Thursday, March 05, 2015

ಕೃತಿಚೌರ್ಯ : 'ಅದು ಬ್ಯಾರೆ ಐತಿ'

ನಾನು 1993-94 ರಲ್ಲಿ ಬರೆದ 'ಅದು ಬ್ಯಾರೆ ಐತಿ' ಅನ್ನುವ ಹಾಡು ನಾಡು ಸುತ್ತಿ ತುಂಬ ಪ್ರಸಿದ್ಧವಾಗಿದೆ. ಆದರೆ ಬರುಬರುತ್ತ ಕೆಲವರು ಅದನ್ನು ತಾವೇ ಬರೆದುದಾಗಿ ಹೇಳಿಕೊಳ್ಳುತ್ತ ತಿರುಗಾಡಿ ಹಾಡಿದರು. ನನ್ನ ಸಮ್ಮುಖದಲ್ಲಿ ಅಂಥ ಪ್ರಸಂಗ ಬಂದಾಗ ನಾನು ಆಕ್ಷೇಪ ವ್ಯಕ್ತಪಡಿಸಿ ತಿಳಿ ಹೇಳಿದ್ದೇನೆ. ಇಂತಹ ಗೊಂದಲ ಬೇಡ ಎಂದು 2003 ರಲ್ಲಿ ನನ್ನ 'ಮೋಡ ಕಟ್ಟೇತಿ' ಕವನ ಸಂಕಲನದಲ್ಲಿ ಈ ಹಾಡನ್ನು ಸೇರಿಸಿ ಸುಮ್ಮನಾಗಿದ್ದೆ. ಆದರೆ ಇತ್ತೀಚೆಗೆ ಯಾರೋ ಒಬ್ಬ ವ್ಯಕ್ತಿ ಆ ಹಾಡನ್ನು ತನ್ನ ಹೆಸರು ಹಾಕಿಕೊಂಡು ಸಿ.ಡಿ. ಮಾಡಿ ಹೆಸರು ಮಾಡಿದ್ದಾನೆ. ಸಾಕಷ್ಟು ದುಡ್ಡೂ ಹೊಡೆದುಕೊಂಡಿದ್ದಾನೆ ಎಂದು ತಿಳಿದುಕೊಂಡಿರುವೆ. ಹಾಡನ್ನೂ ಸಾಕಷ್ಟು ಹದಗೆಡಿಸಿದ್ದಾನೆ. ಇದು ಅಕ್ಷಮ್ಯವಾಗಿದೆ. ಕೃತಿಚೌರ್ಯ ಮಾಡಿದ್ದಕ್ಕೆ ಆತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಡಿನಲ್ಲಿ ಆತ ನೀಡಿದ ಮೊಬೈಲ್ ನಂಬರ್ ಗೆ ನಾನು ಸಾಕಷ್ಟು ಸಲ ಕಾಲ್ ಮಾಡಿದರೂ 'ನಾಟ್ ರೀಚೇಬಲ್' ಆಗಿದೆ. ದಯವಿಟ್ಟು ನನ್ನ ಹಾಡನ್ನು ಕೃತಿಚೌರ್ಯ ಮಾಡಿ ಐನಾಪುರದ ಸುರೇಶ ಎನ್ನುವಾತನ ಸರಿಯಾದ ವಿಳಾಸ ಸಿಕ್ಕಿದರೆ, ಆ ಹಾಡನ್ನು ಹೊರತಂದ ರೀಕಾರ್ಡಿಂಗ್ ಸಂಸ್ಥೆಯ ವಿಳಾಸವನ್ನು ಯಾರಾದರೂ ನೀಡಿದರೆ ನಾನು ಕೈಗೊಳ್ಳುವ ಮುಂದಿನ ಕ್ರಮಕ್ಕೆ ಅನುಕೂಲವಾಗುತ್ತದೆ.
2003 ರಲ್ಲಿ ನಾನು ಪ್ರಕಟಿಸಿದ ಹಾಡಿನ ಪೂರ್ಣಪಾಠವನ್ನು ಇಲ್ಲಿ ನೀಡುತ್ತಿರುವೆ :
 

ಮಾತು ಆಡಿದರೆ ಮುತ್ತು ಒಡೆದರೆ
ಮತ್ತೇ ಸಿಗುವುದಿಲ್ಲೋ/ ಅದು ಬ್ಯಾರೆ ಐತಿ
ದುನ್ಯಾದಾಗ ದೊಡ್ಡವರಾಗಿ ಮೆರಿತಾರು
ಬೆವರಿನ ದುಡಿತಲ್ಲೋ / ಅದು ಬ್ಯಾರೆ ಐತಿ


ಹುಟ್ಟಿಸಿದ ದೇವರು ಹುಲ್ಲು ಮೇಯ್ಸೋದಿಲ್ಲ
ಅನ್ನುತ್ತಾರೋ ಎಲ್ಲ / ಅದು ಬ್ಯಾರೆ ಐತಿ
ತಮ್ಮ ಕೆಲಸಕ ದೇವರ ಹೆಸರ
ಹೇಳತಾರೋ ಮಂದಿ / ಅದು ಬ್ಯಾರೆ ಐತಿ

ಮಾಸ್ತರು ಇಲ್ಲ ಮಕ್ಕಳು ಇಲ್ಲ
ಸಾಲಿ ನಡಿಯೋದ್ಯಾಂಗೋ / ಅದು ಬ್ಯಾರೆ ಐತಿ
ಸಂಪೂರ್ಣ ಸಾಕ್ಷರ ಅಂತ ಹೇಳತಾರು
ಕಲಿತಾವರ್ಯಾರಿಲ್ಲೋ / ಅದು ಬ್ಯಾರೆ ಐತಿ

ನೌಕರಿ ಇಲ್ಲ ಚಾಕರಿ ಇಲ್ಲ
ಅನ್ನತಾರೋ ಎಲ್ಲ / ಅದು ಬ್ಯಾರೆ ಐತಿ
ತಿಂದುಂಡ ತಿರುಗಾಡಿ ಮಜಾ ಮಾಡತಾರು
ಬರ್ತೈತೆಲ್ಲಿಂದ / ಅದು ಬ್ಯಾರೆ ಐತಿ

ತುಂಬಿದ ಸಂತ್ಯಾಗ ಕಳ್ಳರು ಬಂದರ
ಪೋಲೀಸ್ರು ನೋಡಲ್ಲೋ / ಅದು ಬ್ಯಾರೆ ಐತಿ
ರೊಕ್ಕ ಕಳ್ಕೊಂಡ್ರ ಸುಮ್ಮನಿರಬೇಕು
ತಿರುಗಿ ಬರವುದಿಲ್ಲೋ / ಅದು ಬ್ಯಾರೆ ಐತಿ

ರೇಶನ್ ಇದ್ರೂ ನಮಗ ಸಿಗುವುದಿಲ್ಲ
ಹೋಗ್ತೈತಿ ಎಲ್ಲೋ / ಅದು ಬ್ಯಾರೆ ಐತಿ
ತಿನ್ನೋ ಕೂಳಿನ್ಯಾಗ ಕಲಬೆರಕಿ ಮಾಡಿ
ಮಣ್ಣ ತಿನಸತಾರೋ / ಅದು ಬ್ಯಾರೆ ಐತಿ

ಪೂಜಾರಿ ಮನಿ ಬಂಗ್ಲೆಯಾಗತೈತಿ
ದೇವರು ಮಾಡಿಲ್ಲೊ / ಅದು ಬ್ಯಾರೆ ಐತಿ
ಎಲ್ಲಾ ಬಿಟ್ಟ ಸ್ವಾಮಿಗೋಳ ಇಂದು
ಭಾನಗಡಿ ಮಾಡತಾರೋ / ಅದು ಬ್ಯಾರೆ ಐತಿ

ವೋಟು ಹಾಕದಿದ್ರು ಮಂತ್ರಿಯಾಗತಾರು
ಮಾಯ ಅನ್ನಬ್ಯಾಡ್ರೋ / ಅದು ಬ್ಯಾರೆ ಐತಿ
ಕಾಗದ ಮ್ಯಾಲ ಕಾರ್ಯ ಮಾಡತಾರು
ಬಳಕೆಗೆ ಬಂದಿಲ್ಲೋ / ಅದು ಬ್ಯಾರೆ ಐತಿ

ಚೆಂದಾನ ಚೆಲ್ವೇರ ಬಿಸಿಲಾಗ ಬಂದರ
ಸುಕ್ಕಗಟ್ಟತಾರೋ / ಅದು ಬ್ಯಾರೆ ಐತಿ
ನಡಾ ಬಳುಕಿಸಿ ನಡಿಯುವರೆಲ್ಲ
ನಾರಿಯರಲ್ಲವೋ / ಅದು ಬ್ಯಾರೆ ಐತಿ

ಪರಾದ ವಯದಾಗ ಹಾರಾಡಿ
ಹಾಳ ಆಗತಾರೋ / ಅದು ಬ್ಯಾರೆ ಐತಿ
ಪ್ರೀತಿ-ಪ್ರೇಮದ ನಾಟಕವಾಡಿ
ಕೈಯ ಬಿಡತಾರೋ / ಅದು ಬ್ಯಾರೆ ಐತಿ

ಮಂದ ಬೆಳಕಿನ್ಯಾಗ ಬಸ್ಟ್ಯಾಂಡ್ ಮ್ಯಾಗ
ಲಲನೇರ ಬರ್ತಾರೋ / ಅದು ಬ್ಯಾರೆ ಐತಿ
ರೊಕ್ಕ ಕೊಟ್ಟ ಮ್ಯಾಗ ರೋಗ ಹಚ್ಚತಾರು
ತಪ್ಪು ಅವರದಲ್ಲೋ / ಅದು ಬ್ಯಾರೆ ಐತಿ

ಹಾಡಿನ ಅರ್ಥ ತಿಳಿಲಿಲ್ಲಂದ್ರ
ಕೇಳಬ್ಯಾಡ್ರಿ ತಿರುಗಿ / ಅದು ಬ್ಯಾರೆ ಐತಿ
ಹಾಡಿನ ಅರ್ಥ ತಿಳಿದಿತ್ತಂದ್ರ
ದಿಂಗಾಗಿ ನಿಲ್ಲಬ್ಯಾಡ್ರಿ / ಅದು ಬ್ಯಾರೆ ಐತಿ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.