Monday, April 30, 2012

ಮಾತ್ಗವಿತೆ-74

ಎಂಥವರಿವರು ! ನಾಚಿಕೆಯಿಲ್ಲ ;
ಮಾನ ಇಲ್ಲ ; ಮರ್ಯಾದೆಯೂ ಇಲ್ಲ !
ಗೆದ್ದ ಎತ್ತಿನ ಬಾಲ ಹಿಡಿದು ಮೆರೆಯುತ್ತಾರಲ್ಲ ;
ಮೇಲೆ ಒಂದಿಷ್ಟು ಸ್ವಾಭಿಮಾನ
ಸ್ವಂತಿಕೆ ; ಸಮಾಧಾನಕ್ಕೆ ನಾಟಕ ಬೇರೆ !
ಥೂ ! ಹೇಸಿ !
ಹೇಸಿಗೆಯನ್ನೇ ತಿನ್ನುತ್ತ ಅರಿವಿಲ್ಲದವರಂತೆ
ಪರಮಾರುವನ್ನು ಬಗ್ಗಿಸಿ ನಿಲ್ಲುತ್ತೀರಲ್ಲ !
ಥೂ ! ಮಾರಿಕೊಂಡವರು ನೀವು ;
ಮಾರಿಕೊಳ್ಳಲು ಹವಣಿಸುತ್ತಿರುವವರು ನೀವು !

Sunday, April 29, 2012

ಮಾತ್ಗವಿತೆ-73

ಯಾಕೋ ನೆನಪುಗಳು ಕಾಡಿದಾಗ
ಭಯವಾಗುತ್ತದೆ ; ಬೇಸರವೂ ಆಗುತ್ತದೆ ;
ಒಂದಿಷ್ಟು ಖುಷಿಯೂ ಆಗುತ್ತದೆ !
ನನ್ನ ನೆನಪಿನಿಂದ ಮತ್ತೊಬ್ಬರ
ಹೃದಯ ಭಾರವಾದಾಗ, ಭಗ್ನವಾದಾಗ
ಕಸಿವಿಸಿಗೊಂಡಾಗ ನೆನಪುಗಳು
ಭಯ ಹುಟ್ಟಿಸುತ್ತವೆ !
ದೂರದ ನೆಲ್ಲಿಯ ಕನಸುಗಾರಿಕೆಯ
ಕನವರಿಕೆಗಳಿಂದ ಬೇಸರವೂ ಆಗುತ್ತದೆ !
ಕಳೆದುಕೊಂಡ ಪ್ರೀತಿ-ಪ್ರೇಮದ
ಮರು ಮಿಲನಕ್ಕೆ ಕಾತರಿಸಿ ನೆನಪಿಸಿಕೊಂಡಾಗ
ಒಂದಿಷ್ಟು ಖುಷಿಯೂ ನನಗಾಗುತ್ತದೆ !
ಯಾರು ಏನೂ ಕೊಟ್ಟರೂ ಸರಿ !
ಅರ್ಥವಾಯಿತೇ ಅರ್ಧೇಶ್ವರಿ !

Saturday, April 28, 2012

ಮಾತ್ಗವಿತೆ-72

ಇದು ಯಾರು ಬರೆದ ಕಥೆಯೋ ಎಂದು
ಮರುಗುವುದು ಬೇಡ !
ಹಣೆಬರಹ ಎಂದು ಕೊರಗುವುದೂ ಬೇಡ
ವಿಧಿ ವಿಲಾಸ ಎಂದುಕೊಂಡು
ವಧಾಸ್ಥಾನಕ್ಕೆ ತಲೆ ಕೊಡಬೇಕಿಲ್ಲ !
ನಮ್ಮ ಪರಿಶ್ರಮ - ಪ್ರಯತ್ನಗಳು
ನಮ್ಮ ಜೊತೆ ನಿರಂತರವಾಗಿರುತ್ತವೆ ;
ಜತೆಗಿರುವ ಚಂದಿರನಂತೆ !

Saturday, April 21, 2012

ಮಾತ್ಗವಿತೆ-71

ನಿನ್ನ ಬೆತ್ತಲೆ ತೊಡೆಯ ಮೇಲೆ
ಎಷ್ಟೊಂದು ನೆತ್ತರು !
ಅತ್ತು ಬಿಡು ಒಮ್ಮೆ
ಆದ ಅವಮಾನ-ಆಘಾತಗಳ ಮರೆಯುವಂತೆ !
ಮೋಸದಾಟದಲಿ ಬಲಿ ಬಲಿ ಮಾಡಿದವರ
ಕ್ಷಮಿಸಿ ಬಿಡು !
ಯಾಕೆಂದರೆ ನೀನು ಸುಯೋಧನ !

ಮಾತ್ಗವಿತೆ-70

ಕಟಕಿಯಾಡಿದವನೇನು
ಸರದಾರ ಅಲ್ಲ ;
ಖಬರದಾರ ಎನ್ನಲು
ಇದು ಅಸ್ತಿತ್ವದ ಪ್ರಶ್ನೆ ಸ್ವಾಮಿ !
ನಾತಾ ಜೋಡಿಸಬೇಕೆಂಬ
ಹಂಬಲದ ನಮಗಿಲ್ಲಿ ನಿತ್ಯ
ಕಟಕಿ ಕೇಳಿ-ಕೇಳಿ ಕುಟ್ಟಬೇಕು
ಮೆಟ್ಟಬೇಕು ಜಗಜಟ್ಟಿಯಾಗಬೇಕು
ಅನಿಸುತ್ತಲೇ ಇರುತ್ತದೆ !
ಸುಮ್ಮನಿರುವುದರಲ್ಲೇನಿದೆ ಸುಖಾ ?
ಒಂದು ಕೆನ್ನೆಯಾದ ಮೇಲೆ
ಇನ್ನೊಂದು ಕೆನ್ನೆ ಬೇಡ
ಚರ್ಮ ಸ್ಪರ್ಷ ಕಳೆದುಕೊಂಡಾವು !
ಸಿಟ್ಟು ಸುಷಮ್ನಾಳದ ಮೂಲಕ
ಎಲ್ಲೋ ಅಡಿಗಿ ಕುಳಿತುಕೊಂಡಿದೆಯಲ್ಲ
ಅದರ ಎಳೆಯೊಂದನ್ನು ಹಿಡಿದು ಜಗ್ಗು
ಇಡಿಯಾಗಿ ಹೊರ ಪ್ರವಹಿಸಲಿ
ಕಟಕಿಯಾಡಿದವರ
ಕೊಚ್ಚಿಕೊಂಡು ಹೋಗಲಿ !

Thursday, April 19, 2012

ಮಾತ್ಗವಿತೆ-69

ಕಣ್ಣಿಗೇನೋ ಕಾಡಿಗೆ ಇದೆ
ಕಣ್ಣ ಕೆಳಗೇಕೆ ಕಪ್ಪು ಕಲೆ ?
ನೋವು ನಲಿವು ಬರುತ್ತವೆ ; ಹೋಗುತ್ತವೆ !
ಕಷ್ಟಗಳ ಬೆಟ್ಟ ಬಂದರೂ ಕೊರೆಯುವ
ವಜ್ರವಾಗಬೇಕಲ್ಲವೆ ನಾವು ?
ಬಿಡು ಬಿಡು ಮನದೊಳಗೆ ಬಚ್ಚಿಟ್ಟ
ಬಿಸಿಯುಸಿರಿನ ಬೇಸರಿಕೆಯ ಮೂಟೆ !
ಕಾಯು ; ಮತ್ತೇ ಬರುತ್ತಾನೆ ವಸಂತ
ಪಲ್ಲವಿಸುತ್ತಾನೆ ಬರಡು ಗಿಡದ ಕುಡಿ !

Wednesday, April 18, 2012

ಮಾತ್ಗವಿತೆ-68

ನಿನ್ನ ಹಠಮಾರಿತನಕ್ಕೆ ಕೆಡುಗಾಲ ಕಾದಿದೆ
ನಿನ್ನ ಕುಟೀಲತನಕ್ಕೆ ನಡುಗಾಲ ಮೀರಿದೆ !
ನಿನ್ನ ಮುಠ್ಠಾಳತನಕ್ಕೆ ಮರೆಗಾಲ ಮುಂದಿದೆ
ಗೆಲ್ಲುವ ಸರದಿ ಈಗ ನನ್ನದು ; ನಿನ್ನದೇನಿದ್ದರೂ
ಇಳಿಗಾಲವಲ್ಲವೆ ? ಒಂದಿಷ್ಟು ಕೊರಗು ;
ದಪ್ಪಗೆ ಮೈಗಂಟಿದ ಚರ್ಬಿಯಾದರೂ ಕರಗಲಿ !

Tuesday, April 17, 2012

ಸಾಹಿತ್ಯ ಪರಿಷತ್ತಿನ ಗೌರವದ ಪ್ರಶ್ನೆ

ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿರುವ ಬಹುದೊಡ್ಡ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಸರ್ ಎಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ದೂರದೃಷ್ಟಿಯ ಮುತ್ಸದ್ಧಿಗಳ ಪ್ರೇರಣೆಯಿಂದ 1915ರಲ್ಲಿ ಅಸ್ತಿತ್ವಕ್ಕೆ ಬಂದ ಪರಿಷತ್ತು ಶತಮಾನೋತ್ಸವದ ಹೊಸ್ತಿಲಲ್ಲಿದೆ.

ಆರಂಭದ ದಶಕಗಳಲ್ಲಿ ನೂರರ ಸಂಖ್ಯೆಯಲ್ಲಿದ್ದ ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಲಕ್ಷ ಮೀರಿದೆ. ಬರುವ 29ರಂದು ಅಧ್ಯಕ್ಷರ ಸ್ಥಾನಕ್ಕೆ ನೇರ ಚುನಾವಣೆ ನಡೆಯಲಿದ್ದು ಈಗಾಗಲೇ ಸ್ಪರ್ಧಾಳುಗಳ ಪ್ರಚಾರ ಭರಾಟೆ ಸಾಗಿದೆ.


ಪರಿಷತ್ತಿಗೆ ಸರ್ಕಾರದ ಉದಾರ ಆರ್ಥಿಕ ನೆರವು ಕೋಟಿಗಳಲ್ಲಿದೆ ಮತ್ತು ಪರಿಷತ್ತಿನ ವ್ಯಾಪ್ತಿ ರಾಜ್ಯದ ಗಡಿಯನ್ನು ಮೀರಿ ಕನ್ನಡಿಗರು ಬದುಕು ಅರಸಿಕೊಂಡ ಜಗತ್ತಿನಾದ್ಯಂತ ವಿಸ್ತರಿಸಿದೆ.


ಆದ್ದರಿಂದ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಾಂಸ್ಕೃತಿಕವಾಗಿ ಗುರುತರ ಹೊಣೆಗಾರಿಕೆ ಇದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಜಿಲ್ಲಾ ಘಟಕಗಳಿಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿ ಬಯಲಾಗುತ್ತಿರುವ ವಿವರಗಳು ಕನ್ನಡಿಗರಲ್ಲಿ ವಿಷಾದ ಭಾವಕ್ಕೆ ಎಡೆಕೊಡುವಂತಿವೆ.


ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿಯೇ ಚುನಾವಣೆ ನಡೆಯುತ್ತಿದೆಯಾದರೂ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿರುವುದು ನಿವಾರಣೆಯಾಗಿಲ್ಲ. ಮೃತಪಟ್ಟವರ ಹೆಸರುಗಳು ಉಳಿದುಕೊಂಡಿರುವುದು, ಎರಡೆರಡು ಕಡೆ ಮುದ್ರಿತವಾಗಿರುವುದು ಮತದಾನದಲ್ಲಿ ಅಕ್ರಮ ನಡೆಯುವ ಸಾಧ್ಯತೆಯನ್ನು ಸೂಚಿಸಿವೆ.
ಮತದಾರರನ್ನು ಓಲೈಸುವುದಕ್ಕೆ ಜಾತಿ ಮತ್ತು ಇತರೆ ಪ್ರಭಾವಗಳನ್ನು ಪ್ರಚಾರದಲ್ಲಿ ಬಳಸುತ್ತಿರುವ ವಿವರಗಳು ಈ ಚುನಾವಣೆಯನ್ನು ತೀವ್ರ ಪೈಪೋಟಿಯ ಸ್ಪರ್ಧಾಕಣವನ್ನಾಗಿ ಪರಿವರ್ತಿಸಿದೆ.

ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಆಗುತ್ತಿರುವ ವೆಚ್ಚವೂ ಪರಿಷತ್ತಿನ ಮುಂದಿನ ಕಾರ‌್ಯನಿರ್ವಹಣೆಯ ವಿಧಾನದ ಬಗ್ಗೆ ಆತಂಕ ಮೂಡಿಸುವಂತಿದೆ.


ಲಕ್ಷಕ್ಕೂ ಮೀರಿದ ಮತದಾರರು ರಾಜ್ಯದಾದ್ಯಂತ ಹರಡಿರುವುದರಿಂದ ಅವರನ್ನು ಸಾಮಾನ್ಯ ಅಂಚೆಯ ಮೂಲಕ ಮನವಿ ಮಾಡಿ ಸಂಪರ್ಕಿಸುವುದಕ್ಕೆ ಕನಿಷ್ಠ ಹತ್ತು ಲಕ್ಷ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗುತ್ತಿರುವುದು ಈ ಚುನಾವಣೆಗೆ ಸಾರ್ವತ್ರಿಕ ಚುನಾವಣೆಯ ಸ್ವರೂಪವನ್ನು ನೀಡಿದೆ.


ಕೆಲವು ಅಭ್ಯರ್ಥಿಗಳು ಮತದಾರರು ಮತ್ತು ಚುನಾವಣಾ ಪ್ರಚಾರಕರನ್ನು ಓಲೈಸುವುದಕ್ಕೆ ಭೋಜನಕೂಟದ ಸಮಾವೇಶಗಳನ್ನು ಏರ್ಪಡಿಸುತ್ತಿರುವ ವರದಿಗಳೂ ಇವೆ.


ಪ್ರಚಾರಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಅಭ್ಯರ್ಥಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಚುನಾವಣೆಗೆ ಆಗಿರುವ ಖರ್ಚನ್ನು ಪರಿಷತ್ತಿನ ಯೋಜನೆಗಳಿಂದ ತುಂಬಿಕೊಳ್ಳಲು ಮುಂದಾಗಲಾರರೆಂದು ಹೇಳಲಾಗದು.


ಹಣ ಮತ್ತು ಜಾತಿಯ ಪ್ರಭಾವವೇ ಪರಿಷತ್ತಿನ ನೇತೃತ್ವ ವಹಿಸುವುದಕ್ಕೆ ಅರ್ಹತೆ ಆಗುವಂಥ ಸ್ಥಿತಿಗೆ ಪರಿಷತ್ತಿನ ಸದಸ್ಯರು ಅವಕಾಶ ನೀಡಿದರೆ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಸಾಂಸ್ಕೃತಿಕ ವೇದಿಕೆಯಾಗಿ ಉಳಿಯುವುದಿಲ್ಲ.

ಕನ್ನಡದ ಬಳಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಭಾಷೆಯ ಉಳಿವಿಗೆ ಅಗತ್ಯವಾದ ಗೌರವಾಭಿಮಾನವನ್ನು ಜನತೆಯಲ್ಲಿ ಮೂಡಿಸಬಲ್ಲ ಚೈತನ್ಯಶಾಲಿ ವರ್ಚಸ್ಸು ಪರಿಷತ್ತಿನ ನಾಯಕತ್ವಕ್ಕೆ ಇಂದು ಬೇಕಾಗಿದೆ.

ನಾಡವರ ಹೆಮ್ಮೆ ಮತ್ತು ಅಭಿಮಾನದ ಸ್ವತಂತ್ರ ಸಂಸ್ಥೆಯಾಗಿ ಪರಿಷತ್ತನ್ನು ಬೆಳೆಸುವ ಕ್ರಿಯಾಶೀಲ ನೇತೃತ್ವವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ವಿವೇಕವನ್ನು ಮತದಾರರು ಪ್ರದರ್ಶಿಸಬೇಕಿದೆ.
ಕೃಪೆ : ಪ್ರಜಾವಾಣಿ

ದಲಿತ ರಾಜಕಾರಣಕ್ಕೆ ಯಾರು ಮಾದರಿ? - ದಿನೇಶ ಅಮೀನಮಟ್ಟು

`ನಾವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.

ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.


ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.

ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.


ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.


ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.


ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.


ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.


ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.


ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.


1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.


ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.


ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.


ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.


1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.


ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.


ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.


ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.


ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.


ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.


ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.
ಕೃಪೆ : ಪ್ರಜಾವಾಣಿ 

Monday, April 16, 2012

ಮಾತ್ಗವಿತೆ-67

ನಿಮ್ಮ ಹೆಚ್ಚುಗಾರಿಕೆಯನ್ನು ಮುಚ್ಚಿಡಿ
ಬಿಚ್ಚಿಟ್ಟು ಬಿಚ್ಚಟ್ಟು ಕಟ್ಟೆ ಕಡೆದದ್ದು ಅಷ್ಟರಲ್ಲೇ ಇದೆ !
ಬೆಂಬಲ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕುವ
ನೈತಿಕತೆ ಎನ್ನುತ್ತಲೇ ಹಾದರಕ್ಕೆ ಬಸಿರಾಗುವ
ಹುಚ್ಚಾಟವನ್ನು ಇನ್ನಾದರೂ ಬಿಡಿ !

Wednesday, April 11, 2012

ಮಾತ್ಗವಿತೆ-66

ನಮ್ಮೊಳಗೆ ಒಬ್ಬನಿದ್ದಾನಲ್ಲ
ಆತನ್ನ ಹೊರಗೆಳೆಯೋಣ
ಒಳಗೆ ಕುಂತೇ ಮಸಲತ್ತು ಮಾಡಿ
ಕುಶಲ ವಿಚಾರಿಸುತ್ತಾನಲ್ಲ
ನಲ್ಲನಲ್ಲ ; ಅಲ್ಲದವನೂ ಅಲ್ಲ !
ಅಲ್ಲೇ ಅಲ್ಲೇ ನಮ್ಮೊಳಗೇ
ಕುಂತು ಕಿಸಿಕಿಸಿ ಮಾಡುವ ಬೊಲ್ಲ !

Tuesday, April 10, 2012

ಮಾತ್ಗವಿತೆ-65

ಕಾಟಾಚಾರದ ನಿಮ್ಮ ಕಟಿಪಿಟಿಗೆ
ನಮ್ಮ ತಕರಾರು ಇದೆ !
ಕೂಟಕ್ಕೆ ಬೇಕು ; ಕೂಡಿಕೆಗೆ ಬೇಡ
ಎಂದರೇನರ್ಥ ಸ್ವಾಮಿ ?
ದಾಟಿಸಬೇಡವೇ ಹೊಳೆ ;
ಹೋಗ್ಲಿ ಬಿಡಿ
ದಾಟುವುದಾದರೂ ಹೊಳೆಯಬೇಕಲ್ಲವೆ ?

Monday, April 09, 2012

ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ !

ಪರಶುರಾಮ ಕಲಾಲ್
ಭೀಮಾತೀರದಲ್ಲಿ.. ಸಿನಿಮಾ ಈಗ ವಿವಾದದ ವಸ್ತುವಾಗಿದೆ. ನಾನು ಬರೆದ ’ಭೀಮಾ ತೀರದ ಹಂತಕರು’ ಪುಸ್ತಕವನ್ನು ನೋಡಿಯೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಾದ ಮಾಡಿ, ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ. ಚಿತ್ರನಟ ವಿಜಯ್, ಟಿವಿ9 ಸ್ಟುಡಿಯೋದಲ್ಲಿ ರವಿ ಬೆಳಗೆರೆಯನ್ನು ಕುಳ್ಳರಿಸಿಕೊಂಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ ಫೋನ್‌ನಲ್ಲಿಯೇ ರವಿ ಬೆಳಗೆರೆ ಭಾಷೆಯಲ್ಲಿ ಹೇಳುವುದಾದರೆ ಕಂಡಂ ಮಾಡಿ ಹಾಕಿದ್ದಾನೆ. ಸುವರ್ಣ ಚಾನಲ್‌ನಲ್ಲಿ ಪ್ರತಾಪ ಸಿಂಹ ರವಿ ಬೆಳಗೆರೆಯ ಜನ್ಮ ಜಾಲಾಡಿ, ನನ್ನ ಎದುರು ಬಂದು ರವಿ ಬೆಳಗೆರೆ ತನ್ನ ವಿದ್ವತ್ ಪ್ರದರ್ಶಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಈ ಎಲ್ಲಾ ಪ್ರಹಸನ ನೋಡಿದ ಮೇಲೆ ಒಂದಿಷ್ಟು ಈ ಬಗ್ಗೆ ಚರ್ಚಿಸಬೇಕು ಎಂದು ಈ ಲೇಖನ ಬರೆಯುತ್ತಿರುವೆ.
ಚಂದಪ್ಪ ಹರಿಜನ ಎನ್ನುವನನ್ನು ಜಗತ್ತಿಗೆ ಪರಿಚಯಿಸಿದವನು ನಾನೇ ಎಂದು ರವಿ ಬೆಳಗೆರೆ ಎದೆತಟ್ಟಿಕೊಂಡು ಹೇಳಿದ್ದಾರೆ. ಎದೆಗೆ ಕಿವಿಗೊಟ್ಟು ಅವರು ಕೇಳಿಕೊಳ್ಳಲಿ ಚಂದಪ್ಪ ಹರಿಜನ ಸಾವಿಗೆ ನಾನೂ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ.

ಸಾಮಾನ್ಯನಾದ ವ್ಯಕ್ತಿಯೊಬ್ಬ ಸಾಮಾಜಿಕ ಕಾರಣಕ್ಕೂ, ಧ್ವೇಷದ ಕಾರಣಕ್ಕೂ ಅಪರಾಧಿಯಾಗಿ ಬದಲಾವಣೆಯಾದಾಗ ಆತನನ್ನು ಆ ದಾರಿಯಿಂದ ಹೊರ ತಂದು ಹೊಸ ದಾರಿ ತೋರಿಸಬೇಕಾಗಿದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಅದರ ಬದಲು ಆ ವ್ಯಕ್ತಿಯ ಅಪರಾಧವನ್ನು ವೈಭವಿಕರಿಸಿ, ಆತನನ್ನು ಹೀರೋ ಮಾಡುವ ಮೂಲಕ ಆತನಿಗೆ ಮತ್ತೊಂದು ಭ್ರಮೆಯನ್ನು ಉಣಬಡಿಸುವ ಮೂಲಕ ಆತ ಎನ್‌ಕೌಂಟರ್‌ನಲ್ಲೂ ವೀರನಂತೆ ಹೋರಾಡಲು ಹೋಗಿ ಸಾವನಪ್ಪಿಬಿಡುತ್ತಾನೆ. ಒಂದು ಪತ್ರಿಕೆಯ ಪ್ರಸರಣ ಏರಿಸಲು ಆತನನ್ನು ಹೀರೋ ಮಾಡಿ ಬಳಸಿಕೊಳ್ಳುವ ವಿಧಾನ ಇದೆಯಲ್ಲಾ ಇದು ಅತ್ಯಂತ ಹೇಯವಾದುದ್ದು.
ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಸೋಮ ಎಂಬ ಬಡಕಲು ಪುಡಿ ರೌಡಿಯೊಬ್ಬನಿಗೆ ಡೆಡ್ಲಿ ಸೋಮ ಎಂದು ಕರೆದು, ವರ್ಣಿಸಿ, ವೈಭವೀಕರಿಸಿದ್ದಕ್ಕೆ ಆ ಸೋಮು ಪೊಲೀಸರಿಗೆ ಶರಣಾಗದೇ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಗುಂಡಿಗೆ ಬಲಿಯಾಗಿ ಬಿಟ್ಟ.
ಯಾವುದೋ ಕಮರ್ಷಿಯಲ್ ಚಿತ್ರದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವುದೇ ಮೂಲಭೂತವಾಗಿ ಸರಿಯಾದುದ್ದಲ್ಲ. ಅದು ಪರವಾಗಿ ಇರಲಿ, ವಿರುದ್ಧವಾಗಿಯಾದರೂ ಇರಲಿ. ಅದು ದೊಡ್ಡ ಪಾಂಡಿತ್ಯದ ಚರ್ಚೆಯ ವಿಷಯವೇ? ತಮ್ಮ ತಮ್ಮ ವಿದ್ವತ್ ಎಂದು ಭಾವಿಸಿರುವ ಪೊಲೀಸ್ ರಿಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇತ್ತೇ?  ಇದು ಸ್ವಪ್ರತಿಷ್ಠೆಗಳ ನಡುವೆ ನಡೆಯುತ್ತಿರುವ ಕದನವಲ್ಲದೇ ಬೇರೇನೋ ಅಲ್ಲ.
ದರ್ಶನ್, ವಿಜಯ್ ಏನೇ ಎಳಸು ಇದ್ದರೂ ಚರ್ಚೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳು ಗಂಭೀರ ಪ್ರಶ್ನೆಗಳೇ ಆಗಿವೆ. ಖಾಸಗಿ ಬದುಕಿನ ಘಟನೆಗಳನ್ನು ವರ್ಣರಂಜಿತವಾಗಿ ಬರೆದು, ಅದೇ ಇವತ್ತಿನ ಪ್ರಸ್ತುತ ಸಮಸ್ಯೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವ ಅವರ ಮಾತು ಸುದ್ದಿಯನ್ನು ಮಾರಿಕೊಂಡೇ ಜೀವಿಸುವವರು ಕೇಳಿಕೊಳ್ಳಬೇಕಾದ ಮಾತೇ ಆಗಿತ್ತು.
ರಾಜ್ಯದಲ್ಲಿ ಬರಗಾಲ ತೀವ್ರ ರೀತಿಯಲ್ಲಿ ಕಾಡುತ್ತಿದೆ. ಜಾನುವಾರುಗಳಿಗೆ ಮೇವು ಇಲ್ಲ. ಹಳ್ಳಿಗಳ ಜನ ಗುಳೇ ಎದ್ದು ನಗರಗಳಿಗೆ ಹೋಗುತ್ತಿದ್ದಾರೆ. ಬಿಸಿಲು ತೀವ್ರವಾಗಿ ಹೆಚ್ಚಾಗಿದ್ದು, ಕರ್ನಾಟಕದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅನೇಕ ಕಡೆ ಕುಡಿಯುವ ನೀರು ಫ್ಲೊರೆಸೆಸ್‌ನಿಂದ  ಕೂಡಿದೆ. ಈಗ ಆ ನೀರು ಕೂಡಾ ಕುಡಿಯಲು ಸಿಗುತ್ತಿಲ್ಲ. ಜನ ಸಂಕಷ್ಟಗಳನ್ನೇ ಹೊದ್ದುಕೊಂಡು ಜೀವ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಉತ್ತರದಾಯಿತ್ವವಾಗಬೇಕಾದವರೂ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಒಣ ಪಾಂಡಿತ್ಯದ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಹಕ್ಕುದಾರಿಕೆಯ ಬಗ್ಗೆ, ತಮ್ಮ ಪ್ರತಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ?
ಕನ್ನಡದ ಯಾವ ದಿನ ಪತ್ರಿಕೆಯೂ ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರಣಿ ವರದಿ ಮಾಡುವ ಹೊಣೆಗಾರಿಕೆಯನ್ನು ಮರೆತು ಬಿಟ್ಟವಾ…? ಪ್ರಜಾವಾಣಿಯಾದರೂ ಈ ಕೆಲಸ ಮಾಡೀತು ಎಂದು ಕೊಂಡಿದ್ದರೆ ಅದು ಹುಸಿಯಾಗಿ ಹೋಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಕಾಲ ಇದಾಗಿದೆಯೆ?
ವಿಜಯ ಸಂಕೇಶ್ವರ ಸಾರಥ್ಯದಲ್ಲಿ ವಿಜಯವಾಣಿ ಎಂಬ ದಿನ ಪತ್ರಿಕೆಯು ಕಾಲಿಟ್ಟಿದೆ. ವಾರ ಪತ್ರಿಕೆಗಳ ಶೈಲಿಯು ದಿನ ಪತ್ರಿಕೆಗೆ ಬಂದು ಬಿಟ್ಟಿತಾ ಅನ್ನುವ ರೀತಿ ಸಾರಥ್ಯ ಬಂದು ಕೂತಿದೆ. ಇನ್ನೂ ಸಾರಥಿಗಳೇ ಎಲಾ, ಭಲರೇ ಎಲೈ ಸಾರಥಿ ನಾವುದಾರು ಎಂದರೆ ಎಂದು ಫರಾಕು ಹೇಳುವ ತಮ್ಮ ಕೀರ್ತಿ, ಅಭಿದಾನ, ಜಾತಿ, ಧರ್ಮ ಎಲ್ಲವನ್ನೂ ಪ್ರದರ್ಶಿಸಿ ಫಲಕ ಹಿಡಿದು ನಿಂತು ಕೊಳ್ಳುವ ಕಾಲಕ್ಕೆ ಬಂದು ನಿಂತಿದೆ ನಮ್ಮ ಕನ್ನಡದ ಪತ್ರಿಕೋದ್ಯಮ.
ಪ್ರಜಾವಾಣಿ, ಕನ್ನಡಪ್ರಭವನ್ನು ಕಟ್ಟಿ ಅದಕ್ಕೊಂದು ಘನತೆ, ಗಾಂಭಿರ್ಯ ತಂದಿರುವ ಮಹನೀಯರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರು ಬೇಜಾರು ಪಟ್ಟುಕೊಳ್ಳುವ ಸಂಭವವಿಲ್ಲ. ನಡೆಯಲಿ ಕರುನಾಟಕ ಪಾವನವಾಗಲಿ ಎಂದೇ ಹೇಳುವುದು ಬಿಟ್ಟು ಬೇರೇನೋ ತೋಚುತ್ತಿಲ್ಲ.
ಕೃಪೆ : ವರ್ತಮಾನ ಬ್ಲಾಗ್

Friday, April 06, 2012

ಅಸ್ಪೃಶ್ಯತೆ ಹೇಗೆ ಆರಂಭವಾಯಿತು ?

 ಬಿ.ವಿ. ವೀರಭದ್ರಪ್ಪ
ಪ್ರಾಚೀನ ಸಮಾಜವು ಅಲೆಮಾರಿಯಾಗಿತ್ತು. ಸಂಚಾರದ ಚಪಲತೆಯಿಂದಾಗಿ ಅದು ಅಲೆಮಾರಿಯಾಗಿರಲಿಲ್ಲ. ಹಸುಗಳೇ ಪ್ರಾಚೀನ ಸಮಾಜದ ಸಂಪತ್ತು. ಪಶು ಪಾಲನೆಗಾಗಿ ಹೊಸ ಹೊಸ ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಹೋಗಬೇಕಾಗಿದ್ದುದರಿಂದ ಪ್ರಾಚೀನ ಸಮಾಜ ಅನಿವಾರ್‍ಯವಾಗಿ ಅಲೆಮಾರಿಯಾಗಬೇಕಾಗಿತ್ತು. ಪ್ರಾಚೀನ ಸಮಾಜ ಕೃಷಿಯ ವಿಧಾನವನ್ನು ಕಂಡುಕೊಂಡಕೊಡಲೆ ತನ್ನ ವಾಸವನ್ನು ಸ್ಥಿರಗೊಳಿಸಿಕೊಂಡಿತು, ಹಸುವಿನಿಂದ ಭೂಮಿಗೆ ಸಂಪತ್ತು ವ್ಯತ್ಯಾಸವಾದೊಡನೆ ಅದು ಒಂದೆಡೆ ನೆಲಸುವಂತಾಯಿತು.
ಎಲ್ಲ ಅನಾಗರಿಕ ಜನಾಂಗವೂ ಒಂದೇ ಬಾರಿಗೆ ಸ್ಥಿರವಾಸಿ ಜೀವನ ಆರಂಭಿಸಲಿಲ್ಲ. ಕೆಲವು ಸ್ಥಿರವಾಗಿ ನೆಲೆ ನಿಂತವು. ಇನ್ನೂ ಕೆಲವು ಅಲೆಮಾರಿ ಜೀವನ ನಡೆಸುತ್ತಿದ್ದುವು. ಈ ಅನಾಗರಿಕ ಗುಂಪುಗಳು ಎಂದಿಗೂ ಶಾಂತಿಯಿಂದ ಬಾಳಲಿಲ್ಲ. ಸದಾ ಅವು ಪರಸ್ಪರ ಹೋರಾಡುತ್ತಿದ್ದುವು. ಅವುಗಳ ಹೋರಾಟಕ್ಕೆ ಮುಖ್ಯವಾದ ಕಾರಣಗಳೆಂದರೆ: ೧. ಹಸುಗಳ ಅಪಹರಣ, ೨. ಸ್ತ್ರೀಯರ ಅಪಹಾರ ಮತ್ತು ೩. ಇತರ ಪಂಗಡಗಳಿಗೆ ಸೇರಿದ ಹೊಲದಲ್ಲಿ ಕಳ್ಳತನದಿಂದ ತಮ್ಮ ಹಸುಗಳನ್ನು ಮೇಯಿಸುವುದು.
ಕೆಲವು ಗುಂಪುಗಳು ಸ್ಥಿರವಾಸ ಆರಂಭಿಸಿದೊಡನೆ ಇಂಥ ಗುಂಪುಗಳ ಮೇಲೆ ಹೋರಾಟ ನಡೆಸುವುದು ಹೆಚ್ಚು ಲಾಭದಾಯಕವೆಂದು ಅಲೆಮಾರೀ ಗುಂಪುಗಳೂ ತಿಳಿದುವು. ಅಲೆಮಾರಿ ಗುಂಪುಗಳ ವಿರುದ್ಧ ಹೋರಾಟಕ್ಕಿಂತ ಸ್ಥಿರವಾಸಿಗಳ ಮೇಲಿನ ಇಂಥ ಹೋರಾಟ ಹೆಚ್ಚು ಲಾಭದಾಯಕವೆನಿಸಿತ್ತು. ಸ್ಥಿರವಾಸಿ ಗುಂಪುಗಳು ಇಮ್ಮಡಿ ಸಂಪತ್ತುಳ್ಳವುಗಳೆಂದು ಅಲೆಮಾರಿ ಗುಂಪುಗಳು ತಿಳಿದಿದ್ದವು. ಅಲೆಮಾರಿಗುಂಪುಗಳಲ್ಲಿದ್ದಂತೆ ಅವುಗಳ ಬಳಿ ಹಸುಗಳಿದ್ದುವು. ಜೊತೆಗೆ ತಮ್ಮಲ್ಲಿರದ ಧಾನ್ಯವೂ ಸ್ಥಿರವಾಸಿಗಳ ಬಳಿ ಇತ್ತು. ಸ್ಥಿರವಾಸಿ ಗುಂಪುಗಳ ಸಂಪತ್ತನ್ನು ಕದಿಯುವ ಬಯಕೆಯಿಂದ ಅಲೆಮಾರಿ ಗುಂಪುಗಳ ವ್ಯವಸ್ಥಿತವಾದ ಆಕ್ರಮಣ ನಡೆಸುತ್ತಿದ್ದವು. ಸ್ಥಿರವಾಸಿ ಗುಂಪುಗಳಿಗೆ ಆ ಸಂಚಾರಿ ಗುಂಪುಗಳ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಹಲವಾರು ತೊಡಕುಗಳಿದ್ದುವು. ಹೆಚ್ಚು ಲಾಭದಾಯಕ ವೃತ್ತಿಯಲ್ಲಿ ತೊಡಗಿದ್ದ ಈ ಸ್ಥಿರವಾಸಿ ಗುಂಪುಗಳು ತಮ್ಮ ನೇಗಿಲುಗಳನ್ನು ಸದಾ ಖಡ್ಗವಾಗಿ ಬಳಸಲು ಸಾಧ್ಯವಿರಲಿಲ್ಲ. ಅಥವಾ ತಮ್ಮ ನಿವಾಸವನ್ನು ತ್ಯಜಿಸಿ ಈ ಧಾಳಿಕಾರರನ್ನು ಬೆನ್ನಟ್ಟಿಕೊಂಡು ಹೋಗುವುದು ಸಾಧ್ಯವಿರಲಿಲ್ಲ.
ಗುಂಪು ಹೋರಾಟದಲ್ಲಿ ಸೋತು ಅಳಿದುಳಿದವರು ಹೊರದೂಡಲ್ಪಟ್ಟ ಭ್ರಷ್ಟ ಜನ (Broken men)ರಾದರು. ಅನಾಗರಿಕ ಜನತಾ ಹೋರಾಟದಲ್ಲಿ ಸೋತು ಓಡಿಹೋದ ಗುಂಪು ಪೂರ್ಣ ನಾಶ ಹೊಂದುತ್ತಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸೋತ ಗುಂಪು ತುಂಡುತುಂಡಾಗುತ್ತಿತ್ತು. ಇದರ ಪರಿಣಾಮವಾಗಿ ಅನಾಗರಿಕ ಕಾಲದಲ್ಲಿ ಎಲ್ಲೆಲ್ಲೂ ಸಂಚರಿಸುವ ಈ ಭ್ರಷ್ಟ ಜನರಗುಂಪುಗಳು ಸದಾ ಇರುತ್ತಿದ್ದುವು.
ಪ್ರಾಚೀನ ಸಮಾಜವು ಮೂಲತಃ ರಕ್ತ ಸಂಬಂಧಿ ಗುಂಪಿನ ಆಧಾರದ ಮೇಲೆ ನಿಂತಿತ್ತೆಂಬುದನ್ನು ಲಕ್ಷಿಸಬೇಕು. ಆ ಸಮಾಜದ ಪ್ರತಿಯೊಬ್ಬನೂ ಆ ಕೂಟಕ್ಕೆ ಸೇರಿದವನು. ಅಂದರೆ ಆ ಗುಂಪಿಗೇ ಒಳಗಾಗಿರುವವನು, ಗುಂಪಿನ ಹೊರಗೆ ನಿಂತ ಯಾವೊಂದು ವ್ಯಕ್ತಿಗೂ ಜೀವನ ಸಾಧ್ಯವಿರಲಿಲ್ಲ. ಒಂದು ಗುಂಪಿನಲ್ಲಿ ಜನಿಸಿದಾತ ಇನ್ನೊಂದು ಗುಂಪು ಸೇರಿ ಅದರ ಸದಸ್ಯನಾಗುವುದೂ ಸಾಧ್ಯವಿರಲಿಲ್ಲ.
ಮೇಲಿನ ವಿವರಣೆಯಿಂದ ಪ್ರಾಚೀನ ಸಮಾಜ ಜೀವನದಲ್ಲಿ ಎರಡು ವರ್ಗಗಳಿದ್ದುವೆಂದು ತಿಳಿದುಬರುತ್ತದೆ. ಒಂದು ಗುಂಪು ಸ್ಥಿರವಾಗಿ ನೆಲೆಸಿದ್ದುದು. ಅಲೆಮಾರಿ ತಂಡಗಳ ಆಕ್ರಮಣಗಳ ಬಗೆಗೆ ಕಾವಲು ನಡೆಸಿ ಅವರನ್ನು ಹಿಂದಕ್ಕಟ್ಟ ಬಲ್ಲವರನ್ನು ಹುಡುಕುತ್ತಿತ್ತು. ಇನ್ನೊಂದು ಗುಂಪು ಸೋತ ಗುಂಪುಗಳಲ್ಲಿ ಅಳಿದುಳಿದು ಭ್ರಷ್ಟರಾದ ಜನಗಳದು, ತಮಗೆ ರಕ್ಷಣೆ ಮತ್ತು ಆಶ್ರಯ ನೀಡಬಲ್ಲವರನ್ನು ಅರಸುತ್ತಿತ್ತು.
ನಮಗೆ ಯಾವೊಂದು ಲಿಖಿತ ಆಧಾರಗಳು ಈ ಬಗೆಗೆ ದೊರೆತಿಲ್ಲವಾದರೂ ಈ ಎರಡು ಗುಂಪುಗಳೂ ಒಂದು ನಿರ್ದಿಷ್ಟ ಒಪ್ಪಂದಕ್ಕೆ ಬಂದಿರಬಹುದೆಂದು ಅಂಬೇಡ್ಕರ್ ಅವರು ಊಹಿಸುತ್ತಾರೆ. ಅಲೆಮಾರಿ ಭ್ರಷ್ಟಜನರ ಗುಂಪು ಸ್ಥಿರವಾಸಿ ಗುಂಪುಗಳ ಕಾವಲಿಗೆ ನಿಂತು ಆಕ್ರಮಣ ಎದುರಿಸಲು ಒಪ್ಪಿರಬಹುದು. ಪ್ರತಿಯಾಗಿ ಸ್ಥಿರವಾಸಿ ಗುಂಪುಗಳು ಇವರಿಗೆ ಆಶ್ರಯ ಮತ್ತು ಆಹಾರ ನೀಡಲು ಸಮ್ಮತಿಸಿರಬಹುದು.
ಈ ಭ್ರಷ್ಟಜನ ಎಲ್ಲಿ ವಾಸ ಮಾಡಬೇಕು? ಸ್ಥಿರವಾಸಿ ಜನರ ಜೊತೆಗೇ ಅಥವಾ ಹೊರಗಡೆಗೆ? ಈ ಸಮಸ್ಯೆ ಇತ್ಯರ್ಥವಾಗುವಲ್ಲಿ ಎರಡು ವಿಚಾರಗಳು ಪ್ರಮುಖ ಪಾತ್ರ ವಹಿಸಿರಬೇಕು. ಒಂದನೆಯದು ರಕ್ತಸಂಬಂಧ. ಪ್ರಾಚೀನ ಸಂಪ್ರದಾಯದಂತೆ ಒಂದೇ ರಕ್ತ ಸಂಬಂಧಿಗಳು ಮಾತ್ರವೆ ಒಂದು ಸಮಾಜದಲ್ಲಿರಲು ಸಾಧ್ಯ. ಗುಂಪಿಗೆ ಸೇರದ ಹಟ್ಟಿಯೊಳಗಡೆ ಪರಕೀಯನಿಗೆ ಪ್ರವೇಶವಿರಲಿಲ್ಲ. ಭ್ರಷ್ಟಜನರು ಪರಕೀಯರು. ಅವರು ಸ್ಥಿರವಾಸಿ ಗುಂಪಿಗಿಂತ ಭಿನ್ನ ಗುಂಪಿಗೆ ಸೇರಿದ್ದವರು. ಈ ಕಾರಣದಿಂದ ಅವರು ಸ್ಥಿರವಾಸಿ ಗುಂಪಿನಜತೆಗೆ ವಾಸಿಸಲು ಅರ್ಹರಾಗಿರುವುದಿಲ್ಲ. ಎರಡನೆಯದಾಗಿ, ಆಯಕಟ್ಟಿನ ದೃಷ್ಟಿಯಿಂದ ನೋಡಿದರೂ ವೈರಿಗುಂಪನ್ನು ಎದುರಿಸಲು ಇವರು ಹಳ್ಳಿಯ ಹೊರಗಡೆ ನೆಲಸುವುದೇ ಸೂಕ್ತವಾಗಿತ್ತು. ಈ ಭ್ರಷ್ಟ ಜನರು ಸ್ಥಿರವಾಸಿ ಗುಂಪಿನಿಂದ ಪ್ರತ್ಯೇಕವಾಗಿ, ದೂರವಾಗಿ, ಹಳ್ಳಿಯ ಹೊರಗಡೆ ನೆಲಸಲು ಈ ಎರಡು ಅಂಶಗಳು ಕಾರಣವಾದುವು.
ಗೋಮಾಂಸ ಭಕ್ಷಣೆಯನ್ನು ಬ್ರಾಹ್ಮಣರು, ಬ್ರಾಹ್ಮಣೇತರರು ಬಿಟ್ಟರು ಹಾಗೂ ಭ್ರಷ್ಟಜನರು ಅದನ್ನು ಬಳಸುತ್ತಾ ಸಾಗಿದರು. ಇದರಿಂದ ಭಿನ್ನ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬನೂ ಗೋಮಾಂಸ ಭಕ್ಷಕನಾಗಿದ್ದ. ನೂತನ ಪರಿಸ್ಥಿತಿಯಲ್ಲಿ ಒಂದು ವರ್ಗ ಮಾಂಸ ಭಕ್ಷಣೆ ಬಿಟ್ಟಿತ್ತು. ಮತ್ತೊಂದು ವರ್ಗ ಭಕ್ಷಿಸುತ್ತಿತ್ತು. ಇದು ಎದ್ದು ಕಾಣುವ ಅಂತರ. ಹಿಂದೆಂದೂ ಯಾವುದೂ ಮಾಡದಂತೆ, ಅದು ಸಮಾಜವನ್ನು ವಿಭಜನೆ ಮಾಡಿತು. ಆದರೂ ಕೂಡ ಅಸ್ಪೃಶ್ಯತೆ ಯನ್ನು ರೂಢಿಗೆ ತರುವಷ್ಟು ತೀವ್ರವಾಗಿ ಈ ಅಂತರವು ಸಮಾಜವನ್ನು ವಿಭಜಿಸಬೇಕಾಗಿರಲಿಲ್ಲ. ಅದೊಂದು ಸಾಮಾಜಿಕ ಭಿನ್ನತೆಯಾಗಿ ಉಳಿಯಬಹುದಾಗಿತ್ತು. ಸಮಾಜದ ವಿವಿಧ ವರ್ಗಗಳು ಆಹಾರದ ವಿಷಯದಲ್ಲಿ ಭಿನ್ನವಾಗಿರುವ ಹಲವಾರು ಉದಾಹರಣೆಗಳಿವೆ. ಒಬ್ಬ ಒಪ್ಪಿದುದನ್ನು ಇನ್ನೊಬ್ಬ ಒಪ್ಪುವುದಿಲ್ಲ. ಆದರೂ ಈ ಭಿನ್ನತೆಯು ಅದರೊಳಗಿನ ಸಂಪರ್ಕವನ್ನೇ ತೊಡೆದು ಹಾಕುವಂತಹುದಾಗಿಲ್ಲ.
ಭಾರತದಲ್ಲಿ ಸ್ಥಿರಜನಾಂಗ ಮತ್ತು ಭ್ರಷ್ಟ ಜನಾಂಗಗಳೊಳಗೆ ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಅಂತರ ಮೂಡಿಬರಲು ವಿಶೇಷ ಕಾರಣ ವೇನಾದರೂ ಇರಲೇ ಬೇಕು. ಗೋಮಾಂಸ ಭಕ್ಷಣೆಯು ಧರ್ಮಾತೀತವಾದುದು. ಕೇವಲ ಅಭಿರುಚಿಯ ಪ್ರಶ್ನೆ ಎಂದಾಗಿದ್ದರೆ, ಗೋಮಾಂಸ ಭಕ್ಷಕರು ಮತ್ತು ಭಕ್ಷಕರಲ್ಲದವರೊಳಗಿನ ಭಿನ್ನತೆ ತಲೆದೋರುತ್ತಲೇ ಇರಲಿಲ್ಲ. ದುರದೃಷ್ಟವಶಾತ್ ಗೋಮಾಂಸ ಭಕ್ಷಣೆಯನ್ನು ಅಭಿರುಚಿಯ ವಿಚಾರವಾಗಿ ಪರಿಗಣಿಸುವ ಬದಲಾಗಿ ಧಾರ್ಮಿಕ ದೃಷ್ಟಿಯಿಂದ ಕಾಣಲಾಯಿತು. ಬ್ರಾಹ್ಮಣರು ಗೋವನ್ನು ಪವಿತ್ರ ಪ್ರಾಣಿಯಾಗಿ ಪರಿಗಣಿಸಿದುದರಿಂದ ಹೀಗಾಯಿತು. ಇದರಿಂದ ಗೋಮಾಂಸ ಭಕ್ಷಣೆ ಪಾಪವೆನಿಸಿತು. ಭ್ರಷ್ಟಜನರು ಪಾಪ ಮಾಡಿದವರಾದುದರಿಂದ ಸಮಾಜದ ಆವರಣದಿಂದ ಹೊರಗುಳಿಯಬೇಕಾಯಿತು.
ಸಮಾಜ ಜೀವನದಲ್ಲಿ ಧರ್ಮದ ಸ್ಥಾನ ಮತ್ತು ಪ್ರಭಾವಗಳ ಬಗೆಗೆ ಅರಿವು ಇಲ್ಲದವರಿಗೆ ಈ ಉತ್ತರವು ತೃಪ್ತಿಕರವಾಗಿ ಕಾಣಲಾರದು. ಧರ್ಮವು ಅಂತಹ ಭಿನ್ನತೆಯನ್ನೇಕೆ ಪರಿಗಣಿಸಬೇಕು ಎಂದು ಅವರು ಪ್ರಶ್ನಿಸಬಹುದು. ಧರ್ಮದ ಸ್ಥಾನ ಮತ್ತು ಪ್ರಭಾವಗಳ ಬಗೆಗೆ ಈ ವಿಷಯಗಳನ್ನು ಅರಿತರೆ ವಿಷಯ ಮನದಟ್ಟಾದೀತು.
ಮೊದಲು ಧರ್ಮದ ವ್ಯಾಖ್ಯೆ ಪರಿಶೀಲಿಸೋಣ. ಎಲ್ಲ ಧರ್ಮಗಳಿಗೂ ಮೂಲಭೂತವಾದ ಒಂದು ವಿಶ್ವವ್ಯಾಪಿಗುಣವಿದೆ. ಅದು ಧರ್ಮಗಳೆಲ್ಲಾ ನಂಬಿಕೆ ಮತ್ತು ಆಚರಣೆಗಳ ಸಂಘಟಿತ ವ್ಯವಸ್ಥೆ ಎಂಬುದು. ಅದು ೧. ಪವಿತ್ರವೆನಿಸಿದುದಕ್ಕೆ ಸಂಬಂಧಿಸಿದುದು ಮತ್ತು ೨. ಅವುಗಳಲ್ಲಿ ನಂಬಿಕೆ ಇರುವವರನ್ನೆಲ್ಲಾ ಒಂದು ಸಮಾಜವಾಗಿ ಸಂಘಟಿಸುವುದು.
ಮೊದಲ ಸೂತ್ರದಂತೆ ಧರ್ಮವು ಮಾನವನ ಮನೋಭಾವದಲ್ಲಿ ಮೂಡಿದ ನಿಜವಾದ ಮತ್ತು ಆದರ್ಶವೆನಿಸಿದ ಎಲ್ಲವುಗಳನ್ನು ಎರಡು ವರ್ಗಗಳಾಗಿ ವಿಂಗಡಿಸುವುದು. ಒಂದು ಪವಿತ್ರವಾದುದು, ಇನ್ನೊಂದು ಅಪವಿತ್ರವಾದುದು.
ಬ್ರಾಹ್ಮಣರು ಗೋವನ್ನು ಪವಿತ್ರ ಪ್ರಾಣಿಯಾಗಿಸಿದರು. ಮೃತ ಗೋವು ಮತ್ತು ಜೀವಂತ ಗೋವುಗಳೊಳಗೆ ವ್ಯತ್ಯಾಸ ಸಾರಲು ಅವರು ಯೋಚಿಸಲಿಲ್ಲ. ಬದುಕಿರಲಿ, ಸತ್ತಿರಲಿ ಗೋವು ಪವಿತ್ರ ಪ್ರಾಣಿ. ಗೋಮಾಂಸ ಭಕ್ಷಣೆಯು ಅನೀತಿಯಷ್ಟೇ ಅಲ್ಲ. ಅದು ಅನೀತಿ, ಅನ್ಯಾಯ ಮಾತ್ರ ಆಗಿದ್ದರೆ ಅದಕ್ಕೆ ಶಿಕ್ಷೆಗಿಂತ ಹೆಚ್ಚಿನದೇನೂ ಅಗತ್ಯವಿರಲಿಲ್ಲ. ಗೋಮಾಂಸ ಭಕ್ಷಣೆ ಪಾಪಕರವೆನಿಸಿತು. ಯಾರೇ ಆಗಲಿ ಹಸುವನ್ನು ನಿಕೃಷ್ಟವಾಗಿ ಕಂಡವರು ಪಾಪಮಾಡಿದ ತಪ್ಪಿಗೆ ಒಳಗಾಗುತ್ತಾರೆ. ಸಂಪರ್ಕಕ್ಕೂ ಅನರ್ಹರಾಗುತ್ತಾರೆ. ಗೋಮಾಂಸ ಭಕ್ಷಿಸುತ್ತಾ ಸಾಗಿದ ಭ್ರಷ್ಟಜನತೆ ಪಾಪ ಮಾಡಿದ ಅಪರಾಧಿಗಳಾದರು.
ಗೋವು ಪವಿತ್ರಪ್ರಾಣಿಯಾಗಿ ಭ್ರಷ್ಟಜನತೆ ಗೋಮಾಂಸ ಭಕ್ಷಣೆ ಮುಂದುವರಿಸಿದಾಗ ಅವರು ಸಂಪರ್ಕಕ್ಕೂ ಅನರ್ಹರಾದರು. ಅಥವಾ ಅಸ್ಪೃಶ್ಯರು ಎಂದೆನಿಸಿದರು.
ಈ ವಿವೇಚನೆ ಅಂತ್ಯಗೊಳಿಸುವ ಮುನ್ನ ಬರಬಹುದಾದ ವಿರೋಧಗಳನ್ನು ಪರಿಶೀಲಿಸಬೇಕಾಗಿದೆ. ಈ ವಿವೇಚನೆಗೆ ಎರಡು ವಿರೋಧಾ ಭಿಪ್ರಾಯಗಳು ಸಾಮಾನ್ಯವಾಗಿ ಬರಬಹುದು. ಒಂದನೆಯದು, ಭ್ರಷ್ಟಜನರು ಸತ್ತ ಹಸುವಿನ ಮಾಂಸ ತಿನ್ನುತ್ತಿದ್ದರು ಎಂಬುದಕ್ಕೆ ಆಧಾರವೇನು ಎಂಬುದು. ಎರಡನೆಯದು, ಬ್ರಾಹ್ಮಣರೂ, ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆ ನಿಲ್ಲಿಸಿದ ಮೇಲೂ ಭ್ರಷ್ಟರೇಕೆ ಗೋಮಾಂಸ ಭಕ್ಷಣೆ ನಿಲ್ಲಿಸಲಿಲ್ಲ ಎಂಬುದು. ಅಸ್ಪೃಶ್ಯತೆಯ ಮೂಲದ ಬಗೆಗೆ ಇಲ್ಲಿ ನಡೆಸಲಾದ ವಿವೇಚನೆಗೆ ಈ ಪ್ರಶ್ನೆಗಳು ಪ್ರಾಮುಖ್ಯ ವಾಗಿವೆಯಾಗಿ ಅವುಗಳಿಗೆ ಉತ್ತರ ನೀಡಬೇಕಾದುದು ಅಗತ್ಯ.
ಮೊದಲ ಪ್ರಶ್ನೆ ಸೂಕ್ತವೂ ಮಹತ್ವದ್ದೂ ಆಗಿದೆ. ಭ್ರಷ್ಟ ಜನತೆ ಮೊದಲಿನಿಂದಲೂ ಗೋಮಾಂಸ ಭಕ್ಷಿಸುತ್ತಿದ್ದರು ಎಂದಾದರೆ ಈ ವಿವೇಚನೆ ಉರುಳೀತು. ಏಕೆಂದರೆ ಅವರು ಮೊದಲಿನಿಂದಲೂ ಗೋಮಾಂಸ ಭಕ್ಷಿ ಸುತ್ತಿದ್ದರು. ಆದರೂ ಕೂಡ ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಿರಲಿಲ್ಲ. ಎರಡನೆಯ ಪ್ರಶ್ನೆ ಮಹತ್ವದ್ದಲ್ಲವಾದರೂ ಸಮಂಜಸವಾದುದು. ಬ್ರಾಹ್ಮಣರು ಗೋಮಾಂಸಭಕ್ಷಣೆ ಕೈಬಿಟ್ಟರು. ಬ್ರಾಹ್ಮಣೇತರರು ಅವರನ್ನೇ ಅನು ಕರಿಸಿದರು ಎಂದಮೇಲೆ ಅದೇಕೆ ಭ್ರಷ್ಟ ಜನರೂ ಹಾಗೆ ಮಾಡಲಿಲ್ಲ? ಗೋವು ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣೇತರರಿಗೆ ಪವಿತ್ರ ಪ್ರಾಣೆಯಾದುದರಿಂದ ಗೋಹತ್ಯೆಯು ಮಹಾಪರಾಧವಾಗಿ ಶಾಸನವಾದ ಮೇಲೂ ಭ್ರಷ್ಟ ಜನರೇಕೆ ಗೋಮಾಂಸ ಭಕ್ಷಣೆ ನಿಲ್ಲಿಸಲಿಲ್ಲ. ಅವರು ಗೋಮಾಂಸ ಭಕ್ಷಿಸದಂತೆ ಮಾಡಿದ್ದರೆ ಅಸ್ಪೃಶ್ಯತೆಯೇ ಇರುತ್ತಿರಲಿಲ್ಲ.
ಮೊದಲ ಪ್ರಶ್ನೆಗೆ ಉತ್ತರ ಹೀಗಿದೆ: ಸ್ಥಿರವಾಸಿ ಜನತೆ ಮತ್ತು ಭ್ರಷ್ಟ ಜನರು ಗೋಮಾಂಸವನ್ನು ಭಕ್ಷಿಸುತ್ತಿದ್ದಾಗಲೂ ಸಹ ಒಂದು ವ್ಯವಸ್ಥೆ ಇತ್ತು. ಸ್ಥಿರವಾಸಿಗಳು ಸಜೀವ ಪ್ರಾಣಿಯ ಹತ್ಯೆಯಿಂದ ದೊರೆತ ಮಾಂಸವನ್ನೂ, ಭ್ರಷ್ಟ ಜನರು ಸತ್ತ ಗೋವಿನ ಮಾಂಸವನ್ನೂ ತಿನ್ನುತ್ತಿದ್ದರು. ಮೃತ ಗೋವಿನ ಮಾಂಸ ಭ್ರಷ್ಟ ಜನರ ಪೂರ್ಣ ಹಕ್ಕು ಬಾಧ್ಯತೆಗೆ ಒಳಗಾಗಿತ್ತು ಎಂದು ತಿಳಿದುಬರುತ್ತದೆ.
ಅಂಬೇಡ್ಕರ್ ಜನಿಸಿದ ಮಹಾರಾಷ್ಟ್ರದ ಮಹಾರ್ ಜಾತಿಯಲ್ಲಿ ಸೂಕ್ತ ಆಧಾರ ದೊರೆಯುತ್ತದೆ. ಮಹಾರ್ ಜನರು ಸತ್ತ ಪ್ರಾಣಿಯನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳುವುದು ತಮ್ಮ ಅಧಿಕಾರ ಎನ್ನುತ್ತಾರೆ. ಹಳ್ಳಿಯ ಪ್ರತಿಯೊಬ್ಬ ಹಿಂದುವಿನ ಹಸು ಸತ್ತಾಗಲು ಅದು ತಮ್ಮ ಹಕ್ಕೆಂದು ಅವರು ಸಾರುತ್ತಾರೆ. ಯಾವೊಬ್ಬ ಹಿಂದುವೂ ತನ್ನ ಹಸು ಸತ್ತಾಗ ಅದರ ಮಾಂಸ ತಿನ್ನುವಂತಿಲ್ಲ. ಗೋಮಾಂಸ ಭಕ್ಷಣೆ ಸಾರ್ವತ್ರಿಕವಾಗಿದ್ದಾಗ, ಹಿಂದೂಗಳು ಗೋಹತ್ಯೆ ಮಾಡಿ ಅದರ ಮಾಂಸ ತಿನ್ನುತ್ತಿದ್ದಾಗ ಮಹಾರ್ ಜನರು ತಾನಾಗಿ ಸತ್ತ ಗೋವಿನ ಮಾಂಸ ತಿನ್ನುತ್ತಿದ್ದರು. ಹಾಗಾದರೆ ಇಂದು ನಿಜ ವಿರುವುದು ಪ್ರಾಚೀನ ಕಾಲದಲ್ಲೂ ನಿಜವಿತ್ತೆ? ಮಹಾರಾಷ್ಟ್ರದಲ್ಲಿ ಸತ್ಯ ವೆನಿಸುವ ಈ ವಿಚಾರ ಭಾರತದಾದ್ಯಂತ ಎಲ್ಲೆಡೆಯೂ ಸ್ಥಿರವಾಸಿ ಮತ್ತು ಭ್ರಷ್ಟ ಜನರೊಳಗಿನ ವ್ಯವಸ್ಥೆಯಾಗಿತ್ತು ಎಂದು ಹೇಳಬಹುದೆ? ಈ ಎರಡು ಪ್ರಶ್ನೆಗಳು ನಮಗೆ ಎದುರಾಗುತ್ತವೆ.
ಈ ಸಂದರ್ಭದಲ್ಲಿ ಮಹಾರ್‌ರೊಳಗಿನ ಪರಂಪರಾಗತ ಪದ್ಧತಿಯೊಂದನ್ನು ಅಂಬೇಡ್ಕರ್ ಅವರು ಉದಾಹರಿಸುತ್ತಾರೆ. ಅದರಂತೆ ಬೀದರ್‌ನ ಮುಸ್ಲಿಂ ಅರಸರು ಹಳ್ಳಿಗಳ ಹಿಂದುಗಳ ವಿರುದ್ಧ ಮಹಾರ್ ಜನರಿಗೆ ೫೨ ಹಕ್ಕುಗಳನ್ನು ನೀಡಿದ್ದರೆನ್ನಲಾಗಿದೆ. ಇವುಗಳನ್ನು ಬೀದರಿನ ಅರಸನೇ ನೀಡಿ ದನೆಂದರೂ ಸಹ ಈ ಹಕ್ಕು ನೀಡಿಕೆಯನ್ನು ಆರಂಭಿಸಿದ ಮೊದಲಿಗೆ ಆತನೇ ಆಗಿರಲಾರ. ಅದು ಹಿಂದಿನಿಂದಲೂ ಆಚರಣೆಯಲ್ಲಿತ್ತು; ಅರಸನು ಅದನ್ನು ಸಮರ್ಥಿಸಿದ ಅಷ್ಟೆ. ಅಂದರೆ ಭ್ರಷ್ಟಜನರು ಸತ್ತಹಸುವಿನ ಮಾಂಸ ತಿನ್ನುವುದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದಿರಬೇಕು. ಅಂಥ ಒಂದು ವ್ಯವಸ್ಥೆ ನಡೆದುಬಂದಿರುವುದಾದರೂ ವಾಸ್ತವವೇ ಎನಿಸುತ್ತದೆ.
ಸ್ಥಿರವಾಸಿ ಸಮಾಜವು ಕೃಷಿ ಮತ್ತು ಪಶುಪಾಲನೆ ಮಾಡುತ್ತಿದ್ದು ಸಂಪತ್ತುಳ್ಳದ್ದಾಗಿತ್ತು. ಭ್ರಷ್ಟ ಜನರು ಜೀವನಕ್ಕೆ ಮಾರ್ಗವಿಲ್ಲದೆ ಸ್ಥಿರವಾಸಿ ಸಮಾಜವನ್ನೆ ಪೂರ್ಣವಾಗಿ ಅವಲಂಬಿಸಿ ಬಾಳಿದ ನಿರ್ಗತಿಕರಾಗಿದ್ದರು. ಇಬ್ಬರಿಗೂ ಮುಖ್ಯ ಆಹಾರ ಗೋಮಾಂಸ. ಸ್ಥಿರವಾಸಿ ಜನಗಳ ಬಳಿ ಹಸುಗಳಿದ್ದುವಾಗಿ ಆಹಾರಕ್ಕಾಗಿ ಅವನ್ನು ಕೊಲೆಮಾಡಲು ಸಾಧ್ಯವಿತ್ತು. ಆದರೆ ಭ್ರಷ್ಟ ಜನರ ಬಳಿ ಹಸುಗಳಿಲ್ಲವಾಗಿ ಅದು ಸಾಧ್ಯವಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭ್ರಷ್ಟ ಜನರಿಗೆ ಅವರು ನಡೆಸುವ ಕಾವಲು ಗಾರಿಕೆಗಾಗಿ ತಮ್ಮಲ್ಲಿ ಸತ್ತ ಪ್ರಾಣಿಗಳನ್ನು ನೀಡಲು ಸ್ಥಿರವಾಸಿ ಜನರು ಒಪ್ಪಿದುದು ಸಹಜವೇ. ಈ ಪದ್ಧತಿಯು ಮಹಾರಾಷ್ಟ್ರಕ್ಕೆ ಮಾತ್ರ ಅನ್ವಯಿಸದೆ ಭಾರತದ ಎಲ್ಲೆಡೆಗೂ ಹರಡಿತ್ತೆಂದೂ ತಿಳಿಯಬಹುದು.
ಮೊದಲ ವಿರೋಧವನ್ನಿದು ಇತ್ಯರ್ಥಗೊಳಿಸುತ್ತದೆ. ಈಗ ಎರಡನೆ ವಿರೋಧವನ್ನು ಪರಿಶೀಲಿಸೋಣ. ಗುಪ್ತ ಸಾಮ್ರಾಟರು ಮಾಡಿದ ಶಾಸನಗಳು ಗೋಹತ್ಯೆ ಮಾಡುವವರನ್ನು ತಡೆಯುವುದಕ್ಕಾಗಿ ರೂಪಿತವಾದುವು. ಅವು ಭ್ರಷ್ಟ ಜನತೆಗೆ ಸಂಬಂಧಿಸಿದುವಲ್ಲ. ಏಕೆಂದರೆ, ಅವರು ಗೋಹತ್ಯೆ ಮಾಡುತ್ತಿರಲಿಲ್ಲ. ಸತ್ತ ಹಸುಗಳನ್ನು ಮಾತ್ರ ತಿನ್ನುತ್ತಿದ್ದರು. ಗೋಹತ್ಯೆ ವಿರೋಧ ಶಾಸನವನ್ನಿದು ಮುರಿಯಲಿಲ್ಲ. ಆದುದರಿಂದ ಸತ್ತ ಹಸುವಿನ ಮಾಂಸ ತಿನ್ನುವ ಪದ್ದತಿ ಮುಂದುವರೆಯಿತು. ಬ್ರಾಹ್ಮಣರೂ, ಬ್ರಾಹ್ಮಣೇತರರೂ ಅಹಿಂಸಾ ದೃಷ್ಟಿಯಿಂದ ಹಸುವಿನ ಮಾಂಸ ತಿನ್ನುವುದನ್ನು ನಿಲ್ಲಿಸಿದರು ಎನ್ನುವುದಾದರೆ, ಭ್ರಷ್ಟ ಜನರ ನೀತಿ ಅಂಥ ಅಹಿಂಸಾ ನೀತಿಗೂ ವಿರೋಧವಾಗಿರಲಿಲ್ಲ. ಗೋಹತ್ಯೆ ಹಿಂಸೆ, ಸತ್ತ ಹಸುವನ್ನು ಕತ್ತರಿಸಿ ತಿನ್ನುವುದು ಹಿಂಸೆಯಲ್ಲ. ಆದುದರಿಂದ ಸತ್ತ ಹಸುವಿನ ಮಾಂಸ ತಿನ್ನುವಲ್ಲಿ ಭ್ರಷ್ಟ ಜನತೆ ಚಿಂತೆಗೊಳಗಾಗಬೇಕಾದ ಪ್ರಮೇಯವೇ ಇರಲಿಲ್ಲ. ಅವರ ನೀತಿಯನ್ನು ಅಹಿಂಸಾ ನೀತಿ ಎಂದಾಗಲೀ, ಶಾಸನಬಾಹಿರವೆಂದಾಗಲೀ ಆಪಾದಿಸುವಂತಿರಲಿಲ್ಲ.
ಅವರು ಅದೇಕೆ ಬ್ರಾಹ್ಮಣರನ್ನೂ, ಬ್ರಾಹ್ಮಣೇತರರನ್ನೂ ಅನು ಕರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಎರಡುಮುಖವಾದುದು. ಮೊದಲನೆಯದಾಗಿ ಈ ಅನುಕರಣೆ ತೀರ ನಷ್ಟದಾಯಕವಾದುದು. ಅವರಿಂದ ನಷ್ಟ ಅನುಭವಿಸಲು ಸಾಧ್ಯವಿರಲಿಲ್ಲ. ಸತ್ತ ಹಸುವಿನ ಮಾಂಸವಿಲ್ಲದೆ ಅವರು ಉಪವಾಸ ಬೀಳ ಬೇಕಾಗಿತ್ತು. ಎರಡನೆಯದಾಗಿ ಪ್ರಾರಂಭದಲ್ಲಿ ಅದೊಂದು ಹಕ್ಕಾಗಿದ್ದರೂ ಸತ್ತ ಪ್ರಾಣಿಯನ್ನು ಹೋರುವುದೀಗ ಹೊಣೆಗಾರಿಕೆಯಾಗಿತ್ತು. ಸತ್ತ ಗೋವನ್ನು ಹೊತ್ತು ಕೊಂಡು ಹೋಗದಿರಲು ಸಾಧ್ಯವಿಲ್ಲವಾಗಿ ಮೊದಲಿನಂತೆಯೇ ಗೋಮಾಂಸವನ್ನು ಆಹಾರಕ್ಕಾಗಿ ಬಳಸುವುದು ಅವರಿಗೆ ಸಹಜವಾಯಿತು.
ಪ್ರಾಚೀನ ಸಾಹಿತ್ಯದಲ್ಲಿ ಅಂತ್ಯವಾಸಿನ್, ಅಂತ್ಯ, ಅಂತ್ಯಜ ಎಂದು ಕರೆಯಲಾದ ಜನರ ಸಾಮಾಜಿಕ ಪರಿಸ್ಥಿತಿಯನ್ನು ನೋಡೋಣ. ಈ ವರ್ಗಗಳ ಜನರು ಇಂದಿನ ಆಧುನಿಕ ದೃಷಿಯ ಅಸ್ಪೃಶ್ಯರಂತಿದ್ದರೆಂದು ಹೇಳಲು ಸಾಧ್ಯವಿಲ್ಲ. ಆದರೂ ಕೂಡ ಅವರನ್ನು ಅಸ್ಪೃಶ್ಯರೆಂದೇ ವರ್ಣಿಸಲಾಗಿತ್ತು. ಧರ್ಮಸೂತ್ರಗಳ ಕಾಲದಲ್ಲಿ ಅಸ್ಪೃಶ್ಯಪದದ ಅರ್ಥವೇ ಬೇರೆಯಾಗಿತ್ತು.
ಈ ಬಗೆಗೆ ಶಾಸ್ತ್ರಗಳು ಸೂಚಿಸಿದ್ದ ಅಶುದ್ಧತೆಯ ಪರಿಹಾರಗಳನ್ನು ಪರಿಶೀಲಿಸಬೇಕಾಗಿದೆ. ಉದಾಹರಣೆಗಾಗಿ ಅಸ್ಪೃಶ್ಯ ವರ್ಗದ ಚಂಡಾಲರ ಪರಿಸ್ಥಿತಿ ಯನ್ನು ಪರಿಶೀಲಿಸಬಹುದು. ಮೊದಲನೆಯದಾಗಿ ಚಂಡಾಲ ಪದವು ಯಾವೊಂದು ನಿರ್ದಿಷ್ಟ ವರ್ಗದ ಜನರನ್ನು ಸೂಚಿಸುತ್ತಿಲ್ಲ. ಒಂದಕ್ಕಿಂತ ಭಿನ್ನವಾದ ಹಲವು ವರ್ಗಗಳ ಜನರಿಗೆ ಈ ಹೆಸರಿತ್ತು. ಧರ್ಮಶಾಸ್ತ್ರಗಳಲ್ಲಿ ಐದು ಬಗೆಯ ಚಂಡಾಲರನ್ನು ಸೂಚಿಸಲಾಗಿದೆ.
೧. ಶೂದ್ರ ತಂದೆ ಮತ್ತು ಬ್ರಾಹ್ಮಣ ತಾಯಿಯಲ್ಲಿ ಜನಿಸಿದವನು. ೨. ಅವಿವಾಹಿತ ಸ್ತ್ರೀಯ ಮಗ, ೩. ಸಗೋತ್ರ ಸ್ತ್ರೀಯಲ್ಲಿ ಜನಿಸಿದವನು, ೪. ಸನ್ಯಾಸಿಯಾದವನು ಮತ್ತೆ ಸಂಸಾರಿಯಾದ ನಂತರ ಅವನಲ್ಲಿ ಜನಿಸಿದವನು, ೫. ಕ್ಷೌರಿಕ ತಂದೆ ಮತ್ತು ಬ್ರಾಹ್ಮಣ ತಾಯಲ್ಲಿ ಜನಿಸಿದವನು.
ಗೌತಮ, ವಶಿಷ್ಠ, ಬೋಧಾಯನ ಮತ್ತು ಮನುಗಳ ಧರ್ಮ ಸೂತ್ರಗಳಲ್ಲಿ ಬ್ರಾಹ್ಮಣನು ಚಂಡಾಲನನ್ನು ಮುಟ್ಟಿದರೆ ಅಶುದ್ಧಿಯಾಗುವುದೆಂದು ಹೇಳಲಾಗಿದೆ. ಆ ಸೂತ್ರಗಳಿಂದ ತಿಳಿದುಬರುವುದೇನೆಂದರೆ; ೧. ಚಂಡಾಲರ ಸ್ಪರ್ಶದಿಂದ ಮೈಲಿಗೆ ಯಾಗುತ್ತಿದ್ದುದು ಬ್ರಾಹ್ಮಣರಿಗೆ ಮಾತ್ರ. ೨. ಬಹುಶಃ ಈ ಮೈಲಿಗೆಯ ನೀತಿಯು ಶುಭ ಸಂದರ್ಭದಲ್ಲಿ ಮಾತ್ರ ಪರಿಗಣಿಸಲ್ಪಡುತ್ತಿತ್ತು.
ಈ ವಿವೇಚನೆ ಸರಿ ಎಂದಾದರೆ ಇದು ಮೈಲಿಗೆಯ ಸಮಸ್ಯೆಯಾಗಿದ್ದು., ಅಸ್ಪೃಶ್ಯತೆಗಿಂತ ಭಿನ್ನವಾಗಿದೆ. ಅಸ್ಪೃಶ್ಯನಾದವನನ್ನು ಯಾವ ಹಿಂದೂವೂ ಸ್ಪರ್ಶಿ ಸುವುದಿಲ್ಲ. ಅಶುದ್ಧನಾದವನು ಬ್ರಾಹ್ಮಣನನ್ನು ಮಾತ್ರ ಮೈಲಿಗೆಯಾಗಿಸುತ್ತಾನೆ. ಅಶುದ್ಧನಾದವನ ಸ್ಪರ್ಶವು ಶುಭಸಂದರ್ಭದಲ್ಲಿ ಮಾತ್ರ ಅಶುದ್ಧವೆನಿಸುತ್ತದೆ. ಆದರೆ ಅಸ್ಪೃಶ್ಯನ ಸಂಪರ್ಕದ ಹೊಲೆ ಸದಾಕಾಲವೂ ಇರುತ್ತದೆ.
ಸ್ಮೃತಿಗಳು ಅಶುದ್ಧವೆಂದು ಹೇಳುವ ಜಾತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪರಿಶಿಷ್ಟವೆಂದು ಘೋಷಿಸಿರುವ ಜಾತಿಗಳ ಪಟ್ಟಿಯೊಡನೆ ಹೋಲಿಸಿ ನೋಡಬಹುದು.
ಸ್ಮೃತಿಗಳಲ್ಲಿ ೧೨ ಅಶುದ್ಧ ಜಾತಿಗಳ ಹೆಸರುಗಳಿದ್ದರೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ೪೨೯ ಇವೆ. ಎರಡರಲ್ಲೂ ಸಾಮಾನ್ಯವಾಗಿರುವುದು ಚರ್ಮಕಾರ ಜಾತಿ ಒಂದೇ!
ಚಮ್ಮಾರ್ ಜಾತಿಯೊಂದೇ ಏಕೆ ಎರಡು ಪಟ್ಟಿಗಳಲ್ಲೂ ಸೂಚಿತವಾಗಿದೆ. ಎರಡು ಪಟ್ಟಿಗಳೂ ಒಂದೇ ವರ್ಗದ ಜಾತಿಗಳನ್ನು ಸೂಚಿಸುತ್ತವೆ ಎಂಬುದು ಉತ್ತರವಲ್ಲ. ಆ ಉತ್ತರ ಸರಿಯಾಗಿದ್ದರೆ ’ ಚಮ್ಮಾರ್’ ಮಾತ್ರವಲ್ಲ, ಸ್ಮೃತಿಗಳಲ್ಲಿ ಕಂಡುಬರುವ ಎಲ್ಲ ಜಾತಿಗಳ ಹೆಸರೂ ಸರ್ಕಾರದ ಪಟ್ಟಿಯಲ್ಲಿರ ಬೇಕು. ಆದರೆ ಹಾಗಿಲ್ಲ. ನಿಜವಾದ ಉತ್ತರವೆಂದರೆ, ಎರಡು ಪಟ್ಟಿಗಳಲ್ಲಿ ಎರಡು ಭಿನ್ನ ವರ್ಗದ ಜಾತಿಗಳ ಹೆಸರುಗಳಿವೆ. ಅಶುದ್ಧ ಎನಿಸಿದ ಜಾತಿಗಳ ಹೆಸರುಗಳು ಸರ್ಕಾರದ ಪಟ್ಟಿಯಲ್ಲಿರಲು ಕಾರಣ, ಹಿಂದೆ ಮೈಲಿಗೆ ಎನಿಸಿದ್ದ ಈ ಜಾತಿಗಳೇ ಮುಂದೆ ಅಸ್ಪೃಶ್ಯರೆನಿಸಿದರು.
ಚಮ್ಮಾರ್ ಜಾತಿ ಎರಡು ಪಟ್ಟಿಯಲ್ಲೂ ಕಂಡುಬರುತ್ತಿದೆ ಎಂದ ಮಾತ್ರಕ್ಕೆ ಮೈಲಿಗೆ ಮತ್ತು ಅಸ್ಪಶ್ಯತೆಗೆ ಭೇದವಿಲ್ಲ ಎಂದು ತಿಳಿಯಬಾರದು. ಬದಲಾಗಿ ಒಂದು ಕಾಲದಲ್ಲಿ ಮೈಲಿಗೆಯುಳ್ಳ ಜಾತಿ ಎಂದೆನಿಸಿದ್ದ ಚಮ್ಮಾರರು ಕಾಲಕ್ರಮೇಣ ಅಸ್ಪೃಶ್ಯರೆನಿಸಿದರು. ಎರಡು ಪಟ್ಟಿಗಳಲ್ಲೂ ಆ ಹೆಸರಿರಲು ಅದೇ ಕಾರಣ. ಸ್ಮೃತಿಗಳಲ್ಲಿ ಹೊಲೆಯುಳ್ಳುವರೆಂದು ಹೇಳಲಾದ ೧೨ ಜಾತಿಗಳಲ್ಲಿ ಕೇವಲ ಚಮ್ಮಾರ ಜಾತಿ ಮಾತ್ರ ಏಕೆ ಅಸ್ಪೃಶ್ಯವೆನಿಸಿತು ಎಂಬುದಕ್ಕೆ ಸಮಾಧಾನ ನೀಡುವುದು ಕಷ್ಟವಲ್ಲ. ಚಮ್ಮಾರ ಮತ್ತು ಇತರ ಜಾತಿಗಳಲ್ಲಿ ಭಿನ್ನತೆ ಉಂಟುಮಾಡಿದ ಅಂಶವೆಂದರೆ ಗೋಮಾಂಸ ಭಕ್ಷಣೆ.
ಗೋವು ಪವಿತ್ರವೆನಿಸಿ, ಗೋಮಾಂಸ ಭಕ್ಷಣೆ ಪಾಪವೆಂದೆನಿ ಸುತ್ತಿದ್ದಾಗ, ಗೋಮಾಂಸ ಭಕ್ಷಿಸುತ್ತಿದ್ದ ಹೊಲೆಯುಳ್ಳವರೆನಿಸಿದ ಜಾತಿಗಳವರು ಅಸ್ಪೃಶ್ಯರೆನಿಸಿದರು. ಚಮ್ಮಾರರು ಮಾತ್ರವೇ ಗೋಮಾಂಸ ಭಕ್ಷಿಸುವ ಜಾತಿಯವ ರಾಗಿದ್ದರು. ಆದುದರಿಂದಲೇ ಅವರ ಹೆಸರು ಎರಡು ಪಟ್ಟಿಗಳಲ್ಲೂ ಕಂಡು ಬರುತ್ತದೆ. ಮೈಲಿಗೆ ಮತ್ತು ಅಸ್ಪೃಶ್ಯರನ್ನು ಪ್ರತ್ಯೇಕಿಸುವ ಗೋಮಾಂಸ ಭಕ್ಷಣೆಯೇ ಅಸ್ಪೃಶ್ಯತೆಯ ಮೂಲ ಎಂಬುದನ್ನು ಖಚಿತಗೊಳಿಸುತ್ತವೆ.
ಅಸ್ಪೃಶ್ಯತೆಯ ಉಗಮವನ್ನು ನಿರ್ಧರಿಸುವಲ್ಲಿ ಅತಿ ಹಿಂದಿನ ಮತ್ತು ಮುಂದಿನ ಎರಡು ರೇಖೆಗಳು ನಮ್ಮ ಮುಂದಿವೆ. ಈಗ ಒಂದು ನಿರ್ದಿಷ್ಟ ಕಾಲವನ್ನು ಅಸ್ಪೃಶ್ಯತೆಯ ಉಗಮದ ಬಗೆಗೆ ನಾವು ನಿರ್ಧರಿಸಬಹುದು. ಅಸ್ಪೃಶ್ಯತೆಯ ಮೂಲವೆನಿಸಿದ ಗೋಮಾಂಸ ಭಕ್ಷಣೆಯ ಪ್ರಶ್ನೆಯನ್ನು ಮೊದಲು ಎತ್ತಿಕೊಂಡರೆ ಆ ಕಾಲ ನಿರ್ಧರಿಸಬಹುದು. ಗೋಮಾಂಸ ಭಕ್ಷಣೆಯ ನಿಷೇಧವನ್ನೇ ಶೋಧನೆಯ ಸಾಧನವಾಗಿ ಅಂಬೇಡ್ಕರ್ ಬಳಸಿಕೊಂಡರು. ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯೊಡನೆ ಅಸ್ಪೃಶ್ಯತೆಯ ಹುಟ್ಟಿಗೆ ನಿಕಟ ಸಂಬಂಧವಿದೆ. ಗೋಹತ್ಯೆ ಯಾವಾಗ ಅಪರಾಧವೆನಿಸಿತು ಮತ್ತು ಗೋಮಾಂಸ ಭಕ್ಷಣೆ ಪಾಪವೆನಿಸಿತು ಎಂದು ನಾವು ಕಂಡುಕೊಂಡರೆ ಅಸ್ಪೃಶ್ಯತೆಯು ಹುಟ್ಟಿದ ಕಾಲ ತಿಳಿಯಬಹುದು.
ಗೋಹತ್ಯೆ ಅಪರಾಧವೆಂದಾಗಲಿ, ಗೋಮಾಂಸ ಭಕ್ಷಣೆ ನಿಷೇಧ ವೆಂದಾಗಲಿ ಮನು (ಕ್ರಿ.ಶ.ಸು. ೨೦೦) ಹೇಳಿಲ್ಲವೆಂಬುದನ್ನು ನಾವು ನೋಡಿದ್ದೇವೆ. ಡಾ.ಡಿ.ಆರ್. ಭಂಡಾರ್‌ಕರ್ ಹೇಳಿರುವಂತೆ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಗುಪ್ತ ಅರಸರು ಗೋಹತ್ಯೆಯನ್ನು ಮಹಾಪರಾಧವೆಂದು ಸಾರಿದರು.
ಆದುದರಿಂದ ವಿಶ್ವಾಸನೀಯವಾಗಿ ಅಸ್ಪೃಶ್ಯತೆಯು, ಕ್ರಿ.ಶ.ಸು. ೪೦೦ ರವೇಳೆಗೆ ಹುಟ್ಟಿತೆಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಭಾರತದ ಇತಿಹಾಸವನ್ನು ಪೂರ್ಣವಾಗಿ ರೂಪಿಸಿದ ಹಾಗೂ ಭಾರತದ ಇತಿಹಾಸ ವಿದ್ಯಾರ್ಥಿಗಳು ವಿಷಾದಕರ ವೆನಿಸಿಸುವಂತೆ ಕೈಬಿಟ್ಟಿರುವ ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮಗಳು ಪರಸ್ಪರ ಮೇಲ್ಮೆಗಾಗಿ ನಡೆಸಿದ ಹೋರಾಟದ ಪರಿಣಾಮವಾಗಿ ಅಸ್ಪೃಶ್ಯತೆ ಹುಟ್ಟಿತು.

ಕೃಪೆ :ವಿಚಾರ ಮಂಟಪ ಬ್ಲಾಗ್

ಹಿಂದೂಗಳು ಮತ್ತು ಗೋಮಾಂಸ ಭಕ್ಷಣೆ : ಡಾ. ಬಾಬಾಸಾಹೇಬ ಅಂಬೇಡ್ಕರ್

ಬಿ.ವಿ. ವೀರಭದ್ರಪ್ಪ

ಏಪ್ರಿಲ್ ೧೪ರಂದು ದಾವಣಗೆರೆಯಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುವ ಅವಕಾಶ ನನಗೆ ದೊರಕಿತ್ತು. ಈ ಸಾರಿಯ ಅಂಬೇಡ್ಕರ್ ಜಯಂತಿ, ಅಂಬೇಡ್ಕರ್ ಜನ್ಮಶತಾಬ್ದಿ ವರ್ಷದ ಆರಂಭೋತ್ಸವವೂ ಆಗಿರುವುದರಿಂದ ಅದಕ್ಕೊಂದು ವಿಶೇಷ ಕಳೆ ಬಂದಿತ್ತು. ರಾಜ್ಯ ಸಭಾ ಸದಸ್ಯ ಕೆ.ಜಿ. ಮಹೇಶ್ವರಪ್ಪ ಮತ್ತು ಸ್ಥಳೀಯ ಲಾ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಎಸ್.ಎಚ್. ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆ ಸಭೆಗೆ ನಗರದ ಶಾಸಕ ಯಜಮಾನ್ ಮೋತಿ ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.
ಅಸ್ಪೃಶ್ಯತೆಯ ಮೂಲವನ್ನು ವಿವರಿಸುತ್ತಾ ನಾನು ಗೋಮಾಂಸ ಸೇವನೆಯೆ ಅಸ್ಪೃಶ್ಯತೆಗೆ ಮುಖ್ಯ ಕಾರಣವಾಯಿತು, ಆದರೆ ವೇದ ಕಾಲದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲ ಆರ್‍ಯರು. ಗೋಮಾಂಸ ಸೇವಿಸುತ್ತಿದ್ದರು; ನಂತರ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿ ಆರ್‍ಯರು ಗೋಮಾಂಸ ತಿನ್ನುವುದನ್ನು ಕೈಬಿಟ್ಟರು. ಜಾತಿಭ್ರಷ್ಟ ರಾಗಿ ಊರ ಹೊರಗೆ ವಾಸಿಸುತ್ತಿದ್ದ ಜನ ಸತ್ತ ಹಸುಗಳ ಮಾಂಸ ತಿನ್ನುವುದನ್ನು ಮುಂದುವರಿಸಿದ್ದರಿಂದ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟರು- ಎಂದು ಅಂಬೇಡ್ಕರರ ’ಅಸ್ಪೃಶ್ಯರು’ (untouchables) ಗ್ರಂಥವನ್ನು ಉಲ್ಲೇಖಿಸುತ್ತಾ ಮಾತನಾಡಿದೆ.
ಹಿಂದೂಗಳು, ಪವಿತ್ರವೆಂದು ಭಾವಿಸುವ ಗ್ರಂಥಗಳನ್ನು ಅರ್ಥ ಮಾಡಿ ಕೊಳ್ಳಲು ಅಂಬೇಡ್ಕರರ ಕೃತಿಗಳು ತಮ್ಮ ಅನನ್ಯ ಒಳನೋಟದಿಂದ ನೆರವು ನೀಡುತ್ತವೆ. ಮಹಾರಾಷ್ಟ್ರ ಸರ್ಕಾರವು ಅವರ ಸಮಗ್ರ ಬರಹಗಳನ್ನು ಎಂಟು ಸಂಪುಟಗಳಲ್ಲಿ ಪ್ರಕಟಿಸಿ, ಬಹುದಿನದ ಕೊರೆತೆಯನ್ನು ಹೋಗಲಾಡಿಸಿದೆ. ಬಾಬಾ ಸಾಹೇಬರ ಜನ್ಮ ಶತಾಬ್ಧಿ ವರ್ಷದಲ್ಲಿ ಕರ್ನಾಟಕ ಸರ್ಕಾರ ಅವರ ಕೃತಿಗಳ ಕನ್ನಡ ಆವೃತ್ತಿಯನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ಅವುಗಳನ್ನು ಜನರಿಗೆ ಒದಗಿಸುವ ಅಗತ್ಯವನ್ನು ನಾನು ಒತ್ತಿ ಹೇಳಿದೆ.
ಸಭೆಯ ನಂತರ ಕೆಲವು ತರುಣರು ವಿನಯದಿಂದಲೇ ನನ್ನ ಬಳಿ ಬಂದು "ಬ್ರಾಹ್ಮಣರು ಗೋಮಾಂಸಾಹಾರಿಗಳಾಗಿದ್ದರು ಎಂಬುದಕ್ಕೆ ಆಧಾರವೇನು?" ಎಂದು ಪ್ರಶ್ನಿಸತೊಡಗಿದರು. "ಬ್ರಾಹ್ಮಣರು ಪವಿತ್ರವೆಂದು ಭಾವಿಸುವ ಧರ್ಮಗ್ರಂಥಗಳೇ ಆಧಾರ" ಎಂದೆ. "ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಬರದಿದ್ದರೆ ನಿಮ್ಮ ಹಿರಿಯರನ್ನು ಕೇಳಿ ತಿಳಿದುಕೊಳ್ಳಿ. ಅಂಬೇಡ್ಕರ್ ತಮ್ಮ ಗ್ರಂಥಗಳಲ್ಲಿ ಕೊಟ್ಟಿರುವ ಉಲ್ಲೇಖಗಳನ್ನು ನಿಮ್ಮ ಮನೆಯಲ್ಲಿ ಅಥವಾ ಮಠಗಳಲ್ಲಿರುವ ಧರ್ಮಗ್ರಂಥಗಳೊಡನೆ ಹೋಲಿಸಿ ನೋಡಿ ನಿಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಿ" ಎಂದು ಹೇಳಿದೆ. ನಾನು ಹೇಳಿದ್ದನ್ನೆಲ್ಲಾ ಹಾಗೆ ಒಪ್ಪಿಕೊಳ್ಳದೆ ನನ್ನ ಹೇಳಿಕೆಗಳನ್ನು ಅನುಮಾನಿಸುವ ಅವರ ಸಂಶಯ ಪ್ರವೃತ್ತಿಯನ್ನು ನಾನು ಮೆಚ್ಚಿಕೊಂಡೆ.
ಹಿಂದೂಗಳ ಸಾಮಾಜಿಕ ಇತಿಹಾಸದ ಒಂದು ಮುಖ ಮಾತ್ರ ವೈಭವೀಕರಣಗೊಂಡು, ಅದರ ಉಳಿದ ಮುಖಗಳ ವಸ್ತುನಿಷ್ಠ ಅರಿವಿಗೆ ಬಾಧಕವಾಗಿದೆ. ಅಂಬೇಡ್ಕರ್ ಅಸ್ಪೃಶ್ಯತೆಯ ಮೂಲವನ್ನು ಶೋಧಿಸಲು ತೊಡಗಿ ವೇದಗಳು, ಬ್ರಾಹ್ಮಣಗಳು ಮತ್ತು ಗೃಹ್ಯಸೂತ್ರಗಳನ್ನು ಜಾಲಾಡಿಸಿದ್ದಾರೆ. ಅಸ್ಪೃಶ್ಯತೆ ಹೇಗೆ ಉಗಮವಾಯಿತು ಎಂದು ತಿಳಿಯುವ ಮೊದಲು ಅವರು ತಾವೇ ಹಾಕಿಕೊಂಡ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳ ಬೇಕಾಯಿತು. ಇವು ಅವರ ಪ್ರಶ್ನೆಗಳು:
೧. ಹಿಂದೂಗಳು ಎಂದೂ ಗೋಮಾಂಸ ತಿನ್ನುತ್ತಿರಲಿಲ್ಲವೆ?
೨. ಹಿಂದೂಗಳು ಗೋಮಾಂಸ ತಿನ್ನುವುದನ್ನು ಕೈಬಿಡಲು ಕಾರಣವೇನು?
೩. ಬ್ರಾಹ್ಮಣರು ಸಸ್ಯಾಹಾರಿಗಳಾಗಲು ಕಾರಣವೇನು?
೪. ಗೋಮಾಂಸ ಸೇವನೆ ಅದೇಕೆ ಅಸ್ಪೃಶ್ಯತೆಗೆ ಕಾರಣವಾಯಿತು?
ಅಂಬೇಡ್ಕರ್‌ರ ಸಂಶೋಧನೆಯ ಸಾರವನ್ನು ಸಂಕ್ಷೀಪ್ತವಾಗಿ ನಾಲ್ಕು ಭಾಗಗಳಲ್ಲಿ ಮುಂದೆ ಕೊಡಲಾಗಿದೆ.
ಹಿಂದೂಗಳು, ಹಿಂದೆಂದೂ ಹಸುವಿನ ಮಾಂಸ ತಿನ್ನುತ್ತಿರಲಿಲ್ಲವೆ? ಎಂಬ ಪ್ರಶ್ನೆಗೆ ಬ್ರಾಹ್ಮಣನಿರಲಿ, ಬ್ರಾಹ್ಮಣೇತರನಿರಲಿ, ಪ್ರತಿಯೊಬ್ಬ ಸವರ್ಣೀಯ ಹಿಂದುವೂ ’ಇಲ್ಲ, ಎಂದೂ ಇಲ್ಲ’ ಎಂದು ಉತ್ತರಿಸುತ್ತಾನೆ. ಒಂದು ದೃಷ್ಟಿಯಿಂದ ಅವನು ಸರಿ. ಬಹುಕಾಲದಿಂದ ಹಿಂದೂಗಳು ಹಸುವಿನ ಮಾಂಸ ತಿಂದಿಲ್ಲ. ಸವರ್ಣೀಯ ಹಿಂದೂ, ಈ ಅಭಿಪ್ರಾಯ ಹೊಂದಿದ್ದರೆ ಆ ಬಗ್ಗೆ ಜಗಳ ಬೇಕಿಲ್ಲ. ಆದರೆ ಬ್ರಾಹ್ಮಣ ಪಂಡಿತರು, ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲವಷ್ಟೇ ಅಲ್ಲ, ಅವರು ಸದಾ ಹಸುವನ್ನು ಪವಿತ್ರವೆಂದು ಭಾವಿಸಿದ್ದರು ಮತ್ತು ಗೋಹತ್ಯೆಯನ್ನು ಸದಾ ವಿರೋಧಿಸಿದ್ದರು ಎಂದಾಗ ಮಾತ್ರ ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ.
ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲ ಮತ್ತು ಗೋಹತ್ಯೆಗೆ ವಿರೋಧಿಗಳಾಗಿದ್ದರು ಎಂಬುದಕ್ಕೆ ಸಾಂಪ್ರದಾಯಕ ಪಂಡಿತರು ಕೊಡುವ ಆಧಾರ ಗಳೇನು?
ಋಗ್ವೇದದಲ್ಲಿ ಎರಡು ಆಧಾರಗಳಿವೆ; ಒಂದರಲ್ಲಿ ಹಸುವನ್ನು ’ಅಘ್ನ್ಯ’ ಎಂದರೆ ’ಕೊಲೆಗೆ ಅರ್ಹವಲ್ಲದ್ದು’ ಎಂದು ಕರೆಯಲಾಗಿದೆ (1 - 164 27;iv-1,6; v-82;8 vii-69, 71; x-87) ಇನ್ನೊಂದು ಉದಾಹರಣೆಯಲ್ಲಿ ಗೋವನ್ನರುದ್ರಮಾತೆ, ವಸು ಪುತ್ರಿ, ಆದಿತ್ಯರ ಸಹೋದರಿ ಮತ್ತು ಅಮೃತಕೇಂದ್ರ ಎನ್ನಲಾಗಿದೆ. (viii-101,15; viii-101,16)
ಪ್ರಾಣಿವಧೆ ಮತ್ತು ಗೋಮಾಂಸ ಸೇವನೆ ಸಂಬಂಧವಾಗಿ ಶತಪಥ ಬ್ರಾಹ್ಮಣದಲ್ಲಿ ಹೀಗಿದೆ. ( iii-1.2.21)
"ಆತ ಹಸು ಅಥವಾ ಎತ್ತನ್ನು ತಿನ್ನದಿರಲಿ. ಈ ಪೃಥ್ವಿಯ ಎಲ್ಲಕ್ಕೂ ಹಸು ಮತ್ತು ಎತ್ತು ಆಧಾರ... ಆತ ಈ ಕಾರಣದಿಂದ ಹಸು ಮತ್ತು ಎತ್ತಿನ ಮಾಂಸ ತಿನ್ನಲಾಗದು."
ಆಪಸ್ತಂಭ ಗೃಹ್ಯಸೂತ್ರದಲ್ಲೂ ಇಂತಹ ಕೆಲವು ಶ್ಲೋಕಗಳಿವೆ.
ಹಿಂದೂಗಳು ಗೋಮಾಂಸ ತಿನ್ನುತ್ತಿರಲಿಲ್ಲ ಎಂಬ ಬಗ್ಗೆ ಇವು ಆಧಾರ. ಈ ಆಧಾರಗಳಿಂದ ಯಾವ ತೀರ್ಮಾನಕ್ಕೆ ಬರಬಹುದು?
ಋಗ್ವೇದದ ಆಧಾರದ ವಿಚಾರದಲ್ಲಂತೂ ಅದನ್ನು ತಪ್ಪಾಗಿ ಓದಿ ಅಪಾರ್ಥ ಮಾಡಿಕೊಳ್ಳುವುದರ ಮೂಲಕ ತಪ್ಪು ತೀರ್ಮಾನಕ್ಕೆ ಬರಲಾಗಿದೆ. ಋಗ್ವೇದದದಲ್ಲಿ ಗೋವನ್ನು ’ಅಘ್ನ್ಯ’ ಎಂದು ಕರೆಯಲಾಗಿದೆ. ಈ ಗುಣ ವಾಚಕವು ಹಾಲು ಕೊಡುವ ಹಸುವಿಗೆ ಸಂಬಂಧಿಸಿದೆ. ಅಂಥ ಹಸುವನ್ನು ಕೊಲ್ಲಬಾರದೆಂದಿದೆ. ಋಗ್ವೇದವು ಹಸುವನ್ನು ಗೌರವದಿಂದ ಕಂಡಿದೆ ಎಂಬುದು ನಿಜ. ಕೃಷಿಕರಾದ ’ಇಂಡೋ-ಆರ್‍ಯನ’ರ ಸಮಾಜದಲ್ಲಿ ಹಸುವಿನ ಬಗ್ಗೆ ಇಂಥ ಗೌರವ ಇರಬೇಕಾದುದು ಸಹಜ. ಈ ಪ್ರಯೋಜನ ಹಸುವನ್ನು ಆಹಾರಕ್ಕಾಗಿ ಕೊಲ್ಲಲು ಆರ್‍ಯರಿಗೆ ಅಡ್ಡಿಯಾಗಲಿಲ್ಲ. ವಾಸ್ತವವಾಗಿ ಗೋವು ಪವಿತ್ರವಾದುದರಿಂದಲೇ ಅದನ್ನು ಕೊಲ್ಲಲಾಗುತ್ತಿತ್ತು. ಧರ್ಮ ಶಾಸ್ತ್ರಗಳ ಇತಿಹಾಸಕಾರ ಪಿ.ವಿ. ಕಾಣೆ ಹೇಳುತ್ತಾರೆ:
"ವೇದ ಕಾಲದಲ್ಲಿ ಗೋವು ಪವಿತ್ರವಾಗಿರಲಿಲ್ಲವೆಂದೇನೂ ಅಲ್ಲ. ಬದಲಾಗಿ ಅದು ಪವಿತ್ರವೆನಿಸಿದ್ದರಿಂದಲೇ ಗೋಮಾಂಸ ಸೇವಿಸಬೇಕೆಂದು ವಾಜಸನೇಯಿ ಸಂಹಿತದಲ್ಲಿ ಸಾರಿದೆ." (ಧರ್ಮ ಶಾಸ್ತ್ರ ವಿಚಾರ (ಮರಾಠಿ) ಪುಟ-೧೮೦)
ಋಗ್ವೇದ ಕಾಲದಲ್ಲಿ ಆರ್‍ಯರು ಆಹಾರಕ್ಕಾಗಿ ಗೋವನ್ನು ಕೊಂದು ಗೋಮಾಂಸವನ್ನು ಭಕ್ಷಿಸುತ್ತಿದ್ದರು ಎಂಬುದು ಸುಸ್ಪಷ್ಟವಾಗಿದೆ. ಋಗ್ವೇದ (x-86.14)ದಲ್ಲಿ ಇಂದ್ರ ಹೇಳುತ್ತಾನೆ: "ಅವರು ಹದಿನೈದು ಮತ್ತು ಇಪ್ಪತ್ತು ಎತ್ತುಗಳನ್ನು ಅಡುಗೆ ಮಾಡುತ್ತಾರೆ." ಅಗ್ನಿಗೆ ಕುದುರೆಗಳು, ಎತ್ತುಗಳು, ಕೋಣಗಳು, ಗೊಡ್ಡುಹಸುಗಳು ಮತ್ತು ಟಗರುಗಳನ್ನು ಆಹುತಿ ಕೊಡುತ್ತಾರೆ. (x-91.14) ಗೋವುಗಳನ್ನು ಕತ್ತಿ ಅಥವಾ ಕೊಡಲಿಯಿಂದ ಕಡಿಯುತ್ತಾರೆಂದು ತಿಳಿದು ಬರುತ್ತದೆ (x-72.6)
ತೈತ್ತಿರೀಯ ಬ್ರಾಹ್ಮಣದಲ್ಲಿ ಹೇಳಲಾದ ಕಾಮ್ಯೇಷ್ಟಿಗಳಲ್ಲಿ ಹಸು ಮತ್ತು ಎತ್ತುಗಳ ಬಲಿಯನ್ನಷ್ಟೇ ಅಲ್ಲ, ಯಾವ ದೇವತೆಗಳಿಗೆ ಈ ಗೋವು ಮತ್ತು ಎತ್ತುಗಳನ್ನು ಹೇಗೆ ಬಲಿಕೊಡುತ್ತಿದ್ದರು ಎಂಬ ಬಗ್ಗೆಯೂ ವಿವರಿಸಲಾಗಿದೆ. ವಿಷ್ಣುವಿಗೆ ಕುಳ್ಳಎತ್ತನ್ನು ಬಲಿಕೊಡಬೇಕು. ಬಾಗಿದ ಕೋಡುಗಳ ಹಾಗೂ ಹಣೆಯ ಮೇಲೆ ಮಚ್ಚೆ ಇರುವ ಎತ್ತನ್ನು ಇಂದ್ರನಿಗೆ, ಕಪ್ಪು ಹಸುವನ್ನು ಪೂಷಾನನಿಗೆ, ಕಂಪು ಹಸುವನ್ನು ರುದ್ರನಿಗೆ ಬಲಿಕೊಡ ಬೇಕು. ತೈತ್ತಿರೀಯ ಬ್ರಾಹ್ಮಣವು ’ಪಂಚ ಶರದೀಯ ಸೇವಾ’ ಎಂಬ ಇನ್ನೊಂದು ಬಲಿಯ ಬಗ್ಗೆ ತಿಳಿಸಿದೆ. ಅದರಲ್ಲಿ ಮುಖ್ಯ ಅಂಶವೇನೆಂದರೆ; ಐದು ವರ್ಷ ವಯಸ್ಸಿನ ಕುಳ್ಳಗಿರುವ ೧೭ ಹೋರಿಗಳ ಮತ್ತು ಮೂರು ವರ್ಷ ವಯಸ್ಸಿನ ಅನೇಕ ಕುಳ್ಳ ಕರುಗಳ ಬಲಿ.
ಆಪಸ್ತಂಭ ಧರ್ಮಸೂತ್ರದಲ್ಲಿ "ಹಸು ಮತ್ತು ಎತ್ತುಗಳು ಪವಿತ್ರವಾದವು. ಆದುದರಿಂದ ಅವುಗಳನ್ನು ತಿನ್ನಬಹುದು. (೧,೫,೧೪,೨೯) ಎಂದಿದೆ."
ಗೃಹ್ಯ ಸೂತ್ರಗಳಲ್ಲಿ ಮಧುಪರ್ಕದ ಬಗೆಗೆ ವಿಸ್ತಾರವಾಗಿ ಹೇಳಲಾಗಿದೆ. ಆರ್‍ಯರಲ್ಲಿ ಗಣ್ಯ ಅತಿಥಿಗಳನ್ನು ಸತ್ಕರಿಸುವ ಸಮಾರಂಭ ಒಂದು ಪದ್ಧತಿಯಾಗಿ ಪರಿಣಮಿಸಿತ್ತು. ಈ ಸತ್ಕಾರದಲ್ಲಿ ಅತಿ ಮುಖ್ಯವಾದುದು ಮಧುಪರ್ಕ ಅರ್ಪಣೆ. ವಿವಿಧ ಗೃಹ್ಯಸೂತ್ರಗಳಲ್ಲಿ ಮಧುಪರ್ಕದಲ್ಲಿ ಸೇರಿಸುವ ವಸ್ತುಗಳ ಬಗ್ಗೆ ವಿವರಗಳು ಕಂಡುಬರುತ್ತವೆ. ಹೆಚ್ಚಿನ ಗೃಹ್ಯಸೂತ್ರಗಳ ಪ್ರಕಾರ ಮಧುಪರ್ಕ ಸ್ವೀಕರಿಸಲು ಅರ್ಹರಾದವರು ಆರು ಮಂದಿ: ೧) ಋತ್ವಿಜ ಅಂದರೆ ಯಜ್ಞಕ್ಕಾಗಿ ಆಹ್ವಾನಿತನಾದ ಬ್ರಾಹ್ಮಣ. ೨) ಆಚಾರ್ಯ ಅಂದರೆ ಗುರು; ೩) ವರ, ೪) ರಾಜ, ೫) ಸ್ನಾತಕ ಅಂದರೆ ಆಗತಾನೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿದವನು ಮತ್ತು ೬) ಅತಿಥೇಯನಿಗೆ ಪ್ರಿಯನಾದವನು. ಋತ್ವಿಜ, ರಾಜ ಮತ್ತು ಆಚಾರ್ಯ ಇವರಿಗೆ, ಆಗಮಿಸಿದಾಗಲೆಲ್ಲಾ ಮಧುಪರ್ಕ ಅರ್ಪಿಸಬೇಕು. ಉಳಿದವರಿಗೆ ವರ್ಷಕ್ಕೊಮ್ಮೆ ಅರ್ಪಿಸಿದರೆ ಸಾಕು!
ಮಧುಪರ್ಕವನ್ನು ಯಾವ ಯಾವ ವಸ್ತುಗಳಿಂದ ತಯಾರಿಸುತ್ತಾರೆ ? ಆ ವಸ್ತುಗಳ ಬಗೆಗೆ ಭಿನ್ನಾಭಿಪ್ರಾಯವಿದೆ. ಅಶ್ವಲಾಯನ ಮತ್ತು ಆಪಸ್ತಂಭ ಗೃಹ್ಯ ಸೂತ್ರಗಳು ಜೇನು, ಮೊಸರು, ಅಥವಾ ತುಪ್ಪ ಮೊಸರು ಮಿಶ್ರಣಗಳನ್ನು ಸೂಚಿಸಿದೆ. ಪರಾಶರ ಗೃಹ್ಯಸೂತ್ರ ಮೊಸರು, ಜೇನು ಮತ್ತು ತುಪ್ಪಗಳನ್ನು ಸೂಚಿಸಿದೆ. ಕೌಶಿಕವು ಒಂಭತ್ತು ಬಗೆಯ ವಸ್ತುಗಳನ್ನು ಸೂಚಿಸಿದೆ.
ಮಧುಪರ್ಕದಲ್ಲಿ ಮಾಂಸವಿಲ್ಲದಿರಬಾರದು ಎಂದು ವೇದವು ಸಾರಿದೆಯಾಗಿ, ಹಸುವನ್ನು ಹಗ್ಗ ಕಳಚಿ ಹಟ್ಟಿಯಿಂದ ಹೊರಗೆ ಬಿಟ್ಟಿದ್ದರೆ ಆಡಿನ ಮಾಂಸ ಅಥವಾ ಪಾಯಸ ಅರ್ಪಿಸಬೇಕೆಂದು ಮಾಧವ ಗೃಹ್ಯ ಸೂತ್ರ (೧,೯,೨.೨) ಹೇಳುತ್ತದೆ. ಹಸುವನ್ನು ಕೈಬಿಟ್ಟಿದ್ದಲ್ಲಿ ಆಡು ಅಥವಾ ಟಗರಿನ ಮಾಂಸವನ್ನಾಗಲಿ, ಜಿಂಕ ಇತ್ಯಾದಿ ಕಾಡು ಪ್ರಾಣಿಗಳ ಮಾಂಸವನ್ನಾಗಲಿ ಅರ್ಪಿಸಬಹುದೆಂದು ಬೋಧಾಯನ ಗೃಹ್ಯಸೂತ್ರ (೧,೨,೫೧-೫೪) ತಿಳಿಸಿ ಮಾಂಸವಿಲ್ಲದೆ ಮಧುಪರ್ಕವೇ ಇಲ್ಲ ಅಥವಾ ಮಾಂಸ ನೀಡಲು ಅಸಾಧ್ಯವಾದರೆ ಬೀಸಿದ ಧಾನ್ಯದ ಅಡುಗೆ ಅರ್ಪಿಸಬಹುದು ಎಂದಿದೆ.
ಮಧುಪರ್ಕದ ಮುಖ್ಯಭಾಗ ಮಾಂಸ, ಅದರಲ್ಲೂ ಗೋಮಾಂಸ ಎಂಬುದು ವಿಶದವಾಯಿತು.
ಅತಿಥಿಗಾಗಿ ಗೋಹತ್ಯೆ ಮಾಡುವ ಪದ್ಧತಿ ಅದೆಷ್ಟು ರೂಢಿಯಲ್ಲಿತ್ತೆಂದರೆ ಅತಿಥಿಯನ್ನು ’ಗೋ-ಘ್ನ’ ಎಂದರೆ ಗೋಹಂತಕ ಎಂದು ಕರೆಯಲಾಗುತ್ತಿತ್ತು. ಗೋಹತ್ಯೆಯನ್ನು ತಡೆಯಲು ಅಶ್ವಲಾಯನ ಗೃಹ್ಯಸೂತ್ರವು ಅತಿಥಿಯು ಮನೆಗೆ ಬಂದಾಗ ಹಸುವನ್ನು ಹಟ್ಟಿಯಿಂದ ಹೊರಗೆ ಅಟ್ಟಬೇಕೆಂದು ಸೂಚಿಸಿದೆ. ಅಂದರೆ ಆಗ ಅತಿಥಿ ಸತ್ಕಾರದ ನಿಯಮದಿಂದ ಹೊರತಾಗಬಹುದು.
ಅಶ್ವಲಾಯನ ಗೃಹ್ಯಸೂತ್ರವು ಹೇಳುವ ಶವಸಂಸ್ಕಾರದ ಪದ್ಧತಿಯನ್ನು ಪರಿಶೀಲಿಸೋಣ.
"ಚಮಚ, ಕತ್ತಿ, ಅರೆಯುವ ಕಲ್ಲು, ಪಾತ್ರೆ, ಉರಿಯುವ ಕೊಳ್ಳಿ ಮತ್ತು ಕುಳಿ ಇರುವ ಸಾಧನಗಳಲ್ಲಿ ಬೆಣ್ಣೆ ಇತ್ಯಾದಿಗಳನ್ನು ಮೃತನ ದೇಹದ ಒಂದೊಂದು ಭಾಗದಲ್ಲಿ ಇಡಬೇಕು.
ಅನಂತರ ಹೆಣ್ಣು ಪ್ರಾಣಿಯ ಜಠರದ ವಪೆಯನ್ನು ತೆಗೆದು ಅದರಿಂದ ಮೃತನ ತಲೆ ಮತ್ತು ಬಾಯಿಗಳನ್ನು ಮುಚ್ಚುತ್ತಾ "ಅಗ್ನಿಯಿಂದ ನಿನ್ನನ್ನು ರಕ್ಷಿಸುವ ಅಸ್ತ್ರವಿದು, ಗೋವಿನಿಂದ ದೊರೆತಿದೆ" ಎಂಬ ಋಗ್ವೇದ (x-16.7)ದ ಮಂತ್ರವನ್ನು ಉಚ್ಚರಿಸಬೇಕು. ಪ್ರಾಣಿಯ ಪಿತ್ತಕೋಶವನ್ನು ತೆಗೆದು ಅದನ್ನು ಮೃತನ ಕೈಗಳ ಮೇಲೆ, ಪ್ರಾಣಿಯ ಹೃದಯವನ್ನು ಮೃತನ ಹೃದಯದ ಮೇಲೆ ಇಡಬೇಕು. ಇಡೀ ಪ್ರಾಣಿಯ ಪ್ರತಿಯೊಂದು ಅಂಗವನ್ನು ಮೃತನ ಭಿನ್ನ ಅಂಗಗಳ ಮೇಲೆ ಇರಿಸಿ, ಚರ್ಮದಿಂದ ಅದನ್ನು ಮುಚ್ಚಿ ’ಅಗ್ನಿ ಈ ಪಾತ್ರೆಯನ್ನು ಉರುಳಿಸಬೇಡ’ ಎಂಬ ಋಗ್ವೇದ (x-16.8) ಮಂತ್ರವನ್ನು ಹೇಳಬೇಕು. ದಕ್ಷಿಣ ಭಾಗದ ಅಗ್ನಿಗೆ ’ಓಂ ಅಗ್ನೇ ಸ್ವಾಹಾ’ ಎಂಬ ಮಂತ್ರ ಹೇಳುತ್ತಾ ಮೃತನ ಎದೆಯನ್ನು ಮುಟ್ಟಿ "ಇದರಿಂದ ನೀನು ಜನಿಸಿದ್ದೀಯ ನಿನ್ನಿಂದ ಈತ ಜನಿಸುವಂತಾಗಲಿ ಸ್ವರ್ಗದ ಕಡೆಗೆ ನಡೆಯಲಿ" ಎನ್ನುತ್ತಾನೆ.
ಮೇಲೆ ಉದ್ಧರಿಸಲಾದ ಮಂತ್ರಗಳಿಂದ ಪ್ರಾಚೀನ ಇಂಡೋ ಆರ್ಯನರಲ್ಲಿ ಯಾವೊಬ್ಬನು ಮೃತನಾದಾಗ ಒಂದು ಪ್ರಾಣಿಯನ್ನು ಕೊಂದು ಅದರ ದೇಹದ ವಿವಿಧ ಭಾಗಗಳನ್ನು ಮೃತನ ದೇಹದ ವಿವಿಧ ಭಾಗಗಳ ಮೇಲಿರಿಸಿ ಅನಂತರ ಶವ ದಹನ ನಡೆಸುತ್ತಿದ್ದರೆಂಬುದು ವೇದ್ಯ ವಾಗುತ್ತದೆ.
ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆಗಳಿಗೆ ಇವು ಆಧಾರಗಳಾಗಿವೆ. ಪ್ರಾರಂಭದಲ್ಲ ಹೇಳಿದ ಕೆಲವು ಆಧಾರಗಳು, ಗೋವು ಕೊಲ್ಲಲು ಅರ್ಹವಾದುದಲ್ಲ ಎಂದು ಹೇಳಿದರೆ ಅನಂತರದ ಅನೇಕ ಆಧಾರಗಳು ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಗೆ ಆಧಾರಗಳಾಗಿವೆ. ಹಾಗಿದ್ದರೆ ಇವುಗಳಲ್ಲಿ ಯಾವುದು ನಿಜ? ಹಿಂದೂಗಳು ಗೋಹತ್ಯೆ ಮತ್ತು ಗೋಮಾಂಸ ಸೇವನೆಗೆ ವಿರೋಧಿಗಳಾಗಿದ್ದರು ಎಂಬ ಬಗೆಗೆ ಶತಪಥ ಬ್ರಾಹ್ಮಣ ಮತ್ತು ಆಪಸ್ತಂಬ ಗೃಹ್ಯಸೂತ್ರಗಳನ್ನು ಉದಾಹರಿಸುತ್ತಾರೆ.
ಆದರೆ ಅಲ್ಲಿ ಮಿತಿ ಇಲ್ಲದ ಗೋಹತ್ಯೆ ಕೂಡದೆಂಬ ಬಗೆಗೆ ಮಾತ್ರ ಸೂಚನೆ ಇರುವಂತಿದೆ. ಅಷ್ಟೇ ಅಲ್ಲ, ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯು ಸಾಮಾನ್ಯ ನೀತಿಯಾಗಿತ್ತೆಂದು ಮೇಲಿನ ಗ್ರಂಥಗಳಿಂದ ತಿಳಿದುಬರುತ್ತದೆ. ಮಿತಿ ಇಲ್ಲದ ಗೋಹತ್ಯೆಯ ವಿರುದ್ಧ ಮಾಡಿದ ಉಪದೇಶಗಳು ಹೆಚ್ಚು ಸಂದರ್ಭದಲ್ಲಿ ಯಾರ ಕಿವಿಗೂ ಬೀಳಲಿಲ್ಲ ಎಂಬುದು ಮಹಾಋಷಿ ಯಾಜ್ಞವಲ್ಕ್ಯನ ನಡತೆಯಿಂದ ತಿಳಿದು ಬರುತ್ತದೆ. ಮೇಲೆ ಉದಾಹರಿಸಲಾದ ಶತಪಥ ಬ್ರಾಹ್ಮಣದ ಮೊದಲ ಮಂತ್ರ ವಾಸ್ತವವಾಗಿ ಯಾಜ್ಞವಲ್ಕ್ಯನನ್ನು ಸಂಬೋಧಿಸಿ ಹೇಳಿದ್ದಾಗಿದೆ. ಈ ಉಪದೇಶಕ್ಕೆ ಯಾಜ್ಞವಲ್ಕ್ಯನ ಪ್ರತಿಕ್ರಿಯೆ ಏನು? ಉಪದೇಶ ಕೇಳಿದ ಬಳಿಕ ಆತ ಹೇಳಿದ; "ನಾನಂತೂ ಎಳೆಯ ದಾಗಿದ್ದರೆ ತಿನ್ನುವವನೇ".
ಒಂದು ಕಾಲದಲ್ಲಿ ಹಿಂದೂಗಳು ಅಪಾರವಾಗಿ ಗೋವುಗಳನ್ನು ಕೊಂದು ಗೋಮಾಂಸ ಭಕ್ಷಿಸುತ್ತಿದ್ದರು ಎಂಬುದಕ್ಕೆ ವೇದಗಳು ಮತ್ತು ಬ್ರಾಹ್ಮಣಗಳ ನಂತರ ಬೌದ್ಧ ಸೂತ್ರಗಳಲ್ಲಿ ಬರುವ ಯಜ್ಞದ ವರ್ಣನೆಗಳು ವಿವರವಾದ ಆಧಾರಗಳನ್ನು ಒದಗಿಸುತ್ತದೆ. ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಕೊಲೆ ಮಾಡುತ್ತಿದ್ದ ಪ್ರಾಣಿಗಳ ಸಂಖ್ಯೆ ಅಪಾರವಾಗಿತ್ತು. ಉದಾಹರಣೆಗೆ ’ಕುಟದಂತ ಸುತ್ತ’ ನೋಡಬಹುದು. ಕುಟದಂತನೆಂಬ ಬ್ರಾಹ್ಮಣನು ತನ್ನನ್ನು ಪರಿವರ್ತಿಸಿದ ಬುದ್ಧನನ್ನು ವಂದಿಸುತ್ತಾ ಅಂಥ ಯಜ್ಞಗಳಲ್ಲಿ ಆಗುತ್ತಿದ್ದ ಅಪಾರ ಪ್ರಾಣಿಹತ್ಯೆಗಳ ಬಗೆಗೆ ಸೂಚ್ಯವಾಗಿ ಹೇಳುತ್ತಾನೆ.
ನಾನು, ನಾನು ಸಹ, ಪೂಜ್ಯನಾದ ಗೌತಮನನ್ನು ನನ್ನ ಮಾರ್ಗ ದರ್ಶಕ ನನ್ನಾಗಿ ಸ್ವೀಕರಿಸಿ ಅವನ ತತ್ತ್ವ ಮತ್ತು ಧರ್ಮಗಳನ್ನು ಅನುಸರಿ ಸುತ್ತೇನೆ. ಪೂಜ್ಯನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿ, ಇಂದಿನಿಂದ ನನ್ನ ಜೀವನಪರ್‍ಯಂತ ಆತನನ್ನು ನನ್ನ ಮಾರ್ಗದರ್ಶಕನನ್ನಾಗಿ ಸ್ವೀಕರಿಸುವೆ. ನಾನು ಸಹ, ಪೂಜ್ಯ ಗೌತಮ, ನನ್ನಲ್ಲಿನ ೭೦೦ ಹೋರಿಗಳು, ೭೦೦ ಎತ್ತುಗಳು, ೭೦೦ ಎಳೆಯ ಹಸುಗಳು, ೭೦೦ ಮೇಕೆಗಳು ಮತ್ತು ೭೦೦ ಟಗರುಗಳನ್ನು ಬಿಡುಗಡೆ ಮಾಡಿದ್ದೇನೆ. ಅವುಗಳಿಗೆ ನಾನು ಜೀವದಾನ ಮಾಡಿದ್ದೇನೆ. ಅವು ಹುಲ್ಲುತಿಂದು ತಿಳಿಯಾದ ನೀರು ಕುಡಿದು ಪ್ರಶಾಂತ ವಾತಾವರಣದಲ್ಲಿ ಸ್ವೇಚ್ಛೆಯಿಂದ ತಿರುಗಾಡಲಿ."
ಕೋಸಲದ ಅರಸನಾದ ’ಪ್ರಸೇನಜಿತ್’ ಎಂಬುವನು ನಡೆಸಿದ ಯಜ್ಞದ ವಿಸ್ತಾರ ವರ್ಣನೆಯನ್ನು ನಾವು ’ಸಂಯುಕ್ತ ನಿಕಾಲಯದಲ್ಲಿ’ ಕಾಣ ಬಹುದು. ೫೦೦ ಹೋರಿಗಳು, ೫೦೦ ಕರುಗಳು ಅನೇಕ ಎತ್ತುಗಳು ಮತ್ತು ಟಗರುಗಳನ್ನು ವಧಾಸ್ತಂಭದಲ್ಲಿ ಕೊಲೆಮಾಡಲಾಯಿತೆಂದು ಹೇಳಲಾಗಿದೆ.
ಈ ಆಧಾರಗಳಿಂದ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಒಂದು ಕಾಲದಲ್ಲಿ ಮಾಂಸವನ್ನಷ್ಟೇ ಅಲ್ಲ, ಗೋಮಾಂಸ ಭಕ್ಷಿಸುತ್ತಿದ್ದರೆಂದು ನಾವು ತಿಳಿಯಬಹುದು.
ಕೃಪೆ : ವಿಚಾರ ಮಂಟಪ ಬ್ಲಾಗ್

ಮಾತ್ಗವಿತೆ-64

ಸೀಳುತ್ತಾರೆ ನೀವು ಅಡ್ಡಡ್ಡ ; ಉದ್ದುದ್ದ ಬಿದ್ದರೆ
ಹಾಳು ಮಾಡುತ್ತಾರೆ ನೀವು ತಲೆಬಾಗಿ ನಿಂತರೆ !
ಗೋಳು ಹೋಯ್ದುಕೊಳ್ಳುತ್ತಾರೆ
ನಿಮ್ಮ ಅಸ್ಮಿತೆಯನ್ನು ನೀವು ಮರೆತು
ಅವರ ಫರಾಕು ನೀವು
ಮಾಡುವಾಗ ತಲೆ ತೆಗೆಯುತ್ತಾರೆ !
ಸಾಮಾಜಿಕ ನ್ಯಾಯದ ಹೆಸರಿನಲ್ಲಿ
ಪ್ರತಿ ಸಲ ನಿಮ್ಮನ್ನು ಬಲಿ ಮಾಡುತ್ತಾರೆ !

Thursday, April 05, 2012

ಮಾತ್ಗವಿತೆ-63

ಯಾಕೆ ಹಾಗೆ ತಿಳಿದುಕೊಂಡಿರೋ
ಗೊತ್ತಿಲ್ಲ !
ನಿಮ್ಮ ಗೌಡಕಿಯ ದೌಲತ್ತಿಗೆ
ಚೌಡಕಿ ಬಾರಿಸಿ ಹಾಡುವವನು ನಾನಲ್ಲ !
ನಿಮ್ಮ ಧಾಡಸಿಯ ಮಾತಿಗೆ
ಬಡಬಡಿಸಿ ರಾಜಿಯಾಗಿಲ್ಲ !
ಇಷ್ಟು ದಿನ ಇರುವ ನೆಮ್ಮದಿಯನ್ನು
ಕೆಡಿಸುವ ಉಮೇದು ನನಗಿದ್ದರೂ
ನಿಮ್ಮ ಸಲುವಾಗಿಯೇ ಅಲ್ಲವೇ
ಮುಕಳಿ-ಬಾಯಿ ಮುಚ್ಚಿಕೊಂಡಿರುವುದು ?

Tuesday, April 03, 2012

ಮಾತ್ಗವಿತೆ-62

ಬರೆಯಬೇಕಾಗಿ ಬಂದಾಗ ಅಕ್ಷರಗಳು
ತನ್ನಿಂದ ತಾನೇ ಮೂಡತೊಡಗುತ್ತವೆ ;
ಮನಸ್ಸಿನ ಓಘಕ್ಕೆ ಸಾಟಿಯಾಗದೇ
ಒಮ್ಮೊಮ್ಮೆ ಮೌನವಾಗುತ್ತವೆ !
ಬರೆಯಬೇಕು ಎಂದರೆ
ನೋವು-ನರಳಿಕೆಗಳ ಉಲಿವಿಗೆ
ಪದಗಳ ಅಭಾವ ಇದೆ ಅನ್ನುವುದು
ನನ್ನೊಳಗಿನ ಮಾತು !

Sunday, April 01, 2012

ಮಾತ್ಗವಿತೆ-61

ಹಸಿವುಗಳು ಹೆಚ್ಚಾದಂತೆಲ್ಲ 
ಕಸುವು ಕುಸಿಯುತ್ತ ಬರುತ್ತದೆ !
ಹೆಸರಿಗೆ ಉಸಿರಿನ ಆಸರೆ ಇರುವುದಿಲ್ಲ !
ಬಸಿರಿಗೆ ಹೆಸರಿನ ಹಂಗು ಇರುವುದಿಲ್ಲ !
ಮಾಡಿದ್ದೆಲ್ಲ ಸರಿಯಾಗಿಯೇ ಇದೆ
ಎಂದುಕೊಂಡರೆ
ಧೈರ್ಯ ತಂದುಕೊಳ್ಳಿ ; ನಿಮ್ಮ 
ಒಳಗಿನ ರಂಧ್ರಗಳೆಲ್ಲ ಅಲ್ಲಾಡಿ ಬಿಟ್ಟಾವು !
ಸೂರ್ಯನ ಹೊತ್ತುಕೊಂಡವನಿಗೆ ಸತ್ಯ 
ಹೇಳಲು ಯಾತರದ ಅಂಜಿಕೆ ?

ಸಿದ್ಧಲಿಂಗಯ್ಯನವರ ಹೊಗಳು ಭಟ್ಟಂಗಿತನ ಎಲ್ಲಿಯವರೆಗೆ ?


ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ....

ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?
ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.
ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್‌ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.
ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.
ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.

ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್‌ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.
ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?
ಕೃಪೆ : ಗಾಳಿ ಬೀಜ ಬ್ಲಾಗ್

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.