Saturday, December 06, 2014

ಮಾತ್ಗವಿತೆ-177

ತಟವಟದೊಳಗೆ ತಟ ತಟ ತಡಾಡಿಸಿ
ತುಯ್ತಕ್ಕೆ ತೊಡೆದ ನನ್ನ ಜನ
ತಳ-ಬುಡ ಇಲ್ಲದಂತೆ ಮಾತಾಡಿ
ಮರೆವಿನೊಳಗೆ ಕೆರೆದುಕೊಳ್ಳುತ್ತಿದ್ದಾರಲ್ಲ !
ಅನುಭವ ಅನುಭಾವ ಆಗಬೇಕು ;

ಬೆರಕಿ ಮಂದಿ ಗುದುಮುರಿಗೆ ಹಾಕುತ್ತಾರೆ
ತದಕಬೇಕೆಂದರೂ ಆಗೋದಿಲ್ಲ
ಅವರು ನನ್ನ ಜನ
!

Friday, November 21, 2014

'ಕೋರೆಗಾಂವ...' ನಾಟಕದ ಒಂದು ಸಂಭಾಷಣೆ

ಡಾ. ಸಿದ್ರಾಮ ಕಾರಣಿಕ
----------------------------------
 

ಮುದುಕ : ಯಾಕಿಲ್ಲೋ ಹುಡುಗಾ ! ನಿಮ್ಮ ನಡುವ ಕುಂತಾನಲ್ಲ ಈ ಸಿದ್ಧನಾಕ... ಇವರ ಅಜ್ಜ ಸಂಭಾಜಿ ಮಾರಾಜರ ಸತ್ತ ನಂತರದ ಕಾಲದಾಗ ಅಂವ್ನೂ ನಿಮ್ಮಂಥವ್ರ ಟೋಳಿ ಕಟ್ಕೊಂಡ ಮರಾಠಾ ಸೇನಾದಾಗ ಇದ್ದ. ನಿಮಗ ಗೊತ್ತಿಲ್ಲ... ಅಂವ್ನ ಹೆಸರೂ ಸಿದ್ಧನಾಕನss ! ದಿಲ್ಲಿ ಮುಸಲೇರ ಸುದ್ದಾ ಅಂವ್ಗ ಅಂಜತಿದ್ರು ! ಸಾಹು ಮಾರಾಜನ ಕಾಲದಾಗ ಆ ಸಿದ್ಧನಾಕ ತನ್ನ ಪರಾಕ್ರಮ ತೋರಿ ಸನ್ಮಾನ ಪಡ್ಕೊಂಡಿದ್ದ... ಪಲ್ಲಕ್ಕಿಯೊಳಗ ಕುಂಡ್ರಿಸಿ ಅಂವ್ನನ್ನ ಮೆರವಣಿಗಿ ಮಾಡಿದ್ರು ಸಾಹು ಮಾರಾಜರು... ಜಾಗೀರದಾರಕೀ ಇನಾಮ ಪಡ್ಕೊಂಡಿದ್ದ ಅಂವಾ...

ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?

ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...

ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.

ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...

ವಚನ-41

ದ್ರವಕ್ಕೆ ದ್ರವ ಸೇರಿ ಘನವಾಯಿತು !
ಘನದ ಘನತೆ ಗುಲ್ಲಾಗಿ
ಮೆಲ್ಲಗೆ ಮೂಲಕ್ಕೆ ತಿರುಗಿತ್ತು
ಕಾರಣಿಕ ಸಿದ್ಧರಾಮ ಕಟ್ಟೆ ಕಲ್ಲು
ಕಟ್ಟೆಗಲ್ಲದೆ ಕಳಸಕ್ಕೆ ಸಲ್ಲದು !

Saturday, November 15, 2014

ಮಾತ್ಗವಿತೆ-176

ಇದು ಆಗಲೇಬೇಕಿತ್ತು ; ಆಗುತ್ತಿದೆ
ನಾನೇಕೆ ಸುಮ್ಮನಿರಬೇಕು ಧಿಮ್ಮಾನಗಳನ್ನಿಟ್ಟುಕೊಂಡು ?
ನೀವು ಆಡಿದ ಆಟಕ್ಕೆ ಬದ್ಧತೆಯ ಹೆಸರು ಕೊಟ್ಟು
ಉಸಿರು ನಿಲ್ಲಿಸಿದ ಇತಿಹಾಸ ಮರೆತಿಲ್ಲ ನಾನು !
ಸದ್ದಾಗದಂತೆ ನೀಡಿದ ಏಟಿಗೆ ಚಿಗಿತ್ತಿದ್ದೇನೆ ನಾನು
ಬಲಿತು ಬಸವಿಳಿದಿದ್ದೇನೆ
ನಾನು ಬದ್ಧತೆಯನ್ನು ಬಿಡುತ್ತಿಲ್ಲ !
ನೀವು ಸವೆಸಿದ ಹಾದಿಯನ್ನು ಬಿಟ್ಟಿದ್ದೇನೆ ನಾನು !
ಎಲ್ಲವನ್ನೂ ಒಳಗಿಟ್ಟುಕೊಂಡು
ಬುದ್ಧನಾಗಿದ್ದು ಸಾಕೆನಿಸಿದೆ ನನಗೆ !

Monday, October 06, 2014

ಮಾತ್ಗವಿತೆ-175

ಜೀರ್ಣವಾಗುವಂತಿದ್ದರೆ ತಿನ್ನಬೇಕು
ಜೀರ್ಣವಾಗುವಷ್ಟೇ ತಿನ್ನಬೇಕು
ಬಕಾಬೋರಲು ಬಿದ್ದು ಉಳ್ಳಾಡಿದರೆ
ಬಳ್ಳೊಳ್ಳಿ ಮೂಗಿಗೆ ಇಡುವವರು ಇದ್ದಾರೆ
ಎಂಬ ಎಚ್ಚರಿಕೆಯಾದರೂ ಇರಬೇಕು !
ಧಿಮಾಕಿಗೆ ದೀಡಪೈಸೆಯ ಕಿಮ್ಮತ್ತೂ ಇಲ್ಲ !

ವಚನ-40

ಅದೆಂಥ ಗಾಳಿ !
ತೂರಿಕೊಂಡವರೂ
ಮಾರಿಕೊಂಡವರೂ
ನಡುವೆ ಆಣೆ ಲೆಕ್ಕ ಇಟ್ಟುಕೊಂಡವರೂ
ಸುಗ್ಗಿ ಮಾಡುವಾಗಲೇ
ಬೀಸಿತಲ್ಲಾ !
ತಂಗಾಳಿ ಎನಿಸಿದ್ದು ಸುಳಿಗಾಳಿ, 
ಬಿರುಗಾಳಿ, ಎದುರ್ಗಾಳಿಯಾಗಿ
ಬಗ್ಗು ಬಡಿಯುತ್ತಿದೆಯಲ್ಲ !
ಸಿಡಿಲಾಗಿ ಸಿಡಿದು ಜೋರು ಮಳೆಯಾದರೆ
ಬೆಳೆದದ್ದು ಮುಗ್ಗು ಹಿಡಿಯದಿರದೇ ?
ಕಾರಣಿಕ ಸಿದ್ಧರಾಮ ಕಾಲಕ್ಕೆ ಕಾಲನ ಭಯ ಇಲ್ಲ !  

Tuesday, September 30, 2014

ಮಾತ್ಗವಿತೆ-174


ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವವರು
ಮಬ್ಬಿನಲಿ ಗರುಡನ ಮೇಲೆ ಬಿಟ್ಟಿದ್ದಾರೆ !
ನಿಮ್ಮ ತೀಟೆಗೆ ; ಗುಂಗಿಗೆ
ಹುಳ ಬಿಡುತ್ತಿದ್ದೇನೆ ! ಸಾಧ್ಯವಾದರೆ ಸಹಿಸಿ
ಇಲ್ಲವೇ ನಿಮಗೆ ನನ್ನನ್ನೇ ನೀಡಿದ್ದೇನೆ
ಎಲುವಿನ ಇಂಚೂ ಬಿಡದಂತೆ ದಹಿಸಿ ಬಿಡಿ !
ಆಟ ಆಡುವವರ ನಡುವೆ ಆತನೂ ಇದ್ದಾನೆ ;
ಹೆಚ್ಚೇನು ಬಿಡಿ ಆಕೆಯೂ ಇದ್ದಾಳೆ !

Thursday, September 18, 2014

ವಚನ-39

ಹುಟ್ಟಿನ ಮೂಲ ಅರಿಯದವ
ತಾಯಿ ಪ್ರೀತಿ ಎಂತು ಅರಿತಾನು ?
ಗುಡಿಸಲ ತಡಿಕೆ ದಾಟಿ
ಮಹಲು ಸೇರಿದವಗೆ ಮೂಲ ನೆನಪಿರಬೇಕಲ್ಲವೆ ?
ಮಾನ ಮರ್ಯಾದೆ ಉಳಿಸಿಕೊಂಡು
ಅಸ್ಮಿತೆಯನ್ನೇ ಕಳೆದುಕೊಂಡವರ  ಏನೆಂಬೆ ?
ಕಾರಣಿಕ ಸಿದ್ಧರಾಮ ವಾಸನೆಗೆ ಕೊಟ್ಟ ಹೂವು
ಹೂಸಿನ ಜಾಗಕ್ಕೆ ಇಟ್ಟುಕೊಳ್ಳುವವರ
ಕಾಸಿನಾಸೆ ಕಂಡು ಕಸಿವಿಸಿಗೊಂಡ !



Sunday, August 31, 2014

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಕೆಡಿಸುವ ಹುನ್ನಾರ !





ದಲಿತರ ವಿಷಯವನ್ನು ಎತ್ತಿಕೊಂಡು ರಾಜ್ಯ ಸರಕಾರವನ್ನು ವಿರೋಧಿಸಿ ಒಂದು ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಮಾಡಿ ಕೆಲವು ಸಮಸ್ಯೆಗಳ ಬಗ್ಗೆ ಸರಕಾರ ತೀವ್ರವಾಗಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಸರಿಯಾದರೂ ಅಲ್ಲಿರುವ ಮುಖಂಡರ ಹೇಳಿಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಸರಿಯಲ್ಲ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ (ದಿನಾಂಕ : 28-08-2014 : ನಮ್ಮ ಮಹಾನಗರ) ಈ ಸುದ್ದಿ ಪ್ರಕಟವಾಗಿದೆ.
‘ಗೋಮಾತೆಯನ್ನು ಪೂಜ್ಯನೀಯವಾಗಿ ಕಾಣುವ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೂ ಕೂಡ ಗೋ ಹತ್ಯೆ ನಿಷೇಧ ಜಾರಿಗೆ ಬಂದಿಲ್ಲ. ಕಾರಣ ರಾಜ್ಯ ಸರಕಾರ ಆದಷ್ಟು ಬೇಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಗೋಹತ್ಯೆ ನಿಷೇಧ'ದ ಬಗ್ಗೆ ಎಲ್ಲಿಯೂ ಹೇಳಿದ ಬಗ್ಗೆ ನಮಗಂತೂ ಗೊತ್ತಿಲ್ಲ. ಪ್ರತಿಭಟನೆ ಮಾಡಿದ ಪಕ್ಷದವರು ಅದನ್ನು ಹೇಳಿದರೆ ನಮಗೆ ಒಂದಿಷ್ಟು ಜ್ಞಾನ ಲಭ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೇಳುವ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ
ಅವಶ್ಯಕತೆಯಿಲ್ಲ ; ಹಾಗೇನಾದರೂ ಮಾಡಿದರೆ ಇತಿಹಾಸವನ್ನು ಮರೆಮಾಚುವ ಮಂದಿಯ ವಿರುದ್ಧ ಕೆಂಡ ಕಾರಲೇ ಬೇಕಾಗುತ್ತದೆ. ಯಾವ ಹಿಂದೂ ಧರ್ಮವನ್ನು ಪ್ರತಿಭಟಿಸಿ, ವಿರೋಧಿಸಿ, ಹೊಸದೊಂದು ಇತಿಹಾಸ ನಿರ್ಮಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು, ಅವರು ಹೇಳದೇ ಇರುವ ಸಂಗತಿಗಳನ್ನು ಅವರ ತಲೆಗೆ ಕಟ್ಟಿ ಅಪಪ್ರಚಾರ ಮಾಡುವ ಉಮೇದಿನಲ್ಲಿ
ಇರುವ ಮಂದಿಯನ್ನು ತಹಬಂದಿಗೆ ತರುವ ಹೋರಾಟ ಇನ್ನಷ್ಟು ತೀವ್ರವಾಗುವ ಅನಿವಾರ್ಯತೆ ಇದೆ.

Wednesday, August 27, 2014

ಮಾತ್ಗವಿತೆ-173

ಕಾಲಕ್ಕೆ ಕಾಯು ಎಂದವರೇ
ಕಾಲನಾಗಿ ಇಲ್ಲವೇ ಕಾಲನಾಗಿ
ಹಣ ಮಾಡುತ್ತ ಹೆಣ ಮಾಡಿದರೆ
ನಾಲಿಗೆ ಕಳೆದುಕೊಂಡ ಮೌನಗಳು
ಮಾತ ಬಾರದೆಂದೆಂದೂ ಎಂದು
ಹರುಷ ಪಡುವ ಅವಶ್ಯಕತೆಯಿಲ್ಲ !
ದೇಹವ ದಂಡಿಸಿದವರ ; ಒಳಗ ಇರಿದವರ
ನೊಸಲ ಮೆಟ್ಟಿ, ರಸಾತಳಕ್ಕೆ ಅಟ್ಟುವಷ್ಟು
ಅಡಿಸಿದ ಅಳಕವಿದೆ ; ಬೆಳಕು ಇದೆ !
ನದಿ ದಾಟಲು ಈಸು ಬರಬೇಕು ಅಂತಲ್ಲ
ನಾವೆ ಇದ್ದರೂ ಸಾಕಲ್ಲವೇ ?

Monday, July 28, 2014

ನಿಮ್ಮ ಮಗಳು ಏಕಾಂಗಿಯಲ್ಲ ಅನ್ನೋದನ್ನು ಆಕೆಗೆ ಮನದಟ್ಟು ಮಾಡಿ !


ಮ್ಮಾ, ಸ್ಕೂಲಿಗೆ ಹೋಗ್ಬರ್ತೀನಿ

ಹಾಗಂತ ಹೇಳಿ ಮಗಳು ಹೊರಡುತ್ತಾಳೆ. ಅಮ್ಮ ಮಗಳನ್ನು ಬಸ್‌ ಹತ್ತಿಸಿ ಟೀವಿ ಆನ್‌ ಮಾಡಿದರೆ ಬೆಂಗಳೂರು ಕರಾಳ ನಗರ, ಕಾಮುಕರ ನಗರ ಎಂಬ ಸುದ್ದಿ ಬಿತ್ತರಗೊಳ್ಳುತ್ತಿದೆ. ಸ್ಕೂಲು ಕೂಡ ಸುರಕ್ಷಿತ ಅಲ್ಲ ಅನ್ನುವುದು ಅಮ್ಮನಿಗೆ ಅರಿವಾಗಿದೆ. ರಾತ್ರಿ ಕೊಂಚ ತಡವಾದರೆ ಆತಂಕ. ಮಗಳು ಮೌನವಾಗಿದ್ದರೆ ಏನೋ ಭಯ, ಮಗಳು ಸ್ಕೂಲಿಗೆ ಹೋಗೋಲ್ಲ ಅಂದರೆ ಗುಮಾನಿ, ಲವಲವಿಕೆಯಿಂದ ಇದ್ದ ಕಂದಮ್ಮ ಕೊಂಚವೇ ಕೊಂಚ ಗಂಭೀರಳಾದರೆ ಅನುಮಾನ.
ಇದು ಕೇವಲ ಮಹಾನಗರಗಳ ಸಮಸ್ಯೆ ಮಾತ್ರವಲ್ಲ. ನಗರ, ಪಟ್ಟಣ, ತಾಲೂಕು ಕೇಂದ್ರ, ಗ್ರಾಮಗಳೂ ಇಂಥದ್ದೇ ತಲ್ಲಣ ಎದುರಿಸುತ್ತಿವೆ. ಗುಟ್ಟಾಗಿದ್ದ ಘಟನೆಗಳು ಹೊರಗೆ ಬರತೊಡಗಿವೆ. ಮುಚ್ಚಿಟ್ಟುಕೊಂಡು ಒಳಗುದಿ ಅನುಭವಿಸುತ್ತಿದ್ದ ಮಕ್ಕಳು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಾರೆ. ಎಲ್ಲರನ್ನೂ ಅನುಮಾನದಿಂದ ನೋಡುತ್ತಿದ್ದಾರೆ.

ಆದರೆ ಪ್ರಶ್ನೆ ಮಾತ್ರ ಹಾಗೇ ಉಳಿದುಕೊಂಡಿದೆ. ಅದು ಎಲ್ಲ ತಾಯಂದಿರ ಪ್ರಶ್ನೆ. ನನ್ನ ಮಗಳು ಸುರಕ್ಷಿತಳಾಗಿದ್ದಾಳಾ? ಅಥವಾ ಅವಳು ಏನನ್ನೋ ಮುಚ್ಚಿಡುತ್ತಿದ್ದಾಳಾ? ಯಾರೋ ಅವಳನ್ನು ಬೆದರಿಸುತ್ತಿದ್ದಾರಾ?

ಆ ಭಯ ನಿರಾಧಾರ ಅಲ್ಲ. ಬಹಳಷ್ಟು ಸಂದರ್ಭದಲ್ಲಿ ಮಕ್ಕಳು ಮಾತಾಡುವುದೇ ಇಲ್ಲ. ತಮಗಾದ ಅವಮಾನ ಮತ್ತು ಅನ್ಯಾಯವನ್ನು ಹೇಳಿಕೊಳ್ಳುವುದಿಲ್ಲ. ಅದಕ್ಕೇ ಕಾರಣ ತನ್ನನ್ನು ಆತ ಕೊಂದುಬಿಡಬಹುದು ಎಂಬ ಭಯ. ಅಪ್ಪ ಅಮ್ಮ ತನ್ನನ್ನು ನಂಬದೇ ಹೋದರೆ ಎಂಬ ಆತಂಕ, ಎಲ್ಲರೂ ಕೀಳಾಗಿ ಕಂಡರೆ ಎಂಬ ಹೆದರಿಕೆ, ಸ್ಕೂಲು ಬಿಡಿಸಿದರೆ ಎಂಬ ಭವಿಷ್ಯದ ಚಿಂತೆ. ಅದನ್ನೂ ಮೀರಿದಂತೆ ಇದನ್ನೆಲ್ಲ ಹೇಗೆ ಹೇಳಿಕೊಳ್ಳುವುದು ಎಂಬ ಸಂಕೋಚ ಮತ್ತು ನಾಚಿಕೆ.
ನೆನಪಿಡಿ!

ನಿಮ್ಮ ಮಗಳು ಏಕಾಂಗಿಯಲ್ಲ ಅನ್ನೋದನ್ನು ಆಕೆಗೆ ಮನದಟ್ಟು ಮಾಡಿ. ಅವಳನ್ನು ಕಾಯುವುದಕ್ಕೆ ಒಂದು ಸೈನ್ಯವೇ ಇದೆ ಅನ್ನುವುದನ್ನು ಅವಳಿಗೆ ತಿಳಿಸಿ ಹೇಳಿ. ಸುತ್ತಮುತ್ತಲೂ ಅವಳ ರಕ್ಷಣೆಗೆ ಸಿದ್ಧರಾದ ನೂರಾರು ಸಾವಿರಾರು ಮಂದಿ ಇದ್ದಾರೆ. ಅವರನ್ನು ಎದುರಿಸಿ ಒಬ್ಬ ದುರಾತ್ಮ ಗೆಲ್ಲಲಾರ ಅನ್ನುವ ಭರವಸೆ ಕೊಡಿ. ಅವಳಲ್ಲಿ ಆತ್ಮವಿಶ್ವಾಸ ತುಂಬಿ. ಅವಳಿಗೆ ಪ್ರತಿಭಟಿಸುವುದಕ್ಕೆ ಹೇಳಿ. ಕಿರುಚಿಕೊಳ್ಳುವುದನ್ನು, ಹೋರಾಡುವುದನ್ನು ಕಲಿಸಿಕೊಡಿ. ಯಾರಾದರೂ ಬಂದು ಹೆದರಿಸಿದರೆ, ಅವನಿಗಿಂತ ಜೋರಾಗಿ ಅಬ³ರಿಸಿ, ಅವನನ್ನು ದೂರಕ್ಕೆ ಅಟ್ಟುವುದನ್ನು ಹೇಳಿಕೊಡಿ. ನೆರವು ಕೂಗಳತೆಯ ದೂರದಲ್ಲಿದೆ ಅನ್ನೋದನ್ನು ಮರೆಯಬೇಡಿ. ಹೆಲ್ಪ್ ಅಂತ ಒಮ್ಮೆ ಕೂಗು ಹಾಕಿದರೆ ಸಾಕು, ಸೈನ್ಯ ಓಡೋಡಿ ಬರುತ್ತದೆ ಅನ್ನುವ ನಂಬಿಕೆ ಅವಳಲ್ಲಿ ಮೂಡುವಂತೆ ಮಾಡಿ.

ಪೊಲೀಸು, ಕಾನೂನು ನಂತರದ ಹೆಜ್ಜೆ. ನಮ್ಮ ಸಾಮಾಜಿಕ ರಕ್ಷಣಾ ಬೇಲಿ ಎಷ್ಟು ಬಲವಾಗಿದೆ ಎಂದರೆ ಒಬ್ಬಳು ಹೆಣ್ಮಗಳ ಸುತ್ತ ಅವಳ ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರು, ಸಂಬಂಧಿಕರು, ಸೋದರ ಸಂಬಂಧಿಗಳು, ಅಕ್ಕಂದಿರು, ಅಣ್ಣಂದಿರು ಇದ್ದೇ ಇರುತ್ತಾರೆ. ಅವರಲ್ಲಿ ಒಬ್ಬರಿಗೆ ವಿಷಯ ತಿಳಿಸಿದರೂ ಸಾಕು, ಸೈನ್ಯ ಜಾಗೃತವಾಗುತ್ತದೆ. ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವುದು ಅವಮಾನವೂ ಅಲ್ಲ, ಅಪರಾಧವೂ ಅಲ್ಲ. ಅದು ಹಕ್ಕು. ಹಾಗಂತ ಮಕ್ಕಳಿಗೆ ಅರ್ಥವಾಗಬೇಕು.
ಸ್ಪರ್ಶ, ವಿಶೇಷ ಕಾಳಜಿ, ಗುಟ್ಟಾಗಿ ಹೇಳಿಕೊಡುತ್ತೇನೆ ಎಂಬ ಅನುಕಂಪ, ನೀನು ದಡ್ಡಿಯಾಗಿದ್ದೀಯಾ, ಆದರೂ ನಾನು ಹೆಚ್ಚು ಅಂಕ ಕೊಡುತ್ತೇನೆ ಎಂಬ ಆಮಿಷ, ಬಡತನದಲ್ಲಿರೋ ನಿನ್ನನ್ನು ಶ್ರೀಮಂತಳನ್ನಾಗಿಸುತ್ತೇನೆ ಎಂಬ ಮಾತು ಇವಕ್ಕೆಲ್ಲ ಬಲಿಯಾಗಬೇಡಿ. ಕೊಲ್ಲುತ್ತೇನೆ, ನಾಶ ಮಾಡುತ್ತೇನೆ ಎಂಬ ಬೆದರಿಕೆಗೂ ಜಗ್ಗಬೇಡಿ. ಅದ್ಯಾರು ಏನು ಹೇಳಿದರೂ ಅದನ್ನು ನನಗೆ ಹೇಳು ಅಂತ ಸುತ್ತಲಿರುವ ಎಲ್ಲರೂ ಮಕ್ಕಳಿಗೆ ಹೇಳಿ. ಮಕ್ಕಳ ಪ್ರತಿಯೊಂದು ಚಲನ ವಲನ ಕೂಡ ನಿಮಗೆ ಗೊತ್ತಿರಲಿ.ನಿಮ್ಮ ಮಗಳ ಮುಖ ನೋಡಿ. ಅಲ್ಲಿ ಬದಲಾವಣೆಯ ಕುರುಹು ಕಾಣಿಸಿದರೆ ಎಚ್ಚೆತ್ತುಕೊಳ್ಳಿ. ನೆನಪಿಡಿ, ಮೊದಲ ರಕ್ಷಣಾ ಕೋಟೆ ಹೆತ್ತವರಾದ ನೀವೇ.

ಯೂ ಆರ್‌ ದಿ ಪ್ರೊಟೆಕ್ಟರ್‌.

ಅಮ್ಮ

(ಬೆಸ್ಟ್‌ ಸೈಕಾಲಜಿಸ್ಟ್‌. ಸಣ್ಣ ಬದಲಾವಣೆಯನ್ನೂ ಗುರುತಿಸಬಲ್ಲ ಸೂಕ್ಷ್ಮತೆ ಅಮ್ಮಂದಿರಿಗಿದೆ. ಏನೇ ಆದರೂ ಅಮ್ಮನಿಗೇ ಮೊದಲು ಗೊತ್ತಾಗುತ್ತದೆ.)

1. ಬದಲಾವಣೆ ಗಮನಿಸಿ: ಮಗಳು ಮೌನಿಯಾಗಿದ್ದಾಳೆ, ತುಂಟಾಟ ಕಡಿಮೆಯಾಗಿದೆ. ಸ್ಕೂಲಿಗೆ ಹೋಗುವ ಉತ್ಸಾಹ ಕುಗ್ಗಿದೆ. ಗೆಳತಿಯರ ಜೊತೆ ಆಟ ಆಡುತ್ತಿಲ್ಲ. ನಿದ್ದೆಯಲ್ಲಿ ಭಯಬೀಳುತ್ತಾಳೆ, ಹಾಸಿಗೆ ಒದ್ದೆ ಮಾಡ್ಕೊàತಾಳೆ, ಪಾನಿಪೂರಿ ಬೇಡ ಅಂತಾಳೆ- ಹೀಗೆ ಏನೋ ಒಂದು ಬದಲಾಗಿರುತ್ತೆ. ಕಣ್ಣಿಟ್ಟು ನೋಡಿ.

2. ಕಿವಿಗೊಡಿ: ಅವಳನ್ನು ಕರೆದು ಮಾತಾಡಿ. ಬೇರೆಯವರ ಧೈರ್ಯದ ಕತೆ ಹೇಳಿ. ನಿಂಗೇನಾಗಿದೆ ಅಂತ ಕೇಳಿ. ನಿಮ್ಮ ಬಾಲ್ಯದಲ್ಲಿ ನೀವು ಹೇಗೆ ಎಲ್ಲವನ್ನೂ ಧೈರ್ಯವಾಗಿ ಎದುರಿಸಿದಿರಿ ಅನ್ನೋದನ್ನು ಕತೆ ಕಟ್ಟಿ ಹೇಳಿ. ಅವಳ ಮಾತು ಕೇಳಿಸ್ಕೊಳ್ಳಿ.

3. ಧೈರ್ಯಗೆಡಬೇಡಿ: ಧೈರ್ಯಗೆಡುವಂಥದ್ದೇನೂ ಆಗಿಲ್ಲ ಅಂತ ಅವಳು ಅರ್ಥಮಾಡಿಕೊಳ್ಳಲಿ. ಅದು ತಪ್ಪಲ್ಲ ಅಂತ ಅರ್ಥಮಾಡಿಸಿ. ಅನ್ಯಾಯವನ್ನು ತನ್ನದೇ ಅಪರಾಧ ಅಂತ ಅಂದುಕೊಳ್ಳಬಾರದು ಎಂದು ಹೇಳಿ.

4. ಧೈರ್ಯ ತುಂಬಿ: ಮುಂದೇನು ಅನ್ನೋ ಚಿಂತೆ ಬೇಡ. ಎಲ್ಲ ರೋಗಕ್ಕೂ ಔಷಧಿ ಇದೆ ಅನ್ನೋದನ್ನು ಮನದಟ್ಟು ಮಾಡಿಸಿ. ಕಾನೂನಿನ ಶಕ್ತಿಯ ಬಗ್ಗೆ ಹೇಳಿ.

5. ಆತ್ಮವಿಶ್ವಾಸ ಕುದುರಿಸಿ: ಮಲಾಲಾ, ನಿರ್ಭಯ ಮುಂತಾದವರ ಕತೆಗಳನ್ನು ಹೇಳಿ. ಎದುರಿಸಿ ನಿಲ್ಲುವ ಸ್ಥೈರ್ಯ ತುಂಬಿ. ನಿಮ್ಮ ಮಗಳು ಮತ್ತೂಂದು ಮಗುವಿಗೂ ಧೈರ್ಯ ತುಂಬುವಷ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಲಿ.

ಅಪ್ಪ

(ಮಗಳು ನಂಬುವ ಮೊದಲ ಹೀರೋ. ಮಕ್ಕಳಲ್ಲಿ ಧೈರ್ಯ ತುಂಬುವಲ್ಲಿ ಅಪ್ಪನ ಪಾತ್ರ ದೊಡ್ಡದು. ಮಕ್ಕಳು ತಪ್ಪು ಮಾಡಿವೆ ಅಂದುಕೊಂಡಾಗ ಅಪ್ಪನ ಕಣ್ಣಲ್ಲಿ ಕಣ್ಣಿಟ್ಟು ನೋಡೋದನ್ನು ತಪ್ಪಿಸುತ್ತವೆ. ನೀವು ಗಮನಿಸಲೇಬೇಕು)

1. ಕೋಪಿಸ್ಕೋಬೇಡಿ: ಬಹುತೇಕ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಅಪ್ಪನ ಹತ್ರ ಹೇಳಲು ಹಿಂಜರಿಯುತ್ತವೆ. ಗೊತ್ತಾಗುವಾಗ ಸ್ವಲ್ಪ ತಡವಾಗಬಹುದು. ಆಗ ನೀವು ಕೋಪಿಸಿಕೊಳ್ಳಬಾರದು. ಮೊದಲೇ ಹೇಳಲು ಏನಾಗಿತ್ತು ನಿನಗೆ ಅಂತ ಗದರುವುದು ಬೇಡ. ನೀವವಳ ಹೀರೋ, ನೆನಪಿಟ್ಕೊಳ್ಳಿ.

2. ನಂಬಿ: ಮಗು ಈ ಕುರಿತಂತೆ ಸುಳ್ಳು ಹೇಳುವುದಿಲ್ಲ. ನಿಮ್ಮ ಹತ್ತಿರದ ಸಂಬಂಧಿ ನನಗೆ ಕಾಟ ಕೊಡುತ್ತಿದ್ದಾನೆ ಅಂತ ಹೇಳಿದರೆ ಅವಳನ್ನು ಅವಮಾನಿಸಬೇಡಿ. ನಂಬಿ ಅವಳ ಮಾತನ್ನು. ಹತ್ತಿರ ಕೂರಿಸಿ ನಾನಿದ್ದೇನೆ ಅಂತನ್ನಿಸುವಂತೆ ಮಾಡಿ. ಅವಳಿಗೆ ಬೆಟ್ಟದಷ್ಟು ಧೈರ್ಯ ಸಿಗುತ್ತದೆ.

3. ಮಗಳ ಪರ ನಿಲ್ಲಿ: ಏನೇನಾಯಿತು ಅಂತ ತಾಳ್ಮೆಯಿಂದ ಕೇಳಿ. ತಪ್ಪಿಯೂ ಅವಳಲ್ಲಿ ಅಪರಾಧಿ ಭಾವನೆ ಮೂಡಬಾರದಂತೆ ನೋಡಿಕೊಳ್ಳಬೇಕು. ಯಾವತ್ತೂ ಅಪ್ಪ ಮಗು ಜೊತೆ ಇದ್ದೇ ಇರ್ತಾನೆ ಅಂತ ಹೇಳಿ. ಅವಳ ಕಣ್ಣು ಬೆಳಗುತ್ತದೆ.

4. ಎಲ್ಲವನ್ನೂ ಎದುರಿಸಿ: ಜಗತ್ತು ಪ್ರಶ್ನೆಯಾಗಬಹುದು. ಅವರಿವರು ಕಿರಿಕಿರಿ ಮಾಡಬಹುದು. ಅಂಥಾ ಹೊತ್ತಲ್ಲಿ ಏನೇನಾಗುತ್ತದೋ ಅಂತ ಎದೆಗುಂದಬಾರದು. ಸಮಸ್ಯೆಯನ್ನು ತಾಳ್ಮೆಯಿಂದ ಎದುರಿಸಬೇಕು.

5. ಆಲ್‌ ಇಸ್‌ ವೆಲ್‌: ತುಂಬಾ ಧೈರ್ಯದಿಂದ ಇರಬೇಕಾದವರು ನೀವು. ಇಂಥದ್ದೇ ಸಮಸ್ಯೆ ಎದುರಿಸಿ ಪಾರಾದವರ ಕತೆಗಳನ್ನು ಕೇಳಿಕೊಳ್ಳಿ. ಮಗಳು ತುಂಬಾ ನೊಂದಿದ್ದರೆ ಕೌನ್ಸಿಲರ್‌ ಹತ್ತಿರ ಕರೆದೊಯ್ಯಿರಿ. ಸದಾ ಅವಳ ಜೊತೆ ಇದ್ದು ಎಲ್ಲಾ ಸರಿಯಾಗತ್ತೆ ಅಂತ ತಿಳಿಹೇಳಿ.

ಫ್ರೆಂಡುÕ

(ಫ್ರೆಂಡುÕ ಅಂದ್ರೆ ಜಗತ್ತೇ ಎದುರಾಗಿದ್ದಾಗಲೂ ಪಕ್ಕದಲ್ಲಿ ನಿಂತು ಕೈ ಹಿಡ್ಕೊಂಡು ಧೈರ್ಯ ತುಂಬೋ ಜೀವಗಳು. ಫ್ರೆಂಡ್ಸ್‌ ಹತ್ರ ಮಾತ್ರ ಎಲ್ಲವನ್ನೂ ನಾವು ಹೇಳಿಕೊಳ್ಳಬಲ್ಲೆವು.)

1. ಗಮನಿಸಿ ಅವಳನ್ನು: ಅವಳು ಏನನ್ನೋ ಮುಚ್ಚಿಡುವಂತಿರುವಂತೆ ಅನ್ನಿಸುತ್ತಿದೆ. ಒಳಗೊಳಗೆ ಒದ್ದಾಡುತ್ತಿದ್ದಾಳೆ. ಹೇಳ್ಳಿಕ್ಕೂ ಆಗದೆ, ನುಂಗ್ಲಿಕ್ಕೂ ಆಗದೆ ನೋಯುತ್ತಿದ್ದಾಳೆ. ಫ್ರೆಂಡು ಮನಸ್ಸು ಜಾಗೃತವಾಗಬೇಕು. ಅವಳೊಳಗಿಂದ ರಹಸ್ಯವನ್ನು ಹೊರಹಾಕಿಸಬಹುದಾದ ಏಕೈಕ ಜೀವ ನೀವೇ.

2. ನಾನಿದ್ದೇನೆ ಕಣೇ: ಹತ್ತಿರ ಕೂರಿಸಿ ಕೇಳಿದಾಗ ಅವಳು ಅಳಬಹುದು. ಎಲ್ಲಾ ಮುಗೀತು ಅಂತ ಮಾತಾಡಬಹುದು. ಆಗ ನೀವು ಆಕಾಶ ತಲೆ ಮೇಲೆ ಬಿತ್ತು ಅನ್ನುವ ಥರ ಆಡಬಾರದು. ಸಮಾಧಾನ ಮಾಡಬೇಕು. ನಾನಿದ್ದೇನೆ ಕಣೇ ಅಂತ ಹೇಳಿ ನೀವು ಅವಳ ಜೊತೆಯಿದ್ದೀರಿ ಅಂತ ಭರವಸೆ ಹುಟ್ಟಿಸಬೇಕು.

3. ಸಮಸ್ಯೆಯನ್ನು ಅರ್ಥ ಮಾಡ್ಕೊಳ್ಳಿ: ಪೂರ್ತಿಯಾಗಿ ಕೇಳಿ ಈಗ ಏನು ಮಾಡಬಹುದು ಅಂತ ಯೋಚಿಸಿ. ಅಪ್ಪ ಅಮ್ಮನ ಜೊತೆ ಮಾತಾಡಬಹುದಾ ಅಂತ ನೋಡಿಕೊಂಡು ಕೂಲಾಗಿ ಅವರಿಗೆ ವಿವರಿಸಿ. ಏನೇ ಆದರೂ ನೀವು ಅವಳು ಸಮಾಧಾನ ಆಗೋತನಕ ನಿಮ್ಮ ಫ್ರೆಂಡ್‌ ಜೊತೆಗಿರಿ.

4. ನಿಮ್ಮ ಮಾತೇ ಅವಳ ಶಕ್ತಿ: ಜಗತ್ತಿಗೆ ಹೆದರಿ ಅವಳು ಕುಗ್ಗಬಹುದು. ಎಲ್ಲರೂ ಅವಳಿಂದ ದೂರ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ. ಇಂಥಾ ಸಮಯದಲ್ಲಿ ಎಲ್ಲರನ್ನೂ ಹತ್ತಿರ ಕರೆದುತರಬೇಕು ನೀವು. ಅವಳ ತಪ್ಪಿಲ್ಲ ಎಂದು ಅರ್ಥ ಮಾಡಿಸಬೇಕು. ಅವಳನ್ನು ಬೆಚ್ಚಗೆ ನೋಡ್ಕೊàಬೇಕು.

ಸಂಬಂಧಿಕರು

(ತುಂಬಾ ಸಲ ಹೆಣ್ಮಗು ಅಪ್ಪ, ಅಮ್ಮಂಗೆ ಹತ್ತಿರಾಗದಿದ್ದರೂ ಚಿಕ್ಕಮ್ಮನನ್ನೋ, ಮಾವನನ್ನೋ ತುಂಬಾ ಹಚೊRಂಡಿರ್ತಾಳೆ. ಆ ಮಗುವಿಗೆ ಇವರ ಮಾತು ವೇದವಾಕ್ಯವಾಗಿರುತ್ತದೆ. ಅವರಿಗೆ ಇವಳು ಅರ್ಥವಾಗುತ್ತಾಳೆ, ಬೇಗ.)

1. ಅವಳಲ್ಲಿ ಬದಲಾವಣೆ: ಹುಡ್ಗಿ ಪದೇ ಪದೇ ಮನೆಗೆ ಬರುತ್ತಿದ್ದವಳು ಒಮ್ಮಿಂದೊಮ್ಮೆಲೆ ಮನೆಗೆ ಬರುತ್ತಿಲ್ಲ. ಬಾ ಅಂದರೂ ತಿರಸ್ಕರಿಸುತ್ತಿದ್ದಾಳೆ. ಈಗ ನೀವು ಜಾಗೃತರಾಗಬೇಕು. ನೀವೇ ಅವಳ ಹತ್ತಿರ ಹೋಗಿ ಕೂತು ಮಾತನಾಡಬೇಕು. ಸೂಕ್ಷ್ಮವಾಗಿ ಬದಲಾವಣೆ ಗಮನಿಸಬೇಕು.

2. ನೊಂದುಕೊಳ್ಳದಿರಲಿ: ಅವಳು ಒಮ್ಮೆಲೇ ನಿಮ್ಮ ಮುಂದೆ ಹೇಳಿಕೊಳ್ಳಬಹುದು. ಆಗ ನೀವು ಅವಳಿಗೆ ಧೈರ್ಯ ತುಂಬಬೇಕು. ನಿಂದೇನೂ ತಪ್ಪಿಲ್ಲಮ್ಮಾ ಅಂತ ಹೇಳಿ ಜಗತ್ತನ್ನು ವಿವರಿಸಿ. ನಿಮ್ಮ ಮಾತು ಕೇಳ್ತಾಳೆ ಮಗು.

3. ಜೊತೆಗಿರಿ: ನಿಮ್ಮ ಹತ್ತಿರದ ಸಂಬಂಧಿ ಹುಡ್ಗಿಗೆ ತೊಂದರೆ ಕೊಟ್ಟಿದ್ದು ಜಗಜ್ಜಾಹೀರಾದರೆ ಮೊದಲು ನೀವು ಆ ಕುಟುಂಬದ ಸಹಾಯಕ್ಕೆ ಹೋಗಬೇಕು. ಎಲ್ಲರೂ ವಿಚಿತ್ರವಾಗಿ ನೋಡುತ್ತಿರುವಂತೆ ಅವರಿಗನ್ನಿಸಬಹುದು. ಜೊತೆಗಿದ್ದು ಹಾಗನ್ನಿಸದಂತೆ ಮಾಡಿ.

4. ತಿಳಿಗೊಳಿಸಿ: ಕೋಪ, ಜಗಳ, ಗಲಾಟೆ ನಡೆಯಬಹುದು. ಆದಷ್ಟೂ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿ. ಅವಳು ನಮ್ಮನೆ ಮಗಳು ಅನ್ನೋದು ಮನಸ್ಸಲ್ಲಿರಲಿ.

ಶಿಕ್ಷಕರು

(ಮೇಷ್ಟ್ರು, ಟಿಚರ್‌ ಎಂದರೆ ನಂಬಿಕೆ. ಅವರ ಮೇಲೆ ಅತೀವ ಭರವಸೆ ಇಟ್ಟು ಮಕ್ಕಳನ್ನು ಕಳಿಸುತ್ತಾಳೆ ಅಮ್ಮ. ಹಾಗೆ ನೋಡಿದರೆ ಮೇಷ್ಟ್ರು ಅಥವಾ ಟೀಚರ್‌ ಮಕ್ಕಳ ಎರಡನೇ ಅಮ್ಮ.)

1. ಕ್ಲಾಸಿಗೆ ಬರುತ್ತಿಲ್ಲ: ತುಂಬಾ ಜಾಣೆ ಹುಡ್ಗಿಗೆ ಮಂಕು ಕವಿದಿದೆ. ಈಗೀಗ ನಗುತ್ತಿಲ್ಲ. ಮಾತಿಲ್ಲ ಕತೆಯಿಲ್ಲ. ಶಿಕ್ಷಕರಿಗೆ ಅರ್ಥವಾಗಬೇಕು. ಯಾಕೆಂದರೆ ಶಾಲೆಯಲ್ಲಿ ಅವರಿಗಿಂತ ಒಳ್ಳೆಯ ಸೈಕಾಲಜಿಸ್ಟ್‌ಗಳಿಲ್ಲ.

2. ಮಗಳಂತೆ ನೋಡಿ: ನಿಮ್ಮ ವಿದ್ಯಾರ್ಥಿನಿ ನಿಮ್ಮದೇ ಮಗು. ಅದನ್ನು ಅವಳಿಗೆ ಅರ್ಥವಾಗುವಂತೆ ಹೇಳಿ. ನಿಮ್ಮ ಮಗಳನ್ನು ಹೇಗೆ ನೋಡಿಕೊಳ್ಳುತ್ತೀರಿ ಅಂತ ವಿವರಿಸಿ. ಅವಳು ಎಲ್ಲವನ್ನೂ ಹೇಳಲಿ. ಪ್ರೀತಿಯಿಂದ ಕೇಳಿ. ಹೇಯ್‌ ನಾನಿದ್ದೇನೆ ಕಣೇ ಮಗೂ ಅಂತ ಸಮಾಧಾನಿಸಿ.

3. ಹೂವಂತೆ ನೋಡಿಕೊಳ್ಳಿ: ಯಾವುದೇ ಕಾರಣಕ್ಕೂ ಅವಳಿಗೆ ಅವಮಾನ ಅಂತನ್ನಿಸೋ ಥರ ಮಾಡಬಾರದು. ಮೊದಲೇ ನೊಂದಿರೋ ಹೂವು ಮತ್ತಷ್ಟು ಬಾಡುತ್ತದೆ. ಮಗು ಮನಸ್ಸು ಅರಳಬೇಕು. ಕತೆ ಹೇಳಿ. ಧೈರ್ಯ ತುಂಬಿ. ಅವಳಲ್ಲಿರೋ ಗಿಲ್ಟ್, ಭಯ ಹೊಡೆದೋಡಿಸಿ.

4. ಫೋಷಕರಿಗೂ ಧೈರ್ಯ ತುಂಬಿ: ಟೀಚರ್‌ ಅಥವಾ ಮೇಷ್ಟ್ರು ಎಂದರೆ ಪೋಷಕರಿಗೆ ಗೌರವ ಇರುತ್ತದೆ. ನಿಮ್ಮ ಮಾತಿಗೆ ಅವರು ಮನ್ನಣೆ ನೀಡುತ್ತಾರೆ. ಅವರನ್ನು ಕರೆಸಿ ಧೈರ್ಯ ತುಂಬಿ. ನೀವೂಂಚೂರು ಸೈಕಾಲಜಿ ಕಲಿತು ಕೌನ್ಸಿಲರ್‌ ಆಗಿ. ಅವರನ್ನು ಜಗತ್ತನ್ನು ಎದುರಿಸಲು ಸಜ್ಜುಗೊಳಿಸಿ.

ಈ ಪುಟ ಸದಾ ನಿಮ್ಮ ಕಣ್ಣೆದುರೇ ಇಟ್ಟುಕೊಳ್ಳಿ!!!!!!
 
Thanks to - Sudhakar Byatroy'

Sunday, June 29, 2014

ವಚನ-38

ಒಮ್ಮೆ ಮಲ ತಿನ್ನುವ ಚಟ ಅಂಟಿಕೊಂಡರೆ ಮುಗೀತು
ನಾಯಿಗೂ ಮಿಗಿಲಾಗಿ ಬಾಲ ಅಲ್ಲಾಡತೊಡಗುತ್ತದೆ
ಬಾಲಕ್ಕೆ ಬೆಂಕಿ ಇಕ್ಕಿದರೆ ಲಂಕೆ ಹಾಳಾಗದು ಇಂದು
ಲಂಕೆಯ ಪಾವಿತ್ರ್ಯ ಹಾಳು ಮಾಡಿದವನಿಗೇ ಪೂಜೆ
ಕಾರಣಿಕ ಸಿದ್ಧರಾಮ ತಲೆ ಅಲ್ಲಾಡಿಸು
ಒಳಗಿನ ಹೇನು ಹೊರ ಹೋಗಲಿ !

Thursday, June 19, 2014

ಮಾತ್ಗವಿತೆ-172

ನಿನ್ನ ಕಣ್ಣಿಗೆ ಸೋತೆ ಎಂದರೆ ತಪ್ಪಾದೀತು
ನಿನ್ನ ಕೆನ್ನೆಗೆ ಸೋತೆ ಎಂದರೂ ತಪ್ಪಾದೀತು
ನಿನ್ನ ತುಟಿಯ ರಂಗಿನ ಗುಂಗು ಎಂದರೂ ತಪ್ಪು !
ನಿನ್ನ ಹಾರುವ ಮುಂಗುರುಳು ;
ಮೊದಲು ಅಂಟುವ ಮೂಗು
ತಣ್ಣಗಿನ ತುಟಿಯಂಚಿನ ನಗು
ಬಂಗಾರದ ಮೊಳೆ ಹೊಡೆದುಕೊಂಡ ಕಿವಿ
ನನ್ನ ಗಾಯಿಸಲಿಲ್ಲ ; ನೋಯಿಸಲಿಲ್ಲ
ಕೂಡಬೇಕು ; ಆಡಬೇಕು ಧಡಪಡಿಸಿ
ಉರಿಯೊಲೆಯ ಎಳ್ಳಾಗಿ ಸಿಡಿಯಬೇಕು
ಮುಗಮ್ಮಾಗಿ ಮೈ ಮರೆಯಬೇಕು
ಆಗ ನನ್ನ ಸೋಲು ; ನಿನ್ನ ಗೆಲುವು !

Tuesday, May 06, 2014

ಮಾತ್ಗವಿತೆ-171

ತಪ್ಪು ಮಾಡಿದವರನ್ನು ಕ್ಷಮಿಸಬಹುದು...
ಮತ್ತೇ ಮತ್ತೇ ತಪ್ಪು ಮಾಡಿದರೆ ?
ಅಯ್ಯೋ ! ನಾನು ಸಾಮಾನ್ಯ ಮನುಷ್ಯ
ಕ್ಷಮಿಸುವವರು ದೇವರಾಗುತ್ತಾರಂತೆ ;
ನಾನು ಕಲ್ಲಾಗಲು ಬಯಸುವುದಿಲ್ಲ !

Friday, March 14, 2014

ಮಾತ್ಗವಿತೆ-170


ನಾನು ನಿನ್ನ ಬಯಸುತ್ತಿದ್ದೇನೆ
ರೂಪ
-ರುಪಾಯಿಗಳ ಪರಿವೆ ಇದ್ದರೆ
ತಿಳಿಸು ; ಮೊದಲೇ ಮಾತಾಡಿದರೆ ಸೊಗಸಲ್ಲವೇ ?
ಸುಳ್ಳು-ಧಿಮಾಕುಗಳ ಜೊತೆಗೆ
ನಾನು ಯಾರೊಂದಿಗೆಯೂ ಸೇರಬಯಸುವುದು ಇಲ್ಲ !
ಕೊರಡು ಕೊನರಬೇಕು ; ಚಿಗುರು ಬೂದಿಯಾಗಬಾರದು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.