Thursday, January 10, 2013

ದೇವರು ದೆವ್ವ ವಿಜ್ಞಾನ : ಮೌಢ್ಯತೆ ಹೊಡೆದೋಡಿಸುವ ಪುಸ್ತಕ

ಡಾ. ಸಿದ್ರಾಮ ಕಾರಣಿಕ   

    ಒಂದು ಪುಸ್ತಕ ಯಾಕೆ ಮೆಚ್ಚುಗೆ ಗಳಿಸುತ್ತದೆ ಎಂಬುದು ವಾಚಕನ ಅಭಿರುಚಿಯನ್ನು ಅವಲಂಬಿಸಿರುತ್ತದೆ. ವಾಚಕನ ಮನಸ್ಥಿತಿ ಮತ್ತು ಅನುಭವ ಗ್ರಾಹ್ಯತೆಗಳು ಅಭಿರುಚಿಯನ್ನು ನಿರ್ಧರಿಸುತ್ತವೆ. ಒಬ್ಬನಿಗೆ ಮೆಚ್ಚುಗೆಯಾದ ಪುಸ್ತಕ ಇನ್ನೊಬ್ಬನಿಗೆ ಮೆಚ್ಚುಗೆಯಾಗದೇ ಹೋಗಬಹುದು. ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಎಂಬ ಕೃತಿ ನನ್ನ ಮೆಚ್ಚಿನ ಪುಸ್ತಕ. ಅದು ನನ್ನ ಮೇಲೆ ಬೀರಿದ ಪ್ರಭಾವ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರೆ ಕೆಲವರು ನಂಬಲಿಕ್ಕಿಲ್ಲ ! ಈ ಪುಸ್ತಕ ಮತ್ತು ಕುಮಾರ ಕಕ್ಕಯ್ಯ  ಪೋಳ ಅವರ `ಚಾತುರ್ವರ್ಣ ಧರ್ಮದರ್ಶನ' ಈ ಎರಡೂ ಪುಸ್ತಕಗಳನ್ನು ನಾನು ಹೈಸ್ಕೂಲಿನಲ್ಲಿದ್ದಾಗಲೇ ಓದಿ ತಿಳಿದುಕೊಂಡೆ. ಇನ್ನೂ ಕೂಡ ಯಾವಾಗಾದರೊಮ್ಮೆ ಈ ಪುಸ್ತಕಗಳ ಪುಟ ಹೊರಳಿಸುತ್ತಲೇ ಇರುತ್ತೇನೆ. ಈ ಎರಡೂ ಪುಸ್ತಕಗಳು ಮೊದಲ ಓದಿಗೇ ನನ್ನ ಮೇಲೆ ಅಗಾಧವಾದ ಪ್ರಭಾವ ಬೀರಿ, ಬದುಕಿನ ದಾರಿಯನ್ನೇ ಬದಲಿಸಿದವು ; ವೈಚಾರಿಕ ಮನೋಭಾವದ ತಳಹದಿಯನ್ನು ಗಟ್ಟಿಗೊಳಿಸಿದವು. ಅಲ್ಲಿಯವರೆಗೆ ಪೂಜೆ, ವೃತ, ಭಕ್ತಿ ಎಂದು ಕಂಡ ಕಂಡ ಕಲ್ಲು-ಕಟ್ಟಿಗೆಗಳಿಗೆ, ಕಲ್ಲು-ಮಣ್ಣಿನ ಕಟ್ಟಡಗಳಿಗೆ, ಬೊಂಬೆಗಳಿಗೆ ಭಯಭಕ್ತಿಯಿಂದ ನಮಸ್ಕರಿಸಿ, ಅವುಗಳ ಬಗ್ಗೆಯೇ ಇನ್ನೊಬ್ಬರು ಹೇಳಿದ್ದನ್ನು ಮತ್ತು ನನಗೆ ತಿಳಿದಿರುವುದನ್ನು ಕವಿತೆ ಮಾಡಿ ಹಾಡಿ ಖುಷಿ ಪಡುತ್ತಿದ್ದ ನಾನು ಆನಂತರದಲ್ಲಿ ತೀರ ಬದಲಾಗಿ ಹೋದೆ. ಭಕ್ತಿ, ಪೂಜೆ, ವೃತ ಮೊದಲಾದವುಗಳಿಗೆ ತಿಲಾಂಜಲಿ ನೀಡಿದೆ. ಅಷ್ಟೇ ಯಾಕೆ ಫ್ರೇಮಿನಲ್ಲಿ ಬೆಚ್ಚಗೆ ಕುಳಿತ ಚಿತ್ರಗಳನ್ನೂ ಕಿತ್ತೆಸೆದೆ ಮತ್ತು ನಾನು ಬರೆದ ಸ್ತುತಿ ಹಾಡುಗಳನ್ನು ಹರಿದು ಹಾಕಿದೆ. ದೇವರು-ದೆವ್ವಗಳ ನಿರಾಕರಣೆ ಮಾಡುತ್ತಲೇ ಬೊಗಳೆ ಬಿಡುತ್ತಿದ್ದವರ ಮುಂದೆ ಗೇಲಿ ಮಾಡಿ ನಗತೊಡಗಿದೆ ; ವಾದಿಸುತ್ತಿದ್ದೆ ; ವಾದಗಳಲ್ಲಿ ನಿಜವಾಗಿಯೂ ನನ್ನ ಮೇಲೆ ಪ್ರಭಾವ ಬೀರಿದ ಆ ಎರಡೂ ಪುಸ್ತಕಗಳಲ್ಲಿದ್ದ ಉದಾಹರಣೆ ನೀಡಿ ಗೆಲ್ಲುತ್ತಿದ್ದೆ.  ನನ್ನೊಳಗಿನ ಹೊಸ ಮನುಷ್ಯನ ಹುಟ್ಟಿಗೆ ಆ ಎರಡೂ ಪುಸ್ತಕಗಳು ಕಾರಣವಾಗಿವೆ. ಅವುಗಳಲ್ಲಿ ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಪುಸ್ತಕದ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ.
    ಡಾ. ಕೋವೂರ್ ಅವರ ಮೂವತ್ತ್ಮೂರು ಲೇಖನಗಳನ್ನು ಎಚ್.ಎಂ. ಕುಮಾರಸ್ವಾಮಿ, ಮಹಾಬಲೇಶ್ವರರಾವ್, ತೀ.ನಂ. ಶ್ರೀಧರ, ಯಶವಂತ ಡೋಂಗ್ರೆ, ಸಬೀಹಾ ಗಜೇಂದ್ರಗಡ, ಎನ್. ಅನ್ನಪೂರ್ಣೇಶ್ವರಿ, ಒಡೆಯರ್ ಡಿ. ಹೆಗಡೆ ಕನ್ನಡೀಕರಣ ಮಾಡಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರು ಸಂಪಾದಕರಾಗಿರುವ ಈ ಪುಸ್ತಕವನ್ನು 1988ರಲ್ಲಿ ಬೆಂಗಳೂರಿನ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ಇಂದಿಗೂ ಈ ಪುಸ್ತಕದ ಪ್ರತಿಗಳು ಬಹುಬೇಗನೇ ಮುಗಿದು  ಪುನರ್‍ಮುದ್ರಣವಾಗುತ್ತಲೇ  ಇದೆ ಎಂದರೆ ಅದರ ಮಹತ್ವವನ್ನು ಯಾರಾದರೂ ಅರಿಯಬಹುದು.
    ಡಾ. ಅಬ್ರಾಹಂ ಟಿ. ಕೋವೂರ್ ಕೇರಳದ ತಿರುವಳ್ಳ ಎಂಬ ಗ್ರಾಮದಲ್ಲಿ 10ನೇ ಎಪ್ರೀಲ್ 1898 ರಂದು ಜನಿಸಿದರು. ಅವರ ತಂದೆ ರೆವ್ಹರಂಡ್ ಕೋವೂರ್ ಐಪೆತೊಮ್ಮಕತ್ತನಾರ್ ಅವರು ಮಲಬಾರಿನ ಸಿರಿಯನ್ ಚರ್ಚೊಂದರಲ್ಲಿ ಫಾದ್ರಿಯಾಗಿದ್ದರು. ಅಬ್ರಾಹಂ ಅವರು ತಂದೆಯ ಹಾದಿಯನ್ನು ಹಿಡಿಯಲಿಲ್ಲ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಅಧ್ಯಯನ ಮಾಡಿದರೂ ವಿಶೇಷವಾಗಿ `ಅತೀಂದ್ರಿಯ ಮತ್ತು ಅತೀ ಮಾನಸ ಪ್ರಕ್ರಿಯೆಗಳು' (Pshychic and Para Pshychic ) ಎಂಬ ಹೆಸರಿನ ಮಹಾಪ್ರಬಂಧಕ್ಕೆ ಅಮೇರಿಕೆಯ ಮಿನ್ನಿಸೋಟ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಪಿಯಿಂದ ಡಾಕ್ಟರೇಟ್ ಪಡೆದರು.
    ಆನಂತರ ಕೇರಳದಲ್ಲಿ ಡಾ. ಕೋವೂರ್ ಅವರ ವೃತ್ತಿಜೀವನ ಆರಂಭವಾಯಿತು. ಕೊಟ್ಟಾಯಂನ ಸಿ.ಎಂ.ಎಸ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ಅಲ್ಲಿಂದ ಶ್ರೀಲಂಕಾಗೆ ಹೋಗಿ ಜಾಪ್ನಾ ಸೆಂಟ್ರಲ್ ಕಾಲೇಜು, ಗಲ್ಲೆಯ ರಿಚ್ಮಂಡ್ ಕಾಲೇಜು, ಮೌಂಟ್ ಲೇವಿನಿಯಾದ ಸೇಂಟ್ ಥಾಮಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದರು. ಆನಂತರ ಕೊಲೊಂಬೋದ ಥಸ್ರ್ಟನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, 1959 ರಲ್ಲಿ ನಿವೃತ್ತಿಯಾದರು.
    ನಿವೃತ್ತಿಯ ನಂತರದಲ್ಲಿ ಡಾ. ಕೋವೂರ್ ರು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಕ್ರಿಯಾಶೀಲರಾದರು. ಜನರಲ್ಲಿ ಮಡುಗಟ್ಟಿದ ಮೌಢ್ಯದ ಕತ್ತಲೆಯಲ್ಲಿ ದೀಪ ಬೆಳಗಿಸಲು ನಿರಂತರವಾಗಿ ಪ್ರಯತ್ನಿಸಿದರು. ಸಾಂಪ್ರದಾಯಿಕ ಆಲೋಚನೆಗಳ ಸೆರೆಯಿಂದ ಹೊಸ ಬದುಕಿನ ಹಾದಿ ತೋರುವ ಅವರ ಪ್ರಯತ್ನ ಬಹಳಷ್ಟು ಗಟ್ಟಿಯಾಗಿತ್ತು. ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉದ್ದೀಪನಗೊಳಿಸುವತ್ತ ಆಸಕ್ತಿ ತಳೆದರು. ಅತೀಂದ್ರಿಯ, ಅತೀ ಮಾನಸ ಹಾಗೂ ಆಧ್ಯಾತ್ಮಿಕ ಶಕ್ತಿ ಹೊಂದಿದವರೆಂದು ಹೇಳಿಕೊಳ್ಳುವ ಮಂದಿ ವಂಚಕರಾಗಿರುತ್ತಾರೆ ಇಲ್ಲವೆ ಮನೋರೋಗಿಗಳಾಗಿರುತ್ತಾರೆ ಎಂಬ ವಾದವನ್ನು ಜನರ ಮುಂದಿಟ್ಟ ಕೋವೂರ್‍ರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಅದನ್ನು ಸಶಕ್ತವಾಗಿ ಮಂಡಿಸಿದರು.
    ಅತೀಂದ್ರಿಯ ಶಕ್ತಿ ಇದೆ ಎನ್ನುವವರು ಅದನ್ನು ಸಾಬೀತುಪಡಿಸಿದ್ದಲ್ಲಿ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಅವರು ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಬೆಂಗಳೂರಿನ ರಾಘವೇಂದ್ರ ಸ್ವಾಮಿಭಕ್ತ ಡಾ. ಜಿ. ವೆಂಕಟರಾವ್ ಮತ್ತು ಸ್ವೀಡನ್ನಿನ ಪಾದ್ರಿ ಕೆಜಲ್ ಐಡ್ ತಮ್ಮತನವನ್ನು ತೋರಿಸಲು ಹೋಗಿ ಕೈ ಸುಟ್ಟುಕೊಂಡರು. ಡಾ. ಕೋವೂರ್‍ರು ಪುಟ್ಟಪರ್ತಿ ಸಾಯೀಬಾಬಾನಿಗೆ  ನೇರ ಸವಾಲು ಹಾಕಿ, ಶೂನ್ಯದಿಂದ ವಿಭೂತಿ, ಬಂಗಾರದುಂಗುರ ಸೃಷ್ಟಿಸಿ ಭಕ್ತರಿಗೆ ನೀಡುವಂತೆ ಒಂದು ಕುಂಬಳಕಾಯಿಯನ್ನು ಸೃಷ್ಟಿಸಿ ಕೊಡಿ ಎಂದಿದ್ದರು. ಪುಟ್ಟಪರ್ತಿ ಸಾಯೀಬಾಬಾ ಅದಕ್ಕೆ ಉತ್ತರವನ್ನು ನೀಡದೇ ಗಪ್‍ಚುಪ್ ಆಗಿದ್ದ ! ಡಾ. ಕೋವೂರ್ ರ ಇನ್ನೊಂದು ಹೆಗ್ಗಳಿಕೆ ಎಂದರೆ ದೇವಮಾನವರು ಎಂದು ಫೋಜು ಕೊಟ್ಟು, ಪವಾಡ ಮಾಡಿ, ಮೂಢಮಂದಿಯನ್ನು ಮರುಳು ಮಾಡುವ ಜನರ ಗುಟ್ಟುಗಳನ್ನೆಲ್ಲ ಬಯಲು ಮಾಡುತ್ತಿದ್ದರು. ಜನರು ನಂಬುತ್ತಿದ್ದ ಪವಾಡದಂತಹ ಕ್ರಿಯೆಗಳನ್ನು ಸ್ವತಃ ತಾವೇ ಮಾಡಿ, ಆ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಅನಾವರಣಗೊಳಿಸುತ್ತಿದ್ದರು.
    "ನಾನು ಮಾನವಪ್ರೇಮಿ. ನಾನು ಸಾಯುವುದರೊಳಗಾಗಿ ಸಾಧ್ಯವಾದಷ್ಟು ಇಂತಹ ಮೋಸಗಾರರ, ವಂಚಕರ ಎಲ್ಲ ಕುತಂತ್ರಗಳನ್ನು ಬಯಲಿಗೆಳೆದು ಇಂತಹ ನಯವಂಚಕರ ಜಾಲದೊಳಗೆ ಸಿಕ್ಕಿ ಒದ್ದಾಡುತ್ತಿರುವ ಲಕ್ಷಗಟ್ಟಲೇ ಜನರನ್ನು ಮುಕ್ತಿಗೊಳಿಸಿದರೆ ಅದೇ ನನಗೆ ತೃಪ್ತಿಯ ವಿಷಯ. ನಂತರ ಸಂತೋಷದಿಂದ ಸಾವನ್ನು ಸ್ವಾಗತಿಸುತ್ತೇನೆ." ಎನ್ನುತ್ತಿದ್ದ ಅವರು ಅಂದುಕೊಂಡಂತೆಯೇ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿ, ಫಲ ಪಡೆದರು. 1978 ರಲ್ಲಿ ಮರಣಿಸಿದ ಡಾ. ಕೋವೂರ್‍ರ ದೇಹವನ್ನು ಅವರ ಇಚ್ಚೆಯಂತೆಯೇ ವೈದ್ಯಕೀಯ ಸಂಶೋಧನೆಗೆ ಬಳಸಿಕೊಳ್ಳಲಾಯಿತು.
    ದೇವರು ದೆವ್ವ ವಿಜ್ಞಾನ ಕೃತಿಯಲ್ಲಿಯ ಎಲ್ಲ ಲೇಖನಗಳಲ್ಲಿ ಕತ್ತಲೆಯಿಂದ ಬೆಳಕಿನ ಕಡೆಗೆ ದಾದಿ ಕಾಣಿಸುವ ಪ್ರಬಲ ಪ್ರಯತ್ನವಿದೆ ಅಥವಾ ಅವರ ಸಾಧನೆಯ ಸಿದ್ಧಿ ಇದೆ. ಜಪಾನ್ ದೇಶದ ಹೆಣ್ಣುಮಗುವೊಂದು ಸತ್ತ ಮೇಲೆ ಅದರ ಆತ್ಮ ಒಂದು ಗೊಂಬೆಯಲ್ಲಿ ಸೇರಿದ್ದು, ಆ ಗೊಂಬೆಗೆ ಕ್ರಮೇಣ ತಲೆಗೂದಲು ಬೆಳೆಯುತ್ತಿವೆ ಎಂಬ ವರದಿಯನ್ನು ತಳ್ಳಿ ಹಾಕುವ ಕೋವೂರ್‍ರು ಕೂದಲು ಬೆಳೆಯಬೇಕಾದರೆ ದೇಹದಲ್ಲಿ ರಕ್ತ ಸಂಚಾರ ಇರಲೇಬೇಕಾಗುತ್ತದೆ. ಹಾಗಾಗಿ ಇದೊಂದು ಕಟ್ಟುಕತೆ ; ಹಾಸ್ಯಾಸ್ಪದ ಸಂಗತಿ ಎಂದು ತಿಳಿಸಿದರು.
    ದೇವರ ಅಸ್ತಿತ್ವವನ್ನು ಸಂಪೂರ್ಣವಾಗಿ ತಳ್ಳಿ ಹಾಕುವ ಅವರು `ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಭೌತಿಕ ಎಂಬ ವೈಜ್ಞಾನಿಕ ವಿಚಾರವನ್ನು ಮರೆಯಬಾರದು' ಎಂದಿರುವ ಅವರು, `ಒಂದು ವೇಳೆ ವಿಶ್ವಕರ್ತೃ ಒಬ್ಬನಿದ್ದರೆ, ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಇವೆಲ್ಲ ಅವನಿಂದಲೇ ಬಂದಿರಬೇಕಲ್ಲವೇ ?ಆದರೆ ಉದಾರಿಯಾದ ಆ ದೇವನು ಇಷ್ಟೊಂದು ಕೆಟ್ಟ ವಸ್ತುಗಳನ್ನೇಕೆ ಸೃಷ್ಟಿಸಿದ ?' ಎಂದು ಪ್ರಶ್ನಿಸುತ್ತಾರೆ. `ಪ್ರಪಂಚದಲ್ಲಿ  ನಡೆಯುವುದೆಲ್ಲವೂ ದೈವ ನಿಯಾಮಕವಾದರೆ ಕೊಲೆ, ಹಿಂಸೆ, ಯುದ್ಧ, ಬಲತ್ಕಾರ, ಮಾನಭಂಗ, ಕಳ್ಳತನ, ದರೋಡೆ, ಪ್ಲೇಗ್, ಕ್ಷಾಮ, ಪ್ರವಾಹ-ಈ ಎಲ್ಲ ದುರಂತಗಳಿಗೆ ಆತ ಸ್ವಯಂ ಬಾಧ್ಯಸ್ಥನಾಗಲೇಬೇಕಲ್ಲವೆ ?' ಎಂದು ಕೇಳಿದ್ದಾರೆ.
    ಧರ್ಮ ಮತ್ತು ದೇವರು ಮನುಷ್ಯನನ್ನು ಭ್ರಮೆಯಲ್ಲಿಡುತ್ತವೆ. ಬೈಬಲ್ `ದೇವವಾಣಿ' ಅಲ್ಲ ಎನ್ನುವ ಅವರು ಅಲ್ಲಿ ಬರುವ ಮ್ಯಾಥ್ಯೂ ಅಧ್ಯಾಯ 10 ರಲ್ಲಿ ಜೀಸಸ್ ಕ್ರಿಸ್ತ ಹೀಗೆ ಹೇಳುತ್ತಾನೆ, `ನಾನು ಶಾಂತಿಯನ್ನು ಸಾರಲು ಬಂದಿಲ್ಲ ; ಖಡ್ಗವನ್ನು ಕೊಡಲು, ತಂದೆಯ ವಿರುದ್ಧ ಮಗನನ್ನೂ ತಾಯಿಯ ವಿರುದ್ಧ ಮಗಳನ್ನೂ ಸೊಸೆಯ ವಿರುದ್ಧ ಅತ್ತೆಯನ್ನೂ ಎತ್ತಿ ಕಟ್ಟಲು ನಾನು ಬಂದಿದ್ದೇನೆ.' ಇದರಿಂದ ಜೀಸಸ್‍ನ ಉದ್ದೇಶ ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅವರು ಕ್ರೈಸ್ತ ಧರ್ಮದ ಬಗ್ಗೆ ನಿರಾಕರಣ ವಾದವನ್ನು ಮಂಡಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಇತಿಹಾಸಕಾರ ಮಾರ್ಷಲ್ ಜೆ. ಗೌವ್‍ನ ಮಾತನ್ನು ಉದ್ದರಿಸುತ್ತಾರೆ. ಗೌವ್‍ನ ವಿಚಾರ ಹೀಗಿದೆ, `ಮನುಷ್ಯನಲ್ಲಿ ವಕ್ರಬುದ್ಧಿಯನ್ನು ಬೆಳೆಸುವಲ್ಲಿ ಬೈಬಲ್‍ನ್ನು ಮೀರಿಸುವ ಬೇರೊಂದು ಪುಸ್ತಕವಿಲ್ಲ. ಸುಳ್ಳು, ಕಪಟ, ಮೋಸ, ದಾಸ್ಯ, ಕೊಲೆ, ಸುಲಿಗೆ, ನರಭಕ್ಷಕತನ, ಸೂಳೆಗಾರಿಕೆ, ಅನೈತಿಕ ವ್ಯವಹಾರ, ಹಿಂಸೆ ಮೊದಲಾದ ಚಟುವಟಿಕೆಗಳಿಗೆ ಬೈಬಲ್ ಅನುಮತಿ ನೀಡುತ್ತದೆ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತದೆ.'
    ಬೌದ್ಧ ಧರ್ಮದ ಜಾತಕ ಕತೆಗಳು ವೈಜ್ಞಾನಿಕ ವಾದವನ್ನು ಬುಡಮೇಲಾಗಿಸುತ್ತವೆ ಎಂದು ಡಾ. ಕೋವೂರ್‍ರು ಅಭಿಪ್ರಾಯಪಡುತ್ತಾರೆ. ಹಿಂದೂ ಧರ್ಮದ ದೇವತೆಗಳನ್ನೂ ಗೇಲಿ ಮಾಡಿರುವ ಅವರು, ಬ್ರಹ್ಮ ತನ್ನ ಮಗಳೇ ಆದ ಸರಸ್ವತಿಯನ್ನು ಮಾನಭಂಗ ಮಾಡಿ ಮದುವೆಯಾದದ್ದು, ಆನಂತರದಲ್ಲಿ ಅವರಿಬ್ಬರಿಗೆ ಹುಟ್ಟುವ ಸ್ವಯಂಭು ಮತ್ತು ಶತರೂಪಾ ಎಂಬ ಹೆಸರಿನ ಅಣ್ಣ-ತಂಗಿಯರೇ ದಂಪತಿಗಳಾಗಿ ಮಕ್ಕಳನ್ನು ಪಡೆಯುವುದು, ಶಿವನಿಂದ ಅತ್ಯಾಚಾರಕ್ಕೆ ಒಳಗಾದ ಮಧುರಾ ಮಂಡೋದರಿಯಾಗಿ ಗರ್ಭ ಧರಿಸುವುದು, ಇಂದ್ರ ಮತ್ತು ಶಂಕರಾಚಾರ್ಯರ ಅತೀ ಕಾಮುಕತನ, ಶಿವನ ಲೈಂಗಿಕ ಹಗರಣಗಳು, ಅನೈತಿಕ ಸಲಿಂಗ ಕಾಮದಿಂದ ಹುಟ್ಟಿದ ಶಬರಿಮಲೈ ಅಯ್ಯಪ್ಪ, ಕೃಷ್ಣನ ವಿಕೃತ ಕಾಮ ಮೊದಲಾದವುಗಳನ್ನು ಉದಾಹರಣೆ ಸಹಿತ ವಿವರಿಸುತ್ತಾರೆ. ಜೊತೆಗೆ ಕ್ರೈಸ್ತ ಯವಹಾನನು ಮೂವತ್ತೆರಡು ಸಾವಿರ ಕನ್ಯೆಯರೊಂದಿಗೆ ನಡೆಸಿದ ವಿಕೃತ ಕಾಮ, ಕ್ರಿಸ್ತನ ತಾಯಿ ಕನ್ಯೆಯಾಗಿಯೇ ಉಳಿದದ್ದು ಮೊದಲಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ವಾಸ್ತವ ವಾದವನ್ನು ಪ್ರತಿಪಾದಿಸುತ್ತಾರೆ. ಈ ಎಲ್ಲ ಕಾರಣಗಳಿಂದಲೇ ಇಂಥವುಗಳನ್ನು ಪಠ್ಯಪುಸ್ತಕ ಮಾಡಬಾರದು ಎಂಬ ವಿಚಾರವನ್ನೂ ಅವರು ಮಂಡಿಸಿದ್ದಾರೆ.
    ದೇವಮಾನವರೆಂದು ಘೋಷಿಸಿಕೊಂಡ ವ್ಯಕ್ತಿಗಳ ಬಗ್ಗೆ ಕಿಡಿ ಕಾರುವ ಅವರು ಪುಟ್ಟಪರ್ತಿ ಸಾಯೀಬಾಬಾನ ಅನೈತಿಕ ಸಲಿಂಗರತಿಯ ವಿಕೃತ ಕಾಮ, ಮಹರ್ಷಿ ಎನಿಸಿಕೊಂಡಿದ್ದ ಮಹೇಶಯೋಗಿ ಪಾಪ್ ಸಂಗೀತಗಾರ್ತಿ ಮಿಯಾಫಾರೋ ಎಂಬಾಕೆಯನ್ನು ಬಲತ್ಕರಿಸಿದ್ದು, ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದ ಪ್ರಸಂಗಗಳನ್ನು ತಿಳಿಸುತ್ತಾರೆ. ಹಾಗೆಯೇ ನೀಲಕಂಠ ಬಾಬಾ, ಪಂಡರೀಮಲೈಸ್ವಾಮಿ ಆಚಾರ್ಯ ರಜನೀಶ್, ದತ್ತಾಬಾಳ್, ಗುರುದೇವ ಮುಕ್ತಾನಂದ, ನಿರ್ಮಲಾದೇವಿ, ಸ್ವಾಮಿ ಚಿನ್ಮಯಾನಂದ ಮೊದಲಾದವರ ಕುಟೀಲತೆಗಳನ್ನು ಬಹಿರಂಗಗೊಳಿಸುತ್ತಾರೆ.
    ಭೂತಚೇಷ್ಟೆ (ಪೋಲ್ಟರ್ ಗೋಸ್ಟ್) ಬಗೆಗಿನ ತಮ್ಮ ಸ್ವಂತ ಅನುಭವಗಳನ್ನು ದಾಖಲಿಸುವ ಡಾ ಕೋವೂರ್‍ರು ಘಟನೆ ನಡೆದ ಸ್ಥಳಕ್ಕೆ ಹೋಗಿ ವೈಜ್ಞಾನಿಕ ರೀತಿಯಿಂದ ಅವುಗಳನ್ನು ಅಧ್ಯಯನ ಮಾಡಿ, ಅವೆಲ್ಲ ಸುಳ್ಳು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. `ಬಾಲ್ಯದಿಂದಲೂ ಮನಸ್ಸಿನ ಮೇಲಾದ ಪ್ರಭಾವಗಳು ಮತ್ತು ಭೋದನೆಗಳ ಪರಿಣಾಮದಿಂದಾಗಿ ಶೇಖರಗೊಂಡ ಸುಳ್ಳು ನಂಬಿಕೆಗಳು, ಭೂತ-ಪ್ರೇತ-ಪಿಶಾಚಿ-ದೆವ್ವಗಳು, ಜ್ಯೋತಿಷ್ಯ, ಹಸ್ತಸಾಮುದ್ರಿಕ, ಶಕುನಗಳು, ಆಶೀರ್ವಾದ, ಶಾಪ, ಅಂಜನ, ಮುಹೂರ್ತ, ಸ್ವರ್ಗ-ನರಕ, ಪುನರ್ಜನ್ಮ, ಮಾಟ-ಮಂತ್ರ ಮೊದಲಾದವುಗಳು ಕೇವಲ ನಮ್ಮ ಭ್ರಮೆಗಳು ಮಾತ್ರ ಎಂದು ಸೋದಾರಹರಣೆಗಳ ಮೂಲಕ  ವಿಶ್ಲೇಷಿಸುವ ಅವರು, ಈ ಭ್ರಮೆಯನ್ನೇ ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಮಂದಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸುತ್ತಾರೆ.
    ಧ್ಯಾನದಿಂದ ಜ್ಞಾನೋದಯ ಎನ್ನುವದು ಒಂದು ಹಸಿಸುಳ್ಳು. ಅತೀಂದ್ರಿಯ ಧ್ಯಾನದಲ್ಲಿ ಕೆಲವರು ಕ್ರಿಪ್ಟೆಸ್ತೇಸಿಯಾ ಎಂಬ ನರವ್ಯಾಧಿಗೆ ಬಲಿಯಾಗಿರುವ ಸಾಧ್ಯತೆಗಳಿವೆ ಎಂಬುದನ್ನು ವಿಸ್ತಾರವಾಗಿ ಹೇಳುವ ಅವರು, ಮಾದಕ ವಸ್ತುಗಳೂ ಅದೇ ಕ್ರಿಯೆಯನ್ನು ಮನುಷ್ಯನಲ್ಲಿ ಉಂಟುಮಾಡುತ್ತವೆ ಎಂದೂ ಹೇಳುತ್ತಾರೆ. ಈ ಸ್ಥಿತಿಯಲ್ಲಿ ರೋಗಿ, ತನ್ನಲ್ಲಿ ಅತೀಂದ್ರಿಯ ಆಧ್ಯಾತ್ಮಿಕ ಹಾಗೂ ಮಂತ್ರಶಕ್ತಿಗಳಿವೆ ಎಂಬ ಮೂರ್ಖ ಭ್ರಾಂತಿಗೆ ಒಳಗಾಗುತ್ತಾನೆ. ಆದ್ದರಿಂದ ನಿದ್ರಾಜನಕ ಮದ್ದುಗಳಂತೆ ಧ್ಯಾನವನ್ನೂ ನಿಷೇಧಿಸಿ, ಅದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ.
    `ದೇವರು ದೆವ್ವ ವಿಜ್ಞಾನ' ಸಂಕಲನದಲ್ಲಿ ಕೇವಲ ಇಪ್ಪತ್ತೆರಡು ಲೇಖನಗಳಲ್ಲಿಯೇ ಇಷ್ಟೊಂದು ಮಾಹಿತಿಯಿರುವುದನ್ನು ಅರಿತಾಗ, ಡಾ. ಕೋವೂರ್ ಅವರ ಎಲ್ಲ ಬರಹಗಳನ್ನು ಅಧ್ಯಯನ ಮಾಡಿದಲ್ಲಿ ಇನ್ನೆಷ್ಟು ಮಾಹಿತಿಗಳು ಸಿಗಬಹುದು ; ವಿಚಾರ ಮಾಡಿ. ಈ ಪುಸ್ತಕದಲ್ಲಿರುವ ವಿಚಾರಗಳೇ ಮೂಢನಂಬಿಕೆಯ ಅಂಧಕಾರದಲ್ಲಿ ಸಿಲುಕಿರುವ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿವೆ.
                                                   *****

1 comment:

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.