Tuesday, January 08, 2013

ಡಾ. ಅಂಬೇಡ್ಕರ್ ಮತ್ತು ನಂತರ.....


                               ಡಾ. ಸಿದ್ರಾಮ ಕಾರಣಿಕ 


ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೌಲ್ವಿಕ ನೀತಿತತ್ವಗಳನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಹೇಳುವ ಹೇರಳ ಜನ, ಆಚರಣೆ ಸಂದರ್ಭದಲ್ಲಿ ಮಾತ್ರ ಇರುವುದೇ ಇಲ್ಲ. ಸಂಪ್ರದಾಯಶೀಲ ಭಾರತದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯ ಹಲವು ಮುಖಗಳೇ ಮುಂದುವರಿದುಕೊಂಡು ಬಂದಿವೆ. ಇಂಥ ಹಲವು ವಿಕೃತಿಗಳಲ್ಲಿ ಜಾತಿಸೃಷ್ಟಿ ಕೂಡ ಒಂದು. ಜಾತಿ ವಿನಾಶದ ಹಾದಿಯಲ್ಲಿ ಹಲವಾರು ಸಂತರು, ಶರಣರು, ವಿಚಾರವಾದಿಗಳು, ಮಹಾತ್ಮರು, ಮುನ್ನಾಳುಗಳು ಹೋರಾಟ ಮಾಡಿದ್ದಾರೆ. ಆ ಹೋರಾಟಗಳ ಫಲ ಒಂದಿಷ್ಟು ಜಾಗೃತಿಯನ್ನೂ ಜನರಲ್ಲಿ ತುಂಬಿದ್ದು ನಿಜ. ಆದರೆ ಜಾತಿಯೆಂಬ ಭೂತ ವಿವಿಧ ರೂಪಗಳಲ್ಲಿ ಮತ್ತೇ ಮತ್ತೇ ಮುಖದೋರುತ್ತ ಹೇಂಕರಿಸುತ್ತಲೇ ಇದೆ. ಭಾರತ ದೇಶದಲ್ಲಿ ಈ ಜಾತಿಯ ಕಾರಣದಿಂದಲೇ ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು ಇನ್ನೂ ಬದುಕುಳಿದು ಭೂತಾಕಾರವಾಗಿ ಬೆಳೆಯುತ್ತಲೇ ಇವೆ ; ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.
    ಡಾ. ಬಾಬಾಸಾಹೇಬ ಅಂಬೇಡ್ಕರ್ ರು ಈ ಜಾತಿ ವಿನಾಶಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದವರು. ಹಿಂದೂ ಧರ್ಮದ ಸನಾತನ ಸಂಪ್ರದಾಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಟುವಾಕ್ಯಗಳಿಂದ ಆ ಧರ್ಮದ ಅಂತರಂಗದಲ್ಲಿದ್ದ ಕೊಳಕನ್ನು ಬಿಚ್ಚಿಟ್ಟಿದ್ದಾರೆ. ಈ ಧರ್ಮದಲ್ಲಿ ಅ
ಸ್ಪೃಶ್ಯರೆನ್ನಿಸಿಕೊಂಡವರ ಬದುಕು ಹಸನಾಗಲು, ಅವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲು ತಮ್ಮ ಕೊನೆ ಉಸಿರಿನವರೆಗೆ ಕ್ರಿಯಾಶೀಲರಾಗಿದ್ದ ಮಹಾನ್ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರರು. ಅಸ್ಪೃಶ್ಯ ಅನುಭವಗಳಿಂದ ರೊಚ್ಚಿಗೆದ್ದ ಅವರು ಅಸ್ಪೃಶ್ಯನ ಗೋಳನ್ನು ಸ್ವತಃ ಕಂಡುಂಡವರು.
    `ಇಡೀ ದೇಶದ ಮೂಲೆ ಮೂಲೆ ಬಿಡದೆ ಎಲ್ಲೆಲ್ಲೂ ಅ
ಸ್ಪೃಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ. ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತು ಕೋಟಲೆಗಳ ನೆರೆಯಲ್ಲಿ ಮೈ ಮುರಿದು ಗೆಯ್ಯುವ ಅಸ್ಪೃಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ.'1 ಎನ್ನುವ ಮೂಲಕ, ಅವರು ಈ ಅನುಭವಗಳ ಮೂಲಕವೇ ಎಚ್ಚರಾಗಿ ಎದ್ದು ನಿಂತು ತಮ್ಮ ಮೇಲೆ ನಡೆಯುವ ಅನ್ಯಾಯವನ್ನು ಮೆಟ್ಟಿ ನಿಲ್ಲಲು  ಅಸ್ಪೃಶ್ಯರು ಸಿದ್ಧರಾಗಬೇಕು ಎಂದು ಕರೆ ನೀಡುತ್ತಾರೆ. ಯಾಕೆಂದರೆ ಯಾವ ಮಹಾತ್ಮಾನಾಗಲೀ ಜಗದ್ಗುರುವಾಗಲೀ ನಿಮ್ಮನ್ನು ಉದ್ಧಾರ ಮಾಡಲಾರರು ; ನಿಮ್ಮ ಉದ್ಧಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕು ಎಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. 
    ಜಾತಿಯಿಂದ ಮೇಲು ಎಂದುಕೊಂಡು ಮೆರೆಯುವ ಮಂದಿಗೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರರು ಎಚ್ಚರಿಕೆ ನೀಡುತ್ತಾರೆ : `ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿ ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ, ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ, ಜಾತಿಯ ತಳಗಳನ್ನಿಟ್ಟುಕೊಂಡು ನೀವು ಏನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ನೆಲೆಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಅದು ಏನೇ ಆಗಿರಲಿ ಬಿರುಕು ಬಿಡುವುದು ; ಅಖಂಡವಾಗಿ ಉಳಿಯಲಾರದು.'2
    ಈ ಮಾತು ಕೆಲವರಿಗಾದರೂ ತಟ್ಟಿರಬಹುದು. ಜಾತಿಯ ಬಲೆಯಿಂದ ಬಿಡಿಸಿಕೊಂಡು ಹೊರಬರಲು ಬಹಳಷ್ಟು ಜನರಿಗೆ  ಸಾಧ್ಯವಾಗಲೇ ಇಲ್ಲ. ಅದು ಇಂದಿನವರೆಗೂ ಸಾಧ್ಯವಾಗಿಲ್ಲ ಎಂದರೆ  ಅಚ್ಚರಿ ಪಡುವ ಇಲ್ಲ. ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು  ಮನಗಂಡ ಡಾ. ಬಾಬಾಸಾಹೇಬರು ಹೋರಾಟವನ್ನು ತೀವ್ರಗೊಳಿಸಿದರು. `ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು .............. ಹಿಂದೂ ಧರ್ಮವು ಸ್ವತಃ ಅಸ್ಪøಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೇ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ ಪವಾಡಕ್ಕೆ ಕಾಯುವುದೂ ಒಂದೇ'3
    ಹಿಂದೂ ಧರ್ಮದ ಕುತಂತ್ರ ಮತ್ತು ಒಳಸಂಚಿನ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಅನುಭವದ ಮೂಲಕ ಕಂಡುಕೊಂಡ ಸತ್ಯ ಇದಾಗಿತ್ತು. ಡಾ. ಬಾಬಾಸಾಹೇಬರಿಗೆ ಹಿಂದೂ ಧರ್ಮದಲ್ಲಿರುವ ಪೊಳ್ಳುತನ, ನಯವಂಚಕತೆ ಮತ್ತು ಮೋಸಗಾರಿಕೆಗಳ ಪರಿಪೂರ್ಣ ಪರಿಚಯವಾಗಿತ್ತು. ಹೀಗಾಗಿಯೇ ಹೇಸಿಗೆ ಹುಟ್ಟಿಸುವಷ್ಟು ತಾರತಮ್ಯ ಹೊಂದಿದ ಸಮಾಜದ ವರ್ತನೆಯಿಂದ ಬೇಸತ್ತು ಅ
ಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಿಸಿಯೇ ಬಿಟ್ಟರು.
    `ಅ
ಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳಿಗೆ ತಾವು ಮತ್ತು ಅಸ್ಪೃಶ್ಯರು ಒಂದೇ ಸಮಾಜಕ್ಕೆ ಸೇರಿದವರು ಎಂಬ ಭಾವನೆ ಬರುವುದಿಲ್ಲ. ಈ ಕಾರಣದಿಂದಾಗಿಯೇ ಅಸ್ಪೃಶ್ಯರೊಂದಿಗಿನ ಹಿಂದೂಗಳ ನಡವಳಿಕೆಯಲ್ಲಿ ಯಾವ ನೈತಿಕ ಕಾಳಜಿಗಳಿಲ್ಲದ ಅಸಡ್ಡೆ ವ್ಯಕ್ತವಾಗುತ್ತದೆ'4 ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೀಗಾಗಿಯೇ ಹಿಂದೂ ಧರ್ಮ ತಮ್ಮದು ಎಂದು ಹೇಳಿಕೊಳ್ಳಲು ಯಾವ ಹೆಮ್ಮೆಯೂ ಇಲ್ಲ ; ಅದು ಸಾವಿನ ಪಾಶ ಎಂಬ ಅರಿವಿನಿಂದ ಹಿಂದೂ ಧರ್ಮವನ್ನು ತೊರೆಯಲು ಸಿದ್ಧರಾದರು. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತುಕೊಂಡ ರಾಜಕೀಯ ಪಕ್ಷವೊಂದರ ಪುಢಾರಿಯೊಬ್ಬ `ಡಾ. ಅಂಬೇಡ್ಕರರು ಹಿಂದೂ ಧರ್ಮದ ನಿಜವಾದ ಹೀರೋ' ಎಂಬ ಪ್ರಚಾರಕ್ಕೆ ತೊಡಗಿದ್ದ ! ಡಾ. ಬಾಬಾಸಾಹೇಬರನ್ನು ಅರ್ಥ ಮಾಡಿಕೊಳ್ಳಲಾರದ ಮೂರ್ಖತನವನ್ನು ಇದು ಸೂಚಿಸುತ್ತದೆ.
    ಸಮಾಜದಲ್ಲಿ ದಸ್ಯುಗಳಿಗಿಂತಲೂ ಕೀಳಾಗಿ ಅನ್ಯಾಯ, ಅವಮಾನ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದ ಅ
ಸ್ಪೃಶ್ಯರು, ಸನಾತನ ಹಿಂದೂ ಧರ್ಮದ ವಿಚಾರದಲ್ಲಿ  ಧರ್ಮಬಾಹಿರರು. ಇದ್ದೂ ಸತ್ತಂತೆ ಬದುಕುವುದಕ್ಕಿಂತ, ತಲೆಯೆತ್ತಿ ನಿಂತು, ಸ್ವಾಭಿಮಾನದೊಂದಿಗೆ  ಬದುಕುವ  ದಾರಿಯನ್ನು  ಡಾ. ಬಾಬಾಸಾಹೇಬರು ಹುಡುಕುತ್ತಿದ್ದರು. ಹಿಂದೂಗಳಲ್ಲಿ ಇರುವ ಕೊಳಕುತನ, ಕುಗೇಡಿತನ, ಕೊಳ್ಳುಬಾಕತನ ಮೊದಲಾದವುಗಳಿಂದ ಹೇಸಿಕೊಂಡ ಡಾ. ಬಾಬಾಸಾಹೇಬರು ಅಂಥ ಹೊಲಸಿನಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸುತ್ತಾರೆ ; ಹೊಸ ಬದುಕಿಗೆ ಹಾರೈಸುತ್ತಾರೆ.
    `ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನಪೂರ್ತಿ ಹೊಸದಾಗಬೇಕು. ಆದರೆ ಹೊಸ ಜೀವ ಹೆಣದ ದೇಹದಲ್ಲಿ ಹೋಗಲಾರದು. ಹೊಸ ಜೀವನಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವನ ಹುಟ್ಟಿ ಮಿಡಿಯಬೇಕಾದರೆ ಹಳೆಯದು ನಿಷ್ಕ್ರಿಯವಾಗಿ ಹೋಗಬೇಕು'5 ಎಂಬ ವಿಚಾರವನ್ನು ಪ್ರತಿಪಾದಿಸಿ ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು.
    ಹಿಂದೂ ಧರ್ಮದಲ್ಲಿನ ಯಥಾಸ್ಥಿತಿವಾದ ಮತ್ತು ಸೋಗಲಾಡಿತನದಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅದು ಅವರಿಗೆ ಅಂದಿನ ಅನಿವಾರ್ಯವೂ ಆಗಿತ್ತು. ಜಾತಿಯ ಸೂತಕದಿಂದ ಮುಕ್ತವಾಗಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದುಕೊಂಡ ಬಹಳಷ್ಟು ಅ
ಸ್ಪೃಶ್ಯರು ಡಾ. ಬಾಬಾಸಾಹೇಬಕಾಲದಲ್ಲಿ ಮತ್ತು ಆನಂತರದಲ್ಲಿ ಬೌದ್ಧ ಧರ್ಮವನ್ನು ಸೀಕರಿಸಿದರು ; ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ; ಇನ್ನೂ ಕೆಲವರು ಇಸ್ಲಾಂ ಧರ್ಮವನ್ನೂ ಅವಲಂಬಿಸಿದರು. ಇದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವಾಸ್ತವ ಚಿತ್ರಣವನ್ನು ಗಮನಿಸಿದಾಗ ಹೀಗೆ ಮತಾಂತರವಾಗುತ್ತಿರುವವರು ಅತಂತ್ರರಾಗುತ್ತಿರುವುದು ಕಂಡು ಬರುತ್ತದೆ.
    ಭಾರತೀಯ ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ಕೂಡ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಿವೆ. ಇದಕ್ಕೆ ಹಿಂದೂ ಧರ್ಮದ ಪ್ರಭಾವವೂ ಕಾರಣವಾಗಿರಬಹುದು. ಮತಾಂತರಗೊಂಡವರು ಅಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತಿದ್ದಾರೆ. ನವ ಬೌದ್ಧ, ನವ ಕ್ರಿಶ್ಚಿಯನ್ ಎನ್ನುವುದಾಗಲಿ ಅಥವಾ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವುದಾಗಲಿ ಮೇಲು ನೋಟಕ್ಕೆ ಕಾಣಿಸಿಕೊಳ್ಳುವ ಪ್ರತ್ಯೇಕೀಕರಣಗಳು ! ಡಾ. ಬಾಬಾಸಾಹೇಬ ಅಂಬೇಡ್ಕರರು ಕಂಡ ಕನಸು ಇಂಥಲ್ಲಿ ನನಸಾಗದು. ಇಂಥ ಗೊಂದಲಗಳು ಅ
ಸ್ಪೃಶ್ಯರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಖಂಡಿತವಾಗಿಯೂ ಕಾಲ್ತೊಡಕುಗಳಾಗುತ್ತವೆ.
    ಹಿಂದೂ ಧರ್ಮದಲ್ಲಿನ ಜಾತಿ, ಮತಾಂತರಗೊಂಡ ಧರ್ಮದಲ್ಲಿನ ಪ್ರತ್ಯೇಕತೆ ಕಂಗೆಡಿಸುವ ಸಂಗತಿಗಳೇ ಆಗಿವೆ. ಹೀಗೆಂದುಕೊಂಡು ತೀರ ಹತಾಶರಾಗಬೇಕಾದ ಕಾರಣಗಳಿಲ್ಲ. ಇಂದು ಶಿಕ್ಷಣ ಮುಕ್ತವಾಗಿದೆ. ಅಕ್ಷರದ ಅರಿವಿನ ಮೂಲಕ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕು. ಒಳಜಾತಿಗಳಲ್ಲಿ ಇರುವ ಭೇದ ಮರೆತು, ಸಂಬಂಧಗಳನ್ನು ಬೆಸೆಯಬೇಕು ; ಏಕತ್ವವನ್ನು ಸಾಧಿಸಬೇಕು. ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಅವಕಾಶಗಳನ್ನು ಬಳಸಿಕೊಂಡು ಉನ್ನತಿಗೆ ಏರಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಯಾರ ಕೃಪೆ, ದಾನಕ್ಕೆ ತಲೆಬಾಗದೇ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು. ಹೀಗಾದಾಗ ಮಾತ್ರ ಡಾ. ಬಾಬಾಸಾಹೇಬರು ಕಂಡ ಕನಸನ್ನು ನನಸು ಮಾಡುವುದರತ್ತ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.
ಅಡಿ ಟಿಪ್ಪಣಿಗಳು :
1. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು- 164
2.
ಅದೇ :
: ಪು-93
3. ಅದೇ : ಪು-529
4. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-5 : ಪು-150
5. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು-108
                                                                   *****

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.