ಜಿ.ಪಿ.ಬಸವರಾಜು
'ಸರ್, ನಿಮ್ಮಿಂದ ಒಂದು ಶಿಫಾರಸು ಪತ್ರ ಬೇಕು. ರಾಜ್ಯೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಸಲ್ಲಿಸುತ್ತಿದ್ದೇನೆ.’
ಇದು ಕಂಪನಿ ನಾಟಕದ ನುರಿತ ಕಲಾವಿದರೊಬ್ಬರು ಗಣ್ಯ ಸಾಹಿತಿಯೊಬ್ಬರ ಮುಂದಿಟ್ಟ ಬೇಡಿಕೆ ! ಈ ಕಲಾವಿದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರೇ. ಆದರೆ ಒಂದು ಪ್ರಶಸ್ತಿಗಾಗಿ ಶಿಫಾರಸು ಮಾಡುವುದು, ಶಿಫಾರಸಿನ ಆಧಾರದ ಮೇಲೆ ಪ್ರಶಸ್ತಿ ಸಿಕ್ಕುವುದು ಎರಡೂ ಸರಿಯಾದ ಕ್ರಮ ಅಲ್ಲ ಎನ್ನುವುದು ಸಾಹಿತಿ ಮಿತ್ರರ ಅಭಿಮತ. ಅವರು ಪಾಲಿಸಿಕೊಂಡು ಬಂದಿರುವ ತತ್ವವೂ ಅದೇ. ತಾವು ತತ್ವಭ್ರಷ್ಟರಾಗುವುದು ಅವರಿಗೆ ಇಷ್ಟವಿಲ್ಲ ; ಹಾಗೆಯೇ ಅರ್ಹ ಕಲಾವಿದರೊಬ್ಬರ ಬೇಡಿಕೆಯನ್ನು ತಳ್ಳಿ ಹಾಕುವುದಕ್ಕೂ ಮನಸ್ಸಿಲ್ಲ. ಇದು ಧರ್ಮಸಂಕಟ; ಒಳಗೇ ವ್ಯಕ್ತಿಯನ್ನು ಹಿಂಸಿಸುವ ಕ್ರಿಯೆ.
ಈ ಧರ್ಮ ಸಂಕಟ ಅವರೊಬ್ಬರದೇ ಎಂದು ನನಗನ್ನಿಸುವುದಿಲ್ಲ. ತತ್ವಗಳನ್ನು ಪರಿಪಾಲಿಸಿಕೊಂಡು ಬದುಕನ್ನು ಹಸನಾಗಿ ಇಟ್ಟುಕೊಳ್ಳಲು ಬಯಸುವ ನೂರಾರು ಜನರ ಧರ್ಮಸಂಕಟವೂ ಹೌದು. ಪ್ರಶಸ್ತಿಗಳನ್ನು ಅರ್ಹರಿಗೆ ಯಾವ ಶಿಫಾರಸು ಇಲ್ಲದೆ ಕೊಡುವುದು ಉಚಿತ ಮತ್ತು ಗೌರವಪೂರ್ಣ. ಅದರಿಂದ ಕೊಡುವವರ ಗೌರವಕ್ಕೂ ಕಿರೀಟ; ಪಡೆಯುವವರ ಮರ್ಯಾದೆಗೂ ಮನ್ನಣೆ. ಆದರೆ ನಮ್ಮಲ್ಲಿರುವ ವ್ಯವಸ್ಥೆಯನ್ನೇ ನೋಡಿ.
ರಾಜ್ಯ ಸರ್ಕಾರ ಪ್ರತಿವರ್ಷ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲು ರಾಜ್ಯೋತ್ಸವದಂದು (ನವೆಂಬರ್ ೧) ಅನೇಕ ಪ್ರಶಸ್ತಿಗಳನ್ನು ಕೊಡುತ್ತದೆ. ಈ ಸಂಖ್ಯೆ ಇಷ್ಟೇ ಎಂದು ನಿಗದಿಯಾಗಿಲ್ಲ. ಆಯಾ ಸರ್ಕಾರಗಳನ್ನು, ಮುಖ್ಯಮಂತ್ರಿಗಳ ಮರ್ಜಿಯನ್ನು ಅನುಸರಿಸಿ ಈ ಸಂಖ್ಯೆ ಬದಲಾಗುತ್ತಲೇ ಇರುತ್ತದೆ. ನಿಜ; ಜನತೆಯ ಸರ್ಕಾರ ಜನರನ್ನು ಗೌರವಿಸಬೇಕಾದದ್ದು ಕರ್ತವ್ಯ. ಆದರೆ ಹೇಗೆ ಗೌರವಿಸಬೇಕು, ಯಾರನ್ನು ಗೌರವಿಸಬೇಕು? ಪ್ರತಿಯೊಂದು ಕ್ಷೇತ್ರ, ಪ್ರದೇಶ, ಸಮುದಾಯ ಹೀಗೆ ಎಲ್ಲರಿಗೂ ಪ್ರಾತಿನಿಧ್ಯ ದೊರೆಯಬೇಕು. ಪ್ರಾತಿನಿಧ್ಯಕ್ಕಿಂತ ಹೆಚ್ಚಾಗಿ ಈ ಸಮಾಜದ ಉನ್ನತಿಗೆ ಶ್ರಮಿಸುವ ಎಲ್ಲ ವಲಯಗಳ ಸಾಧಕರಿಗೆ ಮನ್ನಣೆ ದೊರೆಯಬೇಕು. ಪ್ರತಿಯೊಬ್ಬರ ಕೊಡುಗೆಯನ್ನು ಗಮನಿಸಿ ಅವರನ್ನು ಗೌರವಿಸಬೇಕು. ಆಗಲೇ ಅದು ಜನತಾ ಸರ್ಕಾರ ಎನ್ನಿಸಿಕೊಳ್ಳಲು ಅರ್ಹತೆಯನ್ನು ಪಡೆದುಕೊಳ್ಳುತ್ತದೆ. ಆದರೆ ಈ ಅರ್ಹರನ್ನು ಗುರುತಿಸುವುದು ಹೇಗೆ? ಇದೇ ದೊಡ್ಡ ಹೊಣೆಗಾರಿಕೆಯ ಕೆಲಸ.
ಸರ್ಕಾರ ಯಾವುದೇ ಇರಲಿ, ಅದಕ್ಕೊಂದು ಮಾರ್ಗಸೂಚಿ ಇದ್ದರೆ ಗೊಂದಲಗಳಿಗೆ ಅವಕಾಶವಿರುವುದಿಲ್ಲ; ಅರ್ಹರು ಮೂಲೆಗುಂಪಾಗುವುದಿಲ್ಲ. ಆದರೆ ಅಂಥ ಸೂತ್ರವೊಂದು ಸ್ಪಷ್ಟವಾಗಿ ಯಾವ ಕಾಲದಲ್ಲಿಯೂ ಇದ್ದಂತಿಲ್ಲ. ಒಮ್ಮೊಮ್ಮೆ ಸರ್ಕಾರ ಯಾರದೋ ಒತ್ತಡಕ್ಕೆ ಕಟ್ಟುಬಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡಲು ಪರಿಣತರ ಸಮಿತಿಯೊಂದನ್ನು ರಚಿಸುವುದುಂಟು. ಇಂಥ ಉದಾಹರಣೆಗಳು ನಮ್ಮಲ್ಲಿ ಸಿಕ್ಕುತ್ತವೆ. ಆದರೆ ಪರಿಣತರ ಸಮಿತಿ ನೀಡಿದ ಅರ್ಹರ ಪಟ್ಟಿಯನ್ನು ಸರ್ಕಾರ ಮಾನ್ಯ ಮಾಡದೆ, ಅದನ್ನು ಕಡೆಗಣಿಸಿರುವುದು, ಇಲ್ಲವೇ ಆ ಪಟ್ಟಿಯಲ್ಲಿ ಬದಲಾವಣೆ ಮಾಡಿ ಪ್ರಶಸ್ತಿಗಳನ್ನು ನೀಡಿರುವುದೂ ಉಂಟು.
ಸರ್ಕಾರಗಳು ಹೀಗೇಕೆ ವರ್ತಿಸುತ್ತವೆ? ಪರಿಣತರ ಸಮಿತಿಯ ಮೂಲಕ ಅರ್ಹರನ್ನು ಹುಡುಕಿಸುವ ಕೆಲಸ ಸುಲಭದ್ದಲ್ಲವೇ? ತಪ್ಪುಗಳಾದರೆ ಸಮಿತಿಯನ್ನು ಜನ ದೂರುತ್ತಾರೆ. ಸರಿಯಾಗಿದ್ದರೆ ಸರ್ಕಾರಕ್ಕೆ ಮರ್ಯಾದೆ. ಆದರೆ ಸರ್ಕಾರ ಅಂಥ ಕೆಲಸಕ್ಕೆ ಯಾಕೆ ಮುಂದಾಗುವುದಿಲ್ಲ? ಮೇಲ್ನೋಟಕ್ಕೆ ಸಿಕ್ಕುವ ಉತ್ತರವೆಂದರೆ, ಪರಿಣತರ ಸಮಿತಿ ರಚಿಸಿದರೆ, ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ಪ್ರಶಸ್ತಿಯನ್ನು ಕೊಡಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರ ಅಧಿಕಾರ ಮೊಟಕಾಗುತ್ತದೆ. ಪರಿಣತರ ಸಮಿತಿ ಎಂಬುದೇ ಇಲ್ಲದಿದ್ದರೆ ಪಟ್ಟಿಯನ್ನು ಸಿದ್ಧಪಡಿಸುವವರು ಯಾರು? ಸರ್ಕಾರದ ಅಧಿಕಾರಿಗಳು ತಾನೇ. ಈ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ತಮಗೆ ಬೇಕಾದವರಿಗೆ ಪ್ರಶಸ್ತಿಕೊಡಿಸುವುದು ಸುಲಭ. ಇದೇ ಕಾರಣದಿಂದ ಪರಿಣತರ ಸಮಿತಿಯನ್ನು ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲೀ ಒಪ್ಪುವುದೇ ಇಲ್ಲ.
ಪ್ರಶಸ್ತಿ ಎನ್ನುವುದನ್ನು ನಿಜವಾದ ಸಾಧಕ ಎಂದೋ ಮೀರಿ ನಿಂತಿರುತ್ತಾನೆ. ಆದರೆ ಇಂಥ ಸಾಧಕರನ್ನು ಗೌರವಿಸಿ ಅವರ ಕಾರ್ಯಕ್ಕೆ ಬೆಂಬಲ ಸೂಚಿಸುವುದು ಜನತೆಯನ್ನು ಪ್ರತಿನಿಧಿಸುವ ಸರ್ಕಾರದ ಕರ್ತವ್ಯ. ಈ ಪ್ರಶಸ್ತಿ ಅರ್ಹರ ಬೆನ್ನುತಟ್ಟುತ್ತದೆ; ಎಳೆಯ ತಲೆಮಾರಿಗೂ ಹೊಸ ಹುಮ್ಮಸ್ಸನ್ನು ದೊರಕಬಹುದು; ಸಾಧನೆಯ ಹಾದಿಯಲ್ಲಿ ತಮ್ಮನ್ನು ತೊಡಗಿಸಲು ಪ್ರೇರಣೆಯನ್ನು ಒದಗಿಸಬಹುದು. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಒಂದು ಸಮಾಜದ ಪ್ರಗತಿಯ ಹಾದಿಯನ್ನು ಇದು ಸುಗಮಗೊಳಿಸಬಲ್ಲದು. ಕೇವಲ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮತ್ತು ಈ ಯೋಜನೆಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಒದಗಿಸುವುದರ ಮೂಲಕ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಸಾಧಕನೊಬ್ಬನ ಕೊಡುಗೆ ಈ ಹಣವನ್ನು ಮೀರಿದ್ದಾಗಿರುತ್ತದೆ. ಒಬ್ಬ ಕಲಾವಿದ ಅಥವಾ ಸಾಹಿತಿ ತನ್ನ ಕೊಡುಗೆಯ ಮೂಲಕ ಸಮಾಜದ ನೆಮ್ಮದಿಯನ್ನು ಹೆಚ್ಚಿಸಬಹುದು; ಸಮಾಜದ ನೈತಿಕಪ್ರಜ್ಞೆ ಜಾಗೃತವಾಗಲು ಕಾರಣವಾಗಬಹುದು. ಒಬ್ಬ ಕ್ರೀಡಾಪಟು ಆರೋಗ್ಯಪೂರ್ಣ ಮನಸ್ಸನ್ನು ರೂಪಿಸಲು ನೆರವಾಗಬಹದು. ಒಬ್ಬ ವಿಜ್ಞಾನಿಯ ಶೋಧ ಎಷ್ಟು ಪ್ರಯೋಜನಕಾರಿಯಾಗಿರುತ್ತದೆ! ಈ ಕೊಡುಗೆಯನ್ನು ಯಾವ ಮಾನದಂಡದಿಂದ ಅಳೆಯುವುದು?
ಪ್ರಶಸ್ತಿಗಾಗಿ ಲಾಬಿ ಮಾಡುವವರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಇದೆ ಎಂದರೆ ಅರ್ಥ, ಸರ್ಕಾರ, ಜನಪ್ರತಿನಿಧಿಗಳು ಇಂಥ ಲಾಬಿದಾರರಿಗೇ ಮಣೆಹಾಕುತ್ತಿದ್ದಾರೆಂದು ಅರ್ಥ. ಪ್ರಶಸ್ತಿ ಸಾಧಕರನ್ನು ಹುಡುಕಿಕೊಂಡು ಹೋಗಬೇಕು. ಆಗಲೇ ಅದಕ್ಕೆ ಅರ್ಥ, ಗೌರವ. ಇಲ್ಲವಾದರೆ ಅರ್ಜಿಗಳು, ಶಿಫಾರಸುಪತ್ರಗಳು ಹರಿದಾಡುತ್ತಲೇ ಇರಬೇಕಾಗುತ್ತದೆ. ನಿಜವಾಗಿಯೂ ಪ್ರಶಸ್ತಿಗೆ ಅರ್ಹರಾದವರು ಎಲ್ಲಿಯೋ ಮೂಲೆಯಲ್ಲಿ ಉಳಿದು, ಅನರ್ಹರು ಬಿಡುಬೆಳಕಿನಲ್ಲಿ ಮೆರೆಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದು ಯಾವ ಸರ್ಕಾರಕ್ಕೂ, ಯಾವ ಸಮಾಜಕ್ಕೂ ಗೌರವ ತರುವ ಸಂಗತಿಯಲ್ಲ.
ಈಗಿನ ವಸ್ತುಸ್ಥಿತಿಯನ್ನೇ ನೋಡಿ. ಪ್ರಶಸ್ತಿಗೆ ಅರ್ಜಿಹಾಕಬೇಕೆಂದು ಸರ್ಕಾರ ಬಯಸುತ್ತದೆ. ಅರ್ಹರ ಪಟ್ಟಿಯನ್ನು ಸಿದ್ಧಪಡಿಸುವ ಹೊಣೆ ಕನ್ನಡ ಮತ್ತು ಸಂಸ್ಕೃತಿಯ ಮೇಲಿರುತ್ತದೆ. ಅಲ್ಲಿರುವ ಅಧಿಕಾರಿಗಳು ಪ್ರಾಮಾಣಿಕವಾಗಿಯೇ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆಂದು ಭಾವಿಸೋಣ. ಆದರೆ ಅವರ ಶಕ್ತಿ ಸಾಮರ್ಥ್ಯಗಳಿಗೂ ಮಿತಿ ಎಂಬುದು ಇರುತ್ತದೆಯಲ್ಲವೇ? ಈ ಇಲಾಖೆ ಕಾರ್ಯನಿರ್ವಹಿಸುವ ವಿಧಾನವನ್ನೇ ನೋಡಿ. ಇವತ್ತಿಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತರೆಲ್ಲರ ಹೆಸರು ವಿಳಾಸಗಳೆಲ್ಲ ಈ ಇಲಾಖೆಯಲ್ಲಿ ಇಲ್ಲ. ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ, ಯಕ್ಷಗಾನ, ಸಂಗೀತ, ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ, ಕರಕುಶಲ, ವಿವಿಧ ಜಾನಪದ ಕಲೆಗಳು, ಸಾಹಿತ್ಯ, ನಾಟಿ ವೈದ್ಯ, ಕ್ರೀಡೆ, ಪತ್ರಿಕೋದ್ಯಮ ಇತ್ಯಾದಿ ಎಷ್ಟೊಂದು ಕ್ಷೇತ್ರಗಳಿವೆ. ಈ ಎಲ್ಲ ಕ್ಷೇತ್ರಗಳಲ್ಲಿರುವ ಅರ್ಹರ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳಿ ಇದೆಯೇ? ಈ ಪಟ್ಟಿಯನ್ನು ತಯಾರಿಸುವುದು ಸುಲಭದ ಕೆಲಸವಲ್ಲ. ಒಂದೆರಡು ತಿಂಗಳಲ್ಲಿ ಮಾಡಿ ಮುಗಿಸುವ ಕೆಲಸ ಇದಲ್ಲ. ತೀವ್ರ ಕಾಳಜಿಯಿಂದ, ವೈಜ್ಞಾನಿಕ ರೀತಿಯಲ್ಲಿ ಈ ಇಲಾಖೆ ಪ್ರತಿ ಜಿಲ್ಲೆಯಲ್ಲಿರುವ ತನ್ನ ಸಿಬ್ಬಂದಿಯ ನೆರವಿನಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡರೆ ಪಟ್ಟಿ ತಯಾರಿಸುವುದು ಕಷ್ಟವಾಗಲಾರದು. ಸರ್ಕಾರ ಪರಿಣತರ ಸಮಿತಿಯನ್ನು ರಚಿಸಿ, ಅವರಿಗೆ ಈ ಪಟ್ಟಿಯನ್ನು ಕೊಡಬೇಕು. ಈ ಸಮಿತಿಯಲ್ಲಿರುವ ಪರಿಣತರು ಪ್ರಾಮಾಣಿಕರೂ, ಪ್ರಶಸ್ತಿಯ ಅರ್ಥಗೌರವವನ್ನು ಬಲ್ಲವರೂ ಆಗಿರಬೇಕು. ಆಗ ರಾಜ್ಯ ಪ್ರಶಸ್ತಿಗೆ ಗೌರವ ಹೆಚ್ಚಾಗಬಹುದು. ಅದನ್ನು ಪಡೆದುಕೊಳ್ಳುವವರಲ್ಲಿಯೂ ಹೆಮ್ಮೆ ಮೂಡಬಹುದು.
ಪ್ರತಿಯೊಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಹೊಸ ಭರವಸೆಯೊಂದು ಚಿಗುರುವುದು ಸಾಮಾನ್ಯ. ಈ ಸರ್ಕಾರ ಹಿಂದಿನ ತಪ್ಪುಗಳನ್ನೆಲ್ಲ ಸರಿಪಡಿಸಿ ಮುಂದೆ ಸಾಗುತ್ತದೆ, ಅರ್ಹರಿಗೆ ಪ್ರಶಸ್ತಿಗಳು ದೊರೆತು, ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂದು ಭಾವಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಅಂಥದೇನೂ ಆಗದೇ ಹಿಂದಿನ ಪರಿಪಾಠಗಳೆ ಮುಂದುವರಿಯುವುದನ್ನೂ ನಾವೆಲ್ಲ ನೋಡುತ್ತ ಬಂದಿದ್ದೇವೆ.
ಆದರೆ ಸಿದ್ಧರಾಮಯ್ಯನವರ ನೇತೃತ್ವದಲ್ಲಿರುವ ಕಾಂಗ್ರೆಸ್ ಸರ್ಕಾರದ ಹುಮ್ಮಸ್ಸನ್ನು, ಕಾರ್ಯವೈಖರಿಯನ್ನು ಗಮನಿಸಿದರೆ ಇದು ಹಳೆಯ ಜಾಡಿನಲ್ಲಿ ಸಾಗಲಾರದು, ಹೊಸ ಮಾರ್ಗಗಳನ್ನು ಹುಡುಕುತ್ತದೆ ಎಂಬ ಆಸೆಯಂತೂ ಮೂಡುತ್ತಿದೆ. ಅನೇಕ ಸವಾಲುಗಳು ಅದರ ಮುಂದಿದ್ದರೂ, ಗುಣಾತ್ಮಕ ಬದಲಾವಣೆಯನ್ನು ಸಾಧ್ಯವಾಗಿಸುವ ಇಂಥ ಕೆಲಸಗಳನ್ನು ಮಾಡಲು ಅದಕ್ಕೆ ಯಾವುದೇ ಅಡ್ಡಿ ಆತಂಕಗಳು ಇರಲಾರವೆಂದು ಭಾವಿಸಬಹುದಾಗಿದೆ. ಕನ್ನಡಕ್ಕೂ ಅರ್ಥ, ಸಂಸ್ಕೃತಿಗೂ ಅರ್ಥ ಸಾಧ್ಯವಾಗಬೇಕಾದರೆ, ಇಂಥ ಪ್ರಶಸ್ತಿಗಳ ದಿಕ್ಕನ್ನೂ ಅದು ಸರಿಪಡಿಸಬೇಕು. ಪ್ರಶಸ್ತಿಗಾಗಿ ಅರ್ಜಿ ಮತ್ತು ಶಿಫಾರಸು ಪತ್ರ ಹಿಡಿದು ಜನಪ್ರತಿನಿಧಿಗಳ ಕಚೇರಿಗಳಿಗೆ ಅಲೆಯುವುದು ತಪ್ಪಿದಾಗ ಮಾತ್ರ ಪ್ರಶಸ್ತಿಗೆ ಅರ್ಥಬರುತ್ತದೆ; ಸರ್ಕಾರದ ಗೌರವವೂ ಹೆಚ್ಚಾಗುತ್ತದೆ.
ಕೃಪೆ : ಸಂಯುಕ್ತ ಕರ್ನಾಟಕ

-ಜಿ.ಪಿ.ಬಸವರಾಜು
೯೪೮೦೦ ೫೭೫೮೦
No comments:
Post a Comment