ಮೂಲ ಮರಾಠಿ : ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಜಯವಂತರಾವ ಜಗತಾಪ – ಮಾಧುರಿ !
ಇಬ್ಬರದೂ ಮಧುರ ದಾಂಪತ್ಯ ; ಸುಖೀ ಸಂಸಾರ !
ಇಬ್ಬರೂ ಕಲಿತವರು ; ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅವರು ಉದ್ಯೋಗಿಗಳು ಕೂಡ. ಅವರ ಸುಂದರವಾದ ಸಂಸಾರದಲ್ಲಿ ಹೂವು ಅರಳಿದಂತೆ ಸಾಗರ ಎನ್ನುವ ಮಗ ಮಡಿಲು ತುಂಬಿದ್ದ. ದುಂಡುದುಂಡಾಗಿದ್ದ ಸಾಗರ ಬೆಳೆದಂತೆಲ್ಲ ಬುದ್ಧಿವಂತನಾಗುತ್ತಲೇ ಶಾಲೆಯ ಕಟ್ಟೆಯನ್ನೂ ಹತ್ತಿ ಇಂಗ್ಲೀಷ್ ಪಾಠವನ್ನು ಕಲಿಯುತ್ತಿದ್ದ !
ಸುಖೀ ಸಂಸಾರಕ್ಕೆ ದೃಷ್ಟಿ ಹತ್ತಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ ಅಲ್ಲವೆ ?
ಜಯವಂತರಾವ ಮತ್ತು ಮಾಧುರಿ ದಾಂಪತ್ಯದಲ್ಲೂ ಹಾಗೇ ಆಯಿತು !
ಅವರಿಬ್ಬರಲ್ಲಿ ಈಗ ಕೆಲ ದಿನಗಳಿಂದ ವಿಚಾರವೊಂದು ತಲೆ ತಿನ್ನತೊಡಗಿತ್ತು !
ಇಂದು ಸಾಯಂಕಾಲ !
ಇಬ್ಬರೂ ಬ್ಯಾಂಕಿನಿಂದ ಮನೆಗೆ ಮರಳಿದ್ದರು. ತಲೆ ತಿನ್ನುತ್ತಿದ್ದ ವಿಷಯದ ಬಗ್ಗೆ ಚರ್ಚೆ ಮಾಡುವ ವಿಚಾರ ಅವರಲ್ಲಿ ಇತ್ತು !
ಮಾಧುರಿ ಮತ್ತೇ ಬಸುರಿಯಾಗಿದ್ದಳು !
ಕುತೂಹಲ, ಹಂಬಲ, ಉತ್ಸಾಹ, ಆತಂಕ ಇಬ್ಬರಲ್ಲೂ ಮನೆ ಮಾಡಿದ್ದವು !
ಹುಟ್ಟುವ ಕೂಸು ಹೆಣ್ಣೋ ಗಂಡೋ ?
ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿದರೆ ... ... ?
ಇದೇ ವಿಚಾರದ ಗೊಂದಲದಲ್ಲಿ ಅವರಿಬ್ಬರೂ ಚಿಂತಿತರಾಗಿದ್ದರು !
ಭ್ರೂಣಲಿಂಗ ಪತ್ತೆ ಮಾಡಿಸುವುದು ಕಾನೂನಿನ ಪ್ರಕಾರ ಅಪರಾಧ !
ಅದು ಅವರಿಬ್ಬರಿಗೂ ತಿಳಿಯದ ಸಂಗತಿಯೇನಲ್ಲ !
ಆದರೂ ... !
ಜಯವಂತರಾವ್ ಹೇಳತೊಡಗಿದ ;
“ಮಾಧುರಿ, ಕಾಯ್ದೆ ಮಾಡೋದ ಮುರಿಯು ಸಲ್ವಾಗಿ ! ನಮಗ ಅದ ಬೇಕಾಗಿಲ್ಲ ಬಿಡ. ಆದರ ಬರೀ ಮಾಹಿತಿ ತಿಳ್ಕೋ ಸಲ್ವಾಗಿಯಾದರೂ ಈ ಪರೀಕ್ಷೆ ಮಾಡ್ಸೂಣುಲಾ ? ಇದು ಪಾಪದ ಕೆಲ್ಸ, ಬೇಕಾಯ್ದೆಶೀರ ಅನ್ನೋದೇನೋ ಖರೆ. ಆದರ ಭಾಳಷ್ಟ ಮಂದಿ ಸಿಟಿ ಒಳಗಿರೋ ಪ್ರಸಿದ್ಧ ಡಾಕ್ಟರ್ ಮಾಧವ ಗುಂಡೆ ದವಾಖಾನಿಯೊಳಗ ಹಿಂಥಾದ್ದss ಮಾಡ್ತಾರಂತ ಮಾತಾಡ್ಕೋತಾರು”
ಚರ್ಚೆ ಮುಂದುವರಿದಿತ್ತು ... ... !
*****
ಮಾಧವರಾವ ಗುಂಡೆ !
ನಗರದ ಪ್ರಖ್ಯಾತ ಸ್ತ್ರೀ ರೋಗ ತಜ್ಞ ! ಹಲವಾರು ರಾಜಕೀಯ ಮುಖಂಡರೊಂದಿಗೆ ಆತನ ಸಂಪರ್ಕವೂ ಇತ್ತು !
ಆತ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡುತ್ತಿದ್ದ !
ಅನೇಕ ಏಜಂಟರನ್ನು ನೇಮಿಸಿಕೊಂಡು ದೇಶದಲ್ಲಿಯ ಮೂಲೆ ಮೂಲೆಗಳಲ್ಲಿ ವ್ಯಾಪಾರ ಸುರುವಿಟ್ಟುಕೊಂಡಿದ್ದ. ಸಾವಿರಾರು ರುಪಾಯಿಗಳನ್ನು ಜನರಿಂದ ಹಿರಿದುಕೊಂಡು ಪಾಪದ ಕೆಲಸ ಮಾಡುತ್ತಿದ್ದ ಕಟುಕ ! ಕಾಯ್ದೆಯನ್ನು ಮೀರಿಯೂ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ಆತ ಗುಪ್ತ ಮಾರ್ಗವನ್ನೇ ತೋರಿಸಿದ್ದ ! ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲು ಶ್ರೀಧರ ಪೋಟಬಾಳೆ ಹೆಸರಿನ ನಂಬಿಗಸ್ಥ ಭಂಟನೊಬ್ಬನನ್ನು ಆತ ನೇಮಿಸಿಕೊಂಡಿದ್ದ !
*****
ಜಯವಂತರಾವ ಮತ್ತು ಮಾಧುರಿ ಕೊನೆಗೊಮ್ಮೆ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ರಾಜಿಯಾದರು ! ಡಾ. ಗುಂಡೆಯ ದವಾಖಾನೆಗೆ ಹೋಗಲು ಅವರು ನಿರ್ಧರಿಸಿದರು ! ಸಾವಿರಾರು ರುಪಾಯಿ ಫೀಜು ತುಂಬಿ ರವಿವಾರದ ಒಂದು ದಿನ ಸಾಯಂಕಾಲ ಪರೀಕ್ಷೆಯ ಸಮಯವನ್ನು ನಿಗದಿಪಡಿಸಿಕೊಂಡರು !
*****
ರವಿವಾರ ಓಡೋಡುತ್ತ ಬಂತು !
ಸಂಜೆಯ ಸಮಯ. ದವಾಖಾನೆಯ ಭವ್ಯ ಕಟ್ಟಡದ ಸುಸಜ್ಜಿತ ನೆಲಮಾಳಿಗೆಯಲ್ಲಿ ಯಾರಿಗೂ ಸುಳಿವು ಸಿಗದಂತೆ ಡಾ. ಗುಂಡೆ ಸೊನೋಗ್ರಾಫಿ ಮಶೀನು ಇಟ್ಟಿದ್ದ ! ಮಾಧುರಿಯನ್ನು ಒಳ ಕರೆಯಲಾಯಿತು. ಪರೀಕ್ಷೆಯ ಎಲ್ಲ ಹಂತವನ್ನೂ ಒಂದೊಂದಾಗಿ ಮುಗಿಸಲಾಯಿತು. ಕೆಲ ಹೊತ್ತು ಕಳೆದ ಮೇಲೆ ತನ್ನ ಆಫೀಸಿಗೆ ಬರುವಂತೆ ಜಯವಂತರಾವ ಮತ್ತು ಮಾಧುರಿಗೆ ಹೇಳಿದ.
ಗಂಡ-ಹೆಂಡತಿಯರಿಬ್ಬರೂ ಒಳ ಹೊಕ್ಕಾಗ, ಡಾ. ಗುಂಡೆ, ರೀಪೋರ್ಟನ್ನು ತುಂಬ ಚಿಂತಾಕ್ರಾಂತನಾದಂತೆ ನೋಡುತ್ತಿದ್ದ ! ದಂಪತಿಗಳನ್ನು ಕುಳಿತುಕೊಳ್ಳಲು ಹೇಳಿ, ರಿಪೋರ್ಟು ಸರಿಸಿಟ್ಟು ಹೇಳಿದ,
“ಹೆಣ್ಣು ... ಹೆಣ್ಣು ಮಗುವಿದೆ !”
ಡಾ. ಗುಂಡೆಯ ಮಾತು ಕೇಳಿ ಜಯವಂತರಾವನ ಮುಖ ಕಳೆಗುಂದಿತು !
ಡಾ. ಗುಂಡೆಯೇ ಮತ್ತೇ ಮಾತನ್ನು ಮುಂದುವರಿಸಿದ.
“ಹ್ಞಾss ! ಏನ ಮಾಡೂಣು ಹೇಳ್ರಿ ? ಕೂಸ ಬೆಳಿಬೇಕೋ ಇಲ್ಲ ... ... ... ?”
ವಿಚಾರ ಮಾಡದೇ ನಿರ್ಧರಿಸುವುದು ಸರಿಯಲ್ಲ ಎಂದುಕೊಂಡ ಗಂಡ-ಹೆಂಡತಿಯರಿಬ್ಬರೂ ಆದಷ್ಟು ಬೇಗನೇ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿ ಅಲ್ಲಿಂದ ಎದ್ದು ಸೀದಾ ಮನೆಗೆ ಬಂದರು !
*****
ಒಂದೆರಡು ದಿನ ಆ ಬಗ್ಗೆ ಯಾವ ಚರ್ಚೆಯೂ ನಡೆಯಲಿಲ್ಲ !
ಒಂದು ದಿನ ಮಾತನಾಡುತ್ತ ಕುಳಿತಾಗ ಆ ವಿಷಯವನ್ನು ಯಜವಂತರಾವನೇ ಪ್ರಸ್ತಾಪ ಮಾಡಿದ ;
“ಮಾಧುರಿ, ನಿನ್ನ ಅಭಿಪ್ರಾಯ ಏನು ?”
“ಯಾವುದಕ್ಕೆ ?”
“ಅದೇ ಡಾ. ಗುಂಡೆಯವರ ಕಡೆ ಹೋಗೋದು ... !”
“ನೋಡ್ರಿ, ನನ್ನ ಹೊಟ್ಟಿಯೊಳಗ ಹೆಣ್ಣುಕೂಸು ಬೆಳ್ಯಾಕತ್ತೇತಿ ಅನ್ನೂದss ನನಗ ಹೆಮ್ಮೀ ಅನ್ನಿಸಾಕತ್ತೇತಿ ! ದೇವ್ರು, ಮೊದಲ ಬಂಗಾರದಂಥಾ ಮಗನ ಕೊಟ್ಟ ; ಈಗ ಮಗಳು ! ಮಗಳ ಹುಟ್ಟಿ ಬಂದ್ರ ಮನಿಯೊಳಗ ಸುಖ-ಶಾಂತಿ ಹೆಚ್ಚಾಗ್ತಾವ್ರಿ !”
ಜಯವಂತರಾವ ಆಕೆಯ ಮಾತಿಗೆ ಸಹಮತ ತೋರಲಿಲ್ಲ !
ಹೆಣ್ಣುಮಗುವಿನ ತೊಂದರೆ ತಮಗೆ ಬೇಡ ಎಂದು ಬಿಟ್ಟ !
ಮಾಧುರಿಗೆ ಸಿಟ್ಟು ಉಕ್ಕಿ ಬಂತು ! ಆಕೆ ತುಂಬ ಜೋರಿನಿಂದಲೇ ಹೇಳತೊಡಗಿದಳು ;
“ನೋಡ್ರಿ, ಈ ಜಗತ್ತ ಉದ್ಧಾರ ಮಾಡುವಾಕೀ ಒಬ್ಬ ಹೆಣ್ಣss ಆಗಿರ್ತಾಳ ಅನ್ನೂದ ಮರೀಬ್ಯಾಡ್ರಿ. ಕ್ರಾಂತಿಗೂ ಆಕೀ ತಾಯಿ ಮತ್ತ ಶಾಂತಿಗೂ ತಾಯಿ ! ವೀರಮಾತಾ ಜೀಜಾಬಾಯಿ ಇರದಿದ್ರ ವೀರ ಪರಾಕ್ರಮಿ ಶಿವಾಜಿ ಮಾರಾಜ್ರು ಹುಟ್ಟಿ ಬರಾಕ ಸಾಧ್ಯssನ ಇರ್ಲಿಲ್ಲ ! ಸಾವಿತ್ರಿಬಾಯಿ ಫುಲೆ ಇರದಿದ್ರ ಸ್ತ್ರೀ ಶಿಕ್ಷಣದ ಹಾದಿಯೇ ಕಾಣ್ಸೂತ್ತಿರ್ಲಿಲ್ಲ ! ಸನಾತನಿ ವಿಚಾರಗೋಳಿಂದ ಕುರುಡ ಆಗಿರೋ ಸಮಾಜಕ್ಕ ಸ್ತ್ರೀ ಶಿಕ್ಷಣದ ಮೂಲಕನ ವೈಭವ ಪ್ರಾಪ್ತ ಆಗೇತಿ ಅನ್ನೋದ ಮರೀಬ್ಯಾಡ್ರಿ ! ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಾಗ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ತಾರಾರಾಣಿ, ಅಹಲ್ಯ ಹೋಳ್ಕರ್, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದ ವೀರವನಿತೇರು ರಣರಂಗಕ್ಕ ಇಳ್ದು ಹುತಾತ್ಮರಾಗ್ಯಾರು ! ಪಂಡಿತ ರಮಬಾಯಿ, ಆನಿಬೇಸೆಂಟ್, ಇಂದಿರಾ ಗಾಂಧಿ ವೊದಲಾದೋರೆಲ್ಲ ಇತಿಹಾಸ ನಿರ್ಮಿಸ್ಯಾರು ! ಸಿಂಧೂತಾಯಿ ಸಪಕಾಳ, ಕಲ್ಪನಾ ಚಾವ್ಲಾ ಮೊದಲಾದೋರು ಹೆಣ್ಣಮಕ್ಕಳss ಅಲ್ಲೇನ್ರಿ ? ... ... ...”
ಜಯವಂತರಾವ ತಟಸ್ಥನಾಗಿಯೇ ಕೇಳುತ್ತಿದ್ದ ! ಮಾಧುರಿ ತಡೆಯಿಲ್ಲದಂತೆ ಮಾತನಾಡುತ್ತಿದ್ದಳು !
“... ... ... ಜಗತ್ತನ್ನ ಉದ್ಧಾರ ಮಾಡೂ ಭಾಳ ದೊಡ್ಡ ಶಕ್ತಿ ಹೆಣ್ಣಮಕ್ಕಳ ಕಡೀ ಇರ್ತೇತಿ ! ಹೆಣ್ಣಂದ್ರ ಬರೀ ಹೆಣ್ಣಲ್ಲ ! ಆಕೀ ತಾಯಿ ಆಗ್ತಾಳು, ಮಗಳ ಆಗ್ತಾಳು, ಅಕ್ಕಾ-ತಂಗಿ ಆಗ್ತಾಳು, ಸೊಸಿ ಆಗ್ತಾಳು, ಅತ್ತೀ ಆಗ್ತಾಳು ! ತ್ಯಾಗ, ಪ್ರೇಮ, ಪರಾಕ್ರಮ, ಸಹಿಷ್ಣುತೆ, ವಿವೇಕ, ಚೊಲೋ ಗುಣಗೋಳ ಖಣಿ ಆಗಿರ್ತಾಳು ! ನಿಸರ್ಗವನ್ನ ಸಮತೋಲನ ಮಾಡಾಕೂ ಹೆಣ್ಣ ಬೇಕಾಗ್ತಾಳು ಮರೀಬ್ಯಾಡ್ರಿ ! ... ... ...”
ಒಂದಿಷ್ಟು ಉಸಿರು ಒಳಗೆಳೆದುಕೊಂಡ ಮಾಧುರಿ ಮತ್ತೇ ಮಾತನಾಡತೊಡಗಿದಳು ;
“... ... ... ಡಾ. ಗುಂಡೇದ ಪಾಪದ ಫಲಾ ತುಂಬಿ ಬಂದೇತಿ ಅಂತ ಮಂದಿ ಮಾತಾಡ್ತಿರ್ತಾರು ! ಹೊಟ್ಟ್ಯಾಗ ಇರೂವಾಗನ ಹೆಣ್ಣಕೂಸಗಳ್ನ ಕೊಲ್ಲೂ ಆ ಡಾ. ಗುಂಡೆ ವೈದ್ಯ ವೃತ್ತಿಗನ ಮಸಿ ಬಳಿಯಾಕತ್ತಾನು. ಅಂವಾ ನಮ್ಮ ಸಮಾಜಕ್ಕ ಅಂಟಿದ ಒಂದ್ ದೊಡ್ಡ ವಿಕೃತಿ ! ನಿಮಗ ಗೊತ್ತಿಲ್ಲೇನ್ರಿ ... ; ಮುನ್ಸಿಪಾಲ್ಟಿ ಗಟಾರದಾಗ ಎಳೀ ಕಂದಮ್ಮಗೋಳ ಹೆಣಾ ಸಿಕ್ಕಾವು ! ಬೀದಿ ನಾಯಿಗೋಳು ಹಂಗ ಹರ್ದ ತಿಂತಿರ್ತಾವು ! ಕಾಗಿ, ಹದ್ದು ಅಳಿದುಳಿದ ಎಲುವು ಮತ್ತ ಮಾಂಸವನ್ನು ಎತ್ಕೊಂಡ ಹೊಂಟಾವು ! ಅಷ್ಟ ಯಾಕ... ಡಾ. ಗುಂಡೆನ ಹೊಲದಾಗೀನ ಬಾವಿಯಾಗನ ಹೆಣ್ಣ ಕೂಸಗೋಳ ಎಲವುಗೋಳ ಸಿಕ್ಕಾವಲಾ ! ಕಾಯ್ದೆ, ಪೋಲೀಸ್ರು ಏನೂ ಮಾಡೂದಿಲ್ಲ. ಗೊತ್ತಿದ್ರೂ ಗೊತ್ತಿರ್ಲಾರ್ದಾಂಗ ಇರ್ತಾರು ! ಅಲ್ರಿ, ಆ ಸತ್ತ ಹೆಣ್ಣ ಮಕ್ಕಳ ಬದಕಿದ್ರ ಯಾರೋ ಡಾಕ್ಟರ್, ಲೆಕ್ಚರ್, ಇಂಜೀನಿಯರ್, ವಿಜ್ಞಾನಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸಮಾಜಸೇವಕಿ, ರಾಜಕಾರಣಿ, ಗೃಹಿಣಿ ಆಗ್ಬಹುದಿತ್ತಲ್ರಿ ? ನಿಮ್ಮ ಅವ್ವನೂ ಒಬ್ಬಾಕಿ ಹೆಣ್ಣ ಆಗಿದ್ರಿಂದನ ನೀವ್ ಇಂದ ಈ ಜಗತ್ತ ನೋಡಾಕತ್ತೇರಿ ! ಇದೆಲ್ಲ ನೀವ ಯಾಕ ಮರಿತೇರಿ ? ... ... ... ... ಖರೇ ಹೇಳ್ಬೇಕಂದ್ರ ಆ ಕೆಟ್ಟ ಹುಳಾ ಡಾ. ಗುಂಡೆ ಕಡೀ ನನಗ ಹೋಗಾಕ ಮನಸ್ಸ ಇರ್ಲಿಲ್ಲ ! ನಿಮ್ಮ ಬಲವಂತಕ ಬಲಿ ಆದ್ನಿ ಅಷ್ಟ”
ಜಯವಂತರಾವ ಆಕೆ ಮಾತನಾಡುವಾಗ ನಡುವೆ ಬಾಯಿ ಹಾಕಲಿಲ್ಲ ! ಆಕೆ ಮಾತು ನಿಲ್ಲಿಸಿದ ಮೇಲೆ ಏನೂ ತಿಳಿಯದವನಂತೆ ತನ್ನ ವಿಚಾರ ಹೇಳತೊಡಗಿದ !
“ಮುಗಿತೇನ ನಿನ್ನ ಸ್ತ್ರೀಮಾತ್ಮೆ ಪುರಾಣಾ ? ಮಾಧುರಿ, ಹಕೀಕತ್ತ ತಿಳ್ಯೂಲ್ಲದ ಭಾವನಾದ ಭರದಾಗ ತೆಗ್ದಕೊಳ್ಳೂ ನಿರ್ಧಾರಗೋಳು ತಪ್ಪ ಹಾದಿಗಿ ಒಯ್ಯತಾವು ! ಸಮಾಜದ ಹಿತಾ, ದೇಶದ ಹಿತಾ, ಸಮಾಜದ ಅರಿವು ಇಂದ ಬದುಕ ಕಟ್ಟೂದಿಲ್ಲ ! ಸ್ವಾರ್ಥ ಮತ್ತ ಸ್ವಹಿತ ಬಿಟ್ಟ ಬ್ಯಾರೆ ಯಾವುದರಾಗೂ ಮಂದಿಗಿ ಆಸಕ್ತಿ ಇಲ್ಲ ! ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣಮಕ್ಕಳ ಸಂಖ್ಯಾ ಕಮ್ಮಿ ಆಗ್ತೇತಿ ಅನ್ನೂ ನಿನ್ನ ವಿಚಾರ ತಲ್ಯಾಗಿಂದ ತಗದ ಬಿಡ. ನಾವು ನಮ್ಮ ಕುಟುಂಬದ್ದಷ್ಟss ವಿಚಾರ ಮಾಡೂಣು ! ಶಿವಾಜಿ ಮಾರಾಜ್ರು ಬ್ಯಾರೆಯೋರ ಮನಿಯೊಳಗ ಹುಟ್ಟಿ ಬರ್ಲಿ ಅಂತ ಯಾರಾದ್ರೂ ಅಂತಾರೇನ ? ಹುಚ್ಚರಾಂಗ ವಿಚಾರ ಮಾಡಬ್ಯಾಡ ! ಸುಮ್ನss ನಮ್ಮ ಮನ್ಯಾಗ ಕಿರಿಕಿರಿ ಬ್ಯಾಡ. ಟೈಮ್ ಭಾಳ ಕಮ್ಮಿ ಏತಿ. ಗರ್ಭಪಾತ ಮಾಡಸ್ಕೊಳ್ಳಾಕ ತಯಾರಾಗ ನೀ ! ಮುಂದಿಂದೆಲ್ಲ ಬರೊಬ್ಬರಿ ಆಗ್ತೇತಿ !”
ಆತನ ಮಾತು ಕೇಳಿದ ಮಾಧುರಿ ಸಂತಾಪಿತಗೊಂಡಳು ! ಆವೇಶದಿಂದಲೇ ಆಕೆ ಮರು ಉತ್ತರ ನೀಡತೊಡಗಿದಳು !
“ಅಲ್ರಿ, ನೀವು ಈ ಸಮಾಜದಾಗ ಸುಶಿಕ್ಷಿತ ವ್ಯಕ್ತಿ ಅನ್ಸಕೊಂಡಾವ್ರು ! ಹಿಂಥಾ ವಿಚಾರಗೋಳು ನಿಮಗ ಶೋಭಾ ತರೂದಿಲ್ಲ ! ನೀವ ಏssನ ಹೇಳ್ರಿ. ನಾ ಅಂತೂ ಒಪ್ಪೂದಿಲ್ಲ ! ಪಾಪದ ಹಾದಿ ತುಳಿಯೂದಿಲ್ಲ. ತಿಳ್ಕೋರಿ !”
ಜಯವಂತರಾವನಿಗೂ ಕೋಪ ಉಕ್ಕಿ ಬಂತು !
ಮಾಧುರಿಯ ಸಂಕಟ ಆತನಿಗೆ ಅರಿವಾಗಲೇ ಇಲ್ಲ ! ಹಠಕ್ಕೆ ಬಿದ್ದವರಂತೆ ಆತ ಮತ್ತೇ ವಾದಿಸಿದ !
“ನೋಡ ಮಾಧುರಿ, ನಾನು ಇಡೀ ಸ್ತ್ರೀ ಜಾತಿಯನ್ನ ದ್ವೇಷಾ ಮಾಡಾಕತ್ತಿಲ್ಲ ! ನಮಗ ಹೆಣ್ಣಮಗು ಯಾಕ ಬ್ಯಾಡ ಅನ್ನೂದಕ್ಕ ಕಾರಣಾ ಹೇಳ್ತೇನ ಕೇಳ ; ಸಮಾಜದ ಎಲ್ಲಾ ಸರದಾಟ ಒಂದಿಷ್ಟ ಕಣ್ಣ ಹಾಯ್ಸಿ ನೋಡ ! ಬಾಜೂ ಮನಿ ರಮಾಕಾಕೂನ ಉದಾಹರಣೀನ ತೊಗೋ ! ಆ ಗಂಡ ಸತ್ತ ಹೆಣ್ಣಮಗ್ಳು, ಬದುಕಿನ್ಯಾಗ ತಾ ಗಳಿಸಿದ್ದೆಲ್ಲಾ ತನ್ನ ಮಗಳ ಸುಗಂಧಾನ ಶಿಕ್ಷಣಕ್ಕಾಗಿ ಖರ್ಚ ಮಾಡಿದ್ಳು. ಶ್ರೀಮಂತ ಮನೆತನ ಸಿಗ್ಲಿ ಅಂತ ಸಿಕ್ಕಾಪಟ್ಟೆ ವರದಕ್ಷಿಣಿ ನೀಡಿ ಮದ್ವಿನೂ ಮಾಡಿಕೊಟ್ಳು. ಆದರ ಆದದ್ದೇನ ಗೊತ್ತೇತ್ತಲಾ ? ಮದ್ವಿ ಆದ ಒಂದss ವರ್ಷದಾಗ ಸುಗಂಧಾ ವರದಕ್ಷಿಣಿ ಕಿರುಕುಳಕ್ಕ ಬಲಿ ಆದ್ಳು ! ಆಕೀ ಅತ್ತಿ ಮನ್ಯಾವ್ರು ಹುಲ್ಲಿನ ಬಣವಿ ಸುಟ್ಟ ಹಾಕಿದಾಂಗ ಆಕೀನ ಸುಟ್ಟ ಹಾಕಿದ್ರು ! ಅಷ್ಟss ಅಲ್ಲ ; ಪೋಲೀಸ್ರನ ಒಳಗ ಮಾಡ್ಕೊಂಡ ಅದ ಆತ್ಮಹತ್ಯಾ ಕೇಸ್ ಅಂತ ಮುಚ್ಚಿ ಹಾಕಿದ್ರು ! ... ...”
ಜಯವಂತರಾವ ಸತ್ಯವನ್ನೇ ನುಡಿಯುತ್ತಿದ್ದ. ಅದು ಆತ ಕಂಡ ಸತ್ಯವೇ ಆಗಿತ್ತಲ್ಲವೆ ? ಮುಂದುವರಿದು ಆತ ಹೇಳತೊಡಗಿದ ;
“... ... ರಮಾಕಾಕೂ ನ್ಯಾಯಕ್ಕಾಗಿ ಭಾಳ ಹೋರಾಟ ಮಾಡಿದ್ಳು. ಆದರ ಅದೆಲ್ಲ ವ್ಯರ್ಥ ಆತು ! ತನ್ನ ಮಗಳ ಬೂದಿಯನ್ನ ಆಕಿ ಪಂಚಗಂಗಾ ನದಿಯೊಳಗ ಹಾಕಿಬಿಟ್ಳು ! ಮೂಕ ಆಗಿರೋ ಆ ನದಿ ಅನಿವಾರ್ಯದಿಂದನss ಆ ಪಾಪವನ್ನ ಹೊಟ್ಟಿಯೊಳಗ ಹಾಕ್ಕೊಂತು ! ಇನ್ನೊಂದ ನಿನಗ ಗೊತ್ತಿರಬೇಕಲಾ ? ಸೊಸಿ ನೋಡಾಕ ಚೊಲೋ ಅದಾಳು ಅಂತ ಆಕೀ ಮಾಂವ್ನss ಬಲತ್ಕಾರ ಮಾಡಿ ತನ್ನ ಹಸಿವ ತೀರ್ಸಕೊಂಡ ಸುದ್ದಿ ! ಮಾನಾ ಕಳ್ಕೊಂಡ ಆ ಸೊಸಿ ರೈಲ್ವೆ ಹಳಿಗಿ ತಲಿ ಕೊಟ್ಳು. ಆಕೀ ಎಲವ ಕೂಡ ಸಿಗದಿಲ್ಲ ! ಮಾಧುರಿ, ನಿಪ್ಪಾಣಿಯೊಳಗ ನನ್ನ ಒಬ್ಬ ಸ್ನೇಹಿತನ ಮಗ್ಳ ಮ್ಯಾಲ ಆಕೀ ಗಂಡನss ಮಾನಸಿಕ ಮತ್ತ ದೈಹಿಕ ಅತ್ಯಾಚಾರ ಮಾಡಿ, ಎರ್ಡೂ ಮಕ್ಳ ಜೊತಿ ಆಕೀನ ಮನಿಯಿಂದ ಹೊರ್ಗ ಹಾಕಿದಾ ! ಆ ಮಕ್ಳು ಪೋಟಗಿ (ಜೀವನಾಂಶ) ಸಲ್ವಾಗಿ ಕೋರ್ಟಿನ್ಯಾಗ ದಾವೆ ಹೂಡಿದ್ರೂ ಫಾಯ್ದಾ ಆಗ್ಲಿಲ್ಲ ! ಕೇಸ್ ಐದಾರ ವರ್ಷ ನಡೀತು ! ಗಂಡ ಆದಾವ್ನು ತನ್ನ ಆಸ್ತಿಯೆಲ್ಲಾ ಅಷ್ಟರೊಳಗss ಮಾರಿಬಿಟ್ಟಿದ್ದ ! ಮುಚ್ಚಮರೀಲೆ ಮತ್ತೊಂದ ಮದ್ವಿ ಮಾಡ್ಕೊಂಡ ಸಂಸಾರ ಸುರು ಮಾಡಿದ ! ಪೋಟಗಿ ಬದಲ ಜೇಲಿಗಿ ಹೋಗಾಕ ರೆಡಿ ಅದೇನ ಅಂತ ಅಂವಾ ಈಗ ಹೇಳ್ತಾನು ! ಅದ ಕಾಯ್ದಾದಾಗ ಇಲ್ಲ ! ಹಿಂಥಾ ಕಾಯ್ದೆ-ಕಾನೂನು ಕೋರ್ಟುಗಳ ಒತ್ತಡ ಇದ್ದಾಗ್ಲೂ ಹೆಣ್ಣಮಕ್ಳ ಮ್ಯಾಲ ಇನ್ನೂ ಶೋಷಣಾ ನಡೀತಾನss ಏತಿ ! ... ...”
ಜಯವಂತರಾವ ದಣಿವಿಲ್ಲದಂತೆ ಮಾತನಾಡತೊಡಗಿದ್ದ ! ಮಾಧುರಿ ತಲೆ ಕೆಳಗೆ ಹಾಕಿ ಕುಳಿತ್ತಿದ್ದಳು !
“... ... ಮಾಧುರಿ, ನೀ ಒಮ್ಮಿ ಕೋರ್ಟ್ ಕಂಪೌಂಡ್ದಾಗ ಹೋಗಿ ನೋಡ ; ಇಪ್ಪತ್ತ-ಇಪ್ಪತ್ತೆರಡ ವಯಸ್ಸಿನ ಸಾವಿರಾರು ಹೆಣ್ಣಮಕ್ಳು ಡೈವೋರ್ಸ್ ಮತ್ತ ಪೋಟಗಿ ಸಲ್ವಾಗಿ ಫ್ಯಾಮಿಲಿ ಕೋರ್ಟಿನ ಮುಂದ ನಿಂತಿರ್ತಾರು ! ಭವಿಷ್ಯದಾಗ ನಮಗ ಹುಟ್ಟೂ ಮಗ್ಳೂ ಕೋರ್ಟ್ ಕಂಪೌಂಡ್ದಾಗ ಕಾಣ್ಸೂದಿಲ್ಲ ಅಂತ ಹೆಂಗ ಹೇಳಾಕಾಗ್ತೇತಿ ? ಹೆಣ್ಣಮಕ್ಳಿಗಿ ಕೌಟಂಬಿಕ ಹಿಂಸಾಚಾರ್ದ ವಿರುದ್ಧ ಸಂರಕ್ಷಣಾ ಸಿಗ್ಬೇಕಂತ ಕಾಯ್ದಾನೂ ಏತಿ ! ಆದರ ಆ ಕಾಯ್ದೆಯಿಂದ ಗಂಡಾ-ಹೆಂಡ್ತಿ ನಡುವ ಜಗ್ಳ ಸುರುವಾಗ್ತೇತಿ ! ... ಹಿಂದೂ ವಾರಸಾ ಕಾಯ್ದೆಕ ತಿದ್ದಪಡಿ ತಂದ ಮಗ್ಳಿಗಿ ಅಪ್ಪನ ಆಸ್ತಿಯೊಳಗ ಅಣತಮರ ಜೋಡಿ ಸಮಾನ ಪಾಲ ಕೊಡಬೇಕನ್ನೂ ಕಾಯ್ದೆ ಮಾಡ್ಯಾರು. ಹಂಗss ಡೈವೋರ್ಸ್ ಕೊಡೂವಾಗ ಗಂಡನ ಆಸ್ತಿಯೊಳಗ ಹೆಂಡ್ತಿಗಿ ಅರ್ಧಾ ಪಾಲ ಕೊಡಬೇಕಂತ ವಿಧೇಯಕವನ್ನ ಪಾರ್ಲಿಮೆಂಟಿನ್ಯಾಗ ಮನ್ನೆ ಮನ್ನೆ ಪಾಸ್ ಮಾಡ್ಯಾರು ! ಈ ಕಾಯ್ದೆದಿಂದ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಅವ್ವ ಅನ್ನೂ ಸಂಬಂಧಗೋಳೆಲ್ಲ ಹಾಳಾಗಿ ಕುಟುಂಬ ವಿಘಟನಾ ಆಗಾಕತ್ತೇತಿ ! ಸಮಾಜದಾಗ ನೆಮ್ಮದಿ ಕನಸಿನ ಮಾತಾಗೇತಿ ! ಮಗಳನ್ನ ಸಾಕಿ, ಬೆಳ್ಸಿ ಮದ್ವಿ ಮಾಡ್ಸೂ ಅಷ್ಟೊತ್ತಿಗಿ ಹಡದ ಅವ್ವ-ಅಪ್ಪನ ಹೆಣಾ ಬಿದ್ದ ಹೋಗಿರ್ತೇತಿ ! ಇದ್ನೆಲ್ಲ ನೋಡಿ ಮನ್ಯಾಗ ಮಗ್ಳ ಹುಟ್ಟಿದ್ರ ಪೀಡಾ ಹುಟ್ಟಿದಾಂಗ ಅನ್ನೂ ಭಾವ್ನಾ ಹೆಚ್ಚಾಗಾಕತ್ತೇತಿ ! ಮುಂದ ನಮಗಾಗ್ಲಿ, ನಮ್ಮ ಮಕ್ಳಿಗಾಗ್ಲಿ ತ್ರಾಸ ಆಗ್ಬಾರ್ದು ಅಂದ್ರ ಈಗ ನೀ ತ್ಯಾಗಾ ಮಾಡಾಕssಬೇಕ ! ‘ಸತ್ಯಮೇವ ಜಯತೆ’ ಕಾರ್ಯಕ್ರಮ ತೋರ್ಸತಾರು ಅಂದ್ರ ಇರೂ ಚಿತ್ರ ಬದ್ಲಾಗೂದಿಲ್ಲ ! ನೀ ಇಲ್ಲ ಅನ್ನಬ್ಯಾಡ. ಡಾ. ಗುಂಡೆಯವರ ಸಲ್ಲಾ ಪಡಕೊಂಡ ಲಗೂ ಮಾಡಿ ಈ ಗರ್ಭ ತೆಗೆಸೋಣು !”
ಮಾಧುರಿ ಒಳಗೊಳಗೆ ಕುದಿಯುತ್ತಿದ್ದಳು !
ಗಂಡ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಆಕೆ, ತನ್ನ ಗಂಡ ಸ್ತ್ರೀ ಜಾತಿಯ ಬಗ್ಗೆ ಎಂಥ ಮಾತಾಡ್ತಾನೆ ಎಂದು ಆಘಾತವಾಯಿತು ! ಆಕೆ ಸಾರಾಸಗಟಾಗಿ ಆತನ ಮಾತನ್ನು ಧಿಕ್ಕರಿಸಿದಳು !
ಜಯವಂತರಾವ ಕುದ್ದು ಹೋದ !
“ನೋಡ ಮಾಧುರಿ, ಎಲ್ಲಾ ಹೆಣ್ಣ ಜಾತೀನ ಕೀಳ ಮಾಡಿ ನಾ ಮಾತಾಡಾಕತ್ತಿಲ್ಲ. ಆದರ ಇಷ್ಟೆಲ್ಲ ಆಗಾಕ ಹೆಣ್ಣss ಕಾರಣ ಅಂತ ಅನ್ಸೂದಿಲ್ಲ ನಿನಗ ? ಸೊಸಿ ಮ್ಯಾಲಿನ ಶೋಷಣಾ ಮತ್ತ ವರದಕ್ಷಿಣಿ ಕೇಸುಗಳೊಳಗ ಅತ್ತೀ ಕೈವಾಡ ಭಾಳ ಇರ್ತೇತಿ ! ಕೋರ್ಟಿನ್ಯಾಗೂ ಇದ ಸಿದ್ಧ ಆಗೇತಿ ! ಹೆಣ್ಣುಭ್ರೂಣ ಹತ್ಯಾದ ಪಾಪದೊಳಗ ಹೆಣ್ಣಿನ ಪಾತ್ರ ಭಾಳ ಏತಿ ಅನ್ನೋದ ಮರೀಬ್ಯಾಡ ! ಹೆಣ್ಣಮಕ್ಳು ದಿಟ್ಟತನದಿಂದ ಇದನ್ನ ನಿರಾಕರಿಸಿದ್ರ ಹಿಂಥಾ ಪಾಪಗೋಳ ಘಟ್ಸೂದಿಲ್ಲ ! ಆದರ ದುರ್ದೈವ ನೋಡ, ಹೆಣ್ಣುಭ್ರೂಣ ಹತ್ಯಾದಂಥಾ ಪಾಪದಾಗ ಹೆಣ್ಣುಗೋಳ ಸಮ್ಮತಿ ಇದ್ದss ಇರ್ತೇತಿ ! ಅವರ ಸಮ್ಮತಿ ಕೊಟ್ಟ ಮ್ಯಾಲನ ಡಾಕ್ಟರೂ ಈ ಅಪರಾಧದಾಗ ಸಹಭಾಗ ಆಗ್ತಾರು ! ... ...”
ಮಾಧುರಿಗೆ ತನ್ನ ಗಂಡನ ಮಾತಿನಲ್ಲಿ ಸತ್ಯ ಕಾಣಿಸತೊಡಗಿತು !
ಆತ ಹೇಳುತ್ತಿರುವುದರಲ್ಲಿ ತಪ್ಪೇನೂ ಇಲ್ಲ !
“ಎಲ್ಲಾದಕ್ಕೂ ಹೆಣ್ಣss ಜವಾಬ್ದಾರ ಆಗಿದ್ರ ಈ ಗರ್ಭ ತೆಗೆಸೋದನ್ನ ನಾ ಸಮರ್ಥನಾ ಮಾಡ್ಕೋದಿಲ್ರಿ ! ಗರ್ಭಪಾತದ ಪಾತಕ ನನ್ನಿಂದ ಸಾಧ್ಯ ಇಲ್ರಿ ! ನನ್ನ ಹೊಟ್ಟ್ಯಾಗಿರೋ ಕೂಸು ಜಗತ್ತ ನೋಡ್ಬೇಕ್ರಿ ! ನನ್ನ ಮೊಗ್ಗು ಅರಳಾಕssಬೇಕ್ರಿ !
ಜಯವಂತರಾವ ಮುಂದೆ ಮಾತನಡಲಿಲ್ಲ !
ಆತ ತನ್ನ ಪ್ರಯತ್ನವನ್ನೇ ಕೈ ಬಿಟ್ಟ !
*****
ಮಾಧುರಿಗೆ ನವಮಾಸಗಳು ತುಂಬಿದವು !
ಹೆರಿಗೆಯೂ ಆಯಿತು ; ಮುದ್ದಾದ ಮಗಳು ಮಡಿಲು ತುಂಬಿದ್ದಳು !
ಮಗಳಿಗೆ ‘ಪಾರು’ ಎಂದು ಪ್ರೀತಿಯಿಂದಲೇ ಹೆಸರಿಡಲಾಯಿತು ! ವಿಚಿತ್ರ ನೋಡಿ ; ಈಗ ಜಯವಂತರಾವ ತನ್ನ ಮಗಳನ್ನು ಬಿಟ್ಟು ಒಂದುಕ್ಷಣವೂ ಇರುತ್ತಿರಲಿಲ್ಲ ! ಗಂಡ-ಹೆಂಡತಿಯರಿಬ್ಬರೂ ಮಗಳ ಪಾಲನೆ-ಪೋಷಣೆ ಚೆನ್ನಾಗಿಯೇ ಮಾಡಿದರು. ಮಗನಿಗೆ ನೀಡಿದಂತೆಯೇ ಒಳ್ಳೆಯ ಶಿಕ್ಷಣವನ್ನೂ ಕೊಡಿಸಿದರು.
ಪಾರು ತುಂಬ ಬುದ್ಧಿವಂತೆ ! ತುಂಬ ಚೂಟಿ !
ಪದವಿ ಮುಗಿಸಿದ ಮೇಲೆ ಐ.ಎ.ಎಸ್. ಪರೀಕ್ಷೆ ಬರೆದು ಪಾಸಾದಳು !
ದೇಶಸೇವೆಗಾಗಿ ಆಕೆ ಸರಕಾರಿ ಆಡಳಿತದಲ್ಲಿ ಬಹುದೊಡ್ಡ ಹುದ್ದೆ ಪಡೆದಳು !
ಕಮರಿ ಹೋಗಬೇಕಿದ್ದ ಮೊಗ್ಗು ಅರಳಿ ನಿಂತಿತ್ತು !
ಮಾಧುರಿ-ಜಯವಂತರಾವ ಇಬ್ಬರಲ್ಲೂ ಧನ್ಯತಾ ಭಾವ ಇತ್ತು !
ಮಾಧುರಿ ಇಡೀ ಜಗತ್ತಿಗೇ ಹಿರಿದಾದ ಸಂದೇಶವೊಂದನ್ನು ನೀಡಿದ್ದಳು ;
‘ಮೊಗ್ಗು ಅರಳಲೇ ಬೇಕು !’
*****