Wednesday, July 25, 2012

ವಡ್ಡರ ವೇದನೆ ; ನನ್ನ ಮಾತು !


'ಉಚಲ್ಯಾ' ಆತ್ಮಕತೆಯ ಮೂಲಕ ನಮ್ಮೆಲ್ಲರಿಗೆ ಪರಿಚಿತವಾಗಿರುವ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡ ಅವರ 'ವಡಾರ ವೇದನಾ' ಎನ್ನುವ ಕಾದಂಬರಿಯನ್ನು 'ವಡ್ಡರ ವೇದನೆ' ಎಂಬುದಾಗಿ ನಾನು ಕನ್ನಡೀಕರಿಸಿದ್ದೇನೆ. (ಕಣ್ವ ಪ್ರಕಾಶನ, ಬೆಂಗಳೂರು : 2011) ಆ ಕಾದಂಬರಿಯಲ್ಲಿ ನಾನು ಹೇಳಿದ ಮಾತುಗಳು ಇಲ್ಲಿವೆ ...

ಸೃಜನ ಮತ್ತು ಸೃಜನೇತರ ಎಂದು ವಿಭಾಗಿಸಿ ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಅದನ್ನೇ ಮುಂದಿಟ್ಟುಕೊಂಡು ಅದು ಹೆಚ್ಚು ; ಇದು ಕಡಿಮೆ ಎನ್ನುವಂತಹ ವಾದಗಳಿಗೆ ಜೋತು ಬಿದ್ದರೆ ಅದು ಕೇವಲ ಒಣ ಹರಟೆಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅನುವಾದವನ್ನು ಸೃಜನೇತರ ಸಾಹಿತ್ಯವೆಂದು ಅಲ್ಲಗಳೆಯುವ, ಅನನುಮಾನಿಸುವ, ಅವಹೇಳನ ಮಾಡುವ, ಅಣಕಿಸಿ ಕಿಚಿಪಿಚಿ ಎನ್ನುವವರಿಗೆ ಈ ಮಾತನ್ನು ಅನ್ವಯಿಸಿ ಹೇಳಲಾಗಿದೆ. ಅನುವಾದವೂ ಒಂದು ಕಲೆಯಾಗಿರುವಾಗ ಅದನ್ನು ಸೃಜನೇತರ ಎನ್ನುವುದು ಏಕೆ ಎಂಬುದೇ ತಿಳಿಯುತ್ತಿಲ್ಲ. ಅನುವಾದವೂ ಕೂಡ ಒಂದು ಸೃಜನಶೀಲವಾದ ಸಾಹಿತ್ಯವೇ ಆಗಿದೆ. ಸ್ವತಃ ಬರೆಯುವುದು ಶ್ರೇಷ್ಟವೆಂದೂ ಬೇರೆ ಭಾಷೆಯಿಂದ ಅನುವಾದ ಮಾಡುವುದು ಕನಿಷ್ಟವೆಂದು ಪರಿಭಾವಿಸುವಿಕೆ ಕೇವಲ ಮೂರ್ಖತನವಾಗುತ್ತದೆ ಅಷ್ಟೆ.
ಅನುವಾದವನ್ನು ಯಾರು ಬೇಕಾದರೂ ಮಾಡಬಹುದು ಎಂಬ ಕಲ್ಪನೆಯೇ ತಪ್ಪು. ಒಬ್ಬ ಅನುವಾದಕ ತನ್ನ ಸಂಸ್ಕೃತಿಯ ಜೊತೆಗೆ ಅನುವಾದಿಸಬೇಕಾದ ಕೃತಿಯಲ್ಲಿರುವ ಸಂಸ್ಕೃತಿಯನ್ನೂ ಅರಿಯಬೇಕಾಗುತ್ತದೆ. ಕೇವಲ ಅರಿಯುವುದು ಮಾತ್ರವಲ್ಲ ; ಅದರಲ್ಲಿ ಪರಕಾಯ ಪ್ರವೇಶ ಪಡೆಯಬೇಕಾಗುತ್ತದೆ. ಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜಾಯಮಾನವನ್ನು ಅರಿಯದೇ ಮಾಡುವ ಅನುವಾದ, ಅನುವಾದ ಎನಿಸಿಕೊಳ್ಳಲಾರದು. ಒಳ್ಳೆಯ ಅನುವಾದ ಈ ಗ್ರಹಿಕೆಯನ್ನು ಅನುಸರಿಸುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಾಹಿತ್ಯ ಅನುವಾದವಾಗುವಾಗ ಮೂಲ ಲೇಖಕನ ಅನುಭವಗಳ ಮೂಲವನ್ನೂ ತಿಳಿದುಕೊಳ್ಳುವ ಪ್ರಯತ್ನವನ್ನು ಅನುವಾದಕ ಮಾಡಬೇಕಾಗಿರುತ್ತದೆ.
ಮೂಲಕೃತಿಯ ಸಂಸ್ಕೃತಿಯ ಅರಿವು, ಪ್ರಾದೇಶಿಕ, ಸಾಮಾಜಿಕ, ಮತ್ತು ಜನಾಂಗೀಯ ಭಾಷೆಗಳ ಅಧ್ಯಯನ ಮೊದಲಾದ ಅಂಶಗಳನ್ನು ಒಬ್ಬ ಅನುವಾದಕ ಹೊಂದಿದ್ದು, ಸ್ವಭಾಷೆಯಲ್ಲಿ ಅದನ್ನು ತನ್ನದಾಗಿಸಿಕೊಳ್ಳುವ ಕಾರ್ಯತತ್ಪರತೆ ಮೊದಲಾದ ಅಂಶಗಳು ಒಬ್ಬ ಅನುವಾದಕನಲ್ಲಿ ಇದ್ದರೆ ಉತ್ಕೃಷ್ಟವಾದ ಅನುವಾದವೊಂದು ಹೊರಬರಲು ಸಾಧ್ಯವಾಗುತ್ತದೆ. ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿಯೇ ನಾನು ಮರಾಠಿಯನ್ನು ಕನ್ನಡೀಕರಿಸುತ್ತೇನೆ.
ಮರಾಠಿ ದಲಿತ ಸಾಹಿತ್ಯದಲ್ಲಿ ಪ್ರಮುಖವಾಗಿರುವ ಲಕ್ಷ್ಮಣ ಗಾಯಕವಾಡ ಅವರನ್ನು ನಾನು ಭೇಟಿಯಾದಾಗ ಅವರು ವೊಟ್ಟವೊದಲು ಸೂಚಿಸಿದ್ದು ಅವರ ಆತ್ಮಚರಿತ್ರೆ ‘ಉಚಲ್ಯಾ’ವನ್ನು ಮತ್ತೊಮ್ಮೆ ಅನುವಾದಿಸಬೇಕೆಂದು. ಆದರೆ ಈಗಾಗಲೇ ಅದು ಕನ್ನಡಕ್ಕೆ ಬಂದಿರುವುದರಿಂದ ನಾನು ನಿರಾಕರಿಸಿದೆ.  ಆದರೂ ಅವರು ಒತ್ತಾಯ ಮುಂದುವರಿದೇ ಇತ್ತು. ಈಗಲೂ ಫೋನಿಸಿದಾಗ ಅವರು ಅದನ್ನೇ ಹೇಳುತ್ತಾರೆ. ಆಗ ನಾನೇ ಒಂದು ಪ್ರಸ್ತಾಪ ಮಾಡಿ ‘ಉಚಲ್ಯಾ’ ಬಂದ ನಂತರ ಆದ ಅನುಭವಗಳನ್ನೇ ಬರೆಯಿರಿ ; ಬೇಕಾದರೆ ನಾನು ಅದನ್ನು ‘ಆಪ್ಟರ್ ಉಚಲ್ಯಾ’ ಎಂದು ಹೆಸರಿಸಿ ಅನುವಾದ ಮಾಡುತ್ತೇನೆ ಎಂದೆ. ಆಗ ಅವರು ತಮ್ಮ ಮತ್ತೊಂದು ಕೃತಿ, ‘ವಡಾರ ವೇದನಾ’ ಅನುವಾದ ಮಾಡುವಂತೆ ಹೇಳಿದರು. ನಾನು ಖುಷಿಯಿಂದಲೇ ಒಪ್ಪಿಕೊಂಡೆ.
ವಡಾರ ವೇದನಾ ಕಾದಂಬರಿಯನ್ನು ನಾನು ಓದುತ್ತ ಹೋದಂತೆಲ್ಲ ಮೊದ ಮೊದಲು ನನಗೆ ರೋಮಾಂಚನವೇ ಆಯಿತು. ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟಿನ ವಡ್ಡರ ಸಮಾಜದ ಬಗ್ಗೆ ಇರುವ ಕಾದಂಬರಿಯಲ್ಲಿ ಆ ಸಮಾಜದ ಸಂಸ್ಕೃತಿಯ ಚಿತ್ರಣವೂ ಸೇರಿದೆ. ಅನುವಾದಕ್ಕಿಳಿದಾಗ ಒಂದಿಷ್ಟು ಹಿಂಜರಿಕೆ ಕೂಡ ಆಯಿತು. ಯಾಕೆಂದರೆ ಕಾದಂಬರಿಯಲ್ಲಿ ಹೆಚ್ಚಾಗಿ ಬಳಕೆಯಾಗಿದ್ದು ಗ್ರಾಮ್ಯ ಮರಾಠಿ ಭಾಷೆ ಅನ್ನುವುದಕ್ಕಿಂತ ತಳಮಟ್ಟದ ಸಮಾಜವೊಂದರ ಆಡುನುಡಿ ಎನ್ನುವುದು ಸಮಂಜಸವಾದೀತು. ಗೊಂದಲ ಹುಟ್ಟಿಸುವ ಕೆಲ ಕ್ಲಿಷ್ಟ ಪದಗಳು ಯಾವ ಡಿಕ್ಷನರಿಯಲ್ಲಿ ಹುಡುಕಿದರೂ ಸಿಗಲಾರವು. ಜೊತೆಗೆ ಅಲ್ಲಲ್ಲಿ ಮರಾಠಿ ಮಿಶ್ರಿತ ವಡ್ಡರ ಸಮಾಜದ ತೆಲುಗು ಭಾಷೆ ಬೇರೆ !
ನಾನು ಹಠ ಬಿಡಲಿಲ್ಲ ; ಸೋಲು ಒಪ್ಪಿಕೊಳ್ಳುವ ಜಾಯಮಾನವೇ ನನ್ನದಲ್ಲ.  ಕನ್ನಡ-ಮರಾಠಿ ಗಡಿಭಾಗದವನಾದ ನನಗೆ ಮರಾಠಿ ಗ್ರಾಮ್ಯದ ಅನುಭವ ಇತ್ತು. ಜನಾಂಗೀಯ ಭಾಷೆಯ ಒಡನಾಟವೂ ಇತ್ತು. ಜೊತೆಗೆ ತೆಲುಗು ಭಾಷೆಯನ್ನೂ ಅಲ್ಪ-ಸ್ವಲ್ಪ ಕಲಿತಿದ್ದೆ. ಯಾರಾದರೂ ಸಿಕ್ಕರೆ ‘ಏಮ ಚೆಪ್ಪತಾವು ಚೆಪ್ಪು’ ಎಂದೇ ಮಾತನ್ನು ಆರಂಭಿಸುವ ಪರಿಪಾಠವೂ ಬೆಳೆದು ಬಂದಿತ್ತು. ಹೀಗೆ ಎಲ್ಲವೂ ಸಕಾರಾತ್ಮಕ ಅಂಶಗಳಿದ್ದುದ್ದರಿಂದಲೇ ನಾನು ತುಂಬ ಎದೆಗಾರಿಕೆಯಿಂದಲೇ ಅನುವಾದಕ್ಕೆ ಇಳಿದೆ. ಎಲ್ಲ ಸರಾಗವಾಯಿತು ; ಸಾಂಗವಾಗಿ ನೆರವೇರಿತು. ಅನುವಾದಿಸಿದ ಮೇಲೆ ಮತ್ತೊಮ್ಮೆ ಓದಿ ತಿದ್ದುಪಾಟು ಮಾಡಿದೆ. ಮಹಾರಾಷ್ಟ್ರ ನೆಲದಲ್ಲಿ ನಡೆದ ಕನ್ನಡ ಕಥೆಯೇನೋ ಎನ್ನುವಷ್ಟರ ಮಟ್ಟಿಗೆ ಅದನ್ನು ಕಟ್ಟಿದ್ದೇನೆ ಎಂಬ ಸಾರ್ಥಕ ಭಾವವೂ ಮನದಲ್ಲಿ ಸುಳಿದಾಡಿತು.


(ಈ ಅನುವಾದಿತ ಕಾದಂಬರಿಗೆ ಅಮೂಲ್ಯವಾದ ಮುನ್ನುಡಿಯನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ಬರೆದಿದ್ದಾರೆ)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.