Friday, January 18, 2013

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ಜೋಗಿ ಅವರ ಪತ್ರ

ಗೆ,
ಅಧ್ಯಕ್ಷರು,
ಧಾರವಾಡ ಸಾಹಿತ್ಯ ಸಂಭ್ರಮ

ಮಾನ್ಯರೇ,
ವಿಷಯ: ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸದೇ ಇರುವ ಕುರಿತು.

ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 3 ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಆಭಾರಿ.
ಆದರೆ, ನಾನು ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಕಾರಣಗಳು ಇಂತಿವೆ:
1. ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಮುಕ್ತ ಪ್ರವೇಶ ಇರುವುದಿಲ್ಲ ಎಂದು ತಿಳಿಯಿತು. 1,500 ರುಪಾಯಿ ತೆತ್ತು ಅದರಲ್ಲಿ ಪ್ರತಿನಿಧಿಗಳು ಭಾಗವಹಿಸಬೇಕು ಅನ್ನುವುದು ನನಗೆ ಒಪ್ಪಿಗೆ ಇಲ್ಲ. 1500 ರುಪಾಯಿ ಕೊಟ್ಟು ಭಾಗವಹಿಸುವ ಪ್ರತಿನಿಧಿಗೆ ನಾನೇನು ಕೊಡಬಲ್ಲೆ ಎಂದು ಯಾರಾದರೂ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ.
2. ತಾವು ಪ್ರತಿನಿಧಿಗಳಿಗೆ ವಿಧಿಸಿರುವ ಕಟ್ಟುಪಾಡುಗಳ ಬಗ್ಗೆ ನನಗೆ ವಿರೋಧವಿದೆ. ಅನುಮತಿ ಇಲ್ಲದೇ ಪ್ರಶ್ನೆ ಕೇಳಕೂಡದು, ಕರಪತ್ರ ಹಂಚಕೂಡದು ಇವೆಲ್ಲ ಪಾಳೇಗಾರಿಕೆಯಂತೆ ಭಾಸವಾಗುತ್ತಿದೆ. ಸಭ್ಯವಾಗಿ ವರ್ತಿಸಬೇಕು ಎಂದು ಓದುಗರಿಗೆ ಹೇಳಬಹುದೇ? ಶಸ್ತ್ರಾಸ್ತ್ರ ತರಬೇಡಿ, ಸಭಾಂಗಣದೊಳಗೆ ಕುಡಿಯಬೇಡಿ, ಮಾದಕ ದ್ರವ್ಯ ಸೇವಿಸಬೇಡಿ ಎಂದು ಸಜ್ಜನ ಸಾಹಿತ್ಯ ರಸಿಕರಿಗೆ ಹೇಳುವ ಮುಖಾಂತರ ಅವರ ವ್ಯಕ್ತಿತ್ವವನ್ನು ಅವಮಾನಿಸಬಹುದೇ? ಈ ಎಲ್ಲ ಗೊಂದಲಗಳೂ ನನ್ನಲ್ಲಿವೆ. ಸಾಹಿತ್ಯದ ವಿದ್ಯಾರ್ಥಿಗಳು ಕೂಡ ರುಪಾಯಿ 1000 ಕೊಟ್ಟು ಭಾಗವಹಿಸಬೇಕು ಅನ್ನುವುದು, ಕೇವಲ ಐವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅನ್ನುವುದು ಸರಿಯಾ? ಇಂಥ ಕಟ್ಟುಪಾಡುಗಳಿದ್ದಿದ್ದರೆ ಬಡತನದಲ್ಲಿ ಓದಿ ಬೆಳೆದ ನಾವು ಯಾವುದಾದರೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತೇ?
3. ನಿಮ್ಮ ನಿಯಮಾವಳಿಯೊಂದು ಹೀಗಿದೆ: ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ ಅಥವಾ ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು, ಕರಪತ್ರಗಳ ಮೂಲಕ ಹಂಚುವುದು, ಅಂಚೆಯ ಮೂಲಕ ಕಳಿಸುವುದು, ಕಂಪ್ಯೂಟರ್‌ದಲ್ಲಿ ಸೇರಿಸುವುದು ಇತ್ಯಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಇದನ್ನು ಪಾಲಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಅಂಚೆಯ ಮೂಲಕ ಕಳುಹಿಸುವುದನ್ನು ತಾವು ಹೇಗೆ ತಡೆಯಬಲ್ಲಿರಿ? ಕಂಪ್ಯೂಟರಿಗೆ ಸೇರಿಸುವುದಕ್ಕೆ ಅವಕಾಶ ಇಲ್ಲ ಎಂದರೆ ಕಾರ್ಯಕ್ರಮದ ಕುರಿತು ವಿಮರ್ಶೆಗಳನ್ನೂ ನಾನು ಬರೆಯುವಂತಿಲ್ಲ ಎಂದು ಅರ್ಥವೇ ತಿಳಿಯುತ್ತಿಲ್ಲ.
4. ಓದುಗರನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾವು ಇದೇನು ಮಾಡಲು ಹೊರಟಿದ್ದೇವೆ ಎಂಬ ಬಗ್ಗೆ ನನಗೆ ಗೊಂದಲವಿದೆ. ಸರ್ಕಸ್ಸಿನಲ್ಲಿ ಹುಲಿ, ಸಿಂಹ, ಆನೆಗಳನ್ನು ತಂದು ಅವುಗಳಿಂದ ವಿವಿದ ಚಮತ್ಕಾರಗಳನ್ನು ತೋರಿಸಿ, ಪ್ರವೇಶ ದರ ನಿಗದಿ ಮಾಡಿ, ಪ್ರಾಣಿಗಳಿಗೆ ತಿಂಡಿ ಹಾಕುವಂತಿಲ್ಲ ಎಂದು ಕಟ್ಟುಪಾಡು ಮಾಡುವ ಸರ್ಕಸ್ಸು ಕಂಪೆನಿಯ ಮಾಲಿಕರಂತೆ ಸಾಹಿತಿಗಳು ಕಾಣಬೇಕಾಗಿಲ್ಲ ಎಂದು ನನ್ನ ವಿನಮ್ರ ಭಾವನೆ.
5. ನಾನು ಕವಿತೆ ಓದುತ್ತೇನೆ, ಕತೆ ಓದುತ್ತೇನೆ, ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದು ಮುಕ್ತ ಆಹ್ವಾನ ನೀಡುತ್ತಿದ್ದ ಸಾಹಿತಿಗಳ ಬಳಗ, ಹೀಗೆ ಪ್ರವೇಶ ಶುಲ್ಕ ಕೊಟ್ಟು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬನ್ನಿ ಎಂದು ಹೇಳುವ ಸಂಪ್ರದಾಯದಲ್ಲಿ ಪಾಲುದಾರನಾಗುವಷ್ಟು ಮಹಾನ್ ಲೇಖಕನಾಗಲೀ, ಭಾಷಣಕಾರನಾಗಲೀ ನಾನು ಅಲ್ಲದೇ ಇರುವುದರಿಂದ ಸಂಭ್ರಮದಿಂದ ದೂರ ಉಳಿಯಲು ಇಚ್ಛಿಸುತ್ತೇನೆ.

ಶುಭವಾಗಲಿ.

ಪ್ರೀತಿಯಿಂದ
ಜೋಗಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.