Sunday, December 16, 2012

ಸಿಸ್ಟರ್ ಜೆಸಿಂತಾ ಇಂತಹ ತ್ಯಾಗ ಬೇಕಿತ್ತಾ ?

                          ಡಾ. ಎಚ್.ಎಸ್.ಅನುಪಮಾ

ಸುದ್ದಿ ಸಂಗ್ರಹಣೆಯ ಸಲುವಾಗಿ ಮಾಡುವ ಹುಡುಗಾಟ ಹಾಗೂ ಅದರ ಹಿಂದಿನ ಹಪಾಹಪಿತನ ಏನೆಲ್ಲ ಅನಾಹುತ ಉಂಟು ಮಾಡಿಬಿಡುತ್ತದೆ ಎಂದು ಎಷ್ಟು ಸಾರಿ ಬರೆಯುವುದು? ಅದು ನಿಷ್ಕರುಣವಾಗಿ ಎಷ್ಟೋ ಅಮಾಯಕರ ಸಾವಿಗೆ ಕಾರಣವಾಗುತ್ತಿರುವುದನ್ನು ಹಿಂದಿನಿಂದಲೂ ನಾಗರಿಕ ಸಮಾಜ ಎತ್ತಿ ತೋರುತ್ತಲೇ ಬಂದಿದೆ. ಆದರೂ ಮರುಕಳಿಸುತ್ತಲೇ ಇರುವ ಈ ಬಗೆಯ ಘಟನೆಗಳು ಇಂತಹ ಹಪಾಹಪಿತನಕ್ಕೆ ಕೊನೆ ಎಂಬುದೇ ಇಲ್ಲವೇನೋ ಎನ್ನಿಸುವಂತೆ ಮಾಡುತ್ತಿವೆ. ಕೇಳುಗರಲ್ಲಿ ನಗೆಬುಗ್ಗೆ ಉಕ್ಕಿಸುವ ಸಲುವಾಗಿ ಮಾಡಿದ ಒಂದು ಹುಡುಗಾಟದ ಫೋನ್ ಕರೆ, ಬ್ರಿಟನ್ನಿನ ನರ್ಸ್ ಜೆಸಿಂತಾ ಸಲ್ಡಾನಾ ಸಾವಿನಲ್ಲಿ ಕೊನೆಗೊಂಡಿದೆ. ಇದು ಗಣ್ಯರ ಗುಟ್ಟುಗಳೆಂಬ ಹುಸಿ ಬಿಕ್ಕಟ್ಟಿಗೆ, ಸುದ್ದಿಮನೆಯ ಹುಡುಗಾಟಕ್ಕೆ ಅಮಾಯಕ ಜೀವ ಬಲಿಯಾದುದರ ದ್ಯೋತಕವಾಗಿದೆ.
ನಡೆದಿದ್ದಿಷ್ಟು: ಬ್ರಿಟಿಷ್ ರಾಜ ಮನೆತನದವರು ತಪಾಸಣೆ- ಚಿಕಿತ್ಸೆಗಾಗಿ ಸಾಮಾನ್ಯವಾಗಿ ಹೋಗುವುದು ಕಿಂಗ್ ಎಡ್ವರ್ಡ್-7 ಮೆಮೋರಿಯಲ್ ಆಸ್ಪತ್ರೆಗೆ. ಅಲ್ಲಿ 46 ವರ್ಷದ, ಭಾರತ ಮೂಲದ ಜೆಸಿಂತಾ ನಾಲ್ಕು ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬ್ರಿಟನ್ ರಾಜಮನೆತನದ ವಿಲಿಯಮ್ಸ  ಪತ್ನಿ ಕೇಟ್ ಎಂಬ ಎಳೆಬಸುರಿಯನ್ನು ವಾಂತಿಯ ಕಾರಣಕ್ಕಾಗಿ ಆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಕುರಿತ ತಾಜಾ ಸುದ್ದಿಗಾಗಿ ಆಸ್ಟ್ರೇಲಿಯಾದ ರೇಡಿಯೊ  ಚಾನೆಲ್ `2ಡೆ'ಯ ಡಿ.ಜೆಗಳು ರಾಣಿ ಎಲಿಜಬೆತ್ ಹಾಗೂ ಅವರ ಪತಿ ಫಿಲಿಪ್ ಮಾತನಾಡುತ್ತಿರುವುದು ಎಂದು ಹೇಳಿಕೊಂಡು ಆಸ್ಪತ್ರೆಗೆ ತಮಾಷೆಯ ಹುಸಿ ಕರೆ ಮಾಡಿದರು.
ರಿಸೆಪ್ಷನ್ ಡೆಸ್ಕ್‌ನಲ್ಲಿ ಯಾರೂ ಇಲ್ಲದಿದ್ದ ಕಾರಣ ಕರೆ ಸ್ವೀಕರಿಸಿದ ಜೆಸಿಂತಾ, ಕೇಟ್ ಕೋಣೆಗೆ ಸಂಪರ್ಕ ಕಲ್ಪಿಸಿದರು. ಆ ಕೋಣೆಯ  ನರ್ಸ್ ನೀಡಿದ ಗರ್ಭಿಣಿಯ ಆರೋಗ್ಯ ಮಾಹಿತಿ ರೇಡಿಯೊನಲ್ಲಿ ಬಿತ್ತರಗೊಂಡಿತು.
ವಿಷಯ ಇಷ್ಟೇ. ಕೇಟ್ ಗರ್ಭಿಣಿ ಎಂಬುದು ಮೊದಲೇ ಪ್ರಪಂಚಕ್ಕೆ ಬಹಿರಂಗಗೊಂಡಿತ್ತು. ಆ ಡಿ.ಜೆಗಳ ಕರೆಯೂ ಹುಡುಗಾಟದ್ದಾಗಿ ಸ್ವತಃ ಅವರಿಗೇ ತಮ್ಮ ಕರೆ ಸ್ವೀಕಾರವಾಗಬಹುದೆಂಬ ನಂಬಿಕೆ ಇರಲಿಲ್ಲ. ಆದರೆ ರೋಗಿಯ ಕಾಯಿಲೆಗೆ ಸಂಬಂಧಪಟ್ಟ ವಿಷಯಗಳನ್ನು ಹತ್ತಿರದ ಸಂಬಂಧಿಗಳಿಗೆ ಹೇಳಬಹುದೇ ಹೊರತು ಬಹಿರಂಗಗೊಳಿಸಬಾರದು ಎನ್ನುವುದು ವೈದ್ಯಕೀಯ ನೀತಿಸಂಹಿತೆಯ ಅಲಿಖಿತ ನಿಯಮ. ಅದನ್ನು ಪಾಶ್ಚಾತ್ಯ ಸಮಾಜಗಳು ತುಂಬ ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಅದರಲ್ಲೂ ರಾಜಮನೆತನದ ಸುದ್ದಿಯನ್ನು ಅಧಿಕೃತ ವಕ್ತಾರರಲ್ಲದವರು ಬಹಿರಂಗಗೊಳಿಸಿದ್ದು ಪ್ರಮಾದ ಎಂಬಂತೆ ಬಿಂಬಿಸಲಾಯಿತು.
ಎಷ್ಟೋ ಗರ್ಭಿಣಿಯರು ಮೊದಲ ಮೂರು ತಿಂಗಳು ಒಂದಗುಳು ಅನ್ನವೂ ಹೊಟ್ಟೆಯಲ್ಲಿ ಉಳಿಯದಂತೆ ವಾಂತಿ ಮಾಡುತ್ತಾರೆ. ಮೊದಲ ಬಸುರಿನಲ್ಲಿ ಇದು ಸರ್ವೇಸಾಮಾನ್ಯ. ಆದರೆ ಇಲ್ಲಿ ಬಯಕೆ ಸಂಕಟಕ್ಕೆ ಒಳಗಾಗಿದ್ದು ಬ್ರಿಟಿಷ್ ರಾಜಮನೆತನದ ಮಹಿಳೆ. ಮಗು ಹೆಣ್ಣಾಗಲಿ, ಗಂಡಾಗಲಿ, ಆಕೆ ಹೆರಲಿರುವುದು ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯನ್ನು. ಎಂದೇ ಎಲ್ಲರ ಪ್ರಶ್ನಾರ್ಥಕ ನೋಟ ಜೆಸಿಂತಾ ಕಡೆಗೆ ತಿರುಗಿದ್ದು. ಸುದ್ದಿ ಸೋರಿಕೆಯಿಂದ ಆಸ್ಪತ್ರೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿ ಅದು ರಾಜಮನೆತನದವರ ಕ್ಷಮೆ ಕೇಳಿತು. ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿತು. ವಿಚಾರಣೆ, ತನಿಖೆ, ಮಾಧ್ಯಮದ ಪ್ರಶ್ನೆಗಳು ಎಲ್ಲವನ್ನೂ ಊಹಿಸಿಯೇ ಗಾಬರಿಗೊಂಡ ಜೆಸಿಂತಾ ಅದಾದ ಮೂರು ದಿನಗಳ ನಂತರ ಒಂದು ಬೆಳಿಗ್ಗೆ ಆಸ್ಪತ್ರೆಯ ಹತ್ತಿರದಲ್ಲೇ ಇರುವ ಅಪಾರ್ಟ್‌ಮೆಂಟಿನಲ್ಲಿ ಸಾವಿಗೆ ಶರಣಾದರು.
ಇಷ್ಟು ಸಣ್ಣ ವಿಷಯಕ್ಕೆ ಜೆಸಿಂತಾ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದರೇ? ಜೀವ ಉಳಿಸುವ ವೃತ್ತಿಬದುಕಿನ ಒತ್ತಡವು ಜೀವ ಬೇಡ ಎನ್ನಿಸುವ ಮಟ್ಟಿಗಿರುವುದೇ? ಅಥವಾ ಜೆಸಿಂತಾ ಅತಿ ಸೂಕ್ಷ್ಮ ವ್ಯಕ್ತಿಯಾಗಿದ್ದು ಹೀಗಾಯಿತೇ? ಗಣ್ಯರ ಗುಟ್ಟುಗಳಾದರೂ ಎಂಥವು? ಆ ಬದುಕಾದರೂ ಎಂಥದು? ಸುದ್ದಿ ಸೋರಿಕೆ ಆಸ್ಪತ್ರೆ ಸಿಬ್ಬಂದಿಯ ಜೀವ ಬಲಿಯಾಗುವಷ್ಟು ದೊಡ್ಡ ವಿಷಯವೇ? ಹೀಗೆ ಈ ಪ್ರಕರಣ ಅನೇಕ ಪ್ರಶ್ನೆಗಳನ್ನು ಎತ್ತಿದೆ.
                                                                                    ***
ಪಾಶ್ಚಾತ್ಯ ಸಮಾಜ, ಅದರಲ್ಲೂ ಬ್ರಿಟನ್ ಅತಿ ಶಿಷ್ಟ ಸಮಾಜ. ಅಲ್ಲಿ ಕೆಲ ವಿಷಯಗಳು ಎಷ್ಟು ಮುಕ್ತವೋ ಮತ್ತೆ ಕೆಲವು ಅಷ್ಟೇ ಖಾಸಗಿ. ಖಾಸಗಿತನದ ಪರಾಕಾಷ್ಠೆ ಗಣ್ಯ ವ್ಯಕ್ತಿಗಳಿಗೆ ತಂತಾನೇ ಸಿಕ್ಕಿರುತ್ತದೆ ಅಥವಾ ಖಾಸಗಿತನವನ್ನು ಮಾರ್ಕೆಟ್ ಮಾಡುವುದು ಆ ಗಣ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉಳಿದ ಮನುಷ್ಯರಂತೆಯೇ ಉಂಡು- ತಿಂದು- ಹೆತ್ತು- ಅತ್ತು ಬದುಕುವ ಗಣ್ಯರು ಸಹ ಮನುಷ್ಯರು ಎನ್ನುವುದನ್ನೇ ಸಮಾಜ ಮತ್ತು ಮಾಧ್ಯಮ ಮರೆಯತೊಡಗಿವೆ. ಎಂದೇ ಹೈ ಪ್ರೊಫೈಲ್ ಗಣ್ಯ ವ್ಯಕ್ತಿಗಳ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದು ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ರೋಚಕ ವಿಷಯವಾಗಿದೆ. `ಅರಸನ ಕಣ್ಣಿಗೆ ಬೀಳಬಾರದು' ಎನ್ನುವುದು ಜನಸಾಮಾನ್ಯರ ಹಳೆಯ ಗಾದೆ ಮಾತಾಯಿತು. ಈಗ ಅರಸ ಜನರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಓಡಬೇಕಾದ ಪರಿಸ್ಥಿತಿ ಇದೆ!
ಬ್ರಿಟನ್ ರಾಜಮನೆತನದ ಬಳಿ ಈಗ ಅಧಿಕಾರವಿದೆಯೋ ಇಲ್ಲವೋ, ಜನಸಮುದಾಯದ ಮೇಲೆ ಅದರ ಹಿಡಿತ ಎಷ್ಟು ನಗಣ್ಯವೋ -ಆದರೆ ಆ ಕುಟುಂಬದ ಗಣ್ಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅವರು ಈಗಲೂ ಸಮಾಜದ ಏಣಿ ಶ್ರೇಣಿಯ ತುತ್ತತುದಿಯಲ್ಲಿರುವ ಆಳುವ ವರ್ಗದ ಗಣ್ಯರು. ವಿಶ್ವದಾದ್ಯಂತ ತನ್ನ ವಸಾಹತುಗಳನ್ನು ಹೊಂದಿದ್ದ ಪುಟ್ಟ ದ್ವೀಪ ರಾಷ್ಟ್ರದ ರಾಜರಾಣಿಯರು ವಸಾಹತು ರಾಷ್ಟ್ರಗಳಿಗೂ ರಾಜರಾಣಿಯರಾಗಿದ್ದರು. ಹೀಗಾಗಿ  ಬ್ರಿಟಿಷ್ ಕಾಮನ್ವೆಲ್ತ್ ದೇಶಗಳಲ್ಲಿ ರಾಜಮನೆತನದ ಬಗ್ಗೆ ಕುರುಡು ಅಭಿಮಾನ, ಭಕ್ತಿ, ಕುತೂಹಲ ಸ್ವತಂತ್ರಗೊಂಡ ನಂತರವೂ ಹಾಗೇ ಮುಂದುವರಿದಿದೆ. ಉಳಿದ ದೇಶಗಳ ರಾಜ ಮನೆತನಕ್ಕಿಂತ ಅಥವಾ ಆಳುವ ಗಣ್ಯರಿಗಿಂತ ಹೆಚ್ಚು ಸ್ಥಾನ, ಘನತೆ ಬ್ರಿಟನ್ ರಾಜಮನೆತನಕ್ಕೆ ಅಬಾಧಿತವಾಗಿ ದೊರಕಿದೆ.
ಕುತೂಹಲಕ್ಕೆ ರೆಕ್ಕೆ ಬಂದಾಗ
ಈ ಅನುತ್ಪಾದಕ ವಿರಾಮ ವರ್ಗವಾದ ಗಣ್ಯರ ಎಲ್ಲ ಚಟುವಟಿಕೆಗಳು ಜನರಲ್ಲಿ ಅತ್ಯಾಸಕ್ತಿ ಕೆರಳಿಸುವುದು ಹೇಗೆ ಎನ್ನುವುದು ಅಚ್ಚರಿಯ ಸಂಗತಿ. ಕಣ್ಣಿಗೆ ರಾಚುವಂತಹ ಉಪಭೋಗದ ಪ್ರದರ್ಶನಗಳು ಜನರ ಕುತೂಹಲ ಕೆರಳಿಸುತ್ತವೆ. ಮಾಧ್ಯಮಗಳೂ ಅಷ್ಟೆ, ಗಣ್ಯತೆಯನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಲೇ ಪರೋಕ್ಷವಾಗಿ ಅವರನ್ನು ರಕ್ಷಿಸುತ್ತವೆ. ಆಡಳಿತ ವಿಧಾನವಾಗಿ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ಜನಸಮುದಾಯದ ಮನಸ್ಸು ರಾಜಮನೆತನಕ್ಕೆ ಭಾವನಾತ್ಮಕವಾಗಿ ಹೊಂದಿಕೊಂಡಿರುವುದನ್ನು ನೋಡಿದರೆ ಶೋಷಿತ- ಶೋಷಕ; ಆಳುವವ- ಆಳಿಸಿಕೊಳ್ಳುವವ; ಉತ್ಪಾದಕ- ಅನುತ್ಪಾದಕ ವರ್ಗಗಳ ಸಂಬಂಧ ಕುರಿತು ಯೋಚಿಸುವಂತಾಗುತ್ತದೆ. ಗಣ್ಯತೆಯ ಉಳಿವಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಬಲಿಯಾಗುವ ಬದುಕುಗಳು ವಿಷಾದ ಹುಟ್ಟಿಸುತ್ತವೆ. 
ಅತಿ ಶಿಷ್ಟಾಚಾರದ ಪಾಶ್ಚಾತ್ಯ ಬದುಕು ಸೃಷ್ಟಿಸುವ ಗಣ್ಯತೆ ಮುಕ್ತ ಚಲನೆ ಸಾಧ್ಯವಿರದ ಲೋಕ. ಬೆಂಬತ್ತುವ ಕುತೂಹಲಿಗಳ ಎದುರು ತೆರೆದುಕೊಂಡ ಜಾತ್ರೆಯೊಳಗಿನ ಬದುಕು ಅದು. ಅಲ್ಲಿ ಗಣ್ಯರಾಗಿ ಉಳಿಯಬೇಕಾದರೆ ಎಲ್ಲರಿಗಿಂತ ಬೇರೆಯಾಗಿ ಗಾಜಿನ ಮನೆಯಲ್ಲಿ ಬದುಕಬೇಕು. ಗಾಜು ಒಡೆವ ಅಪಾಯ, ಪಾರದರ್ಶಕವಾದದ್ದು ಮಾರುಕಟ್ಟೆ ಸರಕಾಗುವ ಅಪಾಯ ಸದಾ ಇದ್ದೇ ಇರುತ್ತದೆ. ಎಂದೇ ತಮ್ಮ ಖಾಸಗಿ ವಿವರಗಳಲ್ಲಿ ಯಾವುದನ್ನು ಯಾರು ಯಾವಾಗ ತಿಳಿಯಪಡಿಸಬೇಕೆಂದು ನಿರ್ಧರಿಸುವುದು ಗಾಜಿನ ಅರಮನೆಯ ಗಣ್ಯರ ಬದುಕಿನ ಭಾಗವೇ ಆಗಿದೆ. ಅವರ ದೇಹ, ಸೌಂದರ್ಯ, ಆರೋಗ್ಯ, ವೈಯಕ್ತಿಕ ಏರಿಳಿತ, ಸಂಬಂಧ, ಬಿಕ್ಕಟ್ಟು ಮತ್ತಿತರ ದೈನಂದಿನ ಬದುಕಿನ ಸಣ್ಣಪುಟ್ಟ ವಿವರಗಳೂ ಉಳಿದವರ ಗಮನ ಸೆಳೆದು ಗಣ್ಯತೆ ಗಟ್ಟಿಯಾಗುತ್ತದೆ. ಆರ್ಥಿಕ ಕಾರಣಗಳು ಅವರ ವರ್ತನೆಯನ್ನು ನಿಯಂತ್ರಿಸತೊಡಗುತ್ತವೆ.
ಇದು ಗಣ್ಯರ ಬಯಲು
ಗಣ್ಯತೆ ಒಂದು ಬಯಲು. ಆದರೆ ಅದು ಅಕ್ಕ ಅಲ್ಲಮರ, ವಿವೇಕಾನಂದರ, ಗಾಂಧಿ ಅಂತಹವರ ಬಯಲಲ್ಲ. ಅದು ಅಧಿಕಾರದ ಬಯಲು. ಅಲ್ಲಿಂದ ತಪ್ಪಿಸಿಕೊಳ್ಳಲೆಂದೇ ಬಿಲಗಳಿರುತ್ತವೆ. ಆದರೆ ಮಾಧ್ಯಮದ ಬಾಹು ಎಷ್ಟುದ್ದ ಮತ್ತು ಎಲ್ಲೆಲ್ಲ ಚಾಚುತ್ತದೆಂದರೆ ಅದು ಬಿಲ, ಹುತ್ತ, ಗವಿ, ಸುರಂಗಗಳನ್ನೆಲ್ಲ ಜಾಲಾಡುತ್ತದೆ. ಸುದ್ದಿ ಸಿಗದಿದ್ದರೆ ಊಹಾಪೋಹಗಳ ವಾಸನೆಯನ್ನಾದರೂ ಹಿಡಿಯುತ್ತದೆ. ಈ ಸುದ್ದಿ ಮನೆಯ ಆತುರಗಾರರಿಗೋ ಸುದ್ದಿ ಸಂಗ್ರಹಣೆಯಷ್ಟೇ ಕೆಲಸ. ಮನೋವ್ಯಾಪಾರದ ಉಳಿದ ಸೂಕ್ಷ್ಮಗಳಾವುವೂ ಅವರ ಗಮನಕ್ಕೆ ಬರುವುದೇ ಇಲ್ಲ. ಅವರ ದುಷ್ಟ ಕುತೂಹಲದ ಕಣ್ಣುಗಳೇ ಬ್ರಿಟನ್ ರಾಜಮನೆತನದ ಡಯಾನಾ ಸಾವಿಗೆ ಕಾರಣವಾದವು.
ಆಸ್ಟ್ರೇಲಿಯಾದ ಡಿ.ಜೆ.ಗಳು ಬ್ರಿಟನ್ ರಾಜಮನೆತನದ ಸುದ್ದಿಗಾಗಿ ಹಪಹಪಿಸುವಂತೆ ಮಾಡಿತು. ಸೂಕ್ಷ್ಮ ಪ್ರವೃತ್ತಿಯ ಜೆಸಿಂತಾ ಸಾವಿಗೂ ಕಾರಣವಾಯಿತು. ಆದರೆ ವೇಗದಲ್ಲಿ ಚಲಿಸುವ ವಾಹನದ ಗಾಲಿಯಾದರೋ ತನ್ನಡಿಗೆ ಸಿಕ್ಕಿ ಜೀವ ಬಲಿಯಾದದ್ದು ತನ್ನ ಅಪರಾಧ ಅಲ್ಲವೇ ಅಲ್ಲ ಎಂದೇ ಭಾವಿಸುತ್ತದೆ.
ಮೇಲಿನ ಘಟನೆ ವೈದ್ಯಕೀಯದಂತಹ ವೃತ್ತಿಪರ ಕೆಲಸಗಳಲ್ಲಿ ತೊಡಗಿರುವವರಿಗೆ ಉದ್ಯೋಗ ಸಂಬಂಧಿ ಒತ್ತಡ ಅತಿಯಾಗಿ ಆತ್ಮಹತ್ಯಾ ಮನೋಭಾವ ಹೆಚ್ಚುತ್ತಿರುವುದರ ಸೂಚಕವೂ ಹೌದು. ಜೊತೆಗೆ ಪ್ರತಿಯೊಬ್ಬರೂ ತಾವು ವಾಸಿಸುತ್ತಿರುವ ನೆಲದ ಕಾನೂನುಗಳ ಕನಿಷ್ಠ ಜ್ಞಾನ ಹೊಂದಿ ಅನವಶ್ಯಕ ಪ್ರಕರಣಗಳ ಒತ್ತಡದಿಂದ ಪಾರಾಗಬಹುದು ಎಂದು ತಿಳಿಸುವ ಪಾಠವೂ ಹೌದು.
 
                                                                          *****
`2ಡೆ' ರೇಡಿಯೊ ಸಂಸ್ಥೆ ಜೆಸಿಂತಾ ಕುಟುಂಬಕ್ಕೆ 2.85 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ ತಾಯಿಯನ್ನು ಕಳೆದುಕೊಂಡ ಇಬ್ಬರು ಹದಿಹರೆಯದ ಮಕ್ಕಳ ತಲ್ಲಣದ ಮುಖ ಕಣ್ಣು ಮಂಜಾಗಿಸುತ್ತದೆ. ಅವರ ತಬ್ಬಲಿತನಕ್ಕೆ ಯಾವ ಪರಿಹಾರ ಇದೆ ?
                                                                             

ರೇಡಿಯೊ ಜಾಕಿಗಳ ಈ ರೀತಿಯ ವರ್ತನೆ ಸರಿಯಲ್ಲ. ಒಂದು ರಾಯಲ್ ಕುಟುಂಬದಲ್ಲಿ ಏನೋ ಗೋಪತ್ಯೆ ಇರುತ್ತದೆ. ಅದು ಅವರ ಖಾಸಗಿ ವಿಷಯ. ಅದನ್ನು ಬಹಿರಂಗ ಮಾಡುವುದು ಸರಿಯಲ್ಲ.
ರೇಡಿಯೊ ಜಾಕಿಗಳಿಗೂ ಅರಿವಿರಬೇಕು. ಅದೂ ಅಲ್ಲದೆ ಅವರಿಗೆ ಈ ರೀತಿ ಖಾಸಗಿ ಮಾಹಿತಿಯ ಬೆನ್ನತ್ತಬಾರದು ಎಂಬ ತರಬೇತಿ ಕೂಡ ಕೊಟ್ಟಿದ್ದೇವೆ ಎಂದು ಸಂಸ್ಥೆ ಹೇಳಿದೆ. ಹಾಗಿದ್ದರೂ ಅವರು ಇನ್ನೊಬ್ಬರ ವೈಯಕ್ತಿಕ ಮಾಹಿತಿಯನ್ನು ಈ ರೀತಿ ಪ್ರಚಾರ ಮಾಡಿದ್ದು ಸರಿಯಲ್ಲ.
ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬ ನಿಜಾಂಶ ತನಿಖೆಯ ನಂತರ ತಿಳಿಯಬೇಕು. ಅವರ ಮೇಲೂ ಸಾಕಷ್ಟು ಒತ್ತಡ ಇರಬಹುದು. ಹಾಗಾಗಿ ಅವರ ಸಾವಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ.
ವಿದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಯತ್ತ ಹೆಚ್ಚು ಗಮನ ನೀಡಬೇಕು. ಅವರಿಗೆ ಸರಿಯಾದ ಭದ್ರತೆ ಒದಗಿಸಿಕೊಡಬೇಕು. ಮಹಿಳೆಯರಿಗೆ ತೊಂದರೆಯಾದರೆ ಅವರು ನೇರವಾಗಿ ಸಂಪರ್ಕಿಸಬಹುದಾದ ಸಹಾಯ ಘಟಕವನ್ನು ಸರ್ಕಾರ ಒದಗಿಸಬೇಕು. ಇದರಿಂದ ಮಹಿಳೆ ನೆಮ್ಮದಿಯಾಗಿ ಇರಬಹುದು.
- ಗೀತಾ ಕೃಷ್ಣಮೂರ್ತಿ, ಕಾನೂನು ಬರಹಗಾರ್ತಿ
ಬೇರೆಯವರ ಬಗ್ಗೆ ಅತಿ ಕುತೂಹಲ ಪ್ರವೃತ್ತಿಯೇ ಇಂತಹ ದುರಂತಕ್ಕೆ ಕಾರಣ. ಸಾರ್ವಜನಿಕರನ್ನು ಇಂತಹ ಕುತೂಹಲಗಳಲ್ಲಿ ಕುಣಿಸುತ್ತಿರುವವರು ಕೂಡ ಈ ರೇಡಿಯೊ ಜಾಕಿಗಳೇ. ಇವರ ಹುಡುಗಾಟದಿಂದ ಒಂದು ಜೀವ ಬಲಿಯಾಗಿದೆ. ಎಲ್ಲದಕ್ಕೂ ಒಂದು ಮಿತಿ ಇರಬೇಕು. ಸಭ್ಯತೆಯ ಎಲ್ಲೆ ಮೀರಿ ಹೋಗಬಾರದು. ಜೆಸಿಂತಾ ಸಾವಿನಿಂದ ಅವರ ಮನೆಯವರ ಮೇಲೆ ಆಗಿರುವ ಪರಿಣಾಮವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ದೊಡ್ಡ ಮೊತ್ತದ ಪರಿಹಾರ ನೀಡುವ ಮೂಲಕ ಸತ್ತವರು ತಿರುಗಿ ಬರುವುದಿಲ್ಲ. ಅವರ ಕುಟುಂಬದವರ ಹೃದಯದ ನೋವು ನೀಗುವುದಿಲ್ಲ. ಇನ್ನಾದರೂ ಸರ್ಕಾರ ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಂತಹ ತಮಾಷೆ ಮಾಡುವ ಧೈರ್ಯವನ್ನು ಯಾರೂ ಮಾಡಬಾರದು. ಇಂತಹವರಿಗೆ ಸರಿಯಾದ ಪಾಠ ಕಲಿಸಬೇಕು.
ಬೇರೆ ದೇಶದಲ್ಲಿ ನೆಲೆಸಿರುವ ಹೆಣ್ಣು ಮಕ್ಕಳ ಭದ್ರತೆಯತ್ತ ಹೆಚ್ಚು ಗಮನ ನೀಡಬೇಕು. ಕರಾರು ಪತ್ರಗಳಲ್ಲಿ ನಮ್ಮ ದೇಶದ ಹೆಣ್ಣು ಮಕ್ಕಳ ಜೀವಕ್ಕೆ ಹಾನಿಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಸಂದೇಶವನ್ನು ಆ ದೇಶದ ಸರ್ಕಾರಕ್ಕೆ ನೀಡಬೇಕು. ಇದರಿಂದ ಬೇರೆ ದೇಶದವರು ಜವಾಬ್ದಾರಿಯಿಂದ ಇರುತ್ತಾರೆ.
- ಭಾರತಿ ಕಾಸರಗೋಡು, ಲೇಖಕಿ
ಬೇರೆಯವರ ಖಾಸಗಿ ವಿಷಯದಲ್ಲಿ ಮಜಾ ತೆಗೆದುಕೊಳ್ಳುವುದು ವಿಕೃತ ಮನೋಭಾವ. ಜೆಸಿಂತಾ ಪ್ರಕರಣದಲ್ಲಿ ರೇಡಿಯೊ ಜಾಕಿಗಳು ಮಾಡಿದ್ದು ಇದನ್ನೇ. ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಈ ರೀತಿ ಇನ್ನೊಬ್ಬರ ಬದುಕಿನ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ತಪ್ಪು. ಅಷ್ಟಕ್ಕೂ ಬಸಿರು, ಬಾಣಂತನ ಪ್ರಕೃತಿ ಸಹಜವಾದದ್ದು. ಇದೇನೂ ಹೊಸದಲ್ಲ. ಅವರ ವಿಷಯವನ್ನು ತಿಳಿಯುವ ಕೆಟ್ಟ ಕುತೂಹಲ ಏಕೆ? ಅಂತಹ ಕುತೂಹಲದಿಂದ ಒಂದು ಜೀವಕ್ಕೆ  ಆಗುವ ಹಾನಿಯನ್ನು ಒಂದು ಕ್ಷಣವಾದರೂ ಯೋಚಿಸಬೇಕಿತ್ತು.
ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಒಂದು ದೇಶ ಬಿಟ್ಟು ಇನ್ನೊಂದು ದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಗೆ ಒತ್ತು ನೀಡಬೇಕು. ಆ ದೇಶದ ಕಾನೂನು ಬೇರೆ ರೀತಿ ಇರುತ್ತದೆ. ಅದರ ಬಗ್ಗೆ ಅರಿವು ಮೂಡಿಸಬೇಕು.
- ಎನ್.ಗಾಯತ್ರಿ, ಲೇಖಕಿ
ಎಲ್ಲ ವಿಷಯವನ್ನು ಹೇಳಬೇಕು ಎಂಬ ಖುಷಿಗಾಗಿ ಮಾಡಿದ ಒಂದು ಕರೆ ಒಂದು ಜೀವಕ್ಕೇ ಕುತ್ತು ತಂದಿದೆ. ಇದರಿಂದ ಒಂದು ಜೀವ ಹೋಗುತ್ತದೆ ಎಂಬ ಅರಿವು ರೇಡಿಯೊ ಜಾಕಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇನ್ನೊಬ್ಬರ ಖಾಸಗಿ ವಿಷಯವನ್ನು ಪ್ರಚಾರ ಮಾಡುವುದು ತಪ್ಪು.
ವಿದೇಶದಲ್ಲಿ ಇರುವ ಭಾರತೀಯ ಮಹಿಳೆಯರ ಬಗ್ಗೆ ಸರ್ಕಾರ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ರೀತಿಯ ಆಪ್ತ ಸಲಹೆಗಳನ್ನು ನೀಡುವ ಮೂಲಕ ಅವರನ್ನು ಮಾನಸಿಕವಾಗಿ ಸದೃಢಗೊಳಿಸಬಹುದು. ಇಂತಹ ಕ್ರಮಗಳನ್ನು ತೆಗೆದುಕೊಂಡರೆ ಈ ರೀತಿಯ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.
-  ಮಹೇಶ್ ಗೌಡ, ಮನೋವಿಜ್ಞಾನಿ

 
ಸಂದರ್ಶನ: ಪವಿತ್ರ ಶೆಟ್ಟಿ  
ಕೃಪೆ : ಪ್ರಜಾವಾಣಿ : 15-12-2012 

1 comment:

  1. ಯಾವ ದೇಶವೇ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಖಾಸಗಿ ವಿಷಯಗಳನ್ನು ಗೌಪ್ಯವಾಗಿಟ್ಟುಕೊಳ್ಳುವ ಹಕ್ಕು ಇದೆ. ಸ್ವರ ಬದಲಾಯಿಸಿ ಇನ್ನೊಬ್ಬರ ಜೀವನದ ಜೊತೆಗೆ ತಮ್ಮ ಕೆಲಸ ಹಾಗೂ ಹೆಸರಿಗಾಗಿ ಈ ರೀತಿಯ ಕರೆ ಮಾಡುವ ರೇಡಿಯೋ ಜಾಕಿಗಳ ಹುಚ್ಚುಚ್ಚಾಟದಿಂದ ನೊಂದ ಮನಸುಗಳೆಷ್ಟೋ ಇವೆ. ಇದಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಇನ್ನಷ್ಟು ಜೀವಗಳ ಬಲಿ ನಿಶ್ಚಿತ.

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.