Monday, May 07, 2012

ಧಮ್ಮದೀಕ್ಷೆ ಮತ್ತು ....... !

ನನಗೊಮ್ಮೆ ಕರ್ನಾಟಕದ ಬೌದ್ಧಧರ್ಮಕ್ಕೆ ಸಂಬಂಧಿಸಿದ ಜನರನ್ನೂ ಜಾಗಗಳನ್ನೂ ಕಣ್ಣಾರೆ ಕಾಣುವ ಆಸೆ ಮೊಳೆಯಿತು. ಆಸೆಯನ್ನು ಧಾರವಾಡದ ವೈದ್ಯಮಿತ್ರರಾದ ಡಾ. ಸಂಜೀವ ಕುಲಕರ್ಣಿಯವರಲ್ಲಿ ಹಂಚಿಕೊಂಡೆ. ಬೌದ್ಧಧರ್ಮದ ಬಗ್ಗೆ ಒಳಸೆಳೆತವುಳ್ಳ ಅವರು ಕೂಡಲೇ ಸೈಯೆಂದು ಒಪ್ಪಿಕೊಂಡರು. ಇಬ್ಬರೂ ಸೇರಿ, ತಿರುಗಾಟದ ಪಥವನ್ನೂ ನೋಡಬೇಕಾದ ಜಾಗವನ್ನೂ ಕಾಣಬೇಕಾದ ಜನರನ್ನೂ  ಗುರುತು ಮಾಡಿಕೊಳ್ಳುತ್ತ ತಯಾರಿ ನಡೆಸಲಾರಂಭಿಸಿದೆವು. ಇದರ ಪತ್ತೆಯನ್ನು ಹೇಗೊ ಮಾಡಿದ ಮೈಸೂರಿನ ಗೋವಿಂದಯ್ಯನವರು ನಾನೂ ಬರುತ್ತೇನೆಂದು ಗಂಟುಬಿದ್ದರು. ಕಡೆಗೆ ತಂಡಕ್ಕೆ ತರುಣ ಕವಿ ಅರುಣ್ ಜೋಳದಕೂಡ್ಲಿಗಿಯನ್ನೂ ಸೇರಿಸಿಕೊಂಡೆವು. 
ನಾವು ನಾಲ್ವರು, ಆಕಸ್ಮಿಕವಾಗಿ ಸಮಾಜದ ನಾಲ್ಕು  ಸ್ತರಗಳಿಂದ ಬಂದವರಾಗಿದ್ದು, ಬುದ್ಧನ ನೆಪದಲ್ಲಿ ಒಂದಾಗಿದ್ದೆವು. ಆಯಾ ದಿನ ಸಿಕ್ಕ ಅನುಭವವನ್ನು ನಾಲ್ವರೂ ಸೇರಿ ಚರ್ಚಿಸುತ್ತಿದ್ದೆವು. ಭಿನ್ನಮತಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೆವು. ನಮ್ಮ ಜತೆ ಒಂದು ಹೆಂಜೀವವೂ ಇದ್ದಿದ್ದರೆ, ತಂಡಕ್ಕೆ ಬೇರೊಂದು ಕಣ್ಣು ಒದಗಿರುತ್ತಿತ್ತೇನೊ? ಆದರೆ ಹೊರಡುವಾಗ ಹಾಗೆ ಯಾರೂ ನಮಗೆ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ನಾವು ಈ ದಿಸೆಯಲ್ಲಿ ಚಿಂತಿಸಲಿಲ್ಲ. ಮನೆಮಡದಿ ಯಶೋಧರೆಯ ಹಂಗಿಲ್ಲದೆ ತಿಳಿವಳಿಕೆಯ ಹುಡುಕಾಟಕ್ಕೆ ಹೊರಟ ಬುದ್ಧನ ನಾಡಿನವರು ತಾನೇ ನಾವು?
ಧಾರವಾಡದಿಂದ ಪಯಣ ಆರಂಭಿಸಿ ಕರ್ನಾಟಕವನ್ನು ಅದರಂಚಿನಲ್ಲೇ ಚಲಿಸುತ್ತ ಒಂದು ಸುತ್ತು ಹಾಕಿದೆವು. ಸುಮಾರು 1500 ಕಿಮಿ ಉದ್ದದ 15 ದಿನಗಳ ಪಯಣ. ಇದರಲ್ಲಿ ನಾವು ಬೌದ್ಧ ವಿಹಾರಗಳನ್ನೂ  ಚೈತ್ಯಾಲಯಗಳನ್ನೂ ಬೌದ್ಧಮೂರ್ತಿಗಳನ್ನೂ ಕಂಡೆವು; ಧಮ್ಮಸ್ವೀಕಾರದ ಬಳಿಕ ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಶಾಸನಗಳನ್ನು ಕಂಡೆವು; ಬೌದ್ಧಧರ್ಮದ ಬೋಧನೆ ನಡೆಯುತ್ತಿದ್ದ ಗುರುಕುಲಗಳನ್ನೂ ಬುದ್ಧನ ಹೆಸರಲ್ಲಿ ಕಟ್ಟಲಾಗಿರುವ ಶಿಕ್ಷಣ ಸಂಸ್ಥೆಗಳನ್ನೂ ಭೇಟಿಮಾಡಿದೆವು; ಬೌದ್ಧ ಚಿಂತಕರನ್ನೂ ಭಂತೆಗಳನ್ನೂ ಸಾಧಕರನ್ನೂ ಕಂಡು ಮಾತಾಡಿದೆವು. ತಮ್ಮ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಧಮ್ಮಪ್ರಸಾರ ಕೈಗೊಂಡಿರುವ ಬಿಎಸ್ಪಿ ಕಾರ್ಯಕರ್ತರ ಜತೆ ಚರ್ಚಿಸಿದೆವು. ಬೌದ್ಧಸಂಪ್ರದಾಯದಲ್ಲಿ ಲಗ್ನವಾಗಿರುವ ದಂಪತಿಗಳನ್ನೂ ಧಮ್ಮದೀಕ್ಷೆ ಪಡೆದು ಹೊಸಬದುಕನ್ನು ನಡೆಸುತ್ತಿರುವ ಕುಟುಂಬಗಳನ್ನೂ ಕಂಡೆವು. ಒಟ್ಟಿನಲ್ಲಿ ಅದೊಂದು ಅಪೂರ್ವ ಬೌದ್ಧಯಾನ. 
ಈ ಯಾನದಲ್ಲಿ ಮೂರು ಅಂಶಗಳು ಗೋಚರಿಸಿದವು. 1. ಕರ್ನಾಟಕದಲ್ಲಿ ಒಂದು ಕಾಲಕ್ಕೆ ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದ ಬೌದ್ಧಧರ್ಮವು, ಸದ್ಯಕ್ಕೆ ತನ್ನ ಗತಕಾಲದ ಅವಶೇಷಗಳ ಮೂಲಕ ಉಸಿರೆಳೆಯುತ್ತಿದ್ದ ಪಳೆಯುಳಿಕೆಗಳು 2. ಧಮ್ಮದೀಕ್ಷೆ ಸ್ವೀಕರಿಸಿರುವ ಸಾವಿರಾರು ಜನರ ಬಾಳಿನಲ್ಲಿ ಹೊಸಹೊಸ ರೂಪದಲ್ಲಿ ನೆಲೆಯೂರುತ್ತ ಅದು ಚಿಗುರೊಡೆಯುತ್ತಿದ್ದುದು. 3. ಹಾಗೆ ಚಿಗುರೊಡೆಯುವ ಪ್ರಕ್ರಿಯೆಯಲ್ಲಿ ಮನೆಗಳನ್ನು ಮನಸ್ಸುಗಳನ್ನು ಸಂಬಂಧಗಳನ್ನು ಕೂಡ ಒಡೆದುಕೊಂಡಿರುವುದು. ಒಂದು, ಚರಿತ್ರೆಯ ಸ್ಥಗಿತ ದರ್ಶನವಾದರೆ, ಮತ್ತೆರಡು ವರ್ತಮಾನದ ಚಲನಶೀಲ ದರ್ಶನ; ಒಂದು, ಭಗ್ನತೆಯ ಮುಖವಾದರೆ, ಇನ್ನೆರಡು ಹೊಸಹುಟ್ಟಿನ ಮತ್ತು ಹೊಸಬಿಕ್ಕಟ್ಟಿನ ಮುಖಗಳು. ಒಂದು ಸ್ಮಾರಕಗಳ ಜಗತ್ತಾದರೆ ಇನ್ನೆರಡು ಭಾವನೆಗಳ ಮಾನುಷ ಜಗತ್ತು.
ನಮಗೆ ಕಾಡಿಸುತ್ತಿದ್ದುದು ಧಮ್ಮವು ನೆಲೆಯೂರುತ್ತಿರುವ ಕಡೆ ಹುಟ್ಟಿರುವ ಬಿರುಕು ಮತ್ತು ಬಿಕ್ಕಟ್ಟುಗಳು. ಇವು ಧಮ್ಮದೀಕ್ಷೆ ಪಡೆದ ಕುಟುಂಬದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ; ಕೇರಿ ಮತ್ತು ಕುಟುಂಬಗಳ ನಡುವೆ ಬಿದ್ದಿರುವ ಕಂದರದಲ್ಲಿ ಕಾಣುತ್ತಿದ್ದವು; ದಲಿತರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ರೂಪದಲ್ಲಿದ್ದವು. ಯಾವುದೇ ಹಳೆಯ ರೂಪದ ಜಾಗವನ್ನು ಹೊಸತೊಂದು ಆಕ್ರಮಿಸುವಾಗ, ಇಂತಹ ಸಂಘರ್ಷ ಸಾಮಾನ್ಯ. ಹೊಸತು ಮತ್ತು ಹಳತುಗಳ ಈ ಸಂಘರ್ಷವು ಕೆಲವು ಕಾಲದ ಬಳಿಕ ಸಾಮರಸ್ಯಗೊಂಡು ಮೂರನೆಯ ಹೊಸರೂಪವಾಗಿ ಸಿದ್ಧವಾಗಬಹುದು. ಅಂತಹ ಹೊಸರೂಪವೊಂದು ಸಿದ್ಧವಾಗುವ ತನಕ ಈ ಜಗ್ಗಾಟಗಳು ಸಹಜ. ಆದರೆ ಸಾಮಾಜಿಕ ಧಾರ್ಮಿಕ ಮಾನಸಿಕ ಹಾಗೂ ಸಾಂಸ್ಕೃತಿಕವಾದ ಈ ಜಗ್ಗಾಟಗಳ ನಡುವೆ ಸಿಕ್ಕು ನಲುಗುತ್ತಿರುವವರ ತೊಳಲಾಟ ಮತ್ತು ಹತಾಶೆಗಳನ್ನು ಹೆಚ್ಚಿನವರು ಲೆಕ್ಕಿಸಿದಂತೆ ಕಾಣುತ್ತಿರಲಿಲ್ಲ. ಮಾನವೀಯವೂ ಸಂಕೀರ್ಣವೂ ಆಗಿರುವ ಈ ನೋವು ಸಂಕಟಗಳನ್ನು ಸರಿತಪ್ಪುಗಳೆಂದು ಸರಳವಾಗಿ ತೀರ್ಮಾನಿಸುವುದು ಕಷ್ಟ. ಹೀಗಾಗಿ ಇವು ಯಾಕೆ ಮತ್ತು ಹೇಗೆ  ಮೂಡಿದವು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಬಹುದು.
ಎರಡು ವಾರಗಳ ನಮ್ಮ ಧಮ್ಮಯಾನದಲ್ಲಿ ಧಮ್ಮದೀಕ್ಷೆ ಪಡೆದ ಹತ್ತಾರು ಕುಟುಂಬಗಳನ್ನು ನಾವು ಭೇಟಿ ಮಾಡಿದೆವು. ಇವುಗಳಲ್ಲಿ ಏಳು ದಲಿತ ಕುಟುಂಬಗಳು. ಒಂದು ಬ್ರಾಹ್ಮಣ. ಎರಡು ಬಂಟರವು. ಕೊನೆಯ ಮೂರು ಕರಾವಳಿಯವು; ಮೊದಲ ಏಳು ದಲಿತ ಕುಟುಂಬಗಳು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಗುಲಬರ್ಗ ಜಿಲ್ಲೆಗೆ ಸೇರಿದವು. ಎಲ್ಲ ಕುಟುಂಬಗಳೂ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವು; ಉಡಲುಣ್ಣಲು ಹೋರಾಟವಿಲ್ಲದ ಮಧ್ಯಮವರ್ಗಕ್ಕೆ ಸೇರಿದವು. ಈ ಕುಟುಂಬಗಳ ಜತೆ ನಾವು ಮಾತಾಡಿದೆವು. ಜತೆ ಕುಳಿತು ಊಂಡೆವು. ಅಲ್ಲಿ ನಮಗೆ ನಾಲ್ಕು ಪರಿಯ ದಾಂಪತ್ಯಗಳು ಕಂಡವು.
1. ಇಡಿಯಾಗಿ ಧಮ್ಮೀಕರಣಗೊಂಡಿರುವ ದಾಂಪತ್ಯಗಳು. ಇಲ್ಲಿ ದಂಪತಿಗಳಲ್ಲಿ ಸತಿಪತಿಗಳೊಂದಾದ ಭಕ್ತಿಯ ಸಾಮರಸ್ಯವಿತ್ತು. ಸಮಾನಮನಸ್ಕತೆ ಸಾಧ್ಯವಾಗಿತ್ತು. ಹಳೆಯ ಸಂಪ್ರದಾಯಗಳು ಕೈಬಿಟ್ಟುಹೋಗಿದ್ದವು. ಮಕ್ಕಳಿಗೆ ಬೌದ್ಧಹೆಸರುಗಳನ್ನು ಇಡುವುದೇ ಮುಂತಾಗಿ ಬೌದ್ಧ ಆಚರಣೆಗಳು ಆಚರಣೆಗೆ ಬಂದಿದ್ದವು. ಇವು ದೀಕ್ಷೆಗೊಂಡು ದಶಕಗಳನ್ನೆ ಕಳೆದಿರುವ ಕುಟುಂಬಗಳು. ಗುಲಬರ್ಗದ ಬುದ್ಧವಿಹಾರದಲ್ಲಿದ್ದ ಶ್ರೀಮತಿ ಖರ್ಗೆಯವರಲ್ಲಿ, ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಧರ್ಮದ ಉಮೇದಿತ್ತು. ಆದರೂ ಇಲ್ಲಿ ಹೆಚ್ಚಿನ ಕಡೆ ಗಂಡನೇ ಸಾಧಕನಾಗಿದ್ದು, ಮಡದಿ ಅವನಿಗೆ ಸಹಚರಳಾಗಿ ಹಿಂಬಾಲಿಸಿದಂತೆ ಇತ್ತು.
2. ಇನ್ನೂ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿರುವ ದಾಂಪತ್ಯಗಳು. ಇಲ್ಲಿ ಹೊಸಧರ್ಮದ ಬಗ್ಗೆ ಪೂರಾ ಒಪ್ಪಿಗೆ ಸಾಧ್ಯವಾಗಿರಲಿಲ್ಲ. ಆದರೂ, ಹಳತರ ಜತೆಗೆ ಒಂದು ಬಗೆಯ ಸಾಮರಸ್ಯ ಮಾಡಲು ಯತ್ನ ನಡೆದಿತ್ತು. ಉದಾ.ಗೆ, ಒಂದು ಮನೆಯಲ್ಲಿ ಹೊರಬಾಗಿಲ ಮೇಲೆ ಕೆತ್ತಲಾಗಿದ್ದ ಬುದ್ಧಮೂರ್ತಿಯ ಹಣೆಗೆ ವಿಭೂತಿಯನ್ನು ಬಳಿಯಲಾಗಿತ್ತು. ಅದು ಬುದ್ಧನನ್ನು ಪಳಗಿಸುತ್ತ ಸ್ಥಳೀಕರಿಸುತ್ತಿರುವ ಯತ್ನದಂತೆ ತೋರಿತು; ಇನ್ನೊಂದು ಮನೆಯ ದೇವರಕೋಣೆಯಲ್ಲಿ ಬುದ್ಧನ ಮೂರ್ತಿಯ ಜತೆಗೆ ಅಂಬೇಡ್ಕರ್ ಮತ್ತು ಮಲೆಮಾದೇಶ್ವರನ ಫೋಟೊಗಳನ್ನೂ ಭೇದವಿಲ್ಲದೆ ಇಡಲಾಗಿತ್ತು. ಇವೆಲ್ಲ ಧಮ್ಮದೀಕ್ಷೆ ಪಡೆದು  ಒಂದೆರಡು  ವರ್ಷಗಳಾಗಿದ್ದ ಕುಟುಂಬಗಳು.
3. ಸಾಮರಸ್ಯದ ಸಾಧ್ಯವಾಗಿರದೆ ತೊಳಲಾಟ ನಡೆಯುತ್ತಿರುವ ಕುಟುಂಬಗಳು. ಇಲ್ಲಿ ಧಮ್ಮಸ್ವೀಕಾರದ ವಿಷಯದಲ್ಲಿ ಸತಿಪತಿಗಳು ಸಮಾನ ಮನಸ್ಕರಾಗಿರಲಿಲ್ಲ. ಹೊಸಧಮ್ಮದ ವಿಷಯದಲ್ಲಿ ಗಂಡ ಉತ್ಸಾಹಿಯಾಗಿದ್ದರೆ, ಮಡದಿಯ ಮೊಗದಲ್ಲಿ ಮ್ಲಾನತೆಯಿತ್ತು. ಗಂಡನಿಗೆ ಬೇಸರವಾಗಬಾರದೆಂದೊ ಅಥವಾ  ಭಿನ್ನಮತವನ್ನು ಬಂದವರೆದುರು ತೋರಬಾರದೆಂದೊ ಆಕೆ  `ಅಳುವೇ ತುಟಿಗೆ ಬಂದಂತೆ' ಮೌನವಹಿಸಿದಂತೆ ಕಾಣುತ್ತಿತ್ತು. ಗಂಡನ ಮುಖದಲ್ಲಿ ಮನೆಯಲ್ಲಿ ನೆಲೆಸುತ್ತಿರುವ ಧಮ್ಮಸಂಸ್ಕೃತಿಯ ಬಗ್ಗೆ ಸಂತೋಷದ ಭಾವವಿದ್ದರೆ, ಆಕೆಯ ಮುಖದಲ್ಲಿ ಆತಂಕವಿತ್ತು. ಆಕೆ ಗಂಡನ ಒತ್ತಡಕ್ಕೆ ಬೌದ್ಧ ಆಚರಣೆಗಳನ್ನು ಅನಿವಾರ್ಯವಾಗಿ ಯಾಂತ್ರಿಕವಾಗಿ ಮಾಡುತ್ತಿರುವಂತೆ ತೋರಿತು.
4. ಸಾಮರಸ್ಯ ಸಾಧ್ಯವೇ ಆಗದೆ ಸಂಬಂಧ ಕುಸಿದುಬಿದ್ದಿರುವ ಕುಟುಂಬಗಳು. ಇಲ್ಲಿ ಮಹಿಳೆಯರಿಗೆ  ತಾವು ಹುಟ್ಟಿ ಬೆಳೆದು ಬಂದ ಪಾರಂಪರಿಕ ಧಾರ್ಮಿಕ ಸಂಸ್ಕೃತಿಯನ್ನು ಬಿಟ್ಟುಕೊಡುವುದು ಸಾಧ್ಯವಾಗಿರಿಲ್ಲ. ಅವರಿಗೆ ಬುದ್ಧನ ಬಗ್ಗೆ ಅಸಹನೆಯೇನಿರಲಿಲ್ಲ. ಆದರೆ ತನ್ನನ್ನು ಬಾಲ್ಯದ ದೈವಗಳಿಂದ ಬಿಡಿಸುತ್ತಿರುವ ಮತ್ತು ಬುದ್ಧನನ್ನು ಹೇರುತ್ತಿರುವ ಗಂಡನ ಬಗ್ಗೆ ಅಸಮಾಧಾನವಿತ್ತು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯಿಲ್ಲವಲ್ಲ ಎಂಬ ಕೊರಗು ಒಳಗೊಳಗೇ ಆವಿಗೆಯ ಬೆಂಕಿಯಂತೆ ಸುಳಿಯುತ್ತಿತ್ತು. ಇದು ಒಂದು ಕಡೆ ಲಾವರಸದಂತೆ ಆಸ್ಫೊಟಗೊಂಡಿತು ಕೂಡ. ಕರ್ನಾಟಕದ ಲೀವಿಂಗ್ ಬುದ್ಧಿಸಂನ ಅಧ್ಯಯನಕ್ಕೆ ಹೊರಟ ನಮಗೆ ಇದು ಹೊಸದೊಂದು ತಿಳಿವಿನ ಕೋನವನ್ನು ನೀಡಿತು.
ಈ ಆಸ್ಫೋಟ ಸಂಭವಿಸಿದ್ದು ಒಂದು ದಲಿತ ಕುಟುಂಬದಲ್ಲಿ. ಇಲ್ಲಿ ಗಂಡ ಹೆಂಡತಿಯಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಇವರಲ್ಲಿ ಗಂಡ ಧಮ್ಮದೀಕ್ಷೆ ಸ್ವೀಕರಿಸಿದ್ದರು. ಮಾತ್ರವಲ್ಲ. ಕಾವಿಧರಿಸಿ, ತಮ್ಮ ಹೆಸರನ್ನು ಬದಲಿಸಿಕೊಂಡು ಭಂತೆ ಕೂಡ ಆಗಿದ್ದರು. ಧಮ್ಮ ಪ್ರಸಾರದಲ್ಲಿ ಅತಿ ಉಮೇದಿನಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಕಾಣುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ಮನೆಯಲ್ಲಿ ಇಲ್ಲವೆಂದೂ ಬಿಹಾರದ ಬೌದ್ಧಗಯಾಕ್ಕೆ ಹೋಗಿದ್ದಾರೆಂದೂ ಅವರು ಶಿಷ್ಯರು ತಿಳಿಸಿದರು. ಆದರೂ ಮನೆಗೆ ತೆರಳಿ, ಅವರ ಮಡದಿಯ ಅಭಿಪ್ರಾಯವನ್ನು ಪಡೆಯೋಣವೆಂದು ಹೊರಟೆವು. ಸಂಜೆ ಏಳರ ಹೊತ್ತು. ಭಿಕ್ಕು ಅವರ ಮನೆಗೆ ಹೋಗಿ ಬಾಗಿಲನ್ನು ತಟ್ಟಿದೆವು. ಒಳಗಿಂದ ಒಬ್ಬರು ಮಹಿಳೆ ಬಾಗಿಲನ್ನು ಅರೆತೆಗೆದು ಏನು ಬೇಕಿತ್ತು ಎಂಬಂತೆ ಹುಬ್ಬುನಿರಿಗೆ ಮಾಡಿಕೊಂಡು ನಮ್ಮನ್ನು ನೋಡಿದರು. ಅವರ ಹಣೆಯಲ್ಲಿ ವಿಭೂತಿಯಿತ್ತು. ``ನಾವು ಬೌದ್ಧಧರ್ಮದ ಅಧ್ಯಯನ ಮಾಡುವುದಕ್ಕೆ ಬಂದವರು. ಭಂತೇಜಿಯಿದ್ದರೆ ಅವರ ಜತೆ ಮಾತಾಡಬೇಕಿತ್ತು'' ಎಂದೆವು. `ಬೌದ್ಧ' `ಭಂತೆ' ಎಂಬ ಶಬ್ದಗಳನ್ನು ಕೇಳುತ್ತಿದ್ದಂತೆ ಆಕೆಯ ಮುಖ ಬಿರುಸಾಯಿತು. ಕಣ್ಣು ಕನಲಿದವು. ಗಡುಸಾದ ದನಿಯಲ್ಲಿ ``ನಿಮ್ಮ ಭಂತೇಜಿ ಮನೆಬಿಟ್ಟು ಯಾವುದೋ ದೇಶಕ್ಕೆ ಬುದ್ಧನ್ನ ಹುಡಕ್ಕೊಂಡು ಹೋಗಿದಾರೆ. ಅವರು ಬಂದ್ಮೇಲೆ ಹೊರಗಡೆ ಎಲ್ಲಾದರೂ ಕುಂತು ಮಾತಾಡಿಕೊಳ್ಳಿ ಸಾ. ಈ ಮನೇಲಿ ಅವರ ಸುದ್ದಿ ಮಾತ್ರ ತಗೀಬೇಡಿ. ಬುದ್ಧನ ವಿಷಯ ಎತ್ತಬೇಡಿ. ದಯವಿಟ್ಟು ಹೊರಟುಹೋಗಿ' ಎಂದು ಹೇಳಿದರು. ನಮಗೆ ಎದೆಗೆ ಒದ್ದಂತಾಯಿತು. ಸೂಕ್ಷ್ಮಮನಸ್ಸಿನ ಡಾ.ಸಂಜೀವ್ ಗಾಬರಿಯಿಂದ ``ಗೋವಿಂದಯ್ಯ, ಕಮಾನ್, ಲೆಟಸ್ ಗೋಬ್ಯಾಕ್' ಎಂದರು. ಆದರೆ ಗೋವಿಂದಯ್ಯನವರು ಅದನ್ನು ಕಿವಿಗೆ ಹಾಕಿಕೊಳ್ಳದೆ ``ಮೇಡಂ, ಬೇಜಾರ್ ಮಾಡಕೋಬೇಡಿ. ನಿಮ್ಮ ಯಜಮಾನರು ಇಲ್ಲದೇ ಹೋದರೆ ಏನಂತೆ? ನೀವಿದ್ದೀರಲ್ಲ. ನಿಮ್ಮ ಜೊತೇಲೆ ಮಾತಾಡ್ತೀವಿ. ಈ ಬೌದ್ಧಧರ್ಮದಿಂದ ನಿಮಗೆ ಏನು ಕಷ್ಟವಾಗಿದೆ. ಅದನಾರೂ ಒಸಿ ಹೇಳಿ. ತಿಳಕೊಳ್ಳುವ'' ಎಂದು ನಮ್ರವಾಗಿ ಹೇಳಿದರು. ಆ ಮಹಿಳೆಯ ಕ್ಯಾಣ ಇಳಿದಿರಲಿಲ್ಲ. ``ಇಲ್ಲ ಸಾ, ನೀವು ಕೇಳೋದು ಬ್ಯಾಡ. ನಾನು ಹೇಳೋದೂ ಬ್ಯಾಡ. ಬುದ್ಧನ ಹೆಸರು ಹೇಳಿಕೊಂಡು ಬರೋ ಯಾರ ಹತ್ರಾನೂ ನಂಗೆ ಮಾತಾಡೋಕೆ ಇಷ್ಟವಿಲ್ಲ' ಎಂದರು. ಅದಕ್ಕೆ ಗೋವಿಂದಯ್ಯ ``ಅಮ್ಮಾ, ನನ್ನ ಜತೆ ದೂರದಿಂದ ಬಂದಿರೊ ವಿದ್ವಾಂಸರು ಲೇಖಕರು ಅವರೆ. ಒಂದೈದು ನಿಮಿಷ ನಿಮ್ಮ ಜೊತೆ ಮಾತಾಡ್ತೀವಿ'' ಎಂದು ವಿನಂತಿಸಿದರು. ಫಾಯದೆಯಾಗಲಿಲ್ಲ. ``ನಿಮ್ಮ ಲೇಖಕರನ್ನ ವಿದ್ವಾಂಸರನ್ನ ಕಟ್ಕೊಂಡು ನನಗೇನು ಆಗಬೇಕಿದೆಯಪ್ಪ? ಆ ಬುದ್ಧನಿಂದ ನನ್ನ ಸಂಸಾರವೇ ಹಾಳಾಗಿದೆ. ನಮ್ಮ ಪಾಡಿಗೆ ಬದುಕಲು ನಮಗೆ ಬಿಡಿ. ಈಗ ತಾವು ದಯಮಾಡಿ'' ಎಂದು ತಣ್ಣಗೆ ಆದರೆ ಆಕ್ರೋಶದಿಂದ ಹೇಳಿದರು. ಈಗ ಸಂಜೀವ್ ಗೆ ತಡೆಯಲು ಆಗಲಿಲ್ಲ. ``ತರಿಕೇರಿ, ಏನ್ರೀ ಇದು? ಆ ಹೆಣಮಗಳು ಇಂಡೈರಕ್ಟಾಗಿ ನಮಗ ಗೆಟ್ ಔಟ್ ಅಂತಿದಾರ. ಆದರೂ ನಾವು ಮಾತಾಡ್ತೀವಿ ಅನಲಿಕ್ಕೆ ಹತ್ತಿದೀವಿ. ಅವರಿಗ ತ್ರಾಸ ಕೊಡಬಾರದು. ಗೋವಿಂದಯ್ಯ. ಪ್ಲೀಸ್ ಕಂಬ್ಯಾಕ್'' ಎಂದು ಚಡಪಡಿಸಿದರು. ಆದರೆ ಗೋವಿಂದಯ್ಯ ಬರಲಿಲ್ಲ. ಛಲ ಬಿಡದ ತಿವಿಕ್ರಮನಂತೆ ಆಕೆಯನ್ನು ಒಲಿಸುತ್ತ  ``ಆಯ್ತು ಮೇಡಂ, ನೀವು ನಮ್ಮ ಜೊತ ಮಾತಾಡ್ದೆ ಇದ್ದರೂ ಪರವಾಯಿಲ್ಲ. ಒಂದು ಲೋಟ ನೀರಾದರೂ ಕೊಡಿ ಮತ್ತ'' ಎಂದರು. ನಾನು ಬೈಸಿಕೊಂಡಾದರೂ ಸರಿ, ಈ ಸೋದರಿಯ ಅಳಲಿನ ಮರ್ಮವೇನೆಂದು ಅರಿತೇ ಹೋಗಬೇಕೆಂದು ಭಂಡನಾಗಿ ನಿಂತಿದ್ದೆ.  
ನಮ್ಮ ಗದ್ದಲಕ್ಕೆ ಬೀದಿಯ ಕೆಲವು ಕಿಟಕಿ ಮತ್ತು ಬಾಗಿಲು ಮೆಲ್ಲಗೆ ತೆರೆದುಕೊಂಡು ಗೋಣುಗಳು ಹೊರಚಾಚಿಕೊಂಡವು. ಕೆಲವರು ಸೆಕೆಗೆಂಬಂತೆ ಹೊರಬಂದು ಗಾಳಿ ಹಾಕಿಕೊಳ್ಳುತ್ತ ಅಂಗಳದಲ್ಲಿ ನಿಂತು ಮಸುಗು ಕತ್ತಲೆಯಲ್ಲಿ ನಮ್ಮತ್ತ ನೋಡತೊಡಗಿದರು. ಅಷ್ಟುಹೊತ್ತು ಹೊರಗೇ ನಿಲ್ಲಿಸಿ ಮಾತಾಡಿದ ಆ ಮಹಿಳೆ, ಗೋವಿಂದಯ್ಯನವರ ನೀರಬೇಡಿಕೆ ಈಡೇರಿಸಲು, ಒಳಗೆ ಹೋದರು. ಅದೇ ಹೊತ್ತಲ್ಲಿ ನಾವು ಒಳಗೆ ನುಸುಳಿಕೊಂಡೆವು. ಆಕೆ ಚೊಂಬಿನಲ್ಲಿ ತಂದ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟರು. ಅವರ ವಿಶ್ವಾಸ ಗಳಿಸಲು ಬಾಯಾರಿಕೆ ಇಲ್ಲದಿದ್ದರೂ ಕುಡಿದೆವು. ನಂತರ ತಮ್ಮ ದನಿಗೆ ರೋದನದ ಎಳೆ ಬೆರೆಸಿ, ಆಕೆ ತಮ್ಮ ಕಷ್ಟದ ಚರಿತ್ರೆಯ ಒಂದು ಸಣ್ಣ ಅಧ್ಯಾಯವನ್ನು ತೆಗೆದರು. ``ಸಾ, ನನ್ನ ಕಷ್ಟಾವ ಏನೂಂತ ಹೇಳಲಿ? ನಮ್ಮ ಮನೇವರು ದೀಕ್ಷ ತಕ್ಕಂಡ ಮೇಲ ಮನೆ ಪರಿಸ್ಥಿತಿಯೆ ಬದಲಾಗದೆ. ಅವರು ನಮ್ಮನ್ನ ಬೀದಿಪಾಲು ಮಾಡಿ ತಿರಗಾಟಕ್ಕೆ ಹೋಗವರೆ. ಮನೇನ ನಾನೊಬ್ಬಳೇ ಸಂಭಾಳಿಸಬೇಕು. ನೀ ಸತ್ತ್ಯಾ ಬದುಕಿದೆಯಾ ಅಂತ ಕೇಳಲ್ಲ. ಇರೋದೊಂದು ಈ ಕೂಸಿಗೆ ಏನು ಓದ್ತೀದಿಯಾ ಅಂತ ಕೇಳಕೂ ಅವರಿಗ ಪುರುಸೊತ್ತಿಲ್ಲ. ಯಾವಾಗಲೂ ಬುದ್ಧ ಧಮ್ಮ ದೀಕ್ಷೆ ಅಂತ ಓಡಾಡ್ತವರೆ. ನನ್ನ ಮೇಲೂ ಬುದ್ಧನ್ನ ಹೇರತಾ ಅವರೆ. ನನಗೆ ಅವರ ಬುದ್ಧಬೇಡ. ನನಗೆ ನನ್ನ ಮಂಟೆಸ್ವಾಮೀನೇ ಸಾಕು. ನನಗ ನನ್ನ ಮಾದೇಶ್ವರ ಬೇಕು. ನನಗೂ ನನ್ನದೇ ಧರ್ಮ ಇಲ್ಲವಾ? ನನಗೆ ಮನಶ್ಶಾಂತಿ ಕೊಡೋ ದೇವರ ಪೂಜೆ ಮಾಡುವ ಹಕ್ಕಿಲ್ಲವಾ? ನನಗೂ ಎಲ್ಲರ ಹಾಗೆ ಸಂಸಾರ ಮಾಡಬೇಕು ಅನ್ನೋ ಆಸೆಯಿಲ್ಲವಾ?'' ಎಂದು ಆವೇಶದಿಂದ ಮಾತಾಡತೊಡಗಿದರು. ಅವರಿಗೆ ಅರಿಯದಂತೆ ಕಣ್ಣಲ್ಲಿ ನೀರು ದಳದಳ ಇಳಿಯತೊಡಗಿತು.
ಯಾಕೊ ನನಗೆ ಬುದ್ಧನು ಹೇಳದೆ ಬಿಟ್ಟುಹೋದ ಬಳಿಕ ಶೋಕಿಸಿರಬಹುದಾದ ಯಶೋಧರೆಯ ನೆನಪಾಯಿತು. ಈ ಯಶೋಧರೆಗೆ ಹೊಸ ಧಮ್ಮವು ತನ್ನಿಂದ ತನ್ನ ಗಂಡನನ್ನೂ ತನ್ನ ಮಗುವಿನಿಂದ ಅದರ ತಂದೆಯನ್ನೂ ಕಿತ್ತುಕೊಂಡಿದೆ, ಪರಂಪರೆಯಿಂದ ಬಂದ ದೈವಗಳ ಸಂಬಂಧವನ್ನೂ ಅದು ಕಿತ್ತುಕೊಳ್ಳುತ್ತಿದೆ ಎಂಬ ನೋವಿತ್ತು. ಬಹುಶಃ ಇಸ್ಲಾಮೊ ಕ್ರೈಸ್ತವೊ ಎಲ್ಲ ಹೊಸ ಧರ್ಮಗಳ ಸ್ವೀಕಾರದ ಮೊದಲ ಘಟ್ಟದಲ್ಲಿ ಇಂತಹದೊಂದು ಮಾನಸಿಕ ಭಗ್ನತೆ, ಕೌಟುಂಬಿಕ ಛಿದ್ರತೆ ಸಂಭವಿಸುತ್ತದೆ ಎಂದು ಕಾಣುತ್ತದೆ. ಶರಣ ಧರ್ಮವೂ ಈ ಭಗ್ನತೆಯನ್ನು ಅನುಭವಿಸಿತ್ತು. ಇದನ್ನು ಬಸವಣ್ಣನ ವಚನವೊಂದು ಸೂಚಿಸುತ್ತದೆ: ``ಗಂಡ ಶಿವಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ''; ಸಾಮಾಜಿಕ ಮುಂಚಲನೆಯನ್ನು ನೀಡುವ ಧರ್ಮಗಳನ್ನು ಸಾಮಾನ್ಯವಾಗಿ ಮೊದಲು ಸ್ವೀಕರಿಸುವವರು ಗಂಡಸರೇ ಯಾಕಾಗಿರುತ್ತಾರೆಯೊ? `ಮಲೆಗಳಲ್ಲಿಮದುಮಗಳ'ಲ್ಲೂ ದೇವಯ್ಯನೇ ಕ್ರಿಸ್ತನಾಗಲು ಹೊರಟು ಮನೆ ಪ್ರಕ್ಷುಬ್ಧವಾಗುತ್ತದೆ. ಗಂಡುಮುಖ್ಯವಾಗಿರುವ ನಮ್ಮ ಸಮಾಜದಲ್ಲಿ ನಿರ್ವಾಹವಿಲ್ಲದೆ ಅವರ ಹಿಂದೆ ಮಹಿಳೆಯರು ಹಿಂಬಾಲಿಸಬೇಕು ಇಲ್ಲವೇ ಪ್ರತಿರೋಧ ತೋರಬೇಕು. ಪುರುಷರ ಈ ಏಕಪಕ್ಷೀಯ ನಡತೆ ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಎಲ್ಲ ಹೊಸ ಆಚರಣೆಗಳ ಸಂದರ್ಭದಲ್ಲೂ ಸಂಭವಿಸುತ್ತದೆ. ಸಸ್ಯಾಹಾರದ ಹಿನ್ನೆಲೆಯಿಂದ ಬಂದ ಮೇಲ್ಜಾತಿ ಗಂಡಸರು, ಮಾಂಸಾಹಾರದ ಅಭ್ಯಾಸ ಮಾಡಿಕೊಂಡ ಬಳಿಕ, ತಮ್ಮ ಹೊಸ ಆಹಾರಪದ್ಧತಿಗೆ ನೈತಿಕ ಸಮರ್ಥನೆ ಒದಗಿಸಿಕೊಳ್ಳಲೆಂದು ಅದನ್ನು ಮಡದಿಯರ ಮೇಲೂ ಹೇರುವುದುಂಟು; ಇದಕ್ಕೆ ಪ್ರತಿಯಾಗಿ, ಮೇಲ್ಜಾತಿಯ ಹುಡುಗಿಯನ್ನು ಕಟ್ಟಿಕೊಂಡ ದಲಿತರು ಮಡದಿಗಾಗಿ ಮಾಂಸಾಹಾರ ಬಿಟ್ಟಿರುವ ನಿದರ್ಶನಗಳೂ ಉಂಟು. ಆದರೆ ಇಂತಹ ನಿದರ್ಶನಗಳು ಕಡಿಮೆ.
ಆಹಾರ ಧರ್ಮ ಉಡುಗೆ ಇವುಗಳ ವಿಷಯದಲ್ಲಿ ಏಕಪಕ್ಷೀಯವಾದ ಒತ್ತಾಯವು ವಿಚಿತ್ರ ಪ್ರತಿರೋಧಗಳನ್ನು ಹುಟ್ಟಿಸುತ್ತದೆ. ಸದಾಶಯವಿದ್ದರೂ, ಅದನ್ನು  ಜಾರಿ ತರುವ  ವಿಧಾನವು ಅಸೂಕ್ಷ್ಮವಾಗಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನೇ ತರುತ್ತದೆ. ಆದರೂ ಸಾಮಾನ್ಯವಾಗಿ  ಮಹಿಳೆಯರು ಗಂಡ ಸ್ವೀಕರಿಸಿದ ಧರ್ಮವನ್ನು ಕುರುಡಾಗಿ ಅನುಸರಿಸಲು ಒಪ್ಪದೆ, ತಮ್ಮ ಪಾರಂಪರಿಕ ದೈವ ಧರ್ಮಗಳನ್ನು ಉಳಿಸಿಕೊಂಡಿರುವ ನಿದರ್ಶನಗಳುಂಟು. ಅಕಬರನನ್ನು ವರಿಸಿದರೂ ಜೋಧಾಬಾಯಿ ತನ್ನ ಧಾರ್ಮಿಕತೆಯನ್ನು ಬದಲಿಸಿಕೊಳ್ಳಲಿಲ್ಲ. ರಾಮಾನುಜರ ಪ್ರೇರಣೆಯಿಂದ ಶ್ರೀವೈಷ್ಣವ ಧರ್ಮವನ್ನು ಹೊಯ್ಸಳದೊರೆ ಬಿಟ್ಟಿದೇವನು ಸ್ವೀಕರಿಸಿದರೂ, ಮಡದಿ ಶಾಂತಲೆ ಶೈವಧರ್ಮದಲ್ಲೇ ಮುಂದುವರೆದಳು. ಜೈನಧರ್ಮದಲ್ಲೂ ಹೀಗೆ ಆಯಿತು. ಜೈನನಾದ ಗಂಡ ಜೈನನಾಗದ ಮಡದಿ ಇರುವ ಕುಟುಂಬಗಳ ಬಗ್ಗೆ ಕವಿ ಧರ್ಮಶಿವ ತನ್ನ `ಸಮಯ ಪರೀಕ್ಷೆ'ಯಲ್ಲಿ ಅಸಹನೆಯಿಂದ ಪ್ರಸ್ತಾಪ ಮಾಡುತ್ತಾನೆ. ಲಂಕೇಶರ `ಸಂಕ್ರಾಂತಿ' ನಾಟಕದಲ್ಲಿ ಲಿಂಗದೀಕ್ಷೆ ಸ್ವೀಕರಿಸಿ ಬದಲಾಗಿರುವ ತನ್ನ ಪ್ರಿಯಕರನ್ನು ತಿರಸ್ಕರಿಸುವ ಹೆಣ್ಣಿನ ಪಾತ್ರವೂ; ಕುಲಧರ್ಮವನ್ನು ಬಿಟ್ಟು ಶಿಷ್ಟಧರ್ಮವನ್ನು ಸೇರಿದ ಮಗನನ್ನು ಒಪ್ಪದ ತಂದೆಯ ಪಾತ್ರವೂ ಇದೆ. ಈ ಪಾತ್ರಗಳ ಮೂಲಕ ಸಾಮಾಜಿಕವಾಗಿ ಕ್ರಾಂತಿಕಾರಕವಾದ ಧರ್ಮವು ತನ್ನ ಜಾರಿಯಾಗುವಿಕೆಯಲ್ಲಿ ಮಾಡುತ್ತಿರುವ ವ್ಯಕ್ತಿಗತ ಭಾವನೆಗಳ ಘಾಸಿಯನ್ನು ಚಿತ್ರಿಸುತ್ತದೆ. ನಾಟಕದ ಮಹತ್ವವಿರುವುದು ಅದರ ಕಲಾತ್ಮಕ ಯಶಸ್ಸಿನಲ್ಲಿ ಮಾತ್ರವಲ್ಲ; ಇಂತಹ ಸಾಂಸ್ಕೃತಿಕ ಸಂಕಟಗಳನ್ನು ಪರಿಭಾವಿಸಿರುವುದರಲ್ಲಿ ಕೂಡ.
ಹೊಸಧರ್ಮಗಳ ಸ್ವೀಕಾರವು ಅಸಮಾನತೆಯುಳ್ಳ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕ ಬೇಕುಬೇಡಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದಮನಿತ ಸಮುದಾಯಗಳಿಗೆ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿದೆ; ಆಧ್ಯಾತ್ಮಿಕ ಸಮಾನತೆಯ ಹಂಬಲವನ್ನು ಈಡೇರಿಸುವ ಮಾಧ್ಯಮವಾಗಿದೆ. ಆದರೂ ಹೊಸಧರ್ಮವನ್ನು ಒಳಗೆ ಬಿಟ್ಟುಕೊಳ್ಳುವಲ್ಲಿ ಮಹಿಳೆಯರು ಮತ್ತು ವಯಸ್ಸಾದ ಜನ ಯಾಕೆ ಹಿಂಜರಿಕೆ ತೋರುತ್ತಾರೆ? ಹಳೆಯ ಧರ್ಮವನ್ನು ಬಿಟ್ಟುಕೊಡಲಾಗದ ಜಿಗುಟುತನ ಪ್ರದರ್ಶಿಸುತ್ತಾರೆ? ಅಥವಾ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು' ಎಂಬಲ್ಲಿರುವ ಅಪೇಕ್ಷೆಯೇ ತಪ್ಪಾಗಿದೆಯೊ?
ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ; ವೈಚಾರಿಕ ಪ್ರಜ್ಞೆಯುಳ್ಳ ಗಂಡಸರು ಈ ಬಗೆಯ ಸಂಬಂಧ ನಷ್ಟವನ್ನು ಕೆಲಮಟ್ಟಿಗೆ ಸಹಿಸಬಲ್ಲರು. ಸಾರ್ವಜನಿಕ ಬದುಕಿನಲ್ಲಿರುವ ಅವರಿಗೆ ಪರ್ಯಾಯ ಸಂಬಂಧಗಳು ಸೃಷ್ಟಿಯಾಗುವ ಕಾರಣ, ಇದು ಅಷ್ಟು ದೊಡ್ಡ ಸಮಸ್ಯೆಯೆನಿಸುವುದಿಲ್ಲ. ಆದರೆ ಮನೆ ಮತ್ತು ಕೇರಿಗಳ ಪುಟ್ಟಜಗತ್ತಿನಲ್ಲೇ ಹೆಚ್ಚು ಸಮಯ ಕಳೆಯುವ ಅಷ್ಟೊಂದು ವೈಚಾರಿಕ ಸಿದ್ಧತೆಯಿಲ್ಲದ ಮಹಿಳೆಯರಿಗೆ, ಹೀಗೆ ಸಂಬಂಧ ಕಡಿದುಕೊಂಡು ಬದುಕುವುದು ಕಷ್ಟವಾಗುತ್ತದೆ. ಅದರಲ್ಲೂ ತಾವು ನಂಬಿದ ದೈವವನ್ನು ಕೈಬಿಡಲು ಏನು ಕೇಡಾಗುತ್ತದೆಯೊ ಎಂದು ಮನಸ್ಸು ಅಳುಕುತ್ತದೆ.
ಹಾಗೆಂದು ಮಹಿಳೆಯರು ಹೊಸಧರ್ಮ ಹೊಸದೈವಗಳ ವಿರೋಧಿಗಳಲ್ಲ. ಅವರ ಧಾರ್ಮಿಕ ಉದಾರತೆಗೆ ಮುಸ್ಲಿಮರಲ್ಲದ ಮಹಿಳೆಯರು ದರ್ಗಾ ಮತ್ತು ಮೊಹರಂ ಆಚರಣೆಗಳಲ್ಲಿ ತೊಡಗಿರುವುದು ಅಥವಾ ಗ್ರಾಮೀಣ ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಪ್ರದಾಯಗಳನ್ನು ಅನುಸರಿಸುವುದು ಸಾಕ್ಷಿ. ಅವರು `ಅನ್ಯ' ದೈವಗಳನ್ನು ಹಳತರ ಜತೆಗೇ ಸ್ವೀಕರಿಸಿಯಾರು; ಆದರೆ ಹಳೆಯವನ್ನು ಪೂರಾ ಕೈಬಿಟ್ಟು ಸ್ವೀಕರಿಸಬೇಕೆಂದಾಗ, ಹೊಸಧರ್ಮವು ತಮ್ಮ ನಂಬಿಕೆಯ ಬೇರುಗಳನ್ನು ಅಲುಗಿಸಿದಾಗ, ಅವರಿಗೆ ಕಷ್ಟವಾಗುತ್ತದೆ.
ಧಮ್ಮದೀಕ್ಷೆಯಿಂದ ಬಂಧುಗಳ ಸಾಮಾಜಿಕ ಸಂಬಂಧ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹುಟ್ಟುವ ಬಿರುಕುಗಳನ್ನು ನಿರ್ವಹಿಸುವ ಬೇಕಾದ ಸಾಮಾಜಿಕ ಮತ್ತು ಮಾನಸಿಕ ಮೆಕ್ಯಾನಿಸಂ ಕರ್ನಾಟಕದಲ್ಲಿನ್ನೂ ರೂಪುಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ, ಮಹಿಳೆಯರು ಮೊದಲಿಗರಾಗಿ ಹೊಸಧಮ್ಮ ಸ್ವೀಕರಿಸಿ, ಅದನ್ನು ತಮ್ಮ ಪುರುಷರು ಅನುಸರಿಸುವಂತೆ ಮಾಡಿರುವ ನಿದರ್ಶನವೇ ನಮಗೆ ಸಿಗಲಿಲ್ಲ. ಆದರೆ ದೀಕ್ಷೆತೆಗೆದುಕೊಂಡ ಪುರುಷರು, ತಮ್ಮಂತೆ ಉಳಿದವರೂ ಧಮ್ಮವನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಮಾಡುತ್ತಿರುವುದು ಕಂಡಿತು. ಈ ಒತ್ತಾಯದ ಹಿಂದೆ ಅವರು ಪುರುಷರಾಗಿರುವ, ಯುವಕರಾಗಿರುವ, ನೌಕರಸ್ತರಾಗಿರುವ, ಅಕ್ಷರಸ್ತರಾಗಿರುವ, ಪ್ರಜ್ಞಾವಂತರಾಗಿರುವ ಇಗೊಗಳು ಕೆಲಸ ಮಾಡುತ್ತಿದ್ದವು. ಈ ಇಗೊಗಳು ಪರೋಕ್ಷವಾಗಿ ಉಳಿದವರಲ್ಲಿ ಬೌದ್ಧದ್ವೇಷವನ್ನು ಹುಟ್ಟಿಸಿದಂತಿದ್ದವು. ಅದರಲ್ಲೂ ಧಮ್ಮಕ್ಕೆ ಬಾರದ ಹಿರಿಯ ತಲೆಮಾರಿನವರು ಧಮ್ಮವಂತರಾಗಿರುವ ಮಕ್ಕಳಿಂದ ದೂರವಾಗಿ ಹೊಸ ಅಸ್ಪೃಶ್ಯತೆ ಮತ್ತು ಅನಾಥಪ್ರಜ್ಞೆ ಅನುಭವಿಸುತ್ತಿರುವರೆಂದೂ, ಧಮ್ಮ ಸ್ವೀಕರಿಸಿರುವ ತಲೆಮಾರು ಸ್ವೀಕರಿಸಿದವರ ಜತೆ ಸಹನೆಯಿಂದ ಒಡನಾಟ ಮಾಡುತ್ತಿಲ್ಲವೆಂದೂ ತೋರಿತು. 
ಈ ಬಗೆಯ ಸಾಮಾಜಿಕ ಮಾನವೀಯ ಸಂಬಂಧಗಳ ಬಿರುಕು ಕೇವಲ ಕುಟುಂಬಗಳ ಒಳಗೆ ಮಾತ್ರವಲ್ಲ, ಹೊಸಧರ್ಮ ಸ್ವೀಕಾರ ಮಾಡಿದ ಕುಟುಂಬದ ಜತೆ, ಹಾಗೆ ಸ್ವೀಕಾರ ಮಾಡದೆ ಉಳಿದಿರುವ ಸಮುದಾಯದ ನಡುವೆ ಕೂಡ ಕಾಣಿಸಿತು. ಈಗಾಗಲೇ ಆಧುನಿಕ ತಲೆಮಾರಿನವರ ಶಿಕ್ಷಣ, ಸರ್ಕಾರಿ ಉದ್ಯೋಗ, ನಗರವಾಸ ಮತ್ತು ಮಧ್ಯಮವರ್ಗಕ್ಕೆ ಏರುವಿಕೆಗಳು, ಅನಕ್ಷರಸ್ತ ಗ್ರಾಮೀಣ ಕೆಳವರ್ಗದ ದಲಿತರ ಜತೆಗೆ ಒಂದು ಸಣ್ಣಬಿರುಕನ್ನು ಹುಟ್ಟಿಸಿವೆ; ಈ ಬಿರುಕು ಹೊಸಧರ್ಮ ಸ್ವೀಕಾರದ ಜತೆಗೆ ಮತ್ತಷ್ಟು ಅಗಲವಾಗುತ್ತಿದೆ. ಅನೇಕ ಕಡೆ ಧಮ್ಮಸ್ವೀಕಾರ ಮಾಡಿರುವ ಶಿಷ್ಟ ದಲಿತರು, ಪಾರಂಪರಿಕ ಮತಗಳಲ್ಲೇ ಉಳಿದ ತಮ್ಮ ಬಂಧುಗಳ ಬಗ್ಗೆ ಅವರು ಅಜ್ಞಾನಿಗಳು ಎಂಬ ದನಿಯಲ್ಲಿ ಅನಾದರದಿಂದ ಮಾತಾಡುತ್ತಿದ್ದರು. ತಮ್ಮ ಹಿರೀಕರು ಮಾರಮ್ಮ ಊರಮ್ಮಗಳಿಗೆ ನಡೆದುಕೊಳ್ಳುವುದು, ಕೋಳಿ ಕೋಣ ಬಲಿಕೊಡುವುದು, ಮಾಂಸಾಹಾರ ಮದ್ಯಪಾನ ಮಾಡುವುದು ಇತ್ಯಾದಿಯನ್ನು ಅವರು ಅಸಹನೆಯಿಂದ ಕಾಣುತ್ತಿದ್ದರು. ಇದಕ್ಕೆ ತಕ್ಕಂತೆ ಕೆಲವು ದಲಿತ ಭಂತೆಗಳು ಮಾಂಸಾಹಾರ ಸೇವನೆ ಮತ್ತು ಕುಡಿತಗಳನ್ನು ಹೀನ ಆಚರಣೆಗಳೆಂದೂ ಅವನ್ನು ದಲಿತರು ಬಿಟ್ಟುಬಿಡಬೇಕೆಂದೂ ಪ್ರತಿಪಾದಿಸುತ್ತಿದ್ದರು.
ಧಮ್ಮಸ್ವೀಕಾರದಿಂದ ಹುಟ್ಟಿದ ಈ ಬಿರುಕು, ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಇನ್ನೊಂದು ತೆರನಾಗಿ ಕೆಲಸಮಾಡುತ್ತಿತ್ತು. ಅಲ್ಲಿ ಧಮ್ಮದೀಕ್ಷೆಯನ್ನು ಕೇವಲ ಚಲುವಾದಿಗಳು (ಬಲಗೈ ಹೊಲೆಯರು)  ಮಾಡಿದ್ದರು. ಧಮ್ಮದೀಕ್ಷೆ ಸ್ವೀಕರಿಸಿದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗದಲ್ಲಿ ದೊಡ್ಡದೊಂದು ಬೌದ್ಧ ಚೈತ್ಯಾಲಯ ನಿರ್ಮಿಸಿದ್ದರು. ಬೀದರ್ ಗುಲಬರ್ಗ ಜಿಲ್ಲೆಗಳಲ್ಲಿ ಬಲಗೈಯವರು ಧಮ್ಮದೀಕ್ಷೆ ಪಡೆಯಲು, ಮಹಾರರೇ ಪ್ರಮುಖವಾಗಿರುವ ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿಯೂ ಒಂದು ಕಾರಣ. ಪಾರ್ಟಿಯು ಧಮ್ಮದೀಕ್ಷೆ ಪಡೆದ ಅಂಬೇಡ್ಕರ್ ಅವರನ್ನು ರಾಜಕೀಯ ಸಾಂಸ್ಕೃತಿಕ ನಾಯಕನೆಂದು ಭಾವಿಸಿತು. ಇದು ದಲಿತರ ಎಡಗೈ ಬಣವನ್ನು ಮತ್ತೊಂದು ಬಗೆಯಲ್ಲಿ ಸಂಘಟಿತವಾಗಲು ಪ್ರಚೋದಿಸಿತು. ಒಡೆದ ಬಣಗಳು ದಾಯಾದಿಗಳಂತೆ ಇದ್ದವು. ಬಲಗೈನವರು ಅಂಬೇಡ್ಕರ್ ಅವರನ್ನು ನಾಯಕರನ್ನಾಗಿಸಿಕೊಂಡು ಧಮ್ಮಸ್ವೀಕಾರ ಮಾಡಿದರೆ, ಎಡಗೈವರು ಜಗಜೀವನರಾಮರನ್ನು ನಾಯಕರಾಗಿಸಿಕೊಂಡು ಕ್ರೈಸ್ತಧರ್ಮದತ್ತ ಚಲಿಸಿದ್ದರು. ಹೀಗೆ ಕುಟುಂಬ, ಸಮುದಾಯ ಮತ್ತು ಕೇರಿಗಳ ನಡುವೆ ಧಮ್ಮವು ಬೇರೊಂದು ಬಗೆಯಲ್ಲಿ ಬಿರುಕಿಗೆ ಕಾರಣವಾದಂತೆ ತೋರಿತು. 
ರಹಮತ್, ಅರುಣ್, ಕುಲಕರ್ಣಿ, ಗೋವಿಂದಯ್ಯಹೊಸಧರ್ಮಗಳು ಎಷ್ಟೇ ನಾಗರಿಕವಾಗಿರಲಿ, ದಮನಿತರಿಗೆ ಸಾಮಾಜಿಕ ಚಲನಶೀಲತೆ ಕೊಡುವಂತಹದ್ದಾಗಿರಲಿ, ಅವನ್ನು ಮಾನಸಿಕ ಸಿದ್ಧತೆಯಿಲ್ಲದ ಜನರ ಮೇಲೆ ಹೇರಿದಾಗ ಅವು ಹಿಂಸ್ರಕವಾಗಿ ರೂಪಾಂತರಗೊಳ್ಳುತ್ತವೆ. ಯಾವುದೇ ಕ್ರಾಂತಿಕಾರ ಸಿದ್ಧಾಂತವನ್ನು ಸಹ ಅತ್ಯವರಸರದಲ್ಲಿ ಉತ್ಸಾಹದಲ್ಲಿ ಹೇರಿಕೊಂಡಾಗ ಅನೇಕ ಮಾನವೀಯ ಸೂಕ್ಷ್ಮತೆಗಳು ಕಳೆದುಹೋಗಿಬಿಡುತ್ತವೆ. ಈಗಿನ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿಯಾಗಿರುವ ತಬ್ಲೀಕ್ ಎಂಬ ನವಇಸ್ಲಾಮಿಕ್ ಚಳುವಳಿಯಿಂದ ಸಾವಿರಾರು ಕುಟುಂಬಗಳಲ್ಲಿ ಸತಿಪತಿಗಳೊಂದಾಗದ ಭಕ್ತಿಯು ಏರ್ಪಟ್ಟು, ಮಾನವೀಯ ಸಂಬಂಧಗಳು ಕಂಗೆಟ್ಟಿವೆ. ಧರ್ಮಪ್ರಸಾರಕ್ಕೆ ತಮ್ಮನ್ನು ಬಿಟ್ಟು ತಿಂಗಳುಗಟ್ಟಲೆ ಹೋಗುವ, ಯಾವಾಗಲೂ ಮಸೀದಿಗಳಲ್ಲಿ ಬೀಡುಬಿಟ್ಟಿರುವ ಗಂಡಂದಿರ ವರ್ತನೆಯಿಂದ ಅನೇಕ ಮಹಿಳೆಯರು, ಖಿನ್ನತೆಯಿಂದ ನರಳುತ್ತಿದ್ದಾರೆ. ಕೆಲವರು, ದೇವರ ದಾರಿಯಲ್ಲಿ ಹೋದ ಗಂಡನನ್ನು ಬಿಟ್ಟು ಹೊಸಪುರುಷನನ್ನು ಹುಡುಕಿ ಹೋಗಿರುವುದೂ ಉಂಟು.
ಕರ್ನಾಟಕದಲ್ಲಿ ಸಾಮೂಹಿಕ ಧಮ್ಮದೀಕ್ಷೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಕರ್ನಾಟಕ ಸಾಮಾಜಿಕ ಸಮೀಕರಣವನ್ನು ಬದಲಿಸುವಷ್ಟು ಶಕ್ತವೊ ಅಲ್ಲವೊ, ಅಸ್ಪೃಶ್ಯತೆಯ ಕಾಯಿಲೆಗೆ ಯಾವ ಬಗೆಯ ಮದ್ದೊ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕಾಗಿ ಬೆಲೆ ತೆರುತ್ತಿರುವವರು ಮಾತ್ರ ಮಹಿಳೆಯರಾಗಿದ್ದಾರೆ. ಧಮ್ಮದೀಕ್ಷೆ ನೀಡುತ್ತಿರುವವರು ಈ ಸಾಂಸ್ಕೃತಿಕ  ಬಿಕ್ಕಟ್ಟುಗಳನ್ನು ಪರಿಭಾವಿಸಿದಂತಿಲ್ಲ. ಹೀಗಾಗಿ ನಾವು ಕಂಡ ಬಹುತೇಕ ಯಶೋಧರೆಯರಲ್ಲಿ ಬುದ್ಧನ ಬಗ್ಗೆ ಕೋಪವಿತ್ತು. ಇದಕ್ಕೆ ಕಾರಣವಾಗಿದ್ದು ಧಮ್ಮವಲ್ಲ. ಧಮ್ಮವನ್ನು ನೆಲೆಗೊಳಿಸುತ್ತಿರುವ ವಿಧಾನ.  
ನಮ್ಮ ಬೌದ್ಧಯಾನದಲ್ಲಿ ಅನೇಕ ದಲಿತ ಕುಟುಂಬಗಳಲ್ಲಿ ಧಮ್ಮಸ್ವೀಕಾರವು ಹೊಸ ಆತ್ಮಾಭಿಮಾನವನ್ನು ಹೊಸ ಬದುಕಿನ ಕ್ರಮವನ್ನು ತಂದಿತ್ತಿರುವ ಹಲವಾರು ನಿದರ್ಶನಗಳನ್ನು ನಾವು ಕಂಡೆವು. ಆದರೆ ಎಲ್ಲ ಬಗೆಯ ಪರಿವರ್ತನೆಗಳ ಹೊತ್ತಲ್ಲಿ ಪ್ರತಿರೋಧ ಹತಾಶೆ ಅಸಹಾಯಕತೆ ಕಂಡೆವು. ನಮಗೆ ಬೌದ್ಧಧರ್ಮಕ್ಕೆ ಸೇರಿದ ಶಾಸನ, ವಿಗ್ರಹ ಚೈತ್ಯಾಲಯಗಳು ಭಗ್ನಾವಸ್ಥೆಯಲ್ಲಿ ಇದ್ದುದು ಕಂಗೆಡಿಸಲಿಲ್ಲ; ಧಮ್ಮಸ್ವೀಕಾರದ ವಿಷಯವು ಮನುಷ್ಯರ ಮತ್ತು ಕುಟುಂಬಗಳ ನಡುವೆ ಭಗ್ನತೆ ಹತಾಶೆ ತಂದಿರುವುದು ಕಂಗೆಡಿಸಿತು. ಯಶೋಧರೆಯರ ಕಷ್ಟಗಳಿಗೆ ಕೊನೆಯಿಲ್ಲವೆನಿಸಿತು.


- ರಹಮತ್ ತರೀಕೇರಿ
ಕೃಪೆ : ಕೆಂಡ ಸಂಪಿಗೆ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.