Friday, May 18, 2012

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವ್ಯಂಗ್ಯಚಿತ್ರ ವಿವಾದದ ಸುತ್ತ...

ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಪ್ರೌಢಶಾಲಾ ವಿಭಾಗದ ಪುಸ್ತಕವೊಂದರಲ್ಲಿ ಡಾ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವ್ಯಂಗ್ಯಚಿತ್ರ ಪ್ರಕಟಣೆಯ  ವಿವಾದ, ಅದರಿಂದ ಪಾರ್ಲಿಮೆಂಟ್‌ನಲ್ಲಿ ನಡೆದ ಭಾರೀ ಕೋಲಾಹಲ ಮತ್ತು ಇಡೀ ಪುಸ್ತಕವನ್ನೇ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು ದಲಿತರ ಸೂಕ್ಷ್ಮ ಸಂವೇದನೆಯನ್ನು ನಿರ್ಲಕ್ಷಿಸಿ ಸಾರಾಸಗಟಾಗಿ ಟೀಕಿಸಲಾಗುತ್ತಿದೆ. ದಲಿತರ ಪಾಲಿಗೆ ಡಾ. ಅಂಬೇಡ್ಕರ್ ದೈವ ಸಮಾನ. ಅದನ್ನು ಮನಗಾಣದೆ ಈ ವಿಚಾರದಲ್ಲಿ ದಲಿತರ ಆಕ್ರೋಶವನ್ನು ಅಸಹನೆ ಎಂದೇ ಬಿಂಬಿಸಲಾಗುತ್ತಿದೆ.

ವಾಸ್ತವವಾಗಿ ಇದು ಅಸಹನೆಯಲ್ಲ; ಶತಶತಮಾನಗಳಿಂದ ನಡೆಯುತ್ತ ಬಂದ ಅಪಮಾನ, ತೇಜೋವಧೆಯನ್ನು ಮೆಟ್ಟಿನಿಲ್ಲಲು ಕಲಿಯುತ್ತ, ದಾಸ್ಯದಿಂದ ಹೊರಬರಲು ಪ್ರಯತ್ನಿಸುತ್ತಿರುವ ದಮನಿತ ವರ್ಗಗಳ ದನಿ. ಈಗ ಆಗಬೇಕಿರುವುದು ಇವರ ವರ್ತನೆ ಬಗ್ಗೆ ಸಾರಾಸಗಟು ಟೀಕೆ ಅಥವಾ ಕೋಪದ ಪ್ರದರ್ಶನವಲ್ಲ. ಭಯದಿಂದಾಗಿ ತಪ್ಪು ಗ್ರಹಿಕೆಗೆ ಒಳಗಾದ ಈ ಜನರ ಬಗ್ಗೆ ಸಂವೇದನೆ ಬೆಳೆಸಿಕೊಳ್ಳುವುದು.

`ಸಂಸತ್ತಿನಲ್ಲಿ ಸರ್ಕಾರ ಪ್ರದರ್ಶಿಸಿದ ಗಾಬರಿಯ ಪ್ರತಿಕ್ರಿಯೆ ಮತ್ತು ವ್ಯಂಗ್ಯಚಿತ್ರ ಪ್ರಕಟಣೆಗಾಗಿ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಕ್ಷಮೆ ಯಾಚಿಸಿದ್ದರ ಹಿಂದೆ ಡಾ. ಅಂಬೇಡ್ಕರ್ ಅವರನ್ನು ಆರಾಧಿಸುವ ದೊಡ್ಡ ಸಂಖ್ಯೆಯ ಮತದಾರ ಕೋಪ ಶಮನಗೊಳಿಸಿ ಓಲೈಸುವ ರಾಜಕೀಯ ತಂತ್ರಗಾರಿಕೆಯಿದೆ.

ನಮ್ಮ ಸಮಾಜದಲ್ಲಿ ಜನತಂತ್ರದ ಆಶಯಗಳು ಇನ್ನೂ ಪೂರ್ಣವಾಗಿ ಬೇರು ಬಿಟ್ಟಿಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎನ್ನುವುದು ಸಮಾಜ ವಿಜ್ಞಾನಿಯೊಬ್ಬರ ವಿಶ್ಲೇಷಣೆ. ಇನ್ನೊಬ್ಬ ಸಮಾಜ ವಿಜ್ಞಾನಿ ಹೇಳುವಂತೆ, ಇಡೀ ಪಠ್ಯಪುಸ್ತಕವನ್ನೇ ವಾಪಸ್ ಪಡೆದಿರುವುದು ದಲಿತ ಶಕ್ತಿಯನ್ನು ಸರ್ಕಾರ ಸಾಂಕೇತಿಕವಾಗಿಯಾದರೂ ಗುರುತಿಸಿದೆ ಎನ್ನುವುದರ ನಿದರ್ಶನ. ಇವರಿಬ್ಬರ ವ್ಯಾಖ್ಯಾನವೂ ಸರಿ ಎಂದು ಹೇಳಬಹುದು.
 
ಆಳವಾಗಿ ಬೇರೂರಿದ ಜಾತಿ ಪಿಡುಗಿನಿಂದ ವಿಭಜನೆಗೊಂಡ ನಮ್ಮ ಸಮಾಜದಲ್ಲಿ ಪ್ರಜಾಸತ್ತೆ ಇನ್ನೂ ಬಲವಾಗಿ ಚಾಚಿಕೊಂಡಿಲ್ಲ ಎನ್ನುವುದು ಸತ್ಯ. ಆದರೆ ಶಿಕ್ಷಣ ಮತ್ತು ಆಧುನೀಕರಣ ನಮ್ಮ ಮನಸ್ಸುಗಳನ್ನು ಬದಲಾಯಿಸಲು ಶಕ್ತವಾಗಿಲ್ಲ ಏಕೆ ಎನ್ನುವ ಪ್ರಶ್ನೆ ಉಳಿದಿದೆ.

ದಲಿತ  ಶಕ್ತಿ ಇನ್ನೂ ಗಟ್ಟಿ ಸ್ವರೂಪ ಪಡೆದಿಲ್ಲ. ಆದರೆ ಅದು ಸರ್ಕಾರವನ್ನು ಮಣಿಸುವಷ್ಟು ಶಕ್ತವಾಗಿದೆ. ಹೀಗಾಗಿ ಸರ್ಕಾರದ ಕ್ರಮ ಬೂಟಾಟಿಕೆಯಿಂದ ಕೂಡಿದೆಯೇ ಅಥವಾ ನಾಮಕಾವಸ್ಥೆಯೇ ಎಂಬುದು ಮಹತ್ವವಲ್ಲ.ಆದರೆ ಅದು ಸತ್ಯಸಂಗತಿ ಎಂಬುದೇ ಮುಖ್ಯ.

ಸರ್ಕಾರ ಪ್ರತಿಭಟನೆಗೆ ಮಣಿದರೂ, ಈ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂಬ ಗ್ರಹಿಕೆಯಿಂದ ಸಂಸತ್ತಿನಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗೂಡಿದ ಮಹತ್ವದ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಅಲ್ಲದೆ ಸಂಸತ್ತಿನ ನಿಲುವನ್ನು ಒಪ್ಪದ ಎನ್‌ಸಿಇಆರ್‌ಟಿಯ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಇಬ್ಬರು ಪ್ರಧಾನ ಸಲಹೆಗಾರರ ರಾಜೀನಾಮೆಗೂ ಕಾರಣವಾಯಿತು.

ಸಂಸತ್ತಿನ ಒಳಗೆ ಮತ್ತು ಹೊರಗೆ ದಲಿತರು ನಡೆಸಿದ ಪ್ರತಿಭಟನೆ ಸರಿಯಲ್ಲ ಎಂಬುದು ಸರ್ಕಾರದ ತೀರ್ಮಾನವನ್ನು ವಿರೋಧಿಸುವವರ ವಾದ. ಏಕೆಂದರೆ ಈ ವ್ಯಂಗ್ಯಚಿತ್ರ ಬಿಡಿಸಿದ್ದು 60 ವರ್ಷಗಳ ಹಿಂದೆ, ಇದನ್ನು ರಚಿಸಿದವರು ಜನಪ್ರಿಯ ವ್ಯಂಗ್ಯಚಿತ್ರಕಾರರಾಗಿದ್ದ ಶಂಕರ್.
 
ಅಲ್ಲದೆ ಆಗಿನ ಪ್ರಧಾನಿ ನೆಹರೂ ಎಷ್ಟು ಉದಾರ ಮನಸ್ಸಿನವರು ಎಂದರೆ ವ್ಯಂಗ್ಯಚಿತ್ರದ ಮೂಲಕ ಶಂಕರ್ ತಮ್ಮ ಕಾಲೆಳೆದರೂ ಮೆಚ್ಚಿಕೊಳ್ಳುತ್ತಿದ್ದರು. ಈ ವ್ಯಂಗ್ಯಚಿತ್ರ ಮೊದಲು ಪ್ರಕಟವಾಗಿದ್ದು 1948ರಲ್ಲಿ. ಇದರಿಂದ ತಮಗೆ ಅಪಮಾನವಾಯಿತು ಎನಿಸಿದ್ದರೆ ಅಂಬೇಡ್ಕರ್ ಆಗಲೇ ವಿರೋಧಿಸುತ್ತಿದ್ದರು ಎಂಬುದು ಇವರ ವಾದದ ಸಾರಾಂಶ.

ಕಲಿಕೆ ಆಸಕ್ತಿದಾಯಕ ಆಗಬೇಕು, ತಮಾಷೆ, ತಿಳಿಹಾಸ್ಯವೂ ಇರಬೇಕು ಎಂಬ ಉದ್ದೇಶದಿಂದ ವ್ಯಂಗ್ಯಚಿತ್ರ ಸೇರಿಸಲಾಯಿತು ಎಂದು ಪಠ್ಯಸಮಿತಿ ಹೇಳುತ್ತಿದೆ. ಆದರೆ ಇಂಥ ಯಾವುದೋ ಕಾಲದ ವ್ಯಂಗ್ಯಚಿತ್ರ ಈ ಕಾಲದ ಮಕ್ಕಳ ಮನಸ್ಸಿಗೆ ರಂಜನೆ ಕೊಡುತ್ತದೆ ಎಂದು ಭಾವಿಸುವುದು ಮೂರ್ಖತನ.
 
ಅಂಬೇಡ್ಕರ್ ಅವರು ಈ ವ್ಯಂಗ್ಯಚಿತ್ರ ನೋಡಿ ನಕ್ಕಿರಬಹುದು ಅಥವಾ ಬದುಕಿನುದ್ದಕ್ಕೂ ಇಂಥ ಅಪಹಾಸ್ಯದ ಮುಳ್ಳುಗಳ ಯಾತನೆ ಅನುಭವಿಸಿದ್ದರಿಂದ ಸುಮ್ಮನಿದ್ದಿರಲೂ ಬಹುದು. ಆದರೆ ಈಗ ಪುಸ್ತಕದಲ್ಲಿ ಇದನ್ನು ಬಳಸಿಕೊಂಡಿದ್ದು ಎಷ್ಟರಮಟ್ಟಿಗೆ ಪ್ರಸ್ತುತ?

ಸಂವಿಧಾನ ಬರೆಯುವುದು ಸುಲಭದ ಕೆಲಸ ಆಗಿರಲಿಲ್ಲ, ಸಾಕಷ್ಟು ಸಮಯ ಹಿಡಿದಿದೆ ಎಂದು ಮಕ್ಕಳಿಗೆ ತಿಳಿಸಿಕೊಡುವುದು ತಪ್ಪಲ್ಲ. ವ್ಯಂಗ್ಯಚಿತ್ರವೊಂದು ಆಯಾ ಕಾಲದ ವಿದ್ಯಮಾನ, ವ್ಯಕ್ತಿಗಳ ವಿಶ್ಲೇಷಣೆಯ ವ್ಯಾಖ್ಯಾನ. ಹೀಗಾಗಿ ಆ ಕಾಲಕ್ಕೆ ಸಂವಿಧಾನ ರಚನೆ ವಿಳಂಬದ ಬಗ್ಗೆ ಬರೆದ ವ್ಯಂಗ್ಯಚಿತ್ರಕ್ಕೆ ಅರ್ಥವಿದೆ. ಆದರೆ 60 ವರ್ಷದ ನಂತರ ಈಗ ಅದು ಅರ್ಥಹೀನ, ಅಪ್ರಸ್ತುತ. ಅದು ಸಂವಿಧಾನ ರಚನಾ ಪ್ರಕ್ರಿಯೆಯ ಅಂತರಂಗವನ್ನು ಪ್ರತಿಬಿಂಬಿಸುತ್ತಿಲ್ಲ.

ಮುಖ್ಯವಾದ ಸಂಗತಿ ಎಂದರೆ ಯಾವುದೇ ವ್ಯಂಗ್ಯಚಿತ್ರ ಅಥವಾ ಚಿತ್ರ ಆಯಾ ವಿಷಯಕ್ಕೆ ಪೂರಕವಾಗಿ, ವಿವರಣಾತ್ಮಕವಾಗಿ ಇರಬೇಕು. ಆದರೆ ಈ ವ್ಯಂಗ್ಯಚಿತ್ರ ಹಾಗೆ ಇರುವಂತೆ ತೋರುತ್ತಿಲ್ಲ. ಸಂವಿಧಾನ ರಚನೆಯಲ್ಲಿ ವಿಳಂಬವಾಯಿತು ಎನ್ನುವುದು ಈಗಿನ ಸನ್ನಿವೇಶದಲ್ಲಿ ಹೇಗೆ ಪ್ರಾಮುಖ್ಯವಾಗುತ್ತದೆ?

ಸಂವಿಧಾನ ರಚನೆ ಹೇಗೆ ನಡೆಯಿತು ಎಂಬುದನ್ನು ಇಂದಿನ ಮಕ್ಕಳಿಗೆ ತಿಳಿಸಲೇ ಬೇಕಿದ್ದರೆ, ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲು ಡಾ. ರಾಜೇಂದ್ರ ಪ್ರಸಾದ್ ವಿರೋಧ, ಅದಕ್ಕೆ ತಲೆಯಾಡಿಸಿದ ನೆಹರು ಮತ್ತು ಇವರಿಬ್ಬರ ಈ ನಿಲುವನ್ನು ಖಡಾಖಂಡಿತವಾಗಿ ವಿರೋಧಿಸಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಕಾರ್ಯದಿಂದಲೇ ಹೊರ ಬರುವುದಾಗಿ ಹಾಕಿದ ಬೆದರಿಕೆಯನ್ನು ಉಲ್ಲೇಖಿಸಬಹುದಿತ್ತು. ಅದಕ್ಕೇ ಹೇಳುವುದು, ಇನ್ನೊಬ್ಬರ ಬಗ್ಗೆ ಅಪಹಾಸ್ಯ ಮಾಡುವುದು ಬಹಳ ಸುಲಭ ಎಂದು.

ದಲಿತರ ಅಸಹನೆ ಮತ್ತು ಸರ್ಕಾರದ ಶರಣಾಗತಿಯನ್ನು ಟೀಕಿಸುವವರು ಈಗ ದಿಗಿಲು ಹುಟ್ಟಿಸುವ ಇನ್ನೊಂದು ಕೆಲಸ ಮಾಡುತ್ತಿದ್ದಾರೆ.

ಸರ್ಕಾರ ರಾಷ್ಟ್ರೀಯ ಪಠ್ಯಕ್ರಮದ ಎಲ್ಲ ಪುಸ್ತಕಗಳನ್ನು ಹಿಂತೆಗೆದುಕೊಳ್ಳಬಹುದು, ವ್ಯಂಗ್ಯಚಿತ್ರಕಾರರು ಕೈಯಲ್ಲಿ ಬ್ರಷ್ ಹಿಡಿಯುವ ಮುನ್ನ ಹತ್ತತ್ತು ಸಲ ಆಲೋಚನೆ ಮಾಡಬೇಕಾಗಬಹುದು ಎಂದು ಭಯಪಡಿಸುತ್ತಿದ್ದಾರೆ.

ನಮ್ಮ ನಾಯಕರನ್ನು ಮತ್ತು ಆಗಿನ ವಿದ್ಯಮಾನಗಳನ್ನು ಮಕ್ಕಳಿಗೆ ವಿವಿಧ ರೂಪದಲ್ಲಿ ತಿಳಿಸಿಕೊಡಲು ಈ ವ್ಯಂಗ್ಯಚಿತ್ರ ಬಳಸಲಾಯಿತು ಎಂದು ಅಧ್ಯಾಪಕರೊಬ್ಬರು ಹೇಳುತ್ತಿದ್ದಾರೆ. ಇದಕ್ಕೆ ಯಾರ ತಕರಾರೂ ಇಲ್ಲ. ಯಾರ ಬಗ್ಗೆಯಾದರೂ ವಿಮರ್ಶೆ ಮಾಡುವುದಾದರೆ ನೇರವಾಗಿ ಮಾಡಿ, ಪರೋಕ್ಷವಾಗಿ ಯಾಕೆ? ಅದು ಅಪ್ರಾಮಾಣಿಕತೆ ಆಗುತ್ತದೆ.

ಈ ಅಧ್ಯಾಪಕರ ಪ್ರಕಾರ, ಇದೇ ಮೊದಲ ಸಲ ಅಂಬೇಡ್ಕರ್‌ಗೆ ಪಠ್ಯ ಪುಸ್ತಕದಲ್ಲಿ ಯಥೋಚಿತವಾದ ಗೌರವ ಕೊಡಲಾಗಿದೆ. ಆದರೆ ಇದು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತೆ.

ಈಗ ನಮ್ಮ ಮುಂದೆ ಇರುವುದು ಒಂದು ವ್ಯಂಗ್ಯಚಿತ್ರ, ಹಾಸ್ಯಪ್ರಜ್ಞೆ ಅಥವಾ ಅದರ ಕೊರತೆಯ ವಿಷಯ ಅಲ್ಲ. ಬದಲಾಗಿ ಯಾರನ್ನೋ ತಪ್ಪಾಗಿ ಚಿತ್ರಿಸುವುದು, ಅವಹೇಳನ ಮಾಡುವುದು ಮತ್ತು ಸೂಕ್ಷ್ಮ ಸಂವೇದನೆ ಕಳೆದುಕೊಳ್ಳುವುದರ ವಿಷಯ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಿರ್ದಯವಾಗಿ ಬೇರೂರಿದ ಪೂರ್ವಗ್ರಹ, ತಾರತಮ್ಯ ಮನೋಭಾವದ ವಿಷಯ. ಅದಕ್ಕಾಗಿಯೇ ಈ ವ್ಯಂಗ್ಯಚಿತ್ರದಲ್ಲಿ ತಮಾಷೆಯ ಅಂಶ ಎಳ್ಳಷ್ಟೂ ಇಲ್ಲ.

 ಆರ್. ಅಖಿಲೇಶ್ವರಿ  
ಕೃಪೆ : ಪ್ರಜಾವಾಣಿ 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.