೇ ಕರಾಳಮಾರ್ಗದಲ್ಲಿ ನಡೆಯುತ್ತಿರುವುದು ಅಜ್ಞಾನವೇ ಸರಿ. ಇದು ಪ್ರಜಾಪ್ರಭುತ್ವದ ದುರಂತ’ ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಮಾತುಗಳು ಇಂದಿಗೂ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಬಲ್ಲವು.
ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಕ್ರಾಂತಿಸೂರ್ಯ. ತಮ್ಮನ್ನೇ ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡಿದ ನಿಜಸೂರ್ಯ. 65ನೆಯ ವಯಸ್ಸಿನಲ್ಲಿಯೇ ಅವರ ಮಹಾಪರಿನಿರ್ವಾಣವಾಯಿತು. ಕ್ರಾಂತಿಸೂರ್ಯ ಅಸ್ತಂಗತನಾದಾಗ ದಲಿತ-ದಮನಿತರ ಪಾಲಿಗೆ ಕತ್ತಲೆ ಕವಿಯಿತು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿಚಾರಗಳು ಇಂದಿಗೂ ನಮ್ಮೆಲ್ಲರ ಪಾಲಿನ ಸ್ಫೂರ್ತಿಯ ಸೆಲೆಗಳಾಗಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದುಕೊಳ್ಳುವ ಮನಸ್ಸು ನಮ್ಮದಾಗಬೇಕು.
No comments:
Post a Comment