Saturday, September 15, 2012

ಗಾಂಧಿ-ಅಂಬೇಡ್ಕರ್ ಮತ್ತು ಪುಣೆ ಒಪ್ಪಂದ



-ಅನಿಲ ಹೊಸಮನಿ

ಸಾಮಾಜಿಕ ಸಮಾನತೆಯ ಆಂದೋಲನದ ಜೊತೆ ಜೊತೆಗೆ ದೇಶದ ರಾಜಕಾರಣದಲ್ಲಿ ಭಾಗವಹಿಸುವುದರ ಅಗತ್ಯತೆ ಡಾ.ಅಂಬೇಡ್ಕರರಿಗೆ ಮನವರಿಕೆಯಾಗಿತ್ತು. ಅಧಿಕಾರ ಪ್ರಾಪ್ತಿ ಮಾಡಿಕೊಳ್ಳದೆ ಗುರಿ ಸಾಧನೆ ಯಾಗದೆಂಬುದು ಅವರ ಅರಿವಿಗೆ ಬಂದಿತ್ತು. ಮಹಾಡ್ ಸತ್ಯಾಗ್ರಹ, ಮನುಸ್ಮತಿ ದಹನ, ಕಾಳಾರಾಮ ಮಂದಿರ ಪ್ರವೇಶ ಚಳವಳಿಗಳಿಂದ ಅಸ್ಪಶ್ಯರಲ್ಲಿ ಅಭೂತಪೂರ್ವ ಸಂಘಟನೆ ಮತ್ತು ಜಾಗೃತಿ ಮೂಡಿತ್ತು. ಆದರೆ ಇಷ್ಟರಿಂದಲೇ ಅವರಿಗೆ ಸಮಾಧಾನವಿರಲಿಲ್ಲ. ಅದಕ್ಕಾಗಿಯೇ ಅವರು ಅಖಿಲ ಭಾರತ ಬಹಿಷ್ಕೃತ ವರ್ಗಗಳ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಮಾಡಿದರು. 1930ರ ಅಗಸ್ಟ್ 9 ಮತ್ತು 10ರಂದು ನಾಗಪುರದಲ್ಲಿ ಸಂಘಟಿಸಲಾದ ಪ್ರಥಮ ರಾಷ್ಟ್ರಮಟ್ಟದ ಅಧಿವೇಶನದ ಅಧ್ಯಕ್ಷತೆಯನ್ನು ಡಾ.ಅಂಬೇಡ್ಕರ್ ವಹಿಸಿದ್ದರು.
ವಿದರ್ಭ ಮತ್ತು ದೇಶದ ವಿವಿಧ ಭಾಗಗಳಿಂದ ಬಹುಸಂಖ್ಯೆಯ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಸ್ಪಶ್ಯರ ರಾಜಕೀಯ ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕೋಸ್ಕರ ಈ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಲ್ಲಿದ್ದ ಪ್ರತಿಯೊಬ್ಬರ ಮೇಲೂ ಗಾಢ ಪ್ರಭಾವ ಬೀರಿತು. ಅವರು ಹೇಳಿದರು- ನಮಗೆ ರಾಜಕೀಯ ಸ್ವಾತಂತ್ರವೂ ಬೇಕು, ಸಾಮಾಜಿಕ ಸಮಾನತೆ ಕೂಡ ಬೇಕು. ಸ್ವತಂತ್ರ ಭಾರತಕ್ಕೆ ಹೊಸ ರಾಜ್ಯ ಘಟನೆ ರೂಪಿಸು ವಾಗ ಅದರಲ್ಲಿ ನಮ್ಮ ಹಕ್ಕುಗಳು ನಮೂದಾಗಬೇಕು.
ಅಲ್ಪಸಂಖ್ಯಾತ ಮತ್ತು ದುರ್ಬಲರ ನಿರ್ಲಕ್ಷ ಮಾಡುವುದನ್ನು ನಾವು ಸಹಿಸುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ನಮಗೆ ಪ್ರತ್ಯೇಕ ಪ್ರತಿನಿಧಿತ್ವ ಬೇಕು. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಆಸ್ಪದ ನೀಡುವ ಸ್ವತಂತ್ರ ಮತದಾರ ಕ್ಷೇತ್ರಗಳು ಬೇಕು. ಅಂಥ ವ್ಯವಸ್ಥೆ ಹೊಸ ಸಂವಿಧಾನದಲ್ಲಿ ಇರಬೇಕು. ಅನೇಕ ವಿಷಯಗಳಲ್ಲಿ ಬ್ರಿಟಿಷ್ ಸರಕಾರವು ಅಸಹಾಯಕವಾಗಿದೆ ಮತ್ತು ಸವರ್ಣ ಹಿಂದೂ ಗಳು ಕೂಡ ನಮ್ಮನ್ನು ಬೆಂಬಲಿಸುವುದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವು ಸ್ವತಂತ್ರ ವಾಗಿ ನಮ್ಮ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು. ನಮ್ಮ ಸ್ವತಂತ್ರ ಅಸ್ತಿತ್ವವನ್ನು ಭಾರತಕ್ಕೆ ತೋರಿಸಿಕೊಡಬೇಕು ಮತ್ತು ಇಂಗ್ಲಿಷ್ ಸರಕಾರವೂ ನಮ್ಮ ಸ್ವತಂತ್ರ ಅಸ್ತಿತ್ವವನ್ನು ಮಾನ್ಯ ಮಾಡಬೇಕು.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಾ.ಅಂಬೇಡ್ಕರ್ ಈ ಅಧಿವೇಶನದಲ್ಲಿ ಮಂಡಿಸಿದರು. ಅದೆಂದರೆ, 1) ಅಸ್ಪಶ್ಯರಿಗಾಗಿ ಮೀಸಲು ಮತಕ್ಷೇತ್ರಗಳು, 2) ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ. ಸರ್ವ ಸಾಮಾನ್ಯವಾಗಿ ಮೀಸಲು ಕ್ಷೇತ್ರಗಳಿರಲೆಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ಆದರೆ ಅನೇಕರು ಸಂಯುಕ್ತ ಮತದಾರ ಕ್ಷೇತ್ರಗಳಿರ ಬೇಕು ಎಂಬ ವಿಚಾರ ವ್ಯಕ್ತಪಡಿಸಿದರು. ಆದರೆ ಡಾ.ಅಂಬೇಡ್ಕರ್‌ರು ಆ ವಿಚಾರವನ್ನು ವಿರೋಧಿ ಸಿದರು. ಸಂಯುಕ್ತ ಮತದಾರ ಕ್ಷೇತ್ರಗಳಲ್ಲಿ ಸವರ್ಣ ಹಿಂದೂಗಳು ತಮ್ಮ ಗುಲಾಮ ಅಭ್ಯರ್ಥಿಯನ್ನು ಅಸ್ಪಶ್ಯರ ಮೇಲೆ ಹೇರುವ ರೆಂಬ ಭಯ ಅವರಿಗಿತ್ತು. ಮೀಸಲು ಮತಕ್ಷೇತ್ರ ಗಳು ಡಾ.ಅಂಬೇಡ್ಕರರು ಅತ್ಯಂತ ವಿಚಾರ ಪೂರ್ವಕವಾಗಿ ಮಂಡಿಸಿದ ವಿಷಯವಾಗಿತ್ತು.
ಮುಸಲ್ಮಾನರಿಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಕೊಡುವುದಾದರೆ ಅಸ್ಪಶ್ಯರಿಗೆ ಏಕೆ ಬೇಡ? ಇದು ಅವರ ನೇರ ಪ್ರಶ್ನೆಯಾಗಿತ್ತು. ಕುಡಿಯುವ ನೀರಿನ ಸಮಸ್ಯೆ, ಮಂದಿರ ಪ್ರವೇಶದಂತಹ ಸಾಮಾನ್ಯ ಸವಲತ್ತುಗಳನ್ನು ನೀಡುವುದಕ್ಕೆ ಹಿಂದೂ ಸನಾತನಿಗಳು ಹಿಂಜರಿಯುತ್ತಿರುವಾಗ, ಅಸ್ಪಶ್ಯರ ಹಿತರಕ್ಷಣೆ ಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನೇಕೆ ಕೇಳಬಾರದು? ಸಮಾಜವನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ, ಅದರ ಪ್ರತಿನಿಧಿಗಳು ಆಡಳಿತದಲ್ಲಿ ಇರುವುದು ಅಗತ್ಯ ವಿದೆ ಮತ್ತು ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಿರಬೇಕು ಎಂಬುದು ಡಾ.ಅಂಬೇಡ್ಕರರ ಅಭಿಪ್ರಾಯ ವಾಗಿತ್ತು. ರಾಜಕೀಯ ಹಕ್ಕುಗಳ ಮಂಡನೆಯ ನಂತರ ಅಧಿವೇಶನ ಮುಕ್ತಾಯಗೊಂಡಿತು.
1930ರ ಸೆಪ್ಟಂಬರ್ ತಿಂಗಳಲ್ಲಿ ಇಂಗ್ಲಿಷ್ ಸರಕಾರವು ದುಂಡು ಮೇಜಿನ ಪರಿಷತ್ತಿಗೆ ಡಾ.ಅಂಬೇಡ್ಕರರನ್ನು ಆಮಂತ್ರಿಸಿತು. ಈ ಮುಖೇನ ಸರಕಾರವು ಡಾ.ಅಂಬೇಡ್ಕರ್ ಭಾರತದ ಅಸ್ಪಶ್ಯರ ಪ್ರತಿನಿಧಿಯೆಂದು ಮನ್ನಿಸಿತ್ತು. ಬ್ಯಾ.ಜಿನ್ನಾ, ಸಪ್ರು, ಜಯಕರ ಮತ್ತಿತರ ಗಣ್ಯರೊಂದಿಗೆ ಡಾ.ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸುತ್ತಿದ್ದುದು ಮಹತ್ವದ ಸಂಗತಿಯಾ ಗಿತ್ತು. ಭಾರತದ ಹೊಸ ಸಂವಿಧಾನ ರಚಿಸು ವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ ನಿಟ್ಟಿನಲ್ಲಿ 12, ನವೆಂಬರ್ 1930ರಂದು ಲಂಡನ್‌ನಲ್ಲಿ ದುಂಡು ಮೇಜಿನ ಪರಿಷತ್ತು ನಡೆಯಲಿತ್ತು. ಇಂಗ್ಲೆಂಡಿನ ಅರಸು 5ನೆ ಜಾರ್ಜ್ ಈ ಪರಿಷತ್‌ನ ಉದ್ಘಾಟನೆ ನೆರವೇರಿಸಲಿದ್ದರು.

ನಾಗಪುರ ಅಧಿವೇಶನವು ಡಾ.ಅಂಬೇಡ್ಕರರ ವ್ಯಕ್ತಿತ್ವವನ್ನು ಹೆಚ್ಚಿಸಿತ್ತು. ಅದುವರೆಗೆ ಮಹಾ ರಾಷ್ಟ್ರದ ದಲಿತ ನೇತಾರರಾಗಿದ್ದ ಡಾ. ಅಂಬೇಡ್ಕರ್ ಈಗ ಇಡೀ ಭಾರತದ ದಲಿತರಿಗೆ ನಾಯಕರಾಗಿ ಮಾರ್ಪಟ್ಟರೆಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಹಕ್ಕುಗಳು ದೊರೆತ ಮಾತ್ರಕ್ಕೆ ಮಂತ್ರದಂಡ ತಿರುಗಿಸಿದಂತೆ ಬದಲಾವಣೆ ಆಗಲಾರದು ಎಂಬ ಅಭಿಪ್ರಾಯ ಅವರದಾಗಿತ್ತು. ಹಾಗೆಂದೇ ತಮ್ಮ ಅಭಿವೃದ್ಧಿಗೆ ಅಸ್ಪಶ್ಯರೇ ಸ್ವತಃ ಕಂಕಣಬದ್ಧರಾಗಬೇಕೆನ್ನುವುದು ಅವರ ನಂಬುಗೆಯಾಗಿತ್ತು. ಮೊಟ್ಟಮೊದಲಿಗೆ ಎಲ್ಲ ಅಸ್ಪಶ್ಯರು ವಿದ್ಯೆ ಪಡೆಯಬೇಕು, ತಮ್ಮ ಜೀವನಕ್ರಮ ಬದಲಿಸಿಕೊಳ್ಳಬೇಕು ಮತ್ತು ನಿರ್ಭಯರಾಗಬೇಕು. ಭಾರತದ ರಾಜಕಾರಣ ದಲ್ಲಿ ಅಸ್ಪಶ್ಯ ಸಮಾಜವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಡಾ.ಅಂಬೇಡ್ಕರರು ತಮ್ಮ ವಿಚಾರಗಳನ್ನು ಮಂಡಿಸಿದರು. ಅವರ ಈ ವಿಚಾರ ಸರಣಿ ಜನಸಮುದಾಯದ ಮೇಲೆ ಗಾಢ ಪರಿಣಾಮ ಬೀರಿತು. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ ಚಳವಳಿ ವಿಸ್ತೃತವಾಗತೊಡಗಿತ್ತು. ಅಸ್ಪಶ್ಯ ಸಮಾಜದ ಆಸೆ-ಆಕಾಂಕ್ಷೆಗಳ ಕುರಿತ ಡಾ.ಅಂಬೇಡ್ಕರ್ ಬೇಡಿಕೆಗಳನ್ನು ಒಪ್ಪಿಕೊಂಡು, ಈ ಸಮುದಾಯಗಳನ್ನೂ ರಾಷ್ಟ್ರೀಯ ಮುಕ್ತಿ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡುವ ವಿಚಾರಗಳೂ ಕೇಳಿಬಂದವು. ಆದರೆ ಸ್ವಾತಂತ್ರಾನಂತರ ಕಾರ್ಮಿಕರ, ರೈತರ, ಅಸ್ಪಶ್ಯರ ಸ್ಥಾನವೇನು? ಎಂಬ ಪ್ರಶ್ನೆಗೆ ಮಹಾತ್ಮಾ ಗಾಂಧಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಲಿಲ್ಲ. ಸ್ವರಾಜ್ಯ ಪ್ರಾಪ್ತಿಯ ನಂತರ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಯೋಚಿಸುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡರು. ಇದಕ್ಕೆ ಕಾಂಗ್ರೆಸ್‌ನ ನೇತೃತ್ವ ಉಚ್ಚವರ್ಣೀಯರ ಮತ್ತು ಉಚ್ಚ ವರ್ಗಗಳ ಕೈಯಲ್ಲಿತ್ತೆಂಬುದೇ ಕಾರಣವಲ್ಲದೆ ಬೇರೇನಲ್ಲ.
4ನೆ ಅಕ್ಟೋಬರ್ 1930ರಂದು ಡಾ.ಅಂಬೇಡ್ಕರ್‌ರು ಮುಂಬೈ ಬಂದರಿನಿಂದ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ವಿದೇಶ ಪ್ರವಾಸ ಅವರಿಗೆ ಹೊಸದೇನೂ ಆಗಿರಲಿಲ್ಲ. ಅಮೇರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅವರು ಅನೇಕ ವರ್ಷಗಳವರೆಗೆ ಇದ್ದು, ತಮ್ಮ ಉನ್ನತ ಶಿಕ್ಷಣ ಪೂರೈಸಿದ್ದರು. ಹೆಸರಾಂತ ಪ್ರಾಧ್ಯಾಪಕರ ಮಾರ್ಗ ದರ್ಶನದ ಲಾಭವನ್ನು ಅವರು ಪಡೆದಿದ್ದರು. ಹೆಸರಾಂತ ವಿಶ್ವ ವಿದ್ಯಾಲಯದ ಪದವಿಗಳನ್ನು ಅವರು ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡಿದ್ದರು. ನಿಧಾನವಾಗಿ ಭಾರತದ ನಾಯಕರು ಲಂಡನ್ ತಲುಪತೊಡಗಿದ್ದರು.

ಮದ್ರಾಸ್‌ನ ರಾವ್ ಬಹುದ್ದೂರ್ ಕೂಡ ಅಂಬೇಡ್ಕರ್ ಜೊತೆಗಿದ್ದರು. ಮುಂಚೆಯೇ ನಿರ್ಧರಿಸಿದಂತೆ ನವೆಂಬರ್ 12, 1930ರಂದು ಇಂಗ್ಲೆಂಡ್ ದೊರೆ ದುಂಡು ಮೇಜು ಪರಿಷತ್ತನ್ನು ಉದ್ಘಾಟಿಸಿದರು. ಈ ದುಂಡು ಮೇಜಿನ ಪರಿಷತ್ತಿನಲ್ಲಿ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಭೂತಪೂರ್ವ. ಭಾರತದಲ್ಲಿ 4 ಕೋಟಿ 20 ಲಕ್ಷ ಅಸ್ಪಶ್ಯರಿದ್ದಾರೆ. ಈ ಸಂಖ್ಯೆಯು ಇಂಗ್ಲೆಂಡ್ ಅಥವಾ ಫ್ರಾನ್ಸ್ ಜನಸಂಖ್ಯೆಗಿಂತ ಜಾಸ್ತಿ. ಈ ಪೀಡಿತ ಮತ್ತು ಶೋಷಿತ ಜನರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಅಸ್ಪಶ್ಯತೆ ಎಂದರೇನೆಂಬುದೇ ಜಗತ್ತಿನ ಅನ್ಯ ದೇಶಗಳಿಗೆ ತಿಳಿಯದು. ಯಾಕೆಂದರೆ ಇಂಥ ಅಮಾನುಷ ಆಚರಣೆ ಜಗತ್ತಿನ ಯಾವ ಭಾಗ ದಲ್ಲೂ ಇಲ್ಲ. ಇಂಗ್ಲೆಂಡ್ ಮತ್ತು ಅಮೇರಿಕ ಗಳಲ್ಲಿ ನಿಗ್ರೋ ಗುಲಾಮರ ಮಾರಾಟ-ಖರೀದಿ ಬಹಳ ಹಿಂದೆ ಆಚರಣೆಯಲ್ಲಿತ್ತು. ನಂತರ ಕಾನೂನು ಮೂಲಕ ಈ ಗುಲಾಮಗಿರಿ ಅಂತ್ಯಕಂಡಿತು. ಅಲ್ಲಿ ಗುಲಾಮಗಿರಿಯಿತ್ತೇ ವಿನಃ ಅಸ್ಪಶ್ಯತೆಯಿರಲಿಲ್ಲ.
ಗುಲಾಮರ ಸ್ಪರ್ಶ ಮಾಡುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಭಾರತದ ಪರಿಸ್ಥಿತಿ ಬೇರೆಯೇ ಇದೆ ಎಂಬುದರ ಪರಿಚಯ ಮಾಡಿಕೊಟ್ಟರು. ಭಾರತೀಯ ಸೈನ್ಯದಲ್ಲಿ ಅಸ್ಪಶ್ಯರಿಗೆ ಪ್ರವೇಶವಿಲ್ಲ. ಪೊಲೀಸ್ ಖಾತೆಯಲ್ಲಿ ಮತ್ತು ಸರಕಾರಿ ನೌಕರಿಗಳು ಅವರಿಗೆ ಸಿಗುತ್ತಿಲ್ಲ. ಮಾನವೀಯ ಮರ್ಯಾದೆ ಪಡೆಯುವುದಕ್ಕೋಸ್ಕರ ಭಾರತದ ಐದನೇ ಒಂದು ಭಾಗದಷ್ಟು ಜನರು ಹೋರಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ಅವರಿಗೆ ಪ್ರವೇಶ ನಿಷೇಧಿಸಲಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ರವರ ಈ ವೈಚಾರಿಕ ಸಂಘರ್ಷವು ವಿಕೋಪಕ್ಕೆ ತಿರುಗಿತು. ಗಾಂಧಿಯಾದರೋ ಈ ಸಂಬಂಧ ತಮ್ಮ ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿ ದ್ದರು.
ಗಾಂಧೀಜಿ ಪ್ರಾಣ ಉಳಿಸುವಂತೆ ಅಂಬೇಡ್ಕರ್‌ರ ಮೇಲೆ ಒತ್ತಡಗಳು ಬರಲಾರಂಭಿಸಿದವು. ಉಪವಾಸ ಸತ್ಯಾಗ್ರಹ ಒಂದೊಂದೇ ದಿನ ಹೆಚ್ಚುತ್ತಾ ಹೋದಂತೆ ಗಾಂಧೀಜಿ ಆರೋಗ್ಯ ಹದಗೆಡಲಾರಂಭಿಸಿತು. ಇಡೀ ದೇಶವೇ ಚಿಂತೆಯಲ್ಲಿ ಮುಳುಗಿತು. ಕೊನೆಗೆ ಡಾ.ಅಂಬೇಡ್ಕರರು ಗಾಂಧಿಯನ್ನು ಭೇಟಿ ಮಾಡಿದರು. ಪರಸ್ಪರ ಮಾತುಕತೆಯ ನಂತರ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಬಿಟ್ಟುಕೊಡಲು ಡಾ.ಅಂಬೇಡ್ಕರ್ ಒಪ್ಪಿ ಕೊಂಡರು. ಗಾಂಧೀಜಿ ಉಪವಾಸ ಕೊನೆಗೊಳಿಸಿದರು. ಈ ಒಪ್ಪಂದವೇ ಪುಣೆ ಒಪ್ಪಂದ ಎಂದು ಜನಜನಿತವಾಯಿತು. ಒಬ್ಬ ಅಸ್ಪಶ್ಯ ಗಾಂಧೀಜಿಯ ಪ್ರಾಣ ಉಳಿಸಿದರೆ, ಒಬ್ಬ ಬ್ರಾಹ್ಮಣ ಕೈಯಲ್ಲಿ ಪಿಸ್ತೂಲು ಹಿಡಿದು ಹತ್ಯೆ ಮಾಡಿದನು.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.