Friday, November 11, 2011

ಕಾರಣಿಕ ಕವಿತೆಗಳು - 1 ಡಾ. ಜಿ.ಎಸ್. ಶಿವರುದ್ರಪ್ಪ

ಕಾರಣಿಕ

ಮನೆಯ ಮೂಲೆಯೊಳಿಲ್ಲಿ
ಲೊಚಗುಡುತಲಿವೆ ಹಲ್ಲಿ,
ಎಲ್ಲಿ ನೋಡಿದೊಡಲ್ಲಿ
ಪರೆಪರೆಯ ಜೇಡಬಲೆ
ಜೋತಿರುವುದಿಲ್ಲಿ !
ಅಸ್ತಿಪಂಜರದಂಥ
ಮನೆಯ ಛಾವಣಿಯಿಂದ
ಬಿಸಿಲಕೋಲಿನ ಪ್ರೇತ
ಒಳಗಿಳಿದು ಬಂದು,
ತುಂಬಿದ್ದ ಕತ್ತಲನು
ಮದುವೆ ನಿಂದು
ಸರಸವಾಡುತಲಿಹುದು
ಭೀತಿಯನು ಹಡೆದು !
ಅಲ್ಲೊಂದು ಇಲ್ಲೊಂದು
ಜಿರಲೆ ಜಂಡಿಗ ಸರಿದು
ಒಳಸಂಚು ನಡೆಸುವರ
ಪಿಸುಮಾತಿನಂತೆ
ಕೇಳುತಿರೆ, ಮನವಿಲ್ಲಿ
ತತ್ತರಿಸಿ ನಡುಗುತಿದೆ
ಕುಳಿರ ಗಾಳಿಗೆ ಸಿಕ್ಕ
ತರಗಿನಂತೆ !
ಮನೆಯ ತುಂಬಾ ಧೂಳು,
ಬೇಸರದ ಬೂದಿ !
ಗೆದ್ದಲೋ ಗೆದ್ದಲು,
ಕಾಲಿಡಲು ಎಲ್ಲೆಲ್ಲು
ಇಲ್ಲವೋ ಹಾದಿ !
ಹೊರಗೆಲ್ಲ ಬಿರುಗಾಳಿ
ಮೊರೆದು ಹಾರಾಡುತಿದೆ,
ತರತರನೆ ನಡುಗುತಿವೆ
ಮನೆಯ ಗೋಡೆ.
ಯಾವ ಚಣವೋ ಏನೊ
ವಿಲಯವೈತರಬಹುದು ?
ಕಡೆತನಕ ಈ ಮನೆಗೆ
ಇಂಥ ಪಾಡೆ ?
ಇಲ್ಲ, ಬಿಡುಗಡೆಯಿಲ್ಲ ;
ಅರೆನೆಳಲು ಬೆಳಕುಗಳ
ವಿಕಾರದಪಶಕುನ-
ದಗ್ನಿ ಕುಂಡದಲಿ,
ಬೇಯಬೇಕೇ ಇನ್ನು
ದಿನದಿನದಲಿ ?
ಬರಿ ಕತ್ತಲೇ ಇರಲಿ
ಅಥವ ಬೆಳಕೇ ಬರಲಿ,
ಬೇಡವಯ್ಯೋ ಬೇಡ
ಅರೆನೆಳಲು ಬೆಳಕುಗಳ
ಸಂಶಯದ ಛಾಯೆ
ಎಂದು ಕೊರಗಿತು ಜೀವ
ಮನೆಯ ಒಳಗೆ !
ಮತ್ತೆ ಬರಿ ನಿಶ್ಶಬ್ದ ;
ಕತ್ತಲಳುವಾ ಶಬ್ದ
ಮೌನ ಸುಯ್ಯುವ ಶಬ್ದ
ಮೂಲೆಯಲ್ಲಿ !
ನಡುಗಿ ಹದುಗಿರೆ ಜೀವ
ಧೂಳಿನಲ್ಲಿ,
ಏನಲ್ಲಿ ಆ ಸದ್ದು
ಬಾಗಿಲಲ್ಲಿ ?
ಯಾರಿಗೂ ಬೇಡದೆಡೆ
ಯಾರೊ ಬಂದಂತಾಯ್ತು
ಬಾಗಿಲಲ್ಲಿ !
ಕದವ ತಳ್ಳಿದರಾರೊ !
ಗಿರುಕೆಂದಿತು,
ಯಾವ ಬೆಳಕೋ ಏನೊ
ಒಳಗೈದಿತು !
ಆ ಅದೋ ನೋಡಲ್ಲಿ
ನಿಂತಿರುವನವನು !
ಯಾವ ಸೀಮೆಯ ವೇಷ !
ಯಾರು ಅವನು ?
ಎನಿತೊ ಜೀವರ ಕರ್ಮ
ಫಲವ ಹೊತ್ತಂತೆ
ಮೈತುಂಬ ಹಳೆಬಟ್ಟೆ
ಜೋಲುತಿರಲು,
ಕೈಯೊಳಿದೆ ಬುಡುಬುಡಿಕೆ
ನುಡಿಸುತಿಹನು !
ಬುಡುಬುಕೆಯಾ ದನಿಗೆ
ಒಳಗೆಲ್ಲ ನಡುಗೆ,
ನುಡಿಸುತ್ತ ನಿಂತಿಹನು
ಬಾಗಿಲಿನ ಹೊರಗೆ !
ಯಾರಿವನು ಈ ವ್ಯಕ್ತಿ,
ವಿಧಿಯ ಬೇಹು ?
ಮನೆಯ ಅಪಶಕುನಕ್ಕೆ
ಬಂದಂತೆ ಸಾವು !
‘ಶುಭವಾಗುತೈತೆ ಶುಭವಾಗುತೈತೆ
ಶುಭವಾಗುತೈತೆ ನಿಮಗೆ’
ಎನ್ನುವನು ನಿಂತು ಹೊರಗೆ
ಜೀವ ಹಾರೈಸಿರಲು ಶುಭದ ನುಡಿಗೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.