- ಮಿ.ವೆಂ.ಶ್ರೀನಿವಾಸ
ಸಾಯಂಕಾಲ ೬ ಗಂಟೆ ಸಮಯ. ನಾನು ಮತ್ತು ನನ್ನ ಹೆಂಡತಿ ವಾಕಿಂಗ್‌ಗೆ ಹೂರಟಿದ್ದೆವು. ದಿನವೂ ಸಂಜೆ ನಾವಿಬ್ಬರೂ ವಾಕಿಂಗ್‌ಗೆ ಹೋಗಿ ಬರುವಾಗ ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬರುವುದು ರೂಢಿ. ಸರ್ಕಲ್ ಹತ್ತಿರ ಬಂದಾಗ ರಸ್ತೆ ಬದಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಂದು ಬೋರ್ಡ್ ಕಡೆ ಗಮನ ಹರಿಯಿತು. ದಿನಾ ನೋಡುತ್ತಿದ್ದ ಬೊರ್ಡ್ ಅದು. ಅವತ್ತು ಅದರ ಕಡೆ ಗಮನ ಹರಿದು ಅಲ್ಲಿ ಓದುತ್ತಾ ನಿಂತೆ. ಅದು ಜ್ಯೋತಿಷಿಯೊಬ್ಬನ ಮನೆ ಮುಂದೆ ಇದ್ದ ಅವನ ಪ್ರಚಾರದ ಬೋರ್ಡ್. "ಶ್ರೀ ಕಾಳಿಕಾಂಬಾ ಜ್ಯೋತಿಷ್ಯಾಲಯ. ನಿಮ್ಮ ಎಲ್ಲ ಸಮಸ್ಯಗಳಿಗೆ ನಮ್ಮಿಂದ ಪರಿಹಾರ ಪಡೆಯಿರಿ. ಕೌಟುಂಬಿಕ ಸಮಸ್ಯೆ, ಪ್ರೇಮ ವ್ಯವಹಾರ, ಕೋರ್ಟ್ ಕಚೇರಿ ವ್ಯವಹಾರ, ಉದ್ಯೋಗ ಮತ್ತಿತರ ಸಮಸ್ಯೆಗಳಿಗೆ ತೃಪ್ತಿಕರ ಸಮಾಧಾನ ಕಂಡುಕೊಳ್ಳಿ. ಜ್ಯೋತಿಷಿ ಪಂ.ಶಂಕರ ಭಟ್." ನಾನು ಅದನ್ನು ಓದಿ ಸಣ್ಣಗೆ ನಗುತ್ತಾ ನನ್ನ ಶ್ರೀಮತಿಯತ್ತ ನೋಡಿದೆ. ಅವಳು "ನಡೀರಿ, ಸುಮ್ಮನೆ. ಲೇಟಾಗಿದೆ. ಏನಕ್ಕೆ ಇದು?" ಎಂದಳು. "ಸುಮ್ಮನೆ. ಏನು ಹೇಳ್ತಾನೋ, ನೋಡೋಣ." ಅಂದೆ. ಆ ದಿನಗಳಲ್ಲಿ ನನಗೆ ಜ್ಯೊತಿಷ್ಯದ ಬಗ್ಗೆ ಆಸಕ್ತಿಯುಂಟಾಗಿ, ಜ್ಯೊತಿಷ್ಯ ಕುರಿತ ಹಲವಾರು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತಿದ್ದೆ. ಕೆಲವಾರು ಸಂದೇಹಗಳು ನನ್ನನ್ನು ಕಾಡುತ್ತಿದ್ದವು. ಆದರೆ ಫಲಜ್ಯೋತಿಷ್ಯದ ಬಗ್ಗೆ ನನ್ನ ನಂಬಿಕೆ ಕುಸಿಯತೊಡಗಿತ್ತು. ಈಗೀಗ ನನಗೆ ಅದು ಒಂದು ರೀತಿಯಲ್ಲಿ ಕೆಲವರ ಉದರಂಭರಣಕ್ಕೆ ಎಂದು ಅನ್ನಿಸತೊಡಗಿತ್ತು. ನನ್ನ ಬಲವಂತದಿಂದ ನನ್ನ ಶ್ರೀಮತಿಯು ನನ್ನ ಜೊತೆ ಆ ಜ್ಯೋತಿಷ್ಯಾಲಯಕ್ಕೆ ಬಂದಳು.
ಜ್ಯೋತಿಷ್ಯಾಲಯದ ಒಳಗೆ ಪ್ರವೇಶ ಮಾಡಿದಾಗ, ಒಳಗಡೆ ಒಂದು ರೀತಿಯ ಭಯವನ್ನು ಉಂಟುಮಾಡುವ ವಾತಾವರಣ ಇದ್ದಂತೆ ಅನ್ನಿಸಿತು. ನಾವು ಒಳಗೆ ಬಂದ ಬಾಗಿಲಿನ ಎದುರಿನ ಗೋಡೆಯ ಮೇಲೆ ಶಕ್ತಿಸ್ವರೂಪಣಿ ಪಾರ್ವತಿಯ ವಿವಿಧ ಫೋಟೋಗಳು. ಕೆಲವು ಅಪರೂಪದ ಚಿತ್ರಗಳು - ಕಾಮಾಖ್ಯ, ಮಹಿಷಾಸುರಮರ್ಧಿನಿ, ಸಂತೋಷಿ ಮಾ, ಶಿವ ಪಾರ್ವತಿ, .ಕಾಳಿಕಾದೇವಿ. ಅವುಗಳಲ್ಲಿ ಕಾಳಿಕಾದೇವಿಯ ಚಿತ್ರವೇ ಎಲ್ಲಕ್ಕಿಂತ ದೊಡ್ಡದಾಗಿ ಮಧ್ಯದಲ್ಲಿ ಇತ್ತು. ಆ ಚಿತ್ರದಲ್ಲಿ ಕಾಳಿಕಾದೇವಿಗೆ ನಾಲ್ಕು ಕೈಗಳು - ಒಂದು ಎಡ ಕೈಯಲ್ಲಿ ರಾಕ್ಷಸ ಚಂಡನ ತಲೆ, ಇನ್ನೊಂದು ಎಡಗೈಯಲ್ಲಿ ಒಂದು ಪಾತ್ರೆ. ಚಂಡನ ರುಂಡದಿಂದ ಸುರಿಯುತ್ತಿರುವ ರಕ್ತ ಈ ಪಾತ್ರೆಗೆ ಬೀಳುತ್ತಿದೆ. ಬಲಗೈವೊಂದರಲ್ಲಿ ಕೊಂಕಿದ ಖಡ್ಗ, ಇನೊಂದು ಬಲಗೈಯಲ್ಲಿ ತ್ರಿಶೂಲ. ರುಂಡಗಳ ನೀಳವಾದ ಮಾಲೆಯನ್ನು ಧರಿಸಿದ್ದಾಳೆ. ಸೊಂಟದ ಸುತ್ತ ಕತ್ತರಿಸಲ್ಪಟ್ಟ ರಾಕ್ಷಸರ ಕೈಗಳಿಂದ ಮಾಡಿದ ಡಾಬು! ಅವಳ ಬಲಗಾಲು ಕೆಳಗೆ ಬಿದ್ದಿರುವ ಶಿವನ ಎದೆಯ ಮೇಲೆ. ಕೋಪದಿಂದ ಕೂಡಿದ ಮುಖ. ಅವಳು ನಾಲಿಗೆಯನ್ನು ಹೊರಚಾಚಿದ್ದಾಳೆ. ನೋಡಲು ಭಯ ಹುಟ್ಟಿಸುವಂತಿತ್ತು. ಪ್ರತಿ ಚಿತ್ರಕ್ಕೂ ಕೆಂಪು ಹೂವಿನ ಹಾರ. ದೇವಿಯ ಮುಖಕ್ಕೆ ಅರಿಸಿನ ಕುಂಕಮದ ದಪ್ಪನೆಯ ಬೊಟ್ಟುಗಳು. ಎಲ್ಲಾ ಚಿತ್ರಗಳಿಗೂ ವಿಭೂತಿಯ ಗೆರೆಗಳು. ಕೆಳಗೆ ಆ ಗೋಡೆಯ ಉದ್ದಕ್ಕೂ ಎರಡು ಅಡಿ ಅಗಲದ ಒಂದು ವೇದಿಕೆ. ಅದರ ಮೇಲೆ ಪಾರ್ವತಿ ಮತ್ತು ಗಣೇಶನ ಪ್ರತಿಮೆಗಳಿದ್ದವು. ಅವುಗಳ ಸುತ್ತಾ ಹೂವು ಚೆಲ್ಲಿತ್ತು. ಕೆಂಪು ಬಣ್ಣದ ಹೂವುಗಳೇ ಜಾಸ್ತಿ. ಗುಲಾಬಿ, ಕನಕಾಂಬರ, ಕಣಗಲೆ, ಸೇವಂತಿ ಹೂವುಗಳೂ ಇದ್ದವು. ಪಾರ್ವತಿಯ ಪ್ರತಿಮೆಯ ಹತ್ತಿರ ಸುತ್ತಾ ಕುಂಕುಮ ಚೆಲ್ಲಿತ್ತು. ಬಹುಶಃ ಕುಂಕುಮಾರ್ಚನೆ ಮಾಡಿದ್ದಿರಬೇಕು. ಪ್ರತಿಮೆಗಳ ಎರಡೂ ಕಡೆ ದೀಪದ ಕಂಬಗಳು, ಐದು ಬತ್ತಿಯವು. ಎರಡೂ ದೀಪಗಳ ಒಂದೊಂದು ಬತ್ತಿಯನ್ನು ಹೊತ್ತಿಸಿದ್ದರು. ಎರಡೂ ಕಡೆ ದೀಪದ ಪಕ್ಕ ಸ್ಟೀಲ್ ಲೋಟದಲ್ಲಿ ಊದುಬತ್ತಿ ಹೊತ್ತಿಸಿತ್ತು. ಊದುಬತ್ತಿಯ ಹೊಗೆ ಜೋರಾಗಿಯೇ ಬರುತ್ತಿತ್ತು; ಆರತಿ ತಟ್ಟೆ, ಸಾಮ್ರಾಣಿ ತಟ್ಟೆ ಮತ್ತಿತರ ಪೂಜಾ ಸಾಮಗ್ರಿಗಳಿದ್ದವು. ವೇದಿಕೆಯ ಮುಂದೆ ನೆಲದಲ್ಲಿ ಎನಾಮಲ್ ಬಣ್ಣದಲ್ಲಿ ಕಪ್ಪು, ಬಿಳಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಬಳಸಿ ಬರೆದ ಕಾಳಿಯಂತ್ರದ ಚಿತ್ತಾರವಿತ್ತು. ಇದರ ಮಧ್ಯೆ ಒಂದು ಕಳಶ. ಒಳಗೆ ಮಾವಿನ ಸೊಪ್ಪಿನ ಒಂದು ಸಣ್ಣ ಗೊಂಚಲು. ಕಳಶಕ್ಕೆ ಅರಿಸಿನ ಕುಂಕುಮಗಳಿಂದ ಪೂಜಿಸಿದ್ದರು.
ರಸ್ತೆ ಕಡೆಗಿದ್ದ ಗೋಡೆಯ ಮೂಲೆಗೆ ಗೋಡೆಗೆ ಲಗತ್ತಿಸಿದಂತೆ ಒಂದು ಮೇಜು. ಮೇಜಿನ ಒಂದು ಕಡೆ ಜ್ಯೋತಿಷಿಗೆ ಒಂದು ಕುರ್ಚಿ. ಇದರಲ್ಲಿ ಕುಳಿತ ಜ್ಯೋತಿಷಿಗೆ ಎದುರಿನ ರಸ್ತೆ ಕಾಣುವಂತಿತ್ತು. ಮೇಜಿನ ಮೇಲೆ ಒಂದಷ್ಟು ಕವಡೆಗಳು. ಒಂದು ಹಲಗೆ, ಕೆಲವು ಬಳಪಗಳು ಸಹ ಇದ್ದವು. ಹಾಗೂ ಕೆಲವು ಪುಸ್ತಕಗಳಿದ್ದವು. ಬಹುಶಃ ಜ್ಯೋತಿಷ್ಯ ಮತ್ತು ದೇವರ ಕುರಿತ ಪುಸ್ತಕಗಳಿದ್ದಿರಬಹುದು. ಎದುರು ಬದಿಯಲ್ಲಿ ನಾಲ್ಕು ಕುರ್ಚಿಗಳು. ಈ ನಾಲ್ಕು ಕುರ್ಚಿಗಳು ರಸ್ತೆ ಬದಿಯ ಗೋಡೆಗೆ ಹತ್ತಿಕೊಂಡಂತೆ ಇದ್ದವು. ನಾವು ಒಳ ಬಂದ ಬಾಗಿಲನ್ನು ಬಿಟ್ಟು ಉಳಿದ ಜಾಗವನ್ನು ಪೂರ್ತಿ ಅಕ್ರಮಿಸಿಕೊಂಡಿದ್ದವು. ಈ ಕುರ್ಚಿಗಳು ಬಂದವರು ಕುಳಿತುಕೊಳ್ಳಲು. ಈ ಕುರ್ಚಿಗಳಲ್ಲಿ ಕುಳಿತವರಿಗೆ ಫೋಟಗಳಿದ್ದ ಗೋಡೆ ಎದುರಿಗೆ ಕಾಣುತ್ತಿತ್ತು. ಪೂಜೆಗೆ ಇಟ್ಟಿದ್ದ ವಿಗ್ರಹಗಳು, ಕಳಶ, ಕಾಳಿಯಂತ್ರ ಎಲ್ಲಾ ಕಾಣುತ್ತಿದ್ದವು !
ರಸ್ತೆಗೆ ಮುಖಮಾಡಿದ ಕುರ್ಚಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಅವನ ತೋಳುಗಳು, ಹೊಟ್ಟೆ ಮತ್ತು ಹಣೆಯ ಮೇಲೆಲ್ಲಾ ವಿಭೂತಿಯ ಪಟ್ಟೆಗಳಿದ್ದವು. ಹಣೆಯ ಮಧ್ಯೆ ಒಂದು ದೊಡ್ಡ ಕೆಂಪು ಕುಂಕುಮದ ಬೊಟ್ಟಿತ್ತು. ಎರಡೂ ಕೈಗಳ ನಾಲ್ಕೂ ಬೆರಳುಗಳಿಗೂ ಉಂಗುರಗಳು. ವಿವಿಧ ಹರಳುಗಳಿದ್ದ ಎಂಟು ಉಂಗುರಗಳು. ಬಲಗೈಗೆ ಒಂದು ಚಿನ್ನದ ಕಡಗ. ಕುತ್ತಿಗೆಯಲ್ಲಿ ಎರಡು ದಪ್ಪ ಚೈನ್ ಸರಗಳು. ಈತನೇ ಹೊರಗೆ ಇದ್ದ ಬೋರ್ಡಿನಲ್ಲಿ ಹೇಳಿರುವ ಜ್ಯೋತಿಷಿ ಪಂ. ಶಂಕರ ಭಟ್ ಇರಬೇಕು ಅನ್ನಿಸಿತು. ಶ್ರೀಮಂತ ಜ್ಯೋತಿಷಿ ಎನ್ನಿಸಿತು. ವ್ಯಾಪಾರ ಚೆನ್ನಾಗಿರಬಹುದು ಎನ್ನಿಸಿತು. ನಾವು ಆತನಿಗೆ ನಮಸ್ಕರಿಸಿದೆವು. ಆತ ಮರುನಮಸ್ಕಾರ ಮಾಡಿ, "ಬನ್ನಿ. ಕುಳಿತುಕೊಳ್ಳಿ" ಎಂದು ತನ್ನ ಎದುರಿಗೆ ಇದ್ದ ಕುರ್ಚಿಗಳತ್ತ ಕೈ ತೋರಿಸಿದ. ನಾವು ಕುಳಿತ ನಂತರ ಅವನು "ಏನು ವಿಷಯ? ನಿಮ್ಮ ಸಮಸ್ಯೆ ಏನು?" ಎಂದು ಕೇಳಿದ. ನಾನು ಗೋಡೆಯ ಮೇಲಿದ್ದ ಫೋಟೋಗಳನ್ನು ಮತ್ತೊಮ್ಮೆ ನಿಧಾನವಾಗಿ ನೋಡಿ ನಂತರ ಆತನತ್ತ ತಿರುಗಿ "ನಿಮ್ಮ ಸಲಹೆ ಬೇಕಾಗಿತ್ತು. ನನ್ನ ಒಂದು ಕೆಲಸ ಆಗಬೇಕಿದೆ. ಅದು ಆಗುವುದೋ ಇಲ್ಲವೋ ಎಂದು ಚಿಂತೆ. ಅದಕ್ಕೆ ನಿಮ್ಮ ಸಲಹೆ ಪಡೆಯೋಣ ಅಂತ ಬಂದೆ" ಎಂದೆ. "ಏನು ನಿಮ್ಮ ಸಮಸ್ಯೆ ಹೇಳಿ", ಎಂದು ಆತ ಕೇಳಿದ. "ಅದು" ಎಂದು ಹೇಳಲು ಅನುಮಾನಿಸುವಂತೆ ಮಾಡಿದೆ. "ಹೇಳಿ ಏನು ಸಮಸ್ಯೆ? ಯಾವ ಸಂಕೋಚವೂ ಬೇಡ. ಇಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುತ್ತೇವೆ" ಅಂತ ಆಶ್ವಾಸನೆ ಕೊಟ್ಟ. ಆಗ ನಾನು "ಕೊರ್ಟ್‌ನಲ್ಲಿ ಒಂದು ಕೇಸಿದೆ. ಬಿಸಿನೆಸ್ ವಿಚಾರವಾಗಿ. ನನ್ನ ಪರವಾಗಿ ಆಗುತ್ತೋ ಇಲ್ಲವೋ ಅಂತ" ಎಂದು ಹೇಳಿದೆ. ನಾನು ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದ ಆತ ಪೂಜಾಸ್ಥಳದಲ್ಲಿದ್ದ ಒಂದು ನಿಂಬೆಹಣ್ಣನ್ನು ಎತ್ತಿಕೊಂಡು ಬಂದು ಮೇಜಿನ ಮೇಲಿಟ್ಟ. ಮೇಜಿನ ಡ್ರಾಯರ್ ತೆಗೆದು ಒಳಗಿನಿಂದ ಹಸಿದಾರದ ಉಂಡೆ ತೆಗೆದುಕೊಂಡ. ಹಸಿದಾರವು ಅರಿಸಿಣದ ನೀರಿನಲ್ಲಿ ಅದ್ದಿ ಅದ್ದಿ ತೆಗೆದ ಹಾಗೆ ಹಳದಿ ಬಣ್ಣವಾಗಿತ್ತು. ಆ ಅರಿಸಿನ ಬಣ್ಣದ ದಾರವನ್ನು ನಿಂಬೆಹಣ್ಣಿನ ಮೇಲೆಲ್ಲಾ ಸುತ್ತತೊಡಗಿದ. "ಸಾಕಷ್ಟು ಹಣ ಬರಬಹುದು ಅಂತ ಕಾಣುತ್ತೆ." ಅಂತ ಆತ ಕೇಳಿದ. "ಹೌದು, ಹತ್ತು ಲಕ್ಷದ ವ್ಯವಹಾರ" ಎಂದು ನಾನು ಹೇಳಿದೆ. "ಯಾವಾಗಿನಿಂದ ಈ ಕೇಸ್ ಕೋರ್ಟಿನಲ್ಲಿದೆ?" ಎಂದು ಕೇಳುತ್ತಾ ನಿಂಬೆ ಹಣ್ಣಿನ ಮೇಲೆಲ್ಲಾ ಅರಿಸಿಣದ ದಾರ ಸುತ್ತುವ ಕೆಲಸ ಮುಂದುವರೆಸಿದ್ದ. ದಾರ ಸುತ್ತುವ ದಿಕ್ಕನ್ನು ಅಗಾಗ ಬದಲಿಸುತ್ತ ನಿಂಬೆ ಹಣ್ಣು ಮೇಲೆ ಪೂರ್ತಿ ದಾರ ಬರುವಂತೆ ದಾರ ಸುತ್ತುತ್ತಾ ಮಾತನಾಡುತಿದ್ದ. "ಸುಮಾರು ಹತ್ತು ವರ್ಷಗಳಿಂದ" ಎಂದೆ. "ಊಂ.." ಎನ್ನುತ್ತಾ ಇದ್ದ ಆತ ದಾರ ಸುತ್ತಿದ ಕೆಲಸ ಮುಗಿಸಿ ನಿಂಬೆ ಹಣ್ಣನ್ನು ಮೇಜಿನ ಮೇಲೆ ತನ್ನ ಹತ್ತಿರ ಇರಿಸಿಕೊಂಡ. "ಯಾರಿಂದ ಹಣ ಬರಬೇಕಿದೆ?" ಎಂದ. "ಅದು ಬೇಡ. ನಿಮಗೆ ನನ್ನ ಸಮಸ್ಯೆ ಬಗೆ ಹರಿಸಲು ಸಾಧ್ಯವೋ ಇಲ್ಲವೋ ತಿಳಿಸಿ" ಎಂದೆ. "ಆಯ್ತು. ಸಮಸ್ಯೆ ಪರಿಹರಿಸೋಣ." ಎಂದು ಹೇಳುತ್ತಾ ದಾರ ಸುತ್ತಿದ ಆ ನಿಂಬೆ ಹಣ್ಣನು ಮೇಜಿನ ಡ್ರಾಯರ್ ಒಳಗೆ ಇಟ್ಟ, ನಂತರ ಮೇಜಿನ ಮೇಲಿದ್ದ ಪಂಚಾಗ ತೆಗೆದುಕೊಂಡ. ನಿಮ್ಮ ಹುಟ್ಟಿದ್ದ ದಿನ, ಜಾಗ, ಸಮಯ ಹೇಳ್ತೀರಾ?" ಎಂದ. ನಾನು "ತಗೊಳ್ಳಿ ನನ್ನ ಜಾತಕ ಇಲ್ಲಿದೆ." ಎಂದು ಹೇಳಿ ನನ್ನ ಜೋಬಿನಿಂದ ಜಾತಕ ತೆಗೆದುಕೊಟ್ಟೆ. "ಜಾತಕ ಇರೋದು ಬಹಳ ಅನುಕೂಲ ಆಯ್ತು." ಎನ್ನುತ್ತಾ ಜಾತಕವನ್ನು ಪರಿಶೀಲಿಸತೊಡಗಿದ. ಸ್ವಲ್ಪ ಸಮಯ ಜಾತಕ ನೋಡಿ ನಂತರ ಪಂಚಾಗ ತೆಗೆದುಕೊಂಡು ಅವತ್ತಿನ ಪುಟ ತೆಗೆದು ನೋಡಿದ. "ಗೋಚಾರದಲ್ಲಿ ಅಶುಭ ಗ್ರಹಗಳಿಂದ ನಿಮಗೆ ತೊಂದರೆ ಇದೆ. ಈಗ ಒಂದು ನಿಂಬೆ ಹಣ್ಣನ್ನು ಮಂತ್ರಿಸಿ ಕೊಡುತ್ತೇನೆ. ನಾನೀಗ ಹೇಳುವ ಹಾಗೆ ಮಾಡಿ. ಈಗ ನೇರವಾಗಿ ಮನೆಗೆ ಹೋಗಿ, ಕೈಕಾಲು ಮುಖ ತೊಳೆದುಕೊಂಡು ಪೂಜಾರೂಂನಲ್ಲಿ ಒಂದು ಕಳಶವನ್ನಿಟ್ಟು ಅದಕ್ಕೆ ನೀರನ್ನು ತುಂಬಿ. ಅದರ ಒಳಗೆ ನಾನು ಮಂತ್ರಿಸಿ ಕೊಡುವ ನಿಂಬೆ ಹಣ್ಣನ್ನು ಮುಳುಗಿಸಿ. ಅರಿಸಿಣ, ಕುಂಕುಮ ಮತ್ತು ಹೂವುಗಳಿಂದ ಕಳಶದ ನೀರನ್ನು ಪೂಜಿಸಿ. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿ. ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆ ಎಲ್ಲಾ ಮುಗಿದ ಮೇಲೆ ಪೂಜಾರೂಂಗೆ ಬೀಗವನ್ನು ಹಾಕಿ. ನಾಳೆ ಸಂಜೆ ಇಲ್ಲಿಗೆ ಬರುವ ಒಂದು ಗಂಟೆ ಮೊದಲು ಪೂಜಾರೂಂ ಬೀಗ ತೆಗೆದು ಬಾಗಿಲು ತೆಗೆಯಿರಿ. ಕಳಶದ ಪೂಜೆಯನ್ನು ಮಾಡಿ, ನಂತರ ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆಯಾದ ಮೇಲೆ ಕಳಶದಲ್ಲಿಟ್ಟಿದ್ದ ನಿಂಬೆಯ ಹಣ್ಣನ್ನು ಹೊರ ತೆಗೆದು ಚೆನ್ನಾಗಿ ಒರೆಸಿ ಶುಭ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಮಡಿಯಿಂದ ಇಲ್ಲಿಗೆ ತೆಗೆದುಕೊಂಡು ಬನ್ನಿ. ನೀವು ತರುವ ನಿಂಬೆ ಹಣ್ಣನ್ನಿಟ್ಟು ನಾನು ದೇವಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತೇನೆ. ದೇವಿ ಏನು ಸೂಚಿಸುವಳೋ ನೋಡೋಣ. ಎಲ್ಲೂ ಏನೂ ಲೋಪವಾಗದಂತೆ ಎಚ್ಚರವಹಿಸಿ" ಎಂದ. "ಆಗಬಹುದು" ಎಂದೆ. ಜ್ಯೋತಿಷಿ ಮೇಜಿನ ಡ್ರಾಯರ್ ಹೊರಕ್ಕೆಳೆದು ಹಳದಿಯ ಹಸಿದಾರ ಸುತ್ತಿದ್ದ ನಿಂಬೆ ಹಣ್ಣನ್ನು ತೆಗೆದುಕೊಂಡು ಪೂಜೆಯ ಸ್ಥಳಕ್ಕೆ ಹೋಗಿ ಅರಿಸಿಣ ಕುಂಕುಮ ಸ್ವಲ್ಪ ಸಿಂಪಡಿಸಿ ಊದುಬತ್ತಿಯ ಹೊಗೆಯಲ್ಲಿ ಕ್ಷಣ ಹೊತ್ತು ಹಿಡಿದ. ಪಾರ್ವತಿಯ ಪ್ರತಿಮೆಗೆ ಮತ್ತು ಕಾಳಿಕಾದೇವಿಯ ಫೋಟೋಗೆ ತೋರಿಸಿ ನಂತರ ನಿಂಬೆಯ ಹಣ್ಣನ್ನು ಮುಷ್ಠಿಯಲ್ಲಿ ಹಿಡಿದು ಮೂಗಿನ ಮೇಲೆ, ಹುಬ್ಬಿನ ಮಧ್ಯ ಒತ್ತಿಕೊಂಡು ಕಣ್ಣು ಮುಚ್ಚಿ ಯಾವುದೋ ಮಂತ್ರವನ್ನು ಹೇಳಿಕೊಂಡ. ನಂತರ ಮಂತ್ರಿಸಿದ ಆ ನಿಂಬೆ ಹಣ್ಣನ್ನು ನನ್ನ ಬಲಗೈಗೆ ಕೊಟ್ಟ. "ಈಗ ನೂರು ರೂಪಾಯಿ ದಕ್ಷಿಣೆ ಕೊಡಿ. ನಾಳೆ ದೇವಿಯ ಸೂಚನೆ ನೋಡಿ ಖರ್ಚು ಎಷ್ತಾಗುತ್ತೆ ಅಂತ ಗೊತ್ತಾಗುತ್ತೆ" ಎಂದು ಹೇಳಿದ. "ಸರಿ ಆಗಲಿ" ಎಂದು ಹೇಳಿ ಅವನಿಗೆ ನೂರು ರೂಪಾಯಿ ದಕ್ಷಿಣೆ ಕೊಟ್ಟೆ. ನಾನು ಮತ್ತು ನನ್ನ ಹೆಂಡತಿ ಮನೆಯ ಕಡೆಗೆ ಹೊರೆಟೆವು.
ಮನೆಗೆ ಹೋಗುತ್ತಾ ನನ್ನ ಹೆಂಡತಿ ಕೇಳಿದಳು, "ಯಾವುದ್ ರೀ, ಕೇಸು; ನನಗೆ ಗೊತ್ತಿಲ್ಲದ್ದು?" "ಯಾವ್ ಕೇಸೂ ಇಲ್ಲ. ಸುಮ್ನೆ ಹೇಳ್ದೆ." ಎಂದು ನಾನಂದೆ. "ನೀವ್ ಒಬ್ಬರು. ಮಂತ್ರಿಸಿದ ನಿಂಬೆಹಣ್ಣು ಬೇರೆ ಕೊಟ್ಟಿದಾನೆ." ಎಂದಳು ನನ್ನ ಶ್ರೀಮತಿ. "ಏನ್ ಮಾಡ್ ಬೇಕ್ ಅಂತ ಹೇಳಿದಾನಲ್ಲ. ನಿಂಗೆ ಇಷ್ಟ ಇದ್ರೆ ಮಾಡು." ಎಂದೆ. ನನ್ನ ಶ್ರೀಮತಿಗೆ ಪೂಜೆ ಪುನಸ್ಕಾರಗಳಲ್ಲಿ ಬಹಳ ಶ್ರದ್ಧೆ. ಮನೆಗೆ ಹೋದ ಮೇಲೆ, ಅವಳು ಸ್ನಾನ ಮಾಡಿ ಬಂದು ಕಳಶವನ್ನಿಟ್ಟು, ಅದರಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿದಳು. ಕಳಶದ ನೀರಿಗೆ ಅರಿಸಿಣ ಕುಂಕುಮ ಹಾಕಿದಳು. ಹೂವನ್ನೂ ಹಾಕಿದಳು. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿದಳು. ಆ ಜ್ಯೋತಿಷಿ ಹೇಳಿದ ಹಾಗೆ ಪೂಜೆಯನ್ನು ಮಾಡಿದ ನಂತರ ಪೂಜಾರೂಂನ ಬಾಗಿಲಿಗೆ ಬೀಗ ಹಾಕಿದಳು. ಮಾರನೆಯ ದಿನ ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ಮಲಗಿದ್ದೆ. ನನ್ನ ಶ್ರೀಮತಿ "ಏನ್ ರೀ, ಬನ್ನಿ ಇಲ್ಲಿ ಬೇಗ" ಎಂದು ಜೋರಾಗಿ ಕರೆದಳು. ಧ್ವನಿಯಲ್ಲಿ ಭಯವಿದ್ದಂತೆ ಅನ್ನಿಸಿತು. "ಏನು? ಬಂದೆ" ಅನ್ನುತ್ತಾ ನಾನು ಬೆಡ್‌ರೂಂನಿಂದ ಬಂದೆ. ನನ್ನ ಹೆಂಡತಿ ಪೂಜಾರೂಂನಲ್ಲಿದ್ದಳು. "ಏನಾಯಿತು?" ಎಂದೆ. "ನೋಡೀಂದ್ರೆ,. ಮಂತ್ರಿಸಿದ ನಿಂಬೆ ಹಣ್ಣು ಇಲ್ಲ. ಮಾಯವಾಗಿದೆ." ಎಂದಳು. ಅವಳ ಕೈಯಲ್ಲಿ ಅರಿಸಿಣದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್ಲಿತ್ತು. ಅವಳ ಕೈ ಅರಿಸಿಣ ಕುಂಕುಮದ ಓಕಳಿ ನೀರಿನಲ್ಲಿ ಅದ್ದಿದಂತಿತ್ತು. ಆಗ ನನಗರ್ಥವಾಯಿತು: ಅವಳು ಆ ಜ್ಯೋತಿಷಿ ಹೇಳಿದಂತೆ ಪೂಜಾರೂಂನ್ ಬಾಗಿಲು ತೆಗೆದು ಕಳಶಕ್ಕೆ ಪೂಜೆ ಮಾಡಿದ್ದಾಳೆ. ಕೆಂಪು ಬಟ್ಟೆಯೊಂದನ್ನು ಸಿದ್ಧವಾಗಿಟ್ಟುಕೊಂಡು ಕಳಶದ ನೀರಿನಿಂದ ಮಂತ್ರಿಸಿದ ನಿಂಬೆ ಹಣ್ಣನ್ನು ಹೊರಗೆ ತೆಗೆಯಲು ಹೋಗಿದ್ದಾಳೆ. ಅಲ್ಲಿ ಮಂತ್ರಿಸಿದ ನಿಂಬೆಹಣ್ಣು ಇಲ್ಲ! ಕೇವಲ ಅದರ ಮೇಲೆ ಸುತ್ತಿದ್ದ ದಾರದ ಗೋಜಲು ಮಾತ್ರ ಅವಳ ಕೈಯಲ್ಲಿದೆ. "ಅಷ್ಟೇ ತಾನೆ. ಬಿಡು." ಎಂದು ನಾನೆಂದಾಗ ಅವಳು "ಏನು, ಅಷ್ಟೇ ತಾನೆ?! ಒಳ್ಳೇ ಫಜೀತಿ ತಂದಿಟ್ರಿ. ಏನೋ ಮಾಟ ಮಾಡಿದ್ದಾನೆ? ಗ್ರಹಚಾರ. ಏನಾಗುತ್ತೋ ? ಬನ್ನಿ ಅವನ ಹತ್ತಿರ ಹೋಗೋಣ" ಎಂದಳು. "ಏನೂ ಬೇಡ. ಏನಾಗಿದೆ ಅಂತ ಯೋಚಿಸೋಣ", ಎಂದು ನಾನಂದೆ. ನನ್ನ ಹೆಂಡತಿ ಮಾತ್ರ ಬೇಜಾರು ಮತ್ತು ಆತಂಕದಿಂದ ಚಡಪಡಿಸುತ್ತಿದ್ದಳು.
ಮಾರನೆಯ ದಿನ ಬೆಳಿಗ್ಗೆ ನನ್ನ ಶ್ರೀಮತಿ ತನ್ನ ವಾರಗಿತ್ತಿ ಅಂದರೆ ನನ್ನ ತಮ್ಮನ ಹೆಂಡತಿಯ ಹತ್ತಿರ ಆ ಜ್ಯೋತಿಷಿಯ ಬಗ್ಗೆ ವಿಚಾರಿಸುತ್ತಿದ್ದಳು. ನನ್ನ ತಮ್ಮನಿಗೆ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳುವ ಚಟ. ನನ್ನ ನಾದಿನಿ ಹೇಳಿದಳು "ಓ, ಹೌದಾ? ಆ ಜ್ಯೋತಿಷೀನೇ ಇವರ ಕೊಲೀಗ್ ಒಬ್ಬರಿಗೆ ಹೀಗೇ ಮಾಡಿದ್ದನಂತೆ..." ಅವರು ಅವನ ಹತ್ತಿರ ಜ್ಯೋತಿಷ್ಯ ಕೇಳಲು ಹೋಗಿದ್ದಾಗ ಇದೇ ರೀತಿ ನಿಂಬೇ ಹಣ್ಣನ್ನು ಮಂತ್ರಿಸಿ ಕೊಟ್ಟಿದ್ದನಂತೆ. ನಿಂಬೇಹಣ್ಣು ಮಾಯವಾದಾಗ ಅವರು ಹೆದರಿ ಅವನ ಹತ್ತಿರ ಹೋದಾಗ ಅವನು "ಏನೋ ಅಪಚಾರವಾಗಿದೆ. ದೇವಿ ನಿಮ್ಮ ಮೇಲೆ ಮುನಿಸಿಕೊಂಡಿದ್ದಾಳೆ. ನಿಮಗೆ ಕಷ್ಟ ಕಾದಿದೆ." ಎಂದೆಲ್ಲಾ ಹೆದರಿಸಿದನಂತೆ. ಆಗಲಂತೂ ಅವರಿಗೆ ತುಂಬಾ ಭಯವಾಯಿತಂತೆ. "ಈಗ ಏನು ಮಾಡೋದು?" ಎಂದು ಅವನನ್ನು ಕೇಳಿದರಂತೆ. ದೇವಿಯನ್ನು ಶಾಂತಗೊಳಿಸಲು ಯಾವುದೋ ಹೋಮ, ಪೂಜೆ ಮಾಡಬೇಕು ಎಂದೆಲ್ಲಾ ಹೇಳಿ ಸುಮಾರು ಎಂಟು ಹತ್ತು ಸಾವಿರ ಖರ್ಚು ಮಾಡಿಸಿದನಂತೆ. "ಅದೇ, ನಮ್ಮ ಅಪಾರ್ಟ್‌ಮೆಂಟ್ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರಲ್ಲಾ ರವಿ, ಅವರಿಗೂ ಹೀಗೆ ಮಾಡಿದ್ದು ಅವನು" ಎಂದು ಹೇಳಿದಳು ನನ್ನ ನಾದಿನಿ. ನನ್ನ ತಮ್ಮ, ಅವನ ಹೆಂಡತಿ ಮತ್ತು ಮಗ ಮನೆಗೆ ಬಂದಿದ್ದರು. ಸಂಕ್ರಾಂತಿ ಹಬ್ಬಕ್ಕೆ ಇಬ್ಬರೂ ಸೇರಿ ಸಕ್ಕರೆ ಅಚ್ಚು ಮಾಡಿಕ್ಕೊಳ್ಳುತ್ತಿದ್ದರು. ಹಾಲ್‌ನಲ್ಲಿ ಕುಳಿತಿದ್ದ ನನಗೆ ನನ್ನ ಶ್ರೀಮತಿ ಮತ್ತು ನನ್ನ ನಾದಿನಿ ಮಾತನಾಡುವುದು ಕೇಳಿಸುತ್ತಿತ್ತು. "ಏನೋ ಅದು ಕೃಷ್ಣ?" ಅಂತ ನನ್ನ ಪಕ್ಕದಲಲ್ಲಿ ಕುಳಿತಿದ್ದ ನನ್ನ ತಮ್ಮನನ್ನು ಕೇಳಿದೆ. "ರವಿ ಅವರಿಗೆ ಸುಮ್ಮನೆ ಖರ್ಚು ಮಾಡಿಸಿದ ಆ ಢೋಂಗಿ ಜ್ಯೋತಿಷಿ. ರವಿ ಅವನ್ ಹತ್ತಿರ ಯಾವ ಪ್ರಶ್ನೆ ಕೇಳಿದ್ದರೋ ಅದಕ್ಕೆ ಅವನಿಂದ ಪರಿಹಾರನೂ ಸಿಗಲಿಲ್ಲ.", ಎಂದು ಹೇಳಿದ ನನ್ನ ತಮ್ಮ. "ಭವಿಷ್ಯ ಕೇಳೋಕೇ ಹೋಗಬಾರದು", ಎಂದು ನಾನು ಹೇಳಿದೆ. ಇದನ್ನು ಕೇಳಿಸಿಕೊಂಡ ನನ್ನ ಶ್ರೀಮತಿ ಅಡುಗೆಮನೆಯಿಂದ ಹಾಲ್‍ಗೆ ಬಂದು "ಆಹಾ, ಏನ್ ಮಾತಾಡ್ತೀರಿ? ನಿನ್ನೆ ನೀವು ಏಕೆ ಹೋಗಿದ್ದು?" ಎಂದು ನನ್ನನ್ನು ಮೂದಲಿಸಿದಳು. "ನಾನೇನೂ ಯಾವುದೇ ಪರಿಹಾರಕ್ಕೆ ಅವನ ಹತ್ತಿರ ಹೋಗಿರಲ್ಲಿಲ್ಲ. ಸುಮ್ಮನೆ ಕುತೂಹಲಕ್ಕೆ. ಅದು ನಿನಗೂ ಗೊತ್ತು." ಎಂದೆ. "ಏನೋ? ಈಗ ನೋಡಿ ಏನಾಗಿದೆ?" ಎಂದು ಕೇಳಿದಳು ನನ್ನ ಶ್ರೀಮತಿ.
ಅಷ್ಟರಲ್ಲಿ ನನ್ನ ತಮ್ಮನ ಮಗ ಮೂರು ವರ್ಷದ ಅಭಿಷೇಕ್ ಅಳುತ್ತಾ ಅವನ ಅಮ್ಮನ ಹತ್ತಿರ ಬಂದ. "ಏನಾಯಿತೋ?" ಎಂದು ಅವನನ್ನು ನನ್ನ ನಾದಿನಿ ಕೇಳಿದಳು. "ಅಮ್ಮ ನೀನು ಕೊಟ್ಟ ಆನೆ ನೀರಲ್ಲಿ ಬಿದ್ ಹೋಯ್ತು. ತೆಕ್ಕೊಡು ಬಾ." ಅಂದ. ಆನೆ ಆಕಾರದ ಸಕ್ಕರೆ ಅಚ್ಚು ಡೈನಿಂಗ್ ಟೇಬಲ್ ಮೇಲಿದ್ದ ನೀರಿನ ಮಗ್‌ನಲ್ಲಿ ಬಿದ್ದುಬಿಟ್ಟಿತ್ತು. "ಇರು ಒಂದ್ ನಿಮಿಷ. ಪಾಕ ಆರಿ ಹೋಗುತ್ತೆ. ಅಚ್ಚಲ್ಲಿ ಹಾಕಿ ಬಂದು ತೆಕೋಡ್ತೀನಿ" ಎಂದು ಅಡಿಗೆ ಮನೆಗೆ ಹೋದಳು ನನ್ನ ನಾದಿನಿ ತನ್ನ ಅತ್ತಿಗೆ ಜೊತೆ. ಸ್ವಲ್ಪ ಸಮಯದ ನಂತರ ಬಂದು ನೀರಿನಲ್ಲಿ ಬಿದ್ದಿದ್ದ ಸಕ್ಕರೆ ಅಚ್ಚನ್ನು ತೆಗೆದು ಮಗನಿಗೆ ಕೊಟ್ಟಳು. ಅವನು ಅಳಲು ಶುರು ಮಾಡಿದ. "ಏನೋ ಆಯ್ತು?" ಎಂದು ನಾನು ಅವನನ್ನು ಕೇಳಿದೆ. ಅವನು ಅಳುತ್ತಾ "ನೋಡಿ ದೊಡ್ಡಪ್ಪ, ಆನೆ ಕಾಲು ಇಲ್ವೇ ಇಲ್ಲ." ಎಂದ. "ಎಲ್ಲಿ ಕೊಡು ಇಲ್ಲಿ" ಎಂದು ಅವನ ಹತ್ತಿರ ಇದ್ದ ಸಕ್ಕರೆ ಅಚ್ಚನ್ನು ಇಸಕೊಂಡೆ. ನೋಡಿದರೆ ಸಕ್ಕರೆ ಅಚ್ಚು ನೀರಿನಲ್ಲಿ ಐದು ಹತ್ತು ನಿಮಿಷ ಮುಳುಗಿದ್ದರಿಂದ ಸ್ವಲ್ಪ ಕರಗಿತ್ತು. ಆನೆಯ ಕಾಲುಗಳು, ಸೊಂಡಿಲು ಹಾಗೂ ಸುತ್ತಾ ಅಂಚೆಲ್ಲಾ ನೀರಿನಲ್ಲಿ ಕರಗಿದ್ದವು. ಆ ಸಕ್ಕರೆ ಅಚ್ಚನ್ನು ನೋಡುತ್ತಿದ್ದಂತೆ ನನಗೆ ಹೊಳೆಯಿತು ಆ ಜ್ಯೋತಿಷಿ ಏನು ಮಾಡಿದ್ದಾನೆ ಎಂದು. "ಲೇ ಪದ್ಮ, ಬಾರೇ ಇಲ್ಲಿ. ನೀನೂ ಬಾಮ್ಮ ಲಕ್ಷ್ಮಿ" ಎಂದು ಅಡಿಗೆ ಮನೆಯಲ್ಲಿದ್ದ ನನ್ನ ಹೆಂಡತಿ ಮತ್ತು ನನ್ನ ತಮ್ಮನ ಹೆಂಡತಿ ಇಬ್ಬರನ್ನೂ ಕರೆದೆ. ಅವರಿಬ್ಬರೂ ಹಾಲ್‌ಗೆ ಬಂದು ದೀವಾನ ಮೇಲೆ ಕುಳಿತುಕೊಳ್ಳೂತ್ತಾ "ಏನು?" ಎಂದರು. "ಆ ಜ್ಯೋತಿಷಿ ಏನ್ ಟ್ರಿಕ್ ಮಾಡ್ತಿದ್ದಾನೆ ಅಂತ ಗೊತ್ತಾಗಿ ಹೋಯಿತು." ಎಂದೆ. "ಇಲ್ಲಿ ನೋಡಿ ಸಕ್ಕರೆ ಅಚ್ಚು ಐದ್ ಹತ್ ನಿಮಿಷ ನೀರಲ್ಲಿ ಇದ್ದಿದ್ದಕ್ಕೆ ಎಷ್ಟ್ ಕರಗಿ ಹೋಗಿದೆ. ಅವನು ನಮಗೆ ನಿಂಬೆ ಹಣ್ಣಿನಂತೆ ಗುಂಡಗಿದ್ದ ಸಕ್ಕರೆ ಅಥವಾ ಬತ್ತಾಸು ಉಂಡೆಗೆ ದಾರ ಸುತ್ತಿ ಕೊಟ್ಟಿದ್ದ. ಅದಕ್ಕೇ ಅದು ನೀರಿನಲ್ಲಿ ರಾತ್ರಿಯೆಲ್ಲಾ ಇಟ್ಟಿದ್ದರಿಂದ ಕರಗಿ ಹೋಗಿದೆ. ಅಷ್ಟೇ." ಎಂದೆ. "ಅದು ಹೇಗ್ರೀ? ನಮ್ಮ ಎದುರಿನಲ್ಲೇ ನಿಂಬೇ ಹಣ್ಣಿಗೇ ದಾರ ಸುತ್ತುತ್ತಿದ್ನಲ್ಲಾ" ಎಂದಳು ನನ್ನ ಶ್ರೀಮತಿ. "ನೆನಪಿಸ್ಕೋ. ನಿನ್ನೆ ಅವನು ಏನ್ ಮಾಡ್ದ. ನಿಂಬೆಹಣ್ಣಿಗೆ ನಮ್ಮ ಎದುರಿನಲ್ಲೇ ದಾರ ಏನೋ ಸುತ್ತಿದ. ಆ ನಿಂಬೇ ಹಣ್ಣನ್ನ ಮೇಜಿನ ಮೇಲೆ ಇಟ್ಟಿದ್ದ. ಅದು ಸರಿ. ಆದರೆ ಪಂಚಾಂಗ ತೆಗೆಯೋದಿಕ್ಕೆ ಮೇಜಿನ ಮೇಲೆ ಜಾಗ ಬೇಕೂಂತ ನಿಂಬೆಹಣ್ಣು ಮೇಜಿನ ಡ್ರಾಯರ್ ಒಳಗೆ ಇಟ್ಟ ಅಲ್ವ? ನೆನಪಿಸ್ಕೋ?" ಎಂದು ನಾನು ಹೇಳಿದಾಗ "ಹೌದು." ಎಂದಳು ನನ್ನ ಶ್ರೀಮತಿ. "ಕೊನೇಲ್ಲಿ ಕೊಡುವಾಗ ಮೇಜಿನ ಡ್ರಾಯರ್ ಇಂದ ತೆಗೆದು ಕೊಟ್ಟಿದ್ದು ಆ ನಿಂಬೇ ಹಣ್ಣಲ್ಲ. ಅವನು ಮೊದಲೇ ಮಾಡಿಟ್ಟಿದ್ದ ಸಕ್ಕರೆ ಉಂಡೆ! ಅಲ್ಲೇ ಅವನು ಕರಾಮತ್ತು ಮಾಡಿದ್ದು. ನಿಂಬೆ ಹಣ್ಣನ್ನ ಹಾಗೇ ಕೊಡಬಹುದಿತ್ತು. ದಾರದಲ್ಲಿ ಸುತ್ತಿಕೊಟ್ಟಿದೇಕೆ ? ಮೋಸಮಾಡುವ ಉದ್ದೇಶವಿಲ್ಲದಿದ್ದರೆ ನಿಂಬೇಹಣ್ಣನ್ನು ಹಾಗೇ ಕೊಡಬಹುದಿತ್ತು. ಯೋಚನೆ ಮಾಡಿ." ಎಂದು ನಾನಂದೆ. ಎಲ್ಲರೂ"ಹೌದ್ ಅಲ್ವಾ!" ಎಂದು ಆಶ್ಚರ್ಯಪಟ್ಟರು. "ಅದಕ್ಕೇ ನಾನು ಯಾವಾಗಲೂ ಹೇಳೋದು 'ನೋಡಿದ್ದೂ ಸುಳ್ಳಾಗಬಹುದು. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು' ಅಂತ" ಎಂದು ಹೇಳಿದೆ.
No comments:
Post a Comment