ಧಾರವಾಡ: `ಎಡಗೈ-ಬಲಗೈ ನೆಪದಲ್ಲಿ ಸಂಘರ್ಷಕ್ಕೆ ಇಳಿದಿರುವ ದಲಿತ ಸಂಘಟನೆಗಳು,
ವಶೀಲಿಬಾಜಿ ಭರದಲ್ಲಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ' ಎಂಬ ಹೇಳಿಕೆ ಭಾನುವಾರ
ಇಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.
ಲೇಖಕ ಡಾ. ಲಕ್ಷ್ಮೀನಾರಾಯಣ ಅವರು, ಸಮಾವೇಶದ ಸಂವಾದದ ವೇಳೆ `ಉತ್ತರ ಪ್ರದೇಶದಲ್ಲಿ
ದಲಿತರ ಪರವಾದ ಬಿಎಸ್‌ಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಕರ್ನಾಟದಕದಲ್ಲಿನ
ದಲಿತ ಸಂಘಟನೆಗಳ ವಶೀಲಿ ಬಾಜಿಯಿಂದಾಗಿ ದಲಿತ ಚಳವಳಿ ತನ್ನ ಅಸ್ತಿತ್ವ ಕಳೆದುಕೊಂಡಿತು.
ದಲಿತ ಚಳವಳಿ ಮೂರ್ತ ರೂಪ ಪಡೆದು ರಾಜಕೀಯ ಶಕ್ತಿ ಆಗಲೇ ಇಲ್ಲ' ಎಂದರು.
ಆಗ ವೇದಿಕೆ ಏರಿದ ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮೀನಾರಾಯಣ ನಾಗವಾರ, `ಯಾವ
ಸಂಘಟನೆಗಳು ವಸೂಲಿಗೆ ಇಳಿದಿವೆ ಎಂಬುದನ್ನು ಸಾಬೀತುಪಡಿಸಿ, ಇಲ್ಲದಿದ್ದರೆ ಆ ಮಾತು
ವಾಪಸ್ ಪಡೆಯಬೇಕು. ಪ್ರಗತಿಪರರು ಎನಿಸಿಕೊಂಡವರೇ ದಲಿತ ಸಂಘಟನೆಗಳ ಬಗೆಗೆ ಹೀಗೆ
ಮಾತನಾಡಿದರೆ ಹೇಗೆ?' ಎಂದು ಪ್ರಶ್ನಿಸಿದರು.
ನಾಗವಾರ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಹಿರಿಯ ಸಾಹಿತಿ ರಾಜಪ್ಪ ದಳವಾಯಿ, `ದಲಿತ
ಸಂಘಟನೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ ಅಥವಾ ವಿಘಟನೆಗೊಂಡಿವೆ ಎನ್ನುವ ಮೂಲಕ
ಕೆಲವರು ಜನಸಾಮಾನ್ಯರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ಯಾರಾದರೂ ದಲಿತರ
ಹಿತಾಸಕ್ತಿಗೆ ವಿರುದ್ಧವಾದ ಒಂದು ಹೇಳಿಕೆ ಕೊಟ್ಟು ನೋಡಲಿ. ಆಗ ದಲಿತರು ಏನು ಎಂಬುದು
ಗೊತ್ತಾಗುತ್ತದೆ' ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
`ದಲಿತರಲ್ಲಿ ಎಡಗೈ-ಬಲಗೈ ವಿಚಾರ ದೊಡ್ಡದು ಮಾಡುವ ಕೆಲವು ಪ್ರಗತಿಪರರೇ ಮೊದಲು
ಸಮಾಜವನ್ನೇ ಅರ್ಥಮಾಡಿಕೊಂಡಿಲ್ಲ. ಇನ್ನು ಚಳವಳಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ'
ಎಂದು ಪ್ರಶ್ನಿಸಿದರು.
`ದಲಿತರನ್ನು ಇನ್ನೂ ಎಡಗೈ, ಬಲಗೈ ಎಂದು ಒಡೆದು ಆಳಲಾಗುತ್ತಿದೆ. ಮೇಲ್ಜಾತಿಗಳಲ್ಲಿ
ಒಳಪಂಗಡಗಳು ಇದ್ದು, ಹೊಡೆದಾಟ-ಕೊಲೆಗಳೇ ನಡೆದಿದ್ದರೂ ಅದನ್ನು ಅಷ್ಟಾಗಿ ಪರಿಗಣಿಸದ
ಕೆಲವರು ದಲಿತರನ್ನು ಈ ರೀತಿ ಗುರುತಿಸುತ್ತಿದ್ದಾರೆ' ಎಂಬ ದಲಿತ ಮುಖಂಡರ ಆಕ್ರೋಶವೂ
ವ್ಯಕ್ತವಾಯಿತು. ಇದಕ್ಕೂ ಮುನ್ನ ನಡೆದ `ಹೊಸ ತಲೆಮಾರಿನ ಕಥಾ ಸಾಹಿತ್ಯ' ಗೋಷ್ಠಿಯಲ್ಲಿ
ಎಸ್.ಗಂಗಾಧರಯ್ಯ, `ಪ್ರಶಸ್ತಿ ನೀಡಲು ಪರಿಗಣಿಸುವ ಸಂದರ್ಭದಲ್ಲಿ ಅರ್ಹತೆ ಇದ್ದವರನ್ನು
ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ' ಎಂದು ಹೇಳಿದ್ದು ಬಿಸಿ ಚರ್ಚೆಗೆ ಕಾರಣವಾಯಿತು.
ಗೋಷ್ಠಿ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದ ಲಕ್ಷ್ಮೀನಾರಾಯಣ ನಾಗವಾರ,
`ಅಸ್ಪೃಶ್ಯರು' ಎಂಬ ಪದ ಬಳಕೆ ಸರಿಯಲ್ಲ. ಆ ಮೂಲಕ ಗಂಗಾಧರಯ್ಯ ದಲಿತರನ್ನು
ಅವಮಾನಿಸುತ್ತಿದ್ದಾರೆ. ಆ ಪದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ನಾಗವಾರ ಅವರ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಗಂಗಾಧರಯ್ಯ, `ಅಸ್ಪಶ್ಯರು' ಎಂಬ ಪದ
ಬಳಕೆ ಮಾಡಿದ್ದು ಯಾರನ್ನೋ ನೋಯಿಸಲು ಅಲ್ಲ. ಬದಲಿಗೆ ಪ್ರಶಸ್ತಿಗೆ ಆಯ್ಕೆಯ ರಾಜಕೀಯ
ಬಿಚ್ಚಿಡುವಾಗ ಮಾತಿನ ಭರದಲ್ಲಿ ಹೇಳಿದ್ದು, ಅದು ನೋವುಂಟು ಮಾಡಿದ್ದರೆ ವಿಷಾದ
ವ್ಯಕ್ತಪಡಿಸುವುದಾಗಿ ಹೇಳಿದರು.
ಕೃಪೆ : ಮನೋಜ್‌ಕುಮಾರ್ ಗುದ್ದಿ, ಪ್ರಜಾವಾಣಿ
No comments:
Post a Comment