Wednesday, May 30, 2012

ಕನ್ನಡ-ಮರಾಠಿ ಸಂಬಂಧಗಳು-1

 ಡಾ. ಸಿದ್ರಾಮ ಕಾರಣಿಕ
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ನೆರೆ-ಹೊರೆಯ ಪ್ರದೇಶಗಳಾಗಿದ್ದು, ಅವುಗಳ ಸಂಸ್ಕೃತಿಯಲ್ಲಿ ಹೆಚ್ಚಿನ ಸಾಮ್ಯತೆ ಇರುವುದು ಗಮನೀಯ. ಈ ಸಾಮ್ಯತೆಗೆ ಕಾರಣಗಳನ್ನು ಹುಡುಕುತ್ತ ಹೊರಟಂತೆ ಆ ಎರಡೂ ಪ್ರದೇಶಗಳು 'ಅವಳಿಗಳು' ಎಂಬುದು ನಿಖರವಾದ ಪ್ರಮೇಯವೊಂದು ಸೃಷ್ಟಿಯಾಗುತ್ತದೆ. ಆದರೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದದ ಕಾರಣದಿಂದ ಮನಸ್ಸುಗಳು ಕಲಕಿವೆ ; ಗುಂಡಾಗಿರಿ ಗುಂಡಿ ತೋಡುತ್ತಿದೆ. ಯಾವುದೇ ಕಾರಣದಿಂದ ಈ ರಾಜ್ಯಗಳ ಮಧ್ಯದ ಸಂಬಂಧ ಸುಧಾರಣೆ ಸಾಧ್ಯವೇ ಇಲ್ಲ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ನಿರಂತರವಾಗಿ ಇಂಥ ಸಂಘರ್ಷಮಯ ವಾತಾವರಣದಲ್ಲಿ ಬೇಯುತ್ತಿವೆ. ಆ ಕಿಚ್ಚು ಕೆನ್ನಾಲಿಗೆ ಚಾಚಿ ಆಹುತಿ ತೆಗೆದುಕೊಳ್ಳುತ್ತದೆಯೋ ಹೇಳಲಾಗದು ಎಂಬಂತಹ ಮಾತುಗಳು ಮಂದಿಯ ಮಂದೆ ಮತ್ತು ಮಾಧ್ಯಮಗಳ ಮೂಲಕ ಆತಂಕಕ್ಕೀಡು ಮಾಡಬಲ್ಲಂಥವು. ಆದರೆ ತುಂಬ ಆತಂಕಪಟ್ಟುಕೊಳ್ಳುವಷ್ಟು ಯಾವುದೇ ಗೊಂದಲಗಳು ಗಮನಿಕೆಯಿಂದ ದೂರ ಉಳಿಯುತ್ತವೆ. ವಿಷಯದ ಆಳಕ್ಕಿಳಿದು ಸ್ಥಳೀಯ ಸಾಮಾನ್ಯ ಜನರ ಅಭಿಪ್ರಾಯಗಳ ಮೂಲಕ ವಾಸ್ತವಿಕ ಅಂಶಗಳತ್ತ ಹೆಚ್ಚಿನ ಗಮನ ಹರಿಸಿ ಅಧ್ಯಯನ ಮಾಡುವುದರ ಮೂಲಕ ವಾಸ್ತವ ಚಿತ್ರಣವನ್ನು ಎತ್ತಿ ತೋರಿಸುವ ಅವಶ್ಯಕತೆ ಇದೆ. ಸಾಹಿತ್ಯ, ಧರ್ಮ, ಕಲೆ, ವಿಜ್ಞಾನಗಳಿಗೆ ಇಲ್ಲದ ಗಡಿಗಳು ಕೆಲವು ಸಲ ಮನುಷ್ಯನ ಬದುಕಿಗೆ ಅಡರಿಕೊಳ್ಳುತ್ತವೆ. ಇದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಮುಖ ಕಾರಣವಾಗಿ ನಿಲ್ಲುತ್ತವೆ. ಸಾಂದರ್ಭಿಕ ಅವಘಡಗಳನ್ನೇ ಮುಂದಿಟ್ಟುಕೊಂಡು ಸಂಬಂಧ ಕೆಡಿಸುವ ಪ್ರಯತ್ನದಲ್ಲಿರುವವರಿಗೆ ಫಲ ದೊರೆಯಲಾರದೇನೋ ನಿಜ. ಆದರೆ ತಾತ್ಕಾಲಿಕವಾಗಿಯಾದರೂ ಜನರ ಭಾವನೆಗಳು ಹತೋಟಿ ತಪ್ಪಿ ಅನಾಹುತಕ್ಕೆ ಕಾರಣವಾಗಬಲ್ಲವು ಎಂಬುದನ್ನು ಮಾತ್ರ ಮರೆಯಲು ಸಾಧ್ಯವಿಲ್ಲ.

ಮನುಷ್ಯ, ಮನುಷ್ಯನನ್ನು ಅರ್ಥ ಮಾಡಿಕೊಳ್ಳುವ ವಿಚಾರದಿಂದ ದೂರ ಸರಿಯುತ್ತಿರುವ ಎರಡೂ ಭಾಷಿಕರ ನಡುವೆ ಇರುವ ಸಂಬಂಧಗಳನ್ನು ಮತ್ತೊಮ್ಮೆ ಸಾದರಪಡಿಸುವ ನಿಟ್ಟಿನಲ್ಲಿ ಅಧ್ಯಯನಗಳು ಹೆಚ್ಚು ಹೆಚ್ಚು ನಡೆದಾಗ, ಎರಡೂ ಭಾಷಿಕರ ನಡುವೆ ಸೌಹಾರ್ದ ಸಂಬಂಧಕ್ಕೆ ಪ್ರೇರಕವಾಗುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಾಗ, ಅದು ಸಾಂಸ್ಕೃತಿಕ ವಿನಿಮಯದ ದೃಷ್ಟಿಯಿಂದಾದರೂ ಸರಿ. ಸಾಮಾಜಿಕ ದೃಷ್ಟಿಯಿಂದಾದರೂ ಸರಿ. ಸಂಬಂಧಗಳು ಮತ್ತೇ ಚಿಗಿತುಕೊಳ್ಳಲು ಸಹಕಾರಿಯಾಗುತ್ತದೆ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.