Tuesday, April 17, 2012

ಸಾಹಿತ್ಯ ಪರಿಷತ್ತಿನ ಗೌರವದ ಪ್ರಶ್ನೆ

ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿರುವ ಬಹುದೊಡ್ಡ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಸರ್ ಎಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ದೂರದೃಷ್ಟಿಯ ಮುತ್ಸದ್ಧಿಗಳ ಪ್ರೇರಣೆಯಿಂದ 1915ರಲ್ಲಿ ಅಸ್ತಿತ್ವಕ್ಕೆ ಬಂದ ಪರಿಷತ್ತು ಶತಮಾನೋತ್ಸವದ ಹೊಸ್ತಿಲಲ್ಲಿದೆ.

ಆರಂಭದ ದಶಕಗಳಲ್ಲಿ ನೂರರ ಸಂಖ್ಯೆಯಲ್ಲಿದ್ದ ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಲಕ್ಷ ಮೀರಿದೆ. ಬರುವ 29ರಂದು ಅಧ್ಯಕ್ಷರ ಸ್ಥಾನಕ್ಕೆ ನೇರ ಚುನಾವಣೆ ನಡೆಯಲಿದ್ದು ಈಗಾಗಲೇ ಸ್ಪರ್ಧಾಳುಗಳ ಪ್ರಚಾರ ಭರಾಟೆ ಸಾಗಿದೆ.


ಪರಿಷತ್ತಿಗೆ ಸರ್ಕಾರದ ಉದಾರ ಆರ್ಥಿಕ ನೆರವು ಕೋಟಿಗಳಲ್ಲಿದೆ ಮತ್ತು ಪರಿಷತ್ತಿನ ವ್ಯಾಪ್ತಿ ರಾಜ್ಯದ ಗಡಿಯನ್ನು ಮೀರಿ ಕನ್ನಡಿಗರು ಬದುಕು ಅರಸಿಕೊಂಡ ಜಗತ್ತಿನಾದ್ಯಂತ ವಿಸ್ತರಿಸಿದೆ.


ಆದ್ದರಿಂದ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಾಂಸ್ಕೃತಿಕವಾಗಿ ಗುರುತರ ಹೊಣೆಗಾರಿಕೆ ಇದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಜಿಲ್ಲಾ ಘಟಕಗಳಿಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿ ಬಯಲಾಗುತ್ತಿರುವ ವಿವರಗಳು ಕನ್ನಡಿಗರಲ್ಲಿ ವಿಷಾದ ಭಾವಕ್ಕೆ ಎಡೆಕೊಡುವಂತಿವೆ.


ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿಯೇ ಚುನಾವಣೆ ನಡೆಯುತ್ತಿದೆಯಾದರೂ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳಿರುವುದು ನಿವಾರಣೆಯಾಗಿಲ್ಲ. ಮೃತಪಟ್ಟವರ ಹೆಸರುಗಳು ಉಳಿದುಕೊಂಡಿರುವುದು, ಎರಡೆರಡು ಕಡೆ ಮುದ್ರಿತವಾಗಿರುವುದು ಮತದಾನದಲ್ಲಿ ಅಕ್ರಮ ನಡೆಯುವ ಸಾಧ್ಯತೆಯನ್ನು ಸೂಚಿಸಿವೆ.
ಮತದಾರರನ್ನು ಓಲೈಸುವುದಕ್ಕೆ ಜಾತಿ ಮತ್ತು ಇತರೆ ಪ್ರಭಾವಗಳನ್ನು ಪ್ರಚಾರದಲ್ಲಿ ಬಳಸುತ್ತಿರುವ ವಿವರಗಳು ಈ ಚುನಾವಣೆಯನ್ನು ತೀವ್ರ ಪೈಪೋಟಿಯ ಸ್ಪರ್ಧಾಕಣವನ್ನಾಗಿ ಪರಿವರ್ತಿಸಿದೆ.

ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಆಗುತ್ತಿರುವ ವೆಚ್ಚವೂ ಪರಿಷತ್ತಿನ ಮುಂದಿನ ಕಾರ‌್ಯನಿರ್ವಹಣೆಯ ವಿಧಾನದ ಬಗ್ಗೆ ಆತಂಕ ಮೂಡಿಸುವಂತಿದೆ.


ಲಕ್ಷಕ್ಕೂ ಮೀರಿದ ಮತದಾರರು ರಾಜ್ಯದಾದ್ಯಂತ ಹರಡಿರುವುದರಿಂದ ಅವರನ್ನು ಸಾಮಾನ್ಯ ಅಂಚೆಯ ಮೂಲಕ ಮನವಿ ಮಾಡಿ ಸಂಪರ್ಕಿಸುವುದಕ್ಕೆ ಕನಿಷ್ಠ ಹತ್ತು ಲಕ್ಷ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗುತ್ತಿರುವುದು ಈ ಚುನಾವಣೆಗೆ ಸಾರ್ವತ್ರಿಕ ಚುನಾವಣೆಯ ಸ್ವರೂಪವನ್ನು ನೀಡಿದೆ.


ಕೆಲವು ಅಭ್ಯರ್ಥಿಗಳು ಮತದಾರರು ಮತ್ತು ಚುನಾವಣಾ ಪ್ರಚಾರಕರನ್ನು ಓಲೈಸುವುದಕ್ಕೆ ಭೋಜನಕೂಟದ ಸಮಾವೇಶಗಳನ್ನು ಏರ್ಪಡಿಸುತ್ತಿರುವ ವರದಿಗಳೂ ಇವೆ.


ಪ್ರಚಾರಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಅಭ್ಯರ್ಥಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಚುನಾವಣೆಗೆ ಆಗಿರುವ ಖರ್ಚನ್ನು ಪರಿಷತ್ತಿನ ಯೋಜನೆಗಳಿಂದ ತುಂಬಿಕೊಳ್ಳಲು ಮುಂದಾಗಲಾರರೆಂದು ಹೇಳಲಾಗದು.


ಹಣ ಮತ್ತು ಜಾತಿಯ ಪ್ರಭಾವವೇ ಪರಿಷತ್ತಿನ ನೇತೃತ್ವ ವಹಿಸುವುದಕ್ಕೆ ಅರ್ಹತೆ ಆಗುವಂಥ ಸ್ಥಿತಿಗೆ ಪರಿಷತ್ತಿನ ಸದಸ್ಯರು ಅವಕಾಶ ನೀಡಿದರೆ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಸಾಂಸ್ಕೃತಿಕ ವೇದಿಕೆಯಾಗಿ ಉಳಿಯುವುದಿಲ್ಲ.

ಕನ್ನಡದ ಬಳಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಭಾಷೆಯ ಉಳಿವಿಗೆ ಅಗತ್ಯವಾದ ಗೌರವಾಭಿಮಾನವನ್ನು ಜನತೆಯಲ್ಲಿ ಮೂಡಿಸಬಲ್ಲ ಚೈತನ್ಯಶಾಲಿ ವರ್ಚಸ್ಸು ಪರಿಷತ್ತಿನ ನಾಯಕತ್ವಕ್ಕೆ ಇಂದು ಬೇಕಾಗಿದೆ.

ನಾಡವರ ಹೆಮ್ಮೆ ಮತ್ತು ಅಭಿಮಾನದ ಸ್ವತಂತ್ರ ಸಂಸ್ಥೆಯಾಗಿ ಪರಿಷತ್ತನ್ನು ಬೆಳೆಸುವ ಕ್ರಿಯಾಶೀಲ ನೇತೃತ್ವವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ವಿವೇಕವನ್ನು ಮತದಾರರು ಪ್ರದರ್ಶಿಸಬೇಕಿದೆ.
ಕೃಪೆ : ಪ್ರಜಾವಾಣಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.