Sunday, June 30, 2013

ವಚನ-29

ತೊಡೆಯೇರಿದ ತಾಂಬೂಲದ ಹೆಣ್ಣು
ಕಣ್ಣು ಕತ್ತಲು ಬರುವಷ್ಟು ರಸ ಹೀರಿದ ರಭಸಕ್ಕೆ
ಕಸಿವಿಸಿಗೊಳ್ಳುವ ಸರದಿಯಲ್ಲಿದ್ದೂ ಸರಸದ ಬಯಕೆ
ಪುಟಿನಗೆಯುವಿಕೆಗೆ ಬರೀ ದೇಹ ಕಾರಣವಲ್ಲ
ಕಾರಣಿಕ ಸಿದ್ಧರಾಮ ಅಲ್ಲಿದೆ ಬಯಸದೇ ಬಂದ ಬಂಧವೂ
ದೆಸೆ ದೆಸೆಗೆ ತಡವಿ ಮಾಯಾಮೃಗದ ಹಸಿತನ !

Sunday, June 16, 2013

ಮಾತ್ಗವಿತೆ-132

ಆಸೆಗಾಗಿ ಕೊಂದವರು ಕೋಟಿ
ತೀಟೆಗಾಗಿ ಕೊಂದವರು ಕೋಟಿ
'ಜೀ' ಎನ್ನಲು ಸಿದ್ಧವಿಲ್ಲವೆಂದಾದರೆ
ಕೊಲ್ಲುವವರು ಕೋಟಿ ಕೊಟಿ !
ಕೊಂದವರಿಗೆ ಬೇರು ಗೊತ್ತಿಲ್ಲ
ಮತ್ತೇ
ಚಿಗುರುವಿಕೆ ಸುರುವಿದೆ
ಮರಳುವ ಅರಳುವ ಹಂಬಲವಿದೆ !

Tuesday, June 04, 2013

ಕುಡಿಯೊಡೆಯಲು ತೊಡೆ ಬೇಕಲ್ಲ !

ಡಾ. ಸಿದ್ರಾಮ ಕಾರಣಿಕ 
ತೊಡೆಯ ಮೇಲಿನ ಚಿತ್ತಾರ
ಕತ್ತಲು ಕವಿದಾಗಲೂ ಕಂಡ ಸೋಜಿಗ !
ಅದೇನು ಚಿತ್ತಾರವೋ  ಹಸೆಯೋ ?

ಹಸಿದುಕೊಂಡಾತಂಗೆ ಸಮಯವಿಲ್ಲ !
ಸರಸ ವಿರಸದ ಸಲ್ಲಾಪವಿಲ್ಲ
ಬರೀ ಚರ್ಮಕ್ಕೆ ಚರ್ಮ ಅಂಟುವ
ಚರಮಭಾವದ ನರಮಾನುಸ !
ಕರೆಯ ಸಾಕರಿಸಿ  ನಾಚುವ
ಬರೀ ಮೈಗೆ ಅಂಟಿದ ಚರ್ಮ !
ಗುರಿ ಇಲ್ಲದ ಬದುಕು ಅಲ್ಲ ; ಇದೆ
ಮಳೆ ಹನಿಯುವಾಗ ಬಿತ್ತಬೇಕಲ್ಲ !
ಬೀಜಕ್ಕೆ ಬೆಳೆ ಬಯಸುವಿಕೆ ಸಹಜ
ಕುಡಿಯೊಡೆಯಲು ತೊಡೆ ಬೇಕಲ್ಲ !


Monday, June 03, 2013

ವಚನ-28

ಮರಸುಂದು ಹಿಡಿಸಿದ ಸುಸ್ತು, ಆಯಾಸ
ಅನಾಯಾಸ ಸಾಹಸವಲ್ಲ
ಸೆರುಗು ಹಿಡಿದು ಸಲ್ಲಲಿತದ ಸಲ್ಲಾಪ
ಕಡು ಕಷ್ಟ ಎಂದು ಬಗೆದರೆ
ಸಂಸಾರದ ಹುಟ್ಟು ಸಾವಿಗೆ ಮೂರ್ಖ
ಕಾರಣಿಕ ಸಿದ್ಧರಾಮ ಪಪ್ಪಾಯಿಯೊಳಗಣ
ಬೀಜವಾಗಿರುವೆ ನಿಮ್ಮ ಸಂಗಾತ !

ವಚನ-27

ಅವರಿದ್ದ ಮನೆಯ ಮಾಳಿಗೆ ಮಳೆಗೆ ಹಾಳು
ಇವರಿದ್ದ ಮನೆಯ ಜಾಳಿಗೆಯ ಗೂಡು
ತಾನಿದ್ದ ಮನೆಯ ಐಭೋಗ ಬೇರಲ್ಲ
ತೊಡೆ ಮೇಲಿನ ಚೋಳಿಗೆ ವಿಷವಿಲ್ಲ ಎಂದೊಡೆ
ಕಾರಣಿಕ ಸಿದ್ಧರಾಮ ಹಾವು ಹೊಕ್ಕರೂ
ಕಾವೇರುವ ಜನ ಇವರು, ಮರುಳಾಗಬೇಡ !

Friday, May 31, 2013

ಮಾತ್ಗವಿತೆ-131

ಮಾತಿಗೆ ಮಾತು ಸೇರಿಸಿ ಬೇತು ಮಾಡುವ
ಸಾತಾಗದ ಸೂತಕದಲ್ಲೇ ಕಳೆಯುವ
ನೀತಿಗೆ, ಪಾತಿಗೆ ಇನ್ನೂ ಎಳ್ಳು-ನೀರು !
ಅರಿತರೆ ಬದುಕು ಅರಿಯದಿದ್ದರೆ ಬೆದಕು ಇನ್ನಷ್ಟು !

Monday, May 27, 2013

ಹಂಬಲಿಸಿ ಉಂಡ ಅಂಬಲಿ


- ಸುಜಾತಾ ಕುಮಟಾ

ನಾಳೆಯ ಸೂರ್ಯನ ಕಂಡೆ
ಸಿಗಲಿಲ್ಲ ಇತ್ತು ಬೇಕೆಂಬ ಹಂಬಲ
ಯಾವ ಬಯಕೆ ಬೇಡಿದಿಯೋ ಬೆಂಬಿಡದೆ
ಕಾಡುತ್ತಿದೆ ಮಾಯೆಯಂತೆ
ಓಡಾಡಿಸುತ್ತಿದೆ ವೇಗದಲಿ ಹಿಂಬಾಲಿಸಿ
ನಾಶವಾಗದ ನೆಲದಲ್ಲಿ ಪಾದದ ರೇಖೆ !
ಮುಡಿ ಮಣ್ಣ ಮೇಲೆ
ಹಂಬಲಿಸಿ ಜೀವ ಚೈತನ್ಯಕೆ
ಕಾರ್ಗತ್ತಲಲ್ಲೂ ಮಿಂಚು ಹುಳ !
ಮಿಡಿವ ಒಡಲಲ್ಲಿ ಕಂದ ಮಿಸುಕಾಡಿದೆ
ಎಷ್ಟು ಸಂಜೆ ಸೂರ್ಯ ವಿರಮಿಸಿತ್ತು ?
ಪಾರಿಜಾತದ ಗಿಡ ಮೈಕೊಡವಿ
ಹೂ ಚೆಲ್ಲಿದ ನೆಲದಲ್ಲಿ ಪದ
ಆಗಸದ ಅಂಚಿಗೆ ಕಣ್ಣಗಲಿಸಿ ಘಮದ ಹಾದಿಯಲ್ಲಿ
ನೆನಪು ಮೈ ಚೆಲ್ಲಿದೆ !
ಬರದು ಆದರೂ ಮರುಕಳಿಸಿದೆ
ನಿಟ್ಟುಸಿರ ರಾತ್ರಿ ಕಾತರದ ಬೆಳಗು
ಬದುಕು ನಿಲ್ಲುವುದಿಲ್ಲ ಸುಳಿಗೆ
ಆತುಕೊಳ್ಳಬೇಕು ಆಯಾಸಕ್ಕೆ
ನಿರಾಕರಣೆ ಹಂಬಲ ...
ನೆಲದ ಬಯಕೆಗೆ ವಾರಸುದಾರನಿಲ್ಲ
ಚೆಂದಿರನಿಗೆ ಮುಖಮಾಡಿ ಉಕ್ಕಿದೆ
ಮೌನದ ಪಿಸು ಮಾತು !
ಕತ್ತಲೆಗೆ ಕರುಣೆಯಿಲ್ಲ
ರೆಪ್ಪೆ ಅರಳಿದ ನಗು ನಸುಕು

ಆಸೆಯೊಂದೇ ನನಗೆ
ಸೂರ್ಯ ತರುತ್ತಾನೆ ಹಂಬಲದ ಬುತ್ತಿ !
ನಿಮಗೇನು ಬೇಕು ?
ಹರಿ ಬಿಡುತ್ತೇನೆ ಹಾರು ನೀ ಸ್ವಚ್ಛಂದ 

ಖಾಲಿಗೂಡು ಸಂಜೆ ಬರೀದಾದಾಗ ಬಾ
ಹಾ ! ಚಡಪಡಿಸುವ ಹಕ್ಕಿ 

ಗೂಡು ಸೇರಿ ಮಲಗಿತೇನೋ
ತಳಮಳದ ಹಾಸಿಗೆಯಲ್ಲಿ ನಿದ್ದೆಯಪ್ಪುಗೆಯಲಿ
ಹಂಬಲದ ಹಚ್ಚಡ ಹೊದ್ದು ?

Thursday, May 23, 2013

ಮಾತ್ಗವಿತೆ-130

ಬೀಸು ರೆಕ್ಕೆ ಬಡಿದ ಹಕ್ಕಿ ಹಾರಲಾರದ ಸಂಕಟದಲಿ
ವಿಲವಿಲನೇ ಒದ್ದಾಡಿ ಗೋಳಿಗೆ ಕಣ್ಣೀರು ಮುಖ !
ಬಂಧು-ಬಳಗ ಕರೆಯಬೇಕೆಂದರೆ ಧ್ವನಿಯೇ ಅಡಗಿ
ಗೊರಲಾಗಿ ಮರುಗುವುದೊಂದೇ ಮಾರನ ಕರೆದು !
ಛೀ ! ಬಿಡು ! ಅಂತಃಕರಣ ಇಲ್ಲದವರ ಮರೆತು ಬಿಡು
ಹೊಸ ಬದುಕಿನ ಹಾದಿ ಮುಂದಿದೆ ; ಕಲ್ಲು-ಮುಳ್ಳು ಸರಿಸು
ನಿಚ್ಚಳವಾಗಿದೆ ನೋಡು ; ದಾರಿ ತೋರಲು ನಿಂತ ಸೊಡರು !

Wednesday, May 22, 2013

ಮಾತ್ಗವಿತೆ-129

ಮತ್ತೇ ಮತ್ತೇ ಹಳವಂಡಗಳ ಬೆನ್ನು ಬಿದ್ದು
ಕೋರಿಕೆ-ಸೋರಿಕೆಯಲಿ ಸೊರಗಿ ನೆರೆ ಬಿದ್ದು
ಗುರುತಿಸಲೇ ಕಷ್ಟ ಕಣ್ಣಮುಂದಲ ಸತ್ಯ !
ನೆಟಿಕೆ ಮುರಿಯಬೇಕಿದೆ ದಿಟ್ಟಿಯಾಗದಂತೆ !

Thursday, May 09, 2013

ದಾರಿ ತಪ್ಪಿಸುವ ಮಾಯಕಾರ ಜಗ ...!

ಹಿಪ್ಪರಗಿ ಸಿದ್ಧರಾಮ್, ಧಾರವಾಡ

ನಾ
ಮಾಡಿದ ತಪ್ಪಾದರೂ ಏನು?
ಪ್ರಶ್ನಿಸಲು ಯಾರು ಹರಿಲ್ಲಿ ?
ಜಂಜಾಟದ ಜಗದಲಿ 
ಕೆಲವು ಪ್ರಶ್ನೆಗಳಿಗೆ ಉತ್ತರಗಳೋ ...

 ಇರುವುದೇ ಇಲ್ಲವಂತೆ !




ದಾರಿ ತಪ್ಪಿಸುವ ಮಾಯಕಾರ 
ಜಗ ಪಾರಿಗೆ ಅಡ್ಡದಾರಿ ತೋರಿಸಿತ್ತು
ಮಾರ್ಗದರ್ಶನವೆಂಬುವ ಮಂತ್ರ  
ಬೋಧಿಸಲೇ ಬೇಕೆಂಬ ತಂತ್ರ ಮಾತ್ರ !

                                       ಪಾರಾದ ಮೇಲೆ ಅಂಬಿಗರ ಗಂಡ !
                                      ಚಿಂತೆಯ ಫಲದ ನಿರಾಸಕ್ತಿ
                                      ಸಕಲ ತೀಟೆ ತೀರಿದ ಬಳಿಕ
                                      ಮಾಡದು ಜಗ ಹೊಸ ಬದುಕಿನ ಉಸಾಬರಿ !

ತಾಯಿ ದೇವ ಪೂಜಿಸಲೆಂದೇ
ಹಾತೊರೆವ ಈ ನನ್ನ ದೇಶದ ಕಾಲಮಾನದಲ್ಲಿ 
ತನ್ನೊಡಲ ಕುಡಿ ನಿರಾಕರಣೆ !
ಗೊರಸು ಮಾತು ಬೇರೆ ; ಅನಾವಶ್ಯಕ ಪೀಡೆ !
                                      ಬೇಕಿಲ್ಲ ಅವಳಿಗೆ
                                      ನನ್ನ ಅಸ್ತಿತ್ವ-ಅಸ್ಮಿತೆ !
                                      ಅವಳ ಅಸ್ತಿತ್ವದೊಳಗೂ ನಾನಿರುವೆ ಎಂಬ
                                      ಅರಿವಿನ ಬೆಳಕಿನ ಭಾಗ್ಯವಿಲ್ಲ !

Tuesday, May 07, 2013

ಮಾತ್ಗವಿತೆ-128

ಇದ್ದುದ್ದರಲ್ಲಿಯೇ ಇರಬೇಕು
ಇಲ್ಲದ್ದೂ ನೆನಪಿರಬೇಕು !
ಚೌಲಿನಲ್ಲಿ ಡೌಲು ಮಾಡುವ
ಕುಶಲತೆಯ ಧರಿಸಬೇಕು !
ಇಲ್ಲವೆಂದರೆ ಕೊಡುವವರು ಯಾರು ?
ಪಡೆಯುವವರು ಯಾರು ?
ಸುಮ್ಮನೇ ಹೇಳಿಕೆ ;
ಅವರು ನಮ್ಮ ಬೇರು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.