Friday, November 21, 2014

'ಕೋರೆಗಾಂವ...' ನಾಟಕದ ಒಂದು ಸಂಭಾಷಣೆ

ಡಾ. ಸಿದ್ರಾಮ ಕಾರಣಿಕ
----------------------------------
 

ಮುದುಕ : ಯಾಕಿಲ್ಲೋ ಹುಡುಗಾ ! ನಿಮ್ಮ ನಡುವ ಕುಂತಾನಲ್ಲ ಈ ಸಿದ್ಧನಾಕ... ಇವರ ಅಜ್ಜ ಸಂಭಾಜಿ ಮಾರಾಜರ ಸತ್ತ ನಂತರದ ಕಾಲದಾಗ ಅಂವ್ನೂ ನಿಮ್ಮಂಥವ್ರ ಟೋಳಿ ಕಟ್ಕೊಂಡ ಮರಾಠಾ ಸೇನಾದಾಗ ಇದ್ದ. ನಿಮಗ ಗೊತ್ತಿಲ್ಲ... ಅಂವ್ನ ಹೆಸರೂ ಸಿದ್ಧನಾಕನss ! ದಿಲ್ಲಿ ಮುಸಲೇರ ಸುದ್ದಾ ಅಂವ್ಗ ಅಂಜತಿದ್ರು ! ಸಾಹು ಮಾರಾಜನ ಕಾಲದಾಗ ಆ ಸಿದ್ಧನಾಕ ತನ್ನ ಪರಾಕ್ರಮ ತೋರಿ ಸನ್ಮಾನ ಪಡ್ಕೊಂಡಿದ್ದ... ಪಲ್ಲಕ್ಕಿಯೊಳಗ ಕುಂಡ್ರಿಸಿ ಅಂವ್ನನ್ನ ಮೆರವಣಿಗಿ ಮಾಡಿದ್ರು ಸಾಹು ಮಾರಾಜರು... ಜಾಗೀರದಾರಕೀ ಇನಾಮ ಪಡ್ಕೊಂಡಿದ್ದ ಅಂವಾ...

ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?

ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...

ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.

ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...

ವಚನ-41

ದ್ರವಕ್ಕೆ ದ್ರವ ಸೇರಿ ಘನವಾಯಿತು !
ಘನದ ಘನತೆ ಗುಲ್ಲಾಗಿ
ಮೆಲ್ಲಗೆ ಮೂಲಕ್ಕೆ ತಿರುಗಿತ್ತು
ಕಾರಣಿಕ ಸಿದ್ಧರಾಮ ಕಟ್ಟೆ ಕಲ್ಲು
ಕಟ್ಟೆಗಲ್ಲದೆ ಕಳಸಕ್ಕೆ ಸಲ್ಲದು !

Saturday, November 15, 2014

ಮಾತ್ಗವಿತೆ-176

ಇದು ಆಗಲೇಬೇಕಿತ್ತು ; ಆಗುತ್ತಿದೆ
ನಾನೇಕೆ ಸುಮ್ಮನಿರಬೇಕು ಧಿಮ್ಮಾನಗಳನ್ನಿಟ್ಟುಕೊಂಡು ?
ನೀವು ಆಡಿದ ಆಟಕ್ಕೆ ಬದ್ಧತೆಯ ಹೆಸರು ಕೊಟ್ಟು
ಉಸಿರು ನಿಲ್ಲಿಸಿದ ಇತಿಹಾಸ ಮರೆತಿಲ್ಲ ನಾನು !
ಸದ್ದಾಗದಂತೆ ನೀಡಿದ ಏಟಿಗೆ ಚಿಗಿತ್ತಿದ್ದೇನೆ ನಾನು
ಬಲಿತು ಬಸವಿಳಿದಿದ್ದೇನೆ
ನಾನು ಬದ್ಧತೆಯನ್ನು ಬಿಡುತ್ತಿಲ್ಲ !
ನೀವು ಸವೆಸಿದ ಹಾದಿಯನ್ನು ಬಿಟ್ಟಿದ್ದೇನೆ ನಾನು !
ಎಲ್ಲವನ್ನೂ ಒಳಗಿಟ್ಟುಕೊಂಡು
ಬುದ್ಧನಾಗಿದ್ದು ಸಾಕೆನಿಸಿದೆ ನನಗೆ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.