- ಡಿ.ಕೆ. ರಮೇಶ್
* ರಾಜಕೀಯ ಹೋರಾಟಗಾರರಾದ ನೀವು ಸಾಹಿತ್ಯದತ್ತ ಮುಖ ಮಾಡಿದ್ದು ಹೇಗೆ?ಚಿಕ್ಕಂದಿನಿಂದ ನನ್ನ ಒಲವು ಸಾಹಿತ್ಯದತ್ತಲೇ. ಉಳ್ಳವರು ಮತ್ತು ಉಳ್ಳದವರ ನಡುವಿನ ಘರ್ಷಣೆಯಿಂದಾಗಿ ಸಮತಾವಾದ ಶ್ರೀಲಂಕಾದಲ್ಲಿ ಬೇರು ಬಿಡುತ್ತಿತ್ತು. ಚಹಾ ತೋಟಗಳ ಕಾರ್ಮಿಕರು, ಬಂದರು ಕೆಲಸಗಾರರು ಸಂಘಟಿತರಾಗುತ್ತಿದ್ದರು. ಆಗ ದೇಶದ ತುಂಬಾ ರಷ್ಯಾ ಸಾಹಿತ್ಯದ ಅಲೆಯಿತ್ತು. ಬಡತನದ ಕಾರಣಕ್ಕೆ ಚಿಕ್ಕಂದಿನಿಂದಲೇ ಶಾಲೆ ತೊರೆದ ನಾನು ಅಂತಹ ಅನೇಕ ಸಾಹಿತ್ಯ ಕೃತಿಗಳನ್ನು ಓದತೊಡಗಿದೆ. ಹದಿನೇಳನೇ ವಯಸ್ಸಿಗೆ ಬರೆಯಲು ಆರಂಭಿಸಿದೆ. ಆ ಬಳಿಕ ನವ ಸಮ ಸಮಾಜದಲ್ಲಿ ದುಡಿದೆ. ಅದರಿಂದ ಸಾಕಷ್ಟು ಅನುಭವಗಳಾದವು. ಶ್ರೀಲಂಕಾದ ಹಳ್ಳಿ ಹಳ್ಳಿಗಳನ್ನು ತಿರುಗುವುದು, ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡುವುದು ಸಾಧ್ಯವಾಯಿತು.
ಕೆಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬಳಿಕ ಸಂಘಟನೆಯಿಂದ ದೂರ ಉಳಿದೆ. ಸಾಹಿತ್ಯದ ಕೆಲಸಗಳಲ್ಲಿ ಹೆಚ್ಚು ಮಗ್ನನಾದೆ. ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತೀಯ ಸಾಹಿತ್ಯವನ್ನು ಓದುತ್ತಾ ಹೋದೆ. ಜತೆಗೆ ಬರವಣಿಗೆಯೂ ಸಾಗಿತು.
* ಬರೆವ ಬೆರಗಿನ ಕುರಿತು ಒಂದಿಷ್ಟು...
ಕೆಲ ಕಾದಂಬರಿಗಳನ್ನು ಬರೆದಿದ್ದರೂ ಸೃಜನಶೀಲ ಬರವಣಿಗೆಯಲ್ಲಿ ಸಣ್ಣಕತೆಯೇ ನನ್ನ ನೆಚ್ಚಿನ ಪ್ರಕಾರ. ಇಡೀ ಶ್ರೀಲಂಕಾದಲ್ಲಿ ಕಾದಂಬರಿಕಾರನಿಗಿಂತಲೂ ಹೆಚ್ಚಾಗಿ ನನ್ನೊಳಗಿನ ಕತೆಗಾರನನ್ನು ಸಹೃದಯಿಗಳು ಗುರುತಿಸಿದ್ದಾರೆ. ಸೃಜನಶೀಲ ಬರವಣಿಗೆಯಲ್ಲಿ ಕತೆ ಅತ್ಯಂತ ಪ್ರಭಾವಶಾಲಿಯಾದುದು ಎಂದು ನಂಬಿದ್ದೇನೆ. ಅಲ್ಲದೆ ಇದು ಸಾಹಿತ್ಯದ ನವಿರು ಕಸರತ್ತು ಕೂಡ. ಒಂದೊಳ್ಳೆಯ ಕತೆ ಒಳ್ಳೆಯ ಕಾವ್ಯದಂತೆಯೇ ಮಧುರ. ಕತೆಯನ್ನು ಓದುವುದರಿಂದಲೇ ಸಾಹಿತ್ಯದ ಒಂದು ಅಭ್ಯಾಸ ಆರಂಭವಾಗುತ್ತದೆ. ಕತೆಯ ಪದ ಅಥವಾ ವಾಕ್ಯಗಳನ್ನು ಓದುವುದಕ್ಕಿಂತ ಅವುಗಳ ಧ್ವನಿಯನ್ನು ಗುರುತಿಸುವುದು ಮುಖ್ಯ.
ಇಂಗ್ಲಿಷ್‌ನಲ್ಲಿ eading between the lines ಎನ್ನುತ್ತಾರಲ್ಲಾ ಹಾಗೆ. ಅಲ್ಲಿನ ಉಪಮೆ, ಪ್ರತೀಕ, ಕಾಣ್ಕೆಗಳನ್ನು ಸಂದರ್ಭಕ್ಕೆ ಸರಿಯಾಗಿ ಗ್ರಹಿಸಿದಾಗಲೇ ಒಂದೊಳ್ಳೆ ರಸಾನುಭವ ಸಾಧ್ಯ. ಕತೆ ಬರೆಯುವಾಗ ಶೈಲಿ, ನಿರೂಪಣೆ ಕೂಡ ಅಷ್ಟೇ ಮುಖ್ಯ.
ಹೀಗಾಗಿ ನನ್ನ ಬರವಣಿಗೆಯಲ್ಲಿ ಬರೆವ ಶೈಲಿ, ಬಳಸುವ ಭಾಷೆ ಹಾಗೂ ನಿರೂಪಣೆಯ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ. ಇದು ಕೂಡ ಕತೆಯ ವಸ್ತುವಿನಷ್ಟೇ ಮಹತ್ವದ್ದು. ಸಾಂದರ್ಭಿಕ ಅರ್ಥಗಳು, ಪದಗಳ ಸಾಂಕೇತಿಕ ಪ್ರಸ್ತುತತೆ ಹಾಗೂ ಭಾಷೆಯ ಲಯವನ್ನು ವಿಶೇಷವಾಗಿ ಗಮನಿಸುತ್ತೇನೆ. ಏಕೆಂದರೆ ಎಲ್ಲಾ ಕತೆಗಳನ್ನು ಒಂದೇ ಶೈಲಿ ಹಾಗೂ ಲಯದಲ್ಲಿ ಬರೆಯಲು ಸಾಧ್ಯವಿಲ್ಲ. ಒಂದು ಭಾಷೆಗೆ ಇರುವ ಲಯವನ್ನು ಕಂಡುಕೊಳ್ಳುವುದು ಲೇಖಕನಿಗಿರಬೇಕಾದ ಮುಖ್ಯ ಗುಣ. ಜತೆಗೆ ಓದುಗರೂ ಬರೆದದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಮುಂದುವರಿದಿರಬೇಕು. ಅವರ ಅಭಿರುಚಿಯೂ ಬರಹಗಾರನಷ್ಟೇ ಎತ್ತರದಲ್ಲಿರಬೇಕು. ಅನುಭವ ಹಾಗೂ ಭಾಷೆಯ ಸೂಕ್ಷ್ಮತೆಯನ್ನು ಗಮನಿಸುವ ಕೆಲಸ ಅವರಿಂದಾಗಬೇಕು.
* ನಿಮ್ಮ ಕತೆಗಳ ಒಟ್ಟು ದನಿ?
ಬಹುಶಃ ಕಪ್ಪು ಬಿಳುಪು ರೀತಿಯಲ್ಲಿ ಇದಮ್ಮಿತ್ತಂ ಎಂದು ನನ್ನ ಕತೆಗಳ ಆಶಯವನ್ನು ಹೇಳಿಕೊಳ್ಳಲಾಗದು. ಕಾಲ- ದೇಶಗಳಲ್ಲಿ ನಡೆದ ಸಾಹಿತ್ಯ ಕೃಷಿ ಮನುಷ್ಯ ಪರವಾಗಿರುವಂತೆಯೇ ನನ್ನ ಕತೆಗಳು ಕೂಡ ಅದರತ್ತಲೇ ತುಡಿಯುತ್ತವೆ. ಮಾರ್ಕ್ಸ್‌ವಾದದ ಹಿನ್ನೆಲೆಯಿಂದ ಬಂದವನಾದರೂ ಅದರ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರವಣಿಗೆ ನನ್ನದಾಯಿತು ಎಂದು ಹೇಳಬಹುದೇನೋ.
* ಜನಾಂಗೀಯ ಕಲಹದ ಬಳಿಕ ಶ್ರೀಲಂಕಾದ ತಮಿಳು ಹಾಗೂ ಸಿಂಹಳ ಸಾಹಿತ್ಯದಲ್ಲಿ ಎಂಥ ಬದಲಾವಣೆಗಳಾದವು?
ತಮಿಳು ಸಾಹಿತ್ಯ ನನಗೆ ಅಷ್ಟು ಆಳವಾಗಿ ಗೊತ್ತಿಲ್ಲದ ಕಾರಣ ಅದರ ಕುರಿತು ಪ್ರಸ್ತಾಪಿಸುವುದಿಲ್ಲ. ಆದರೆ ಸಿಂಹಳ ಕವಿತೆ, ಸಣ್ಣಕತೆ ಹಾಗೂ ಕಾದಂಬರಿ ಪ್ರಕಾರಗಳ ಕುರಿತು ಪ್ರತಿಕ್ರಿಯಿಸಬಲ್ಲೆ. ಕದನದ ಸಮಯದಲ್ಲಿ ಕೂಡ ಬಹುತೇಕ ಸಿಂಹಳ ಬರಹಗಾರರು ಜನಾಂಗೀಯ ಕಲಹ ಕುರಿತು ಸೂಕ್ಷ್ಮಜ್ಞರಾಗಿರಲಿಲ್ಲ. ಸಮರೋತ್ತರ ಸಂದರ್ಭವಾದ ಈ ದಿನಗಳಲ್ಲಿಯೂ ನನಗೆ ಅಂಥ ಮಹತ್ವದ ಬದಲಾವಣೆಗಳು ಕಂಡು ಬರುತ್ತಿಲ್ಲ. ಹಾಗೆಂದು ಅಂತಹ ಸೂಕ್ಷ್ಮತೆಯಿಂದ ಎಲ್ಲರೂ ಹೊರತಾಗಿದ್ದಾರೆ ಎಂದರ್ಥವಲ್ಲ. ಹಾಗೆ ಸೃಜನಾತ್ಮಕವಾಗಿ ಸ್ಪಂದಿಸಿದ ಕೆಲವರ ಕೃತಿಗಳು ತುಂಬಾ ಶಕ್ತಿಶಾಲಿಯಾಗಿಯೇ ಇವೆ.
ಸಿಂಹಳ ಸಿನಿಮಾಗಳಲ್ಲಿ ಮಾತ್ರ ಅಲ್ಪಮಟ್ಟಿನ ಬದಲಾವಣೆಗಳುಂಟಾದವು. ಯುದ್ಧದ ಸಂದರ್ಭಗಳಲ್ಲಿ ಕದನವನ್ನು ವಿಮರ್ಶಿಸಿ ಕೆಲವು ಚಿತ್ರಗಳು ತಯಾರಾದವು. ಆ ಚಿತ್ರಗಳ ಕೆಲವು ಕಲಾವಿದರನ್ನು ಬೆದರಿಸಲಾಯಿತು, ಅವಮಾನಿಸಲಾಯಿತು. ಆದರೆ ಅಂತಹ ಕಲಾವಿದರು ಅಂತರರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಂಡರು. ವಿಚಿತ್ರವೆಂದರೆ ಯುದ್ಧ ಮುಗಿವ ಹೊತ್ತಿಗೆ ಇಡೀ ಸಂಘರ್ಷವನ್ನು ವೀರಗಾಥೆಯಂತೆ, ದೇಶಭಕ್ತಿಯ ಸಂಕೇತವೆಂಬಂತೆ ಬಿಂಬಿಸಲಾಯಿತು. ಕಲಾತ್ಮಕ ಅಂಶಗಳಿಲ್ಲದಿದ್ದರೂ ಕೂಡ ಅಂತಹ ಚಿತ್ರಗಳಿಗೆ ಸರ್ಕಾರದ ಮನ್ನಣೆ ದೊರೆಯಿತು. ಈಗ ಜನಾಂಗೀಯವಾದಿ ಚಲನಚಿತ್ರಗಳತ್ತಲೇ ಹೆಚ್ಚು ಒಲವು ಇದ್ದಂತಿದೆ.
* ತಮಿಳರ ಬದುಕು ನಿಮ್ಮನ್ನು ಕಾಡಲು ಕಾರಣ?
ತೀರಾ ಹತ್ತಿರದಿಂದ ತಮಿಳರ ಬದುಕನ್ನು ನೋಡಿದ್ದೆ. ಸಾಮಾನ್ಯ ಸಿಂಹಳ ವ್ಯಕ್ತಿಯ ನೋವುಗಳಿಗೂ ಅವರ ನೋವುಗಳಿಗೂ ಅಂಥ ವ್ಯತ್ಯಾಸ ಇರಲಿಲ್ಲ. ಎಲ್‌ಟಿಟಿಇಯ ತೀವ್ರಗಾಮಿ ಹೋರಾಟ ತಮಿಳರ ನೋವುಗಳಿಗೆ ನಿಜವಾಗಿ ಸ್ಪಂದಿಸಲಿದೆಯೇ ಎಂಬ ಅನುಮಾನ ನನ್ನೊಳಗೂ ಇತ್ತು. ಶ್ರೀಲಂಕಾಕ್ಕೆ ಸ್ವಾತಂತ್ರ್ಯ ದೊರೆತ ನಂತರ ಎಲ್ಲಾ ಸರ್ಕಾರಗಳೂ ತಮಿಳರನ್ನು ಮೂಲೆಗುಂಪು ಮಾಡಿದವು. ವೈವಿಧ್ಯತೆಗೆ ಅವಕಾಶ ನೀಡದೆ ಸಿಂಹಳೀಯರಿಗೆ ಮಾತ್ರ ಮಣೆ ಹಾಕಲಾಯಿತು. ತಮಿಳರ ದಮನಕ್ಕೆ ಇದೂ ಒಂದು ಕಾರಣ. ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಭಾಗಗಳ ಬದುಕು ದೊಡ್ಡಮಟ್ಟದಲ್ಲಿ ಅನಾವರಣಗೊಂಡಿರುವುದು ನನ್ನ ಕಾದಂಬರಿ `ಸಿಯೋತ್ ತತು ಸಿಂಧ`ದಲ್ಲಿ.
* ನೀವು ಕಂಡುಕೊಂಡಂತೆ ಎರಡೂ ದೇಶಗಳ ನಡುವೆ ಇರುವ ಸಾರಸ್ವತ ಲೋಕದ ವ್ಯತ್ಯಾಸ?
ನಮ್ಮ ದೇಶದಲ್ಲಿ ಕೆಲವು ಪ್ರಗತಿಪರ ಸಾಹಿತ್ಯಕ ಹೋರಾಟಗಳು ನಡೆದಿವೆ. ಆದರೆ ಕನ್ನಡದಲ್ಲಿ ಅಥವಾ ಭಾರತದ ಕೆಲ ಭಾಷೆಗಳಲ್ಲಿ ಆಗಿರುವಂತೆ ನವೋದಯ, ಪ್ರಗತಿಶೀಲ, ನವ್ಯ, ದಲಿತ- ಬಂಡಾಯ ಹೀಗೆ ವಿವಿಧ ಕಾಲಘಟ್ಟಗಳ ಚಳವಳಿ ಸಾಧ್ಯವಾಗಿಲ್ಲ. ಈ ಚಳವಳಿಗಳ ಆಶಯ ನಮ್ಮ ಸಾಹಿತ್ಯದಲ್ಲಿ ಸಮಗ್ರವಾಗಿ ಅಡಕವಾಗಿವೆಯೇ ಹೊರತು ಒಡೆದು ಕಾಣುವ ಪ್ರತ್ಯೇಕತೆ ತೋರದು.
ಮೇಲಾಗಿ ಭಾರತದ ಜಾತಿ ಪದ್ದತಿ ಹಾಗೂ ದೊಡ್ಡ ಧಾರ್ಮಿಕ ಅಂತರ ನಮ್ಮಲ್ಲಿಲ್ಲ. ಬಹುತೇಕ ಹೋರಾಟಗಳು ನಮ್ಮ ದೇಶದಲ್ಲಿ ಆರ್ಥಿಕ ಅಸಮಾನತೆಯ ವಿರುದ್ಧ ನಡೆದಿವೆ. ಹೀಗಾಗಿ ಭಾರತದ ಯು.ಆರ್. ಅನಂತಮೂರ್ತಿ, ರವೀಂದ್ರನಾಥ ಟ್ಯಾಗೋರ್, ಕಮಲಾದಾಸ್, ಸಾದತ್ ಹಸನ್ ಮಾಂಟೊ, ಅರುಂಧತಿ ರಾಯ್, ಸಲ್ಮಾನ್ ರಶ್ದಿ ಮುಂತಾದವರು ಹೆಚ್ಚು ವೈವಿಧ್ಯಮಯವಾಗಿ ತೋರುತ್ತಾರೆ.
ಇನ್ನು ರಚನೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಕಾವ್ಯ ಬೆಳೆದಷ್ಟು ಇತರ ಸಾಹಿತ್ಯ ಪ್ರಕಾರಗಳು ಬೆಳೆದಿಲ್ಲ. ಕತೆ, ಕಾದಂಬರಿಗಳಂತಹ ಗದ್ಯ ಪ್ರಕಾರದಲ್ಲಿ ಸಾಕಷ್ಟು ಕೃಷಿ ನಡೆಯಬೇಕಿದೆ. ವಿವಿಧ ಭಾಷೆಗಳ ಅನುವಾದಿತ ಸಾಹಿತ್ಯ ಶ್ರೀಲಂಕಾದಲ್ಲಿ ವಿಫುಲವಾಗಿ ದೊರೆಯುತ್ತದೆ. ಆದರೆ ಸಿಂಹಳ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಂತಹ ಅನುವಾದಕರ ಕೊರತೆ ಇದೆ. ಬಹುತೇಕ ದೇಶಗಳಲ್ಲಿ ನಡೆಯುವಂತೆ ಸಾಹಿತ್ಯದ ಬೆಳವಣಿಗೆ ಕುರಿತು ನಮ್ಮ ಸರ್ಕಾರದ ಗಮನ ಅಷ್ಟಕ್ಕಷ್ಟೇ.
ಕೃಪೆ : ಪ್ರಜಾವಾಣಿ
No comments:
Post a Comment