Tuesday, March 06, 2012

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ’ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.
ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.
ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.
ಕೃಪೆ : ವರ್ತಮಾನ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.