Friday, May 31, 2013

ಮಾತ್ಗವಿತೆ-131

ಮಾತಿಗೆ ಮಾತು ಸೇರಿಸಿ ಬೇತು ಮಾಡುವ
ಸಾತಾಗದ ಸೂತಕದಲ್ಲೇ ಕಳೆಯುವ
ನೀತಿಗೆ, ಪಾತಿಗೆ ಇನ್ನೂ ಎಳ್ಳು-ನೀರು !
ಅರಿತರೆ ಬದುಕು ಅರಿಯದಿದ್ದರೆ ಬೆದಕು ಇನ್ನಷ್ಟು !

Monday, May 27, 2013

ಹಂಬಲಿಸಿ ಉಂಡ ಅಂಬಲಿ


- ಸುಜಾತಾ ಕುಮಟಾ

ನಾಳೆಯ ಸೂರ್ಯನ ಕಂಡೆ
ಸಿಗಲಿಲ್ಲ ಇತ್ತು ಬೇಕೆಂಬ ಹಂಬಲ
ಯಾವ ಬಯಕೆ ಬೇಡಿದಿಯೋ ಬೆಂಬಿಡದೆ
ಕಾಡುತ್ತಿದೆ ಮಾಯೆಯಂತೆ
ಓಡಾಡಿಸುತ್ತಿದೆ ವೇಗದಲಿ ಹಿಂಬಾಲಿಸಿ
ನಾಶವಾಗದ ನೆಲದಲ್ಲಿ ಪಾದದ ರೇಖೆ !
ಮುಡಿ ಮಣ್ಣ ಮೇಲೆ
ಹಂಬಲಿಸಿ ಜೀವ ಚೈತನ್ಯಕೆ
ಕಾರ್ಗತ್ತಲಲ್ಲೂ ಮಿಂಚು ಹುಳ !
ಮಿಡಿವ ಒಡಲಲ್ಲಿ ಕಂದ ಮಿಸುಕಾಡಿದೆ
ಎಷ್ಟು ಸಂಜೆ ಸೂರ್ಯ ವಿರಮಿಸಿತ್ತು ?
ಪಾರಿಜಾತದ ಗಿಡ ಮೈಕೊಡವಿ
ಹೂ ಚೆಲ್ಲಿದ ನೆಲದಲ್ಲಿ ಪದ
ಆಗಸದ ಅಂಚಿಗೆ ಕಣ್ಣಗಲಿಸಿ ಘಮದ ಹಾದಿಯಲ್ಲಿ
ನೆನಪು ಮೈ ಚೆಲ್ಲಿದೆ !
ಬರದು ಆದರೂ ಮರುಕಳಿಸಿದೆ
ನಿಟ್ಟುಸಿರ ರಾತ್ರಿ ಕಾತರದ ಬೆಳಗು
ಬದುಕು ನಿಲ್ಲುವುದಿಲ್ಲ ಸುಳಿಗೆ
ಆತುಕೊಳ್ಳಬೇಕು ಆಯಾಸಕ್ಕೆ
ನಿರಾಕರಣೆ ಹಂಬಲ ...
ನೆಲದ ಬಯಕೆಗೆ ವಾರಸುದಾರನಿಲ್ಲ
ಚೆಂದಿರನಿಗೆ ಮುಖಮಾಡಿ ಉಕ್ಕಿದೆ
ಮೌನದ ಪಿಸು ಮಾತು !
ಕತ್ತಲೆಗೆ ಕರುಣೆಯಿಲ್ಲ
ರೆಪ್ಪೆ ಅರಳಿದ ನಗು ನಸುಕು

ಆಸೆಯೊಂದೇ ನನಗೆ
ಸೂರ್ಯ ತರುತ್ತಾನೆ ಹಂಬಲದ ಬುತ್ತಿ !
ನಿಮಗೇನು ಬೇಕು ?
ಹರಿ ಬಿಡುತ್ತೇನೆ ಹಾರು ನೀ ಸ್ವಚ್ಛಂದ 

ಖಾಲಿಗೂಡು ಸಂಜೆ ಬರೀದಾದಾಗ ಬಾ
ಹಾ ! ಚಡಪಡಿಸುವ ಹಕ್ಕಿ 

ಗೂಡು ಸೇರಿ ಮಲಗಿತೇನೋ
ತಳಮಳದ ಹಾಸಿಗೆಯಲ್ಲಿ ನಿದ್ದೆಯಪ್ಪುಗೆಯಲಿ
ಹಂಬಲದ ಹಚ್ಚಡ ಹೊದ್ದು ?

Thursday, May 23, 2013

ಮಾತ್ಗವಿತೆ-130

ಬೀಸು ರೆಕ್ಕೆ ಬಡಿದ ಹಕ್ಕಿ ಹಾರಲಾರದ ಸಂಕಟದಲಿ
ವಿಲವಿಲನೇ ಒದ್ದಾಡಿ ಗೋಳಿಗೆ ಕಣ್ಣೀರು ಮುಖ !
ಬಂಧು-ಬಳಗ ಕರೆಯಬೇಕೆಂದರೆ ಧ್ವನಿಯೇ ಅಡಗಿ
ಗೊರಲಾಗಿ ಮರುಗುವುದೊಂದೇ ಮಾರನ ಕರೆದು !
ಛೀ ! ಬಿಡು ! ಅಂತಃಕರಣ ಇಲ್ಲದವರ ಮರೆತು ಬಿಡು
ಹೊಸ ಬದುಕಿನ ಹಾದಿ ಮುಂದಿದೆ ; ಕಲ್ಲು-ಮುಳ್ಳು ಸರಿಸು
ನಿಚ್ಚಳವಾಗಿದೆ ನೋಡು ; ದಾರಿ ತೋರಲು ನಿಂತ ಸೊಡರು !

Wednesday, May 22, 2013

ಮಾತ್ಗವಿತೆ-129

ಮತ್ತೇ ಮತ್ತೇ ಹಳವಂಡಗಳ ಬೆನ್ನು ಬಿದ್ದು
ಕೋರಿಕೆ-ಸೋರಿಕೆಯಲಿ ಸೊರಗಿ ನೆರೆ ಬಿದ್ದು
ಗುರುತಿಸಲೇ ಕಷ್ಟ ಕಣ್ಣಮುಂದಲ ಸತ್ಯ !
ನೆಟಿಕೆ ಮುರಿಯಬೇಕಿದೆ ದಿಟ್ಟಿಯಾಗದಂತೆ !

Thursday, May 09, 2013

ದಾರಿ ತಪ್ಪಿಸುವ ಮಾಯಕಾರ ಜಗ ...!

ಹಿಪ್ಪರಗಿ ಸಿದ್ಧರಾಮ್, ಧಾರವಾಡ

ನಾ
ಮಾಡಿದ ತಪ್ಪಾದರೂ ಏನು?
ಪ್ರಶ್ನಿಸಲು ಯಾರು ಹರಿಲ್ಲಿ ?
ಜಂಜಾಟದ ಜಗದಲಿ 
ಕೆಲವು ಪ್ರಶ್ನೆಗಳಿಗೆ ಉತ್ತರಗಳೋ ...

 ಇರುವುದೇ ಇಲ್ಲವಂತೆ !




ದಾರಿ ತಪ್ಪಿಸುವ ಮಾಯಕಾರ 
ಜಗ ಪಾರಿಗೆ ಅಡ್ಡದಾರಿ ತೋರಿಸಿತ್ತು
ಮಾರ್ಗದರ್ಶನವೆಂಬುವ ಮಂತ್ರ  
ಬೋಧಿಸಲೇ ಬೇಕೆಂಬ ತಂತ್ರ ಮಾತ್ರ !

                                       ಪಾರಾದ ಮೇಲೆ ಅಂಬಿಗರ ಗಂಡ !
                                      ಚಿಂತೆಯ ಫಲದ ನಿರಾಸಕ್ತಿ
                                      ಸಕಲ ತೀಟೆ ತೀರಿದ ಬಳಿಕ
                                      ಮಾಡದು ಜಗ ಹೊಸ ಬದುಕಿನ ಉಸಾಬರಿ !

ತಾಯಿ ದೇವ ಪೂಜಿಸಲೆಂದೇ
ಹಾತೊರೆವ ಈ ನನ್ನ ದೇಶದ ಕಾಲಮಾನದಲ್ಲಿ 
ತನ್ನೊಡಲ ಕುಡಿ ನಿರಾಕರಣೆ !
ಗೊರಸು ಮಾತು ಬೇರೆ ; ಅನಾವಶ್ಯಕ ಪೀಡೆ !
                                      ಬೇಕಿಲ್ಲ ಅವಳಿಗೆ
                                      ನನ್ನ ಅಸ್ತಿತ್ವ-ಅಸ್ಮಿತೆ !
                                      ಅವಳ ಅಸ್ತಿತ್ವದೊಳಗೂ ನಾನಿರುವೆ ಎಂಬ
                                      ಅರಿವಿನ ಬೆಳಕಿನ ಭಾಗ್ಯವಿಲ್ಲ !

Tuesday, May 07, 2013

ಮಾತ್ಗವಿತೆ-128

ಇದ್ದುದ್ದರಲ್ಲಿಯೇ ಇರಬೇಕು
ಇಲ್ಲದ್ದೂ ನೆನಪಿರಬೇಕು !
ಚೌಲಿನಲ್ಲಿ ಡೌಲು ಮಾಡುವ
ಕುಶಲತೆಯ ಧರಿಸಬೇಕು !
ಇಲ್ಲವೆಂದರೆ ಕೊಡುವವರು ಯಾರು ?
ಪಡೆಯುವವರು ಯಾರು ?
ಸುಮ್ಮನೇ ಹೇಳಿಕೆ ;
ಅವರು ನಮ್ಮ ಬೇರು !

Sunday, May 05, 2013

ಸಾಹಿತಿಗಳ ರಾಜಕೀಯ ಚರ್ಚೆ ತಪ್ಪಲ್ಲ. ಆದರೆ,....


ಡಾ. ಕೆ.ಎನ್.ದೊಡ್ಡಮನಿ, ಬೆಳಗಾವಿ
ಸಾಹಿತಿಗಳು ರಸಾನುಭವ ಒದಗಿಸುವ ಮನರಂಜನೆಯ ಗೊಂಬೆಗಳಲ್ಲ. ಬರವಣಿಗೆ ಸಾಮಾಜಿಕ ಜವಾಬ್ದಾರಿ ಹೊತ್ತುಕೊಂಡಿದ್ದರೆ ಮಾತ್ರ ಅದನ್ನು ಸಾಹಿತ್ಯ ಎಂದು ಪರಿಗಣಿಸಲಾಗುತ್ತಿದೆ.  ಸಾಹಿತಿಗಳ ಸಾಂಸ್ಕೃತಿಕ ತೀಕ್ಷಣ ವಿವೇಚನೆಯ ಪ್ರಸ್ತುತ ಸಂದರ್ಭದಲ್ಲಿ  ಸಾಮಾಜಿಕ ಬದುಕನ್ನು ನಿರ್ಣಯಿಸುವ ರಾಜಕೀಯ ಸನ್ನಿವೇಶವನ್ನು ಚರ್ಚಿಸುವುದು ಬೌದ್ಧಿಕ ವಲಯದ ಆದ್ಯಕರ್ತವ್ಯ. ಈ ಕಾರಣಕ್ಕಾಗಿ ಪ್ರಸ್ತುತ ಚುನಾವಣೆಯ ಸಂದರ್ಭದಲ್ಲಿ ಸಾಹಿತಿಗಳು ರಾಜಕೀಯ ನಿರ್ಧಾರದ ವಿವಿಧ ಆಯಾಮಗಳನ್ನು ಚರ್ಚಿಸುವುದು ತಪ್ಪಲ್ಲ. ಆದರೆ, ಈ ಸಾಹಿತಿಗಳು ಯಾವ ಹಿನ್ನಲೆ ಮತ್ತು ಉದ್ದೇಶದ ದೃಷ್ಟಿಯಿಂದ ಚರ್ಚಿಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ.

ಇಂದು ಭಾರತದಲ್ಲಿನ ಯಾವ ಪಕ್ಷಗಳೂ ಪಾವಿತ್ರ್ಯತೆಯನ್ನು ಕಾಯ್ದುಕೊಂಡಿಲ್ಲ. ಹಾಗಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವುಗಳನ್ನು ತಳ್ಳಿ ಹಾಕುವಂತೆಯೂ ಇಲ್ಲ. ಇದ್ದುದರಲ್ಲಿಯೇ ಒಂದಿಷ್ಟು ಸ್ವಚ್ಛತೆಯನ್ನು ಕಾಯ್ದುಕೊಂಡು, ತಮ್ಮ ಅನೈತಿಕತೆಯನ್ನು  ಕಡಿಮೆ ಪ್ರಮಾಣದ ಗುರುತುಗಳನ್ನು ಹೊಂದಿದ ಪಕ್ಷಕ್ಕೆ ಆದ್ಯತೆ ನೀಡುವುದು ಮತದಾರರಿಗೆ ಬಿಟ್ಟ ವಿಷಯ.  ಪ್ರಜ್ಞಾವಂತ ಮತದಾರರಿಗೆ ಈ ಹಿನ್ನಲೆಯಲ್ಲಿ ಬುದ್ದಿವಂತ ಸಾಹಿತಿಗಳು ತಿಳಿಸಿ ಹೇಳುವುದು ತಪ್ಪೇನಿಲ್ಲ. ಆದರೆ, ಸಮಾಜದಲ್ಲಿ ಗೌರವಸ್ಥಾನ ಹೊಂದಿರುವ ಈ ಬುದ್ಧಿವಂತರು ಮತದಾರರನ್ನು ಒಂದು ಪಕ್ಷದ ಪರ ನೇರವಾಗಿ ಬಲವಂತ ಪಡಿಸುವುದು ಪ್ರಜಾಪ್ರಭುತ್ವಕ್ಕೆ ಬಗೆಯುವ ಹೀನಾಯ ಅಪರಾಧ.

ಕೋಮವಾದಿ ಶಕ್ತಿಯನ್ನು  ಅಧಿಕಾರಕ್ಕೆ ಬರಗೊಡಬಾರದು ಎಂಬುದು ಕೆಲ ಸಾಹಿತಿಗಳ ವಾದ. ಆದರೆ, ಇಂದು ರಾಜಕೀಯ ಪಕ್ಷಗಳ ಕೋಮವಾದ ನಿಲುವೊಂದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿಲ್ಲ. ಭ್ರಷ್ಟಾಚಾರ ಅದಕ್ಕಿಂತ ಭಯಂಕರ ಸ್ವರೂಪದಲ್ಲಿ ಸಾಮಾನ್ಯ ಜನರನ್ನು ಹೊಸಕಿ ಹಾಕುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನೇ ದಿವಾಳಿ ಎಬ್ಬಿಸಿ, ದುಡಿಯುವ ವರ್ಗದ ಶ್ರವನ್ನು ಅವ್ಯಾಹತವಾಗಿ ಲೂಟಿ ಮಾಡುವ ವ್ಯವಸ್ಥೆ ನಿರ್ಮಾಣಗೊಂಡಿದೆ. ಇಂದು ದೇಶವನ್ನು ಮುಕ್ಕಿ ತಿನ್ನುತ್ತಿರುವುದು ಕೋಮುವಾದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ. ಭಾರತ ಜಾತಿಗಳ ಗೂಡಾಗಿರುವುದರಿಂದ ರಾಜಕೀಯ ನಿರ್ಣಾಯಕತ್ವದಲ್ಲಿ ಜಾತಿಗಳೇ ಪ್ರಧಾನ ಪಾತ್ರ ವಹಿಸುತ್ತಿರುವಾಗ ಕೋಮುವಾದ ತನ್ನ ಸ್ಥಾನ ಸಹಜವಾಗಿ ಪಡೆದುಕೊಳ್ಳುತ್ತದೆ. ಆದರೆ, ಕೋಮುವಾದಕ್ಕಿಂತ ಭ್ರಷ್ಟಚಾರ ದೊಡ್ಡ ಶಾಪವಾಗಿ ಕಾಡುತ್ತಿದೆ. ಬುದ್ಧಿವಂತ ಬಹುತೇಕ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಕೋಮಭಾವನೆಯೇ ಎದ್ದು ಕಾಣುತ್ತಿದೆಯೇ ಹೊರತು ಭ್ರಷ್ಟಾಚಾರ ಅರಿವಿಗೆ ಬರುತ್ತಿಲ್ಲ. ಅನ್ನ, ಆಶ್ರಯದೊಂದಿಗೆ ಸುಖಮಯ ಬದುಕು ಪಡೆದುಕೊಂಡವರಿಗೆ ಭ್ರಷ್ಟಾಚಾರ ಅರಿವಿಗೆ ಬರುವುದು ತೀರ ಕಡಿಮೆ.

ಪರಿಸ್ಥಿತಿ ಹೀಗಿರುವಾಗ ಯಾವದೋ ನಿರ್ದಿಷ್ಟ ಪಕ್ಷವೊಂದರ ಪರವಾಗಿ ಗೌರವಾನ್ವಿತ  ಸಾಹಿತಿಗಳು ಬಹಿರಂಗವಾಗಿ ‘ಇಂಥ ಪಕ್ಷಕ್ಕೆ ಮತ ನೀಡಿ’ ಎಂದು ಒತ್ತಾಯಿಸುವುದು ಅವರ ಸುಪ್ತ ಮನಸ್ಥಿತಿಗೆ ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದನ್ನು ಅವರೇ ವಿಚಾರ ಮಾಡಬೇಕಾದ ಅಗತ್ಯವಿದೆ. 

Saturday, May 04, 2013

ಹೆಮ್ಮರವಾಗಲಿ ಎದೆಗೆ ಬಿದ್ದ ಅಕ್ಷರ ಬೀಜ !

ಸಿದ್ಧರಾಮ ಹಿಪ್ಪರಗಿ, ಧಾರವಾಡ
 
ಪ್ರತಿದಿನವೂ ಬೀದಿಯಲಿ ಕಾಣುವುದಿಲ್ಲ
ಬಳಸಿ ಬಿಸಾಡುವ ದಿನಸಿ ವಸ್ತುವದಲ್ಲ
ಚೌಕಾಸಿಗೆ ಚಿಲ್ಲರೆ ವಿಷಯವದಲ್ಲ
ಕೊಳ್ಳಲು ಅಂಗಡಿಯಲಿ ಸಿಗುವುದಲ್ಲ
ನಿರಂತರ ಹರಿಯುವ ಅಂತರ್ವಾಹಿನಿ !

ಅರಿವಿರದ ಅಂದಿನ ಕಾಲದಲಿ
ಅಂದಿನ ಸಂದರ್ಭದ ಅವಶ್ಯಕತೆಯಲಿ
ಶ್ರೇಣೀಕರಣ, ವಸಾಹತೀಕರಣದಲಿ
ಕಾರಣವಿಲ್ಲದೇ ನಡೆದ ಶೋಣೆಗಳಲಿ
ಜಾಗೃತಗೊಂಡ ವಿರೋಧಿ ಪ್ರತಿಭಟನೆಯಲಿ
ಅಸ್ತ್ರಗಳಾಗಿ ಬಳಸಿಕೊಂಡ ಸಮಾಜವಾಹಿನಿ !

ವೇಗದ ತಾಂತ್ರಿಕತೆಯ ಇಂದಿನ ಕಾಲದಲಿ
ಬದಲಾದ ಯೋಚನಾ ಲಹರಿಗಳಲಿ
ಜಾಗತೀಕರಣ, ಮತಭ್ರಾಂತೀಕರಣಗಳಲಿ
ಎದುರಾಗುತಿರುವ ಆತಂಕಗಳಲಿ
ಎದುರಿಸಬೇಕಿರುವ ಸವಾಲುಗಳಲಿ
ಅಡಗಿಕೊಂಡಿರುವ ಅಜೆಂಡಾಗಳಲಿ
ಸ್ಮಾರ್ಟ ಶೈಲಿಯ ಶೋಷಣೆಗಳಲಿ
ಮುನ್ನುಗಬೇಕಾಗಿರುವ ದೃಢಹೆಜ್ಜೆಗಳಲಿ
ಆಶಾಭಾವ ಮೂಡಿಸುವ ಪ್ರಗತಿಪರತೆಗಳಲಿ
ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಹೊಳಹುಗಳಲಿ
ಸಮಾನತೆಯ ಕನಸು ಕಾಣುವ ಕ್ಷಣಗಳಲಿ
ಹೆಮ್ಮರವಾಗಲಿ ಎದೆಗೆ ಬಿದ್ದ ಬೀಜ ಅಕ್ಷರವಾಹಿನಿ !

ಜಗದ ಶ್ರಮಿಕ ಅಶಕ್ತರ ಭಾಗ್ಯೋಯಕಾಗಿ
ಅಕ್ಷರಜ್ಯೋತಿಯ ಜಾಗೃತಿಯ ಮುನ್ನಡೆಗಾಗಿ
ನಂಬೋಣ ಚಳುವಳಿಗಳ ದಾರಿ 
ಇದೆಯಲ್ಲವೇ ಬೆನ್ನಿಗೆ ಚರಿತ್ರೆಯ ಹೆಗ್ಗುರಿ !

ವಚನ-26

ಜಗ ಮತ್ತು ಮಿಗ ಬಾಯಿ ತೆರೆದುಕೊಂಡು
ನುಂಗಲು ಕಾಲ ಕಾಯುತ್ತಿವೆ !
ಭೂಮಿ ಬಿರಿಯಲಾರದು ಎಂದೇನೂ ಅಲ್ಲ !
ನಗವೇ ನಗುತ್ತಿರುವಾಗ ; ಬೀಗುತ್ತಿರುವಾಗ
ಮನುಷ್ಯ, ಮನುಷ್ಯತ್ವ ಇಲ್ಲವೆಂದೇನೂ ಅಲ್ಲ
ಕಾರಣಿಕ ಸಿದ್ಧರಾಮ ಬಂಕೆ ಈಡೇರಬಲ್ಲದು
ಆದರೆ ಬಯಕೆಗಳೇ ಬೇಡ ಅಂತೇನೂ ಅಲ್ಲ !

Thursday, May 02, 2013

ಮಾತ್ಗವಿತೆ-127

ಮಾತಾಡಬೇಕು ಮನಬಿಚ್ಚಿ
ಕಾದಾಡಬೇಕು ಮೈಯುಚ್ಚಿ !
ಮೌನವಾದರೆ ಫಲವೇನು
ಕಜ್ಜಿ ನಾಯಿಯ ಉಚ್ಚಿ
ತಲೆ ಮೇಲೆ ಸರಿಯೇನು ?

ಮಾತ್ಗವಿತೆ-126

ತಪ್ಪಿಸಿಕೊಳ್ಳುವುದೇ ಜಾಣತನವಲ್ಲ
ಒಪ್ಪಿಕೊಳ್ಳಬೇಕು ; ಅಪ್ಪಿಕೊಳ್ಳಬೇಕು !
ನಿಮ್ಮ ಬುದ್ಧಿ ಭಾವಗಳನ್ನು ಇಂದಿಗೂ
ಅರಿತುಕೊಳ್ಳದೇ ಇರುವೆನೆಂಬ ಭ್ರಮೆ ಬೇಡ !
ಭ್ರಮೆ ಕಳಚಿ ವಾಸ್ತವಕ್ಕೆ ಬನ್ನಿ ;
ಬರದಿದ್ದರೆ ಬೇಡ ಬಿಡಿ, ನಾನೇ ಕಳಚುತ್ತೇನೆ !

ಮರಾಠಿ ದಲಿತ ಲೇಖಕ ಶ್ರೀನಿವಾಸ ಭಾಲೇರಾವ್

ನಾಗವಂಶಜ ದಲಿತರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?' ಕೃತಿಯ ಮೂಲ ಮರಾಠಿ ಲೇಖಕ ಶ್ರೀನಿವಾಸ ಭಾಲೇರಾವ್


ಮರಾಠಿ ಸಾಹಿತ್ಯ ನಿರ್ಮಿತಿಯಲ್ಲಿ ದಾಪುಗಾಲು ಇಡುತ್ತಿರುವ ಶ್ರೀನಿವಾಸ ಭಾಲೇರಾವ್ ಅವರು ದಲಿತ ಚಿಂತನೆಯನ್ನು ಮುಕ್ತವಾಗಿ ಪಸರಿಸಬಲ್ಲ ಮತ್ತು ಪ್ರಚಾರಿಸಬಲ್ಲ ವ್ಯಕ್ತಿ. ಪರಿಪೂರ್ಣವಾದ ಪ್ರಜ್ಞೆ, ಸತತ ಪ್ರಯತ್ನ ಮತ್ತು ಸಾಧಿಸುವ ಹಠ ಮುಪ್ಪರಿಗೊಂಡ ಭಾಲೇರಾವ ಅವರು ನಿರ್ಭಿಡೆಯಿಂದ ಲೇಖನಿಯನ್ನು ಝಳಪಳಿಸುವ ಕ್ರಾಂತಿಕಾರಿ ನಿಲುವಿನವರು.
ಪುಣೆಯ ಕರ್ವೆ ರಸ್ತೆಯಲ್ಲಿರುವ ಅಭಿನವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಭಾಲೇರಾವ ಅವರು ತಮ್ಮ ಸಹೋದ್ಯೋಗಿಗಳಿಗೂ ವಿದ್ಯಾರ್ಥಿ ಸಮುದಾಯಕ್ಕೂ ಪ್ರೀತಿಪಾತ್ರ ಗುರೂಜೀ ಆಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣ ಮತ್ತು ಅವರನ್ನು ವೈಚಾರಿಕವಾಗಿ ಪ್ರಬುದ್ಧಗೊಳಿಸುವ ಭಾಲೇರಾವ್ ಅವರ ಕಾರ್ಯಶೈಲಿ ನಿಜಕ್ಕೂ ಮೆಚ್ಚಿಕೆ ಗಳಿಸಿದೆ.
ಕೋಠೂನ ಆಲಾ ? (ಎಲ್ಲಿಂದ ಬಂದರು ?), ನಾಗವಂಶಿಯಾನಿ ತುಮಚೀ ಅಸ್ಮಿತಾ ಗೇಲಿ ಕೋಠೆ ? (ನಾಗವಂಶಜರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?), ಸ್ತ್ರೀರತ್ನ ಸಾವಿತ್ರಿಬಾಯಿ ಫುಲೆ, ಲೋಕೋತ್ತರ ಸಂತ ಗಾಡಗೆಬಾಬಾ, ರಾಜರ್ಷಿ ಶಾಹು ಮಹಾರಾಜ, ಮಿ ಸಾಹೇಬಾಂಚಿ ರಮಾ (ನಾನು ಸಾಹೇಬರ ರಮಾ), ಸಮ್ರಾಟ ಅಶೋಕ, ದಿ ಬ್ರಿಗೆಡಿಯರ್, ವಿಚಾರಾನಿ ಫುಟಲೆ ಪಂಖ (ವಿಚಾರದಿಂದ ಮೊಳೆತ ರೆಕ್ಕೆ) ಎಂಬ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ.
ಅಧ್ಯಯನಶೀಲ ಮತ್ತು ಚಿಂತನಶೀಲ ಅಧ್ಯಾಪಕ-ಲೇಖಕ ಆಗಿರುವ ಶ್ರೀನಿವಾಸ ಭಾಲೇರಾವ್ ಅವರು ಒಂದರ್ಥದಲ್ಲಿ ಕ್ರಾಂತಿಯ ಕಿಡಿಯೇ ಆಗಿದ್ದಾರೆ. ಪ್ರಸ್ತುತ ಲೇಖನವು ದಲಿತರ ಸ್ವಾಭಿಮಾನವನ್ನು ಬಡೆದೆಬ್ಬಿಸುವ ನಿಟ್ಟಿನಲ್ಲಿ ತುಂಬ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಮರಾಠಿಯಲ್ಲಿ ಈ ಕೃತಿ ಹತ್ತು ಮುದ್ರಣಗಳನ್ನು ಕಂಡಿದೆ.

ಪ್ರಕಾಶಕರಿಗೆ ಒಂದು ಪ್ರಶ್ನೆ !

ನಾಗವಂಶಜ ದಲಿತರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?
ಮೂಲ ಮರಾಠಿ : ಶ್ರೀನಿವಾಸ ಭಾಲೇರಾವ್
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಈ ಕಿರುಹೊತ್ತಿಗೆಯನ್ನು ನಾನು 2009 ರಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದೆ. ಲಡಾಯಿ ಪ್ರಕಾಶನದ ಶ್ರೀ ಬಸವರಾಜ್ ಸುಳೇಭಾವಿಯವರು ಹಠಕ್ಕೆ ಬಿದ್ದು ಈ ಕೃತಿಯನ್ನು ತಾವೇ ಪ್ರಕಟಿಸುವುದಾಗಿ ಹೇಳಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ನಾನು ಅದನ್ನು ಡಿ.ಟಿ.ಪಿ. ಮಾಡಿಸಿ ಅವರಿಗೆ ನೀಡಿದೆ. ಈ ನಡುವೆ ಅವರಿಗೆ ಏನೇನೋ ತೊಂದರೆಗಳು ಕಾಡಿದ್ದರಿಂದ ನಾನು ಕೇಳಲು ಹೋಗಲಿಲ್ಲ. ಅವರು ಆ ಹೊತ್ತಿಗೆಯ ಮುಖಪುಟ ಮತ್ತು ISBN ಸಂಖ್ಯೆ ಕೂಡ ನನಗೆ ನೀಡಿದ್ದಾರೆ. ಆದರೆ ವಿಚಿತ್ರವೆಂದರೆ ಇನ್ನೂ ಆ ಹೊತ್ತಿಗೆ ಮುದ್ರಣವಾಗಿಲ್ಲ. ಇದು ಯಾಕೆ ಹೀಗಾಯಿತೋ ನನಗೇ ಗೊತ್ತಾಗುತ್ತ ಇಲ್ಲ. ಲಡಾಯಿಯ ಬಸವರಾಜ್ ಸುಳೇಭಾವಿಯವರು ನನಗೆ ತುಂಬ ಆತ್ಮೀಯರಾಗಿದ್ದೂ ಬೇರೆ ಬೇರೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರೂ ಈ ಕೃತಿಗೆ ಯಾಕೆ ಅವರು ದಿವ್ಯ ಮೌನ ತಾಳಿದ್ದಾರೋ ನನಗಂತೂ ತಿಳಿಯುವುದಿಲ್ಲ. ಪ್ರತಿಸಲ ಕೇಳಿದಾಗೊಮ್ಮೆ ಆಶ್ವಾಸನೆ ಮಾತ್ರ ಸಿಗುತ್ತದೆ. ಇನ್ನು ಹತ್ತು ದಿನ, ಹದಿನೈದು ದಿನ, ಮುಂದಿನ ತಿಂಗಳು.... ಇತ್ಯಾದಿ. ಅವರ ಇಷ್ಟಪಟ್ಟು ಅನುವಾದ ಮಾಡಿಸಿದ ಇನ್ನೊಂದು ಮಹತ್ವದ ಕೃತಿಯ ಹಸ್ತಪ್ರತಿ ಕೂಡ ಅವರ ಕಡೆಯೇ ಇದೆ. ಅದಕ್ಕೂ ಮುಖಪುಟ ಮಾಡಿಸಿ, ISBN ಸಂಖ್ಯೆ ನೀಡಿದ್ದಾರೆ. ಆ ಕೃತಿಯ ಬಗ್ಗೆ ಹೇಳುವುದು ತುಂಬ ಇದೆ. ಪ್ರಜ್ಞಾವಂತರೂ ಅನ್ನಿಸಿಕೊಂಡವರೂ ಕೂಡ ಕೆಲವು ಸಲ ಹೇಗ್ಹೇಗೋ ನಡೆದುಕೊಳ್ಳುತ್ತಾರಲ್ಲ ? ನನ್ನ ಆ ಎರಡೂ ಪುಸ್ತಕಗಳನ್ನು ನನಗೆ ಬೇಕಾದ ಪ್ರಕಾಶಕರಿಂದ ಅಥವಾ ಸ್ವತಃ ನಾನೇ ಪ್ರಕಟ ಮಾಡುವ ಉಮೇದಿನಲ್ಲಿರುವೆ.

ಮಾತ್ಗವಿತೆ-125

ಒಂದಿಷ್ಟು ನಿನ್ನ ಮೈ ಅಲುಗಾಡಿಸು ;
ನಾನಿದ್ದರೂ ಇರಬಹುದು
ಕೆಳಗೆ ಬೀಳಬಹುದು !
ಜೊತೆಗೆ ಇನ್ನೂ ಕೆಲರಿರಬಹುದು !
ಸುಮ್ಮನೇ 'ಇಲ್ಲ, ಇಲ್ಲ' ಅಂತ
ಇರುವುದನ್ನೂ ಮುಚ್ಚಿಡಬೇಡ !
ಎದೆಯ ಬಗೆದು ನೋಡು
ಪುರಾಣದ ತೌಡಲ್ಲ !
ನಾನೇ ಇರಬೇಕೆಂದೇನೂ ಇಲ್ಲ
ಯಾಕೆಂದರೆ
ನೀನು ಹನುಮಂತನೂ ಅಲ್ಲ ;
ನಾನು 'ಆ ರಾಮ'ನೂ ಅಲ್ಲ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.