ಡಾ. ಸಿದ್ರಾಮ ಕಾರಣಿಕ
_____________________________________________________
‘ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು ಬಂತೆ, ಹಣದ ಮಕ್ಕಳ ಮನೆಯ ಸೂಳೆಯಾಗಿ ?
-----------------------------------------------------------------------------
‘ನಡೆ ಮುಂದೆ ನಡೆ ಮುಂದೆ ಹಿಗ್ಗಿ ನಡೆ ಮುಂದೆ’ ಎಂದು ಪಾಂಚ್ಯಜನ್ಯ ಮೊಳಗಿಸುವದರ ಮೂಲಕ ‘ಚಂಡಿ ಚಾಮುಂಡಿ ಪೇಳ್ ಬೇಕಾದದೇನು ? ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು ?’ ಎಂಬ ದಿಟ್ಟತನ ತೋರಿದ ಸಾಹಿತಿಗಳು ಆ ಕಾರಣವಾಗಿ ಜೇಲುವಾಸವನ್ನು ಅನುಭವಿಸಿದರು. ನರಬಲಿ ಕವಿತೆಯೆ ಕಾರಣವಾಗಿ ಬೇಂದ್ರೆಯವರು ಮುಗುದದಲ್ಲಿ ಸ್ಥಾನಬದ್ಧತೆಯ ಶಿಕ್ಷೆ ಅನುಭವಿಸುವಂತಾಯಿತು. ಆದರೆ ಭಾರತ ಸ್ವಾತಂತ್ರ್ಯ ಗಳಿಸಿದ ತರುವಾಯ ರಾಷ್ಟ್ರೀಯ ಪ್ರಜ್ಞೆಯು ಮಸಕಾಗತೊಡಗಿತು. ಸ್ವಾತಂತ್ರ್ಯ ಬಂದ ಉತ್ಸಾಹದಲ್ಲಿ ‘ಓ ಬಾರ, ಸಹ್ಯಾದ್ರಿ ; ಬಾರ ಓ ವಿಂಧ್ಯಾದ್ರಿ ಬಾರಾ ಹಿಮಾದ್ರಿ’ ಎಂದು ಸ್ವಾತಂತ್ರ್ಯವನ್ನು ಸ್ವಾಗತಿಸುವ ಸಂಭ್ರಮ, ‘ಏನು ಕಾಂತಿಯಿದು, ಏನು ಶಾಂತಿ ಈ ತುಂಗ ಶೃಂಗದಲ್ಲಿ ......’ ಎನ್ನುತ್ತ ಭವ್ಯತೆಯನ್ನು ಕೊಂಡಾಡಿದ ಕವಿಗಳು, ಆನಂತರ ಉತ್ಸಾಹ ಕಳೆದುಕೊಂಡರು. ಇದಕ್ಕೆ ಕಾರಣ, ಅಧಿಕಾರ ಲಾಲಾಸೆಯ ವ್ಯಾಮೋಹಿತನ, ಸ್ವಾರ್ಥಪರ ರಾಜಕಾರಣ, ಗದ್ದುಗೆಗಾಗಿ ಪರಸ್ಪರ ಹೊಡೆದಾಟ ಮೋಸ, ವಂಚನೆಗಳೇ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಳೆದಾಗ, ಸ್ವಾತಂತ್ರ್ಯ ಬಂದಾಗ ಏನೆಲ್ಲ ಸಾಧಿಸುತ್ತೇವೆ ಎಂದುಕೊಂಡಿದ್ದ ಸಾಹಿತಿಗಳು ಭ್ರಮನಿರಸನಗೊಂಡರು. ಶೋಷಣೆ ಮಾಡುವಲ್ಲಿ ಆಂಗ್ಲರಿಗಿಂತ ನಮ್ಮವರೇನು ಕಡಿಮೆಯಿಲ್ಲ ಎಂಬ ಮನವರಿಕೆ ಅವರಿಗಾದಾಗ,
`ಹೊಸದಾಗಿ ಬಂತು ಇನ್ನೊಂದು ಸರಕಾರ
ಬೆಲೆಗಳೆಲ್ಲಾ ಏರಿ ಬಾಯ್ತುಂಬ ಖಾರ
ಮತ್ತಷ್ಟು ಕಿರಿದಾಯ್ತು ಗೋದಿಯ ಚಪಾತಿ
ಇದಕ್ಕೆನ್ನುವರು ರಾಜಕಾರಣ ಪ್ರಗತಿ’
ಎಂದು ನೊಂದುಕೊಂಡರು. ಸ್ವಾತಂತ್ರದ ದುರ್ಬಳಕೆ ಕಂಡು ‘ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು ಬಂತೆ, ಹಣದ ಮಕ್ಕಳ ಮನೆಯ ಸೂಳೆಯಾಗಿ ? ಎಂದು ತಳಮಳಿಸಿದರು.
ಗೌರೀಶ ಕಾಯ್ಕಿಣಿ ಹೇಳುತ್ತಾರೆ, “ನಿಜವಾಗಿ ನೋಡಿದರೆ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ತೀವ್ರ ಉತ್ಕರ್ಷದ ಪ್ರಸಂಗಗಳನ್ನು ಬಿಟ್ಟರೆ ಅಖಂಡವಾದ ರಾಷ್ಟೀಯ ಪ್ರಜ್ಞೆ ಮೂಡಿ ಬಂದದ್ದೇ ಕಡಿಮೆ. ಏಕೆಂದರೆ ಭಾರತವು ಇಂದಿಗೂ ಒಂದು ಅಖಂಡ, ಒಂದೇ ಜೀನಸಿನ ರಾಷ್ಟ್ರವಾಗಿಲ್ಲ” (ಬಿಡುಗಡೆ ಬೆಳ್ಳಿ : 1975)