Friday, March 01, 2013

ಅತ್ಯಾಚಾರ : ಮಾನವೀಯ ಮೌಲ್ಯಗಳ ಅಧಃಪತನ !


ಸರೋವರ್ ಬೆಂಕೀಕೆರೆ

ಮಗುವು ತಾಯಿಂದ ಜನ್ಮ ಪಡೆದಾಗ ಅದು ಹೆಣ್ಣಾಗಲಿ, ಗಂಡಾಗಲಿ ಸಹಜವಾಗಿಯೇ ಯಾವುದೇ ಹಣೆಪಟ್ಟಿಗಳಿಲ್ಲದೆ ಬೆಳೆದಿರುತ್ತದೆ. ಆ ರೀತಿ ಬೆಳೆದ ಗಂಡು ಮಗುವಿಗೆ, ‘ನೀನು ಬೆಳೆದು ಮುಂದೊಂದು ದಿನ ಅತ್ಯಾಚಾರವೆಸಗುವ ಮೃಗವಾಗಬೇಕೆಂದಾಗಲಿ’ ಅಥವಾ ಹೆಣ್ಣುಮಗುವಿಗೆ ‘ನೀನು ಅಧೈರ್ಯಳಾಗಿ ಗಂಡಿಗೆ ತಗ್ಗಿ ಬಗ್ಗಿ ಹೆದರಿ ಬದುಕಬೇಕೆಂದಾಗಲಿ’ ಅವರ ತಲೆಯಲ್ಲಿ ಯಾರು ತುಂಬಿ ಕಳಿಸಿರುವುದಿಲ್ಲ. ಹಾಗಾದರೆ ಇಂತಹ ಅತ್ಯಾಚಾರಗಳು ನಡೆಯಲು ನಮ್ಮ ಸಮಾಜದ ಅನಾರೋಗ್ಯಕರ ವಾತಾವರಣ ಮತ್ತು ಈ ವ್ಯವಸ್ಥೆ ಎಂದಾಯ್ತು ತಾನೇ?
ನಾವು ಗಮನಿಸಬೇಕಾದ ಒಂದು ಅಂಶವಿದೆ, ದೇಶದಲ್ಲೆ ಅತ್ಯಾಚಾರ ಪ್ರಕರಣದಲ್ಲಿ ಮುಂದಿರುವ ರಾಜ್ಯಾ ಹರಿಯಾಣ. ಇಲ್ಲಿನ ಅಂಕಿಯಾಂಶ ಗಮನಿಸಿದರೆ 80 ರಿಂದ 90 ರಷ್ಟು ಅತ್ಯಾಚಾರ ನಡೆದಿರುವುದು ದಲಿತರ ಮೇಲೆಯೇ ಆಗಿದೆ. ಇದನ್ನು ನಡೆಸುವವರು ಮೇಲುವರ್ಗದವರು ಅಥವಾ ಅಧಿಕಾರದಲ್ಲಿರುವವರು, ಅಥವಾ ಆರ್ಥಿಕವಾಗಿ ಸಬಲರಾಗಿರುವವರು. ಅತ್ಯಾಚಾರ ನಡೆಯುವುದು ಯಾವುದೇ ಒಂದು ಪ್ರಚೋದನಕಾರಿ ಉಡುಪಿನಿಂದಾಗಾಲಿ ಅಥವಾ ಮಹಿಳೆಯ ನಡತೆಯಿಂದಲ್ಲ. ಇದರ ಹಿಂದೆ ಮಾನಸಿಕ ವ್ಯಗ್ರತೆಯ ಅಪರಾಧಿತನ ಇದೆ.
ಇನ್ನು ನಮ್ಮ ಧರ್ಮ, ಧರ್ಮ ಗುರುಗಳು ಹೇಳುವಂತೆ ಹೆಣ್ಣು ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ ಮತ್ತು ಮುಪ್ಪಿನಲ್ಲಿ ಮಗನನ್ನು ಆಶ್ರಯಿಸಬೇಕು ಎನ್ನುತ್ತದೆ. (ಎಲ್ಲ ಧರ್ಮಗ್ರಂಥಗಳೂ ಪುರುಷನೆ ಬರೆದಿರುವುದನ್ನು ಗಮನಿಸಬೇಕಿದೆ) ವಾಸ್ತವವಾಗಿ ದಿಲ್ಲಿಯ ಪ್ರಕರಣವನ್ನೇ ತೆಗುದುಕೊಂಡರೆ “ಯುವತಿ ತಾನು ಮದುವೆಯಾಗಬೇಕ್ಕಿದ್ದ ಹುಡುಗನ ಆಶ್ರಯದಲ್ಲಿದ್ದೇ ಇಂತಹ ಹೇಯ ಕೃತ್ಯ ನಡೆದುಹೋಗಿತ್ತು.! ಈ ಅತ್ಯಾಚಾರ ಒಂದು ಹೆಣ್ಣಿನ ಮೇಲೆ ಆದದ್ದಲ್ಲ. ಬದಲಿಗೆ ಅಕ್ಷರಶಃ ನಮ್ಮ ಕಾನೂನಿನ ಮೇಲೆ, ಪ್ರಜಾಪ್ರಭುತ್ವದ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ನಡೆದಿದ್ದಾಗಿದೆ!!
ಅರಾಸಾರಾ ಬಾಬಾ ಹಾಗೂ ಇನ್ನಿತರ ಸಂಘಟನೆಗಳ ಹೆಣ್ಣುದ್ವೇಷಿ ಪದಾಧಿಕಾರಿಗಳೆಲ್ಲ ಹೆಣ್ಣು ಸಂಜೆ ಆರು ಘಂಟೆಯೊಳಗೆ ಮನೆ ಸೇರಬೇಕು, ಮೈ ತುಂಬ ಬಟ್ಟೆ ತೊಡಬೇಕು, ಅತ್ಯಾಚಾರ ಮಾಡಲು ಬಂದವರಿಗೆ ಅಣ್ಣ, ಅಪ್ಪ ಎಂದು ವಿನಂತಿಸಬೇಕೆಂದು ಹೇಳುತಾರೆಂದರೆ, ನಾವು ಇಂಥವರ ಅನುಯಾಯಿಗಳಿಂದ ಅತ್ಯಾಚಾರಗಳನ್ನು ನಿರೀಕ್ಷಿಸಬಹುದೇನೋ(?!). ಮಹಿಳೆಯರು ಯಾವಾಗ ಬೇಕಂದಾಗ ಒಡಾಡಿದರೆ ನಾವು ರಕ್ಷಣೆ ಕೊಡಲು ಹೇಗೆ ಸಾಧ್ಯ ಎಂದು ಪೋಲಿಸರೆ ಕೇಳುತ್ತಾರೆಂದರೆ ಏನರ್ಥ ? ಅತ್ಯಾಚಾರಿಗಳನ್ನು ಅಪರಾಧಿಗಳಾಗಿ ನೋಡುವ ಬದಲು, ಅತ್ಯಾಚಾರಕ್ಕೆ ಒಳಗಾದವರನ್ನೆ ಅಪರಾಧಿಗಳಂತೆ ನೋಡಿ ಹೆಣ್ಣನ್ನೇ ಹದ್ದುಬಸ್ತಿನಲ್ಲಿ ಇಡಲು ಯತ್ನಿಸುತ್ತಾರೆ...!
ಆರೋಪಿಗಳನ್ನು ನಪಂಪಸಕರನ್ನಾಗಿಸಿ, ಅಥವಾ ಉಗ್ರ ಶಿಕ್ಷೆಯನ್ನು ಕೊಡಬೇಕೆಂಬ ವಾದಗಳಿವೆ. ಇದರಿಂದ ಪರಿಹಾರ ಸಾಧ್ಯವೇ ? ಖಂಡಿತ ಇಲ್ಲ. ಹೆಣ್ಣನ್ನು ಮನಷ್ಯಳಂತೆ, ತನ್ನಂತೆ ಎಲ್ಲ ಹಕ್ಕುಗಳನ್ನು ಹೊಂದಿರುವ ನಾಗರಿಕಳೆಂದು ಸಮಾಜ ಪರಿಗಣಿಸಬೇಕು. ಇಂತಹ ನೈತಿಕ, ಮಾನವೀಯ ಮೌಲ್ಯಗಳು ಸಮಾಜದಲ್ಲಿ ಬೆರೆತಾಗ ಮಾತ್ರ ಪರಿಹಾರ ಸಾಧ್ಯ. ಪಠ್ಯದಲ್ಲಿ ಧರ್ಮೋಪದೇಶಗಳನ್ನು ತುರುಕುವ ಬದಲು ಇಂತಹ ಮಾನವೀಯ ಮೌಲ್ಯಗಳನ್ನು ಸೇರಿಸಬೇಕೆಂದು ಅನಿಸುತ್ತದೆ.
                          

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.