Friday, December 09, 2011

ಬಸೂ ಅವರ ದ್ವಿಪದಿಗಳು ....

ಬಸವರಾಜ ಸುಳೇಭಾವಿ
1
ಹಾರಿಹೋದ ಹಕ್ಕಿಗಳ ರೆಕ್ಕೆಯ ಮೇಲೆ ನಿನ್ನೆಯ ಚಂದ್ರ ಕುಳಿತಿದ್ದ
ಬದುಕೇ ಎಂದಿದ್ದರೂ ಬೆಳದಿಂಗಳಿಲ್ಲದ ಇರುಳೇ ನಮ್ಮ ಜತೆಗಾಗುವುದು
2

ಮಗಳು ಎಳೆವ ಗೆರೆಗಳಲಿ ಅವಳ ಬಾಲ್ಯವಿತ್ತು ನಿನ್ನ ಹೆಸರೂ ಮೂಡಿತ್ತು
ಅವಳು ಮನೆ ತುಂಬ ಗೀಚಿದ ಗೆರೆಗಳು ಮನೆ ಬದಲಿಸುವಾಗ ಅಲ್ಲೇ ಉಳಿದವು
3

ತಡೆದು ನಿಲ್ಲಿಸಿದರೆ ಹೊಟ್ಟೆ ಉಬ್ಬಿಸುವ ಜೀವನದಿಗೆ ಮುಂದಷ್ಟೆ ಕಣ್ಣು
ರೆಕ್ಕೆ ಸುಟ್ಟರೂ ಕಾಲೂರಿ ನಿಂತ ಹಕ್ಕಿ ಕೊರಳ ಹಾಡು ಮರೆಯದು
4

ನಿನ್ನ ಕಾಲು ತಾಕಿದ ಕಡಲಿನ ನೀರು ಇಲ್ಲಿ ನನ್ನ ಕಾಲಿಗೂ ತಾಕಿ ರೋಮಾಂಚನ
ಮರುದಿನದ ಬೆಳಗಿನಲಿ ತೇಲುತಿತ್ತು ಮಲೆತ ನೀರಿನಲಿ ಹೆಸರಿಟ್ಟ ಸಂಬಂಧ
5

ಲೋಕವೆ ಹೋಗಳುವಾಗ ಮನೆಯ ಕದಗಳಲಿ ಹಂಗಿನ ಮಾತು
ಈ ಬದುಕಿನ ಬುಡದಲ್ಲಿಯೂ ಇತ್ತು ಕತ್ತಲು ಎಲ್ಲ ದೀಪಗಳ ಹಾಗೆ
6

ಕೂಡುವುದು ಎದೆಯೊಳಗೆ ಹೊತ್ತಿದ ಬೆಂಕಿ ಎದೆಯೊಳಗೆ ಬೆಳಕಾಗುತ್ತ ನಡೆವ ಹಾಗೆ
ಕತ್ತಲಾಗತೊಡಗಿತು : ಸೂರ್ಯ ಸಂಬೋಗಿಸುವದನು ನಿಲ್ಲಿಸಿದನೆನಿಸಿತು
7

ಗೆಲುವಿನ ಮನೆಯ ಹತ್ತುವಾಗ ವಿನಯ ಒಳ್ಳೆಯತನ ಮೊದಲ ಮೆಟ್ಟಿಲಾದವು
ತಮಗಿನ್ನು ಕೆಲಸವಿಲ್ಲವೆನಿಸಿತೆನೊ ವಿನಯ ಒಳ್ಳೆಯತನ ಮೊದಲ ಮೆಟ್ಟಲಲ್ಲೆ ಉಳಿದವು

1 comment:

  1. ಸಿದ್ರಾಮ ನಿಮಗೆ ದನ್ಯವಾದಗಳು

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.