Monday, December 19, 2011

ಮಹಾತಾಯಿ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ ಭಾಷಣಗಳು

ಮೂಲ ಮರಾಠಿಯಲ್ಲಿ ರಾಜರತ್ನ ಠೋಸರ ಅವರು ಸಂಪಾದಿಸಿರುವ ಈ ಭಾಷಣಗಳನ್ನು ಮುಂಬಾಯಿಯ ವಿನಿಮಯ ಪ್ರಕಾಶನದವರು 06-12-2010 ರಂದು ಪ್ರಕಟಿಸಿದ್ದಾರೆ. ಅವುಗಳನ್ನು ನಾನು ಕನ್ನಡೀಕರಿಸಿ ನೀಡುತ್ತಿದ್ದೇನೆ.

                                                                     *****
ದಲಿತರ ಅವ್ವ : ರಮಾಯಿ ಅಂಬೇಡ್ಕರ್ ಮಾಡಿದ ಮೊಟ್ಟಮೊದಲ ಸಾರ್ವಜನಿಕ ಭಾಷಣ

    ಆ ದಿನದ ಬೆಳಗು ತುಂಬ ಉತ್ಸಾಹದಿಂದಲೇ ಮೂಡಿಬಂತು. ಇಂದು ಮಹಾಮಾತೆ ರಮಾಯೀ ಭೀಮರಾವ್ ಅಂಬೇಡ್ಕರ್ ಸಮಾಜದ ಮಹಿಳಾ ಮಂಡಲದಲ್ಲಿ ಭಾಷಣ ಮಾಡುವವರಿದ್ದರು. ಮನೆಯ ಎಲ್ಲ ಕೆಲಸಗಳನ್ನು ಮುಗಿಸಿದ ರಮಾಯಿ ಸಂಜೆ ಆಗಮಿಸಿದ ಮಹಿಳಾ ಮಂಡಳದ ಇಬ್ಬರು ಹೆಣ್ಣುಮಕ್ಕಳೊಂದಿಗೆ ನಡೆದಳು. ಹಾಗೆ ಹೋಗುವುದಕ್ಕಿಂತ ಮುಂಚೆ ಆಕೆ ತನ್ನ ಮಾವನ (ಸುಬೇದಾರ ರಾಮಜೀ) ಪ್ರತಿಮೆಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಳು. ಮನಸ್ಸಿನಲ್ಲಿಯೇ ತನ್ನ ಪತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿದಳು. ಮಹಿಳಾ ಮಂಡಲದ ಸಭೆಯ ವೇದಿಕೆಯೇರಿದ ರಮಾಯಿ ಮಾತನಾಡತೊಡಗಿದಳು.

    "ನನ್ನ ಆತ್ಮೀಯ ತಾಯಂದಿರೆ ಮತ್ತು ಸಹೋದರಿಯರೆ,
    ಇಂದು ನಾನು ಮೊಟ್ಟಮೊದಲ ಬಾರಿಗೆ ಮಾತನಾಡಲು ನಿಂತಿದ್ದೇನೆ. ಮಾತಾಡುವಾಗ ಏನಾದರೂ ತಪ್ಪು-ತಡೆಗಳುಂಟಾದರೆ ತಿದ್ದಿಕೊಳ್ಳಿ. ನಾವು ಪ್ರತಿನಿತ್ಯದ ಬದುಕಿನಲ್ಲಿ ನೋಡುವುದೇನೆಂದರೆ, ಪತಿ ಯಾವ ಕಾರ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುತ್ತಾನೋ ಆ ಭಾರವನ್ನು ಸಹಧರ್ಮಿಣಿಯಾಗಿ ಪತ್ನಿಯರೂ ಹೆಗಲು ಕೊಟ್ಟು ಹೊತ್ತುಕೊಳ್ಳಬೇಕಾಗುತ್ತದೆ. ಇಂಥ ಅನುಭವಗಳು ನನ್ನ ಬದುಕಿನಲ್ಲಿ ಸಾಕಷ್ಟು ಇವೆ ಎಂದು ನನಗನ್ನಿಸುತ್ತದೆ. (ಜನಸಮುದಾಯದ ಕರತಾಡನ)
    ನನ್ನಂತಹ ಮದುವೆಯಾಗಿರುವ ಹೆಣ್ಣಿಗೆ ಪತಿಸೇವೆಯ ಹೊರತು ಈ ಜಗತ್ತಿನಲ್ಲಿ ಮತ್ತೇ ಕೆಲವು ಸೇವಾಕಾರ್ಯಗಳು ಇವೆ ಎಂಬ ಅರಿವು ಇಲ್ಲಿಯವರೆಗೆ ನನಗಿರಲಿಲ್ಲ. ಆದರೆ ಇಂದು ಈ ಭವ್ಯ ವೇದಿಕೆಯ ಮೇಲೆ ನಿಂತು, ಸೇರಿರುವ ಬಹುದೊಡ್ಡ ಸಂಖ್ಯೆಯ ಜನಸಮುದಾಯವನ್ನು ಕಂಡಾಗ ನನಗನ್ನಿಸುತ್ತಿದೆ ; 'ಸಕಲರಲ್ಲೂ ಅರಿವು ತುಂಬಿಯೇ ಬಿಡಬೇಕು' (ಶಹಾಣೆ ಕರೂಣಿ ಸೋಡಾವೆ ಸಕಲಜನ)..... (ಜನಸಮುದಾಯ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಲೇ ಘೋಷಣೆ ಕೂಗತೊಡಗಿದರು ; ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
    ನನಗೆ ಇಂತಹ ಜೈಕಾರ ಹಾಕಬೇಡಿ. ಇನ್ನೂ ನಾನು ನಿಮಗಾಗಿ ಏನನ್ನೂ ಮಾಡಿದವಳಲ್ಲ. ಆ ಬಗ್ಗೆ ನನಗೆ ವಿಷಾದವೆನಿಸುತ್ತದೆ. ಇರಲಿ. ನಮ್ಮೆಲ್ಲರ ಮುಂದಾಳು ಡಾ. ಬಾಬಾಸಾಹೇಬ ಅಂಬೇಡ್ಕರರು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ ; ನಾವು ಹೆಣ್ಣುಮಕ್ಕಳೆಲ್ಲ ಮುಂದೆ ಬಂದು, ಸಮಾಜದ ಕ್ರಾಂತಿ-ಚಳುವಳಿಯಲ್ಲಿ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿ ಭಾಗಿಯಾಗಬೇಕು. ಯಾಕೆಂದರೆ ಹೆಣ್ಣುಮಕ್ಕಳು ಏಕನಿಷ್ಠರಾಗಿರುತ್ತಾರೆ. ಯಾವುದೇ ಚಳುವಳಿಯಲ್ಲಿ ಹೆಣ್ಣುಮಕ್ಕಳು ಸಹಭಾಗಿಯಾಗಬೇಕು. ಇದರ ಹೊರತಾಗಿ ಚಳುವಳಿಯ ಹೆಜ್ಜೆ ಮುಂದೆ ಸಾಗುವುದಿಲ್ಲ. ........ (ಜನರಿಂದ ಪ್ರಚಂಡ ಕರತಾಡನ)
    ಜಗತ್ತಿನ ಕ್ರಾಂತಿ-ಚಳುವಳಿ ಯಾವುದರ ಮೇಲೆ ನಡೆಯುತ್ತವೆ ? ತ್ಯಾಗದ ಮೇಲೆ ..... ಅದು ಎಂಥದ್ದೇ ತ್ಯಾಗ ಇರಲಿ ....  ಚಳುವಳಿಗಾರರು ಎಷ್ಟೋ ಅಗ್ನಿದಿವ್ಯ ಹಾದು ಬರಬೇಕಾಗುತ್ತದೆ. ಇಲ್ಲದಿದ್ದರೆ ಬಯಸಿದ ಬಂಗಾರ ದೊರೆಯಲಾರದು. ಈ ಬಗ್ಗೆ ಒಮ್ಮೆ ಡಾ. ಅಂಬೇಡ್ಕರ ಅವರು ಹೇಳಿದ ಒಂದು ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. ಇದು ಗ್ರೀಕ್ ಪುರಾಣದಲ್ಲಿ ಬರುವ ಕತೆ.
    ಡಿಮೇಟರ್ ಹೆಸರಿನ ದೇವತೆಯೊಬ್ಬಾಕೆ ಮನುಷ್ಯರೂಪ ಧರಿಸಿ ಭೂಮಿಗೆ ಬಂದಳು. ಆಕೆಯನ್ನು ಅಲ್ಲಿಯ ರಾಣಿಯೊಬ್ಬಳು ದಾಸಿಯನ್ನಾಗಿ ಇಟ್ಟುಕೊಂಡು ತನ್ನ ಬಾಲಕ ಮಗನ ಉಸ್ತುವಾರಿ ನೋಡಿಕೊಂಡಿರಲು ಹೇಳಿದಳು. ರಾಣಿಯ ಆ ಮಗನನ್ನು 'ದೇವ'ನನ್ನಾಗಿಸಬೇಕು ಎಂಬ ಹಂಬಲ ಆ ದೇವತೆಗೆ ಉಂಟಾಯಿತು. ಹೀಗಾಗಿ ಆಕೆ ದಿನವೂ ರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಎಲ್ಲ ಬಾಗಿಲು-ಕಿಟಕಿಗಳನ್ನು ಮುಚ್ಚುತ್ತಿದ್ದಳು. ತೊಟ್ಟಿಲಲ್ಲಿ ಮಲಗಿದ ಮಗುವನ್ನು ಹೊರತೆಗೆದು, ಅದರ ಮೈಮೇಲಿನ ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿ ಬಿಸಿ ಬೂದಿಯ ಮೇಲೆ ಒಂದಿಷ್ಟು ಕಾಲ ಆ ಮಗುವನ್ನು ಮಲಗಿಸುತ್ತಿದ್ದಳು ! ಕ್ರಮೇಣ ಬೆಂಕಿಯ ಬಿಸಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಮಗುವಿಗೆ ಬಂತು. ಅದರ ಬಲ ವೃದ್ಧಿಸತೊಡಗಿತು. ಆ ಮಗುವಿನಲ್ಲಿ ಅತ್ಯಂತ ತೇಜಸ್ವಿಯಾದ ದೈವೀ ಅಂಶ ವಿಕಸಿತವಾಗತೊಡಗಿತ್ತು. ಆದರೆ ಒಂದು ರಾತ್ರಿ ಆ ಮಗುವಿನ ತಾಯಿ ರಾಣಿ ಅಚಾನಕ್ಕಾಗಿ ಆ ಕೋಣೆಯನ್ನು ಹೊಕ್ಕಳು. ಅಲ್ಲಿ ನಡೆಯುತ್ತಿದ್ದುದ್ದನ್ನೆಲ್ಲ ಕಣ್ಣಾರೆ ಕಂಡ ಆಕೆ ತುಂಬ ನೊಂದುಕೊಂಡಳು. ಆಕೆ ತಕ್ಷಣ ತನ್ನ ಮಗುವನ್ನು ಒಲೆಯ ಮೇಲಿನಿಂದ ಎತ್ತಿ ಎದೆಗವಚಿಕೊಂಡಳು. ಆ ರಾಣಿಗೆ ಆಕೆಯ ಮಗುವೇನೋ ದೊರೆಯಿತು. ಆದರೆ ಸಾಮರ್ಥ್ಯಶಾಲಿ ದೇವನಾಗಬೇಕಿದ್ದ ದೇವನನ್ನೇ ಆಕೆ ಕಳೆದುಕೊಂಡಳು ..... !
    ಈ ಕತೆಯ ತಾತ್ಪರ್ಯ ಇಷ್ಟೆ ; ಕುಲುಮೆಯಲ್ಲಿ ಕಾಯದೆ ದೇವತನ ಬರುವುದಿಲ್ಲ. ಬೆಂಕಿ, ಮನುಷ್ಯನನ್ನು ಶುದ್ಧಿಗೊಳಿಸುತ್ತದೆ ಮತ್ತು ಮನುಷ್ಯನಲ್ಲಿ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಅಸ್ಪೃಶ್ಯ ಎನಿಸಿಕೊಂಡಿರುವವರು ಕಡುಕಷ್ಟ ಮತ್ತು ತ್ಯಾಗದ ಅಗ್ನಿದಿವ್ಯ ಸಹಿಸದೇ ಉದ್ಧಾರವಾಗಲಾರರು. ನೀವು ನಿಮ್ಮನ್ನು ಅಸ್ಪೃಶ್ಯ, ಕೀಳು ಎಂದುಕೊಳ್ಳಬೇಡಿ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ. 'ಮಗನಾಗಬೇಕು ತೇಜ ; ಮೂರು ಲೋಕದಲ್ಲೂ ಇರಬೇಕು ಆತನದೇ ಧ್ವಜ' ಎಂಬ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ನುಮುಂದೆ ನಮ್ಮ ಮಕ್ಕಳನ್ನು ಬೆಳೆಸಬೇಕು. ಅದರಲ್ಲೇ ನಮ್ಮ ಉದ್ಧಾರವಿದೆ. ಇಷ್ಟು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ" (ಪ್ರಚಂಡ ಕರತಾಡನ. ಜಯಘೋಷ 'ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)

                                    *****


ದಲಿತರ ಅವ್ವ : ರಮಾಯಿಯ ಎರಡನೆಯ ಮತ್ತು ಅಂತಿಮ ಭಾಷಣ :

    ಆ ದಿನ 29ನೇ ಜನೇವರಿ 1932 !
    ಡಾ. ಬಾಬಾಸಾಹೇಬ ಅಂಬೇಡ್ಕರರು ಕುಳಿತ್ತಿದ್ದ ಲಂಡನ್ನಿನ ಹಡಗು ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ ಮುಂಬಾಯಿಯ ಬಂದರಿಗೆ ಬಂದು ತಲುಪಿತು. ಸೇರಿದ ಸಾವಿರಾರು ಅನುಯಾಯಿಗಳ ಹೃದಯ ಆನಂದದಿಂದ ತುಂಬಿ ತುಳುಕಿತು !
    ಆ ದಿನ ನಸುಕಿನಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರ ನಿಷ್ಟಾವಂತ ಅನುಯಾಯಿಗಳೂ, ಸಂಬಂಧಿಕರೂ ಹಾಗೂ ಹಿತಚಿಂತಕರು ಡಾ. ಬಾಬಾಸಾಹೇಬ ಅಂಬೇಡ್ಕರರ ಹಾದಿಯನ್ನು ತುಂಬ ಉತ್ಸಾಹಿತರಾಗಿಯೇ ಕಾಯುತ್ತಿದ್ದರು. ಪ್ರತಿಯೊಬ್ಬರೂ ಕೈಯಲ್ಲಿ ಹೂಮಾಲೆ-ಹೂಗುಚ್ಛ ಹಿಡಿದುಕೊಂಡು ನಸುಕಿನ ಚಳಿಗೂ ಅಂಜದೆ ಶಾಂತವಾಗಿಯೇ ಕಾಲಿಡಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದರು.
    ಆ ಜನಸಂದಣಿಯಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರ ಧರ್ಮಪತ್ನಿ ದಲಿತರ ಅವ್ವ ರಮಾಯಿ ನಿಂತಿದ್ದಳು !
    ಸುವಾಸಿತ ಹೂವಿನಿಂದ ಮಾಡಲ್ಪಟ್ಟ ಮಾಲೆಯನ್ನು ಆಕೆ ಹಿಡಿದುಕೊಂಡು ತನ್ನ 'ಸಾಹೇಬ'ರನ್ನು ಎದುರುಗೊಳ್ಳಲು ನಿಂತಿದ್ದಳು !
    ತನ್ನ ಸಾಹೇಬನನ್ನು ಯಾವಾಗ ಕಣ್ಣು ತುಂಬಿಕೊಳ್ಳುತ್ತೇನೆಯೋ ಎಂಬ ಕಾತರದಲ್ಲಿ ಆಕೆ ಇದ್ದಳು !
    ಅಷ್ಟರಲ್ಲಿ ಗದ್ದಲ, ಜಯಕಾರ ಸುರುವಾದವು. ಡಾ. ಬಾಬಾಸಾಹೇಬ ಅಂಬೇಡ್ಕರರು ಹಡಗಿನಿಂದ ಇಳಿದು ಬರುತ್ತಿದ್ದರು. ಗಗನಭೇದಿ ಘೋಷಣೆ ಮುಳುಗತೊಡಗಿದವು !
    'ಡಾ.  ಬಾಬಾಸಾಹೇಬ ಅಂಬೇಡ್ಕರ ಕೀ ಜೈ !
    ಅಂಬೇಡ್ಕರ್ ಅಂಬೇಡ್ಕರ್ ... ದಲಿತರ ದೇವ ಅಂಬೇಡ್ಕರ್ !!
    ಮೊಟ್ಟಮೊದಲು ಸಮತಾ ಸೈನಿಕ ದಳವು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಹಾರ ಹಾಕಿ ಗೌರವ ವಂದನೆ ಸಲ್ಲಿಸಿತು.
    ನೋಡು ನೋಡುವಷ್ಟರಲ್ಲಿಯೇ ಹೂಮಾಲೆಗಳನ್ನು ಹಿಡಿದು ನಿಂತಿದ್ದ ಜನಸಮೂಹ ನಾ ಮುಂದು ತಾ ಮುಂದು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಸುತ್ತುವರಿಯಿತು ! ಅಪರಿಮಿತ ಭಕ್ತಿ, ಪ್ರೇಮ ಮತ್ತು ನಿಷ್ಟೆಯ ಸಂಕೇತವಾಗಿ ಹೂಮಾಲೆಗಳು ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳನ್ನು ಅಲಂಕರಿಸಿದವು. ರಮಾಯಿ ಮಾತ್ರ ಈ ಎಲ್ಲ ಗದ್ದಲದಿಂದ ಒಂದಿಷ್ಟು ದೂರವೇ ಉಳಿದಿದ್ದಳು ! ತನ್ನ 'ಸಾಹೇಬ'ನ ಮೇಲೆ ಸೂಸುತ್ತಿದ್ದ ಅಪಾರ ಜನರ ಅಪರಿಮಿತ ಪರಿಶುದ್ಧ ಪ್ರೇಮವನ್ನು ಆಕೆ ಮೊದಲ ಬಾರಿ ನೋಡುತ್ತಿದ್ದಳು ! ನೋಡುತ್ತ ನೋಡುತ್ತ ಆಕೆಯ ಕಣ್ಣಾಲಿಗಳು ತುಂಬಿದವು ! ಆನಂದಭಾಷ್ಟ ಉದರಿದವು !
    ಎಲ್ಲರೂ ಮಾಲೆ ಹಾಕಿ ಮುಗಿದಾದ ಮೇಲೆ ರಮಾಯಿ ಕೊನೆಯವಳಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬಳಿಗೆ ಹೋದಳು !
ಅಖಂಡವಾಗಿ ನಿಂತ ಡಾ. ಬಾಬಾಸಾಹೇಬ ಅಂಬೇಡ್ಕರರು !
    ರಮಾಯಿ ತಲೆಯೆತ್ತಿ ಕೂಡ ನೋಡಲಿಲ್ಲ !
    ಕೈಯಲ್ಲಿರುವ ಸುವಾಸಿತ ಮಾಲೆಯನ್ನು ಆಕೆ ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳಿಗೆ ಹಾಕಿದಳು !
    ಆದರೆ ಆಕೆ ದೃಷ್ಟಿ ಮಾತ್ರ ಅವರ ಪದತಲದಲ್ಲಿಯೇ ಇತ್ತು !
    ಹಗಲು-ರಾತ್ರಿಯೆನ್ನದೆ ಯಾವ ಮೂರ್ತಿಯ ಸೇವೆಯನ್ನು ಮಾಡಿದ್ದಳೋ ಅದೇ ಇಂದು ಎದುರಿಗೇ ನಿಂತಿದ್ದರೂ ಆಕೆ ಕಣ್ಣೆತ್ತಿಯೂ ಕೂಡ ನೋಡಲಿಲ್ಲ !
ಹಾಗೆ ನೋಡುವುದಕ್ಕೆ ಆಕೆಯ ನಾಚಿಕೆ ಸ್ವಭಾವ ಮತ್ತು ಆಕೆ ಬಾಳಿದ ಸಂಸ್ಕಾರಗಳು ಅನುಮತಿಸಿರಲಿಕ್ಕಿಲ್ಲ !
    ಆದರೆ....... !
    ಈ ಹೃದಯಂಗಮವಾದ ಪ್ರಸಂಗವನ್ನು ನೋಡಿದ ಆಗ ಜನತಾ ಪತ್ರಿಕೆಯ ಸಂಪಾದಕರಾಗಿದ್ದ ಸಹಸ್ರಬುದ್ಧೆಯವರ ಚಾಣಾಕ್ಷ ಕಣ್ಣುಗಳು ಮರೆಯಲು ಸಾಧ್ಯವೇ ಇರಲಿಲ್ಲ !
    ಸಹಸ್ರಬುದ್ಧೆಯವರು ಸಹಜವಾಗಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಕೊನೆಯಲ್ಲಿ ಮಾಲೆ ಹಾಕಿದ್ದು ಮತ್ತು ಮಾಲೆ ಹಾಕುವಾಗ ತಲೆಯೆತ್ತಿ ನೋಡದಿರುವುದಕ್ಕೆ ಕಾರಣ ಏನು ಎಂದು ರಮಾಯಿಗೆ ಕೇಳಿಯೇ ಬಿಟ್ಟರು !
    ರಮಾಯಿಗೆ ಏನು ಹೇಳಬೇಕೆಂದು ಒಂದು ಕ್ಷಣ ತೋಚಲಿಲ್ಲ ! ಸಭೆಯಲ್ಲಿ ಮಾತನಾಡಬೇಕೆಂದರೆ ತನಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ ! ಮಾತನಾಡದಿದ್ದರೆ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಷ್ಠೆಗೆ ಧಕ್ಕೆ ಬರಬಹುದು ! ಹಾಗೆ ನೋಡಿದರೆ ರಮಾಯಿಯೇನೂ ಅರಿಯದ ಹೆಣ್ಣುಮಗಳಲ್ಲ ! ಆಕೆ ನಿಜವಾಗಿಯೂ ಚತುರಳೂ ಬುದ್ಧಿವಂತಳೂ ಆಗಿದ್ದಳು ! ಮರುಕ್ಷಣವೇ ಆಕೆಯ ಮೈಯಲ್ಲಿ ಮಿಂಚು ಹರಿದಾಡಿದ ಅನುಭವವಾಯಿತು. ಆಗ ಆಕೆ ತಡ ಮಾಡಲಿಲ್ಲ ; ತಟ್ಟನೇ ಎದ್ದು ಬಂದು ಮಾತನಾಡಲು ಆರಂಭಿಸಿದಳು !
    "ಅಧ್ಯಕ್ಷಮಹೋದಯರೇ, ನನ್ನ ಪತಿಮಹಾದೇವರೆ ಹಾಗೂ ಇಲ್ಲಿ ಸೇರಿರುವ ನನ್ನ ಬಂಧು-ಭಗಿನಿಯರೆ,
    ಈಗ ತಾನೆ ಸಹಸ್ರಬುದ್ಧೆ ಸಾಹೇಬರು ನನಗೆ ಕೇಳಿರುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಮಾತನಾಡಲೇಬೇಕಿದೆ. ಅದಕ್ಕಾಗಿಯೇ ಎದ್ದಿರುವೆ. ಯಾರು ಸಾಹೇಬರನ್ನು ಯಾವಾಗಲೋ ಒಮ್ಮೆ ಕ್ವಚಿತ್ತಾಗಿ ನೋಡುತ್ತಾರೋ ಅವರೆಲ್ಲ ಅವರನ್ನು ನೋಡಲಿ ... ನಾನೋ ಹಗಲು-ರಾತ್ರಿ ಸಾಹೇಬರ ದರ್ಶನ ಪಡೆದು ತೃಪ್ತಳಾದವಳು. ಆದ್ದರಿಂದ ಎಲ್ಲರೂ ಮೊದಲು ಮಾಲೆ ಹಾಕಿದ ಮೇಲೆ ನಾನು ಕೊನೆಯಲ್ಲಿ ಮಾಲೆ ಹಾಕಿದೆ. ಇದು ನಿಮಗೆಲ್ಲ ಗೊತ್ತು. ಇನ್ನು ಡಾ. ಅಂಬೇಡ್ಕರ್ ಸಾಹೇಬರು ಬಡಬಗ್ಗರ-ದೀನದಲಿತರ ಉದ್ದಾರಕ್ಕಾಗಿ ಪಣ ತೊಟ್ಟು ನಿಂತವರು. ನಾನು ಅವರ ಧರ್ಮಪತ್ನಿ. ಅವರ ಸಾಧನೆಗೆ ನನ್ನ ದೃಷ್ಟಿ ತಾಗಬಾರದೆಂಬ ಒಂದೇ ಉದ್ದೇಶದಿಂದ ನಾನು ಅವರ ಮುಖವನ್ನು ನೋಡದೇ ಬರೀ ಅವರ ಪಾದಗಳನ್ನು ಕಣ್ಣು ತುಂಬಿಕೊಂಡೆ.
ಈಗ ಹೇಳಿ ಬಂಧುಗಳೇ, ನಾನು ನೀಡಿದ ಉತ್ತರ ಸರಿಯೇ ? ಸರಿಯಾಗಿಯೇ ಇದ್ದೀತು ಮತ್ತು ಅದು ನಿಮ್ಮೆಲ್ಲರ ಜೊತೆ ಸಹಸ್ರಬುದ್ಧೆಯವರಿಗೂ ಸರಿತೋರಿದೆ ಎಂದು ನಂಬಿ ನಾನು ನನ್ನ ಈ ಭಾಷಣವನ್ನು ಮುಗಿಸುತ್ತೇನೆ. (ಪ್ರಚಂಡ ಕರತಾಡನ ಮತ್ತು ಜಯಕಾರ)
    ರಮಾಯಿಯ ಭಾಷಣ ಮುಗಿದ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರರು ಕೆಲವು ಮಾತುಗಳನ್ನಾಡಲು ಎದ್ದು ನಿಂತರು. ಸರಿಯಾಗಿಯೇ ಮಾತನ್ನು ಆರಂಭಿಸಿದ ಅವರು ಹೇಳತೊಡಗಿದರು ;
    "ಬಂಧುಗಳೇ, ದುಂಡುಮೇಜು ಪರಿಷತ್ತಿನಲ್ಲಿ ಸಾಧಿಸಿದ ಸಾಧನೆ ನನ್ನದಲ್ಲ ; ಅದು ಇಲ್ಲಿ ಸೇರಿರುವ ನನ್ನ ಎಲ್ಲ ಅಸಂಖ್ಯಾತ ಬಂಧು-ಭಗಿನಿಯರ ಸಾಧನೆ. ದುಂಡು ಮೇಜು ಪರಿಷತ್ತಿನಲ್ಲಿ ನಾನು ನಿರ್ವಹಿಸಿದ ಪಾತ್ರ ಕುರಿತು ಹಿಂದೂಗಳ ಭಾವಿ ಸಂತತಿ ನನ್ನನ್ನು ರಾಷ್ಟ್ರದ್ರೋಹಿ ಎಂದು ಬಗೆಯಬಹುದು ಎಂಬುದನ್ನು ಬಲ್ಲೆ. ಈಗ ನಾನು ಏನನ್ನೂ ಹೆಚ್ಚು ಹೇಳುವುದಿಲ್ಲ. ಆದರೂ ಈ ಮೊದಲು ಮಾತನಾಡಿದ ಸೌ. ಮೋಹಿತೆಬಾಯಿಯವರು ಸೌ. ರಮಾಬಾಯಿ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ನಾನು ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುವುದು ಒಳಿತು ; ಇಂದಿಗೂ ಸೌ. ಮೋಹಿತೆಬಾಯಿಯವರು ಹೇಳಿದರಲ್ಲಿ ಒಂದನ್ನೂ ನನಗೆ ಈ ನಿಮ್ಮ ಆಯೀಸಾಹೇಬ ಹೇಳಿಲ್ಲ..... (ನಗು) ........ ನಿಮ್ಮ ಆಯೀಸಾಹೇಬರು ಬಹುದೊಡ್ಡ ಭಾಗೀರಥಿಯಾಗಿದ್ದಾರೆ ಎಂಬುದು ನನಗೆ ಇದೀಗಲೇ ಗೊತ್ತಾಗಿದ್ದು. ಅದು ಸರಿಯೇ ನಿಮ್ಮ  ಆಯೀಸಾಹೇಬರು ನಿಜವಾಗಿಯೂ ಭಾಗ್ಯದ ಭಾಗೀರಥಿಯೇ ಆಗಿದ್ದಾರೆ ! ..... (ನಗು.... ಸಮೂಹದ ಕರತಾಡನ ಮತ್ತು ಪ್ರಚಂಡವಾದ ಜಯಘೋಷ ನಿರಂತರವಾಗಿತ್ತು : ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ ! ದಲಿತರ ಅವ್ವ ರಮಾಯಿಗೆ ಜಯವಾಗಲಿ !)
ಅನುವಾದ : ಡಾ. ಸಿದ್ರಾಮ ಕಾರಣಿಕ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.