Tuesday, January 31, 2012

ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಹಿಂದೂ ಧರ್ಮ !



ಮೂಲ: ಗೈಲ್ ಓಮ್ವೆಟ್
ಸಂಗ್ರಹಾನುವಾದ: ನಾ.ದಿವಾಕರ


ಡಾ.ಬಿ.ಆರ್. ಅಂಬೇಡ್ಕರ್
ಸಾಮಾನ್ಯವಾಗಿ ಅಂಬೇಡ್ಕರ್ ಹೆಸರಿತ್ತಿದರೆ ಮೂಗು ಮುರಿಯುವ ಮೇಲ್ಜಾತಿಯವರ ಮನದಾಳದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ದ್ವೇಷ ವೈಷಮ್ಯಗಳಿಗೆ ಮೀಸಲಾತಿ ನೀತಿಯೂ ಒಂದು ಕಾರಣ. ಮೀಸಲಾತಿ ನೀತಿಯ ಪರಿಣಾಮವಾಗಿ ನಮಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗಿಂತಲೂ ಕಡಿಮೆ ಆಂಕ ಗಳಿಸಿದವರಿಗೂ ಸೀಟು ದೊರೆಯುತ್ತದೆ ಎಂದು ವಾದಿಸುವ ಪ್ರತಿಭೆಯ ಸಮರ್ಥಕರಲ್ಲಿ ಮೀಸಲಾತಿ ಒಂದು ಸಾಮಾಜಿಕ ತೊಡಕು. ಈ ಆಕ್ರೋಶಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದವರ ಬಗ್ಗೆ ಇರುವ ಅಸಡ್ಡೆ ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಮೇಲ್ಜಾತಿಯವರ, ವಿಶೇಷವಾಗಿ ದ್ವಿಜ ಸಂಪ್ರದಾಯದವರ ಮನದಾಳದಲ್ಲಿನ ಈ ಮನೋಭಾವದ ಹಿಂದೆಯೇ ಅಂಬೇಡ್ಕರ್ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಸುಪ್ತವಾಗಿರುವುದು ಸ್ಪಷ್ಟ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಇದೆಯೇ ಎನ್ನುವುದಕ್ಕಿಂತಲೂ, ತಪ್ಪು ಕಲ್ಪನೆಗಳಿಂದ ಉದ್ಭವಿಸುವ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟುವ ದೃಷ್ಟಿಯಿಂದ ವಾಸ್ತವವನ್ನು ಗ್ರಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಈ ಲೇಖನ.    


ತಮ್ಮ ಯೌವ್ವನಾವಸ್ಥೆಯಲ್ಲೇ ಅಂಬೇಡ್ಕರ್ ಅವರು ತಮ್ಮ ಸಮುದಾಯದ ನಾಯಕರಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಅವರ ತಂದೆಯೂ ಮಗನನ್ನು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದರು. ತನ್ನ ವ್ಯಾಸಂಗದೊಂದಿಗೇ ಸಮಾಜಸೇವೆಯನ್ನೂ ಮುಂದುವರೆಸುವುದಾಗಿ ಅಂಬೇಡ್ಕರ್ ಬರೋಡದ ಮಹಾರಾಜರಿಗೆ ಆಶ್ವಾಸನೆ ನೀಡಿದ್ದರು. ಒಂದು ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಅತ್ಯುನ್ನತ ಮಟ್ಟದ ವ್ಯಾಸಂಗವನ್ನು ಲಂಡನ್ನಿನಲ್ಲಿ ಮುಗಿಸಿ ೧೯೨೦ರಲ್ಲಿ ಭಾರತಕ್ಕೆ ಹಿಂದಿರುಗಿದಾಗ , ಜೀವನೋಪಾಯಕ್ಕಾಗಿ ಸಂಪಾದಿಸುವುದರೊಡನೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದೂ ಅಂಬೇಡ್ಕರ್‌ಗೆ ಅನಿವಾರ್ಯವಾಗಿತ್ತು.


ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಚಳುವಳಿ ತೀವ್ರತೆ ಪಡೆದುಕೊಂಡಿತ್ತು. ಸೋವಿಯತ್ ಸಂಘದಲ್ಲಿ ನಡೆದ ಶ್ರಮಿಕ ವರ್ಗಗಳ ಕ್ರಾಂತಿಯಿಂದ ಪ್ರೇರೇಪಿತವಾದ ಕಾರ್ಮಿಕ ಚಳುವಳಿ ಚಿಗುರೊಡೆಯುತ್ತಿತ್ತು. ಇದೇ ವೇಳೆಯಲ್ಲಿ ಹೆಚ್ಚು ಸಂಘಟಿತವಲ್ಲದ, ಸಿದ್ಧಾಂತ ಮತ್ತು ನಾಯಕತ್ವಗಳಿಗಾಗಿ ಹುಡುಕಾಡುತ್ತಿದ್ದ ಬಲಿಷ್ಟವಾದ ಜಾತಿ ದಮನಿತರ ಚಳುವಳಿಯೂ ವ್ಯಾಪಕವಾಗಿ ಹರಡಿತ್ತು. ಮಾರ್ಕ್ಸ್‌ವಾದಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಬಲ ಚಳುವಳಿಗಳ ಬೆನ್ನಲ್ಲೇ ದಲಿತರು ಮತ್ತು ಬ್ರಾಹ್ಮಣೇತರರ ಚಳುವಳಿಗಳು ತೀವ್ರತೆ ಪಡೆದುಕೊಂಡು ರಾಜಕೀಯ ರಂಗ ಪ್ರವೇಶಿಸಿದ್ದವು. ಹತ್ತೊಂಬತ್ತನೆಯ ಶತಮಾನದಿಂದಲೇ ದೇಶಾದ್ಯಂತ ದಲಿತ ಚಳುವಳಿಗಳು ಪ್ರಾರಂಭವಾಗಿದ್ದವು. ಶಿಕ್ಷಣಕ್ಕಾಗಿ, ವ್ಯವಸಾಯ ಭೂಮಿಗಾಗಿ, ದೇವಾಲಯ ಪ್ರವೇಶಕ್ಕಾಗಿ, ಸಾರ್ವಜನಿಕ ಸೌಲಭ್ಯಗಳ ಮುಕ್ತ ಉಪಯೋಗಕ್ಕಾಗಿ ಹೋರಾಟಗಳು ರೂಪುಗೊಂಡಿದ್ದವು. ಅನೇಕ ಸಮಾಜ ಸುಧಾರಣಾ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಈ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದ್ದವು. ೧೮೭೫ರಲ್ಲಿ ಸ್ಥಾಪಿತವಾದ ಮಹಾತ್ಮ ಜ್ಯೋತಿ ಬಾ ಫುಲೆಯವರ ಸತ್ಯ ಶೋಧಕ ಸಮಾಜ್ ಮಹಾರಾಷ್ಟ್ರದ ದಲಿತರಿಗೆ ಬೆಂಗಾವಲಾಗಿತ್ತು. ಮಹರ್ ಸಮುದಾಯದ ಜನತೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹೋರಾಟ ಕೈಗೊಂಡಿದ್ದರು. ಅಲ್ಪ ಸ್ವಲ್ಪ ಆದಾಯವನ್ನು ಹೊಂದಿದ್ದ ಮಹರ್ ಸಮುದಾಯ ಮಹಾರಾಷ್ಟ್ರದ ಪ್ರಥಮ ಸಂಘಟಿತ ಶೋಷಿತ ಸಮುದಾಯವಾಗಿತ್ತು. ಸಾರ್ವಜನಿಕ ಕೆರೆಗಳ ನೀರನ್ನು ಉಪಯೋಗಿಸಲು ಅನೇಕ ಹೋರಾಟಗಳು ನಡೆದಿದ್ದವು.


೧೯೧೭-೧೮ರ ನಂತರದಲ್ಲಿ ರಾಷ್ಟ್ರವಾದಿ ಚಳುವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾರಂಭಿಸಿತ್ತು. ೧೯೧೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಸ್ಪೃಶ್ಯತೆಯ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಬಲವಾದ ಸಮಾಜ ಸುಧಾರಕ ಸಂಘಟನೆ ಹಿಂದುಳಿದ ವರ್ಗಗಳ ಮಂಡಳಿ ಮೇಲ್ಜಾತಿಯ ವಿಥಲ್ ರಾಮ್‌ಜಿ ಶಿಂಧೆಯವರ ನೇತೃತ್ವದಲ್ಲಿ ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸುತ್ತಿತ್ತು. ಮಹಾರಾಷ್ಟ್ರದ ಬ್ರಾಹ್ಮಣೇತರ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಶಿಂಧೆ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದರು. ಮೇಲ್ಜಾತಿಯವರ ಸುಧಾರಣಾ ಯತ್ನಗಳು ಅಸ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಸಂದರ್ಭಗಳಲ್ಲಿ ವ್ಯಕ್ತವಾಗಿದ್ದವು. ೧೯೧೭-೧೮ರ ಅವಧಿಯಲ್ಲಿ ನಡೆದ ಮೂರು ಅಸ್ಪೃಶ್ಯತಾ ನಿವಾರಣಾ ಸಮಾವೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸನ್ಮಾನಿಸುವ ಯೋಚನೆ ಫಲಪ್ರದವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ನೀಡಿದ್ದ ಸುಧಾರಣಾ ಶಿಫಾರಸ್ಸುಗಳನ್ನು ಇಲ್ಲಿ ಬೆಂಬಲಿಸಲಾಗಿತ್ತು. ಎರಡನೇ ಸಮಾವೇಶದಲ್ಲಿ ದಲಿತರ ಮತಾಂತರವನ್ನು ವಿರೋಧಿಸಲಾಗಿತ್ತು. ಮೂರನೆಯ ಸಮಾವೇಶದಲ್ಲಿ ಗಾಂಧೀಜಿಯವರು ಉಪಸ್ಥಿತರಿದ್ದರೂ ಅಸ್ಪೃಶ್ಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.


ಏತನ್ಮಧ್ಯೆ ಪ್ರಬಲವಾಗಿ ಬೆಳೆಯುತ್ತಿದ್ದ ಬ್ರಾಹ್ಮಣೇತರ ಚಳುವಳಿಗಳು ಅಸ್ಪೃಶ್ಯರ ಬೆಂಬಲ ಗಳಿಸಿದ್ದವು. ಸತ್ಯ ಶೋಧಕ ಸಮಾಜ ಬಹುತೇಕ ಗ್ರಾಮಗಳಲ್ಲಿ ಕಾರ್ಯನಿರತವಾಗಿತ್ತು. ಬ್ರಾಹ್ಮಣರ ಅಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ ಈ ಸಂಘಟನೆ ಶೂದ್ರರು ಮತ್ತು ಅತಿ ಶೂದ್ರರು(ದಲಿತರು) ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನದ ನಂತರ ಗುಲಾಮಗಿರಿಗೆ ಒಳಗಾದರೆಂದೂ ಪ್ರತಿಪಾದಿಸಿತ್ತು. ಈ ಪ್ರತಿಪಾದನೆ ಬ್ರಾಹ್ಮಣೇತರ ಚಳುವಳಿಗಳ ಮೂಲಮಂತ್ರವಾಗಿ ಪರಿಣಮಿಸಿ, ಮದ್ರಾಸಿನಲ್ಲಿ ಪ್ರಬಲವಾಗಿದ್ದ ಚಳುವಳಿಗಳಿಗೂ ವೇದಿಕೆಯನ್ನು ಒದಗಿಸಿತ್ತು. ೧೯೧೭ರ ವೇಳೆಗೆ ಬ್ರಾಹ್ಮಣೇತರ ಚಳುವಳಿಗಳು ರಾಜಕೀಯ ಪ್ರವೇಶ ಮಾಡಿದ್ದವು. ಕೊಲ್ಹಾಪುರದ ಮಹಾರಾಜ ಶಾಹು ಛತ್ರಪತಿ ಕ್ಷತ್ರಿಯನೆಂಬ ಅಹಮಿಕೆಯಿಂದ ಆಳಿದರೂ, ಬ್ರಾಹ್ಮಣ್ಯದ ವಿರೋಧಿಯಾಗಿದ್ದುದು, ಮಹಾರಾಷ್ಟ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿತ್ತು. ಅನೇಕ ಬ್ರಾಹ್ಮಣೇತರರು ಆಡಳಿತ ಕಛೇರಿಗಳಲ್ಲಿ ನೇಮಕಗೊಂಡರು. ಇದೇ ಅವಧಿಯಲ್ಲೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯೂ ಜಾರಿಗೆ ಬಂದಿತ್ತು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಪ್ರತ್ಯೇಕ ಹಾಸ್ಟೆಲುಗಳನ್ನು ನಿರ್ಮಿಸಿದ್ದೇ ಅಲ್ಲದೆ  ಸಣ್ಣ ಚಹಾ ಮಳಿಗೆಗಳನ್ನು ಸ್ಥಾಪಿಸಲೂ ನೆರವು ನೀಡಿದ್ದರು.


ಬಹುತೇಕ ಬ್ರಾಹ್ಮಣರ ನೇತೃತ್ವದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಗಳು ಯುವಕ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಂಧೆ ಮುಂತಾದ ನಾಯಕರು ತಮ್ಮ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಅಸ್ಪೃಶ್ಯರಿಗೆ ಯಾವುದೇ ಅವಕಾಶ ನೀಡದಿದ್ದುದು ಮತ್ತು ಅಸ್ಪೃಶ್ಯರೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳದಿದ್ದುದು ಅಂಬೇಡ್ಕರ್ ಅವರನ್ನು ಶಾಹು ಮಹರಾಜರ ಕಡೆಗೆ ಸೆಳೆದಿತ್ತು. ೧೯೨೦ರಲ್ಲಿ ಪ್ರಥಮ ಬಾರಿಗೆ ಶಾಹು ಮಹಾರಾಜರನ್ನು ಭೇಟಿಯಾದ ಅಂಬೇಡ್ಕರ್, ಅವರು ಅಸ್ಪೃಶ್ಯರೊಡನೆ ಬೆರೆಯುತ್ತಿದ್ದುದನ್ನು ಕಂಡು ಅವರಿಂದ ಪ್ರಭಾವಿತರಾಗಿದ್ದರು. ೧೯೨೦ರ ಮಾನ್‌ಗಾಂವ್ ಸಮಾವೇಶದಲ್ಲಿ ಅಂಬೇಡ್ಕರ್ ಅವರನ್ನು ಸತ್ಕರಿಸಿದ ಶಾಹು ಮಹಾರಾಜ್ ಅಂಬೇಡ್ಕರ್ ಅವರಿಗೆ ಧನಸಹಾಯ ಮಾಡಿದ್ದೂ ಅಲ್ಲದೆ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೂ ಕಳುಹಿಸಿದ್ದರು. ತನ್ನನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಶಾಹು ಅವರೊಡನೆ ಅಂಬೇಡ್ಕರ್ ಮುಕ್ತವಾಗಿ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವಾದದ ಬಗ್ಗೆ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಮತ್ತು ಶಾಹು ಮಹಾರಾಜ್ ಎದುರಿಸುತ್ತಿದ್ದ ಅಪಮಾನಗಳು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ, ಈರ್ವರಲ್ಲೂ ಸಮಾನ ಮನೋಭಾವ ವ್ಯಕ್ತವಾಗುತ್ತಿತ್ತು. ಹಾಗಾಗಿಯೇ ತಮ್ಮ ಪ್ರಾರಂಭಿಕ ದಿನಗಳಲ್ಲಿ ಬ್ರಾಹ್ಮಣರಿಂದ ಹೆಚ್ಚಿನ ಬೆಂಬಲ ಗಳಿಸಿದರೂ, ಅಂಬೇಡ್ಕರ್ ಅವರಿಗೆ ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಾಂಗತ್ಯ ಗೋಚರಿಸುತ್ತಿತ್ತು.


೧೯೨೩ರಲ್ಲಿ ಲಂಡನ್‌ನಿಂದ ಹಿಂದಿರುಗಿದ ಬಳಿಕ ಅಂಬೇಡ್ಕರ್ ಅವರ ಕಾರ್ಯವೈಖರಿಯೇ ಬದಲಾಗಿತ್ತು. ಅವರ ಮನೆಯ ಮುಂದೆ ಜಮಾಯಿಸುತ್ತಿದ್ದ ಸಮುದಾಯದ ಜತೆ ಕಾರ್ಯ ಚಟುವಟಿಕೆಗಳಿಗಾಗಿ ಚಡಪಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅಂಬೇಡ್ಕರ್ ೧೯೨೪ರ ಮಾರ್ಚಿ ೯ರಂದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯಲ್ಲಿ ಚಮನ್‌ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್ ಮುಂತಾದವರು ಸಕ್ರಿಯರಾಗಿದ್ದರು. ಶಿಕ್ಷಣ, ಆರ್ಥಿಕ ಪ್ರಗತಿ, ದಮನಿತ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆ ಈ ಸಭಾದ ಮುಖ್ಯ ಧ್ಯೇಯಗಳಾಗಿದ್ದವು. ಈ ಸಂಘಟನೆಯ ಮೂಲಕ ಸಮೂಹ ನಾಯಕರಾಗಿ ಬೆಳೆದ ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮಿದ್ದರು. ಅಧಿಕಾರಶಾಹಿಯಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ತೀವ್ರವಾಗಿ ಖಂಡಿಸುತ್ತಲೇ, ಅಸ್ಪೃಶ್ಯರಿಗೆ ಮತ್ತು ಶೂದ್ರರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಇದೇ ವೇಳೆಗೆ ಶಾಸನ ಸಮಿತಿಯಲ್ಲೂ ಅಸ್ಪೃಶ್ಯರ ಪರವಾದ ದನಿ ಮೊಳಗಲಾರಂಭಿಸಿತ್ತು. ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತವಾಗಿಸಲು ಶಾಸನವನ್ನು ಹೊರಡಿಸಲಾಯಿತು. ೧೯೨೬ರಲ್ಲಿ ಬಾಂಬೆ ಶಾಸನ ಸಮಿತಿಗೆ ನೇಮಿಸಲ್ಪಟ್ಟ ಅಂಬೇಡ್ಕರ್ ಸಮಿತಿಯ ಅನೇಕ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅಸ್ಪೃಶ್ಯರ ಸಮಸ್ಯೆಗಳನ್ನು ಮುಂದಿಡುತ್ತಿದ್ದರು.


ಇದೇ ಸಂದರ್ಭದಲ್ಲಿ ಅಸ್ಪೃಶ್ಯರ ಮಹತ್ತರ ಹೋರಾಟವೊಂದು ರೂಪುಗೊಳ್ಳುತ್ತಿತ್ತು. ಮಾನವನ ಅತ್ಯಮೂಲ್ಯ ಅವಶ್ಯಕತೆಯಾದ ನೀರು ಅಸ್ಪೃಶ್ಯರಿಗೆ ಅಲಭ್ಯವಾಗಿತ್ತು. ಕಾರಣ ಮೇಲ್ಜಾತಿಯವರು ಅಸ್ಪೃಶ್ಯರನ್ನು ಅಶುದ್ಧರೆಂದು ಪರಿಗಣಿಸುತ್ತಿದ್ದರು. ಕೊಂಕಣ ಪ್ರಾಂತ್ಯದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಕೆರೆಯನ್ನು ಅಸ್ಪೃಶ್ಯರಿಗೂ ಮುಕ್ತವಾಗಿಸಿ ಆದೇಶ ಹೊರಡಿಸಿತ್ತು. ಈ ಪಟ್ಟಣದಲ್ಲಿ ಮುಂಬೈನಿಂದ ವಲಸೆ ಬರುವ ದಲಿತರು, ಮೇಲ್ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್ ಅವರಿಗೆ ದಲಿತರು ಮಾತ್ರವಲ್ಲದೆ ಪ್ರಗತಿಪರ ಮೇಲ್ಜಾತಿಯವರ ಬೆಂಬಲವೂ ಇತ್ತು. ಇವರಲ್ಲಿ ಅನಂತರಾವ್ ಚಿತ್ರೆ, ಸುರೇಂದ್ರನಾಥ್ ಟಿಪ್ಸೆ, ಸಹಸ್ರಬುದ್ಧಿ , ಎನ್.ಎಂ.ಜೋಷಿ ಪ್ರಮುಖರಾಗಿದ್ದರು.


೧೯೨೭ರ ಮಾರ್ಚಿ ೧೯-೨೦ರಂದು ಬಹಿಷ್ಕೃತ ಹಿತರಕ್ಷಣಾ ಸಭೆಯು ಮಹಾಡ್‌ನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಎರಡನೇ ದಿನ ಚಿತ್ರೆಯವರ ಸೂಚನೆಯ ಮೇರೆಗೆ ಸಾರ್ವಜನಿಕ ಕೆರೆಯಲ್ಲಿ ಅಸ್ಪೃಶ್ಯರು ನೀರು ಕುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ೧೫೦೦ಕ್ಕೂ ಹೆಚ್ಚು ಜನ ನೀರು ಕುಡಿಯಲಾರಂಭಿಸಿದರು.  ಈ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಮೇಲ್ಜಾತಿ ಹಿಂದೂಗಳು ಎಲ್ಲೆಂದರಲ್ಲಿ ಜಮಾಯಿಸಲಾರಂಭಿಸಿದರು. ದಲಿತರು ದೇವಾಲಯಕ್ಕೂ ಪ್ರವೇಶಿಸುತ್ತಾರೆಂಬ ಭೀತಿಯಿಂದ ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯರ ಮೇಲೆ ಆಕ್ರಮಣ ಆರಂಭಿಸಿದರು. ಆಕ್ರಮಣದಲ್ಲಿ ಅನೇಕ ಅಸ್ಪೃಶ್ಯರು ಏಟು ತಿನ್ನಬೇಕಾಯಿತು. ನಂತರ ಬ್ರಾಹ್ಮಣರು ಕೆರೆಯ ಶುದ್ಧೀಕರಣ ಕ್ರಿಯೆಯನ್ನು ಏರ್ಪಡಿಸಿದ್ದರು.


ಈ ಪ್ರಕರಣ ಮತ್ತು ಆಕ್ರಮಣ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಉಂಟುಮಾಡಿತ್ತು. ದಲಿತ ಸಮುದಾಯದ ಹೋರಾಟಗಳಿಗೆ ಮಹಾಡ್ ಒಂದು ಲಾಂಛನ ಕೇಂದ್ರವಾಗಿ ಪರಿಣಮಿಸಿತು. ದೇಶಾದ್ಯಂತ ದಲಿತ ಸಮುದಾಯಗಳಿಗೆ ಈ ಹೋರಾಟ ಹೊಸ ಹುರುಪು ತಂದಿತ್ತಿತು. ೧೯೨೭ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ಸಮಾವೇಶ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪ್ರಾರಂಭವಾದ ಬಹಿಷ್ಕೃತ ಭಾರತ್ ಪತ್ರಿಕೆ ಅಸ್ಪೃಶ್ಯರ ಅನೇಕ ಸಮಸ್ಯೆಗಳನ್ನು ಪ್ರಕಟಿಸಲಾರಂಭಿಸಿತು. ಆರ್ಯ ಸಮಾಜದ ಶುದ್ಧೀಕರಣ ಚಳುವಳಿಯನ್ನು ಈ ಪತ್ರಿಕೆಯ ಮೂಲಕ ಖಂಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಜಾತಿ ರಹಿತ ಆರ್ಯ ಸಮಾಜದ ಸ್ಥಾಪನೆಗಾಗಿ ನಡೆಯುತ್ತಿದ್ದ ಶುದ್ಧೀಕರಣ ಕ್ರಿಯೆ ಕ್ರಮೇಣ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಯತ್ನವಾಗಿ ಮಾರ್ಪಟ್ಟಿದ್ದು ತೀವ್ರ ಟೀಕೆಗೊಳಗಾಯಿತು. ಇದೇ ಸಂದರ್ಭದಲ್ಲಿ ಕೆಲವು ನಾಯಕರು ಸತ್ಯಾಗ್ರಹ ಸಮಾವೇಶದಲ್ಲಿ ಯಾವುದೇ ಬ್ರಾಹ್ಮಣರಿಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ಅಂಬೇಡ್ಕರ್ ನಮ್ಮ ಚಳುವಳಿಯು ಬ್ರಾಹ್ಮಣ್ಯದ ವಿರುದ್ಧ ಮತ್ತು ಬ್ರಾಹ್ಮಣ ಧರ್ಮದ ವಿರುದ್ಧವೇ ಹೊರತು, ಬ್ರಾಹ್ಮಣರ ವಿರುದ್ಧವಲ್ಲ ಎಂದು ಹೇಳಿದ್ದರು. ನಂತರದಲ್ಲಿ ಮತಾಂತರದ ಪ್ರಶ್ನೆ ಉದ್ಭವಿಸಿದಾಗ, ಇಸ್ಲಾಂಗೆ ಮತಾಂತರ ಹೊಂದುವ ಸಲಹೆಗಳೂ ಕೇಳಿಬಂದವು. ಆದರೆ ಅಂಬೇಡ್ಕರ್ ಅವರು ಮೊದಲು ನಾವು ಹಿಂದೂ ಧರ್ಮಕ್ಕೆ ಸೇರಿದವರೇ ಇಲ್ಲವೇ ಎಂದು ನಿರ್ಧರಿಸೋಣ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮವನ್ನು ಒದಗಿಸಿದ್ದರು.


೧೯೨೭ರ ಡಿಸೆಂಬರ್ ೨೩ರಂದು ಸತ್ಯಾಗ್ರಹ ಸಮಾವೇಶದ ವೇಳೆಗೆ ಮಹಾಡ್‌ನಲ್ಲಿ ೧೫ ಸಾವಿರಕ್ಕೂ ಹೆಚ್ಚು ದಲಿತರು ಸೇರಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಕೆರೆಯನ್ನು ನೀರನ್ನು ಬಳಸದಂತೆ ನಿಷೇದಾಜ್ಞೆ ಹೊರಡಿಸಿದ್ದರು. ಈ ಆಜ್ಞೆಯನ್ನು ಪಾಲಿಸಿದ ಅಂಬೇಡ್ಕರ್ ವಿಚಲಿತರಾಗದೆ, ಮತ್ತೊಂದು ವಿಶಿಷ್ಟ ಹೋರಾಟವನ್ನು ಹಮ್ಮಿಕೊಂಡಿದ್ದರು. ಪುರೋಹಿತಶಾಹಿ ಹಿಂದೂ ಧರ್ಮದ ಪವಿತ್ರ ಶಾಸನ ಗ್ರಂಥವಾದ ಮನುಸ್ಮೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಅಂಬೇಡ್ಕರ್ ಏರ್ಪಡಿಸಿದರು. ಈ ನಿರ್ಣಯವನ್ನು ಮಂಡಿಸಿದವರು ಸಹಸ್ರಬುದ್ಧಿ ಎಂಬ ಬ್ರಾಹ್ಮಣರಾದರೆ, ಅನುಮೋದಿಸಿದವರು ಚಂಬಾರರಾದ ರಾಜಭೋಜ್ ಅವರಾಗಿದ್ದರು. ಸಮಾವೇಶದ ಪ್ರಥಮ ದಿನದ ರಾತ್ರಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಮೂರನೆಯ ದಿನ ಆಕ್ರಮಣಶೀಲ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಭಕ್ತಿ ಸಂತರು, ಗಾಂಧೀಜಿ, ಅಗರ್‌ಕರ್ ಮತ್ತು ಶಾಹುಮಹಾರಾಜ್ ಅವರ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು. ನಂತರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯ ಮಹಿಳೆಯರನ್ನು ಕುರಿತು, ಕೆಳಜಾತಿಗಳಂತೆ ಬೆಳ್ಳಿಯ ಒಡವೆಗಳನ್ನು ಧರಿಸುವ ಪವೃತ್ತಿಯನ್ನು ಕೈಬಿಟ್ಟು  ತಮ್ಮ ಜಾತಿ ಸಂಕೇತಗಳು ಗೋಚರಿಸದಂತೆ, ಮೇಲ್ಜಾತಿಯವರ ರೀತಿ ಉಡುಪು ಧರಿಸಲು, ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಲು ಕರೆ ನೀಡಿದ್ದರು. ಈ ಹಂತದಿಂದ ಮಹಾಡ್ ಅಂಬೇಡ್ಕರ್ ಅವರ ಹೋರಾಟಗಳ ಕೇಂದ್ರ ಬಿಂದುವಾಯಿತು. ಅಸ್ಪೃಶ್ಯರ ಭಾಗವಹಿಸುವಿಕೆ ಮತ್ತು ಕೆಲವು ಮೇಲ್ಜಾತಿಯವರ ಬೆಂಬಲ ಅಂಬೇಡ್ಕರ್‌ಗೆ ಪ್ರೋತ್ಸಾಹದಾಯಕವಾಗಿತ್ತು.

ಹಿಂದೂ ಧರ್ಮದ ಪವಿತ್ರ ಶಾಸ್ತ್ರದ ವಿರುದ್ಧ ನಡೆದ ಈ ಸಂಘರ್ಷದೊಡನೆಯೇ, ಸಾರ್ವಜನಿಕ ಸ್ಥಳಗಳನ್ನು ಮತ್ತು ಅವಕಾಶಗಳನ್ನು ಬಳಸುವಲ್ಲಿ ದಲಿತರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು ತೀವ್ರವಾಗತೊಡಗಿತು. ೧೯೨೦ರ ದಶಕದಲ್ಲಿ ಅಸ್ಪೃಶ್ಯರಲ್ಲಿ ತಮ್ಮ  ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಲಾರಂಭಿಸಿತು. ಗುರುವಾಯೂರಿನಲ್ಲಿ ದೇವಾಲಯದ ಮುಂದೆ ಹಾದು ಹೋಗುವ ರಸ್ತೆಯಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ದಲಿತರು ಈ ರಸ್ತೆಯನ್ನು ಹಾದು ಹೋಗುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಪುಣೆಯ ಪಾರ್ವತಿ ದೇವಸ್ಥಾನ ಮತ್ತು ನಾಸಿಕ್‌ನಲ್ಲಿರುವ ರಾಮ ದೇವಾಲಯದಲ್ಲೂ ದಲಿತರ ಪ್ರವೇಶಕ್ಕಾಗಿ ಹೋರಾಟ ರೂಪುಗೊಂಡಿತು. ಈ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅಂಬೇಡ್ಕರ್ ಸೆಕ್ಯುಲರ್ ಪ್ರಜಾ ಹಕ್ಕುಗಳಿಗಾಗಿ ಮತ್ತು ಹಿಂದೂ ಧರ್ಮದ ನಿರಾಕರಣೆಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲೇ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಗಾಂಧೀಜಿಯವರ ಯತ್ನಗಳನ್ನು ಅಂಬೇಡ್ಕರ್ ತೀವ್ರವಾಗಿ ಟೀಕಿಸಲಾರಂಭಿಸಿದರು.

ನಾಸಿಕ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ಈ ಹಂತದಲ್ಲಿ ಆರ್ಯರ ಆಗಮನದ ವಾದವನ್ನು ಸಂಪೂರ್ಣವಾಗಿ ಒಪ್ಪದ ಅಂಬೇಡ್ಕರ್ ಹಿಂದೂ ಧರ್ಮವನ್ನೂ ಸಂಪೂರ್ಣವಾಗಿ ಖಂಡಿಸುತ್ತಿರಲಿಲ್ಲ. ಬದಲಾಗಿ ಭಕ್ತಿಪಂಥ, ತುಕಾರಾಂ, ಜ್ಞಾನೇಶ್ವರ್ ಮುಂತಾದ ಸಮಾಜ ಸುಧಾರಕರ ಬಗ್ಗೆ ಗಾಢವಾದ ಅಧ್ಯಯನವನ್ನು ಆರಂಭಿಸಿದ್ದರು. ತಮ್ಮದೇ ಆದ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಮಂಡಿಸುವ ಧ್ಯೇಯವನ್ನು ಹೊಂದಿದ್ದ ಅಂಬೇಡ್ಕರ್ ತಮ್ಮ ಅಧ್ಯಯನ ಮತ್ತು ಅನುಭವಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ತಮ್ಮ ತಂದೆಯವರ ಕಬೀರ್ ಪಂಥದ ಅನುಭವಗಳನ್ನು ಅಭ್ಯಸಿಸುತ್ತ ಕಬೀರ್‌ದಾಸ್ ಅವರ ತೀವ್ರಗಾಮಿತ್ವ ಹೇಗೆ ಬ್ರಾಹ್ಮಣವಾದದ ಚೌಕಟ್ಟಿನಲ್ಲಿ ಸಿಲುಕಿಹೋಗಿತ್ತು ಎಂಬ ಅಂಶವನ್ನೂ ಅಂಬೇಡ್ಕರ್ ಗ್ರಹಿಸಿದ್ದರು. ಅವರ ಮುಂದಿನ ಚಿಂತನಾ ಕ್ರಮವೂ ಇದರಿಂದಲೇ ಪ್ರಭಾವಿತವಾಗಿತ್ತು.


ಮುಂಬೈ ಶಾಸನ ಸಮಿತಿಯಲ್ಲಿ ಅಂಬೇಡ್ಕರ್ ಪ್ರಬಲ ದನಿಯಾಗಿ ಹೊರಹೊಮ್ಮಿದ್ದರು. ಅಸ್ಪೃಶ್ಯರ ಪರವಾದ ಅನೇಕ ಶಾಸನಗಳನ್ನು ಅನುಷ್ಟಾನಗೊಳಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು. ೧೯೨೭ರ ಸೆಪ್ಟೆಂಬರ್‌ನಲ್ಲಿ, ಮೇಲ್ಜಾತಿಯ ಹಿಂದೂಗಳು, ಕ್ರೈಸ್ತರು, ಅಸ್ಪೃಶ್ಯರನ್ನೊಳಗೊಂಡ ಸಮತಾ ಸಮಾಜ್ ಸಂಘವನ್ನು ಸ್ಥಾಪಿಸಿದ ಅಂಬೇಡ್ಕರ್ ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕಾಗಿ ಪ್ರಚಾರ ಕೈಗೊಂಡಿದ್ದರು. ಅಂತರ್ಜಾತಿ ವಿವಾಹದ ಕಾರ್ಯಕ್ರಮ ಫಲಪ್ರದವಾಗಲಿಲ್ಲ. ಈ ಹಂತದಲ್ಲಿ ಅಸ್ಪೃಶ್ಯರ ವಿವಾಹದಲ್ಲಿ, ಮನಃಪೂರ್ವಕವಾಗಿ ಅಲ್ಲದಿದ್ದರೂ, ಸಂದರ್ಭಕ್ಕನುಗುಣವಾಗಿ ವೈದಿಕ ಸಂಪ್ರದಾಯಗಳನ್ನು ಅನುಸರಿಸಲೂ ಸೂಚಿಸಿದ್ದರು. ಬಹುಶಃ ಈ ಹಂತದಲ್ಲಿ ಅಂಬೇಡ್ಕರ್ ಹಿಂದೂ ಧರ್ಮದ ಎಲ್ಲ ಸ್ವರೂಪಗಳನ್ನು ವಿರೋಧಿಸುತ್ತಿರಲಿಲ್ಲ ಎನಿಸುತ್ತದೆ.


ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಕೈಗೊಂಡ ಹೋರಾಟಗಳು ಹಿಂದೂ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಿಟ್ಟಿನಲ್ಲಿ ಸಾಗಿದ್ದು ಈಗ ಇತಿಹಾಸ. ಆದರೆ ಜಾತಿವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಪಷ್ಟತೆ ಇದ್ದು, ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಕಟಪಡಿಸುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಅಂಬೇಡ್ಕರ್ ಬ್ರಾಹ್ಮಣ ದ್ವೇಷಿ, ದಲಿತರ ಪರ ಎಂದಾಕ್ಷಣ ಬ್ರಾಹ್ಮಣ ವಿರೋಧಿ ಎಂದು ಆರ್ಥೈಸುವ ಆಧುನಿಕ ಚಿಂತಕರು ಈ ಸತ್ಯವನ್ನು ಗ್ರಹಿಸಿದರೆ ಒಳಿತು. 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.