Friday, May 18, 2012

ಮಾಂಸದ ಉತ್ಸವ: ಆಹಾರದ ಹಕ್ಕು ರಕ್ಷಣೆಯತ್ತ ಇಟ್ಟ ಹೆಜ್ಜೆ

'ಅಧಿಕಾರ ನನ್ನ ಅಂಕೆಯಲ್ಲಿದೆ` ಎಂದು ತೋರಿಸುವ ಒಂದು ವಿಧಾನ ಪ್ರಾಬಲ್ಯದ ಪ್ರದರ್ಶನ. `ನಾನೇ ಪ್ರಬಲ` ಎಂದು ಪ್ರತಿಪಾದಿಸುವುದರ ಒಂದು ವಿಧಾನವೇ `ಹತೋಟಿ ಸಾಧಿಸುವುದು`.

ಇದು ಒಳ್ಳೆಯದು, ಇದು ಕೆಟ್ಟದು ಎಂಬ ಅಸಂಗತ ಮೌಲ್ಯಗಳನ್ನು ತಾವೇ ತೀರ್ಮಾನಿಸಿ ಬೇರೆಯವರ ಮೇಲೆ ಹೇರುವುದು `ನಿಯಂತ್ರಣ`ದ ಇನ್ನೊಂದು ಮುಖ.

`ನಿಮ್ಮ ಮೌಲ್ಯ ತಪ್ಪು, ಒಪ್ಪಲಾಗದ್ದು` ಎಂದು ಬಾಯಿ ಮುಚ್ಚಿಸುವುದು `ನನ್ನ ಮೌಲ್ಯವೇ ಶ್ರೇಷ್ಠ` ಎನ್ನುವುದರ ಮತ್ತೊಂದು ರೂಪ. ಹೀಗೆ ಒಬ್ಬರ ಮೌಲ್ಯ, ಆಚರಣೆ ಅವಹೇಳನ ಮಾಡುತ್ತಿದ್ದರೆ ಅವರಿಗಿಂತ `ನಾವು ಕಡಿಮೆ` ಎಂಬ ಕೀಳರಿಮೆ ಬೆಳೆಯುತ್ತದೆ.


`ನೀವು ಕಡಿಮೆ ಎಂದು ಯಾಕೆ ಅಂದುಕೊಳ್ಳುತ್ತೀರಿ` ಎಂದು ಯಾವುದೇ ಮಹಿಳೆಯನ್ನು ಕೇಳಿ ನೋಡಿ. ಆಕೆ ತಲೆಯಲ್ಲಿ ಅದನ್ನೇ ತುಂಬಲಾಗಿದೆ. ತನ್ನ ಮೇಲೆ ಅಧಿಕಾರ ಚಲಾಯಿಸುತ್ತಿರುವವರ ಅಪ್ಪಣೆಗಳನ್ನು ಎದುರಾಡದೆ ಪಾಲಿಸಿದರೆ ಮಾತ್ರ ಆಕೆಗೆ ಉಳಿವು. ತಾನೇನು ಆಗಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವೂ ಇಲ್ಲ.


ತನ್ನ ಹಕ್ಕುಗಳನ್ನು ಪುರುಷರಿಗೆ ಒಪ್ಪಿಸಿದ್ದಾಳೆ. ಹೀಗಾಗಿ ಆಕೆ ದುರ್ಬಲ ಎಂದೇ ಬಿಂಬಿಸಲಾಗುತ್ತಿದೆ. ದೌರ್ಜನ್ಯ, ದಬ್ಬಾಳಿಕೆಗೆ ಆಕೆ ಸುಲಭದ ತುತ್ತು. ಮಹಿಳೆಯನ್ನು `ಕೀಳು, ಬುದ್ಧಿಗೇಡಿ, ಮೌಲ್ಯಯುತವಾದ ಯಾವುದನ್ನೂ ಮಾಡಲು ಅಸಮರ್ಥೆ` ಎಂಬಂತೆ ಕಾಣಲಾಗುತ್ತದೆ. ಎದುರಾಡಿದರೆ ಹಿಂಸೆಯಿಂದ ಮಟ್ಟಹಾಕಲಾಗುತ್ತದೆ.

ಇಂಥ ಬಲವಂತದ ಗುಲಾಮಗಿರಿಯ ಉದಾಹರಣೆಗಳೇ ಇತಿಹಾಸದುದ್ದಕ್ಕೂ ತುಂಬಿಕೊಂಡಿವೆ. ಮಹಿಳೆ ಮನುಕುಲದ ಮೊದಲ ಅಡಿಯಾಳು. ಬಿಳಿಯರು ಚರ್ಮದ ಬಣ್ಣ ಆಧರಿಸಿ ಕರಿಯರನ್ನು ಗುಲಾಮರಾಗಿ ಮಾಡಿಕೊಂಡರು.


ಉತ್ತರ ಅಮೆರಿಕದ ಮೂಲ ನಿವಾಸಿಗಳ ಮೇಲೆ ಬಿಳಿ ಚರ್ಮದ ಅಮೆರಿಕನ್ನರು ಮತ್ತು ಆಫ್ರಿಕದ ಕರಿಯ ಮೂಲ ನಿವಾಸಿಗಳ ಮೇಲೆ ಐರೋಪ್ಯರು ನಡೆಸಿದ್ದು ಇಂಥದೇ ದೌರ್ಜನ್ಯ. ಶೂದ್ರರು ಎಂದು ಕೆಲವರ್ಗಗಳನ್ನು ಕರೆದ ಬ್ರಾಹ್ಮಣರು ನಮ್ಮ ದೇಶದಲ್ಲಿ ಮಾಡಿದ್ದು ಇದನ್ನೇ. ಇಲ್ಲಿ ಜಾತಿ ಕ್ರೌರ್ಯಕ್ಕೆ ಬಲಿಯಾದದ್ದು ದಲಿತರು.

ಪ್ರಕೃತಿಯನ್ನು ಮತ್ತು ಮನುಷ್ಯರಿಗೆ ಉಪಕಾರಿಯಾದ ಅದರ ಅನೇಕ ಕೊಡುಗೆಗಳನ್ನು ಹಿಂದೂ ಪರಂಪರೆ `ಪವಿತ್ರ` ಎಂದು ಪರಿಗಣಿಸಿದೆ. ಆದರೂ ನಮ್ಮ ಸಂರಕ್ಷಣೆ ಮತ್ತು ಉಳಿವಿಗಾಗಿ ನಮಗೆ ಅವುಗಳ ಅಗತ್ಯವಿದೆ. ಹಾಗಾಗಿಯೇ ನಾವು ಅವನ್ನು ಬಳಸಿಕೊಂಡರೂ ಪರಂಪರೆಯ ನೈಜ ಆಶಯಗಳ ಚೌಕಟ್ಟಿನ ಒಳಗೆ ದುರುಪಯೋಗಕ್ಕೆ ಅವಕಾಶ ಕೊಟ್ಟಿಲ್ಲ.


ಮರಗಿಡಗಳು ನಮಗೆ ಪವಿತ್ರ; ಆದರೂ ನಮ್ಮ ಬಳಕೆಗಾಗಿ ಅವನ್ನು ಕಡಿಯುತ್ತೇವೆ. ಪರ್ವತಗಳು ನಮಗೆ ಪವಿತ್ರ; ಆದರೂ ಗ್ರಾನೈಟ್, ಕಲ್ಲುಗಳು ನಮಗೆ ಅಗತ್ಯ. ಅದಕ್ಕಾಗಿ ಸ್ವಲ್ಪ ಭಾಗ ಉಪಯೋಗಿಸುತ್ತೇವೆ. ನದಿಗಳು ಪವಿತ್ರ, ಆದರೆ ನಮಗೆ ಬೇಡವಾದದ್ದನ್ನು ಸುರಿಯಲು, ಸಾಗಿಸಲು ಆ ನದಿಗಳ ಹರಿವ ನೀರೇ ನಮಗೆ ಬೇಕು.

ಹಾವುಗಳನ್ನು ಪೂಜಿಸುತ್ತೇವೆ; ಆದರೆ ನಮ್ಮನ್ನೇ ಸಾಯಿಸಲು ಬಂದಾಗ ಅವನ್ನು ಕೊಲ್ಲುವುದು ಅನಿವಾರ್ಯ. ಅದೇ ರೀತಿ ಮನುಷ್ಯ ಕೂಡ ಸಾಕುತ್ತ, ಸಲಹುತ್ತ ಬಂದ ಅನೇಕ ಪ್ರಾಣಿಗಳನ್ನು ಕೆಲಸ, ಸಾಗಣೆ, ಸಂರಕ್ಷಣೆ, ಆಹಾರಕ್ಕಾಗಿ ಬಳಸುತ್ತಿದ್ದಾನೆ.
 ಇನ್ನೊಂದು ಮುಖದಿಂದ ನೋಡಿದರೆ ಹಿಂದೂ ಸಮಾಜ ಆಷಾಢಭೂತಿ. ಒಂದು ಕಡೆ ದೇವಿಯನ್ನು ಪೂಜಿಸುತ್ತದೆ; ಇನ್ನೊಂದು ಕಡೆ ಮಹಿಳೆಯರು ನಿಷ್ಪ್ರಯೋಜಕರು ಎಂದು ಪರಿಗಣಿಸುತ್ತದೆ, ಅವರನ್ನು ಜೀವಂತ ಸುಡಲಾಗುತ್ತದೆ.

ಹಾಲು ಇತ್ಯಾದಿ ಕೊಡುವುದರಿಂದ ಗೋವು ನಮಗೆ ಪವಿತ್ರ. ಆದರೆ ಆಡು, ಕುರಿ, ಎಮ್ಮೆಗಳೇಕೆ ಅದರಷ್ಟು ಪವಿತ್ರ ಅಲ್ಲ? ಅವೂ ಹಾಲು ಕೊಡುತ್ತವಲ್ಲ. ಅವನ್ನು ಕೊಂದರೆ ತಪ್ಪಲ್ಲ, ಆಕಳನ್ನು ಮಾತ್ರ ಕೊಲ್ಲಬಾರದು ಎಂಬ ಇಬ್ಬಂದಿತನ ಯಾಕೆ? ಸಸ್ಯಗಳಿಗೂ ಜೀವ ಇದೆ, ಅವಕ್ಕೂ ನೋವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಆದರೂ ತಾವು ತರಕಾರಿ ಸೇವಿಸುತ್ತೇವೆ. ಯಾಕೆ?


ವಿಶ್ವದ ಇತರೆಲ್ಲ ನಾಗರಿಕತೆಗಳಲ್ಲಿ ರೂಢಿಯಲ್ಲಿ ಇದ್ದಂತೆ ನಮ್ಮ ಪೂರ್ವಿಕರೂ ಗೋಮಾಂಸ ಸೇವಿಸುತ್ತಿದ್ದರು ಎನ್ನಲು ಬೇಕಾದಷ್ಟು ಪುರಾವೆಗಳಿವೆ.  ಈಗ ವಿಷಯ ಅದಲ್ಲ.


`ಹಿಂದೆ ಗೋಮಾಂಸ ತಿನ್ನುತ್ತಿದ್ದರು; ಆದ್ದರಿಂದ ಅದೇನು ಹೊಸತಲ್ಲ, ಅದನ್ನು ಒಪ್ಪದಿರಲು ಕಾರಣವಿಲ್ಲ` ಎಂದು ಇಲ್ಲಿ ವಾದಿಸುತ್ತಿಲ್ಲ. ಆದರೆ ಭಾರತದ ದಲಿತ ಮತ್ತು ತುಳಿತಕ್ಕೆ ಒಳಗಾದ ವರ್ಗಗಳ ಪಾಲಿಗೆ ದನದ ಮಾಂಸ ಪೌಷ್ಟಿಕಾಂಶದ ಮತ್ತು ಮಾಂಸಾಹಾರದ ಪ್ರಧಾನ ಮೂಲವಾಗಿತ್ತು.


ಆದಾಗ್ಯೂ ಸಮಾಜದ ಸಣ್ಣ, ಪ್ರಭಾವಶಾಲಿ ವರ್ಗವೊಂದು ದನದ ಮಾಂಸ ಸೇವನೆಯ ಕಾರಣಕ್ಕಾಗಿ ದಲಿತರನ್ನು ಕೀಳಾಗಿ ಪರಿಗಣಿಸಿತು. ವಿಪರ್ಯಾಸ ಎಂದರೆ ಆಕಳು ಜೀವಂತವಾಗಿದ್ದಾಗ ಮಾತ್ರ ಪವಿತ್ರ ಎಂದು ಗೌರವಿಸಿ ಸತ್ತ ನಂತರ ಅದನ್ನು ತುಚ್ಛವಾಗಿ ಕಂಡದ್ದು; ಸತ್ತ ಆಕಳ ಚರ್ಮ ಹದ ಮಾಡಿ ಚಪ್ಪಲಿ ತಯಾರಿಸುವುದರಿಂದ ಹಿಡಿದು ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಮೈಲಿಗೆ ಎಂದು ಕರೆದದ್ದು, ಇದರಲ್ಲಿ ತೊಡಗಿಸಿಕೊಂಡಿದ್ದ ಸಮುದಾಯವನ್ನು ಅಸ್ಪೃಶ್ಯರು ಎಂದು ದೂರ ಇಟ್ಟದ್ದು.

ಸಂಖ್ಯಾಬಲದಲ್ಲಿ ಕಡಿಮೆ ಇದ್ದ ವರ್ಗ ಶತಶತಮಾನಗಳಿಂದಲೂ ತಾನು ರೂಪಿಸಿದ ಮೌಲ್ಯ, ಆಚರಣೆಗಳನ್ನು ಬಹುಸಂಖ್ಯಾತರ ಮೇಲೆ ಹೇರುತ್ತ, ಮಾಂಸಾಹಾರಿಗಳನ್ನು ಅದರಲ್ಲೂ ವಿಶೇಷವಾಗಿ ಗೋಮಾಂಸ ತಿನ್ನುವವರನ್ನು ಪಿಶಾಚಿಗಳು ಎಂಬಂತೆ ಬಿಂಬಿಸುತ್ತ ಬಂತು.


ದಲಿತರು ಕೀಳು, ತಾವು ಮೇಲು ಎಂದು ಮಿಥ್ಯೆ ಸೃಷ್ಟಿಸುತ್ತಲೇ ಬಂದ ಬ್ರಾಹ್ಮಣರು ಮತ್ತು ಅವರನ್ನು ಓಲೈಸುತ್ತಿದ್ದ ಮೇಲ್ಜಾತಿಯವರು ಆಹಾರವನ್ನು, ಮುಖ್ಯವಾಗಿ ಗೋಮಾಂಸ ಭಕ್ಷಣೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸುತ್ತಲೇ ಬಂದರು.


ದಲಿತರು ತಿನ್ನುವ ಆಹಾರ `ಕೊಳಕು`, ಆದ್ದರಿಂದ ಅವರು ಕೊಳಕರು, ಅದಕ್ಕಾಗಿ ಅಸ್ಪೃಶ್ಯರು ಎಂಬ ಹಣೆಪಟ್ಟಿ ಅಂಟಿಸಿದರು. ದಮನಕ್ಕೆ ಒಳಗಾದ ಅಸಹಾಯಕರ ಮೇಲೆ ಇದಕ್ಕಿಂತ ಹೀನಾಯ ಕ್ರೌರ್ಯ ಎಸಗಿದ ಉದಾಹರಣೆ ಜಗತ್ತಿನಲ್ಲೆಲ್ಲೂ ನೋಡಲು ಸಿಗಲಿಕ್ಕಿಲ್ಲ.

ವಿಶ್ವದ ಅತ್ಯಂತ ದೊಡ್ಡ ಮತ್ತು ಬಲಿಷ್ಠ ಪ್ರಜಾಸತ್ತೆ ಎಂದು ಬೆನ್ನು ಚಪ್ಪರಿಸಿಕೊಳ್ಳುವ ನಮ್ಮ ದೇಶದಲ್ಲಿ ಇಂಥ ಸಾಂಸ್ಕೃತಿಕ ವಸಾಹತುಶಾಹಿ ಧೋರಣೆ ಸ್ವೀಕಾರಾರ್ಹವಲ್ಲ. ಆಹಾರ ಅವರವರ ಸಂಸ್ಕೃತಿಯ ಸಹಜ ಅಭಿವ್ಯಕ್ತಿ. ಸೂಕ್ಷ್ಮ ಮತ್ತು ವೈಯಕ್ತಿಕವೂ ಹೌದು.


ಅದು ಮಾರ್ಪಡಿಸಲಾಗದ ಅಸ್ತಿತ್ವದ ಸಂಕೇತ. ಇನ್ನೊಬ್ಬರ ಆಹಾರ ಪದ್ಧತಿಗಳನ್ನು ತುಚ್ಛವಾಗಿ ಕಾಣುತ್ತ ತಮ್ಮ ಆಹಾರ ವಿಧಾನ ಹೇರುವುದು ವಸಾಹತುಶಾಹಿಗಿಂತ ಕಡಿಮೆಯೇನಲ್ಲ. ಪಾರಂಪರಿಕವಾಗಿ ದನದ ಮಾಂಸ ಸೇವಿಸುವ ವರ್ಗದ ಆಹಾರ ಆಯ್ಕೆಯ ಹಕ್ಕು ಹರಣ, `ನಮ್ಮದು ವೈವಿಧ್ಯಮಯ ಸಂಸ್ಕೃತಿ` ಎಂಬ ಬಡಾಯಿಗೆ ವಿರುದ್ಧ.

ಕೆಲ ವರ್ಷಗಳ ಹಿಂದೆ ಅಮೆರಿಕದ ಸಿದ್ಧ ಆಹಾರ ಕಂಪೆನಿಯೊಂದು ಬೆಳಗಿನ ಉಪಾಹಾರ ಬಿಡುಗಡೆ ಮಾಡಿತ್ತು, ಭಾರತೀಯರ ತಿನಿಸಿಗಿಂತ ಶ್ರೇಷ್ಠ ಎಂದು ಪ್ರಚಾರ ಮಾಡಿತ್ತು. ವಿವೇಚನೆಯುಳ್ಳ ಭಾರತೀಯರ ಬಲವಾದ ವಿರೋಧಕ್ಕೆ ಮಣಿದು ತನ್ನ ಜಾಹೀರಾತು ವಾಪಸ್ ಪಡೆಯಬೇಕಾಯ್ತು. ಆದರೆ ದಲಿತರ ಆಹಾರವಾದ ದನದ ಮಾಂಸ ನೂರಾರು ವರ್ಷಗಳಿಂದ ವಿರೋಧದ ಭಯ ಇಲ್ಲದೆ ಹೀಯಾಳಿಕೆಗೆ ಒಳಗಾಗುತ್ತ ಬಂದಿದೆ.


ಅದಕ್ಕಾಗಿಯೇ ಹೈದರಾಬಾದ್‌ನ ಉಸ್ಮಾನಿಯಾ ವಿವಿಯ ದಲಿತ ಮತ್ತು ಬಹುಜನ ಸಮಾಜದ ವಿದ್ಯಾರ್ಥಿಗಳು `ದನದ ಮಾಂಸ ಉತ್ಸವ` ಮಾಡಿದ್ದು. ಇವರ ಆಹಾರದ ಹಕ್ಕಿಗೆ ವಿವಿಧ ವಿವಿಗಳಲ್ಲಿ ಕೋಮುವಾದಿಗಳ ಅಡ್ಡಿ ಇದ್ದೇ ಇದೆ. ಕಳೆದ ವರ್ಷ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿವಿಯ ವಿದ್ಯಾರ್ಥಿಗಳು ಇದನ್ನು ಮುರಿದಿದ್ದರು.


ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿಗಳು ಅನೇಕ ವರ್ಷದಿಂದ ದನದ ಮಾಂಸ ಉತ್ಸವ ನಡೆಸುತ್ತ ಬಂದಿದ್ದಾರೆ. ಈ ಸಲದ್ದು ಉಸ್ಮಾನಿಯಾ ವಿವಿ ಸರದಿ. ಇಲ್ಲಿ ದನದ ಮಾಂಸ ಉತ್ಸವ ಯಶಸ್ವಿಯಾಗೇ ನಡೆಯಿತು.

ಇದು ಆಹಾರದ ಹಕ್ಕು ಉಳಿಸಿಕೊಳ್ಳುವ ದಲಿತ ವಿದ್ಯಾರ್ಥಿಗಳ ಸುದೀರ್ಘ ಹೋರಾಟದ ಮೊದಲ ಹೆಜ್ಜೆ. ತಮ್ಮ ಸಂಸ್ಕೃತಿಯಿಂದ ದೂರ ತಳ್ಳುವ ಪ್ರಯತ್ನಗಳಿಗೆ ಸುಶಿಕ್ಷಿತ ದಲಿತ ಯುವ ಪೀಳಿಗೆ ಸವಾಲು ಹಾಕಿದೆ. ದನದ ಮಾಂಸ ತಿನ್ನುವ ಹಕ್ಕನ್ನು ಬಲವಾಗಿ ಪ್ರತಿಪಾದಿಸುವುದು ತಮ್ಮತನ ಉಳಿಸಿಕೊಳ್ಳುವುದರ ಸಂಕೇತ.


ಆಹಾರದ ವಿಷಯದಲ್ಲಿ ತಮ್ಮ ಆಯ್ಕೆ ಗೌರವಿಸಬೇಕು ಎಂಬ ಅವರ ಬೇಡಿಕೆ ಸಮರ್ಥನೀಯ. ದೇಶಾದ್ಯಂತ ಇರುವ ಹಾಸ್ಟೆಲ್‌ಗಳು ದಲಿತ ವಿದ್ಯಾರ್ಥಿಗಳ ಆಹಾರ ಪದ್ಧತಿಗೂ ಅವಕಾಶ ಕೊಡಲೇಬೇಕು.

ಡಾ. ಆರ್. ಅಖಿಲೇಶ್ವರಿ

ಕೃಪೆ : ಪ್ರಜಾವಾಣಿ



No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.