ದೋಷಪರಿಹಾರಕ್ಕೆ ಸಾಲು ಸಾಲಿನಲ್ಲಿ ಮಂದಿ ಮಂದಿರದಲ್ಲಿ,
ದವಸ ಧಾನ್ಯಗಳಾ ಕೊಂಡೊಯ್ದು ಚೆಲ್ಲುವಿರಯ್ಯಾ ಗ್ರಹಗಳೆಂಬ ಕಲ್ಲಿಗೆ,
ಎನ್ನ ತಾಯಿ ಹಸಿವಿನಲ್ಲಿ ಹಾಸಿಗೆ ಹಿಡಿದಿಹಳು,
ಒಬ್ಬರಿಂದ ಒಂದೊಂದು ಕಾಳಂತೆ ಸಾಕು,
ಚೆಲ್ಲಿರಯ್ಯ ಎನ್ನ ಹಡೆದವ್ವಳ ಪ್ರಾಣಹಕ್ಕಿಯ ಉಳಿಸಲು.
ಮನುಷ್ಯ ಜನ್ಮ ಹುಟ್ಟಿಹುದೇ ಪುಣ್ಯಕೋಟಿ ಹಬ್ಬವಂತಯ್ಯಾ,
ವರುಷ ವರುಷ ಹುಟ್ಟುಹಬ್ಬದಿ ಕ್ಷೀರಾನ್ನ ಫಲಹಾರಗಳಾ ಅಭಿಷೇಕ ಕಲ್ಲಿನ ದೇವನಿಗೆ, .
ಅವನ ಮೇಲಿರುವ ಬಂಡೆಕಲ್ಲಿನಷ್ಟು ನಂಬಿಕೆಯಲ್ಲಿ ,
ಸಾಸುವೆ ಕಾಳಿನಷ್ಟು ನಂಬಿಕೆಯ ಒಡ್ಡಿರಯ್ಯಾ ಈ ಪಾಪಿಯಾ ಮೇಲೆ.
ಕೊಳೆತ ಹಣ್ಣಿನ ಎಸಲೊಂದ ಎಸೆಯಿರಿ ಅದೇ ಎಮಗೆ ಮೃಷ್ಟಾನ್ನ .
ಹರಿಕೆಯಾ ಹೆಸರಿನಲ್ಲಿ ಗುಡ್ಡೆ ಗುಡ್ಡೆಯಾಗಿ,
ವಸ್ತ್ರಗಳಾ ತೊಡಿಸುವಿರೆಯ್ಯಾ ಅಜೀವ ಕಲ್ಲುಗಳಿಗೆ,
ಎಮ್ಮ ಮಗಳು ಮೈನೆರೆದಿಹಳು ಹರಿದ ಉಡುಗೆ ಉಟ್ಟಿಹಳು,
ಹಳೆಯ ಹೊಲಸ ಬಟ್ಟೆಯೇ ಸಾಕು ಅವಳ ಮಾನ ಕಾಪಾಡಿಕೊಳ್ಳಲು,
ದೇವರ ಕರುಣೆಗಿಂತ ನಿಮ್ಮ ಕಣ್ಣ ತೆರೆದು ಬಿಸಾಡಿರಯ್ಯಾ ನಿಮಗೆ ಬೇಡದ.
ನಿಮಗೇ ನಾ ಶರಣು ಶರಣೆಂಬೆ.
No comments:
Post a Comment