Wednesday, March 27, 2013

ಮಾತ್ಗವಿತೆ-122

ನಶೆಯ ದಿಶಾ ದೂರಮಾಡಿ 
ಹೊಸ ಹಾದಿ ಕವಲೊಡೆದಾಗ ಹಾದಿಗಳೆರಡು
ದೂರದೂರಿನ ಹಂಬಲಿಕೆಗೆ ದುಂಬಾಲು ಬೇಡ ; 

ಅಂಬಲಿ ಕುಡಿದಾಗ ಕುಡಿಯೊಡೆದಿಲ್ಲವೆ ?
ಹೂವು ಅರಳತಾವು ; ಕೊಂಬಿ ಚಿಗಿತಾವು !

Tuesday, March 26, 2013

ಯಾವ ಸಂಘಟನೆಗಳು ವಸೂಲಿಗೆ ಇಳಿದಿವೆ ?


ಧಾರವಾಡದಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮಾವೇಶದಲ್ಲಿ `ಸಮಾಜ ವಿಜ್ಞಾನ ಬರಹ ಮತ್ತು ಸಂಸ್ಕೃತಿ ಚಿಂತನೆ' ಕುರಿತು ಕೆ.ಫಣಿರಾಜ್ ಮಾತನಾಡಿದರು. ಸಿದ್ರಾಮ ಕಾರಣಿಕ, ಡಾ.ರಂಗನಾಥ್ ಕಂಟನಕುಂಟೆ ಇದ್ದಾರೆ
ಧಾರವಾಡ: `ಎಡಗೈ-ಬಲಗೈ ನೆಪದಲ್ಲಿ ಸಂಘರ್ಷಕ್ಕೆ ಇಳಿದಿರುವ ದಲಿತ ಸಂಘಟನೆಗಳು, ವಶೀಲಿಬಾಜಿ ಭರದಲ್ಲಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ' ಎಂಬ ಹೇಳಿಕೆ ಭಾನುವಾರ ಇಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.
ಲೇಖಕ ಡಾ. ಲಕ್ಷ್ಮೀನಾರಾಯಣ ಅವರು, ಸಮಾವೇಶದ ಸಂವಾದದ ವೇಳೆ `ಉತ್ತರ ಪ್ರದೇಶದಲ್ಲಿ ದಲಿತರ ಪರವಾದ ಬಿಎಸ್‌ಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಕರ್ನಾಟದಕದಲ್ಲಿನ ದಲಿತ ಸಂಘಟನೆಗಳ ವಶೀಲಿ ಬಾಜಿಯಿಂದಾಗಿ ದಲಿತ ಚಳವಳಿ ತನ್ನ ಅಸ್ತಿತ್ವ ಕಳೆದುಕೊಂಡಿತು. ದಲಿತ ಚಳವಳಿ ಮೂರ್ತ ರೂಪ ಪಡೆದು ರಾಜಕೀಯ ಶಕ್ತಿ ಆಗಲೇ ಇಲ್ಲ' ಎಂದರು.
ಆಗ ವೇದಿಕೆ ಏರಿದ ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮೀನಾರಾಯಣ ನಾಗವಾರ, `ಯಾವ ಸಂಘಟನೆಗಳು ವಸೂಲಿಗೆ ಇಳಿದಿವೆ ಎಂಬುದನ್ನು ಸಾಬೀತುಪಡಿಸಿ, ಇಲ್ಲದಿದ್ದರೆ ಆ ಮಾತು ವಾಪಸ್ ಪಡೆಯಬೇಕು. ಪ್ರಗತಿಪರರು ಎನಿಸಿಕೊಂಡವರೇ ದಲಿತ ಸಂಘಟನೆಗಳ ಬಗೆಗೆ ಹೀಗೆ ಮಾತನಾಡಿದರೆ ಹೇಗೆ?' ಎಂದು ಪ್ರಶ್ನಿಸಿದರು.
ನಾಗವಾರ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಹಿರಿಯ ಸಾಹಿತಿ ರಾಜಪ್ಪ ದಳವಾಯಿ, `ದಲಿತ ಸಂಘಟನೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ ಅಥವಾ ವಿಘಟನೆಗೊಂಡಿವೆ ಎನ್ನುವ ಮೂಲಕ ಕೆಲವರು ಜನಸಾಮಾನ್ಯರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ಯಾರಾದರೂ ದಲಿತರ ಹಿತಾಸಕ್ತಿಗೆ ವಿರುದ್ಧವಾದ ಒಂದು ಹೇಳಿಕೆ ಕೊಟ್ಟು ನೋಡಲಿ. ಆಗ ದಲಿತರು ಏನು ಎಂಬುದು ಗೊತ್ತಾಗುತ್ತದೆ' ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
`ದಲಿತರಲ್ಲಿ ಎಡಗೈ-ಬಲಗೈ ವಿಚಾರ ದೊಡ್ಡದು ಮಾಡುವ ಕೆಲವು ಪ್ರಗತಿಪರರೇ ಮೊದಲು ಸಮಾಜವನ್ನೇ ಅರ್ಥಮಾಡಿಕೊಂಡಿಲ್ಲ. ಇನ್ನು ಚಳವಳಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಪ್ರಶ್ನಿಸಿದರು.
`ದಲಿತರನ್ನು ಇನ್ನೂ ಎಡಗೈ, ಬಲಗೈ ಎಂದು ಒಡೆದು ಆಳಲಾಗುತ್ತಿದೆ. ಮೇಲ್ಜಾತಿಗಳಲ್ಲಿ ಒಳಪಂಗಡಗಳು ಇದ್ದು, ಹೊಡೆದಾಟ-ಕೊಲೆಗಳೇ ನಡೆದಿದ್ದರೂ ಅದನ್ನು ಅಷ್ಟಾಗಿ  ಪರಿಗಣಿಸದ ಕೆಲವರು ದಲಿತರನ್ನು ಈ ರೀತಿ ಗುರುತಿಸುತ್ತಿದ್ದಾರೆ' ಎಂಬ ದಲಿತ ಮುಖಂಡರ ಆಕ್ರೋಶವೂ ವ್ಯಕ್ತವಾಯಿತು. ಇದಕ್ಕೂ ಮುನ್ನ ನಡೆದ `ಹೊಸ ತಲೆಮಾರಿನ ಕಥಾ ಸಾಹಿತ್ಯ'  ಗೋಷ್ಠಿಯಲ್ಲಿ ಎಸ್.ಗಂಗಾಧರಯ್ಯ, `ಪ್ರಶಸ್ತಿ ನೀಡಲು ಪರಿಗಣಿಸುವ ಸಂದರ್ಭದಲ್ಲಿ ಅರ್ಹತೆ ಇದ್ದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ' ಎಂದು ಹೇಳಿದ್ದು ಬಿಸಿ ಚರ್ಚೆಗೆ ಕಾರಣವಾಯಿತು. ಗೋಷ್ಠಿ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದ ಲಕ್ಷ್ಮೀನಾರಾಯಣ ನಾಗವಾರ, `ಅಸ್ಪೃಶ್ಯರು' ಎಂಬ ಪದ ಬಳಕೆ ಸರಿಯಲ್ಲ. ಆ ಮೂಲಕ ಗಂಗಾಧರಯ್ಯ ದಲಿತರನ್ನು ಅವಮಾನಿಸುತ್ತಿದ್ದಾರೆ. ಆ ಪದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ನಾಗವಾರ ಅವರ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಗಂಗಾಧರಯ್ಯ, `ಅಸ್ಪಶ್ಯರು' ಎಂಬ ಪದ ಬಳಕೆ ಮಾಡಿದ್ದು ಯಾರನ್ನೋ ನೋಯಿಸಲು ಅಲ್ಲ. ಬದಲಿಗೆ ಪ್ರಶಸ್ತಿಗೆ ಆಯ್ಕೆಯ ರಾಜಕೀಯ ಬಿಚ್ಚಿಡುವಾಗ ಮಾತಿನ ಭರದಲ್ಲಿ ಹೇಳಿದ್ದು, ಅದು ನೋವುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.

ಕೃಪೆ : ಮನೋಜ್‌ಕುಮಾರ್ ಗುದ್ದಿ, ಪ್ರಜಾವಾಣಿ 

Monday, March 18, 2013

ಡಾ. ಕಂಬಾರರಿಗೆ : ‘ಹೇಳತೇನಿ ಕೇಳು’ ಅಲ್ಲ : ‘ಕೇಳತೇನಿ ಹೇಳ್ರಿ !’

ಡಾ. ಸಿದ್ರಾಮ ಕಾರಣಿಕ

ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡವರೆನಿಸಿಕೊಂಡವರು, ವಿದ್ವಾಂಸರು ಎಂಬ ಬಿರುದಾಂಕಿತರು ಹೇಳಿಕೆಗಳನ್ನು ನೀಡಬೇಕಾದರೆ ಸಾವಿರ ಸಲ ಯೋಚಿಸಬೇಕು. ತಕ್ಷಣದ ಅನುಭವ ಅಥವಾ ಮಾತಿನ ಭರದಲ್ಲಿ ಬೇಕಾಬಿಟ್ಟಿಯಾಗಿ ವಿಚಾರ ಲಹರಿಗಳನ್ನು ಹರಿಯಬಿಡವುದು ಸೂಕ್ತವಲ್ಲ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯಗಳಿಂದ ಕೆಟ್ಟ ವಿಮರ್ಶಕರ ಸೃಷ್ಟಿಯಾಗಿದೆ ಎಂಬ ಆರೋಪವನ್ನು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ (ವಿ.ಕ. 13-03-2013).
ಕಂಬಾರರು ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಒಂದೇ ವಿಷಯ ಮತ್ತು ಪರಿಸರವನ್ನು ಇಟ್ಟುಕೊಂಡು ಹಲವಾರು ಪುಸ್ತಕಗಳನ್ನು ಬರೆದವರು. ನಡುನಡುವೆ ವಿಲಕ್ಷಣವಾದ ಹೇಳಿಕೆಗಳನ್ನು ನೀಡುತ್ತ ತಾವು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಲು ಮುಂದಾದವರು. ಇವರು ಈಗ ಹೀಗೆ ಹೇಳುತ್ತಿರವುದನ್ನು ಕಂಡಾಗ ಇದನ್ನು ಅವರು ತಮ್ಮ ಅನುಭವದಿಂದಲೇ ಅವರು ಹೇಳಿರಬಹುದು ಎನಿಸುತ್ತದೆ.
ವಿಶ್ವವಿದ್ಯಾಲಯಗಳು ಇಂದು ಮೊದಲಿನ ವಾತಾವರಣವನ್ನು ಉಳಿಸಿಕೊಂಡಿಲ್ಲ ಎಂಬುದೇನೋ ನಿಜ. ಆದರೆ ಅದನ್ನೇ ಮುಂದಿಟ್ಟುಕೊಂಡು ತಮ್ಮ ಹಿರಿತನದ ಜಾಡ್ಯವನ್ನು ಬಿತ್ತುವುದು ಸರಿಯಾದ ಕ್ರಮವಲ್ಲ. ‘ಬ್ರಿಟಿಷರಿಂದ ನಮಗಾದ ದೊಡ್ಡ ಲಾಭವೆಂದರೆ ಅವರು ಶಿಕ್ಷಣವನ್ನು ಸಾರ್ವಜನಿಕಗೊಳಿಸಿದ್ದು. ಅದು ಐತಿಹಾಸಿಕ ಅನಿವಾರ್ಯ. ಆದರೆ ನಮ್ಮ ಮನಸು ಶಿಕ್ಷಿತವಾದದ್ದು ಪಾಶ್ಚಾತ್ಯ ರೀತಿಯಲ್ಲಿ. ವಿದ್ಯೆಗಳನ್ನು ಕಲಿಸಲು ಹೇಳಿಕೊಟ್ಟ ವಿಧಾನಗಳನ್ನೇ ಬಳಸಿದೆವು. ಕನ್ನಡ ಮತ್ತು ಸಂಸ್ಕೃತದಂಥ ವಿಷಯಗಳನ್ನೂ ಅವರ ವಿಧಾನದಲ್ಲಿಯೇ ಓದಿದೆವು’ ಎಂಬ ಕಂಬಾರರ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ. ನಾವು ಪಾಶ್ಚಾತ್ಯರ ಮಾದರಿಯಲ್ಲಿ ವಿದ್ಯಾದಾನದ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿಲ್ಲ. ಪಾರಂಪರಿಕವಾದ ಗುರುಕುಲಗಳಲ್ಲಿ ಇದ್ದ ಶಿಕ್ಷಣ ಮಾದರಿಯೇ ಇಂದಿಗೂ ನಮ್ಮ ನಡುವೆ ಇದೆ. ಒಂದು ಬದಲಾವಣೆ ಎಂದರೆ ಎಲ್ಲ ಜಾತಿ-ಜನಾಂಗದವರಿಗೆ ಶಿಕ್ಷಣದ ಅವಕಾಶ ಇಂದು ನಮಗಿದೆ ಅಷ್ಟೆ. ಇದು ಕಂಬಾರರು ಹೇಳಿದಂತೆಯೇ ಬ್ರಿಟಿಷರಿಂದ ಆದ ಬದಲಾವಣೆ. ಮುಂದೆ ಶಿಕ್ಷಣದ ಪಠ್ಯಕ್ರಮವನ್ನು ಒಂದಿಷ್ಟು ನೋಡಿದರೆ ಕಂಬಾರರು ತಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳುತ್ತಾರೇನೋ ! ಯಾಕೆಂದರೆ ಇಂದಿಗೂ ದೇವರು, ಧರ್ಮ ಮೊದಲಾದ ವಿಷಯಗಳೇ ಪಠ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಅದೂ ಒಂದೇ ಧರ್ಮಕ್ಕೆ ಸಂಬಂಧಿಸಿದಂತೆ ! ಹಾಗಾದರೆ ಇದನ್ನು ಪಾಶ್ಚಾತ್ಯರ ಅನುಕರಣೆ ಎನ್ನೋಣವೆ ?
ಈ ದೇಶದಲ್ಲಿ ಯಂತ್ರ ಪದವೀಧರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಕನ್ನಡ ಶಾಲೆಯಲ್ಲಿಯೇ ಕಲಿತು ಅದೇ ಬದಲಾವಣೆಯಿಲ್ಲದ ಪಠ್ಯದ ಮೂಲಕ ಒಂದಿಷ್ಟು ಓದು ಬರಹ ಕಲಿತ ಅಸಂಖ್ಯಾತ ಜನ ಇಂದಿಗೂ ಸರಿಯಾದ ಬದುಕಿನ ನೆಲೆ ಕಾಣದೆ ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಕಂಬಾರರು ಇದನ್ನು ಕಂಡಿಲ್ಲವೆ ? ಸಾಮಾನ್ಯ ಜನರ ಬದುಕು ಈ ಸಾಂಪ್ರದಾಯಿಕ ಶಿಕ್ಷಣದಿಂದ ಏನೇನೂ ಬದಲಾವಣೆ ಆಗಿಲ್ಲ. ಹೀಗೆ ಹೇಳಿದ ತಕ್ಷಣ ಡಾ. ಕಂಬಾರರು ತಮ್ಮ ಹಳೆಯ ಮಾತನ್ನು ಉಚ್ಚರಿಸಬಹುದು. ಅವರ ಪ್ರಕಾರ ಜನಪದ ಬದುಕು ಬದಲಾಗಬಾರದು ; ಇದರಿಂದ ಜಾನಪದ ಸಂಸ್ಕೃತಿಯೊಂದು ಅಳಿಯುತ್ತದೆ. ಕಾಡಿನಲ್ಲಿ ಇದ್ದವರಿಗೆ ಶಿಕ್ಷಣ ನೀಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಅವರ ಸಂಸ್ಕೃತಿ ಹಾಳಾಗುತ್ತದೆ ! ಹಾಗಾದರೆ ಯಾರು ಎಲ್ಲಿ ಇರುತ್ತಾರೋ ಅಲ್ಲಿಯೇ ಇರಬೇಕು ಎಂಬ ಮಾನಸಿಕ ಜಾಡ್ಯ ನಮ್ಮ ದೇಶದ ಬಹುಪಾಲು ವಿದ್ವಾಂಸರಲ್ಲಿದೆ ಎಂಬ ಅರ್ಥವಲ್ಲವೆ ?
ಇನ್ನು ಕನ್ನಡದ ಬಗ್ಗೆ ಕಂಬಾರರು ಎಲ್ಲಿ ಹೋದಲ್ಲಿ ಮಾತನಾಡುತ್ತಾರೆ. ಅವರು ಒಂದು ವಿಷಯವನ್ನು ಅರಿತುಕೊಳ್ಳಬೇಕು. ಯಾವುದೇ ಭಾಷೆಯಾದರೂ ಅದು ಬದುಕು ನೀಡಬೇಕು. ಬದುಕು ನೀಡದ ಭಾಷೆಯನ್ನು ಕಲಿಯುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗಾಗಿ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕಂಬಾರರು ಅಥವಾ ಅವರಂಥವರು ಹೇಳುವ ಅವಶ್ಯಕತೆಯೇ ಆಗ ಇರವುದಿಲ್ಲ. ಜನ ತಾವಾಗಿಯೇ ಕನ್ನಡವನ್ನು ಕಲಿಯಲು ಮುಂದೆ ಬರುತ್ತಾರೆ ; ಕನ್ನಡ ಕಲಿಯಲು ಪೈಪೋಟಿ ನಡೆಯುತ್ತದೆ. ಉನ್ನತ ಸ್ಥಾನಗಳಲ್ಲಿ ಇರುವ ಕನ್ನಡ ಪರ ಮಾತುಗಳನ್ನು ಉದರಿಸುವವರು ಸರಕಾರದ ಮುಂದೆ ಇಂಥ ಪ್ರಸ್ತಾಪವೇನಾದರೂ ಇಟ್ಟಿದ್ದಾರೆಯೇ ? ಇಟ್ಟಿದ್ದರೆ ಅವು ಕಾರ್ಯರೂಪಕ್ಕೆ ಬರಲು ಏನು ಹೋರಾಟ ಮಾಡಿದ್ದಾರೆ ? ಬರೀ ಹೇಳಿಕೆಗಳನ್ನು ಕೊಡುವುದರಿಂದಲೇ ತಾವು ಬಹುದೊಡ್ಡ ವಿದ್ವಾಂಸ ಎನಿಸಿಕೊಳ್ಳುತ್ತೇವೆ ಎಂದರೆ ತಪ್ಪಾಗುವುದಿಲ್ಲವೆ ?
*****

Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

Friday, March 15, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ ಆಹ್ವಾನ ಪತ್ರಿಕೆ







ಕರ್ನಾಟಕ ಜನಸಾಹಿತ್ಯ ಸಮಾವೇಶ
ಮಾರ್ಚ್ ೨೩ ಮತ್ತು ೨೪, ೨೦೧೩.
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಮಾ.೨೩. ಬೆ. ೧೦.೩೦-೧೧.೩೦:

೧. ಆಶಯ ನುಡಿ

ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ
ಆಶಯ ಮಾತು :
ಲಕ್ಷ್ಮಣ  ಗಾಯಕವಾಡ, ಮರಾಠಿ ದಲಿತ ಲೇಖಕರು
ಬಾನು ಮುಷ್ತಾಕ್,
ಸಂಯೋಜನೆ: ಡಾ. ಸಂಜೀವ ಕುಲಕರ್ಣಿ


೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು ೧೧.೩೦-೨.೦೦

ದು. ಸರಸ್ವತಿ
ಡಾ. ನಾಗೇಶ ಹೆಗಡೆ
ಡಾ. ಬಂಜಗೆರೆ ಜಯಪ್ರಕಾಶ
ಡಾ. ಎಸ್.ಬಿ.ಜೋಗುರ
ಸ್ಪಂದನ : ಡಾ. ಮುಜಾಫರ್ ಅಸ್ಸಾದಿ
ಸಂಯೋಜನೆ : ಡಾ. ಜಗದೀಶ ಕೊಪ್ಪ


೩. ಸಮಾಜ ಮತ್ತು  ನನ್ನ ಬರಹ   ಮ. ೩.೦೦ - ೫.೦೦
ಸರ್ಜಾಶಂಕರ್ ಹರಳಿಮಠ
ಬಿ.ಪೀರ್‌ಬಾಷಾ
ವೀರಣ್ಣ ಮಡಿವಾಳರ
ಡಾ. ಅನಸೂಯಾ ಕಾಂಬಳೆ
ವಸಂತ ಬನ್ನಾಡಿ
ಜ್ಯೋತಿ ಚೇಳಾಯರು
ಡಾ. ಮಲ್ಲಿಕಾರ್ಜುನ ಮೇಟಿ
ಟಿ ಕೆ ದಯಾನಂದ
ಬಾಲ ಗುರುಮೂರ್ತಿ
ರಮೇಶ ಅರೋಲಿ


ಸ್ಪಂದನ : ಡಾ. ಕುಂ. ವೀರಭದ್ರಪ್ಪ
ಸಂಯೋಜನೆ : ಡಾ. ಕಾ. ವೆಂ. ಶ್ರೀನಿವಾಸಮೂರ್ತಿ


೪. ಕವಿಗೋಷ್ಠಿ  ಸಂಜೆ ೫.೩೦ - ೮.೦೦

ಸುಬ್ಬು ಹೊಲೆಯಾರ್
ವಿ. ಎಂ. ಮಂಜುನಾಥ
ವಿ. ಆರ್. ಕಾರ್ಪೆಂಟರ್
ಡಾ. ಅರುಣ ಜೋಳದ ಕೂಡ್ಲಿಗಿ
ಪ್ರವರ ಕೊಟ್ಟೂರ
ಶರೀಫ್ ಹಸಮಕಲ್
ಸ್ಮಿತಾ ಮಾಕಳ್ಳಿ
ಸೈಫ್ ಜಾನ್ಸೆ ಕೊಟ್ಟೂರು
ಸೀಮಾ ಸಮತಳ
ಕಾವ್ಯ. ಪಿ. ಕೆ
ಗಂಗಪ್ಪ ತಳವಾರ
ಬಸವರಾಜ ಹಳ್ಳಿ
ಹೃದಯಶಿವ
ಸತ್ಯಮಂಗ ಮಹಾದೇವ
ವಿ. ಹರಿನಾಥ ಬಾಬು
ಗಣೇಶ್ ಹೊಸ್ಮನೆ
ಭವ್ಯ. ಎಚ್. ಸಿ
ಕಾವ್ಯಶ್ರೀ
ಟಿ. ಎಸ್. ಗೊರವರ
ಚೈತ್ರ ಬೇವಿನಗಿಡದ
ಕುಂಸಿ ಉಮೇಶ
ಅಬ್ಬಾಸ ಮೇಲಿನಮನಿ
ಮಂಜುನಾಥ ಡೊಳ್ಳಿನ
ಬಿ. ಶ್ರೀನಿವಾಸ
ಶ್ರೀದೇವಿ ಕಳಸದ
ಬಸವರಾಜ ಹೂಗಾರ
ಕೆ. ಅಕ್ಷತಾ
ಮಂಜುಳಾ ಮಾದರ
ಶಿವಕುಮಾರ ಕಂಪ್ಲಿ
ದೊಡ್ಡನಿಂಗಪ್ಪ ಆಲೂರ್
ಡಿ. ಕೆ. ರಮೇಶ್
ಕುಮಾರ್. ಎಸ್
ಕಲ್ಲೇಶ್ ಕುಂಬಾರ
ಚನ್ನಪ್ಪ ಅಂಗಡಿ
ಅಪ್ಪಗೆರೆ ಸೋಮಶೇಖರ್
ನಾಗರಾಜ ಹರಪನಹಳ್ಳಿ
ರೇಣುಕಾ ಹೆಳವರ
ಡಾ. ಟಿ ಎಂ ಉಷಾರಾಣಿ

ಸ್ಪಂದನ : ಡಾ. ಎಸ್. ಜಿ. ಸಿದ್ಧರಾಮಯ್ಯ

ಸಂಯೋಜನೆ: ಅಶೋಕ್ ಶೆಟ್ಟರ

ರಾತ್ರಿ ೮.೦೦ ಸಾಂಸ್ಕೃತಿಕ ಕಾರ್ಯಕ್ರಮ
ಚಾಲನೆ - ಜನಾರ್ದನ್ (ಜನ್ನಿ)
ಕೇಸರಿ ಹರವೂ ನಿರ್ದೇಶನದ
’ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನ

ಮಾರ್ಚ್ ೨೪, ಬೆಳಿಗ್ಗೆ ೯.೩೦ - ೧೦.೩೦

೫. ಹೊಸತಲೆಮಾರಿನ ಸಾಹಿತ್ಯ
ಕಾವ್ಯ

ತಾರಿಣಿ ಶುಭದಾಯಿನಿ
ಡಾ. ಎಚ್.ಎಸ್.ಅನುಪಮಾ

ಸ್ಪಂದನ - ಕೆ. ಪಿ. ಸುರೇಶ್ಸಂಯೋಜನೆ : ಜಗದೀಶ ಮಂಗಳೂರಮಠ

ಕತೆ:   ೧೦.೩೦ - ೧೧.೩೦.

ಮಂಜುನಾಥ್ ಲತಾ
ಮಹಾಂತೇಶ್ ನವಲಕಲ್

ಸ್ಪಂದನ:  ಎಸ್. ಗಂಗಾಧರಯ್ಯ
ಸಂಯೋಜನೆ : ಸುನಂದಾ ಕಡಮೆ

ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ: ೧೧.೩೦ - ೧೨.೩೦
ದೇವು ಪತ್ತಾರ
ಡಾ. ರಂಗನಾಥ ಕಂಟನಕುಂಟೆ

ಸ್ಪಂದನ: ಕೆ.ಫಣಿರಾಜ್ಸಂಯೋಜನೆ : ಡಾ. ಸಿದ್ರಾಮ ಕಾರಣಿಕ

೬ ಹೊಸ ತಲೆಮಾರು : ನಮ್ಮ ಗ್ರಹಿಕೆ ೧೨.೩೦-೨.೩೦
ಜಿ ಪಿ ಬಸವರಾಜು
ಡಾ. ನಟರಾಜ್ ಬೂದಾಳು
ಡಾ ಬಿ. ಎನ್. ಸುಮಿತ್ರಾಬಾಯಿ
ಡಾ. ಸಬಿಹಾ ಭೂಮಿಗೌಡ
ಕೆ. ನೀಲಾ

ಸಂಯೋಜನೆ: ಶಂಕರ ಹಲಗತ್ತಿ

೭ ಹೊಸ ಸಾಹಿತ್ಯ ಚಳುವಳಿಯ ಸಾಧ್ಯತೆ: ಮ. ೩.೩೦ - ೫.೩೦
ಡಾ. ಸಿದ್ಧನಗೌಡ ಪಾಟೀಲ್
ಡಾ. ವಿನಯಾ
ಡಾ. ಬಿ. ಎಂ ಪುಟ್ಟಯ್ಯ
ಡಾ. ರಹಮತ್ ತರೀಕೆರೆ

ಸಂಯೋಜನೆ: ಡಾ. ಕೆ ಆರ್ ದುರ್ಗಾದಾಸ

ಚಿತ್ರಕಲಾ ಪ್ರದರ್ಶನ

ನಮ್ಮೊಂದಿಗೆ:
ಹಸನ್‌ನಯೀಂ ಸುರಕೋಡ,   ಡಾ. ಎಚ್.ಟಿ. ಪೋತೆ,  ಡಾ.ಎಚ್ ನಾಗವೇಣಿ,  ರಾಮಚಂದ್ರ ಕುಲಕರ್ಣಿ,  ಹನಮಂತ ಹಾಲಗೇರಿ,  ಶಶಿಧರ ಹೆಮ್ಮಾಡಿ,  ಚಂದ್ರಕಾಂತ ಪೋಕಳೆ,  ಡಾ. ಶ್ರೀಶೈಲ್ ಹುದ್ದಾರ,  ಡಾ. ಸುಮಾ ಎಂಬಾರ್, ಸಂವರ್ಥ ಸಾಹಿಲ್,  ಡಾ. ಎಂ.ವಿ. ವಸು, ಕೆ.ಪಿ. ನಟರಾಜ, ಕೆ. ವೆಂಕಟೇಶ್, ನಾಮದೇವ ಕಾಗದಗಾರ, ಲಕ್ಷ್ಮೀಕಾಂತ ಮಿರಜಕರ, ದಾದಾಪೀರ್ ನವಲೇಹಾಳ್, ರಮೇಶ ಗಬ್ಬೂರ, ಡಾ. ಜಾಜಿ ದೇವೇಂದ್ರಪ್ಪ, ಬಿ.ಎಸ್.ಸೊಪ್ಪಿನ್, ಬಿ.ಆಯ್. ಇಳಿಗೇರ, ಮಹಾಂತೇಶ ಮಸ್ಕಿ, ಶ್ರೀದೇವಿ ಕೆರೆಮನೆ , ವೀರೇಶ ಸೌದ್ರಿ, ಶಿವಕುಮಾರ ಕಣಸೋಗಿ, ಎನ್, ಚಂದ್ರಶೇಖರ್, ಜಗನ್ನಾಥ ಮಾಸ್ತಿ, ವೈ.ಗ.ಜಗದೀಶ್, ಎಂ. ಎಫ್.ನದಾಪ, ಡಾ. ಸುನಂದಮ್ಮ, ಡಾ. ಸಬಿತಾ ಬನ್ನಾಡಿ, ಮಹಾಲಿಂಗಪ್ಪ ಅಲಬಾಳ್, ಸಿ.ಜಿ. ಹಿರೇಮಠ, ಸುರೇಶ ತಾಂಡೇಲ, ಮಾಧವಿ ಭಂಡಾರಿ, ಡಾ. ನಟರಾಜ ಹುಳಿಯಾರ್, ಸರಜೂ ಕಾಟಕರ, ಸತೀಶ ಕುಲಕರ್ಣಿ, ಡಿ.ಎಸ್.ಚೌಗಲೆ, ಭೀಮನಗೌಡ ಇಟಗಿ, ವಿಠ್ಠಪ್ಪ ಗೊರಂಟ್ಲಿ, ಡಾ. ಎ.ಎಸ್. ಪ್ರಭಾಕರ್, ಡಾ. ಎಚ್.ಡಿ. ಪ್ರಶಾಂತ್, ಡಾ. ರಾಜಪ್ಪ ದಳವಾಯಿ, ಶ್ರೀಪಾದ ಭಟ್, ಡಾ. ಗವಿಸಿದ್ದ ಪಾಟೀಲ, ಗವಿಸಿದ್ದ ಹೊಸಮನಿ, ಜಿ.ಎನ್.ಮೋಹನ್, ಬಸವರಾಜ ಕೆಂಚರಡ್ಡಿ, ಎಸ್.ಜಿ.ಚಿಕ್ಕನರಗುಂದ, ಜೆ. ಪಿ. ಶೆಟ್ಟಿ, ಸುಭಾಸ ರಾಜಮಾನೆ, ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಲಿಂಗಾರಡ್ಡಿ ಶೇರಿ, ಪ್ರಭು ಖಾನಾಪುರೆ, ಕಾಶೀನಾಥ ಅಂಬಲಗೆ, ಡಾ.ಎಚ್.ಬಿ.ಕೋಲ್ಕಾರ, ಲಕ್ಷ್ಮಣ ಕಾಪಸೆ, ಡಾ. ಮೈನುದ್ದೀನ ರೇವಡಿಗಾರ, ಡಾ. ಪ್ರಕಾಶ ಖಾಡೆ, ಶಿವಸುಂದರ, ಸತೀಶ್ ಶಿಲೆ, ವೀರಣ್ಣ ಮಂಟಾಳಕರ್, ಡಾ. ದಸ್ತಗೀರ್‌ಸಾಬ್ ದಿನ್ನಿ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಬಸವರಾಜ ಶೀಲವಂತರ್, ರಮೇಶ ನಾಯಕ, ಎಂ. ಚಂದ್ರಪ್ಪ, ಡಾ. ಆಂಜನಪ್ಪ, ವಿರುಪಾಕ್ಷಪ್ಪ ಪಡಿಗೋದಿ, ಸದಾನಂದ ಮೋದಿ, ಪ್ರಮೋದ ತುರ್ವಿಹಾಳ, ಡಾ. ವೈ.ಎಂ.ಭಜಂತ್ರಿ, ಡಾ. ಎಲ್.ಆರ್ ಅಂಗಡಿ, ಡಾ. ವೈ ಬಿ ಹಿಮ್ಮಡಿ, ಪಾರ್ವತೇಶ್, ಮುಂತಾದ ಹಿರಿಯರು ಮತ್ತು ಕಿರಿಯರು
ಬನ್ನಿ, ಗೆಳೆಯರ ಜತೆಗೆ..

Tuesday, March 12, 2013

ಮಾತ್ಗವಿತೆ-121

ಬಚ್ಚಿಟ್ಟುಕೊಂಡಿದ್ದನ್ನು ಬಿಚ್ಚಿ ಬಿಡು
ಗಚ್ಚಿಯಾಗಿ ಹಿಡಿದುಕೊಂಡು ಮಾಡುವುದಾದರೂ ಏನು ?
ಗುಬ್ಬಚ್ಚಿ ಗೂಡು ಕಟ್ಟಿದಾಗ
ಗಿಡುಗ ಬಂದು ಮೆಚ್ಚಿ ಕೆಡವಿದಾಗ
ಉಳಿದದ್ದು ನೆನೆಯಲು ಇರುವುದಾದರೂ ಏನು ?

Sunday, March 10, 2013

ಮಹಾಶಿವರಾತ್ರಿ : ಬೇಡರ ಕಣ್ಣಪ್ಪನ ನೆನಪು !

 ಡಾ. ಸಿದ್ರಾಮ ಕಾರಣಿಕ
ಮಹಾಶಿವರಾತ್ರಿ ಶುಭಾಶಯ.... ಮಹಾಶಿವರಾತ್ರಿ ಎಲ್ಲರಿಗೂ ಒಳ್ಳೇದು ಮಾಡಲಿ ಅನ್ಕೊಂತನss ಶಿವರಾತ್ರಿ ಮಹಿಮಾ ಬಗ್ಗಿ ಮಾತಾಡೂ ಮಂದಿ ಒಂದುಕ್ಷಣ 'ಬೇಡರ ಕಣ್ಣಪ್ಪ'ನ ನೆನಪು ಮಾಡಿಕೋಬೇಕು. ಮೇಲು ಮೇಲಿನ ಆಡಂಬರದ ಭಕ್ತಿ-ಪೂಜೆಗಿಂತ ಮನಸ್ಸು ಸರಳಾಗಿರಬೇಕು ; ಅಂತರಂಗದ ಶುದ್ಧಿ ಇರಬೇಕು ಎಂಬೋದು ತಿಳಿದುಕೊಳ್ಳೋದು ಲೇಸಲ್ಲವೆ ?

Saturday, March 09, 2013

ಕತೀ ಬರಿಯೂ ಮೊದಲ .... !

ಡಾ. ಸಿದ್ರಾಮ ಕಾರಣಿಕ

ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು ... ? ಮುಂದ ಇತ್ತಲ್ಲ ಗರಿಗರಿ ಮಡಿಕಿ ಹಾಕಿದ  ಪತ್ರಿಕೆ. ಹೆಣ್ಮಕ್ಕಳ ಮ್ಯಾಲ ಅತ್ಯಾಚಾರ ... ದಿನಕ್ಕೊಂದು ಹಿಂತಾವು ನಡಿಯಾಕ ಹತ್ತ್ಯಾವು. ಅವುನ್ನ ದಿನ್ನಾ ಓದುತ್ತ ಓದುತ್ತ ಇರುವಾಗ ಟೀವ್ಯಾಗ ಹಂಥದ್ದ ಘಟನಾ ಮರಕಳಿಸಿದ ಬಗ್ಗಿ ಸುದ್ದಿ ಬಿತ್ತರ ಆಗ್ತೇತಿ. ಇದನ್ನ ಇಟ್ಟುಕೊಂಡ ಕತಿ ಬರದರ ಹ್ಯಾಂಗ್ ? ಜ್ವಲಂತ ವಿಷಯಾನೂ ಆಗ್ತೇತಿ. ಅವಾರ್ಡ್ ಬಂದ್ರೂ ಬರಬೋದಲಾ ? ಹಂಗಾರ ಎಲ್ಲಿಂದ ಸುರು ಮಾಡ್ಲಿ ? ಹುಡುಗ-ಹುಡುಗಿ, ಕಾಲೇಜು, ಪ್ರೇಮ, ವೈರ ಹೊಡೆದಾಟ, ಅತ್ಯಾಚಾರ, ಕೊಲೆ ... ? ಇದೆಲ್ಲ ಹಳಸಲು ಸಿನೇಮಾ ಕತಿ ಹಾಂಗ ಅನ್ನಿಸ್ತೇತ್ಯಲಾ !  ಬ್ಯಾಡಾ, ಹೀಂಗ ಬರೀಬಾರದ್ ನಾ.... ಮತ್ತೇ ? ಅಪ್ಪ-ಅವ್ವ, ವಾತ್ಸಲ್ಯ ವಂಚಿತ ವಿದ್ಯಾರ್ಥಿ, ಕಾಲೇಜು, ಪ್ರೇಮ, ಹೊಸ ಬದುಕಿನ ಆಸೆ ಆನಂತರ ... ... ... ನಂಬಿಕೀ ದ್ರೋಹ ! ಇದೂ ಚರ್ವಿತ ಚರ್ವಣನ ಅನ್ನಿಸೂದಿಲ್ಲ !
ಹಂಗಾರ ಬರಿಯೂದಾದ್ರೂ ಏನ ಮತ್ತ ? ಈ ಕತೆ ಬರಿಯೋ ಗೋಜಲ ಬ್ಯಾಡಂತ ಬಿಟ್ಟ ಬಿಡ್ಲಿ.
ಆಕೀನೂ ಹೀಂಗ ಹೇಳಿದ್ಳಲಾ ? ‘ನಮ್ಮ ಬದುಕ ಕತಿ ಆಗಬಾರ್ದು. ದೋಖಾ ಅಂತ ಅಲ್ಲಾ. ಮನಿಯೊಳಗಿನ ಪರಿಸ್ಥಿತೀನ ಹಂಗ ಏತಿ. ನಂದ ಹೆಂಗಾರ ನಡಿತೇತಿ. ನೀ ಮೊದಲ ಬದುಕ ಕಟ್ಕೋ’ ಎಷ್ಟು ಸಹಜವಾಗಿ ಹೇಳಿದ್ದಳಲ್ಲ ಆಕೆ ! ಆಕೆಯ ತಪ್ಪಾದರೂ ಏನು ... ನಾನೇ ಒಂದಿಷ್ಟು ಎಡಬಿಡಂಗಿ ಥರಾ ವರ್ತಿಸಿಬಿಟ್ಟಿದ್ದೀನಲ್ಲ ! ಹೋಗ್ಲಿ...  ಆ ಸುದ್ದಿ ಈಗ್ಯಾಕ ? ಒಂದ ಕತೀ ಬರಿಬೇಕ ಅಷ್ಟ. ನಾ ಸಣ್ಣಾಂವ ಇದ್ದಾಗ ಸಾಲೀಗಿ ಹೋಗ್ತೇನ ಅಂತ ಹಟಾ ಹಿಡದ ಗೆದ್ದದ್ದು, ಹೆಂಗೋ ಏನೋ ಮಾಡಿಕೊಂಡು ಕಾಲೇಜು ಮೆಟ್ಟಿಲು ತುಳದದ್ದು... ... ಛೇ ! ಇಲ್ಲಿ ನಾ ಆತ್ಮ ಚರಿತ್ರಾ ಬರ್ಯಾಕತ್ತೇನೇನು ?
ಬ್ಯಾಡ ಬಿಡು ; ಈ ಬರಿಯೋದ ಅಂದ್ರ... ಯಾಕೋ ತ್ರಾಸಿನ ಕೆಲಸ !
ಯಾಕಂದ್ರ ನಾವ್ ಬರಿದದ್ದ ನೋಡಾವ್ರು ಇರ್ತಾರೇನೋ ಖರೆ ; ಮೆಚ್ಕೊಳ್ಳಾವ್ರೂ ಇರ್ತಾರು. ಆದ್ರ ಬರಿಯೂ ಬರಹದಾಗೂ ರಾಜಕೀ ಮಾಡಿ ಮ್ಯಾಲ-ಕೆಳಗ ಮಾಡ್ತಾರಲ್ಲ ...
ಅದಕ್ಕ ...
ಬರಿಯೋದ ಬ್ಯಾಡ ಅನ್ನಿಸ್ತೇತಿ !
ನೀವ್ ಏನಂತೀರಿ ?

Friday, March 08, 2013

ಮಾತ್ಗವಿತೆ-120

ಒಳಗೊಳಗೆ 'ಒಳಗು' ಮಾಡಿಕೊಂಡು
ಹೊರಗೆಲ್ಲ 'ಹೊರಗಾದ' ದೀಡ್ ಪೈಸೆಯ ಧಿಮಾಕು !
ಹೊರ ಬಾರದ ಎದೆಯ ಮಾತ
ಒರೆಯೊಳಗಿನ ಕರವತ್ತಿನ ಕೋಯ್ತ !
ಯಾಕೆ ಬೇಕಿತ್ತು ಎಂದರೇನು ?
ಮೆರೆಯಬೇಕಿತ್ತಲ್ಲವೆ ಆವತ್ತು !

Thursday, March 07, 2013

8 ಮಾರ್ಚ್ : ಒಂದೆರಡು ಮಾತುಗಳು !

ಡಾ. ಸಿದ್ರಾಮ ಕಾರಣಿಕ

8 ಮಾರ್ಚ್ ವಿಶ್ವ ಮಹಿಳಾ ದಿನ. ನಾವೆಲ್ಲ ಒಬ್ಬರಿಗೊಬ್ಬರು ವಿಶ್ ಮಾಡುತ್ತ ಖುಷಿಯಿಂದ ಕಳೆಯುತ್ತೇವೆ. ಆದರೆ ಇಂದಿಗಾದರೂ ಹೆಣ್ನುಮಕ್ಕಳ ಪಾಡು ಬದಲಾಗಿದೆಯೇ ? ಎಷ್ಟೋ ಹೋರಾಟಗಳು ನಡೆದರೂ ಸ್ತ್ರೀ ಇನ್ನೂ ಪುರುಷ ಪ್ರಧಾನ ಸಾಮಾಜಿಕ ಬಂಧನದಿಂದ ಬಿಡುಗಡೆ ಹೊಂದಿಯೇ ಇಲ್ಲ. ಮುಕ್ತವಾಗಲು ಆಕೆಗೆ ಅವಕಾಶಗಳೇ ಇಲ್ಲ. ದಿಲ್ಲಿಯಲ್ಲಿ ಅತ್ಯಾಚಾರ ನಡೆದಾಗ ಅದು ವಿಶ್ವವ್ಯಾಪಿಯಾಗಿ ಗಮನ ಸೆಳೆಯಿತು. ಪ್ರತಿಭಟನೆಗಳು ನಡೆದವು. ಆದರೆ ಫಲ ಮಾತ್ರ ಸೊನ್ನೆ ! ಯಾಕೆಂದರೆ ಅಂತಹ ಪ್ರಕರಣಗಳು ಮೇಲಿಂದ ಮೇಲೆ ಇನ್ನೂ ಹೆಚ್ಚಾಗಿಯೇ ವರದಿಯಾಗುತ್ತಿವೆ. ವರದಿಯಾದ ಪ್ರಕರಣಗಳನ್ನು ಬಿಟ್ಟು ಇನ್ನೂ ಎಷ್ಟೋ ಪ್ರಕರಣಗಳು ಹೇಳ ಹೆಸರಿಲ್ಲದಂತೆ ಈ ದೇಶದಲ್ಲಿ ನಡೆಯುತ್ತಲೇ ಇವೆ. ಇವೆಲ್ಲವುಗಳಿಗೆ ಕೊನೆ ಎಂಬುದೇ ಇಲ್ಲವೆ ಎನಿಸುತ್ತದೆ. ಹಾಗಾದರೆ ನಮ್ಮ ಪ್ರತಿಭಟನೆ, ಹೋರಾಟಗಳಿಗೆ ಇಂಥ ಸಾಮಾಜಿಕ ಜಾಡ್ಯವನ್ನು ಕೊನೆಗೊಳಿಸುವ ಶಕ್ತಿಯೇ ಇಲ್ಲವೆ ? ನಾವೆಲ್ಲ ಮೊಸಳೆ ಕಣ್ಣೀರು ಸುರಿಸುತ್ತಿದ್ದೇವೆಯೇ ? ಯಾಕೆ ಹೀಗಾಗುತ್ತದೆ ? ಮನುಷ್ಯರು ಮನುಷ್ಯರೇ ಅಲ್ಲವೇನೋ ಎಂಬಂತೆ ವರ್ತಿಸುವುದ್ಯಾಕೆ ? ನಮ್ಮ ಮನಸ್ಸುಗಳು ಇನ್ನೂ ಕೊಳಕುತನಗಳನ್ನು ಕಳೆದುಕೊಂಡಿಲ್ಲವೆ ? ಎಲ್ಲಿಯವರೆಗೆ ಸುಮ್ಮನಿರಬೇಕು ? ಮಾರ್ಚ್ ಎಂಟರಂದು ವಿಶ್ ಮಾಡುವ ಮೂಲಕವೋ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಮಾತನಾಡುವ ಮೂಲಕವೋ ಸಮಾನತೆಯ ವ್ಯಂಗ್ಯ ಮಾಡುತ್ತಿದ್ದೇವೆಯೇ ? ಯಾಕೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಿಲ್ಲ ? ಯಾಕೆ ನಮ್ಮಲ್ಲಿ ನೈತಿಕ ಉಳಿದೇ ಇಲ್ಲವೇ ?

Wednesday, March 06, 2013

ಮಾತ್ಗವಿತೆ-119

ಎದಿಯೊಳಗಿನ ಬ್ಯಾನಿ
ಕುಡುಗೋಲ ಕೋಯ್ತ ಮಾಡಿ
ನಡುಗಾಲದಲ್ಲೇ ಸುಡುವ ಬಿಸಿಲು
ಟಿಸಿಲೊಡೆದ ಮರಕೆ ತಪ್ಪಲುಗಳೇ ಇಲ್ಲ !
ಮಳೆಯಾದರೂ ಯಾವಾಗಾದಿತು ?

Sunday, March 03, 2013

ಮಾಯವಾದ ಮಂತ್ರಿಸಿದ ನಿಂಬೆ !


- ಮಿ.ವೆಂ.ಶ್ರೀನಿವಾಸ
ಸಾಯಂಕಾಲ ೬ ಗಂಟೆ ಸಮಯ. ನಾನು ಮತ್ತು ನನ್ನ ಹೆಂಡತಿ ವಾಕಿಂಗ್‌ಗೆ ಹೂರಟಿದ್ದೆವು. ದಿನವೂ ಸಂಜೆ ನಾವಿಬ್ಬರೂ ವಾಕಿಂಗ್‌ಗೆ ಹೋಗಿ ಬರುವಾಗ ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬರುವುದು ರೂಢಿ. ಸರ್ಕಲ್ ಹತ್ತಿರ ಬಂದಾಗ ರಸ್ತೆ ಬದಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಂದು ಬೋರ್ಡ್ ಕಡೆ ಗಮನ ಹರಿಯಿತು. ದಿನಾ ನೋಡುತ್ತಿದ್ದ ಬೊರ್ಡ್ ಅದು. ಅವತ್ತು ಅದರ ಕಡೆ ಗಮನ ಹರಿದು ಅಲ್ಲಿ ಓದುತ್ತಾ ನಿಂತೆ. ಅದು ಜ್ಯೋತಿಷಿಯೊಬ್ಬನ ಮನೆ ಮುಂದೆ ಇದ್ದ ಅವನ ಪ್ರಚಾರದ ಬೋರ್ಡ್. "ಶ್ರೀ ಕಾಳಿಕಾಂಬಾ ಜ್ಯೋತಿಷ್ಯಾಲಯ. ನಿಮ್ಮ ಎಲ್ಲ ಸಮಸ್ಯಗಳಿಗೆ ನಮ್ಮಿಂದ ಪರಿಹಾರ ಪಡೆಯಿರಿ. ಕೌಟುಂಬಿಕ ಸಮಸ್ಯೆ, ಪ್ರೇಮ ವ್ಯವಹಾರ, ಕೋರ್ಟ್ ಕಚೇರಿ ವ್ಯವಹಾರ, ಉದ್ಯೋಗ ಮತ್ತಿತರ ಸಮಸ್ಯೆಗಳಿಗೆ ತೃಪ್ತಿಕರ ಸಮಾಧಾನ ಕಂಡುಕೊಳ್ಳಿ. ಜ್ಯೋತಿಷಿ ಪಂ.ಶಂಕರ ಭಟ್." ನಾನು ಅದನ್ನು ಓದಿ ಸಣ್ಣಗೆ ನಗುತ್ತಾ ನನ್ನ ಶ್ರೀಮತಿಯತ್ತ ನೋಡಿದೆ. ಅವಳು "ನಡೀರಿ, ಸುಮ್ಮನೆ. ಲೇಟಾಗಿದೆ. ಏನಕ್ಕೆ ಇದು?" ಎಂದಳು. "ಸುಮ್ಮನೆ. ಏನು ಹೇಳ್ತಾನೋ, ನೋಡೋಣ." ಅಂದೆ. ಆ ದಿನಗಳಲ್ಲಿ ನನಗೆ ಜ್ಯೊತಿಷ್ಯದ ಬಗ್ಗೆ ಆಸಕ್ತಿಯುಂಟಾಗಿ, ಜ್ಯೊತಿಷ್ಯ ಕುರಿತ ಹಲವಾರು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತಿದ್ದೆ. ಕೆಲವಾರು ಸಂದೇಹಗಳು ನನ್ನನ್ನು ಕಾಡುತ್ತಿದ್ದವು. ಆದರೆ ಫಲಜ್ಯೋತಿಷ್ಯದ ಬಗ್ಗೆ ನನ್ನ ನಂಬಿಕೆ ಕುಸಿಯತೊಡಗಿತ್ತು. ಈಗೀಗ ನನಗೆ ಅದು ಒಂದು ರೀತಿಯಲ್ಲಿ ಕೆಲವರ ಉದರಂಭರಣಕ್ಕೆ ಎಂದು ಅನ್ನಿಸತೊಡಗಿತ್ತು. ನನ್ನ ಬಲವಂತದಿಂದ ನನ್ನ ಶ್ರೀಮತಿಯು ನನ್ನ ಜೊತೆ ಆ ಜ್ಯೋತಿಷ್ಯಾಲಯಕ್ಕೆ ಬಂದಳು.

ಜ್ಯೋತಿಷ್ಯಾಲಯದ ಒಳಗೆ ಪ್ರವೇಶ ಮಾಡಿದಾಗ, ಒಳಗಡೆ ಒಂದು ರೀತಿಯ ಭಯವನ್ನು ಉಂಟುಮಾಡುವ ವಾತಾವರಣ ಇದ್ದಂತೆ ಅನ್ನಿಸಿತು. ನಾವು ಒಳಗೆ ಬಂದ ಬಾಗಿಲಿನ ಎದುರಿನ ಗೋಡೆಯ ಮೇಲೆ ಶಕ್ತಿಸ್ವರೂಪಣಿ ಪಾರ್ವತಿಯ ವಿವಿಧ ಫೋಟೋಗಳು. ಕೆಲವು ಅಪರೂಪದ ಚಿತ್ರಗಳು - ಕಾಮಾಖ್ಯ, ಮಹಿಷಾಸುರಮರ್ಧಿನಿ, ಸಂತೋಷಿ ಮಾ, ಶಿವ ಪಾರ್ವತಿ, .ಕಾಳಿಕಾದೇವಿ. ಅವುಗಳಲ್ಲಿ ಕಾಳಿಕಾದೇವಿಯ ಚಿತ್ರವೇ ಎಲ್ಲಕ್ಕಿಂತ ದೊಡ್ಡದಾಗಿ ಮಧ್ಯದಲ್ಲಿ ಇತ್ತು. ಆ ಚಿತ್ರದಲ್ಲಿ ಕಾಳಿಕಾದೇವಿಗೆ ನಾಲ್ಕು ಕೈಗಳು - ಒಂದು ಎಡ ಕೈಯಲ್ಲಿ ರಾಕ್ಷಸ ಚಂಡನ ತಲೆ, ಇನ್ನೊಂದು ಎಡಗೈಯಲ್ಲಿ ಒಂದು ಪಾತ್ರೆ. ಚಂಡನ ರುಂಡದಿಂದ ಸುರಿಯುತ್ತಿರುವ ರಕ್ತ ಈ ಪಾತ್ರೆಗೆ ಬೀಳುತ್ತಿದೆ. ಬಲಗೈವೊಂದರಲ್ಲಿ ಕೊಂಕಿದ ಖಡ್ಗ, ಇನೊಂದು ಬಲಗೈಯಲ್ಲಿ ತ್ರಿಶೂಲ. ರುಂಡಗಳ ನೀಳವಾದ ಮಾಲೆಯನ್ನು ಧರಿಸಿದ್ದಾಳೆ. ಸೊಂಟದ ಸುತ್ತ ಕತ್ತರಿಸಲ್ಪಟ್ಟ ರಾಕ್ಷಸರ ಕೈಗಳಿಂದ ಮಾಡಿದ ಡಾಬು! ಅವಳ ಬಲಗಾಲು ಕೆಳಗೆ ಬಿದ್ದಿರುವ ಶಿವನ ಎದೆಯ ಮೇಲೆ. ಕೋಪದಿಂದ ಕೂಡಿದ ಮುಖ. ಅವಳು ನಾಲಿಗೆಯನ್ನು ಹೊರಚಾಚಿದ್ದಾಳೆ. ನೋಡಲು ಭಯ ಹುಟ್ಟಿಸುವಂತಿತ್ತು. ಪ್ರತಿ ಚಿತ್ರಕ್ಕೂ ಕೆಂಪು ಹೂವಿನ ಹಾರ. ದೇವಿಯ ಮುಖಕ್ಕೆ ಅರಿಸಿನ ಕುಂಕಮದ ದಪ್ಪನೆಯ ಬೊಟ್ಟುಗಳು. ಎಲ್ಲಾ ಚಿತ್ರಗಳಿಗೂ ವಿಭೂತಿಯ ಗೆರೆಗಳು. ಕೆಳಗೆ ಆ ಗೋಡೆಯ ಉದ್ದಕ್ಕೂ ಎರಡು ಅಡಿ ಅಗಲದ  ಒಂದು ವೇದಿಕೆ. ಅದರ ಮೇಲೆ ಪಾರ್ವತಿ ಮತ್ತು ಗಣೇಶನ ಪ್ರತಿಮೆಗಳಿದ್ದವು. ಅವುಗಳ ಸುತ್ತಾ ಹೂವು ಚೆಲ್ಲಿತ್ತು. ಕೆಂಪು ಬಣ್ಣದ ಹೂವುಗಳೇ ಜಾಸ್ತಿ. ಗುಲಾಬಿ, ಕನಕಾಂಬರ, ಕಣಗಲೆ, ಸೇವಂತಿ ಹೂವುಗಳೂ ಇದ್ದವು. ಪಾರ್ವತಿಯ ಪ್ರತಿಮೆಯ ಹತ್ತಿರ ಸುತ್ತಾ ಕುಂಕುಮ ಚೆಲ್ಲಿತ್ತು. ಬಹುಶಃ ಕುಂಕುಮಾರ್ಚನೆ ಮಾಡಿದ್ದಿರಬೇಕು. ಪ್ರತಿಮೆಗಳ ಎರಡೂ ಕಡೆ ದೀಪದ ಕಂಬಗಳು, ಐದು ಬತ್ತಿಯವು. ಎರಡೂ ದೀಪಗಳ ಒಂದೊಂದು ಬತ್ತಿಯನ್ನು ಹೊತ್ತಿಸಿದ್ದರು. ಎರಡೂ ಕಡೆ ದೀಪದ ಪಕ್ಕ ಸ್ಟೀಲ್ ಲೋಟದಲ್ಲಿ ಊದುಬತ್ತಿ ಹೊತ್ತಿಸಿತ್ತು. ಊದುಬತ್ತಿಯ ಹೊಗೆ ಜೋರಾಗಿಯೇ ಬರುತ್ತಿತ್ತು; ಆರತಿ ತಟ್ಟೆ, ಸಾಮ್ರಾಣಿ ತಟ್ಟೆ ಮತ್ತಿತರ ಪೂಜಾ ಸಾಮಗ್ರಿಗಳಿದ್ದವು. ವೇದಿಕೆಯ ಮುಂದೆ ನೆಲದಲ್ಲಿ ಎನಾಮಲ್ ಬಣ್ಣದಲ್ಲಿ ಕಪ್ಪು, ಬಿಳಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಬಳಸಿ ಬರೆದ ಕಾಳಿಯಂತ್ರದ ಚಿತ್ತಾರವಿತ್ತು. ಇದರ ಮಧ್ಯೆ ಒಂದು ಕಳಶ. ಒಳಗೆ ಮಾವಿನ ಸೊಪ್ಪಿನ ಒಂದು ಸಣ್ಣ ಗೊಂಚಲು. ಕಳಶಕ್ಕೆ ಅರಿಸಿನ ಕುಂಕುಮಗಳಿಂದ ಪೂಜಿಸಿದ್ದರು.

ರಸ್ತೆ ಕಡೆಗಿದ್ದ ಗೋಡೆಯ ಮೂಲೆಗೆ ಗೋಡೆಗೆ ಲಗತ್ತಿಸಿದಂತೆ ಒಂದು ಮೇಜು. ಮೇಜಿನ ಒಂದು ಕಡೆ ಜ್ಯೋತಿಷಿಗೆ ಒಂದು ಕುರ್ಚಿ. ಇದರಲ್ಲಿ ಕುಳಿತ ಜ್ಯೋತಿಷಿಗೆ ಎದುರಿನ ರಸ್ತೆ ಕಾಣುವಂತಿತ್ತು. ಮೇಜಿನ ಮೇಲೆ ಒಂದಷ್ಟು ಕವಡೆಗಳು. ಒಂದು ಹಲಗೆ, ಕೆಲವು ಬಳಪಗಳು ಸಹ ಇದ್ದವು. ಹಾಗೂ ಕೆಲವು ಪುಸ್ತಕಗಳಿದ್ದವು. ಬಹುಶಃ ಜ್ಯೋತಿಷ್ಯ ಮತ್ತು ದೇವರ ಕುರಿತ ಪುಸ್ತಕಗಳಿದ್ದಿರಬಹುದು. ಎದುರು ಬದಿಯಲ್ಲಿ ನಾಲ್ಕು ಕುರ್ಚಿಗಳು. ಈ ನಾಲ್ಕು ಕುರ್ಚಿಗಳು ರಸ್ತೆ ಬದಿಯ ಗೋಡೆಗೆ ಹತ್ತಿಕೊಂಡಂತೆ ಇದ್ದವು. ನಾವು ಒಳ ಬಂದ ಬಾಗಿಲನ್ನು ಬಿಟ್ಟು ಉಳಿದ ಜಾಗವನ್ನು ಪೂರ್ತಿ ಅಕ್ರಮಿಸಿಕೊಂಡಿದ್ದವು. ಈ ಕುರ್ಚಿಗಳು ಬಂದವರು ಕುಳಿತುಕೊಳ್ಳಲು. ಈ ಕುರ್ಚಿಗಳಲ್ಲಿ ಕುಳಿತವರಿಗೆ ಫೋಟಗಳಿದ್ದ ಗೋಡೆ ಎದುರಿಗೆ ಕಾಣುತ್ತಿತ್ತು. ಪೂಜೆಗೆ ಇಟ್ಟಿದ್ದ ವಿಗ್ರಹಗಳು, ಕಳಶ, ಕಾಳಿಯಂತ್ರ ಎಲ್ಲಾ ಕಾಣುತ್ತಿದ್ದವು !

ರಸ್ತೆಗೆ ಮುಖಮಾಡಿದ ಕುರ್ಚಿಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಅವನ ತೋಳುಗಳು, ಹೊಟ್ಟೆ ಮತ್ತು ಹಣೆಯ ಮೇಲೆಲ್ಲಾ ವಿಭೂತಿಯ ಪಟ್ಟೆಗಳಿದ್ದವು. ಹಣೆಯ ಮಧ್ಯೆ ಒಂದು ದೊಡ್ಡ ಕೆಂಪು ಕುಂಕುಮದ ಬೊಟ್ಟಿತ್ತು. ಎರಡೂ ಕೈಗಳ ನಾಲ್ಕೂ ಬೆರಳುಗಳಿಗೂ ಉಂಗುರಗಳು. ವಿವಿಧ ಹರಳುಗಳಿದ್ದ ಎಂಟು ಉಂಗುರಗಳು. ಬಲಗೈಗೆ ಒಂದು ಚಿನ್ನದ ಕಡಗ. ಕುತ್ತಿಗೆಯಲ್ಲಿ ಎರಡು ದಪ್ಪ ಚೈನ್ ಸರಗಳು. ಈತನೇ ಹೊರಗೆ ಇದ್ದ ಬೋರ್ಡಿನಲ್ಲಿ ಹೇಳಿರುವ ಜ್ಯೋತಿಷಿ ಪಂ. ಶಂಕರ ಭಟ್ ಇರಬೇಕು ಅನ್ನಿಸಿತು. ಶ್ರೀಮಂತ ಜ್ಯೋತಿಷಿ ಎನ್ನಿಸಿತು. ವ್ಯಾಪಾರ ಚೆನ್ನಾಗಿರಬಹುದು ಎನ್ನಿಸಿತು. ನಾವು ಆತನಿಗೆ ನಮಸ್ಕರಿಸಿದೆವು. ಆತ ಮರುನಮಸ್ಕಾರ ಮಾಡಿ, "ಬನ್ನಿ. ಕುಳಿತುಕೊಳ್ಳಿ" ಎಂದು ತನ್ನ ಎದುರಿಗೆ ಇದ್ದ ಕುರ್ಚಿಗಳತ್ತ ಕೈ ತೋರಿಸಿದ. ನಾವು ಕುಳಿತ ನಂತರ ಅವನು "ಏನು ವಿಷಯ? ನಿಮ್ಮ ಸಮಸ್ಯೆ ಏನು?" ಎಂದು ಕೇಳಿದ. ನಾನು ಗೋಡೆಯ ಮೇಲಿದ್ದ ಫೋಟೋಗಳನ್ನು ಮತ್ತೊಮ್ಮೆ ನಿಧಾನವಾಗಿ ನೋಡಿ ನಂತರ ಆತನತ್ತ ತಿರುಗಿ "ನಿಮ್ಮ ಸಲಹೆ ಬೇಕಾಗಿತ್ತು. ನನ್ನ ಒಂದು ಕೆಲಸ ಆಗಬೇಕಿದೆ. ಅದು ಆಗುವುದೋ ಇಲ್ಲವೋ ಎಂದು ಚಿಂತೆ. ಅದಕ್ಕೆ ನಿಮ್ಮ ಸಲಹೆ ಪಡೆಯೋಣ ಅಂತ ಬಂದೆ" ಎಂದೆ. "ಏನು ನಿಮ್ಮ ಸಮಸ್ಯೆ ಹೇಳಿ", ಎಂದು ಆತ ಕೇಳಿದ. "ಅದು" ಎಂದು ಹೇಳಲು ಅನುಮಾನಿಸುವಂತೆ ಮಾಡಿದೆ. "ಹೇಳಿ ಏನು ಸಮಸ್ಯೆ? ಯಾವ ಸಂಕೋಚವೂ ಬೇಡ. ಇಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುತ್ತೇವೆ" ಅಂತ ಆಶ್ವಾಸನೆ ಕೊಟ್ಟ. ಆಗ ನಾನು "ಕೊರ್ಟ್‌ನಲ್ಲಿ ಒಂದು ಕೇಸಿದೆ. ಬಿಸಿನೆಸ್ ವಿಚಾರವಾಗಿ. ನನ್ನ ಪರವಾಗಿ ಆಗುತ್ತೋ ಇಲ್ಲವೋ ಅಂತ" ಎಂದು ಹೇಳಿದೆ. ನಾನು ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದ ಆತ ಪೂಜಾಸ್ಥಳದಲ್ಲಿದ್ದ ಒಂದು ನಿಂಬೆಹಣ್ಣನ್ನು ಎತ್ತಿಕೊಂಡು ಬಂದು ಮೇಜಿನ ಮೇಲಿಟ್ಟ. ಮೇಜಿನ ಡ್ರಾಯರ್ ತೆಗೆದು ಒಳಗಿನಿಂದ ಹಸಿದಾರದ ಉಂಡೆ ತೆಗೆದುಕೊಂಡ. ಹಸಿದಾರವು ಅರಿಸಿದ ನೀರಿನಲ್ಲಿ ಅದ್ದಿ ಅದ್ದಿ ತೆಗೆದ ಹಾಗೆ ಹಳದಿ ಬಣ್ಣವಾಗಿತ್ತು. ಆ ಅರಿಸಿನ ಬಣ್ಣದ ದಾರವನ್ನು ನಿಂಬೆಹಣ್ಣಿನ ಮೇಲೆಲ್ಲಾ ಸುತ್ತತೊಡಗಿದ. "ಸಾಕಷ್ಟು ಹಣ ಬರಬಹುದು ಅಂತ ಕಾಣುತ್ತೆ." ಅಂತ ಆತ ಕೇಳಿದ. "ಹೌದು, ಹತ್ತು ಲಕ್ಷದ ವ್ಯವಹಾರ" ಎಂದು ನಾನು ಹೇಳಿದೆ. "ಯಾವಾಗಿನಿಂದ ಈ ಕೇಸ್ ಕೋರ್ಟಿನಲ್ಲಿದೆ?" ಎಂದು ಕೇಳುತ್ತಾ ನಿಂಬೆ ಹಣ್ಣಿನ ಮೇಲೆಲ್ಲಾ ಅರಿಸಿದ ದಾರ ಸುತ್ತುವ ಕೆಲಸ ಮುಂದುವರೆಸಿದ್ದ. ದಾರ ಸುತ್ತುವ ದಿಕ್ಕನ್ನು ಅಗಾಗ ಬದಲಿಸುತ್ತ ನಿಂಬೆ ಹಣ್ಣು ಮೇಲೆ ಪೂರ್ತಿ ದಾರ ಬರುವಂತೆ ದಾರ ಸುತ್ತುತ್ತಾ ಮಾತನಾಡುತಿದ್ದ. "ಸುಮಾರು ಹತ್ತು ವರ್ಷಗಳಿಂದ" ಎಂದೆ. "ಊಂ.." ಎನ್ನುತ್ತಾ ಇದ್ದ ಆತ ದಾರ ಸುತ್ತಿದ ಕೆಲಸ ಮುಗಿಸಿ ನಿಂಬೆ ಹಣ್ಣನ್ನು ಮೇಜಿನ ಮೇಲೆ ತನ್ನ ಹತ್ತಿರ ಇರಿಸಿಕೊಂಡ. "ಯಾರಿಂದ ಹಣ ಬರಬೇಕಿದೆ?" ಎಂದ. "ಅದು ಬೇಡ. ನಿಮಗೆ ನನ್ನ ಸಮಸ್ಯೆ ಬಗೆ ಹರಿಸಲು ಸಾಧ್ಯವೋ ಇಲ್ಲವೋ ತಿಳಿಸಿ" ಎಂದೆ. "ಆಯ್ತು. ಸಮಸ್ಯೆ ಪರಿಹರಿಸೋಣ." ಎಂದು ಹೇಳುತ್ತಾ ದಾರ ಸುತ್ತಿದ ಆ ನಿಂಬೆ ಹಣ್ಣನು ಮೇಜಿನ ಡ್ರಾಯರ್ ಒಳಗೆ ಇಟ್ಟ, ನಂತರ ಮೇಜಿನ ಮೇಲಿದ್ದ ಪಂಚಾಗ ತೆಗೆದುಕೊಂಡ. ನಿಮ್ಮ ಹುಟ್ಟಿದ್ದ ದಿನ, ಜಾಗ, ಸಮಯ ಹೇಳ್ತೀರಾ?" ಎಂದ. ನಾನು "ತಗೊಳ್ಳಿ ನನ್ನ ಜಾತಕ ಇಲ್ಲಿದೆ." ಎಂದು ಹೇಳಿ ನನ್ನ ಜೋಬಿನಿಂದ ಜಾತಕ ತೆಗೆದುಕೊಟ್ಟೆ. "ಜಾತಕ ಇರೋದು ಬಹಳ ಅನುಕೂಲ ಆಯ್ತು." ಎನ್ನುತ್ತಾ ಜಾತಕವನ್ನು ಪರಿಶೀಲಿಸತೊಡಗಿದ. ಸ್ವಲ್ಪ ಸಮಯ ಜಾತಕ ನೋಡಿ ನಂತರ ಪಂಚಾಗ ತೆಗೆದುಕೊಂಡು ಅವತ್ತಿನ ಪುಟ ತೆಗೆದು ನೋಡಿದ. "ಗೋಚಾರದಲ್ಲಿ ಅಶುಭ ಗ್ರಹಗಳಿಂದ ನಿಮಗೆ ತೊಂದರೆ ಇದೆ. ಈಗ ಒಂದು ನಿಂಬೆ ಹಣ್ಣನ್ನು ಮಂತ್ರಿಸಿ ಕೊಡುತ್ತೇನೆ. ನಾನೀಗ ಹೇಳುವ ಹಾಗೆ ಮಾಡಿ. ಈಗ ನೇರವಾಗಿ ಮನೆಗೆ ಹೋಗಿ, ಕೈಕಾಲು ಮುಖ ತೊಳೆದುಕೊಂಡು ಪೂಜಾರೂಂನಲ್ಲಿ ಒಂದು ಕಳಶವನ್ನಿಟ್ಟು ಅದಕ್ಕೆ ನೀರನ್ನು ತುಂಬಿ. ಅದರ ಒಳಗೆ ನಾನು ಮಂತ್ರಿಸಿ ಕೊಡುವ ನಿಂಬೆ ಹಣ್ಣನ್ನು ಮುಳುಗಿಸಿ. ಅರಿಸಿ, ಕುಂಕುಮ ಮತ್ತು ಹೂವುಗಳಿಂದ ಕಳಶದ ನೀರನ್ನು ಪೂಜಿಸಿ. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿ. ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆ ಎಲ್ಲಾ ಮುಗಿದ ಮೇಲೆ ಪೂಜಾರೂಂಗೆ ಬೀಗವನ್ನು ಹಾಕಿ. ನಾಳೆ ಸಂಜೆ ಇಲ್ಲಿಗೆ ಬರುವ ಒಂದು ಗಂಟೆ ಮೊದಲು ಪೂಜಾರೂಂ ಬೀಗ ತೆಗೆದು ಬಾಗಿಲು ತೆಗೆಯಿರಿ. ಕಳಶದ ಪೂಜೆಯನ್ನು ಮಾಡಿ, ನಂತರ ನಿಮ್ಮ ಮನೆದೇವರ ಪೂಜೆಯನ್ನೂ ಮಾಡಿ. ಪೂಜೆಯಾದ ಮೇಲೆ ಕಳಶದಲ್ಲಿಟ್ಟಿದ್ದ ನಿಂಬೆಯ ಹಣ್ಣನ್ನು ಹೊರ ತೆಗೆದು ಚೆನ್ನಾಗಿ ಒರೆಸಿ ಶುಭ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಮಡಿಯಿಂದ ಇಲ್ಲಿಗೆ ತೆಗೆದುಕೊಂಡು ಬನ್ನಿ. ನೀವು ತರುವ ನಿಂಬೆ ಹಣ್ಣನ್ನಿಟ್ಟು ನಾನು ದೇವಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತೇನೆ. ದೇವಿ ಏನು ಸೂಚಿಸುವಳೋ ನೋಡೋಣ. ಎಲ್ಲೂ ನೂ ಲೋಪವಾಗದಂತೆ ಎಚ್ಚರವಹಿಸಿ" ಎಂದ. "ಆಗಬಹುದು" ಎಂದೆ. ಜ್ಯೋತಿಷಿ ಮೇಜಿನ ಡ್ರಾಯರ್ ಹೊರಕ್ಕೆಳೆದು ಹಳದಿಯ ಹಸಿದಾರ ಸುತ್ತಿದ್ದ ನಿಂಬೆ ಹಣ್ಣನ್ನು ತೆಗೆದುಕೊಂಡು ಪೂಜೆಯ ಸ್ಥಳಕ್ಕೆ ಹೋಗಿ ಅರಿಸಿ ಕುಂಕುಮ ಸ್ವಲ್ಪ ಸಿಂಪಡಿಸಿ ಊದುಬತ್ತಿಯ ಹೊಗೆಯಲ್ಲಿ ಕ್ಷಣ ಹೊತ್ತು ಹಿಡಿದ. ಪಾರ್ವತಿಯ ಪ್ರತಿಮೆಗೆ ಮತ್ತು ಕಾಳಿಕಾದೇವಿಯ ಫೋಟೋಗೆ ತೋರಿಸಿ ನಂತರ ನಿಂಬೆಯ ಹಣ್ಣನ್ನು ಮುಷ್ಠಿಯಲ್ಲಿ ಹಿಡಿದು ಮೂಗಿನ ಮೇಲೆ, ಹುಬ್ಬಿನ ಮಧ್ಯ ಒತ್ತಿಕೊಂಡು ಕಣ್ಣು ಮುಚ್ಚಿ ಯಾವುದೋ ಮಂತ್ರವನ್ನು ಹೇಳಿಕೊಂಡ. ನಂತರ ಮಂತ್ರಿಸಿದ ಆ ನಿಂಬೆ ಹಣ್ಣನ್ನು ನನ್ನ ಬಲಗೈಗೆ ಕೊಟ್ಟ. "ಈಗ ನೂರು ರೂಪಾಯಿ ದಕ್ಷಿಣೆ ಕೊಡಿ. ನಾಳೆ ದೇವಿಯ ಸೂಚನೆ ನೋಡಿ ಖರ್ಚು ಎಷ್ತಾಗುತ್ತೆ ಅಂತ ಗೊತ್ತಾಗುತ್ತೆ" ಎಂದು ಹೇಳಿದ. "ಸರಿ ಆಗಲಿ" ಎಂದು ಹೇಳಿ ಅವನಿಗೆ ನೂರು ರೂಪಾಯಿ ದಕ್ಷಿಣೆ ಕೊಟ್ಟೆ. ನಾನು ಮತ್ತು ನನ್ನ ಹೆಂಡತಿ ಮನೆಯ ಕಡೆಗೆ ಹೊರೆಟೆವು.

ಮನೆಗೆ ಹೋಗುತ್ತಾ ನನ್ನ ಹೆಂಡತಿ ಕೇಳಿದಳು, "ಯಾವುದ್ ರೀ, ಕೇಸು; ನನಗೆ ಗೊತ್ತಿಲ್ಲದ್ದು?" "ಯಾವ್ ಕೇಸೂ ಇಲ್ಲ. ಸುಮ್ನೆ ಹೇಳ್ದೆ." ಎಂದು ನಾನಂದೆ. "ನೀವ್ ಒಬ್ಬರು. ಮಂತ್ರಿಸಿದ ನಿಂಬೆಹಣ್ಣು ಬೇರೆ ಕೊಟ್ಟಿದಾನೆ." ಎಂದಳು ನನ್ನ ಶ್ರೀಮತಿ. "ಏನ್ ಮಾಡ್ ಬೇಕ್ ಅಂತ ಹೇಳಿದಾನಲ್ಲ. ನಿಂಗೆ ಇಷ್ಟ ಇದ್ರೆ ಮಾಡು." ಎಂದೆ. ನನ್ನ ಶ್ರೀಮತಿಗೆ ಪೂಜೆ ಪುನಸ್ಕಾರಗಳಲ್ಲಿ ಬಹಳ ಶ್ರದ್ಧೆ. ಮನೆಗೆ ಹೋದ ಮೇಲೆ, ಅವಳು ಸ್ನಾನ ಮಾಡಿ ಬಂದು ಕಳಶವನ್ನಿಟ್ಟು, ಅದರಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿದಳು. ಕಳಶದ ನೀರಿಗೆ ಅರಿಸಿ ಕುಂಕುಮ ಹಾಕಿದಳು. ಹೂವನ್ನೂ ಹಾಕಿದಳು. ಊದುಬತ್ತಿ ಮತ್ತು ಕರ್ಪೂರದಾರತಿಯಿಂದ ಪೂಜೆ ಮಾಡಿದಳು. ಆ ಜ್ಯೋತಿಷಿ ಹೇಳಿದ ಹಾಗೆ ಪೂಜೆಯನ್ನು ಮಾಡಿದ ನಂತರ ಪೂಜಾರೂಂನ ಬಾಗಿಲಿಗೆ ಬೀಗ ಹಾಕಿದಳು. ಮಾರನೆಯ ದಿನ ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ಮಲಗಿದ್ದೆ. ನನ್ನ ಶ್ರೀಮತಿ "ಏನ್ ರೀ, ಬನ್ನಿ ಇಲ್ಲಿ ಬೇಗ" ಎಂದು ಜೋರಾಗಿ ಕರೆದಳು. ಧ್ವನಿಯಲ್ಲಿ ಭಯವಿದ್ದಂತೆ ಅನ್ನಿಸಿತು. "ಏನು? ಬಂದೆ" ಅನ್ನುತ್ತಾ ನಾನು ಬೆಡ್‌ರೂಂನಿಂದ ಬಂದೆ. ನನ್ನ ಹೆಂಡತಿ ಪೂಜಾರೂಂನಲ್ಲಿದ್ದಳು. "ಏನಾಯಿತು?" ಎಂದೆ. "ನೋಡೀಂದ್ರೆ,. ಮಂತ್ರಿಸಿದ ನಿಂಬೆ ಹಣ್ಣು ಇಲ್ಲ. ಮಾಯವಾಗಿದೆ." ಎಂದಳು. ಅವಳ ಕೈಯಲ್ಲಿ ಅರಿಸಿದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್ಲಿತ್ತು. ಅವಳ ಕೈ ಅರಿಸಿ ಕುಂಕುಮದ ಓಕಳಿ ನೀರಿನಲ್ಲಿ ಅದ್ದಿದಂತಿತ್ತು. ಆಗ ನನಗರ್ಥವಾಯಿತು: ಅವಳು ಆ ಜ್ಯೋತಿಷಿ ಹೇಳಿದಂತೆ ಪೂಜಾರೂಂನ್ ಬಾಗಿಲು ತೆಗೆದು ಕಳಶಕ್ಕೆ ಪೂಜೆ ಮಾಡಿದ್ದಾಳೆ. ಕೆಂಪು ಬಟ್ಟೆಯೊಂದನ್ನು ಸಿದ್ಧವಾಗಿಟ್ಟುಕೊಂಡು ಕಳಶದ ನೀರಿನಿಂದ ಮಂತ್ರಿಸಿದ ನಿಂಬೆ ಹಣ್ಣನ್ನು ಹೊರಗೆ ತೆಗೆಯಲು ಹೋಗಿದ್ದಾಳೆ. ಅಲ್ಲಿ ಮಂತ್ರಿಸಿದ ನಿಂಬೆಹಣ್ಣು ಇಲ್ಲ! ಕೇವಲ ಅದರ ಮೇಲೆ ಸುತ್ತಿದ್ದ ದಾರದ ಗೋಜಲು ಮಾತ್ರ ಅವಳ ಕೈಯಲ್ಲಿದೆ. "ಅಷ್ಟೇ ತಾನೆ. ಬಿಡು." ಎಂದು ನಾನೆಂದಾಗ ಅವಳು "ಏನು, ಅಷ್ಟೇ ತಾನೆ?! ಒಳ್ಳೇ ಫಜೀತಿ ತಂದಿಟ್ರಿ. ಏನೋ ಮಾಟ ಮಾಡಿದ್ದಾನೆ? ಗ್ರಹಚಾರ. ಏನಾಗುತ್ತೋ ? ಬನ್ನಿ ಅವನ ಹತ್ತಿರ ಹೋಗೋಣ" ಎಂದಳು. "ಏನೂ ಬೇಡ. ಏನಾಗಿದೆ ಅಂತ ಯೋಚಿಸೋಣ", ಎಂದು ನಾನಂದೆ. ನನ್ನ ಹೆಂಡತಿ ಮಾತ್ರ ಬೇಜಾರು ಮತ್ತು ಆತಂಕದಿಂದ ಚಡಪಡಿಸುತ್ತಿದ್ದಳು.

ಮಾರನೆಯ ದಿನ ಬೆಳಿಗ್ಗೆ ನನ್ನ ಶ್ರೀಮತಿ ತನ್ನ ವಾರಗಿತ್ತಿ ಅಂದರೆ ನನ್ನ ತಮ್ಮನ ಹೆಂಡತಿಯ ಹತ್ತಿರ ಆ ಜ್ಯೋತಿಷಿಯ ಬಗ್ಗೆ ವಿಚಾರಿಸುತ್ತಿದ್ದಳು. ನನ್ನ ತಮ್ಮನಿಗೆ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳುವ ಚಟ. ನನ್ನ ನಾದಿನಿ ಹೇಳಿದಳು "ಓ, ಹೌದಾ? ಆ ಜ್ಯೋತಿಷೀನೇ ಇವರ ಕೊಲೀಗ್ ಒಬ್ಬರಿಗೆ ಹೀಗೇ ಮಾಡಿದ್ದನಂತೆ..." ಅವರು ಅವನ ಹತ್ತಿರ ಜ್ಯೋತಿಷ್ಯ ಕೇಳಲು ಹೋಗಿದ್ದಾಗ ಇದೇ ರೀತಿ ನಿಂಬೇ ಹಣ್ಣನ್ನು ಮಂತ್ರಿಸಿ ಕೊಟ್ಟಿದ್ದನಂತೆ. ನಿಂಬೇಹಣ್ಣು ಮಾಯವಾದಾಗ ಅವರು ಹೆದರಿ ಅವನ ಹತ್ತಿರ ಹೋದಾಗ ಅವನು "ಏನೋ ಅಪಚಾರವಾಗಿದೆ. ದೇವಿ ನಿಮ್ಮ ಮೇಲೆ ಮುನಿಸಿಕೊಂಡಿದ್ದಾಳೆ. ನಿಮಗೆ ಕಷ್ಟ ಕಾದಿದೆ." ಎಂದೆಲ್ಲಾ ಹೆದರಿಸಿದನಂತೆ. ಆಗಲಂತೂ ಅವರಿಗೆ ತುಂಬಾ ಭಯವಾಯಿತಂತೆ. "ಈಗ ಏನು ಮಾಡೋದು?" ಎಂದು ಅವನನ್ನು ಕೇಳಿದರಂತೆ. ದೇವಿಯನ್ನು ಶಾಂತಗೊಳಿಸಲು ಯಾವುದೋ ಹೋಮ, ಪೂಜೆ ಮಾಡಬೇಕು ಎಂದೆಲ್ಲಾ ಹೇಳಿ ಸುಮಾರು ಎಂಟು ಹತ್ತು ಸಾವಿರ ಖರ್ಚು ಮಾಡಿಸಿದನಂತೆ. "ಅದೇ, ನಮ್ಮ ಅಪಾರ್ಟ್‌ಮೆಂಟ್ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರಲ್ಲಾ ರವಿ, ಅವರಿಗೂ ಹೀಗೆ ಮಾಡಿದ್ದು ಅವನು" ಎಂದು ಹೇಳಿದಳು ನನ್ನ ನಾದಿನಿ. ನನ್ನ ತಮ್ಮ, ಅವನ ಹೆಂಡತಿ ಮತ್ತು ಮಗ ಮನೆಗೆ ಬಂದಿದ್ದರು. ಸಂಕ್ರಾಂತಿ ಹಬ್ಬಕ್ಕೆ ಇಬ್ಬರೂ ಸೇರಿ ಸಕ್ಕರೆ ಅಚ್ಚು ಮಾಡಿಕ್ಕೊಳ್ಳುತ್ತಿದ್ದರು. ಹಾಲ್‌ನಲ್ಲಿ ಕುಳಿತಿದ್ದ ನನಗೆ ನನ್ನ ಶ್ರೀಮತಿ ಮತ್ತು ನನ್ನ  ನಾದಿನಿ ಮಾತನಾಡುವುದು ಕೇಳಿಸುತ್ತಿತ್ತು. "ಏನೋ ಅದು ಕೃಷ್ಣ?" ಅಂತ ನನ್ನ ಪಕ್ಕದಲಲ್ಲಿ ಕುಳಿತಿದ್ದ ನನ್ನ ತಮ್ಮನನ್ನು ಕೇಳಿದೆ. "ರವಿ ಅವರಿಗೆ ಸುಮ್ಮನೆ ಖರ್ಚು ಮಾಡಿಸಿದ ಆ ಢೋಂಗಿ ಜ್ಯೋತಿಷಿ. ರವಿ ಅವನ್ ಹತ್ತಿರ ಯಾವ ಪ್ರಶ್ನೆ ಕೇಳಿದ್ದರೋ ಅದಕ್ಕೆ ಅವನಿಂದ ಪರಿಹಾರನೂ ಸಿಗಲಿಲ್ಲ.", ಎಂದು ಹೇಳಿದ ನನ್ನ ತಮ್ಮ. "ಭವಿಷ್ಯ ಕೇಳೋಕೇ ಹೋಗಬಾರದು", ಎಂದು ನಾನು ಹೇಳಿದೆ. ಇದನ್ನು ಕೇಳಿಸಿಕೊಂಡ ನನ್ನ ಶ್ರೀಮತಿ ಅಡುಗೆಮನೆಯಿಂದ ಹಾಲ್‍ಗೆ ಬಂದು "ಆಹಾ, ಏನ್ ಮಾತಾಡ್ತೀರಿ? ನಿನ್ನೆ ನೀವು ಏಕೆ ಹೋಗಿದ್ದು?" ಎಂದು ನನ್ನನ್ನು ಮೂದಲಿಸಿದಳು. "ನಾನೇನೂ ಯಾವುದೇ ಪರಿಹಾರಕ್ಕೆ ಅವನ ಹತ್ತಿರ ಹೋಗಿರಲ್ಲಿಲ್ಲ. ಸುಮ್ಮನೆ ಕುತೂಹಲಕ್ಕೆ. ಅದು ನಿನಗೂ ಗೊತ್ತು." ಎಂದೆ. "ಏನೋ? ಈಗ ನೋಡಿ ಏನಾಗಿದೆ?" ಎಂದು ಕೇಳಿದಳು ನನ್ನ ಶ್ರೀಮತಿ.

ಅಷ್ಟರಲ್ಲಿ ನನ್ನ ತಮ್ಮನ ಮಗ ಮೂರು ವರ್ಷದ ಅಭಿಷೇಕ್ ಅಳುತ್ತಾ ಅವನ ಅಮ್ಮನ ಹತ್ತಿರ ಬಂದ. "ಏನಾಯಿತೋ?" ಎಂದು ಅವನನ್ನು ನನ್ನ ನಾದಿನಿ ಕೇಳಿದಳು. "ಅಮ್ಮ ನೀನು ಕೊಟ್ಟ ಆನೆ ನೀರಲ್ಲಿ ಬಿದ್ ಹೋಯ್ತು. ತೆಕ್ಕೊಡು ಬಾ." ಅಂದ. ಆನೆ ಆಕಾರದ ಸಕ್ಕರೆ ಅಚ್ಚು ಡೈನಿಂಗ್ ಟೇಬಲ್ ಮೇಲಿದ್ದ ನೀರಿನ ಮಗ್‌ನಲ್ಲಿ ಬಿದ್ದುಬಿಟ್ಟಿತ್ತು. "ಇರು ಒಂದ್ ನಿಮಿಷ. ಪಾಕ ಆರಿ ಹೋಗುತ್ತೆ. ಅಚ್ಚಲ್ಲಿ ಹಾಕಿ ಬಂದು ತೆಕೋಡ್ತೀನಿ" ಎಂದು ಅಡಿಗೆ ಮನೆಗೆ ಹೋದಳು ನನ್ನ ನಾದಿನಿ ತನ್ನ ಅತ್ತಿಗೆ ಜೊತೆ. ಸ್ವಲ್ಪ ಸಮಯದ ನಂತರ ಬಂದು ನೀರಿನಲ್ಲಿ ಬಿದ್ದಿದ್ದ ಸಕ್ಕರೆ ಅಚ್ಚನ್ನು ತೆಗೆದು ಮಗನಿಗೆ ಕೊಟ್ಟಳು. ಅವನು ಅಳಲು ಶುರು ಮಾಡಿದ. "ಏನೋ ಯ್ತು?" ಎಂದು ನಾನು ಅವನನ್ನು ಕೇಳಿದೆ. ಅವನು ಅಳುತ್ತಾ "ನೋಡಿ ದೊಡ್ಡಪ್ಪ, ಆನೆ ಕಾಲು ಇಲ್ವೇ ಇಲ್ಲ." ಎಂದ. "ಎಲ್ಲಿ ಕೊಡು ಇಲ್ಲಿ" ಎಂದು ಅವನ ಹತ್ತಿರ ಇದ್ದ ಸಕ್ಕರೆ ಅಚ್ಚನ್ನು ಇಸಕೊಂಡೆ. ನೋಡಿದರೆ ಸಕ್ಕರೆ ಅಚ್ಚು ನೀರಿನಲ್ಲಿ ಐದು ಹತ್ತು ನಿಮಿಷ ಮುಳುಗಿದ್ದರಿಂದ ಸ್ವಲ್ಪ ಕರಗಿತ್ತು. ಆನೆಯ ಕಾಲುಗಳು, ಸೊಂಡಿಲು ಹಾಗೂ ಸುತ್ತಾ ಅಂಚೆಲ್ಲಾ ನೀರಿನಲ್ಲಿ ಕರಗಿದ್ದವು. ಆ ಸಕ್ಕರೆ ಅಚ್ಚನ್ನು ನೋಡುತ್ತಿದ್ದಂತೆ ನನಗೆ ಹೊಳೆಯಿತು ಆ ಜ್ಯೋತಿಷಿ ಏನು ಮಾಡಿದ್ದಾನೆ ಎಂದು. "ಲೇ ಪದ್ಮ, ಬಾರೇ ಇಲ್ಲಿ. ನೀನೂ ಬಾಮ್ಮ ಲಕ್ಷ್ಮಿ" ಎಂದು ಅಡಿಗೆ ಮನೆಯಲ್ಲಿದ್ದ ನನ್ನ ಹೆಂಡತಿ ಮತ್ತು ನನ್ನ ತಮ್ಮನ ಹೆಂಡತಿ ಇಬ್ಬರನ್ನೂ ಕರೆದೆ. ಅವರಿಬ್ಬರೂ ಹಾಲ್‌ಗೆ ಬಂದು ದೀವಾನ ಮೇಲೆ ಕುಳಿತುಕೊಳ್ಳೂತ್ತಾ "ಏನು?" ಎಂದರು. "ಆ ಜ್ಯೋತಿಷಿ ಏನ್ ಟ್ರಿಕ್ ಮಾಡ್ತಿದ್ದಾನೆ ಅಂತ ಗೊತ್ತಾಗಿ ಹೋಯಿತು." ಎಂದೆ. "ಇಲ್ಲಿ ನೋಡಿ ಸಕ್ಕರೆ ಅಚ್ಚು ಐದ್ ಹತ್ ನಿಮಿಷ ನೀರಲ್ಲಿ ಇದ್ದಿದ್ದಕ್ಕೆ ಎಷ್ಟ್ ಕರಗಿ ಹೋಗಿದೆ. ಅವನು ನಮಗೆ ನಿಂಬೆ ಹಣ್ಣಿನಂತೆ ಗುಂಡಗಿದ್ದ ಸಕ್ಕರೆ ಅಥವಾ ಬತ್ತಾಸು ಉಂಡೆಗೆ ದಾರ ಸುತ್ತಿ ಕೊಟ್ಟಿದ್ದ. ಅದಕ್ಕೇ ಅದು ನೀರಿನಲ್ಲಿ ರಾತ್ರಿಯೆಲ್ಲಾ ಇಟ್ಟಿದ್ದರಿಂದ ಕರಗಿ ಹೋಗಿದೆ. ಅಷ್ಟೇ." ಎಂದೆ. "ಅದು ಹೇಗ್ರೀ? ನಮ್ಮ ಎದುರಿನಲ್ಲೇ ನಿಂಬೇ ಹಣ್ಣಿಗೇ ದಾರ ಸುತ್ತುತ್ತಿದ್ನಲ್ಲಾ" ಎಂದಳು ನನ್ನ ಶ್ರೀಮತಿ. "ನೆನಪಿಸ್ಕೋ. ನಿನ್ನೆ ಅವನು ಏನ್ ಮಾಡ್ದ. ನಿಂಬೆಹಣ್ಣಿಗೆ ನಮ್ಮ ಎದುರಿನಲ್ಲೇ ದಾರ ಏನೋ ಸುತ್ತಿದ. ಆ ನಿಂಬೇ ಹಣ್ಣನ್ನ ಮೇಜಿನ ಮೇಲೆ ಇಟ್ಟಿದ್ದ. ಅದು ಸರಿ. ಆದರೆ ಪಂಚಾಂಗ ತೆಗೆಯೋದಿಕ್ಕೆ ಮೇಜಿನ ಮೇಲೆ ಜಾಗ ಬೇಕೂಂತ ನಿಂಬೆಹಣ್ಣು ಮೇಜಿನ ಡ್ರಾಯರ್ ಒಳಗೆ ಇಟ್ಟ ಅಲ್ವ? ನೆನಪಿಸ್ಕೋ?" ಎಂದು ನಾನು ಹೇಳಿದಾಗ "ಹೌದು." ಎಂದಳು ನನ್ನ ಶ್ರೀಮತಿ. "ಕೊನೇಲ್ಲಿ ಕೊಡುವಾಗ ಮೇಜಿನ ಡ್ರಾಯರ್ ಇಂದ ತೆಗೆದು ಕೊಟ್ಟಿದ್ದು ಆ ನಿಂಬೇ ಹಣ್ಣಲ್ಲ. ಅವನು ಮೊದಲೇ ಮಾಡಿಟ್ಟಿದ್ದ ಸಕ್ಕರೆ ಉಂಡೆ! ಅಲ್ಲೇ ಅವನು ಕರಾಮತ್ತು ಮಾಡಿದ್ದು. ನಿಂಬೆ ಹಣ್ಣನ್ನ ಹಾಗೇ ಕೊಡಬಹುದಿತ್ತು. ದಾರದಲ್ಲಿ ಸುತ್ತಿಕೊಟ್ಟಿದೇಕೆ ? ಮೋಸಮಾಡುವ ಉದ್ದೇಶವಿಲ್ಲದಿದ್ದರೆ ನಿಂಬೇಹಣ್ಣನ್ನು ಹಾಗೇ ಕೊಡಬಹುದಿತ್ತು.  ಯೋಚನೆ ಮಾಡಿ." ಎಂದು ನಾನಂದೆ. ಎಲ್ಲರೂ"ಹೌದ್ ಅಲ್ವಾ!" ಎಂದು ಆಶ್ಚರ್ಯಪಟ್ಟರು. "ಅದಕ್ಕೇ ನಾನು ಯಾವಾಗಲೂ ಹೇಳೋದು 'ನೋಡಿದ್ದೂ ಸುಳ್ಳಾಗಬಹುದು. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು' ಅಂತ" ಎಂದು ಹೇಳಿದೆ.

Friday, March 01, 2013

ಅತ್ಯಾಚಾರ : ಮಾನವೀಯ ಮೌಲ್ಯಗಳ ಅಧಃಪತನ !


ಸರೋವರ್ ಬೆಂಕೀಕೆರೆ

ಮಗುವು ತಾಯಿಂದ ಜನ್ಮ ಪಡೆದಾಗ ಅದು ಹೆಣ್ಣಾಗಲಿ, ಗಂಡಾಗಲಿ ಸಹಜವಾಗಿಯೇ ಯಾವುದೇ ಹಣೆಪಟ್ಟಿಗಳಿಲ್ಲದೆ ಬೆಳೆದಿರುತ್ತದೆ. ಆ ರೀತಿ ಬೆಳೆದ ಗಂಡು ಮಗುವಿಗೆ, ‘ನೀನು ಬೆಳೆದು ಮುಂದೊಂದು ದಿನ ಅತ್ಯಾಚಾರವೆಸಗುವ ಮೃಗವಾಗಬೇಕೆಂದಾಗಲಿ’ ಅಥವಾ ಹೆಣ್ಣುಮಗುವಿಗೆ ‘ನೀನು ಅಧೈರ್ಯಳಾಗಿ ಗಂಡಿಗೆ ತಗ್ಗಿ ಬಗ್ಗಿ ಹೆದರಿ ಬದುಕಬೇಕೆಂದಾಗಲಿ’ ಅವರ ತಲೆಯಲ್ಲಿ ಯಾರು ತುಂಬಿ ಕಳಿಸಿರುವುದಿಲ್ಲ. ಹಾಗಾದರೆ ಇಂತಹ ಅತ್ಯಾಚಾರಗಳು ನಡೆಯಲು ನಮ್ಮ ಸಮಾಜದ ಅನಾರೋಗ್ಯಕರ ವಾತಾವರಣ ಮತ್ತು ಈ ವ್ಯವಸ್ಥೆ ಎಂದಾಯ್ತು ತಾನೇ?
ನಾವು ಗಮನಿಸಬೇಕಾದ ಒಂದು ಅಂಶವಿದೆ, ದೇಶದಲ್ಲೆ ಅತ್ಯಾಚಾರ ಪ್ರಕರಣದಲ್ಲಿ ಮುಂದಿರುವ ರಾಜ್ಯಾ ಹರಿಯಾಣ. ಇಲ್ಲಿನ ಅಂಕಿಯಾಂಶ ಗಮನಿಸಿದರೆ 80 ರಿಂದ 90 ರಷ್ಟು ಅತ್ಯಾಚಾರ ನಡೆದಿರುವುದು ದಲಿತರ ಮೇಲೆಯೇ ಆಗಿದೆ. ಇದನ್ನು ನಡೆಸುವವರು ಮೇಲುವರ್ಗದವರು ಅಥವಾ ಅಧಿಕಾರದಲ್ಲಿರುವವರು, ಅಥವಾ ಆರ್ಥಿಕವಾಗಿ ಸಬಲರಾಗಿರುವವರು. ಅತ್ಯಾಚಾರ ನಡೆಯುವುದು ಯಾವುದೇ ಒಂದು ಪ್ರಚೋದನಕಾರಿ ಉಡುಪಿನಿಂದಾಗಾಲಿ ಅಥವಾ ಮಹಿಳೆಯ ನಡತೆಯಿಂದಲ್ಲ. ಇದರ ಹಿಂದೆ ಮಾನಸಿಕ ವ್ಯಗ್ರತೆಯ ಅಪರಾಧಿತನ ಇದೆ.
ಇನ್ನು ನಮ್ಮ ಧರ್ಮ, ಧರ್ಮ ಗುರುಗಳು ಹೇಳುವಂತೆ ಹೆಣ್ಣು ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ ಮತ್ತು ಮುಪ್ಪಿನಲ್ಲಿ ಮಗನನ್ನು ಆಶ್ರಯಿಸಬೇಕು ಎನ್ನುತ್ತದೆ. (ಎಲ್ಲ ಧರ್ಮಗ್ರಂಥಗಳೂ ಪುರುಷನೆ ಬರೆದಿರುವುದನ್ನು ಗಮನಿಸಬೇಕಿದೆ) ವಾಸ್ತವವಾಗಿ ದಿಲ್ಲಿಯ ಪ್ರಕರಣವನ್ನೇ ತೆಗುದುಕೊಂಡರೆ “ಯುವತಿ ತಾನು ಮದುವೆಯಾಗಬೇಕ್ಕಿದ್ದ ಹುಡುಗನ ಆಶ್ರಯದಲ್ಲಿದ್ದೇ ಇಂತಹ ಹೇಯ ಕೃತ್ಯ ನಡೆದುಹೋಗಿತ್ತು.! ಈ ಅತ್ಯಾಚಾರ ಒಂದು ಹೆಣ್ಣಿನ ಮೇಲೆ ಆದದ್ದಲ್ಲ. ಬದಲಿಗೆ ಅಕ್ಷರಶಃ ನಮ್ಮ ಕಾನೂನಿನ ಮೇಲೆ, ಪ್ರಜಾಪ್ರಭುತ್ವದ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ನಡೆದಿದ್ದಾಗಿದೆ!!
ಅರಾಸಾರಾ ಬಾಬಾ ಹಾಗೂ ಇನ್ನಿತರ ಸಂಘಟನೆಗಳ ಹೆಣ್ಣುದ್ವೇಷಿ ಪದಾಧಿಕಾರಿಗಳೆಲ್ಲ ಹೆಣ್ಣು ಸಂಜೆ ಆರು ಘಂಟೆಯೊಳಗೆ ಮನೆ ಸೇರಬೇಕು, ಮೈ ತುಂಬ ಬಟ್ಟೆ ತೊಡಬೇಕು, ಅತ್ಯಾಚಾರ ಮಾಡಲು ಬಂದವರಿಗೆ ಅಣ್ಣ, ಅಪ್ಪ ಎಂದು ವಿನಂತಿಸಬೇಕೆಂದು ಹೇಳುತಾರೆಂದರೆ, ನಾವು ಇಂಥವರ ಅನುಯಾಯಿಗಳಿಂದ ಅತ್ಯಾಚಾರಗಳನ್ನು ನಿರೀಕ್ಷಿಸಬಹುದೇನೋ(?!). ಮಹಿಳೆಯರು ಯಾವಾಗ ಬೇಕಂದಾಗ ಒಡಾಡಿದರೆ ನಾವು ರಕ್ಷಣೆ ಕೊಡಲು ಹೇಗೆ ಸಾಧ್ಯ ಎಂದು ಪೋಲಿಸರೆ ಕೇಳುತ್ತಾರೆಂದರೆ ಏನರ್ಥ ? ಅತ್ಯಾಚಾರಿಗಳನ್ನು ಅಪರಾಧಿಗಳಾಗಿ ನೋಡುವ ಬದಲು, ಅತ್ಯಾಚಾರಕ್ಕೆ ಒಳಗಾದವರನ್ನೆ ಅಪರಾಧಿಗಳಂತೆ ನೋಡಿ ಹೆಣ್ಣನ್ನೇ ಹದ್ದುಬಸ್ತಿನಲ್ಲಿ ಇಡಲು ಯತ್ನಿಸುತ್ತಾರೆ...!
ಆರೋಪಿಗಳನ್ನು ನಪಂಪಸಕರನ್ನಾಗಿಸಿ, ಅಥವಾ ಉಗ್ರ ಶಿಕ್ಷೆಯನ್ನು ಕೊಡಬೇಕೆಂಬ ವಾದಗಳಿವೆ. ಇದರಿಂದ ಪರಿಹಾರ ಸಾಧ್ಯವೇ ? ಖಂಡಿತ ಇಲ್ಲ. ಹೆಣ್ಣನ್ನು ಮನಷ್ಯಳಂತೆ, ತನ್ನಂತೆ ಎಲ್ಲ ಹಕ್ಕುಗಳನ್ನು ಹೊಂದಿರುವ ನಾಗರಿಕಳೆಂದು ಸಮಾಜ ಪರಿಗಣಿಸಬೇಕು. ಇಂತಹ ನೈತಿಕ, ಮಾನವೀಯ ಮೌಲ್ಯಗಳು ಸಮಾಜದಲ್ಲಿ ಬೆರೆತಾಗ ಮಾತ್ರ ಪರಿಹಾರ ಸಾಧ್ಯ. ಪಠ್ಯದಲ್ಲಿ ಧರ್ಮೋಪದೇಶಗಳನ್ನು ತುರುಕುವ ಬದಲು ಇಂತಹ ಮಾನವೀಯ ಮೌಲ್ಯಗಳನ್ನು ಸೇರಿಸಬೇಕೆಂದು ಅನಿಸುತ್ತದೆ.
                          

Love hurts: Hindu couple marries outside press club as a sign of protest

Mukesh and Padma, stand together fighting for their rights to be recognised as a married couple. PHOTO: SHAHID ALI/EXPRESS
HYDERABAD:  Mukhesh and Padma walked around fire, seven times, to tie the knot, but without the pomp and splendour which is the essence of traditional Hindu weddings. The ceremony served a dual purpose, it was a wedding and a protest. It highlighted the Hindu community’s demand for laws that register their marriages in Pakistan.

“Since 1947, Hindu couples have not been legally accepted as husband and wife,” says Guru Sukh Dev who solemnised the wedding by reciting Vedic verses. “Consequently, many domestic, social and psychological problems arise for Hindu families, especially for the women.”

The demonstration was organised by a local leader of scheduled caste communities, Ramesh Mal. He said that since the creation of Pakistan there have been no laws for Hindu marriages. “The Pakistani government should take a cue from India and introduce laws to protect Hindu marriages,” said Mal.
According to him, they have problems acquiring national identity cards and passports, registering married women, and conducting property transfers. Even travelling becomes difficult for them inside the country.

Mal said that many young girls from his community are abducted, forced to convert to other religions and forcefully married. This happens because laws to protect these Hindu girls do not exist in Pakistan.

The protesters chanted slogans, urging President Zardari to issue an ordinance for their marriage registration laws, until a law is enacted.
One of the protestors, Sapna Devi, said that she had been married for 17 years but she had no legal evidence of the union. “God forbid, if he passes away, I will be unable to claim his property,” she explained.

The newly wed couple, hailing from the district of Khairpur, said that, “though their wedding may have seemed strange because it was performed in an unusual manner, in front of the media, outside the press club, it marked the beginning of their new life”. The purpose of doing it this way was to show the world that they were deprived of this basic right.

Quoting the 1998 census, Mal told The Express Tribune that scheduled caste Hindus, who led the protest, comprise more than one-third of the 3.4 million Hindus in Pakistan. He said that the parliament has eight minority MNAs to represent the Hindu community, but their fight for marriage registration laws have yet to produce results.

Published in The Express Tribune, July 11th, 2011.

ಮಾತ್ಗವಿತೆ-118

ನಿಶೆಯಾಗಿ ಹರಕು ಕಿಸೆಯಲ್ಲಿ ತಿರುಗಾಡುವಾಗ
ಜನುಮದ ಗೆಳೆಯ ಹಾಕಿದ ಚಿಲ್ಲರೆಯೇ ಅಖಂಡ ಸಂಪತ್ತು !
ಅಂದಿನದು ಅಂದೇ ಮುಗಿಸಬೇಕು
ಹಿಂದೆ ಕಾಯಬಾರದು ಎನ್ನುವ ತತ್ವ ಹಿರಿಯರದು ;
ಪಾಲಿಸಬೇಕಲ್ಲವೆ ಪರಂಪರೆಯ ವಾರಸುದಾರನಂತೆ !
ಮತ್ತೇ ಮರುದಿನ ಜೀವದ ಗೆಳೆಯನ ಹುಡುಕಾಟ ;
ನಿನ್ನೆ ಸಿಕ್ಕವನೇ ಇಂದು ಸಿಗಬೇಕೆಂದೇನೂ ಇಲ್ಲ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.