Sunday, May 05, 2013

ಸಾಹಿತಿಗಳ ರಾಜಕೀಯ ಚರ್ಚೆ ತಪ್ಪಲ್ಲ. ಆದರೆ,....


ಡಾ. ಕೆ.ಎನ್.ದೊಡ್ಡಮನಿ, ಬೆಳಗಾವಿ
ಸಾಹಿತಿಗಳು ರಸಾನುಭವ ಒದಗಿಸುವ ಮನರಂಜನೆಯ ಗೊಂಬೆಗಳಲ್ಲ. ಬರವಣಿಗೆ ಸಾಮಾಜಿಕ ಜವಾಬ್ದಾರಿ ಹೊತ್ತುಕೊಂಡಿದ್ದರೆ ಮಾತ್ರ ಅದನ್ನು ಸಾಹಿತ್ಯ ಎಂದು ಪರಿಗಣಿಸಲಾಗುತ್ತಿದೆ.  ಸಾಹಿತಿಗಳ ಸಾಂಸ್ಕೃತಿಕ ತೀಕ್ಷಣ ವಿವೇಚನೆಯ ಪ್ರಸ್ತುತ ಸಂದರ್ಭದಲ್ಲಿ  ಸಾಮಾಜಿಕ ಬದುಕನ್ನು ನಿರ್ಣಯಿಸುವ ರಾಜಕೀಯ ಸನ್ನಿವೇಶವನ್ನು ಚರ್ಚಿಸುವುದು ಬೌದ್ಧಿಕ ವಲಯದ ಆದ್ಯಕರ್ತವ್ಯ. ಈ ಕಾರಣಕ್ಕಾಗಿ ಪ್ರಸ್ತುತ ಚುನಾವಣೆಯ ಸಂದರ್ಭದಲ್ಲಿ ಸಾಹಿತಿಗಳು ರಾಜಕೀಯ ನಿರ್ಧಾರದ ವಿವಿಧ ಆಯಾಮಗಳನ್ನು ಚರ್ಚಿಸುವುದು ತಪ್ಪಲ್ಲ. ಆದರೆ, ಈ ಸಾಹಿತಿಗಳು ಯಾವ ಹಿನ್ನಲೆ ಮತ್ತು ಉದ್ದೇಶದ ದೃಷ್ಟಿಯಿಂದ ಚರ್ಚಿಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ.

ಇಂದು ಭಾರತದಲ್ಲಿನ ಯಾವ ಪಕ್ಷಗಳೂ ಪಾವಿತ್ರ್ಯತೆಯನ್ನು ಕಾಯ್ದುಕೊಂಡಿಲ್ಲ. ಹಾಗಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವುಗಳನ್ನು ತಳ್ಳಿ ಹಾಕುವಂತೆಯೂ ಇಲ್ಲ. ಇದ್ದುದರಲ್ಲಿಯೇ ಒಂದಿಷ್ಟು ಸ್ವಚ್ಛತೆಯನ್ನು ಕಾಯ್ದುಕೊಂಡು, ತಮ್ಮ ಅನೈತಿಕತೆಯನ್ನು  ಕಡಿಮೆ ಪ್ರಮಾಣದ ಗುರುತುಗಳನ್ನು ಹೊಂದಿದ ಪಕ್ಷಕ್ಕೆ ಆದ್ಯತೆ ನೀಡುವುದು ಮತದಾರರಿಗೆ ಬಿಟ್ಟ ವಿಷಯ.  ಪ್ರಜ್ಞಾವಂತ ಮತದಾರರಿಗೆ ಈ ಹಿನ್ನಲೆಯಲ್ಲಿ ಬುದ್ದಿವಂತ ಸಾಹಿತಿಗಳು ತಿಳಿಸಿ ಹೇಳುವುದು ತಪ್ಪೇನಿಲ್ಲ. ಆದರೆ, ಸಮಾಜದಲ್ಲಿ ಗೌರವಸ್ಥಾನ ಹೊಂದಿರುವ ಈ ಬುದ್ಧಿವಂತರು ಮತದಾರರನ್ನು ಒಂದು ಪಕ್ಷದ ಪರ ನೇರವಾಗಿ ಬಲವಂತ ಪಡಿಸುವುದು ಪ್ರಜಾಪ್ರಭುತ್ವಕ್ಕೆ ಬಗೆಯುವ ಹೀನಾಯ ಅಪರಾಧ.

ಕೋಮವಾದಿ ಶಕ್ತಿಯನ್ನು  ಅಧಿಕಾರಕ್ಕೆ ಬರಗೊಡಬಾರದು ಎಂಬುದು ಕೆಲ ಸಾಹಿತಿಗಳ ವಾದ. ಆದರೆ, ಇಂದು ರಾಜಕೀಯ ಪಕ್ಷಗಳ ಕೋಮವಾದ ನಿಲುವೊಂದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿಲ್ಲ. ಭ್ರಷ್ಟಾಚಾರ ಅದಕ್ಕಿಂತ ಭಯಂಕರ ಸ್ವರೂಪದಲ್ಲಿ ಸಾಮಾನ್ಯ ಜನರನ್ನು ಹೊಸಕಿ ಹಾಕುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನೇ ದಿವಾಳಿ ಎಬ್ಬಿಸಿ, ದುಡಿಯುವ ವರ್ಗದ ಶ್ರವನ್ನು ಅವ್ಯಾಹತವಾಗಿ ಲೂಟಿ ಮಾಡುವ ವ್ಯವಸ್ಥೆ ನಿರ್ಮಾಣಗೊಂಡಿದೆ. ಇಂದು ದೇಶವನ್ನು ಮುಕ್ಕಿ ತಿನ್ನುತ್ತಿರುವುದು ಕೋಮುವಾದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ. ಭಾರತ ಜಾತಿಗಳ ಗೂಡಾಗಿರುವುದರಿಂದ ರಾಜಕೀಯ ನಿರ್ಣಾಯಕತ್ವದಲ್ಲಿ ಜಾತಿಗಳೇ ಪ್ರಧಾನ ಪಾತ್ರ ವಹಿಸುತ್ತಿರುವಾಗ ಕೋಮುವಾದ ತನ್ನ ಸ್ಥಾನ ಸಹಜವಾಗಿ ಪಡೆದುಕೊಳ್ಳುತ್ತದೆ. ಆದರೆ, ಕೋಮುವಾದಕ್ಕಿಂತ ಭ್ರಷ್ಟಚಾರ ದೊಡ್ಡ ಶಾಪವಾಗಿ ಕಾಡುತ್ತಿದೆ. ಬುದ್ಧಿವಂತ ಬಹುತೇಕ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಕೋಮಭಾವನೆಯೇ ಎದ್ದು ಕಾಣುತ್ತಿದೆಯೇ ಹೊರತು ಭ್ರಷ್ಟಾಚಾರ ಅರಿವಿಗೆ ಬರುತ್ತಿಲ್ಲ. ಅನ್ನ, ಆಶ್ರಯದೊಂದಿಗೆ ಸುಖಮಯ ಬದುಕು ಪಡೆದುಕೊಂಡವರಿಗೆ ಭ್ರಷ್ಟಾಚಾರ ಅರಿವಿಗೆ ಬರುವುದು ತೀರ ಕಡಿಮೆ.

ಪರಿಸ್ಥಿತಿ ಹೀಗಿರುವಾಗ ಯಾವದೋ ನಿರ್ದಿಷ್ಟ ಪಕ್ಷವೊಂದರ ಪರವಾಗಿ ಗೌರವಾನ್ವಿತ  ಸಾಹಿತಿಗಳು ಬಹಿರಂಗವಾಗಿ ‘ಇಂಥ ಪಕ್ಷಕ್ಕೆ ಮತ ನೀಡಿ’ ಎಂದು ಒತ್ತಾಯಿಸುವುದು ಅವರ ಸುಪ್ತ ಮನಸ್ಥಿತಿಗೆ ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದನ್ನು ಅವರೇ ವಿಚಾರ ಮಾಡಬೇಕಾದ ಅಗತ್ಯವಿದೆ. 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.