Monday, May 27, 2013

ಹಂಬಲಿಸಿ ಉಂಡ ಅಂಬಲಿ


- ಸುಜಾತಾ ಕುಮಟಾ

ನಾಳೆಯ ಸೂರ್ಯನ ಕಂಡೆ
ಸಿಗಲಿಲ್ಲ ಇತ್ತು ಬೇಕೆಂಬ ಹಂಬಲ
ಯಾವ ಬಯಕೆ ಬೇಡಿದಿಯೋ ಬೆಂಬಿಡದೆ
ಕಾಡುತ್ತಿದೆ ಮಾಯೆಯಂತೆ
ಓಡಾಡಿಸುತ್ತಿದೆ ವೇಗದಲಿ ಹಿಂಬಾಲಿಸಿ
ನಾಶವಾಗದ ನೆಲದಲ್ಲಿ ಪಾದದ ರೇಖೆ !
ಮುಡಿ ಮಣ್ಣ ಮೇಲೆ
ಹಂಬಲಿಸಿ ಜೀವ ಚೈತನ್ಯಕೆ
ಕಾರ್ಗತ್ತಲಲ್ಲೂ ಮಿಂಚು ಹುಳ !
ಮಿಡಿವ ಒಡಲಲ್ಲಿ ಕಂದ ಮಿಸುಕಾಡಿದೆ
ಎಷ್ಟು ಸಂಜೆ ಸೂರ್ಯ ವಿರಮಿಸಿತ್ತು ?
ಪಾರಿಜಾತದ ಗಿಡ ಮೈಕೊಡವಿ
ಹೂ ಚೆಲ್ಲಿದ ನೆಲದಲ್ಲಿ ಪದ
ಆಗಸದ ಅಂಚಿಗೆ ಕಣ್ಣಗಲಿಸಿ ಘಮದ ಹಾದಿಯಲ್ಲಿ
ನೆನಪು ಮೈ ಚೆಲ್ಲಿದೆ !
ಬರದು ಆದರೂ ಮರುಕಳಿಸಿದೆ
ನಿಟ್ಟುಸಿರ ರಾತ್ರಿ ಕಾತರದ ಬೆಳಗು
ಬದುಕು ನಿಲ್ಲುವುದಿಲ್ಲ ಸುಳಿಗೆ
ಆತುಕೊಳ್ಳಬೇಕು ಆಯಾಸಕ್ಕೆ
ನಿರಾಕರಣೆ ಹಂಬಲ ...
ನೆಲದ ಬಯಕೆಗೆ ವಾರಸುದಾರನಿಲ್ಲ
ಚೆಂದಿರನಿಗೆ ಮುಖಮಾಡಿ ಉಕ್ಕಿದೆ
ಮೌನದ ಪಿಸು ಮಾತು !
ಕತ್ತಲೆಗೆ ಕರುಣೆಯಿಲ್ಲ
ರೆಪ್ಪೆ ಅರಳಿದ ನಗು ನಸುಕು

ಆಸೆಯೊಂದೇ ನನಗೆ
ಸೂರ್ಯ ತರುತ್ತಾನೆ ಹಂಬಲದ ಬುತ್ತಿ !
ನಿಮಗೇನು ಬೇಕು ?
ಹರಿ ಬಿಡುತ್ತೇನೆ ಹಾರು ನೀ ಸ್ವಚ್ಛಂದ 

ಖಾಲಿಗೂಡು ಸಂಜೆ ಬರೀದಾದಾಗ ಬಾ
ಹಾ ! ಚಡಪಡಿಸುವ ಹಕ್ಕಿ 

ಗೂಡು ಸೇರಿ ಮಲಗಿತೇನೋ
ತಳಮಳದ ಹಾಸಿಗೆಯಲ್ಲಿ ನಿದ್ದೆಯಪ್ಪುಗೆಯಲಿ
ಹಂಬಲದ ಹಚ್ಚಡ ಹೊದ್ದು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.