Monday, December 16, 2013

ಮಾತ್ಗವಿತೆ-162

ಆ ಕೈಯೊಳಗೆ ಅಡಗಿರುವುದು 
ಮೈಯೊಳಗಿನ ನಡುಕಿಗೆ ಕಾರಣವೋ ;
ಕಣ್ಣೊಳಗೆ ಅಡಗಿರುವುದು
ನಡುವಿನ ಉಳಿಕಿಗೆ ಕಾರಣವೋ
ಎತ್ತಣದಿಂದೆತ್ತ ಸಂಬಂಧ ;
ಕೂಡಿಕೆಗೆ ರಾತ್ರಿಯೇ ಬೇಕೆಂದೇನಿಲ್ಲ ;
ಬಟಾ ಬಯಲಿದ್ದರೂ ಬೆಳಕಿದ್ದರೂ ಆದೀತಲ್ಲವೆ !

Friday, December 13, 2013

ಸುಂದರವಾದ ಕನ್ಯೆ ಬೇಕಾಗಿದ್ದಾಳೆ... !

ಡಾ. ಸಿದ್ರಾಮ ಕಾರಣಿಕ

ಸುಂದರವಾದ ಕನ್ಯೆ ಬೇಕಾಗಿದ್ದಾಳೆ
ದಯವಿಟ್ಟು ಕ್ಷಮಿಸಿ
ಸುಂದರತೆಯ ಬಗೆಗೆ ನನಗೆ 
ವ್ಯಾಖ್ಯಾನ ಬರೋದಿಲ್ಲ !
ಬಣ್ಣದ ಬಗೆಗೆ ತಕರಾರು ಇಲ್ಲ
ಉದ್ದ-ಗಿಡ್ಡ, ದಪ್ಪ-ತೆಳು 
ಯಾವ ಸಮಸ್ಯೆಯೂ ಇಲ್ಲ
ಮನಸ್ಸನ್ನು ಅರ್ಥ ಮಾಡಿಕೊಳ್ಳೋಳು
'ಅರ್ಥ'ದ ಗೊಡವೆಗೆ ಬೀಳದವಳು
ಹೇಗಿದ್ದರೂ ನಡೇದೀತು ;
ದಯವಿಟ್ಟು ಗಮನಿಸಿ
ಕನ್ಯೆ ಬೇಕಾಗಿದ್ದಾಳೆ
ಮುದ್ಧಣನಿಗೆ ಮನೋರಮೆಯಂತವಳು ಬೇಕಾಗಿದ್ದಾಳೆ !
ರಾಗಮನಂತೆ ನಾನು ತೊಡ ಸಂಧಿ, 
ಮೊಲೆ, ಮೂಗು ನೋಡುಗನಲ್ಲ !
ಅನಂತಮೂರ್ತಿಯಂತೆ ಸಿಕ್ಕಾಗ ಸೀರುಂಡೆ ಎನ್ನೋನಲ್ಲ !
ಬೇಂದ್ರೆಯ ಗೆಣೆಯ ಆಗಲಾಗದು ;
ಕುವೆಂಪು ಬರೆದ ನಾಯಿ ಕೂಡ ಅಲ್ಲ !
ಕಣವಿಯ ರೇಲು, ನಮಾಜು 
ಸಮಜೋತಿಯಲ್ಲ ನನಗೆ !
ನಗಬೇಕು ; ನಗಿಸುತ್ತ ಇರಬೇಕು
ಅಂದ್ರೆ ಧಾರವಾಡ ಬಸ್ಟ್ಯಾಂಡಿನ ಬದಿಯವಳೂ ಅಲ್ಲ
ಬೇಕಾಗಿದ್ದಾಳೆ ನನ್ನೊಂದಿಗೆ ಸಂಗಾತ ಬಯಸೋಳು ;
ಮತ್ತಿನಲ್ಲೂ ಗತ್ತುಗಾರಿಕೆ ತೋರುವಂಥವಳು !
ಯಾರಾದರೂ ಇದ್ದೀರಾ ? ಯಾರಿಗಾದರೂ ಗೊತ್ತಾ ?
ಹುಡುಕಿ ಕೊಡಿ ; ನನ್ನ ಗೆಳೆಯನಿಗೆ ಇನ್ನೂ ಮದುವೆಯಾಗಿಲ್ಲ !

Wednesday, December 11, 2013

ಮಾತ್ಗವಿತೆ-161

ಆಕೆಯ ಕಣ್ಣುಗಳ ಹೊಳಪಿನಲ್ಲಿ
ಸಾವಿರದ ಕನಸುಗಳಿವೆ
ಆಕೆಯ ಎದೆಯ ಮೇಲಿನ ಸೆರಗಿಗೆ
ಸಾವಿರದ ನೆನಪುಗಳಿವೆ
ಆಕೆಯ ಕಿಬ್ಬೊಟ್ಟೆಯ ಕೆಳಗೆ
ಸಾವಿರದ ದುಃಖಗಳಿವೆ
ಆಕೆಯ ಪದರು ಪದರುಗಳಲ್ಲಿ
ಇಳಿಯಬಿಟ್ಟ ಹಳಹಳಿಕೆಗಳೂ ಇವೆ
ಸಾವಿರದ ಸುಖದ ಉಳಿವು 
ಸುಳಿವು ನೋವಿನಲ್ಲಿ ಕಾಣಬಹುದಲ್ಲವೆ ?

Saturday, December 07, 2013

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತ... ...


ಡಾ. ಸಿದ್ರಾಮ ಕಾರಣಿಕ

‘ಪ್ರಜಾಪ್ರಭುತ್ವವು ಸಫಲವಾಗಬೇಕಾದರೆ ಸಮಾಜದಲ್ಲಿ ಕಣ್ಣು ಕುಕ್ಕುವ ಅಸಮಾನತೆ ಇರಬಾರದು. ದಬ್ಬಾಳಿಕೆ ಮಾಡುವ ವರ್ಗವಿರಬಾರದು. ದಮನಕ್ಕೆ ಒಳಗಾದ ವರ್ಗವೂ ಇರಬಾರದು. ಎಲ್ಲ ಸೌಲಭ್ಯಗಳನ್ನು ಹೊಂದಿ ಬರೀ ಸುಖದಲ್ಲೇ ಇರುವಂಥವರೂ ಇರಬಾರದು ಮತ್ತು ಕೇವಲ ಕಷ್ಟಗಳನ್ನೇ ಅನುಭವಿಸುವಂಥವರೂ ಇರಬಾರದು’ ಎನ್ನುವ ಮೂಲಕ ಸಾಮಾಜಿಕ ಸಮಾನತೆಯ ಕ್ರಾಂತಿಯನ್ನು ಮೊಳಗಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರರು ನೆನಪಾಗುವುದು ಅವರ ಕ್ರಾಂತಿಯ ಇಂಥ ನಡೆ ಮತ್ತು ನುಡಿಗಳಿಂದಲೇ. ನೋವಿನಲ್ಲೂ ನಲಿವು ಕಂಡ ಈ ದೇಶದ ಮಹಾನ್ ಪುರುಷ ಅವರು. ಸುಸಂಬದ್ಧವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ ಮಹಾನ್ ಚೇತನ ಅವರು. ಸ್ವಾಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಕೆಚ್ಚೆದೆಯ ಹೋರಾಟಗಾರ ಅವರು. ಅವರ ದಿಟ್ಟತನದ ಹೋರಾಟ, ದಣಿವರಿಯದ ಚಳುವಳಿ ಇಂದಿಗೂ ಹೋರಾಟಗಾರರ ದಾರಿದೀಪ.
ಇಂಥ ಹೋರಾಟಗಾರನ ಬದುಕಿನಲ್ಲಿ ಬಹುಪಾಲು ನೋವುಗಳೇ ತುಂಬಿದ್ದವು. ಅವು ಯಾವಾಗಲೂ ಅವರನ್ನು ಕಾಡುತ್ತಲೇ ಇದ್ದವು. ಕೆಲವು ಸಲ ಅವರು ಮಾನಸಿಕವಾಗಿ ಜರ್ಜಿರಿತರಾಗಿದ್ದರು. 1908 ರಲ್ಲಿ ಮಾತೋಶ್ರೀ ರಮಾಯಿಯೊಂದಿಗೆ ವಿವಾಹವಾಯಿತು. ಮುಂದೆ ಹುಟ್ಟಿದ ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಒಂದು, ಒಂದುವರೆ ವರ್ಷಗಳಲ್ಲೇ ತೀರಿಕೊಂಡಿದ್ದು ಅವರಿಗೆ ಆಘಾತವನ್ನುಂಟು ಮಾಡಿತ್ತು. ಮೊದಲ ಮಗ ಯಶವಂತನನ್ನು ಹೊರತುಪಡಿಸಿದರೆ, ರಮೇಶ, ಇಂದುಮತಿ, ಗಂಗಾಧರ, ರಾಜರತ್ನ ಇನ್ನಿಲ್ಲವಾಗಿದ್ದರು. ಹಾಗಾಗಿಯೇ ಯಶವಂತನನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಯಾವುದಕ್ಕೂ ಹೆಚ್ಚು ಒತ್ತಾಯಿಸಲಿಲ್ಲ. ಇರುವ ಒಬ್ಬ ಮಗನಾದರೂ ಕಣ್ಣಮುಂದೆ ಸುಖವಾಗಿ ಇರಲಿ ಎಂಬುದು ಅವರ ಆಶಯವಾಗಿತ್ತು. 1935 ರಲ್ಲಿ ಮಾತೋಶ್ರೀ ರಮಾಯಿ ತೀರಿಕೊಂಡಾಗಲಂತೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ತಾನು ನೆಚ್ಚಿದ ಹೆಂಡತಿ, ತನ್ನನ್ನು, ತನ್ನ ಸಂಸಾರವನ್ನು ಸಂಭಾಳಿಸಿದ ಮಹಾಮಾತೆ ಇನ್ನಿಲ್ಲವಾದಾಗ ಅವರ ರೋಧನ ಮುಗಿಲು ಮುಟ್ಟಿತ್ತು. ಎಷ್ಟೋ ಸಲ ರಮಾಯಿಯನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಹೋಗಿ ಮನಸ್ಸು ಬಿಚ್ಚಿ ಕಣ್ಣೀರು ಹಾಕುತ್ತಿದ್ದರು. ಆನಂತರದಲ್ಲಿ ಸುಧಾರಿಸಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಮತ್ತೇ ಹೋರಾಟದ ಹಾದಿಗೆ ಮರಳಿದರು.
ದಲಿತರು ಸ್ವಾಭಿಮಾನಿಯಾಗಿ ಬದುಕಬೇಕು. ಸಾಮಾಜಿಕವಾಗಿ ಸಮಾನತೆಯಿಂದ ನಳಿನಳಿಸಬೇಕು ಎಂಬ ವಿಚಾರದಿಂದ ಬಿಡುವಿಲ್ಲದ ಹೋರಾಟ ಅವರದಾಗಿತ್ತು. ಕೆಲವು ಸಂಘಟನೆಗಳನ್ನು ಕಟ್ಟಿ ಬೆಳೆಸಿದಂತೆ ರಾಜಕೀಯ ಪಕ್ಷಗಳನ್ನೂ ಕಟ್ಟಿದರು. ಕೇಂದ್ರ ಸರಕಾರದಲ್ಲಿ ಮಂತ್ರಿಯೂ ಆದರು. ಆದರೆ ಪಟ್ಟಭದ್ರರ ಸಚಿವ ಸಂಪುಟದಲ್ಲಿ ಅವರು ಬಹಳ ಕಾಲ ಇರಲಾಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಂಪ್ರದಾಯಿಕ ಜನರನ್ನು ಅವರು ಎದುರಿಸಿದರು. ಇನ್ನೊಂದು ಮಹತ್ವದ ವಿಚಾರವೆಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಜೊತೆ ಹೆಜ್ಜೆ ಹಾಕಬೇಕಾದ ಎಷ್ಟೋ ದಲಿತ-ದಮನಿತರೂ ದ್ವೇಷವನ್ನು ಸಾಧಿಸತೊಡಗಿದ್ದು ! ಎರಡೂ ಕಡೆಯ ವಿರೋಧಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ತಕ್ಕ ಪ್ರತಿಕ್ರಿಯೆ ನೀಡುತ್ತಲೇ ದೃಢವಾಗಿ ನಿಂತರು. ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿರುದ್ಧ ನಿರಂತರವಾಗಿ ಮಸಲತ್ತು ನಡೆಸಿಯೇ ಇದ್ದರು. ಆದರೆ ಯಾವುದಕ್ಕೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಧೃತಿಗೆಡಲಿಲ್ಲ. ಆದರೂ ಚುನಾವಣೆಗಳಲ್ಲಿ ಅವರು ಸೋಲು ಅನುಭವಿಸಬೇಕಾಯಿತು.
ಈ ಎಲ್ಲ ಸಂಗತಿಗಳ ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಆರ್ಥಿಕ ಪರಿಸ್ಥಿತಿ ಕೂಡ ತುಂಬ ಹದಗೆಟ್ಟಿತ್ತು. ಆದರೂ ಹೋರಾಟದ ಹಾದಿಯನ್ನು ಬಿಡದೇ ಸಾಲ ಮಾಡಿಕೊಂಡೇ ದಲಿತ-ದಮನಿತರ ಹಕ್ಕಿಗಾಗಿ ಹೋರಾಟ ನಡೆಸಿದರು ; ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ದಲಿತ-ದಮನಿತರ ಆಶಾಕಿರಣವಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 6ನೆಯ ಡಿಸೆಂಬರ್ 1956 ರಂದು ದೆಹಲಿಯಲ್ಲಿ ತೀರಿಕೊಂಡಾಗ ಅವರು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಐದು ವರ್ಷಗಳೂ ಗತಿಸಿರಲಿಲ್ಲ. ಅವರ ಪಾರ್ಥಿವ ಶರೀರವನ್ನು ಮುಂಬಾಯಿಗೆ ತೆಗೆದುಕೊಂಡು ಹೋಗಲು ಮನೆಯಲ್ಲಿ ಹಣವೇ ಇರಲಿಲ್ಲ ! ಈ ದೇಶದ ಸಂವಿಧಾನ ರಚಿಸಿದ ಮಹಾನ್ ಚಿಂತಕ ಎಂಬುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದ ಅಂದಿನ ಸಾರಿಗೆ ಮತ್ತು ಸಂಪರ್ಕ ಖಾತೆಯ ಮಂತ್ರಿಗಳು ದೇಹ ಸಾಗಿಸಲು ಹಣ ಬರಿಸುವಂತೆ ಕೇಳಿದ್ದರು ; ಆ ಮಂತ್ರಿ ಕೂಡ ದಲಿತರೇ ಆಗಿದ್ದರು ಎಂಬುದು ಮಾತ್ರ ಇತಿಹಾಸದ ವ್ಯಂಗ್ಯ ! ಇದು ಈ ದೇಶದ ರಾಜಕೀಯ ಸಂವಿಧಾನಶಿಲ್ಪಿಗೆ ತೋರಿದ ಅಗೌರವ ಕೂಡ.
‘ಜನರು ಆದರ್ಶಗಳಿಗಾಗಿ ಭವಿಷ್ಯದತ್ತ ನೋಡುವ ಬದಲು ಇತಿಹಾಸದತ್ತ ನೋಡಬೇಕು. ಜನರು ಸ್ವತಂತ್ರವಾಗಿ ಚಿಂತನೆ ಮಾಡದೆ, ಅನುಭವಗಳಿಂದ ಪಾಠ ಕಲಿಯದೇ ಕರಾಳಮಾರ್ಗದಲ್ಲಿ ನಡೆಯುತ್ತಿರುವುದು ಅಜ್ಞಾನವೇ ಸರಿ. ಇದು ಪ್ರಜಾಪ್ರಭುತ್ವದ ದುರಂತ’ ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಮಾತುಗಳು ಇಂದಿಗೂ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಬಲ್ಲವು.
ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಕ್ರಾಂತಿಸೂರ್ಯ. ತಮ್ಮನ್ನೇ ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡಿದ ನಿಜಸೂರ್ಯ. 65ನೆಯ ವಯಸ್ಸಿನಲ್ಲಿಯೇ ಅವರ ಮಹಾಪರಿನಿರ್ವಾಣವಾಯಿತು. ಕ್ರಾಂತಿಸೂರ್ಯ ಅಸ್ತಂಗತನಾದಾಗ ದಲಿತ-ದಮನಿತರ ಪಾಲಿಗೆ ಕತ್ತಲೆ ಕವಿಯಿತು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿಚಾರಗಳು ಇಂದಿಗೂ ನಮ್ಮೆಲ್ಲರ ಪಾಲಿನ ಸ್ಫೂರ್ತಿಯ ಸೆಲೆಗಳಾಗಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದುಕೊಳ್ಳುವ ಮನಸ್ಸು ನಮ್ಮದಾಗಬೇಕು. 

Wednesday, December 04, 2013

ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು !

ಡಾ. ಸಿದ್ರಾಮ ಕಾರಣಿಕ
ನಾನು ಪುಸ್ತಕಗಳನ್ನು ರಚಿಸುವಾಗ ಅಥವಾ ಅನುವಾದಿಸುವಾಗ ಮೊದಲು ಕಚ್ಚಾ ಬರವಣಿಗೆ ಮಾಡುತ್ತೇನೆ. ಮೊದಲ ಬರವಣಿಗೆಗೆ ನಾನು ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತೇನೆ. ಒಂದು ಪುಟಕ್ಕೆ ಇಂತಿಷ್ಟು ಎಂದು ಹಣವನ್ನೂ ನೀಡುತ್ತೇನೆ. ಆನಂತರ ಏಕಾಂತದಲ್ಲಿ ನಾನು ಪಕ್ಕಾ ಬರವಣಿಗೆಗೆ ತೊಡಗುತ್ತೇನೆ. ಆನಂತರ ಡಿ.ಟಿ.ಪಿ, ತಿದ್ದುಪಡಿ ಎಲ್ಲ ಮಾಡುತ್ತೇನೆ. ಸಾಯಿ ಕಾದಂಬರಿಯನ್ನು ಅನುವಾದ ಮಾಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ಪ್ರಾಧ್ಯಾಪಕರಾದ ಡಾ. ವಿನೋದ ಗಾಯಕವಾಡರು ಬಹಳಷ್ಟು ಸಲ ಒತ್ತಾಯಿಸಿದಾಗ ಕೂಡ ನಾನು ಅವರಿಗೂ ಇದನ್ನು ಹೇಳಿದ್ದೆ. ಎಂಟುನೂರು ಪುಟಗಳ ಬರವಣಿಗೆಗೆ ಎಂಟು ಸಾವಿರ ಕೊಡಬೇಕಾಗುತ್ತದೆ ಎಂದೆ. ಅವರು ಒಟ್ಟು ಹತ್ತು ಸಾವಿರು ರುಪಾಯಿ ನೀಡಿದರು. ಎರಡು ಸಾವಿರು ಹೆಚ್ಚಾಯಿತು ; ಕೃತಿ ಪ್ರಕಟವಾದ ಮೇಲೆ ಸಂಭಾವನೆ (ರಾಯಲ್ಟಿ) ಬಂದಾಗ ಅದನ್ನು ಮರಳಿಸುತ್ತೇನೆ ಎಂದು ನಾನು ಅವರಿಗೆ ಎರಡ್ಮೂರು ಸಲ ಹೇಳಿದ್ದೆ. ಆದರೆ ಸಂಭಾವನೆ ಬಿಡಿ ; ನಾನೇ ಅನುವಾದಿಸಿದ ನನ್ನದೇ ಕೃತಿಯನ್ನೂ ನಾನು ಮೇಲಿಂದ ಮೇಲೆ ನಾನು ಕೇಳಿದಾಗಲೂ ಪ್ರಕಾಶಕರು ಕೇವಲ ಒಂದೇ ಪ್ರತಿ ಕಳುಹಿಸಿ ಇಡೀ ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದರು. ಚರ್ಚೆಯ ಮೂಲಕ ಬಗೆ ಹರಿಸಿಕೊಳ್ಳಬೇಕು ಎಂದುಕೊಂಡಾಗಲೂ ಮೂಲ ಲೇಖಕರು ಮತ್ತು ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳಲೇಬೇಕಾಗುತ್ತದೆ. ಧಾರವಾಡದ ಹೈಕೋರ್ಟಿನಲ್ಲಿ ಕೇಸು ದಾಖಲು ಮಾಡುವ ವಿಚಾರದಲ್ಲಿರುವೆ. ತಿಳಿದವರು, ನ್ಯಾಯವಾದಿಗಳು ಬಗ್ಗೆ ನನಗೆ ಸಲಹೆ ನೀಡಬೇಕು ಎಂದು ಮೂಲಕ ಕೇಳಿಕೊಳ್ಳುತ್ತಿರುವೆ.

ಕೃತಿಚೌರ್ಯ : ನನ್ನ ಅನುಭವ


ಡಾ. ಸಿದ್ರಾಮ ಕಾರಣಿಕ
(ಯುಗಾರಂಭ ಅನುವಾದದ ಬಗೆಗೆ ವಿಚಿತ್ರವಾದ ಕೆಲವು ಸತ್ಯಗಳು)


... ವಿಷಯ ತುಂಬ ಸ್ವಾರಸ್ಯಕರವಾದುದು. ಯಾವುದನ್ನು ನಾನು ನಿರೀಕ್ಷಿಸಿರಲಿಲ್ಲವೋ ಅದೇ ಆಗಿತ್ತು ! ಮರಾಠಿಯಲ್ಲಿ ಡಾ. ವಿನೋದ ಗಾಯಕವಾಡ ಅವರು ಮಹಾತ್ಮಾ ಫುಲೆಯವರ ಬಗ್ಗೆ ಕಾದಂಬರಿಯನ್ನು ಬರೆಯುತ್ತಿರುವುದಾಗಿಯೂ ಅದನ್ನು ಕನ್ನಡದಲ್ಲಿ ನಾನು ಮಾಡಬೇಕೆಂದೂ ಒತ್ತಾಯಿಸಿದರು. ಅದೂ ಹಸ್ತಪ್ರತಿಯಲ್ಲೇ ಇರುವ ಕೃತಿ. ನಾನೂ ಒಪ್ಪಿಕೊಂಡೆ. ಹದಿನೈದು ದಿನ ನಿರಂತರ ಕೆಲಸ ಮಾಡಿದೆ. 27ನೇ ಮಾರ್ಚ್ 2008 ರಂದು ಅನುವಾದವನ್ನೂ ಮಾಡಿ, ಡಿಟಿಪಿಯನ್ನೂ ಮಾಡಿ ಪ್ರಕಟಣೆಗೆ ಸಿದ್ಧ ಮಾಡಿದೆ. ಎರಡು ಸಿ.ಡಿ.ಗಳಲ್ಲಿ ರೈಟ್ ಮಾಡಿ ಡಾ. ಗಾಯಕವಾಡ ಅವರಿಗೂ ನೀಡಿದೆ. ಅವರು ಅವುಗಳನ್ನು ಬೆಂಗಳೂರಿಗೆ ಪ್ರಕಟಣೆಗೆಂದು ಕಳುಹಿಸಿ ಕೊಟ್ಟೆ ಎಂದು ಹೇಳಿದರು. ಬಹು ದಿನಗಳಾದರೂ ಪುಸ್ತಕ ಪ್ರಕಟವಾಗಲಿಲ್ಲ. ಆಗ ಮತ್ತೇ ನಾನು ಮೇಲಿಂದ ಮೇಲೆ ಡಾ. ಗಾಯಕವಾಡ ಅವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಅವರು ಹೇಳಿದ್ದು ಏನೆಂದರೆ ಪ್ರಕಟಣೆಯ ಜವಾಬ್ದಾರಿ ಹೊತ್ತ ವ್ಯಕ್ತಿ ನುಣುಚಿಕೊಂಡರಂತೆ !
ಆಮೇಲೆ ನಾನೂ ಸುಮ್ಮನಾದೆ. ಆದರೆ ಈ ವರ್ಷ ಅಂದರೆ ನಾನು ಅನುವಾದ ಮಾಡಿದ ಎರಡು ವರ್ಷಗಳ ನಂತರ ನನಗೆ ಒಂದು ಆಘಾತದ ಸುದ್ದಿ ತಿಳಿಯಿತು. ಮಹಾತ್ಮಾ ಫುಲೆಯವರ ಬಗ್ಗೆ ಬೆಂಗಳೂರಿನ ಮಹನೀಯರೊಬ್ಬರು ಕೃತಿಯನ್ನು ರಚಿಸಿ, ಪ್ರಕಟಪಡಿಸಿದ್ದಾರೆ. ಅದನ್ನು ಓದಿದೆ. ಯಾಕೋ ಸಂಶಯ ! ಓದುತ್ತ ಹೋದಂತೆ ನನ್ನ ಸಂಶಯ ಬಲಗೊಂಡಿತು. ಹೌದು. ಆ ಕೃತಿ ನನ್ನ ಅನುವಾದದ ಮಾದರಿಯಲ್ಲೇ ಇದೆ. ಅಲ್ಲಿ ಬರುವ ಸಂಭಾಷಣೆಗಳು ನಾನೇ ಬರೆದವುಗಳು ಎಂಬುದು ನನಗೆ ದೃಢವಾಯಿತು ! ಯಾಕೆಂದರೆ ನನ್ನ ಶೈಲಿ ನನಗೆ ಗೊತ್ತಾಗುವುದಿಲ್ಲವೇ ? ಅನುವಾದವಾದರೂ ನಾನು ಬಳಸುವ ಶಬ್ದಗಳು, ನುಡಿಗಟ್ಟುಗಳು ಭಿನ್ನವೇ ಆಗಿರುತ್ತವೆ. ಅನುವಾದ ಎನ್ನುವುದಕ್ಕಿಂತಲೂ ಕೆಲವೊಂದಿಷ್ಟು ವಿಚಾರಗಳನ್ನೂ ಹೆಚ್ಚಿನ ವಿವರಗಳನ್ನೂ ನಾನು ಬಳಸಿಕೊಂಡಿರುತ್ತೇನೆ. ಇದನ್ನು ಹಲವರಲ್ಲಿ ನಾನು ಪ್ರಸ್ತಾಪ ಮಾಡಿದೆ. ಯಾವುದೋ ಗುಮಾನಿಯಿಂದ ಮೂಲ ಲೇಖಕರನ್ನೂ ಸಂಪರ್ಕಸಿದೆ. ಅವರೂ ತಮಗೇನೂ ತಿಳಿದಿಲ್ಲ ಎಂದರು. ಕೃತಿಚೌರ್ಯ ನಡೆದಿರುವುದಂತೂ ಸ್ಪಷ್ಟವಾಗಿತ್ತು. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡುವ ವಿಚಾರ ನನ್ನದಾಗಿರಲಿಲ್ಲ. ಹೀಗಾಗಿ ರೂಪ ಪ್ರಕಾಶನದ ಆತ್ಮೀಯ ಮಹೇಶ ಅವರನ್ನು ಸಂಪರ್ಕಿಸಿದೆ. ಅವರು ಕೃತಿಯನ್ನು ಪ್ರಕಟಿಸಲು ಮುಂದೆ ಬಂದರು. 
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಕೃತಿಚೌರ್ಯ ಮಾಡುವವರು ಹೇಗೆ ಎಲ್ಲ ಕಡೆ ತುಂಬಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿಕ್ಕೆಂದು ಎಂದರೆ ಆಶ್ಚರ್ಯವಾದೀತು ! ಯಥಾವತ್ತ ನಕಲು ಮಾಡದೇ ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಯಾರದೋ ಪುಸ್ತಕವನ್ನು ಇನ್ನ್ಯಾರೋ ತಮ್ಮ ಹೆಸರಿನಲ್ಲಿ ಪ್ರಕಟಸುವುದು ಮತ್ತು ಹೆಸರು ಮಾಡುವುದು ಎಷ್ಟು ಸರಿ. ಈ ಬಗ್ಗೆ ಯಾರೇ ಬಂದರೂ ಮುಖಾಮುಖಿ ಉತ್ತರ ನೀಡಲೂ ನಾನು ಸಿದ್ಧನಾಗಿಯೇ ಇದ್ದೇನೆ. ಆದರೂ ಮಹಾತ್ಮ ಜ್ಯೋತಿಬಾ ಫುಲೆಯವರ ಬಗ್ಗೆ ಇರುವ ಈ ಕಾದಂಬರಿ ಕನ್ನಡದಲ್ಲಿ ಮೊಟ್ಟ ಮೊದಲನೆಯದು ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚೆ ಪಡುತ್ತೇನೆ.

Tuesday, December 03, 2013

ಮಾತ್ಗವಿತೆ-160

ಆಳದಲ್ಲಿ ಅಡಗಿರುವ 
ಎದೆಯೊಳಗಿನ ನೋವಿಗೆ 
ಮಾತಾಗುವ ಮನಸ್ಸಾಗಿದೆ !
ಮಿಡಿದು ಸಾಥಾಗುವ 
ಮತ್ತೊಂದು ಮನಸ್ಸಿನ 
ಹುಡುಕಾಟ ನನ್ನದು
ಹುಡುಗಾಟವಲ್ಲ

Wednesday, November 27, 2013

ವಚನ-34

ಹಾದರದ ಲಾಡಿ ಬಿಗಿದುಕೊಳ್ಳುತ್ತ
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ 
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !

Monday, November 25, 2013

ಮಾತ್ಗವಿತೆ-159

ಚೆಲುವಾದ ತೊಟ್ಟುಗಳ ತಡುವಿಕೆಯಲ್ಲಿ
ಮೆಲುವಾದ ಹಿತವೇನು ?
ಗತಸಾಹಸಗಳ ನೆನಪಲಿ
ಹುಸಿಗೇಡಿತನದ ಚಪಲ !

Saturday, November 23, 2013

ವಚನ-33

ಬಡತನ ಶಾಪ ಎಂದುಕೊಂಡವರು ಯಾರು ? 
ಪುಟಿ ನೆಗೆದು ಶಾಪವೆಂದುಕೊಂಡವರ ಮುಂದೆ 
ಸೆಟೆದು ನಿಲ್ಲಬೇಕಲ್ಲದೆ ಅಳುವುದು ತರವಲ್ಲ ; 
ತೆಗಿ ತೆಗಿ ನಿನ್ನ ಡಮರುಗದ ನಾದಕ್ಕೆ 
ಆವ ಶಬುದ ಎದುರಾಗಿ ನಿಲುವುದು ?
ಅದಾವ ಶಾಪ ಸಂಗ ಬಯಸಬಲ್ಲದು ?
ಹಂಗೆ ಹೇಳುವ ಹೇಸಿಯೋ ಕಸಿಗೊಂಡಾನು
ಇಲ್ಲವೆ ಕಸಿವಿಸಿಗೊಂಡಾನು 
ಕಾರಣಿಕ ಸಿದ್ಧರಾಮ ತಿಳಿವಿನೊಳಗಲ್ಲದೆ
ಮರೆವಿನವನಲ್ಲ !

Friday, November 22, 2013

ಮಾತ್ಗವಿತೆ-158

ಆ ರಾತ್ರಿ ನೆನಪಿರಬೇಕಲ್ಲ...
ಒಂದೇ ಹಾಸಿಗೆಯ ಮೇಲೆ ಮಲಗಿದಾಗಲೂ
ಇಬ್ಬರ ಮೈಗಳ ಕಾವು ಏರುತ್ತಿದ್ದರೂ
ಮೈಗೆ ಮೈ ತಾಗಿಸದೇ ಅಂಚಿಗೆ ಸರಿದು
ನಿದ್ದೆ ಬರದ ಹೊರಳಾಟ !
ಹೊರಗೆ ಆರ್ಭಟದ ಮಳೆ ಜೋರಾದಾಗ
ಒಳಗೆ ಜುಮುಗುಟ್ಟುವ ಚಳಿ 
ಮುಂದೆ............
ಲಿಂಗಾಂಗ ಸಾಮರಸ್ಯ !

Thursday, November 21, 2013

ಮಾತ್ಗವಿತೆ-157

ನಿನ್ನ ಗುಲಗುಂಜಿ ತೂಕದ ಪ್ರೀತಿಗೆ
ನನ್ನ ದೇಹವಾಂಛೆಯೂ ಗುಡ್ಡದಷ್ಟಿತ್ತು !
ದಗಲುಬಾಜಿತನವಂತೂ ಅಲ್ಲ ಎಂಬುದು ನಿನಗೂ ಗೊತ್ತು
ನೀನು ಮೊದಲೋ ನಾನು ಮೊದಲೋ
ಪ್ರಶ್ನೆಗೆ ಉತ್ತರ ಗೊತ್ತಿಲ್ಲ !
ನಿನಗೋ........
ಗೊತ್ತಿದ್ದರೂ ಹೇಳಲೊಲ್ಲೆ !

Thursday, November 14, 2013

ನಾನು-ನೀನು ಮತ್ತು ಕ್ರಾಂತಿ...


ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬರೆದ ಪಾಡಿನ ಹಾಡು ಹೀಗಿದೆ ;

ಡಾ. ಸಿದ್ರಾಮ ಕಾರಣಿಕ
--------------------------------
ನನ್ನನ್ನೀಗ ಕಾಡಬೇಡ ಗೆಳತಿ
ನಾನೀಗ ಕ್ರಾಂತಿಯ ಬೆನ್ನ ಹತ್ತಿರುವೆ
ಆಕೆಯ ತೋಳ್ತೆಕ್ಕೆಯಲ್ಲಿ  ಸಿಲುಕಿ
ಸುಖದ ಸವಿಯಲ್ಲಿರುವೆ !

ನನ್ನನ್ನೀಗ ಕಾಡಬೇಡ ಗೆಳತಿ
ನಿನ್ನ ನೆನಪು ಮರುಕಳಿಸಿದರೂ
ಕ್ರಾಂತಿಯ ಬಿಸಿಯಪ್ಪುಗೆ
ನರನಾಡಿಗಳಲ್ಲಿ ತುಸು ನೆಮ್ಮದಿಗೆ
ಅನುವಾಗಿ ನಿನ್ನ ಚಿತ್ರ ಅಸ್ಪಷ್ಟವಾಗುತ್ತಿದೆ !

ಗೆಳತಿ, ಕ್ರಾಂತಿಯ ಬಗೆಗಿನ ನಿನ್ನ ಮತ್ಸರ
ಸಮಝಾಯಿಸಿಗೆ ನಿನ್ನ ನಿರುತ್ತರ ಮೌನ
ಅಳು - ಜಗಳ ಅತಿರೇಕಕ್ಕೇರಿದಾಗ
ಓಹ್ ! ನಾನು ಕ್ರಾಂತಿಯನ್ನು ಬಿಡಲಾರೆ ಗೆಳತಿ !

ತೀವ್ರ ಭಾವನೆಗಳ ಬದಿಗೊತ್ತು ; ಕ್ಷಣಕಾಲ
ಕ್ರಾಂತಿಯ ನಡೆಯನ್ನು ನೋಡು ; ಗುರುತಿಸು !
ನಾನು ನಿನಗೆ ಬೇಕು ; ನನಗೆ ಕ್ರಾಂತಿ ಬೇಕು
ಅಬಸೋತಾದರೆ ನೀನೂ ಬೇಕು
ಯೋಚಿಸು ಗೆಳತಿ ಆಯ್ಕೆ ನಿನ್ನದು !

(ಮೋಡ ಕಟ್ಟೇತಿ ಕವನ ಸಂಕಲನದಿಂದ)

Friday, November 08, 2013

ಮಾತ್ಗವಿತೆ-156

ತೊಡೆ ಮೇಲೆ ತಲೆಯಿಟ್ಟು
ಹೀಗ್ಹೀಗೆ ಎಂದು ಹೇಳಿದಾಗೆಲ್ಲ
ಹಾಗ್ಹಾಗೆ ಎಂದು ಹಾರಿಕೆಯನ್ನೇ ಮುಂದು ಮಾಡಿ
ಹೋಗಿ ಬರುವ ಹಾದಿಯನ್ನೂ ಹಾಳು ಮಾಡಿದ
ಹಾಳುಮೂಳ ನೀನು !
ಅಳಿಸಿದ ಅಕ್ಷರಗಳ ಮೇಲೆ ಕಣ್ಣನೀರ ಹನಿಗಳ
ಕಳವಳವೂ ಕಾಣಲಿಲ್ಲವೆ ನಿನಗೆ ?

Monday, November 04, 2013

ಬಿಳಿ ಕಾಗದ ಇದು ಬರೀ ಕಾಗದ ... !

ಬಿಳಿ ಕಾಗದ ಇದು ಬರೀ ಕಾಗದ
ಮೂಡಿಸು ನೀನು ಬಣ್ಣದ ಚಿತ್ತಾರ
ಒಲವು ಚೆಲವು ಕಾಣಲೇ ಇಲ್ಲ
ಸೆಲೆಯ ಜಲವು ಚಿಮ್ಮಲೇ ಇಲ್ಲ
ಹೊತ್ತಿದ ಜ್ವಾಲೆ ನಂದಲೇ ಇಲ್ಲ
ಬತ್ತಿದ ಬಾವಿ ತುಂಬಲೇ ಇಲ್ಲ //1//

ಬಿಕ್ಕಿದ ದುಃಖ ಬಯಲಿಗೆ ಇಲ್ಲ
ಕುಕ್ಕುವ ಕಣ್ಣೊಳು ಕಾಂತಿಯು ಇಲ್ಲ
ಮಿಕ್ಕಿದ ಮಾತು ಅರಳಲೇ ಇಲ್ಲ
ದಕ್ಕಿದ ಬೀಜ ಚಿಗುರಲೇ ಇಲ್ಲ ! //2//


ನಾನು ಸುಮಾರು 1998 ರಲ್ಲಿ ಬರೆದ ಪದ್ಯ (ನನ್ನ ಮೋಡ ಕಟ್ಟೇತಿ ಕವನ ಸಂಕಲನದಲ್ಲಿ ಇದೆ) ನೆನಪಾಯಿತು. ಈ ಹಾಡಿಗೆ ನಾನೇ ಸ್ವರ ಸಂಯೋಜನೆ ಮಾಡಿ, ಖಂಜರಿ ಹಿಡಿದು ತಾಳ ಹಾಕಿ ಹಾಡುತ್ತಿದ್ದೆ ! ಮಿತ್ರ ಮಂಡಲಿಗಾಗಿ ದಾಖಲಿಸಿದ್ದೇನೆ. ಓದಿಕೊಳ್ಳಿ ; ಇಲ್ಲವೆ ಹಾಡಿಕೊಳ್ಳಿ !

|| बळीराजा ||

-महात्मा जोतीराव फुले

आमुच्या देशीचे अतुल स्वामी वीर ||
होते रणधीर ||मरुत्यास ||
बळीस्थानी आले शूर भैरोबा ||
खंडोबा,जोतिबा || महासुभा ||१||

सद् गुणी पुतळा राजा मुळ बळी ||
दशहरा,दिवाळी ||आठविती ||२||

क्षत्रिय भार्या "इडा पीडा जाओ ||
बळी राज्य येवो "||अशा का बा ?||३||

आर्य भट आले,सुवर्ण लुटिले ||
क्षत्री दास केले ||बापमत्ता ||४||

वामन का घाली बळी रसातळी ||
प्रश्न जोतीमाळी ||करी भटा ||५||


Wednesday, October 30, 2013

ಸಾಯಿ ಬಾಬಾ ಮಹಾ ಕಾದಂಬರಿ : ಪ್ರತಿಗಳಿಗೆ ಸಂಪರ್ಕಿಸಿ

ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ.

ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.




ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ. ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.
ಕೃತಿಯ ಪುಟಗಳು :  612+9  (ಕಿಂಗ್ ಸೈಜ್), ಬೆಲೆ- ರೂ. 450/-  (ಅಂಚೆ ವೆಚ್ಚ ಪ್ರತ್ಯೇಕ)
ಕೃತಿಯ ಪುಟಗಳು : 612+9 (ಕಿಂಗ್ ಸೈಜ್), ಬೆಲೆ- ರೂ. 450/- (ಅಂಚೆ ವೆಚ್ಚ ಪ್ರತ್ಯೇಕ)

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.