ಡಾ. ಸಿದ್ರಾಮ ಕಾರಣಿಕ
ಮೊನ್ನೆ ಸ್ನೇಹಿತರೊಬ್ಬರು ಮಲಗುವ ಸಮಯದಲ್ಲಿ (ನನ್ನ ಮಲಗುವ ಸಮಯವಲ್ಲ ; ಯಾಕೆಂದರೆ ನಾನು ಮಲಗುವುದೇ ನಸುಕಿನ ಜಾವದಲ್ಲಿ. ಫೋನು ಮಾಡಿದ್ದು ಅವರು ಮಲಗುವ ಸಮಯದಲ್ಲಿ) ಮೊಬೈಲಿಗೆ ರಿಂಗಾಯಿಸಿ ಮಾತನಾಡಿದರು. ನನಗೆ ಅಚ್ಚರಿ ಎನಿಸಲಿಲ್ಲ. ಯಾಕೆಂದರೆ ನಾನು ಮೊಬೈಲಿಗೆ ಸಿಗುವುದೇ ಇಂಥ ಹೊತ್ತಿನಲ್ಲಿ ! ಸ್ನೇಹಿತರು ಬಹುಶಃ ಕುಡಿದುಕೊಂಡೇ ಮಾತನಾಡುತ್ತಿದ್ದಾರೆ ಎಂದು ನಾನು ಎಣಿಕೆ ಹಾಕಿದೆ. ಅವರು ಹೇಳುತ್ತಿದ್ದರು, “ಬ್ರದರ್, ದಲಿತ ಸಾಹಿತ್ಯದ ಬರವಣಿಗೆಗಳಲ್ಲಿ ಎಲ್ಲರೂ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ತೀರ ಕೆಳಗು ಮಾಡಿ ಬರೆಯಲಾಗುತ್ತಿದೆ. ಇದು ತಪ್ಪು. ಇದಕ್ಕಾಗಿಯೇ ನಾವು ಚಳುವಳಿ ಮಾಡಬೇಕಾಗುತ್ತದೆ...”
ಇದು ನನಗೂ ಅಚ್ಚರಿಯೇ ಸರಿ ! ಫೋನು ಮಾಡಿದ ಸ್ನೇಹಿತ ದಲಿತ ಸಂಘಟನೆಯಲ್ಲಿ ಗುರುತಿಸಿಕೊಂಡವರು, ಕೆಲವು ಹೋರಾಟ ಮಾಡಿದವರು. ಏನೂ ಇಲ್ಲದಾದಾಗ ಮನೆಯಲ್ಲಿ ಮುಸುಕು ಹಾಕಿಕೊಂಡು ಮಲಗುವಂಥವರು ; ಇಲ್ಲವೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ತಲೆ ಹಾಕಿ ಪತ್ರಿಕೆಗಳಲ್ಲಿ ಹೆಸರು ಮಾಡಿರುವಂಥವರು !
ಇಂತಿಪ್ಪ ಸ್ನೇಹಿತರು ಮೊಬೈಲಿನಲ್ಲಿ ಮಾತನಾಡುತ್ತಲೇ ಇದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ವಿಷಯವಾಗಿ ಬರೆಯುವಾಗ ದಲಿತ ಲೇಖಕರು, ಅಂಬೇಡ್ಕರ್‍ರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆಯೇ ಹೆಚ್ಚು ಬರೆದು ಅಂಬೇಡ್ಕರ್ ಅವರನ್ನು ಒಂದಿಷ್ಟು ‘ಕೆಳಗು’ ಮಾಡುತ್ತಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಛತ್ರಪತಿ ಶಾಹು ಮಹಾರಾಜ, ಬಡೋದೆಯ ಗಾಯಕವಾಡ, ಮೈಸೂರಿನ ಒಡೆಯರು ಮೊದಲಾದ ರಾಜರ ಬಗ್ಗೆ, ದೇವರಾಯ ಇಂಗಳೆ ಮೊದಲಾದ ಹಿರಿಯರ ಬಗ್ಗೆ ಹೆಚ್ಚು ಬರೆದು ಅಂಬೇಡ್ಕರ್ ಅವರ ಬಗ್ಗೆ ಕಮ್ಮಿ ಬರೆಯಲಾಗುತ್ತಿದೆ ಎಂಬುದು ಅವರ ಅಂಬೋಣ. ಆದರೆ ಇದಕ್ಕೂ ಮಿಗಿಲಾಗಿ ಅವರು ಹೇಳಿದ ಇನ್ನೊಂದು ಮಾತು ನನಗೆ ತುಂಬ ಕೆಡುಕು ಎನಿಸಿತು. ಮಹಾತಾಯಿ ರಮಾಯಿ ಬಗ್ಗೆ ಹೇಳುವಾಗಲೂ ನೀವು ಅಂಬೇಡ್ಕರ್ ಅವರನ್ನು ‘ಕೆಳಗು’ ಮಾಡುತ್ತೀರಿ ಎಂಬುದು ಅವರ ಕಾಳಜಿ ! ಹಾಗಾದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಓದಿ ತಿಳಿದುಕೊಂಡಷ್ಟು ನಾವು ರಮಾಯಿ ಬಗ್ಗೆ ಏನು ತಿಳಿದುಕೊಂಡಿದ್ದೇವೆ ? ಅಥವಾ ತಿಳಿದುಕೊಳ್ಳಲು ಎಂದಾದರೂ ಆಸಕ್ತಿ ತಳೆದಿದ್ದೇವೆಯೇ ? ಸ್ನೇಹಿತರ ಮಾತಿಗೆ ಪ್ರತಿಯಾಗಿ ನಾನು ಈ ಉತ್ತರವನ್ನು ನೀಡಲೇಬೇಕಾಗುತ್ತದೆ. ಯಾಕೆಂದರೆ ಅವರು ನನ್ನನ್ನೂ ನನ್ನ ಸಾಹಿತ್ಯವನ್ನೂ ಕುರಿತಾಗಿಯೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೀ ಹೆಸರಲ್ಲ ; ಅದು ನನ್ನ ಉಸಿರು. ಅದು ಬೆಂಕಿ ಕೆಂಡ ; ಯಾರಾದರೂ ಆಕ್ಷೇಪಿಸಿದ್ದರೆ ಸುಟ್ಟು ಬಿಡುವಷ್ಟು ಪ್ರಖರ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳ, ಹೋರಾಟದ ಬದುಕಿನ ಅರಿವಿಲ್ಲದೆ ಮಾತನಾಡುವುದು ನಿಜವಾಗಿಯೂ ಮೂರ್ಖತನವೇ ಸರಿ. ಅರ್ಧ ಓದು ಹಾಳು ಮಾಡುತ್ತದೆ ಎಂಬ ಮಾತು ಸತ್ಯವೆನಿಸುತ್ತದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಹೋರಾಟ, ಚಳುವಳಿ ಮಾಡುವ ಕೆಲ ವ್ಯಕ್ತಿಗಳು ವಾಸ್ತವದಲ್ಲಿ ಎಷ್ಟರಮಟ್ಟಿಗೆ ಅದಕ್ಕೆ ಬದ್ಧರಾಗಿದ್ದಾರೆ ಎಂಬುದು ನನ್ನ ಪ್ರಶ್ನೆ. ಹೀಗಾಗಿಯೇ ಬಲಿತ ದಲಿತರ ಬಗ್ಗೆ ಹೇಳಿದಂತೆಯೇ ಇಂಥ ದರಿದ್ರ ದಲಿತರ ಬಗ್ಗೆಯೂ ನಾವು ದಾಖಲಿಸಲೇಬೇಕಿದೆ. ಇಂಥವರು ಬರೀ ಡಾ. ಬಾಬಾಸಾಹೇಬ ಅಂಬೇಡ್ಕರ್ ಮಾತ್ರವಲ್ಲ, ಇಡೀ ದಲಿತ ಜನಾಂಗವನ್ನೇ ಅಪಹಾಸ್ಯ ಮಾಡುವವರಿಗೆ ಹಾದಿ ಮಾಡಿ ಕೊಡುತ್ತಾರೆ ಎಂದರೆ ತಪ್ಪಾಗಲಾರದು.
No comments:
Post a Comment