Wednesday, February 27, 2013

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !


                                                          -ಸರೋವರ್ ಬೆಂಕೀಕೆರೆ. 


ಭೂಮಿಯಲ್ಲಿ ಎಷ್ಟೋ ಜೀವಿಗಳು ಬದುಕಿವೆ, ಎಲ್ಲ ಪ್ರಾಣಿ ಪಕ್ಷಿಗಳು ಜಾತಿ, ಮತ, ಧರ್ಮ ಎನ್ನದೆ ಸಂತೋಷದಿಂದ ಬದುಕುತ್ತಿವೆ, ಮೊನ್ನೆ ಪತ್ರಿಕೆಯಲ್ಲಿ ಕಂಡೆ ಹಸುವು ತನ್ನ ಕರು ಅಲ್ಲದ, ತನ್ನ ಜಾತಿಗೆ ಸೇರದ ಕೊಳಚೆಯಲ್ಲಿ ವಾಸಿಸುವ ಹಂದಿಮರಿಯೊಂದಕ್ಕೆ ಹಾಲುಣಿಸಿ ಮಾನವೀಯತೆ ಮೆರೆಯಿತೆಂದು ! ನನ್ನಲ್ಲಿ ಪ್ರಶ್ನೆ ಹಾಕಿಕೊಂಡೆ ಮಾನವೀಯತೆ ಹಾಗೆಂದರೆ ? ಓಹ್ ಮಾನವ ಧರ್ಮ !..... ಮಾನವ ಧರ್ಮ ಏನು ? ಹಸುವನ್ನು ದೇವರು ಎನ್ನುವ, ಹಸುವನ್ನು ಪೂಜೆ ಮಾಡುವ ಮಾನವ ಅದರ ಜಾತ್ಯತೀತ ಮನಸ್ಸನ್ನು ಅರಿಯದೆ, ಬಾಯಿ ಮಾತಲ್ಲಿ ದೇವರು ಎಂದು ಸ್ವತಃ ಜಾತಿಯನ್ನು ಕಟ್ಟುತ್ತಾನೆ, ದೇವಸ್ಥಾನದಲ್ಲೆ ಪಂಕ್ತಿ ಭೇದ ಮಾಡುತ್ತಾನೆ, ಮನುಷ್ಯನನ್ನೆ ಅನ್ಯ ಜಾತಿಯ ಪ್ರಾಣಿಯಂತೆ ಕಾಣುತ್ತಾನೆ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಹೀಗೆ……, ಹಾಗಾದರೆ ಇದೇನಾ ಮಾನವೀಯತೆ ಆ ಹಸುವು ಹಂದಿ ಮರಿಗೆ ಹಾಲುಣಿಸಿ ಮೇರೆದ ಮಾನವೀಯತೆ ಅಂದರೆ ಇದೇನಾ?

ಮತ್ತೆ ಅದೇ ಪತ್ರಿಕೆಗಳಲ್ಲಿ ಲೇಖನಗಳು ಓದಿದೆ ; ಡೆಲ್ಲಿಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಪ್ರಾಣಿಯಂತೆ ವರ್ತಿಸಿದ್ದಾರೆ  ಎಂದು ! ಆದರೆ ವಿಚಿತ್ರ ನೋಡಿ, ಪ್ರಾಣಿ ಮಾನವೀಯತೆ ಮೆರೆಯುತ್ತದೆ ಮತ್ತು ಮನುಷ್ಯ ಪ್ರಾಣಿಯಂತೆ ವರ್ತಿಸುತ್ತಾನಂತೆ ? ನಿಜಕ್ಕೂ ಈ ಮಾನವೀಯತೆ ಅನ್ನುವ ಪದವೇ ಬದಲಾಗಬೇಕು ಎಂದು ನನ್ನಲ್ಲಿ ಅನಿಸುತ್ತಿದೆ.

ಹೀಗೆ ನನಗೊಂದು ಚಿಕ್ಕ ಕಥೆ ನೆನಪಾಗುತ್ತದೆ, ಒಂದು ಹೆಣ್ಣು ನಾಯಿ ಮಧ್ಯ ರಾತ್ರಿ ಹಾದಿಯಲ್ಲಿ ಹೋಗುವಾಗ 5 ಗಂಡು ನಾಯಿ ಆ ಹೆಣ್ಣು ನಾಯಿಯನ್ನು ಬೆನ್ನ ಹತ್ತಿದವು, ಹೆಣ್ಣು  ನಾಯಿ ಭಯದಲ್ಲಿ ಓಡಲು ಶುರು ಮಾಡಿತ್ತು, ನಂತರ ಆ 5 ಗಂಡು ನಾಯಿ ಎದುರಿಗೆ  ಬಂದು ಹೇಳಿದವು, “ಹೆದರಬೇಡ ನಾವು ನಾಯಿಗಳು ಮನುಷ್ಯರಲ್ಲ!” ಇದನ್ನು ಓದಿದ ನನಗೆ ನಗು ಬರುವ ಬದಲು, ಮೊದಲ ಬಾರಿಗೆ ಅಯ್ಯೋ ನಾನು ಕೂಡ ಮನುಷ್ಯನಲ್ಲವೆ ಎಂದು ಚಡಪಡಿಸಿದೆ, ಪ್ರಾಣಿ ಪಕ್ಷಿಗಳು ಎಂದು ಕೊಲೆ ಮಾಡುವುದಿಲ್ಲ, ಅತ್ಯಚಾರದ ದೂರು ಕೂಡ ಎದುರಿಸಿಲ್ಲ. ನಾನು ಪ್ರಾಣಿ ಆಗಿದ್ದರೆ ?
ಇದನ್ನೆಲ್ಲ ನೆನೆಯಲು ಒಂದು ಕಾರಣವಿದೆ, ನಮ್ಮ ಕಾಲೇಜಿನಲ್ಲಿ ನನ್ನ ನೆಚ್ಚಿನ ಶಿಕ್ಷಕರು ಇದ್ದರು, ಅವರು ನನ್ನನ್ನು ಯಾವಾಗಲೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ನನಗೂ ಅವರೆಂದರೆ ತುಂಬಾ ಗೌರವ, ಅವರ ಮನೆ ನಮ್ಮ ಹಾಸ್ಟಲ್  ಹತ್ತಿರ ಇದ್ದರಿಂದ, ಅವರ ಮನೆಗೆ ಮನೆ ಪಾಠಕ್ಕೆಂದು ಕರೆದಿದ್ದರು. ನಾನು ಮನೆ ಪಾಠಕ್ಕೆಂದು ದಿನವೂ ಹೋಗುತ್ತಿದ್ದೆ, ಒಂದು ದಿನ ಅವರ ಮನೆ  ಮುಂದೆ ಕೆಲವು ಮಕ್ಕಳು ಆಟವಾಡುತ್ತಿದ್ದರು, ಅವರಲ್ಲಿ ನಮ್ಮ ಶಿಕ್ಷಕರ ಅಕ್ಕನ ಮಗೂ ಕೂಡ ಆಡುತ್ತಿತ್ತು, ಆ ಮಗುವೊಂದು ಬಿಟ್ಟು, ಉಳಿದ ಮಕ್ಕಳು ಅಲ್ಲೆ ಗಾರೆ ಕೆಲಸ ಮಾಡುವವರ ಮಕ್ಕಳಾಗಿದ್ದರು, ಅವರು ಯಾರೂ ಶಾಲೆಗೆ ಹೋಗದವರಾಗಿದ್ದರು. ನಮ್ಮ ಶಿಕ್ಷಕರ ಮನೆಯಿಂದ ಕೂಗು ಬಂದಿತು, 'ಏ ಸೋನು ( ನಮ್ಮ ಶಿಕ್ಷಕರ ಅಕ್ಕನ ಮಗು), ನೀನು ಅವರೊಡನೆ ಆಡಬಾರದು. ಬಾ ಇಲ್ಲಿ' ಎಂದು ಆ ಮಗುವನ್ನು ಕರೆದುಕೊಂಡು ಹೋದರು. ಆಡುತ್ತಿದ್ದ ಸೋನುವಿನ ಗಮನ ಆ ಮಕ್ಕಳ ಕಡೆಗೆ  ಇತ್ತು. ಚಿಕ್ಕ ಗುಡಿಸಲಿನ ಮುಂದೆ ಆಡುತ್ತಿದ್ದ ಮಕ್ಕಳ ಕಣ್ಣು ಆ ದೊಡ್ಡ ಮನೆಯ ಕಡೆಯೇ ಹರಿದಿತ್ತು.

ಸ್ವಲ್ಪ ಹೊತ್ತಿಗೆ ನನಗೆ ಪಾಠ ಶುರುವಾಗಿದ್ದರಿಂದ ನಾನು ಮನೆಯೊಳಗೆ ಹೋದೆ, ಪಾಠ ಮುಗಿಸಿಕೊಂಡು ಹೊರಗೆ ಬಂದೆ, ಮನೆಯ ಬಾಗಿಲಲ್ಲಿ ಆ ಗುಡಿಸಲಿನ ಮಕ್ಕಳು ಕೂತು ಪಿಳಿ ಪಿಳಿ ಕಣ್ಣು ಬಿಡುತ್ತಾ ಟಿ.ವಿ ನೋಡುತ್ತಿದ್ದರು, ನಾನು ಮನೆಗೆ ಹೊಸಬನಾಗಿದ್ದರಿಂದ ನನ್ನ ಗೆಳೆಯನಿಗೆ ಕೇಳಿದೆ, 'ಇವರು ಹೊರಗೆ ಏಕೆ  ಕೂತಿದ್ದಾರೆ ?' ನನ್ನ ಸ್ನೇಹಿತ ಹೇಳಿದ, 'ಅವರು ಕೆಳ ಜಾತಿಯವರಲ್ಲವೆ ಅದಕ್ಕೆ' ಎಂದ ! ನಾನು  ಒಳಗೆ ಇಣುಕಿದೆ, ನಾಯಿ ಮರಿ ಮನೆಯಲ್ಲೇ ಆಡುತ್ತಿತ್ತು, ಆದರೆ ಮನುಷ್ಯರ ಜಾತಿಯಲ್ಲೇ ಹುಟ್ಟಿದ ಕೆಳ ವರ್ಗದ ಮಕ್ಕಳು ಮಾತ್ರ ಚಪ್ಪಲಿ ಬಿಡುವ ಸ್ಥಳದಲ್ಲಿ ಕೂತಿದ್ದರು. ಇದರಿಂದ ನನಗೆ ತಿಳಿದಿದ್ದು ನಾಯಿಗೆ ಕೂಡ ಮನೆಯಲ್ಲಿ ಪ್ರವೇಶವಿದೆ ; ಆದರೆ ಕೆಳ ಜಾತೀಯ ಮನುಷ್ಯರಿಗಿಲ್ಲ.!

ನನಗೆ ಒಳ ಒಳಗೆ ಭಯ ಶುರುವಾಗಿತ್ತು, ನಾನು ಕೂಡ ಕೆಳ ಜಾತಿಯವನು, ಮಾಂಸ ತಿನ್ನುವ ಕುಲದವನು ಎಂದು ತಿಳಿದರೆ ನನಗೂ ಮನೆಯ ಒಳಗೆ ಪ್ರವೇಶವಿಲ್ಲ! ನಂತರ ನನಗೆ ನಾನೇ ಸಮಾಧಾನಿಸಿಕೊಂಡು, ಚಿಂತಿಸಿದೆ...... ನಾನು ಯಾರಲ್ಲಿಗೆ ಪಾಠ ಕಲಿಯಲು ಬರುತ್ತಿರುವೆ? (ನಿಜ ಹೇಳಬೇಕೆಂದರೆ ಆ ಶಿಕ್ಷಕರು ತುಂಬಾ ಚೆನ್ನಾಗಿಯೆ ಪಾಠ ಮಾಡುತ್ತಿದ್ದರು) ಇವರು ನಿಜವಾಗಿಯೂ ಗುರುಗಳೇ ? ಇವರಲ್ಲಿ ನಾನು ಕಲಿತು ಜೀವನ ರೂಪಿಸಿಕೊಳ್ಳಲು ಸಾಧ್ಯವೆ ? ಹಾಗಾದರೆ ನನ್ನ ಪಾಠಗಳು ಯಾವವು? ನಾನು ಓದುತ್ತಿರುವುದು ಏನನ್ನು ? ಮಾನವೀಯತೆ ಇಲ್ಲದ ಈ ಶಿಕ್ಷಕರು ನನಗೇನು ಹೇಳಿಕೊಟ್ಟಾರು ? ನನ್ನ ಶಿಕ್ಷಕ ಹಾಗೂ ಮಾನವೀಯತೆಯ ಪಾಠ ಹೇಳಿ ಕೂಡದ ನನ್ನ ಶಿಕ್ಷಣದ ಮೇಲೆ ಇಲ್ಲದ ಕೋಪ ಹುಟ್ಟಿತು.

ಹಾಗಾದರೆ ಇದೇ ಕೆಳ ಜಾತಿಯ ಮಕ್ಕಳ ಜೊತೆ ಆಟವಾಡುತ್ತಿದ್ದ ಸೋನು ಮುಂದೆ ಹೇಗಿರುತ್ತಾಳೆ ? ಅವಳ ಮಾನವೀಯತೆ ? ಆ ಮಗುವು ನಮ್ಮ ಶಿಕ್ಷಕರ ಮನೆಯ ವಾತಾವರಣದಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಅವಳ ಮನೆಯಲ್ಲಿ ಕೆಳ ಜಾತಿಯವರಿಗೆ ಪ್ರವೇಶ ಇಲ್ಲ ಎಂದಾಯಿತು.
 ಇದೆಲ್ಲ ಮಾನವ ಧರ್ಮ, ಮಾನವೀಯತೆ ಎಂದಾದರೆ, ಪ್ರಾಣಿಗಳು ಇಂತಹ ಮಾನವೀಯತೆ ತೋರದಿರಲಿ, ಮಾನವ ಧರ್ಮಕ್ಕಿಂತ ಪ್ರಾಣಿಧರ್ಮವೆ ಮೇಲು ಅಲ್ಲವೆ!.

ಉದ್ಯೋಗ, ಸಂಬಳಕ್ಕೇಂದೇ  ಇರುವ ಇಂತಹ ಡಿಪ್ಲೋಮ, ಇಂಜನಿಯರಿಂಗ್, ಪದವಿಗಳಿಗಿಂತ ಪ್ರಾಣಿಗಳಿಂದ ಸಿಗುವ ಪಾಠ ಎಷ್ಟು ಉತ್ತಮವಲ್ಲವೆ, ಇಂತಹ ವೃತ್ತಿಪರ ಶಿಕ್ಷಣದ ಜೊತೆಗೆ ಜಾತ್ಯಾತೀತತೆ, ಸೌಹಾರ್ದತೆ, ಪ್ರೀತಿಯನ್ನು ಕಲಿಸುವ ಪ್ರಾಣಿಯತೆಯ! (ಮಾನವೀಯತೆಯ ಮೌಲ್ಯಗಳು) ಪಠ್ಯವು ಸೇರಿಸಬೇಕೆಂದು ಅನ್ನಿಸುತ್ತಿದೆ.

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !   
                       

                          

Saturday, February 23, 2013

ಮಾತ್ಗವಿತೆ-117

ಅಯ್ಯೋ ಸುಮ್ಮನೇ ಹೇಳುತ್ತೀ ಬಿಡು
ಸಿಕ್ಕಾಗ ಸೀರುಂಡೆ ಮಾಡಿ, ಕಾಡಿ, ಬೇಡಿ
ಸೂರೆಗೊಳ್ಳುವ ; ಮಾರೆ ಮುಚ್ಚುವ ನಿನ್ನಾಟ
ನನಗೇನೂ ಹೊಸತಲ್ಲ !

Tuesday, February 19, 2013

ಮಾತ್ಗವಿತೆ-116

ಸುಮ್ಮನೇ ಹಾದಿ ಹಿಡಿದು ಹೊರಟಿದ್ದೆ
ಹಾದಿಯಲ್ಲಿ ಒಂದು ಮರ,
ಮರದ ಬುಡದ ಮೇಲಿನ ರೆಂಬೆ-ಕೊಂಬೆ
ಚಿಗುರು, ಹೂವೂ, ಹೀಚುಕಾಯಿ, ಕಾಯಿ, ಹಣ್ಣು ... !
ಇನ್ನೂ ಏನೇನೋ ಕಣ್ಣಿಗೆ ಬಿದ್ದವು.
ನಡುವೆ ಕುಳಿತ ಎರಡು ಹಕ್ಕಿಗಳು
ಸರಸದಲ್ಲಿ ಕೊಸರಾಡುತ್ತಿದ್ದವು !
ನಾನು ದಿಕ್ಕು ಬದಲಿಸಿದೆ ;
ಮತ್ತೊಂದನ್ನ ಅರಸಿ ಹೊರಟೆ !

Monday, February 18, 2013

ಮಾತ್ಗವಿತೆ-115


ಮಾತ್ಗವಿತೆ-114

ಆತ ಚಿವುಟುತ್ತಲೇ ಇದ್ದ ತೊಡೆಯ
ನಾನೆಂದುಕೊಂಡೆ ಆತ ಒಡೆಯ
ಸುಮ್ಮನಿರಬೇಕು ; ಇಲ್ಲವೆ ಸಿಗುವ
ತುತ್ತು ಅನ್ನವನ್ನೂ ಧಿಕ್ಕರಿಸಬೇಕು !
ಆತ ಚಿವುಟುತ್ತಲೇ ಇದ್ದ ತೊಡೆಯ
ನಾನು ಅಂದುಕೊಂಡೆ ಇದೇನು ನಡೆಯ ?
ನಾನೂ ಚಿವುಟಿದೆ ; ಆತ ಪತರುಗುಟ್ಟಿದ
ಇಂದಿಗೂ ಆತನಿಗೆ ಮಕ್ಕಳ ಭಾಗ್ಯ ಇಲ್ಲ !

Saturday, February 16, 2013

ಕನಕದಾಸರ ಹರಿಭಕ್ತಸಾರ : ವೈಚಾರಿಕ ವಿವೇಚನೆ


                      ಡಾ. ಸಿದ್ರಾಮ ಕಾರಣಿಕ
ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕೀರ್ತನೆಗಳ ಜೊತೆಗೆ ಕೀರ್ತನೇತರ ಹೃದಯಸ್ಪರ್ಷಿ ಸಾಹಿತ್ಯ ಸಂಪತ್ತನ್ನು ಸೃಷ್ಟಿಸಿ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ; ಅನುಪಮವಾದುದು.  ಒಂದು ಕಾಲದಲ್ಲಿ ಊರೊಂದರ ಒಡೆಯನಾಗಿ, ನಾಯಕನಾಗಿ ಬಾಳಿ ಜನಮನ್ನಣೆ ಗಳಿಸಿದ ಕನಕದಾಸರು ದೈಹಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವೇ ಮಿಗಿಲೆಂದು ಭಾವಿಸಿ ದೈವದ ಹುಡುಕಾಟದಲ್ಲಿ ದಾಸರಾದದ್ದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಸುಮಾರು 1550 ರಲ್ಲಿದ್ದ ಕನಕದಾಸರ ಬಗ್ಗೆ ಹಲವಾರು ದಂತಕತೆಗಳು, ಪವಾಡ ಕತೆಗಳು ಜನಮಾನಸದಲ್ಲಿ ಹುಟ್ಟಿಕೊಂಡಿವೆ.  ಆ ಎಲ್ಲ ಮೂಲಗಳ ಜೊತೆಗೆ ಅವರ ಸಾಹಿತ್ಯದಲ್ಲಿ ದೊರೆತ ಕೆಲವು ಅಂಶಗಳನ್ನು ಇಟ್ಟುಕೊಂಡು ಅವಿಭಾಜಿತ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು ಎಂಬುದನ್ನು ಸಂಶೋಧಕರು ಸಾದರಪಡಿಸಿದ್ದಾರೆ. ಕನಕದಾಸರ ಮೂಲ ಹೆಸರು ತಿಮ್ಮಪ್ಪ (ತಿಮ್ಮಪ್ಪಗೌಡ). ತಂದೆ, ಬೀರಗೌಡ (ಬೀರಪ್ಪ), ತಾಯಿ ಬಚ್ಚಮ್ಮ. ತಂದೆ ಬೀರಪ್ಪ ಊರಗೌಡನೂ ವಿಜಯನಗರ ಅರಸರ ಪಾಳೆಯಗಾರನೂ ಆಗಿದ್ದ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ಕನಕದಾಸರು ಬಾಲಕನಾಗಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಪುರಾಣ-ಶಾಸ್ತ್ರಗಳ ಜೊತೆಗೆ ಯುದ್ಧಕೌಶಲವನ್ನೂ ಕಲೆತ್ತಿದ್ದರು. ಅವರಿಗೆ ಮದುವೆಯಾಗಿ ಒಂದು ಗಂಡುಮಗುವೂ ಇತ್ತೆಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ.  ಹೊಲ ಊಳುವಾಗ ಸಿಕ್ಕ ಏಳು ಕೊಪ್ಪರಿಗೆ ಚಿನ್ನವನ್ನು ಜನೋಪಯೋಗಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ ಕಾರಣ ತಿಮ್ಮಪ್ಪ ನಾಯಕ ಕನಕಪ್ಪ, ಕನಕನಾಯಕ ಎಂಬ ಹೆಸರಿಗೆ ಭಾಜನರಾದರು. ತಂದೆ-ತಾಯಿ, ಹೆಂಡತಿ-ಮಗ ಎಲ್ಲರೂ ತೀರಿಕೊಂಡ ನಂತರದಲ್ಲಿ ವೈರಾಗ್ಯದತ್ತ ವಾಲಿದ ಕನಕದಾಸರು ರಕ್ಕಸತಂಗಡಿ ಕಾಳಗದ ದುಷ್ಪರಿಣಾಮವನ್ನು ಕಣ್ಣಾರೆ ಕಂಡು ಸಂಪೂರ್ಣವಾಗಿ ವೈರಾಗ್ಯ ಹೊಂದಿದರು. ತಮ್ಮ ಕೀರ್ತನೆಗಳ ಮೂಲಕ ನಾಡನ್ನು ಸುತ್ತಿ ಜನಜಾಗರವನ್ನು ಮಾಡುತ್ತ ಕಾಗಿನೆಲೆಯ ಕೇಶವ ದೇವಾಲಯದ ಸಮೀಪ ಬದುಕನ್ನು ಕಳೆದರು ಅಲ್ಲಿ ಕನಕದಾಸರ ಸಮಾಧಿ ಇದೆ. ಕನಕದಾಸರ ಮನೆತನದವರು ಇಂದಿಗೂ ಅಲ್ಲಿ ನೆಲೆಸಿದ್ದಾರೆ.
ಕನಕದಾಸರು, ದಾಸಶ್ರೇಷ್ಟರಾಗಿ ಕೀರ್ತನೆಗಳಲ್ಲದೇ ಮುಂಡಿಗೆಗಳನ್ನೂ ರಚಿಸಿದ್ದಾರೆ. ನಳ ಚರಿತ್ರೆ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ ; ತಾವು ಬರೆದ ಸಾಹಿತ್ಯದಿಂದ ಜನ ಜಾಗೃತಿಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕೃತಿಯಲ್ಲಿಯೂ ಕನಕದಾಸರು ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಅವರ ಭಕ್ತಿಯಿಂದ ಭಜಿಸಿದ ‘ಹರಿಭಕ್ತಿಸಾರ’ ಕೂಡ ಆ ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿಯೇ ಮೂಡಿರುವುದು ಗಮನೀಯ.
ಹರಿಭಕ್ತಿಸಾರವು ಭಾಮಿನಿ ಷಟ್ಪದಿಯಲ್ಲಿದ್ದು 111 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಶತಕ ಗ್ರಂಥ ಎಂದೂ ಕರೆಯಲಾಗಿದೆ. ಶತಕ ಸಾಹಿತ್ಯವನ್ನು ಮುಖ್ಯವಾಗಿ ಯಾವುದಾದರೂ ಒಂದು ತತ್ವವನ್ನೋ ನೀತಿಯನ್ನೋ ಹೇಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ನಿರ್ದಿಷ್ಟವಾದ ಕಥಾವಸ್ತು ಇಲ್ಲದಿದ್ದರೂ ಕವಿಯ ಮನೋಧರ್ಮದ ಸ್ವಾತಂತ್ರ್ಯ ಇರುತ್ತದೆ.
ಹರಿಭಕ್ತಿಸಾರದಲ್ಲಿ ಕನಕದಾಸರು ಭಕ್ತಿ, ಜ್ಞಾನ, ವೈರಾಗ್ಯ, ನೀತಿ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರತಿ ಪದ್ಯವೂ ‘ರಕ್ಷಿಸು ನಮ್ಮನನವರತ’ ಎಂಬುದಾಗಿ ಕೊನೆಗೊಳ್ಳುತ್ತದೆ. ತಮಗೊದಗಿದ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ಹರಿಭಕ್ತಿಯ ಹಿರಿಮೆ-ಗರಿಮೆಗಳನ್ನು, ಆತ್ಮನ ಅನಿತ್ಯಾಭಾವ ಮತ್ತು ಅನನ್ಯವಾದ ಶರಣಾಗತಿಯನ್ನು ಇಲ್ಲಿಯ ಪದ್ಯಗಳಲ್ಲಿ ಅಳವಟ್ಟಿವೆ. ಸಾಮಾನ್ಯವಾದ ನಿಯಮದಂತೆ ಹರಿಯ ಸ್ತ್ರೋತ್ರ, ರಚನೆಯ ಉದ್ದೇಶ, ಹರಿಯ ಅವತಾರಗಳ ಕಲ್ಪನೆ, ಮನುಷ್ಯನ ನಿಸ್ಸಹಾಯಕತೆ ಮತ್ತು ಕೃತಿವಾಚಕರಿಗೆ, ಶ್ರವಣರಿಗೆ ಸಿಗುವ ಫಲಶೃತಿಗಳನ್ನು ಇಲ್ಲಿಯೂ ನಿರೂಪಿಸಲಾಗಿದೆ. ಹಾಗೆ ನಿರೂಪಿಸುತ್ತಲೇ ವ್ಯಂಗ್ಯ, ಅಣಕಗಳನ್ನೂ ಮಾಡುವ ಮೂಲಕ ವೈಚಾರಿಕ ದೃಷ್ಟಿಕೋನಕ್ಕೆ ಇಲ್ಲಿ ಎಡೆ ದೊರೆತಿದೆ.
ಹರಿಭಕ್ತಿಸಾರದ ಮೊದಲ ಹದಿನೇಳು ಪದ್ಯಗಳು ಹರಿಯ ನೆಲೆ-ನಿಲುವುಗಳನ್ನು ಹೇಳಲಾಗಿದ್ದು, ಕೊನೆಯ ಪದ್ಯವೊಂದನ್ನು ಬಿಟ್ಟರೆ ಉಳಿದೆಲ್ಲವೂ ಸಂಸ್ಕøತಭೂಯಿಷ್ಟವಾಗಿವೆ. ಇದು ಕನಕದಾಸರ ಸಂಸ್ಕøತ ಪಾಂಡಿತ್ಯವನ್ನೂ ತೋರಿಸುತ್ತದೆ. ಆನಂತರದಲ್ಲಿ ಸುರಪುರದ ಉಲ್ಲೇಖ ಕೂಡ ಬರುತ್ತದೆ.  ಇದರ ಆಧಾರದ ಮೇಲೆಯೇ ಈ ಕೃತಿ ಕನಕದಾಸರದು ಎಂದು ಸಾಬೀತಾಯಿತು. ಸುರಪುರವನ್ನು ಬಿಟ್ಟರೆ ಎಲ್ಲಿಯೂ ತಮ್ಮ ಹೆಸರನ್ನು, ವೈಯಕ್ತಿಕ ವಿಷಯಗಳನ್ನು ಕನಕದಾಸರು ಹೇಳಿಕೊಂಡಿಲ್ಲ.  ಈ ಸುರಪುರವೇ ವರಪುರ, ಬೇಲೂರು ಎಂದುಕೊಂಡ ವಿದ್ವಾಂಸರು ಕನಕದಾಸರು ಬೇಲೂರಿನಲ್ಲಿಯೇ ಈ ಕೃತಿಯನ್ನು ರಚಿಸಿರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಬೇರೆ ಕಡೆ ಇದ್ದ ಕನಕದಾಸರು ಸುರಪುರ ಚೆನ್ನಿಗರಾಯನ ಪ್ರಭಾವದಿಂದ ಈ ಉಲ್ಲೇಖವನ್ನು  ಮಾಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ದಶಾವತಾರಗಳನ್ನು ಹೇಳುತ್ತಲೇ ಕೃಷ್ಣಾವತಾರವನ್ನು ಹೇಳಿ, ಭಾರ್ಗವರಾಮ (ಪರಶುರಾಮ), ಹಲಧರರಾಮ (ಬಲರಾಮ) ಮತ್ತು ದಶರಥರಾಮನಾಗಿ ಹರಿಯ ಅವತಾರವಾಗಿದೆ ಎಂದು ಹೇಳಿರುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ಬರುವ ಹಲಧರರಾಮ ದಶಾವತಾರಗಳಲ್ಲಿ ಬರುವುದಿಲ್ಲ. ಹಾಗೆಯೇ ಕೃಷ್ಣವತಾರದಲ್ಲಿ ಕೃಷ್ಣ ಮಾಡಿದ ಕಾರ್ಯಗಳನ್ನು ತಿಳಿದುಕೊಳ್ಳದೇ ಆತನನ್ನು ಭಜಿಸಲರಿಯದ ವಿಷಯಸುಖಿಗಳ ಬಿಟ್ಟು ರಕ್ಷಿಸು ನಮ್ಮನನವರತ ಎಂದಿರುವುದು ಕೂಡ ಸರಿಯೆನಿಸುವುದಿಲ್ಲ. ಎಲ್ಲವನ್ನೂ ಕ್ಷಮಿಸುವನು ಹರಿ ಎಂದು ಒಂದು ಕಡೆ ತಿಳಿಸುವ ಕನಕದಾಸರು ಇಲ್ಲಿ ‘ಕೆಲವರನ್ನು ಬಿಟ್ಟು’ ಎಂದದ್ದು ದ್ವಂದ್ವ ನಿಲುವನ್ನು ಸೂಚಿಸುತ್ತದೆ.
18 ರಿಂದ 23ನೇ ರವರೆಗಿನ ಪದ್ಯಗಳಲ್ಲಿ ಹರಿಭಕ್ತಿಸಾರವನ್ನು ರಚಿಸುವ ಉದ್ದೇಶಕ್ಕೆ ಹರಿಯೇ ಮಾರ್ಗದರ್ಶಕನಾಗಬೇಕು ಎಂಬ ಬೇಡಿಕೆಯಿದೆ. ‘ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದಂ ನಿನ್ನ ನಾಮಾವಳಿ’ ಎಂಬ ಬೇಡಿಕೆಯೊಂದಿಗೆ ‘ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರು ಹಿರಿಯರರಿಯದ ಮೂಢಮತಿ’ ತಾನು ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದಿನ ಪದ್ಯದಲ್ಲಿ ‘ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮಂ ನೀನೆಂದುಸಿರುತಿವೆ ವೇದಗಳು’ ಎಂಬುದನ್ನು ದಾಖಲಿಸಿದ್ದಾರೆ ! ವೇದಗಳು ಗೊತ್ತಿಲ್ಲ ಎಂದು ಒಂದು ಕಡೆ ಹೇಳಿದ್ದರೆ, ವೇದಗಳು ಹೀಗೆ ಉಸಿರುತ್ತಿವೆಯಲ್ಲ ಎಂದು ಅಚ್ಚರಿ ಪಡುವುದು ಸಮಂಜಸವೆನಿಸಲಾರದು.
24 ರಿಂದ 46ನೇ ಪದ್ಯಗಳವರೆಗೆ ಪುರಾಣ ಕತೆಗಳಲ್ಲಿ ನಿರೂಪಿತವಾದ ಹರಿಯ ಮಹಿಮೆಯನ್ನು ಕೊಂಡಾಡಲಾಗಿದೆ. ಆದರೆ ಇಲ್ಲಿಂದ ಮುಂದೆ ಕನಕದಾಸರ ಲೇಖನಿ ಮೊನಚು ಪಡೆಯುತ್ತದೆ. ವಾಸ್ತವದ ವಿಚಾರಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಅವರು ನಿರೂಪಿಸಲು ಮುಂದಾಗಿದ್ದಾರೆ. ಈರೇಳು ಲೀಕದ ಹೆಬ್ಬೆಳೆಸು ಬೆಳೆವಂತೆ ಕಾರಣಿಕನಾದ ಮನ್ಮಥ ಮತ್ತು ಅದನ್ನು ಬರೆಯುತ್ತ ಹೋಗುವ ಕರಣಿಕ ಬ್ರಹ್ಮ ಹರಿಯ ಮಕ್ಕಳು, ಲಕ್ಷ್ಮಿ ಕುಲಸತಿಯಾದರೆ, ಶಾರದೆ ಸೊಸೆ. ಗಿರಿಜೆ ಸಹೋದರಿ, ಶಂಕರ ಮೈದುನ, ಸುರರೆಲ್ಲ ಕಿಂಕರರು, ಮಾಯೆಯೇ ದಾಸಿ - ಹೀಗೆ ಸಂಬಂಧಗಳ ಪರಿಚಯವನ್ನು ನೀಡುತ್ತಲೇ ‘ಉದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲ್ಲಿ ಭಾಗವತರಾದವರ ಸಲಹುವನಾಗಿ ಸಂಚರಿಸುವುದು’ ಎಂದು ತಿಳಿಸಿದ್ದು, ಹರಿಯು ತನ್ನ ಭಕ್ತರು ಅಥವಾ ತನ್ನನ್ನು ಸ್ತುತಿಸುವವರ ಹೊಟ್ಟೆ ಹೊರೆದುಕೊಳ್ಳಲು ಅಡ್ಡಾಡಿಕೊಂಡಿದ್ದಾನೆ ; ಹೊರತು ಆತನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿಲ್ಲ ಎಂಬ ಧ್ವನಿ ಇರುವುದನ್ನು ಗಮನಿಸಬೇಕು.
‘ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ’
ಎನ್ನುವಲ್ಲಿ ಶಿವ ಮತ್ತು ಬ್ರಹ್ಮ ಇಬ್ಬರೂ ¨ವರಗಳನ್ನು ನೀಡಲು ಮಾತ್ರ ಶಕ್ತರು. ವಿನಃ ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲು ಅರಿಯರು. ಆ ಶಕ್ತಿ ಹರಿಗೆ ಮಾತ್ರ ಉಂಟು ಎಂಬ ವ್ಯಾಖ್ಯಾನವಿದೆ. ಇದು ಶೈವ ಮತ್ತು ಬ್ರಹ್ಮ ಸಂಸ್ಕøತಿಯ ವಿರೋಧಿಯಾಗಿ ಬೆಳೆದ ಭಕ್ತಿಯುಗದ ವೈಷ್ಣವ ನಿಲುವನ್ನು ತೋರುತ್ತದೆ. ಹರಿಯನ್ನು ಇಲ್ಲಿ ಶಿವ-ಬ್ರಹ್ಮರಿಗಿಂತ ಮಿಗಿಲು ಎಂದು ಸಾರಲಾಗಿದೆ. ಧರ್ಮದ ಹೆಗ್ಗಳಿಕೆಯನ್ನು ಹೇಳಿಕೊಳ್ಳುವ ಪರಂಪರೆ ಕನಕದಾಸರನ್ನೂ ಬಿಡದಿರುವುದು ವಿಚಿತ್ರವೆನಿಸುತ್ತದೆ.
ಹರಿಯು ನಾನಾ ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದನ್ನೂ ಶಿಷ್ಟ ರಕ್ಷಣೆ ಮಾಡಿದ್ದನ್ನೂ ನಿರೂಪಿಸುವ ಕನಕದಾಸರು ಮಹಾಭಾರತದಲ್ಲಿ ಕೃಷ್ಣನಾಗಿ ಮಾಡಿದ ಕುಟೀಲತನವನ್ನೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಕುಲನಾಶಕನಾಗಿ, ಕರ್ಣನ ಜನ್ಮವೃತ್ತಾಂತ ತಿಳಿದಿದ್ದರೂ ಮುಂದಿಟ್ಟುಕೊಂಡು ಕೊಲ್ಲಿಸಿ, ‘ಕೊಲ್ಲ ಬಗೆದವನಾಗಿ ನೀ ಹಗೆಯಲ್ಲಿ ಸಖ್ಯ ಬೆಳೆಸಲದು ಹಿತವಲ್ಲ’ ಎಂದು ವಿಡಂಬಿಸಿ ಕನಕದಾಸರು ಅಚ್ಚರಿ ಮೂಡಿಸುತ್ತಾರೆ.
‘ಮಗನ ಕೊಂದವನಾಳುವಂತಾ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆ ಬಗೆಯ ರತಿಕಲೆಗಳಲಿ ಕೂ
ರುಗುರು ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ’
ನರಕಾಸುರನನ್ನು ಕೊಂದು ಆತನ ಹದಿನಾರು ಸಾವಿರು ಹೆಂಡಿತಿಯರಿಗೆ ವಿಟನಾಗಿ ಮೆರೆದ ಎಂದು ಇಲ್ಲಿ ಹೇಳಿರುವುದು ಭಕ್ತಿ ಸ್ತುತಿಯ ಪರಾಕಾಷ್ಠತೆ ಎಂದು ಕೆಲವರು ಹೇಳಬಹುದು. ಆದರೆ ವೈಚಾರಿಕ ಬದ್ಧತೆಯುಳ್ಳ ಕನಕದಾಸರು ಇಲ್ಲಿ ಹರಿಯನ್ನು ವ್ಯಂಗ್ಯ ಮಾಡಿರುವಂತೆ ತೋರುತ್ತದೆ.
ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುವ ಕನಕದಾಸರು ರಾಮಾಯಣದಲ್ಲಿ ರಾವಣನನ್ನು ಕೊಂದದ್ದು, ವಿಭೀಷಣನನ್ನು ಮಿತ್ರನಾಗಿಸಿಕೊಂಡಿದ್ದು, ಹನುಮಂತನನ್ನು ಮಗನೆಂದು ಸ್ವೀಕರಿಸಿದ್ದನ್ನು ಉಲ್ಲೇಖಿಸುತ್ತಾರೆ. ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲ;ಎ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಗಮನೀಯವಾದ ಅಂಶವೆಂದರೆ ದೇವತೆಗಳು ಮಾಡಿದ ಹಾದರವನ್ನು ಯಾವುದೇ ಭಿಡೆಯಿಲ್ಲದೇ ಹೇಳಿದ ಪರಿ.
47 ರಿಂದ 101ನೇ ಪದ್ಯಗಳವರೆಗೆ ಮನುಷ್ಯನ ನಿಸ್ಸಹಾಯಕತೆ, ಮನುಷ್ಯ ತಾಯಿಯ ಹೊಟ್ಟೆಯಲ್ಲಿ ಮಾಂಸ-ರಕ್ತಗಳ ಮಧ್ಯ ಇದ್ದು ಇದ್ದು ಹೊರಕ್ಕೆ ಬಂದ ಸ್ಥಿತಿ, ದೇಹದ ನಶ್ವರತೆ, ಭಗವಂತನ ಕರುಣೆ, ಹರಿಯ ಶಕ್ತಿ ಮೊದಲಾದವುಗಳನ್ನೆಲ್ಲ ಹೇಳುತ್ತ ಮನುಷ್ಯನಾದವನು ಬಹಿರ್ ಆಚರಣೆಗೆ ಹೆಚ್ಚು ಮಹತ್ವ ನೀಡದೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.
‘ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡು ... ...’
ಇಲ್ಲಿ ದೈವದ ನೆಲೆಗಳನ್ನು ಮೊದಲಿಗೆ ಹೇಳಿದ್ದು, ಆನಂತರದಲ್ಲಿ ಭಾಗವತರಿಗೆ ವಂದಿಸದಿದ್ದರೆ ಸದ್ಗತಿಯಿಲ್ಲ ಎಂಬ ಮಾತನ್ನು ಹೇಳಿದ್ದು ವಿಚಿತ್ರವೆನಿಸುತ್ತದೆ. ಯಾಕೆಂದರೆ ಎಂಥ ನೀಚ ಕೆಲಸ ಮಾಡಿದವರಿಗೂ ಹರಿ ಸದ್ಗತಿ ನೀಡುತ್ತಾನೆ ಎಂದು ಈ ಮೊದಲು ತಿಳಿಸಿರುವ ಕನಕದಾಸರು ಇಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಬೇಕಾಗುತ್ತದೆ ! ವಿರೋಧ ಮತ್ತು ಶರಣಾಗತಿ ಈ ಎರಡೂ ಪ್ರಕಾರದ ವಿಚಾರಗಳ ದ್ವಂದ್ವ ಇಡೀ ಕೃತಿಯಲ್ಲಿ ಕಂಡುಬರುವ ಅಂಶವಾಗಿದೆ.
‘ದೀನ ನಾನು, ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು’ ಕನಕದಾಸರು,
‘ತರಳತನದಲಿ ಕೆಲವು ದಿನದುರು
ಭರದ ಗರ್ವದಿ ಕೆಲವು ದಿನ ಮೈ
ಮರೆತು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜಕನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ...’
ಎಂಬಲ್ಲಿ ಹರೆಯದಲ್ಲಿ ವಿಷಯಕೇಳಿ, ಪರಸತಿಗೆ ಮನ ಹರಿದ ಪಾಪ, ಪರಧನದ ಆಸೆಬುರುಕತನ ಇವುಗಳಿಂದ ಆವೃತ್ತನಾಗಿ ಹರಿಯನ್ನು ಮರೆತುದ್ದಕ್ಕೆ ಪಶ್ಚಾತ್ತಾಪಪಡುತ್ತಿರುವಂತೆ ಕನಕದಾಸರು ಕಾಣಿಸುತ್ತಾರೆ. ಈ ಪದ್ಯವನ್ನು ಮೂಲ ಆಕರವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಕನಕದಾಸರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ದಾಸರಾಗುವುದಕ್ಕಿಂತ ಮುಂಚಿನ ಕನಕದಾಸರ ಗುಣಾವಗುಣಗಳ ಉಲ್ಲೇಖ ಇಲ್ಲಿ ದೊರೆಯಬಲ್ಲದು. ‘ಮರೆದನಭ್ಯುದಯದಲಿ’ ಎನ್ನುವ ಮೂಲಕ ತಮ್ಮ ಪಶ್ಚಾತ್ತಾಪದ ಉರಿಯನ್ನು ತನ್ನ ದೈವದ ಮುಂದೆ ಬಿತ್ತರಿಸಿ ತನ್ನನ್ನು ಉದ್ದರಿಸಬೇಕು ಎಂದು ಆರ್ತಸ್ವರದಲ್ಲಿ ಅಂಗಲಾಚಿಸಿರುವುದು ಕೂಡ ಇದೇ ಎಳೆಯನ್ನು ತೋರುತ್ತದೆ. ಯಾವುದನ್ನೇ ಮುಚ್ಚಿಡದೆ ತಮ್ಮ ನಿಜವೃತ್ತಾಂತವನ್ನು ಹೇಳಿಕೊಂಡ ಕನಕದಾಸರು ದೈವಿಕತೆ ಮತ್ತು ವಾಸ್ತವಿಕತೆ ಮಹತ್ವ ನೀಡಿದ ಕವಿಯಾಗಿದ್ದಾರೆ.
ಭೂಮಿಯಲ್ಲಿ ನಳ, ಹರಿಶ್ಚಂದ್ರ, ಪುರುಕುತು, ಪ್ರರೂರವಸ, ಸಗರ ಮತ್ತು ಕಾರ್ತವೀರ್ಯ ಎಂಬ ಪ್ರಸಿದ್ಧ ಚಕ್ರವರ್ತಿಗಳಲ್ಲದೆ ಹಿಂದೆ ಎಷ್ಟೋ ಜನರಿದ್ದರೂ ಅವರನ್ನೆಲ್ಲ ಬಿಟ್ಟು ಭೂಮಿ, ಹರಿಯ ಬೆನ್ನು ಹತ್ತಿದ್ದಾಳೆ ಎಂದು ತಿಳಿಸುವ ಕನಕದಾಸರು ವೈಜ್ಞಾನಿಕವಾದ ವಿಚಾರವನ್ನು ಪ್ರತಿಪಾದನೆಗೆ ಯತ್ನಿಸಿದ್ದಾರೆ. ಭೂಮಿ, ಅಗ್ನಿ, ನೀರು, ವಾಯು, ಆಕಾಶಗಳೆಂಬ ಪಂಚಭೂತಗಳಿಂದ ಒಡಗೂಡಿರುವ ದೇಹವು ಪೂರ್ವಸಂಚಿತ ಫಲ ಎನ್ನುವುದು ಸರಿಯಲ್ಲ ಎಂಬುದು ಕನಕದಾಸರ ವಾದವಾಗಿದೆ. ಪಂಚಭೂತಗಳಿಂದ ಕೂಡಿ ಜನ್ಮ ತಳೆಯುವ ದೇಹದ ಹುಟ್ಟಿಗೆ ಹಿಂದಿನ ಜನ್ಮದ ಫಲ ಕಾರಣವಲ್ಲ ಎನ್ನುವ ಮೂಲಕ ವೈದಿಕ ಧರ್ಮದ ಕರ್ಮಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. ಆದರೆ ಹರಿಯನ್ನು ಸ್ತುತಿಸುವಾಗ ಮಾತ್ರ ಮತ್ತೇ ಮತ್ತೇ ಕರ್ಮದ ಪಾಪವ ತೊಳೆದು ಪಾವನ ಮಾಡು ಎಂದು ಅಂಗಲಾಚುತ್ತಾರೆ ! ಯಾಕೆಂದರೆ ‘ಎತ್ತಿದೆನು ನಾನಾ ಶರೀರವ’ ಎನ್ನುವಲ್ಲಿ ಪುನರ್‍ಜನ್ಮದ ಸಿದ್ಧಾಂತದಲ್ಲಿ ಅವರು ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇನ್ನೂ ತಮ್ಮನ್ನು ಕಾಡುತ್ತಿರುವವು ಎಂದು ಹೇಳುವಲ್ಲಿ ದಾಸರಾದರೂ ವಿಷಯಸುಖದೆಡೆಗೆ ಒಮ್ಮೊಮ್ಮೆ ಮನಸ್ಸು ಮುಖ ಮಾಡುವುದನ್ನು ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಕನಕದಾಸರು ಮೊದಲು ಮದುವೆಯಾಗಿ ಮಕ್ಕಳೊಂದಿಗೆ ಬಾಳಿದವರು. ‘ನಿನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಸಿಲುಕುತಡಿಗೆ’ ಎನ್ನುವಲ್ಲಿ ಈ ಬಗ್ಗೆ ಸಾಕ್ಷ್ಯ ದೊರೆಯುತ್ತದೆ. ಸತ್ವ. ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಹರಿ, ಬ್ರಹ್ಮ, ಹರ ಎಂಬ ಮೂರ್ತಿ ಧರಿಸಿ ಸ್ಥಿತಿ, ಸೃಷ್ಟಿ, ಸಂಚಾರ ಕಾರ್ಯವನ್ನು ಮಾಡುತ್ತವೆ. ಪ್ರಳಯ ಕಾಲದಲ್ಲಿ ಈ ಮೂರೂ ಗುಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿಸುವ ಕನಕದಾಸರು ‘ನೀರ ಮೇಲನ ಗುಳ್ಳೆ, ಬಿದ್ದು ಹೋಗುವ ಕಾಯದ ಪಾಶದಲ್ಲಿ ಬದ್ಧನಾಗಬಾರದು’ ಎಂಬುದಾಗಿ ಜೀವನದ ನಶ್ವರತೆಯನ್ನು ಸಾರಿ, ಸಂಸಾರ ಬಂಧನದಲ್ಲಿ ಸಿಲುಕದೆ, ಜನ್ಮದಿಂದ ಜನ್ಮಕ್ಕೆ ಜಿಗಿಯುವ ದೇಹಕ್ಕೆ ಊರು, ಮನೆ, ಮೋಹ ಇರಬಾರದು ಎಂಬುದನ್ನು ಬೋಧಿಸುತ್ತಾರೆ. ತಾಯಿಯ ಗರ್ಭದಿಂದ (ಜರಾಯುಜ), ಮೊಟ್ಟೆಯಿಂದ (ಅಂಡಜ), ಬೆವರಿನಿಂದ (ಸ್ವೇದಜ) ಮತ್ತು ಸಸ್ಯಗಳಿಂದ (ಉಧ್ಭಿಜ್ಯ) ಎಂಬ ನಾಲ್ಕು ಪ್ರಕಾರಗಳಲ್ಲಿ ಹುಟ್ಟುವ ಚೌಷಷ್ಠ (ಅರವತ್ತ್ನಾಲ್ಕು) ಜೀವಿಗಳು ಹರಿಯ ಪ್ರೇರಣೆಯಿಂದಲೇ ಹಲವು ರೀತಿಯ ಒಳಭೇದಗಳಿಂದ ತೊಗಲು ಬೊಂಬೆಗಳಂತೆ ವರ್ತಿಸುತ್ತವೆ. ಇಲ್ಲಿ ಹರಿಯೇ ಸೂತ್ರಧಾರ ಎನ್ನುವುದನ್ನು ಕನಕದಾಸರು ಹರಿಯ ಶ್ರೇಷ್ಟತ್ವವನ್ನು ಮನಗಾಣಿಸಲು ಪ್ರಯತ್ನಿಸಿದ್ದಾರೆ.
ಮೃತ್ಯು ತನ್ನ ಬೆನ್ನ ಹಿಂದೆಯೇ ಇರುತ್ತದೆ. ಜೊತೆಗೆ ಸತ್ತ ಮೇಲೆ ಯಾರೂ ಜೊತೆಗೆ ಬರುವುದಿಲ್ಲ ಎಂಬ ದೇಹದ ನಶ್ವರತೆಯನ್ನು ಪ್ರತಿಪಾದಿಸುವ ಕನಕದಾಸರು ಜನನ-ಮರಣದ ನಿಜ ಅರ್ಥವನ್ನು ತಿಳಿದು ಬದುಕಬೇಕು ಎಂದಿರುವುದಲ್ಲದೆ ‘ಹುಟ್ಟು ಸಾವಿನ ಮಧ್ಯ ತಾ ನಿಪುಣನೆಂಬುವದು ನಗೆಗೀಡು’ ಎಂಬ ಸತ್ಯವನ್ನು ಹೇಳುತ್ತಾರೆ.
ಬದುಕನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಸಾಮಾಜಿಕ ತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತಾರೆ.
‘ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಆಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ’
ಎನ್ನುವಲ್ಲಿ ಹೊಲೆಯೆಂದು ಪಂಚೆಯನ್ನೆತ್ತಿಕೊಂಡು ಪಕ್ಕಕ್ಕೆ ನೆಗೆಯುವ, ಮಡಿ ಮಡಿಯೆಂದು ಅಡಿಗಡಿಗೆ ಹಾರುವ ಮಂದಿಯ ಬಗ್ಗೆ ಮಾರ್ಮಿಕವಾದ ಮಾತಿದೆ. ಯಾರೂ ಮೇಲಲ್ಲ ; ಯಾರೂ ಕೀಳಲ್ಲ. ಹೊಲೆ ಹೊಲೆ ಎಂದು ಹಾರುವವರು ಕೀಳಾದ ಕಾರ್ಯ ಮಾಡಿ ಮೂಗನ್ನು ಹಿಡಿದು ನೀರಲ್ಲಿ ಮುಳುಗು ಹಾಕಿದಾಕ್ಷಣ ಮಾಡಿದ ಹೊಲೆಗೆಲಸ ಹೋಗಿ ಬಿಡುವುದಿಲ್ಲ. ಹುಟ್ಟಿನ ಹೊಲೆತನಕ್ಕಿಂತ ಉತ್ತಮರು ಎಂದುಕೊಂಡು ಹೊಲಸು ಕೆಲಸ ಮಾಡುವುದು ಕೆಟ್ಟದ್ದು ; ಹೇಯವಾದದ್ದು ಎಂದು ಕನಕದಾಸರು ತಿಳಿ ಹೇಳಿದ್ದಾರೆ. ತಾರತಮ್ಯ ನೀತಿಯನ್ನು ಖಂಡಿಸುವ ಕನಕದಾಸರು, ಪಾಂಡಿತ್ಯದಿಂದ ಪಾಪವನ್ನು ಕಳೆಯಲಾಗದು ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಅಹಂಕಾರಿಗಳು, ಸರಿಯಾದ ನಡೆಯನ್ನು ಹೊಂದದವರು ‘ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ?’ ಎಂದು ಪ್ರಶ್ನಿಸುತ್ತಾರೆ.
ಮಡಿ ಮಡಿ ಎಂದುಕೊಂಡು ನಿತ್ಯವೂ ದೇಹವನ್ನು ತೊಳೆದುಕೊಳ್ಳುವವರು ಮತ್ತು ಎಂಜಲು ಸಲ್ಲುವುದಿಲ್ಲ ಎಂದು ವ್ಯಾಖ್ಯಾನ ಮಾಡುವವರಿಗೂ ಕನಕದಾಸರು ವಾಸ್ತವವನ್ನು ಮನಗಾಣಿಸಿದ್ದಾರೆ. ಎಂಜಲು ಎಂಬುವವರ ನುಡಿಯೇ ಎಂಜಲು ಎನ್ನುವ ಅವರು, ನೀರು, ಅದರೊಳಗಿನ ಪ್ರಾಣಿಗಳ ಎಂಜಲು, ಹಾಲು ಕವರುವಿನ ಎಂಜಲು ! ವಿಚಾರ ಮಾಡಿದರೆ ಎಂಜಲಲ್ಲದ್ದು ಯಾವುದೂ ಇಲ್ಲ ; ನಮಗಾಗಿಯೇ ಮಾತ್ರ ಸೃಷ್ಟಿಯಾದದ್ದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ. ವೈದಿಕ ಸಾಮಾಜಿಕ ವಾತಾವರಣದಿಂದ ನಿರಂತರ ನೋವು ಉಂಡ ಅವರು ಇಂಥ ಡಂಭಾಚಾರಗಳನ್ನು ಕಂಡು ಸಿಡಿದೇಳುತ್ತಾರೆ ; ಪ್ರತಿಭಟಿಸುತ್ತಾರೆ ಮತ್ತು ಖಂಡಿಸುತ್ತಾರೆ. ತಮ್ಮ ದೈವದ ಮೂಲಕ ಹೊಸ ಬದುಕನ್ನು ಹಾರೈಸುತ್ತಾರೆ.
102 ರಿಂದ 108ನೇ ಪದ್ಯಗಳವರೆಗೆ ಕನಕದಾಸರು ಹರಿಭಕ್ತಿಸಾರವನ್ನು ಕೇಳಿದವರಿಗೆ ಆಗುವ ಫಲಶೃತಿಯನ್ನು ವಿವರಿಸಿದ್ದಾರೆ. ಪ್ರತಿ ಪುರಾಣ ಕಾವ್ಯಗಳ ಕೊನೆಯಲ್ಲಿ ಬರುವ ಫಲಶೃತಿ ಸಂಪ್ರದಾಯದ ಛಾಪು ಕನಕದಾಸರಲ್ಲೂ ಕಂಡುಬರುತ್ತದೆ. ಇಂಥಲ್ಲಿ ತಮ್ಮ ದೈವವನ್ನು ಪಾರಮ್ಯಕ್ಕೇರಿಸುವ ಗುರಿ ಮಾತ್ರ ಇರುತ್ತದೆ. ಮುಂದಿನ 109 ರಿಂದ 111ನೇ ಪದ್ಯಗಳಲ್ಲಿ ಮಂಗಲವನ್ನು ಹಾಡಲಾಗಿದೆ. ಇಲ್ಲಿ ಕೂಡ ಹರಿನಾಮಸ್ಮರಣೆಯೇ ಪ್ರಮುಖವಾಗಿದೆ. ಕೆಲ ವಿದ್ವಾಂಸರು ಈ ಮೂರು ಪದ್ಯಗಳನ್ನು ಬಿಟ್ಟು 108ನೇ ಪದ್ಯಗಳವರೆಗೆ ಮಾತ್ರ ಕೃತಿಯನ್ನು ಪರಿಗಣಿಸಿದ್ದಾರೆ.
ಒಟ್ಟಿನಲ್ಲಿ ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.


*****

Friday, February 15, 2013

ಮಾತ್ಗವಿತೆ-113

ನಿನಗೋ ಬಿಸಿಯುಸಿರು
ನನಗೋ ಬಸಿರಾಗೋ ಲೆಕ್ಕ !
ಪಕ್ಕ ಬಿಚ್ಚಿ ಬತ್ತಲಾಗಿ
ಹಾರಿ, ಎಗರಿ ನರಳಾಡುವ
ಬಿಸಿ ಹಸಿಯಾಗೋ ಕಾಲದಲ್ಲಿ
ಕಸಿ ಮಾಡೋದು ತುಸು ಕಸಿವಿಸಿಯೇ !
ಏಕವಾಗಿ, ಪಾಕವಾಗಿ
ಹದ ಬರಬೇಕಲ್ಲವೆ ?
ಕಾಲಕ್ಕೆ ಕಾಯಬೇಕು !

Wednesday, February 13, 2013

ಮಾತ್ಗವಿತೆ-112

ಈ ಒಂದು ದಿನದ ಆಚರಣೆಗೆ
ನಾನು ತಡವರಿಸುತ್ತೇನೆ !
ಉಮೇದು ಬಂದ ಗಳಿಗೆಯೇ
ಆ ದಿನವೆಂದು ತಿಳಿಯಲಾರದೆ
ಹೈರಾಣಾಗುತ್ತೇನೆ !
ಹೋಗ್ಲಿ ಬಿಡಿ ;
ಹಳವಂಡಗಳ ಹಳಹಳಿಕೆ ಬೇಡ
ಪ್ರೀತಿ-ಪ್ರೇಮ ಮೊಳೆತಾದ ಮೇಲೆ
ಬದುಕಿನತನಕ ಪಾರು ಹಾಯಿಸಬೇಕು ಅಷ್ಟೆ !

Monday, February 11, 2013

ಸಾಹಿತ್ಯ ಸಮ್ಮೇಳನದ ಅವಘಡ !


            ಮಾತಾಡುವುದಕ್ಕೆ ತ್ರಾಣ ಕೊಡದ ಅಧ್ಯಕ್ಷರ ಇಳಿ ವಯಸ್ಸು, ಯಾವುದೇ ಹೊಸ ಚಿಂತನೆಗಳನ್ನು ಹೊಳೆಸದ ಹಳೆ ಪ್ರಶ್ನೆಗಳು ಮತ್ತು ಆಗಲೇ ಹೇಳಿದ ಉತ್ತರಗಳ ಪುನರಾವರ್ತನೆ - ಇವುಗಳೊಂದಿಗೆ ಬಹುನಿರೀಕ್ಷಿತ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕೊನೆಗೊಂಡಿತು.

    ಅಧ್ಯಕ್ಷರ ಅನಾರೋಗ್ಯದಿಂದಾಗಿಯೇ ತಡವಾಗಿ ಸಂವಾದವನ್ನು ಪ್ರಾರಂಭಿಸಿದರಾದರೂ ಅವರಾಗಲೇ ತುಂಬ ಸುಸ್ತಾಗಿದ್ದರು. ಅವರನ್ನು ಹೊಗಳುತ್ತಾ, ವಿಷಯಾಂತರ ಮಾಡುತ್ತಾ ಸಂವಾದಕರು ಪ್ರಶ್ನೆ ಕೇಳುತ್ತಾ ಹೋದರು. ಅವರ ಪ್ರಶ್ನೆ ಮತ್ತು ಇವರ ಉತ್ತರದ ನಡುವೆ ಲೇಖಕಿ ಡಾ.ವಸುಂಧರಾ ಭೂಪತಿ ನಿರ್ವಾಹಕಿಯಾಗಿ ಕೆಲಸ ಮಾಡಿದರು. ಆದರೆ ಸಂವಾದದ ಮೂಲಕ ಸಮ್ಮೇಳನಾಧ್ಯಕ್ಷರನ್ನು ಪ್ರೇಕ್ಷಕರು ಅರಿತುಕೊಳ್ಳುವ ಇಂಥ ಸಂವಾದದ ಮೂಲ ಆಶಯವೇ ಈಡೇರಲಿಲ್ಲ.

    ಅಧ್ಯಕ್ಷ ಕೋಚೆ ಇಳಿವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಹಣ್ಣಾಗಿದ್ದರಾದರೂ ಮನೋಚೈತನ್ಯ ಕುಂದಿರಲಿಲ್ಲ. ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿರುವಾಗ ಇನ್ನೊಂದು ಪ್ರಶ್ನೆಯ ಕಡೆ ಹೋಗಲಾಯಿತು. ಆದರೆ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸದೇ ಮುನ್ನಡೆಯಬಾರದು ಎಂದು ಹೇಳಿ ತಮ್ಮ ಉತ್ತರವನ್ನು ಕೋಚೆ ಮುಂದುವರಿಸಿದರು.

            ಅವರಿಗೆ ತೊಂದರೆಯಾಗದಿರಲೆಂದು ಎಲ್ಲರ ಪ್ರಶ್ನೆಗಳನ್ನೂ ಒಟ್ಟಿಗೇ ನೀಡಿ, ಉತ್ತರವನ್ನು ಕಡೆಯಲ್ಲಿ ನೀಡುವ ಅವಕಾಶ ಕಲ್ಪಿಸಲಾಯಿತು. ಆದರೆ 'ತುಂಬ ಪ್ರಶ್ನೆ ಒಟ್ಟಿಗೇ ಕೇಳಿಬಿಟ್ಟರೆ ನನಗೆ ಯಾರು ಏನು ಕೇಳಿದರು ಅಂತ ಗೊತ್ತಾಗುವುದಿಲ್ಲ, ನೆನಪೂ ಇರುವುದಿಲ್ಲ' ಎಂದು ತಮಾಷೆಯಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ರಚಿಸಿ:

          ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕನ್ನಡ ಶಾಲೆಗಳು ಮತ್ತು ಇಂಗ್ಲಿಷ್‌ ಶಾಲೆಗಳನ್ನು ಮುಚ್ಚುವ ಸ್ಥಿತಿ ಯಾಕೆ ಬಂದಿದೆ ಎಂಬ ಬಗ್ಗೆ ಅಧ್ಯಯನ ಆಗಬೇಕು ಎಂದರು. ಸರ್ಕಾರ ಒಂದು ಸಮಿತಿಯನ್ನು ರಚಿಸಿ ಸರ್ವೇ ನಡೆಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆಯಲ್ಲಿ ಓದಿದವರು ಮತ್ತು ಇಂಗ್ಲಿಷ್‌ ಶಾಲೆಗಳಲ್ಲಿ ಓದಿದವರು ಪಡೆದುಕೊಂಡ ಯಶಸ್ಸಿನ ಅನುಪಾತವನ್ನು ತೆಗೆಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾತೃಭಾಷೆಯ ಶಿಕ್ಷಣದಲ್ಲಿ ಅಪಾರ ಯಶಸ್ಸು ಗಳಿಸಿದ್ದಾರೆ. ಆದರೆ ಇಂಗ್ಲಿಷ್‌ ಓದಿದರೆ ಮಾತ್ರ ಗೆಲುವು ಮತ್ತು ಉದ್ಯೋಗ ಸಾಧ್ಯ ಎನ್ನುವ ಭ್ರಮೆ ಮೂಡಿರುವುದರಿಂದಲೇ ಕನ್ನಡ ಶಾಲೆಗಳ ಈ ದುಸ್ಥಿತಿಗೆ ಕಾರಣ ಎಂದು ಕೋಚೆ ಹೇಳಿದರು.

ಮಾತುಕತೆಯಿಂದಷ್ಟೇ ಸಾಧ್ಯ:

        ಕಾವೇರಿ, ಕೃಷ್ಣಾ ನದಿ ಹಂಚಿಕೆ ವಿವಾದದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕೋಚೆ, ಕಳೆದ 20ವರ್ಷಗಳಿಂದ ಕರ್ನಾಟಕ ಮತ್ತು ನೆರೆ ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ವಿವಾದ ನಡೆಯುತ್ತಲೇ ಇದೆ. ಇದನ್ನು ನ್ಯಾಯಾಲಯದ ಮೂಲಕವೇ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ. ಪರಸ್ಪರ ಕೂತು ಚರ್ಚಿಸಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ದೇಣಿಗೆ ಸಂಗ್ರಹಿಸೋಣ:

         ಸಮ್ಮೇಳನ ಸರ್ಕಾರದ ಸಹಾಯಕ್ಕೆ ಕೈಚಾಚಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲೆ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ನಡೆಯುತ್ತಿತ್ತು. ಈಗ ಹಾಗಿಲ್ಲ, ಸರ್ಕಾರದ ಹಣ ಎಂದಾಕ್ಷಣ ಅದ್ದೂರಿತನವೂ ಬರುತ್ತದೆ. ಹಾಗಾಗಿ ಮತ್ತೆ ಜನರಿಂದ ಹಣ ಸಂಗ್ರಹಿಸಿ, ಸರಳ ಸಮ್ಮೇಳನ ಆಯೋಜಿಸಲು ಸಾಧ್ಯ ಎಂದರು.

ಒಂದಾಗಿ ಬಾಳ್ಳೋಣ:

              ಗಡಿ, ಪ್ರಾದೇಶಿಕ ಅಸಮಾನತೆ ಸೇರಿದಂತೆ ಇವತ್ತು ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪ್ರೀತಿಯೇ ಉತ್ತರ ಎಂದು ಕೋಚೆ ನುಡಿದರು. ತಮ್ಮ ಸಂವಾದದ ಕೊನೆಯ ಆಶಯ ಇಷ್ಟೇ, ಎಲ್ಲರೂ ಒಂದಾಗಿ ಇರೋಣ, ಪ್ರೀತಿಯಿಂದ ಬಾಳ್ಳೋಣ ಎಂದರು. 

ಕೃಪೆ : ಉದಯವಾಣಿ

Sunday, February 10, 2013

ರಾವಣಾಯನ

ಬಷೀರ್ ಬಿ.ಎಂ.
1

ಮೂಗು, ಕಿವಿ, ಹೃದಯ ಹರಿದುಕೊಂಡು
ಆಕ್ರಂದನವಿಡುತ್ತಿದ್ದ
ವಿಧವೆ ಶೂರ್ಪನಖಿಯ
ನೋಡಿ ನಕ್ಕಳು ಸೀತೆ
ಅದಕ್ಕಾಗಿ ತೆತ್ತ ಬೆಲೆ
ರಾಮಾಯಣ!

2
ಯಾರು ಹೇಳಿದರು
ರಾಮಾಯಣ ಹುಟ್ಟಿದ್ದು
ವಾಲ್ಮೀಕಿಯ ‘ಮಾನಿಷಾದ’
ಎಂಬ ವಿಷಾದದೊಂದಿಗೆ ಎಂದು...?

ರಾಮಾಯಣ ಹುಟ್ಟಿದ್ದು
ಶೂರ್ಪನಖಿಯ ‘ಅಣ್ಣಾ...’
ಎಂಬ ಆಕ್ರಂದನದೊಂದಿಗೆ

ಶೂರ್ಪನಖಿಯ ಶೋಕ
ರಾಮಾಯಣದ ಶ್ಲೋಕವಾಯಿತು

3
‘ಅಣ್ಣಾ...’ ಎಂಬ ಆಕ್ರಂದನಕ್ಕೆ
ರಾವಣ ‘ಏನಾಯ್ತು ಬಂಗಾರ...?’
ಎಂದು ಧಾವಿಸಿದ
ಕಿವಿ, ಮೂಗು, ಮುಖ ಕಳೆದುಕೊಂಡ
ತಂಗಿಯ ಕಣ್ಣಲ್ಲಿ ಕಣ್ಣೀರಿನಂತೆ
ರಕ್ತ ಸುರಿಯುತ್ತಿತ್ತು!

‘ಇದೇನಿದು ಬಂಗಾರ...’
ರಾವಣ ಮಡಿಲಲ್ಲಿಟ್ಟು ಕೇಳಿದ
‘ನಾಡಿನಿಂದ ಬಂದವರು
ಈ ಸ್ಥಿತಿಗೆ ತಂದರು’
ಶೂರ್ಪನಖಿ ಗಳಗಳನೆ ಅತ್ತಳು
‘‘ನೀನೇನು ತಪ್ಪು ಮಾಡಿದೆ’’
‘‘ನಾನವರ ಇಷ್ಟ ಪಟ್ಟೆ’’

ಅಷ್ಟೇ...
ಮುಂದೆ ರಾಮಾಯಣ ನಡೆಯಿತು
ತಂಗಿಗಾಗಿ ಪ್ರಾಣ ಕೊಟ್ಟ
ಅಣ್ಣನ ಕತೆ
ಜನಮನದಲ್ಲಿ ಹಾಡಾಯಿತು....!!

Friday, February 08, 2013

ದೇವರು : ಹೆಸರು ಮತ್ತು ವಿವಾದ !

ಡಾ. ಸಿದ್ರಾಮ ಕಾರಣಿಕ
ಯಾವುದೋ ಸಿನೇಮಾ ಹಾಡೊಂದರಲ್ಲಿ 'ಶ್ರೀ ರಾಮ'ನ ಹೆಸರು ಬಂದಿದೆಯೆಂದು ತಗಾದೆ ತೆಗೆದ ಬಗ್ಗೆ ಪಬ್ಲಿಕ್ ಟಿ.ವ್ಹಿ.ಯಲ್ಲಿ ಚರ್ಚೆ ಆರಂಭವಾಗಿದೆ. ಆ ಹಾಡಿಗೆ ವ್ಯಕ್ತಪಡಿಸುವವರು ಕನಕದಾಸರ ಹರಿಭಕ್ತಸಾರವನ್ನು ಒಮ್ಮೆ ಓದಬೇಕು.

ಅಲ್ಲಿ ಕನಕದಾಸರು ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುತ್ತ ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲೆ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.

ಇನ್ನು ಮುಂದೆ ರಾಮ, ಕೃಷ್ಣ, ಶಿವ ಮೊದಲಾದ ಗಂಡು ದೇವರುಗಳ ಮತ್ತು ಸೀತಾ, ರುಕ್ಮಿಣಿ, ದ್ರೌಪದಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ ಮೊದಲಾದ ಹೆಣ್ಣು ದೇವರ ಹೆಸರುಗಳನ್ನು ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಟಿ.ವ್ಹಿ. ಮುಂದೆ ಕುಳಿತ ಸ್ವಾಮಿಜಿಯೊಬ್ಬರು 'ಶ್ರೀ ರಾಮ ಅಂದ್ರೆ ಅರ್ಥ ಏನು ಗೊತ್ತಾ ? ಹೆಸರಿನ ಅರ್ಥ ಗೊತ್ತಿಲ್ಲದಿದ್ದರೆ ಹ್ಯಾಗೆ ಹೆಸರಿಡ್ತೀರಿ ?' ಎಂದು ಜೋರಾಗಿಯೇ ಫರ್ಮಾನು ಹೊರಡಿಸಿದರು !

ಅಯ್ಯೋ ಸ್ವಾಮಿ, ಇದು ಬಿಟ್ಟು ಬಿಡಿ ; ಇನ್ನು ಮುಂದೆ ಕಲ್ಲವ್ವ, ಕಲ್ಲಪ್ಪ ಮೊದಲಾದ ಹೆಸರುಗಳನ್ನೂ ಇಡುವಂತಿಲ್ಲವೇನೋ ? ಯಾಕೆಂದರೆ 'ನಮ್ಮ ದೇವರು ಕಲ್ಲಿನ ರೂಪದಲ್ಲಿದೆ. ಆ ಹೆಸರನ್ನು ಬಳಸಬಾರದು' ಎಂದು ಜೋಲಿ ಹೊಡೆಯುತ್ತಾರೋ ಏನೋ ?

ಯಾಕೋ ಇತ್ತೀಚಿಗೆ ಇಂಥ ಪ್ರಕ್ರಿಯೆಗಳು ತುಂಬ ಜೋರಾಗಿಯೇ ನಡೆದಿವೆ. ಹೀಗಿರಬಾರದು ; ಹೀಗಿರಬೇಕು ; ಹೀಗೆಯೇ ಇರಬೇಕು ಎನ್ನುವ ಯಜಮಾನ್ಯ ಸಂಸ್ಕೃತಿ ಮತ್ತೇ ವಿಜ್ರಂಬಿಸಲು ಆರಂಭವಾಗಿದೆಯೇ ? ಪ್ರಜ್ಞಾವಂತರು ಯೋಚಿಸಬೇಕು ಸ್ವಾಮಿ ! ಏನಂತೀರಿ ?

Thursday, February 07, 2013

ಮನುಸ್ಮೃತಿ ಇನ್ನೂ ಸುಟ್ಟಿಲ್ಲ ಸುಡಬೇಕಿದೆ !

ಡಾ. ಸಿದ್ರಾಮ ಕಾರಣಿಕ

ಈ ದೇಶದಲ್ಲಿ ಸ್ತ್ರೀಯರನ್ನು ‘ದೇವತೆ’ ಎಂದೇ ತಿಳಿಯಲಾಗುತ್ತದೆ ಎಂದು ಷರಾ ಬರೆಯತ್ತಲೇ ಆ ‘ದೇವತೆ’ಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಇನ್ನೂ ಮೇಲೆರಲು ಸಾಧ್ಯವಾಗಿಯೇ ಇಲ್ಲ. ಯಾಕೆಂದರೆ ಆ ‘ದೇವತೆ’ ಹೀಗೇ ಇರಬೇಕು ; ಇದನ್ನೇ ತೊಡಬೇಕು ; ಇದನ್ನೇ ಉಣ್ಣಬೇಕು ; ಇಂಥದ್ದನ್ನೇ ಮಾಡಬೇಕು ಮತ್ತು ಇಂಥದ್ದನ್ನು ಮಾಡಬಾರದು ಎಂಬ ಬಿಗಿಯಾದ ಕಟ್ಟಳೆಗಳು ಈ ದೇಶದಲ್ಲಿವೆ. ಈ ದೇಶದಲ್ಲಿ ಆ ‘ದೇವತೆ’ಯನ್ನು ಮೂರ್ಖಳು ಎಂದು ಭಾವಿಸಲಾಗುತ್ತದೆ ; ತಿಳುವಳಿಕೆ ಇಲ್ಲದವಳು ಎಂದು ಹಂಗಿಸಲಾಗುತ್ತದೆ ! ಈ ದೇಶದಲ್ಲಿ ಆ ‘ದೇವತೆ’ಯನ್ನು ಕೇವಲ ಹೇರುವ ಯಂತ್ರವನ್ನಾಗಿ ಮಾತ್ರ ನೋಡಲಾಗುತ್ತದೆ ; ಪುರುಷರ ದೈಹಿಕ ಹಸಿವನ್ನು ತೀರಿಸಿಕೊಳ್ಳಲು ಇರುವ ಒಂದು ಸಾಧನವನ್ನಾಗಿ ಪರಿಗಣಿಸಲಾಗುತ್ತದೆ ! 

ಹೀಗಾಗಿಯೇ ಆ ‘ದೇವತೆ’ಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತವೆ ; ಹೇಯವಾದ ಅತ್ಯಾಚಾರಗಳಾಗುತ್ತವೆ ! ಯಾವತ್ತೂ ಪುರುಷರ ಆಧೀನದಲ್ಲಿಯೇ ಆ ‘ದೇವತೆ’ ಇರಬೇಕು ಎಂಬ ಮನೋಭಾವ ತುಂಬಿಕೊಂಡಿದೆ ; ಏನೇ ಆದರೂ ‘ತಾಳಿ’ಕೊಳ್ಳಬೇಕು ಎಂಬ ತತ್ವಗಾರಿಕೆ ಇದೆ ! ಹೀಗಾಗಿಯೇ ಆ ‘ದೇವತೆ’ ಇಂದು ಮಾರಾಟದ ಸರಕಾಗಿದ್ದಾಳೆ ; ಭ್ರೂಣದಲ್ಲಿಯೇ ಸಾಯುತ್ತಿದ್ದಾಳೆ !

ಹೌದು, ಇದು ನನ್ನದು ಎಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿಯೇ ನಡೆಯುತ್ತದೆ ! ಯಾಕೆಂದರೆ ಮನುಷ್ಯ ಸಂಬಂಧಗಳನ್ನೇ ಪರಗಣಿಸದ ವೈದಿಕಶಾಹಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ; ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಅಂದು ಸುಟ್ಟು ಹಾಕಿದ ಮನುಸ್ಮೃತಿ ಇನ್ನೂ ಬೂದಿಯಾಗಿಯೇ ಇಲ್ಲ ; ಅದು ಈ ದೇಶದಲ್ಲಿ ಇನ್ನೂ ಉರಿಯುತ್ತಲೇ ಇದೆ ! ಸಾಮಾಜಿಕ ಅಸಮಾನತೆಗೆ ಕಾರಣವಾಗಿ, ಬ್ರಾಹ್ಮಣ್ಯಶಾಹಿಯನ್ನು ಈ ದೇಶದ ಜನರ ಮೇಲೆ ಹೇರಿ ಯಜಮಾನಿಕೆ ವಿಕೃತಿಯನ್ನು ಮುಂದುವರಿಸುವ ಮೂಲವೇ ಮನುಸ್ಮೃತಿ ! 

ಇದನ್ನು ಅರಿತುಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 1927 ಡಿಸೆಂಬರ್ 20 ರಂದು ಆ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದರು ; ಇಡೀ ಜಗತ್ತು ಒಂದಾಗಿ ಬದುಕಬೇಕಾದ ಸಂದೇಶವನ್ನು ರವಾನಿಸಿದರು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ನಂತರ ಕೆಲವೇ ದಿನಗಳಲ್ಲಿ ಆ ಮನುಸ್ಮೃತಿ ಮತ್ತೇ ಚಿಗಿತುಕೊಳ್ಳತೊಡಗಿತ್ತು ! ಯಾಕೆಂದರೆ ಅದಾಗಲೇ ಈ ದೇಶದ ಎಲ್ಲರ ತಲೆಯಲ್ಲಿ ಬೀಜವನ್ನು ಬಿತ್ತಿ ರಾಶಿ ಮಾಡುವ ಹವಣಿಕೆಯಲ್ಲಿತ್ತು ! ಹೀಗಾಗಿಯೇ ಮರಾಠಿಯ ಪ್ರಗತಿಪರ ಬರಹಗಾರ ಪ್ರದೀಪ ದೇಶಪಾಂಡೆ ಹೇಳುತ್ತಾರೆ ; ‘ಮನುಸ್ಮೃತಿ ಅಜೂನಹೀ ಜಾಳತೇಚ ಆಹೆ !’ (ಮನುಸ್ಮೃತಿ ಇಂದಿಗೂ ಉರಿಯುತ್ತಲೇ ಇದೆ !)
 
ಈ ಮಾತನ್ನು ಸ್ಪಷ್ಟೀಕರೀಸಲು ಮನುಸ್ಮೃತಿಯಲ್ಲಿ ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಉದ್ದರಿಸುತ್ತಿರುವೆ. (ಧಾರವಾಡದ ಸಮಾಜ ಪುಸ್ತಕಾಲಯ 2003 ರಲ್ಲಿ ಮೂರನೇ ಮುದ್ರಣವಾಗಿ ಪ್ರಕಟಿಸಿರುವ ಶೇಷ ನವರತ್ನ ಅವರು ಅನುವಾದಿಸಿರುವ ಮನುಸ್ಮೃತಿಯಿಂದ ಇಲ್ಲಿಯ ಉದ್ಧರಣೆಗಳನ್ನು ನೀಡಲಾಗಿದೆ) ಮನುಸ್ಮೃತಿಯ ಎರಡನೇ ಅಧ್ಯಾಯದ 213 ಮತ್ತು 214ನೇ ಶ್ಲೋಕಗಳು ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ವ್ಯಾಖ್ಯಾನ ಮಾಡುತ್ತವೆ ;

ಸ್ವಭಾವ ಏಷ ನಾರೀಣಾಮಿಹ ದೂಷಣಂ I
ಅತೋರ್ಥಾನ್ನ ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ’ II213 II

ಎಂದರೆ ಪುರುಷರ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರ ತಪ್ಪಿ ನಡೆಯುವುದಿಲ್ಲ ಎನ್ನುವುದು ಇಲ್ಲಿಯ ಅರ್ಥ !

‘ಅವಿದ್ಯಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ I
ಪ್ರಮದಾ ಹ್ಯುತ್ಪಥಂ ನೇತು ಕಾಮಕ್ರೋಧವಶಾನುಗಂ’ II214 II

ಅಂದರೆ ಕಾಮ ಕ್ರೋಧಗಳಿಂದ ವಶನಾದ ಮನುಷ್ಯನನ್ನು ಅವನು ಪಂಡಿತನೇ ಇರಲಿ, ಪಾಮರನೇ ಇರಲಿ, ದಾರಿ ತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ !

‘ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚ ಸುಭಾಷಿತಂ I
ವಿವಿಧಾನಿ ಚ ಶಿಲ್ಪ ಸಮಾದೇಯಾನಿ ಸರ್ವತಃ’ II229 II

ಸ್ತ್ರೀಯರು, ರತ್ನಗಳು, ಧರ್ಮ, ಶೌಚ, ಸುಭಾಷಿತ, ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂಬುದು ಮೇಲಿನ ಶ್ಲೋಕಕ್ಕೆ ನೀಡಿರುವ ಅರ್ಥವಾಗಿದೆ.

ಇವೆಲ್ಲವುಗಳನ್ನೂ ಹೇಳಿದ ಮೇಲೆ ಮೂರನೇ ಅಧ್ಯಾಯದಲ್ಲಿ,

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ I
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ’ II56 II

ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !’ ಎಂದು ಹೇಳಿಕೊಂಡಿರುವುದು ಇದು ತಿಪ್ಪೆ ಸಾರಿಸುವ ಕೆಲಸವಲ್ಲದೆ ಮತ್ತೇನೂ ಅಲ್ಲ ! 

ಇಂಥ ಮನುಸ್ಮೃತಿ ಈ ದೇಶದ ಜನರೆಲ್ಲರ ಮನಸ್ಸನ್ನು ಕೆಡಿಸಿ ಹಾಕಿದೆ.
ಸಂವಿಧಾನಬದ್ಧವಾಗಿರುವ ಈ ದೇಶದ ಆಡಳಿತ ಕೂಡ ಮನುಸ್ಮøತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ನಮ್ಮ ದೇಶದ ದುರಂತವೇ ಸರಿ. ಬರೀ ಆಡಳಿತಗಾರರು, ಸನಾತನಿ ಪುರೋಹಿತಶಾಹಿಗಳು ಮಾತ್ರವಲ್ಲ ಈ ದೇಶದ ಪ್ರತಿಶತ ತೊಂಬತ್ತರಷ್ಟು ಜನ ಮನುಸ್ಮೃತಿಯ ಪ್ರಕಾರವೇ ಬದುಕು ನಡೆಸುತ್ತಿದ್ದಾರೆ. ಇಂದಿಗೂ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕು ಮನುಸ್ಮೃತಿಯ ಚೌಕಟ್ಟಿನಲ್ಲಿಯೇ ಬಂಧಿಯಾಗಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ! 

ಹೀಗಾಗಿಯೇ ಈ ದೇಶದ ದೀನ-ದಲಿತರು, ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಈಡಾಗಿ ನೋವು ಉಣ್ಣುತ್ತಿದ್ದಾರೆ ! ದಲಿತರ ಮೇಲೆ ನಡೆಯುವ ದೌರ್ಜನ್ಯಗಳು, ಬಹಿಷ್ಕಾರಗಳು, ಮಹಿಳೆಯರ ಮೇಲೆ ನಡೆಯುವ ಹಲ್ಲೆಗಳು, ಅತ್ಯಾಚಾರಗಳು, ಅನಾಗರಿಕ ವರ್ತನೆಗಳು ಈ ಕಾರಣಕ್ಕಾಗಿಯೇ ಇಂದು ಹೆಚ್ಚಾಗುತ್ತಲೇ ಇವೆ !
ಈ ದೇಶದ ಹೆಣ್ಣುಮಕ್ಕಳು ಇಂದು ಎಲ್ಲ ರಂಗಗಳಲ್ಲಿಯೂ ಮುಕ್ತವಾಗಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದಾರೆ. ಶಿಕ್ಷಣದ ಮೂಲಕ ಹೊಸ ಹೊಸ ಅವಕಾಶಗಳೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಇದ್ದಾರೆ. ಕೆಲವು ಜನ ಇದರಲ್ಲಿ ಯಶಸ್ಸನ್ನೂ ಪಡೆದಿದ್ದಾರೆ. ಭಾರತೀಯ ಸಮಾಜ ಇಂದು ಬದಲಾಗಿದೆ ಎಂದು ಎದೆ ತಟ್ಟಿಕೊಂಡು ಭಾಷಣ ಬಿಗಿಯುವ ಮಂದಿಯೂ ನಮ್ಮ ನಡುವೆಯೂ ಇದ್ದಾರೆ. ಆದರೆ ಬದಲಾವಣೆ ಎನ್ನುವುದು ಹೊರಗಿನ ರೂಪ ಮಾತ್ರ ! ಹೆಣ್ಣುಮಕ್ಕಳ ವಿಷಯದಲ್ಲಿ ಇಂದಿಗೂ ಅದೇ ಹಳೆಯ ಮನೋಭಾವಗಳು ನಮ್ಮಲ್ಲಿ ಇಂದಿಗೂ ಜೀವಂತವಾಗಿವೆ ! ಯಾಕೆಂದರೆ ಈ ದೇಶದಲ್ಲಿ ಮನುಸ್ಮೃತಿ ಪೂರ್ಣವಾಗಿ ಸುಟ್ಟು ಹೋಗಿಲ್ಲ !

‘ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯಿಂದ ಬಿಗಿಯಲ್ಪಟ್ಟ ಬಂಧನದಲ್ಲಿಯೇ ಇಂದಿಗೂ ನಾವು ಬದುಕು ನಡೆಸುತ್ತಿದ್ದೇವೆ … … ಸ್ಥಳಾಂತರದ ಜೊತೆಗೆ ವೃತ್ತಿಯಾಂತರವನ್ನೂ ಮಾಡಲಾಗಿದೆ ಎಂಬುದೇನೋ ನಿಜ. ಆದರೆ ಮದುವೆ ಮಾಡುವಾಗ ಮಾತ್ರ ಇಂದಿಗೂ ಜಾತಿಯೇ ಪ್ರಧಾನ ಪಾತ್ರವಹಿಸುತ್ತದೆ. ಈ ದೃಷ್ಟಿಕೋನ ಮನುಸ್ಮೃತಿಯ ಪ್ರಭಾವದಿಂದಲೇ ಚಾಲ್ತಿಯಲ್ಲಿದೆ’ ಎನ್ನುವ ಪ್ರದೀಪ ದೇಶಪಾಂಡೆಯವರ ಮಾತುಗಳನ್ನು ಗಮನಿಸಿದಾಗ ಮನುಸ್ಮೃತಿಯ ಬೇರುಗಳು ಎಷ್ಟೊಂದು ಆಳಕ್ಕಿಳಿದು ನಮ್ಮನ್ನು ಆಳುತ್ತಿವೆ ಎಂಬುದರ ಅರಿವಾಗುತ್ತದೆ.

ಪ್ರದೀಪ ದೇಶಪಾಂಡೆಯವರ ಮಾತುಗಳನ್ನೇ ಮುಂದುವರಿಸಿ ಹೇಳುವುದಾದರೆ ಹೆಣ್ಣುಮಕ್ಕಳನ್ನು ತಮ್ಮ ಆಧೀನ ಎಂದುಕೊಳ್ಳುವ ಪ್ರವೃತ್ತಿ ಇಂದು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದೆ. ‘ಗಂಡು’ ಶ್ರೇಷ್ಠ – ಹೆಣ್ಣು ಕನಿಷ್ಠ ಎನ್ನುವ ವಿಚಾರಗಳು ನಮ್ಮ ತಲೆಯಲ್ಲಿಯೂ ಹಾಗೆಯೇ ಉಳಿದುಕೊಂಡಿವೆ. ಮದುವೆಯ ಸಂದರ್ಭದಲ್ಲಿ ಮದುಮಗನ ಕಡೆಯವರೇ ಎಲ್ಲ ಗೌರವಕ್ಕೂ ಅರ್ಹರು ; ಹೆಣ್ಣಿನ ಕಡೆಯವರು ಗೌಣ ! ಮದುವೆಯಾದ ನಂತರ ವಧುವಿನ ಹೆಸರು ಬದಲಾಗುತ್ತದೆ ; ಅಡ್ಡಹೆಸರೂ ಬದಲಾಗುತ್ತದೆ ! ಮಕ್ಕಳಾದಾಗಲೂ ಹೀಗೆಯೇ ನಮ್ಮ ವರ್ತನೆ ಇರುತ್ತದೆ – ಗಂಡು ಹುಟ್ಟಿದರೆ ಫೇಡೆ ಹಮಚುತ್ತೇವೆ ; ಹೆಣ್ಣುಮಗುವಾಗಿದ್ದರೆ ಜಿಲೇಬಿ ಅಥವಾ ಬರ್ಫಿ ಹಂಚುತ್ತೇವೆ (ಕೆಲವು ಸಲ ಅದೂ ಇಲ್ಲ !) ಮನೆಯಲ್ಲಿ ಹೆಂಡತಿಯಾದಾಕೆ ಗಂಡನನ್ನು ‘ರೀ’ ಎಂದೇ ಕರೆಯಬೇಕು ; ಗಂಡನಾದವನು ಮಾತ್ರ ಹೆಂಡತಿಯನ್ನು ‘ಏಯ್’ ಎಂದೇ ಮಾತನಾಡಿಸುತ್ತಾನೆ !
 
ಗಂಡಸರು ಏನು ಮಾಡಿದರೂ ‘ಅಂವಾ ಗಂಡ್ಸು ; ಮಾಡಿದರ ನಡೀತದ ಬಿಡ’ ಅನ್ನುವ ಮಾತು ಸಾಮಾನ್ಯ ; ಅದೇ ಹೆಂಗಸು ಒಂದು ಸಣ್ಣ ತಪ್ಪು ಮಾಡಿದರೂ ಕೂಡ ‘ಗಂಡುಭೀರಿ’ ಎನಿಸಿಕೊಳ್ಳುತ್ತಾಳೆ ; ವ್ಯಭಿಚಾರಿಣಿ ಪಟ್ಟ ಕಟ್ಟಲಾಗುತ್ತದೆ ! ಅನೈತಿಕ ಸಂಬಂಧ ಮಾಡಿದ ಕೆಟ್ಟ ಹುಳು ಎಂದು ದೂರೀಕರಿಸುತ್ತೇವೆ ! ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಶವ ಸಂಸ್ಕಾರ ಮಾಡುವಂತಿಲ್ಲ ; ವಿಧವೆಯಾದರೆ ಪೂಜೆ-ಪುನಸ್ಕಾರ-ಮದುವೆ-ಮುಂಜಿ-ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ; ಎರಡನೆಯ ಮದುವೆಗೂ ನೂರಾರು ವಿಘ್ನ ! ಗಂಡಸಾದರೆ ಆತ ವಿಧುರನಾದರೂ ಎಲ್ಲದರಲ್ಲೂ ಭಾಗವಹಿಸಬಹುದು ; ಎರಡನೆಯ ಮದುವೆಯನ್ನೂ (ಯಾಕೆ ಮೂರನೆಯ ಮದುವೆಯನ್ನೂ) ಮಾಡಿಕೊಳ್ಳಬಹುದು – ಇದಕ್ಕೆ ಯಾವುದೇ ತಕರಾರುಗಳು ಇಲ್ಲ ! ಮನೆಯಲ್ಲಿ ಗಂಡನಾದವನು ಆರಾಮಾಗಿ ಕುಳಿತಾಗ ಹೆಂಡತಿಯಾದವಳು ಮನೆಯ ಕೆಲಸವನ್ನೆಲ್ಲ ಅಚ್ಚಕಟ್ಟಾಗಿ ಮಾಡಿ ಮುಗಿಸಬೇಕು ; ಹೆಚ್ಚು-ಕಡಿಮೆಯಾದರೆ ಬೈಗುಳಗಳ ಸುರಿಮಳೆ ; ಬುದ್ಧಿಯಿಲ್ಲದವಳು ಎಂಬ ತೆಗಳಿಕೆ !

ಈ ಎಲ್ಲ ಕಾರಣಗಳಿಂದಲೇ ಕೆಲವು ಮುಖಂಡರು, ಸನ್ಯಾಸಿಗಳು ಹೆಣ್ಣಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡತೊಡಗಿದ್ದಾರೆ. ಯಾರೋ ಒಬ್ಬರು ಹೆಣ್ಣುಮಕ್ಕಳು ಹೊರಗೆ ಹೋಗಬಾರದು ; ತಗ್ಗಿ-ಬಗ್ಗಿ ನಡೆಯಬೇಕು. ಯಾವುದೇ ಅಲಂಕಾರ ಮಾಡಿಕೊಳ್ಳಬಾರದು ; ಹೊಸ ಬದುಕಿಗೆ ಹಾತೊರೆಯಬಾರದು ; ಬಟ್ಟೆಗಳನ್ನು ಮೈ ತುಂಬ ಧರಿಸಬೇಕು ಎಂದು ಮೊದಲಾಗಿ ಒದರಿ, ಹೆಣ್ಣುಮಕ್ಕಳು ಹೀಗಿದ್ದರೆ ಅವರ ಮೇಲೆ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. ನಗರಗಳಲ್ಲಿ ಹೆಣ್ಣುಮಕ್ಕಳು ವಿದೇಶಿ ಸಂಸ್ಕೃತಿಯಿಂದ ಪ್ರಭಾವಿತರಾಗಿರುವುದರಿಂದ ಚೆಲ್ಲು ಚೆಲ್ಲಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಅತ್ಯಾಚಾರ ಪ್ರಮಾಣ ಹೆಚ್ಚು ಎಂದು ಕರಬುತ್ತಾರೆ ! ಯಾಕೆ ಹಳ್ಳಿಗಳಲ್ಲಿಯೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುವುದಿಲ್ಲವೆ ! ಅಲ್ಲಿ ಪ್ರಚಾರ ಸಿಗುವುದಿಲ್ಲ ; ನಗರಗಳಲ್ಲಿ ಸುದ್ದಿ ಬಹುಬೇಗ ಹಬ್ಬುತ್ತದೆ ಅಷ್ಟೆ ! ಹಾಗೆ ನೋಡಿದರೆ ಇಂಥ ಎಲ್ಲಿ ವಿಕೃತಿ ಇರುತ್ತದೆಯೋ ಅಂಥಲ್ಲೆಲ್ಲ ಇವು ನಡೆಯುತ್ತಲೇ ಇರುತ್ತವೆ.

ಇನ್ನೊಬ್ಬರು ಬಾಯಿ ಬಾಯಿ ಪಡೆದುಕೊಂಡು ಅತ್ಯಾಚಾರಿಗಳು ಎದುರಿಗೆ ಬಂದಾಗ ಹೆಣ್ಣುಮಕ್ಕಳು ಅವರಿಗೆ ಕೈ ಮುಗಿದು. ‘ಅಣ್ಣಾ, ಅಪ್ಪಾ’ ಎನ್ನಬೇಕು. ಆಗ ಅತ್ಯಾಚಾರಿಗಳ ಮನಃಪರಿವರ್ತನೆಯಾಗುತ್ತದೆ ಎಂಬುದಾಗಿ ಪ್ರವಚನ ಹೇಳತೊಡಗಿದರು ! ಹೆಣ್ಣನ್ನು ಎಷ್ಟೊಂದು ಹೀನಾಯವಾಗಿ ನಡೆಯಿಸಿಕೊಳ್ಳುತ್ತದೆಯಲ್ಲ ಈ ದೇಶ ! ವಿಕೃತ ಮನಸ್ಸಿನವರ ಮುಂದೆ ಕೈ ಕಾಲು ಹಿಡಿದು ಕಾಪಾಡಿ ಎಂದರೆ ರಕ್ಷಣೆ ಸಿಗಲು ಸಾಧ್ಯವೆ ! ಇಂಥ ಮಾತುಗಳೆಲ್ಲ ಹೆಣ್ಣುಮಕ್ಕಳನ್ನು ಇನ್ನೊಂದಿಷ್ಟು ಭ್ರಮಾವಲಯದಲ್ಲಿ ಕೆಡವಲು ಮಾಡುವ ಹುನ್ನಾರಗಳೇ ಆಗಿವೆ ! ಇದಕ್ಕೆಲ್ಲ ಮೂಲ ಕಾರಣ ಮನುಸ್ಮೃತಿ ಇನ್ನೂ ಉರಿಯುತ್ತಲೇ ಇದೆ ! ಅದನ್ನು ಮತ್ತೊಮ್ಮೆ ನಾವೆಲ್ಲ ಸೇರಿ ನಮ್ಮ ಮನೆಗಳಿಂದ-ಮನಗಳಿಂದ ಹೊರ ತಂದು ಸಂಪೂರ್ಣವಾಗಿ ಸುಡಬೇಕಿದೆ ; ಸುಟ್ಟು ಇನ್ನೆಂದೂ ಚಿಗಿಯದಂತೆ ಬೂದಿ ಮಾಡಬೇಕಿದೆ.

Wednesday, February 06, 2013

ಮಾತ್ಗವಿತೆ-111

ಅದ್ಯಾಕೋ ಗೊತ್ತಿಲ್ಲ ...
ದೇವರಿಗೆ ತೆಗೆದಿಟ್ಟ ಹೂವನ್ನು ನಿನಗೆ ಮುಡಿಸಿದ್ದೆ !
ಮುನಿಸು ಹೆಚ್ಚಾಯಿತೋ ;
ದೇವರು ಮುನಿಯುವುದಿಲ್ಲ ಬಿಡು
ಅದು ಕಲ್ಲು !
ನೀನೂ ಮುನಿದು ದೇವರಂತೆಯೇ
ಕಲ್ಲಾದೆ ಯಾಕೆ ಎಂಬುದೇ ನನಗಿನ್ನೂ ಗೂಢ !

Monday, February 04, 2013

ದಲಿತ ಸಾಹಿತ್ಯದ ಗೈರುಹಾಜರಿಯಲ್ಲಿ ಕಸಾಪ ಸಮ್ಮೇಳನ !


ಬಸವರಾಜ ಸೂಳಿಭಾವಿ - ಡಾ. ಎಚ್.ಎಸ್.ಅನುಪಮಾ


ಸರ್ಕಾರ ಅಲುಗಾಡುತ್ತಿರುವಾಗಲೂ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಪರಿಷತ್ತು ಮತ್ತೊಂದು ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಜ್ಜಾಗುತ್ತಿರುವಾಗ ಅದರ ಸ್ವರೂಪದ ಬಗ್ಗೆ ಮತ್ತೆ ಗಂಭೀರ ಚರ್ಚೆ ನಡೆಯತೊಡಗಿದೆ. ವಿಜಾಪುರದ ಬರದ ನಾಡು ತನ್ನಲ್ಲಿರುವ ಸೌಂದರ್ಯ, ಐತಿಹಾಸಿಕ ಸ್ಮಾರಕಗಳನ್ನೆಲ್ಲ ತೋರಿಸಲು ತವಕಿಸುತ್ತಿರುವಾಗ ಪರಿಷತ್ತಿನ ನಿಜಮುಖ ಮತ್ತೆ ಮುನ್ನೆಲೆಗೆ ಬಂದಿದೆ.


ಈ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ವಚನ ಸಾಹಿತ್ಯ, ಅನುಭಾವಿ ಸಾಹಿತ್ಯ, ಗಝಲ್ ಸಾಹಿತ್ಯ, ಜಾನಪದ ಸಾಹಿತ್ಯ ಇತ್ಯಾದಿ ಸಾಹಿತ್ಯದ ನಾನಾ ಪ್ರಕಾರಗಳಿಗೆ ಒಂದೊಂದು ಗೋಷ್ಠಿ ಇದೆ. ಎಂದಿನಂತೆ ದಲಿತ ಸಾಹಿತ್ಯ ಪ್ರಕಾರವಷ್ಟೇ ಗೈರುಹಾಜರಿ. ರಾಜಾಶ್ರಯದಲ್ಲಿ ಹುಟ್ಟಿದ ಕಸಾಪ ತಳ ಸಮುದಾಯಗಳ ತಲ್ಲಣ ಒಳಗೊಂಡ ಸಾಹಿತ್ಯದ ದನಿಯಲ್ಲ ಎಂಬುದನ್ನು ಅದರ ನಡೆ ಸ್ಪಷ್ಟಪಡಿಸುತ್ತಲೇ ಬಂದಿದೆ.


ನೂರು ವರ್ಷ ಮಿಕ್ಕಿದ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಈ ತನಕ ಆಯ್ಕೆಯಾದವರಲ್ಲಿ ಒಬ್ಬರೂ ದಲಿತ ಸಮುದಾಯದಿಂದ ಬಂದವರಿಲ್ಲ. ನಡೆದ ಎಪ್ಪತ್ತೊಂಬತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾದವರಲ್ಲಿ ಗೀತಾ ನಾಗಭೂಷಣ ಒಬ್ಬರಷ್ಟೇ ಪರಿಶಿಷ್ಟ ಪಂಗಡದವರು. ಜಿಲ್ಲಾ ಘಟಕಗಳ ಸಂಘಟನೆ ಮತ್ತು ಸಮ್ಮೇಳನಗಳಲ್ಲಿಯೂ ಇದು ಪುನರಾವರ್ತನೆಯಾಗಿದೆ.


ಈ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರ ಯಾದಿಯಲ್ಲಿ ದಲಿತ ಸಮುದಾಯದ ಸಾಹಿತಿಗಳ ಹೆಸರುಗಳಿಲ್ಲ. ಇದು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಕಟುಸತ್ಯವೆಂದರೆ ಕಸಾಪಕ್ಕಿರುವುದು ದಲಿತ ಅಸ್ಮಿತೆ ನಿರಾಕರಿಸುವ ಮೇಲ್ಜಾತಿ ಚಹರೆ. ಜಾತಿ ಆಧಾರಿತ ಸಮಾಜದಲ್ಲಿ ಕಸಾಪ ಮೇಲ್ವರ್ಗದವರ ಸಾಹಿತ್ಯಿಕ ಸಂವೇದನೆಗಳ ಅಭಿವ್ಯಕ್ತಿ ಘಟಕದಂತಿದೆ. ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಬೇಕೆಂಬ ಅಭಿಪ್ರಾಯ ವ್ಯಕ್ತಗೊಂಡಾಗಲೂ ಅದನ್ನು ನಿರಾಕರಿಸುವ ಅಸಡ್ಡೆ ಪ್ರಕಟವಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.


ಹಂಪನಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ 1979ರಲ್ಲಿ ನಡೆದ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಿ ಎಂಬ ಕೂಗು ಕೇಳಿಬಂತು. ಚನ್ನಣ್ಣ ವಾಲೀಕಾರರ ಆ ನಿಲುವಿಗೆ ಕಸಾಪ ಅಧ್ಯಕ್ಷರು ಸಾಹಿತ್ಯದಲ್ಲಿ `ದಲಿತ-ಬಲಿತ' ಎಂಬುದಿಲ್ಲ ಎಂದು ಹೇಳಿದ್ದರು. ಈ ಮಾತು ಅವರೊಬ್ಬರ ಹೇಳಿಕೆ ಮಾತ್ರವಲ್ಲ, ಸಾಹಿತ್ಯದಲ್ಲಿ ಮೇಲ್ಜಾತಿಗಳ ಪ್ರಾಬಲ್ಯ ಮತ್ತು ಧೋರಣೆಯ ಪುರಾವೆಯೂ ಆಗಿದೆ. ಕಸಾಪದ ಈ ಮನೋಧರ್ಮವನ್ನು ವಿರೋಧಿಸಿಯೇ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿದ್ದರೂ ಆ ಧೋರಣೆ ವಿಜಾಪುರ ಸಾಹಿತ್ಯ ಸಮ್ಮೇಳನದವರೆಗೂ ಮುಂದುವರೆದುಕೊಂಡು ಬಂದಿದೆ.


ಸಮ್ಮೇಳನದಲ್ಲಿ ಯಾವ ಗೋಷ್ಠಿಯನ್ನಾದರೂ ಇಡುವ ಸ್ವಾತಂತ್ರ್ಯವಿರುವಾಗ ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗೆ ಅವಕಾಶ ನೀಡಿ ಎಂದು ವಿಜಾಪುರ ಸಮ್ಮೇಳನದ ಪೂರ್ವಭಾವಿ ಸಭೆಗಳಲ್ಲಿ ದಲಿತ ಸಾಹಿತಿಗಳು ಒತ್ತಾಯಿಸುತ್ತಲೇ ಬಂದಿದ್ದರು. ದಲಿತ ಸಂಘಟನೆಗಳ ಅಭಿಮತವೂ ಅದೇ ಆಗಿತ್ತು. ಅಷ್ಟಾದರೂ ದಲಿತ ಸಾಹಿತ್ಯ ಗೋಷ್ಠಿಗೆ ಅವಕಾಶ ನೀಡುವ ವಿಚಾರ ಕೈಬಿಟ್ಟುಹೋಗಿದೆ. ಜಾತಿಪದ್ಧತಿ ವಿರುದ್ಧ ಚಾರಿತ್ರಿಕ ಹೋರಾಟ ಕಟ್ಟಿ, ಅನುಭವ ಮಂಟಪದಲ್ಲಿ ದಲಿತ ದಮನಿತ ದನಿಗಳಿಗೆ ವಿಪುಲ ಅವಕಾಶ ನೀಡಿದ ಬಸವಣ್ಣನ ನಾಡಿನಲ್ಲಿ ನಡೆವ ಸಮ್ಮೇಳನ ದಲಿತ ಸಾಹಿತ್ಯ ಚರ್ಚೆಗೆ ಆಸ್ಪದ ಕಲ್ಪಿಸದೇ ಹೋಗಿರುವುದು ಕಸಾಪದ ಮೇಲ್ಜಾತಿ ಪ್ರೇಮವನ್ನು ಢಾಳಾಗಿ ತೋರ್ಪಡಿಸಿದೆ.


ದಲಿತ ಚಳವಳಿಯ ಮುನ್ನ ಮತ್ತು ನಂತರ ರಚಿತವಾದ ಅಪಾರ ದಲಿತ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡಾಗ; ಸಂವಿಧಾನಾತ್ಮಕ ಕ್ರಮಗಳ ಹೊರತಾಗಿಯೂ ದಲಿತ ಸಮುದಾಯ ಬಿಕ್ಕಟ್ಟುಗಳಲ್ಲಿ ಮುಳುಗಿರುವಾಗ; ಬೆರಳೆಣಿಕೆಯಷ್ಟು ದಲಿತ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರೂ ದಲಿತ ಸಂವೇದನೆ - ಬಿಕ್ಕಟ್ಟು ಕುರಿತು ಒಂದೂ ಗೋಷ್ಠಿಯಿಲ್ಲದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಹುದೊಡ್ಡ ಲೋಪವಾಗಿ ಕಾಣಿಸುತ್ತಿದೆ.


ಇಲ್ಲಿ ಕೆಲ ಪ್ರಶ್ನೆಗಳೇಳುತ್ತವೆ. ಭಾಗವಹಿಸುತ್ತಿರುವ ದಲಿತ ಲೇಖಕರು ಏಕೆ ಈ ಕುರಿತು ಪ್ರಶ್ನಿಸುವುದಿಲ್ಲ? ಸಾಹಿತ್ಯ ಪರಿಷತ್ತಿನಲ್ಲಿ ಪರಿಶಿಷ್ಟಜಾತಿ ಕೋಟಾದಲ್ಲಿ  ಪ್ರಾತಿನಿಧ್ಯ ಪಡೆದವರೇಕೆ ಪ್ರತಿಭಟಿಸುವುದಿಲ್ಲ? ದಲಿತ ಪ್ರಶ್ನೆಯನ್ನು ದಲಿತರೇ ಎತ್ತಬೇಕೆಂದು ದಲಿತೇತರ ಲೇಖಕರು ಏಕೆ ಭಾವಿಸುತ್ತಾರೆ? ಮಾತೆತ್ತಿದರೆ ದಲಿತ ಪರ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುವ ಸರ್ಕಾರದಿಂದ ಅನುದಾನ ಪಡೆಯುವ ಪರಿಷತ್ತು ಗೋಷ್ಠಿಯೊಂದನ್ನು ದಲಿತ ಸಂವೇದನೆಗೆ ಮೀಸಲಿಡಲು ಏಕೆ ಹಿಂದೆ ಮುಂದೆ ನೋಡುತ್ತದೆ? ಇಂಥ ಪ್ರಶ್ನೆಗಳಿಗೆ ಸಮಜಾಯಿಷಿ ಉತ್ತರಗಳು ಸಿದ್ಧವಾಗಿರುತ್ತವೆ. ಆದರೆ ಇಂಥ ಸಮಜಾಯಿಷಿಗಳ ಸಾರ ಇಷ್ಟೆ: ದಲಿತ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವ ಪ್ರಾತಿನಿಧಿಕವಾಗಿರಲೆಂದೇ ಹೊರತು ಸಮಾನ ನೆಲೆಯ ಸಹಭಾಗಿತ್ವ ಹಾಗೂ ಒಳಗೊಳ್ಳುವಿಕೆಗಲ್ಲ.


ಸಾಮಾಜಿಕ ನ್ಯಾಯದ ಮೇಲೆ ಆಣೆಯಿಡುವ ಸರ್ಕಾರದ ಲೋಪಗಳನ್ನು ಎತ್ತಿತೋರಿಸಿ ಪ್ರಶ್ನಿಸುವುದೇ ಇಷ್ಟು ಕಷ್ಟವಾದರೆ; ಭಾಷೆ ಕುರಿತ ತಪ್ಪು ನೀತಿಗಳ ವಿರುದ್ಧ, ನಿರುಪಯೋಗಿ ಕಾರ್ಯಕ್ರಮಗಳ ವಿರುದ್ಧ, ಜನವಿರೋಧಿ ತಾತ್ವಿಕತೆಯ ವಿರುದ್ಧ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುವುದು ದೂರವೇ ಉಳಿಯಿತು.


ಸಾಹಿತ್ಯ, ಕಲೆಗಳು ಎಂದಿನಿಂದ ರಾಜಾಶ್ರಯದಲ್ಲಿ ಅರಳಿವೆ, ನರಳಿವೆ. ಹಾಗೆಯೇ ರಾಜಸ್ವದ ಹಂಗಿಲ್ಲದೆ ಜನಪದರ ಬಯಲಲ್ಲಿ ಜೀವಂತವಾಗಿಯೂ ಉಳಿದಿವೆ. ಸಾಹಿತ್ಯಕ್ಕೆ ದೊರಕುವ ರಾಜಾಶ್ರಯ ಕೇವಲ ಆಸ್ಥಾನ ಕವಿ, ಪಂಡಿತರ ಸ್ವ-ಪೋಷಣೆಗಷ್ಟೇ ಸೀಮಿತವಾಗುವುದಾದರೆ; ರಾಜಾಶ್ರಯದ ಹೆಮ್ಮರ ಸಣ್ಣಪುಟ್ಟ ಸಸಿಗರಿಕೆಗಳೆಂಬ ಬಹುತ್ವ ಬಿಂಬಿಸುವ ಜೀವಸಂಕುಲದ ಬೆಳವಣಿಗೆಗೆ ಮಾರಕವಾಗುವುದಾದರೆ; ಅದು ಭಾಷೆಗೂ, ಆ ಭಾಷೆಯ ಸಾಹಿತ್ಯಕ್ಕೂ ಶತ್ರುವೇ.


ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರೀ ಅನುದಾನವನ್ನವಲಂಬಿಸಿದ ಒಂದು ಸಂಸ್ಥೆ. ಪ್ರತಿ ವರ್ಷ ನಡೆಯುವ ಸಮ್ಮೇಳನವೂ ಅದರ ಪ್ರತಿಬಿಂಬವೇ ಆಗಿರುತ್ತದೆ. ಅದು ಎಷ್ಟು ರಾಜಕೀಕರಣಗೊಂಡಿದೆಯೆಂದರೆ ಅಲ್ಲಿ ಸಾಹಿತಿಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಅಷ್ಟೇ ಅಲ್ಲ, ಅದು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನುವಂತೆಯೂ ಇಲ್ಲ. ಸರ್ಕಾರದ ಹಂಗಿನಲ್ಲಿರುವ ಕಸಾಪದಲ್ಲಿ ರಾಜಕೀಯ-ಸಾಮಾಜಿಕ ಬದುಕಿನ ಲೆಕ್ಕಾಚಾರ, ಸಮೀಕರಣಗಳೇ ಮುಂದುವರೆಯುತ್ತವೆ. ಎಲ್ಲೆಡೆ ಇಂಗ್ಲಿಷ್ ಶಾಲೆ ತೆರೆಯಲು ಅವಕಾಶ ಕೊಟ್ಟು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ ಮತ್ತು ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಕಸಾಪ, ಸರ್ಕಾರ ಕೊಡುವ ಅನುದಾನದಿಂದ ಬಾಯಿಮುಚ್ಚಿಕೊಂಡಿದೆ. ಸರ್ಕಾರದ ಅನುದಾನ ಜನರ ಹಣ, ಅದನ್ನು ಕೊಡಬೇಕಾದ್ದು ಸರ್ಕಾರದ ಕರ್ತವ್ಯ ಎಂದುಕೊಂಡರೂ ಅದರ ಅಧೀನತೆ ಮಗ್ಗಲು ಬದಲಿಸಿದಂತಾಗುತ್ತದೆ.


ಸಾಹಿತ್ಯ ಚಳವಳಿಯಲ್ಲಾಗುವ ಹೊಸತನಗಳಿಗೆ ತೆರೆದುಕೊಳ್ಳದೇ, ಕಾಲದ ಪಲ್ಲಟಗಳನ್ನು ಗಮನಿಸದೇ ಬೀಸುಗಾಲಿಡುವ ಕಸಾಪ ಉದ್ದಕ್ಕೂ ಸಾಂಪ್ರದಾಯಿಕ ನೆಲೆಯಲ್ಲಿ ಒಂದೇ ಮಾದರಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಕಾಲದ ಸಂಕಟಗಳಿಗೆ, ಅದನ್ನು ಒಳಗೊಳ್ಳುವ ಸಾಹಿತ್ಯ ಸಂವೇದನೆಯ ಕಡೆಗೆ ಕ್ಯಾರೆ ಅನ್ನದೆ ವರ್ಷವರ್ಷ ಸಮ್ಮೇಳನ ನಡೆದು ಗೊತ್ತುವಳಿ ಸ್ವೀಕರಿಸಲಾಗುತ್ತಿದೆ. ಪರಿಷತ್ತು ಜಾತಿ ವಾಸನೆಯಿಂದ ಎಂದೂ ಬಿಡಿಸಿಕೊಳ್ಳದಿರುವುದು; ರಾಜಕಾರಣಿಗಳಿಂದ ಉದ್ಘಾಟಿಸಲ್ಪಡುವುದು; ಸಾಹಿತ್ಯಕ್ಕೆ ಸಂಬಂಧವೇ ಇಲ್ಲದ ಸ್ವಾಮಿಗಳನ್ನು ಕರೆತಂದು ಉಧೋ ಉಧೋ ಎನ್ನುವುದು ಇವೆಲ್ಲ ಅದರ ಸ್ವರೂಪಕ್ಕೆ ತಕ್ಕ ಪುರಾವೆಗಳಾಗಿವೆ. 


ಎಂದೇ ಕಸಾಪ ಹೊಸತನ ಪಡೆದುಕೊಳ್ಳಬಯಸಿದಲ್ಲಿ ತುಂಬ ನಿಷ್ಠುರ ದಾರಿ ಕ್ರಮಿಸಬೇಕಾಗುತ್ತದೆ. ಸ್ವಾಯತ್ತ ಸಂಸ್ಥೆಯಾಗಿ ತನ್ನ ಹಣಕಾಸನ್ನು ತಾನೇ ಉತ್ಪಾದಿಸಿಕೊಂಡು ಸರ್ಕಾರದ ಹಂಗಿನಿಂದ ಹೊರಬರಬೇಕು. ಕಸಾಪ ವರ್ತಮಾನದ ತಲ್ಲಣಗಳ ಬಗ್ಗೆ ಮಾತನಾಡಿ ಜನರ ಧ್ವನಿಯಾಗಬೇಕು. ಸಾಹಿತ್ಯದ ಬೆಳವಣಿಗೆ ಗಮನಿಸಿ ಹೊಸ ಸಾಧ್ಯತೆಗಳಿಗೆ ಅವಕಾಶ ನೀಡಬೇಕು. ರಾಜಕಾರಣದ ಮತ್ತು ಆಳುವವರ ಭಾಷೆಯಾದ ಮೆರವಣಿಗೆಯ ಔಚಿತ್ಯ ಏನೆಂದು ವಿವೇಚನೆಗೊಳಪಟ್ಟು ಸರಳತೆ ಸಾಹಿತ್ಯ ಸಮ್ಮೇಳನಗಳ ಆದ್ಯತೆಯಾಗಬೇಕು. ಸಾಹಿತ್ಯ ಅರಿವಿನ ವಿನಯದತ್ತ ಸಾಗಬೇಕು.

ಕಸಾಪ ಮುನ್ನಡೆಸುವವರು ಈ ಎಲ್ಲದರ ಕುರಿತು ತುರ್ತಾಗಿ ಯೋಚಿಸಬೇಕು.
ಕೃಪೆ : ಪ್ರಜಾವಾಣಿ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.