Wednesday, October 02, 2013

ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವ !

ವೀರಶೈವ-ಲಿಂಗಾಯತ ಬಗ್ಗೆ ಜೆ.ಪಿ. ಶೌಟನ್ ಅವರ ಅಧ್ಯಯನ 
( ಅನು : ಟಿ.ಆರ್. ಚಂದ್ರಶೇಖರ)

‘15ನೆಯ ಶತಮಾನದ ವೀರಶೈವದ ಬಗ್ಗೆ ತಿಳಿದುಕೊಳ್ಳಲು ತೋಂಟದ ಸಿದ್ಧಲಿಂಗೇಶ್ವರರ ವಚನಗಳು ಮುಖ್ಯ ಆಕರಗಳಾಗಿವೆ. ಈ ಆಕರದಲ್ಲೂ ಸಹ ವೀರಶೈವದ ಪ್ರಾರಂಭದ ಘಟ್ಟದಲ್ಲಿ ಪ್ರಧಾನವಾಗಿದ್ದ ಸಾಮಾಜಿಕ ವಿಚಾರಗಳಿಗೆ ಇಲ್ಲಿ ಕನಿಷ್ಟ ಗಮನವೂ ದೊರೆತಿಲ್ಲ. ಜಾತಿಗೆ ಸಂಬಂಧಿಸಿದಂತೆ ಸಿದ್ಧಲಿಂಗೇಶ್ವರರು ಸಾಂಪ್ರದಾಯಿಕ ಮಡಿ ಮೈಲಿಗೆ ವಿಚಾರಗಳಿಗೆ ಮೊರೆ ಹೋದಂತೆ ಕಾಣುತ್ತದೆ. ಜಾತಿ ತಾರತಮ್ಯದ ವಿವರವಾದ ವಿಶ್ಲೇಷಣೆಯಿರುವ ಇವರ ಏಕಮೇವ ವಚನವೊಂದರಲ್ಲಿ ಬಸವ ಮತ್ತು ಅವನ ಸಮಕಾಲೀನರು ಪ್ರಚುರಪಡಿಸಿದ್ದ ಸಮಾನತೆ ವಿಚಾರಕ್ಕೆ ಇಲ್ಲಿ ಅವಕಾಶವನ್ನೇ ನೀಡಿಲ್ಲ. ಜಾತಿಗೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯವಾದಿ ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವವನ್ನು ರೂಪಿಸಿದವರೇ ಸಿದ್ಧಲಿಂಗೇಶ್ವರ.

ಬೊಂಬಾಯಿ ಶ್ರೇಷ್ಟ ನ್ಯಾಯಾಲಯವು 1879 ರಲ್ಲಿ ಒಂದು ತೀರ್ಪಿನಲ್ಲಿ ಲಿಂಗಾಯತರು ಶೂದ್ರರು ಎಂದು ಘೋಷಿಸಿತು. ಇದು ಲಿಂಗಾಯಿತರ ಪ್ರತಿಭಟನೆಗೆ ಕಾರಣವಾಯಿತು.

ಮೈಸೂರು ರಾಜ್ಯದಲ್ಲಿ ‘1891 ರ ಜನಗಣತಿ ಸಂದರ್ಭದಲ್ಲಿ ಲಿಂಗಾಯತರನ್ನು ಹಿಂದೂ ವರ್ಣ ವ್ಯವಸ್ಥೆಯ ನಾಲ್ಕನೇ ಸ್ಥಾನದ ಶೂದ್ರ ವರ್ಗವೆಂದು ವರ್ಗೀಕರಿಸಲು ಕ್ರಮ ಕೈಗೊಂಡಾಗ ತೀವ್ರವಾಗಿ ಪ್ರತಿಭಟನೆ ಉಂಟಾಯಿತು. ಲಿಂಗಾಯತರ ಅನೇಕ ಪ್ರಭಾವಿ ಗುಂಪುಗಳು ಕನಿಷ್ಟ ಪಕ್ಷ ತಮ್ಮನ್ನು ಲಿಂಗಾಯತ ಬ್ರಾಹ್ಮಣರೆಂದು ಪರಿಗಣಿಸಬೇಕೆಂದು ಒತ್ತಾಯಿಸಿತು. ... ... ... ... ... ... ... ...  ಶೂದ್ರರೆಂಬ ವರ್ಗೀಕರಣದಿಂದ ಉಂಟಾಗುವ ಅವಮಾನದಿಂದ ರಕ್ಷಣೆ ಕೋರಿ ನಿಯೋಗವೊಂದು ಮಹಾರಾಜರನ್ನು ಭೇಟಿ ಮಾಡಿತು. ರಾಜ ಸಂಸ್ಥಾನದ ಸರ್ಕಾರವು ಇವರ ಮನದ ಅಳಲನ್ನು ಭಾಗಶಃ ಒಪ್ಪಿಕೊಂಡು ಶೂದ್ರ ಸ್ಥಾನಮಾನವನ್ನು ಅಪ್ರಧಾನಗೊಳಿಸಿ ಅವರವರ ಒಳಪಂಗಡಗಳ ಹೆಸರುಗಳಿಂದಲೇ ವರ್ಗೀಕರಿಸುವ ಕ್ರಮ ಕೈಗೊಂಡಿತು. ಆದರೆ ‘ಲಿಂಗಾಯತ ಬ್ರಾಹ್ಮಣ’ ಎಂಬುದನ್ನು ಕೇವಲ ಖಾಸಗಿಯಾಗಿ ಬಳಸಲು ಅನುಮತಿ ನೀಡಿತು.

1901 ರ ಜನಗಣತಿ ಸಂದರ್ಭದಲ್ಲಿ ಅನೇಕ ಲಿಂಗಾಯತ ಕ್ರಿಯಾ ಸಮಿತಿಗಳು ಹುಟ್ಟಿಕೊಂಡವು. ಲಿಂಗಾಯತ ಸಮುದಾಯವನ್ನು ಸಾಂಪ್ರದಾಯಿಕ ಹಿಂದೂ ವರ್ಣ ವ್ಯವಸ್ಥೆಗೆ ಸಮಾನಾಂತರವಾಗಿ ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ, ವೀರಶೈವ ವೈಶ್ಯ ಹಾಗೂ ವೀರಶೈವ ಶೂದ್ರರೆಂಬ ಹೊಸ ವರ್ಗೀಕರಣ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತು. ... ... ... ... ... ... ... ... ... ... ... ... ... ... ... ... ... ... ಈ ಬಗೆಯ ಮೂಲಭೂತ ಬದಲಾವಣೆ ಒಳಗೊಂಡ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಸು ಆಡಳಿತ ವ್ಯವಸ್ಥೆಗಿರಲಿಲ್ಲ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸಮುದಾಯಕ್ಕೆ ವೈಭವದ ಸ್ಥಾನವನ್ನು ಒದಗಿಸುವ ಸಲುವಾಗಿ ಮತ್ತು ವೈದಿಕ ಸಂಸ್ಕøತ ಪಂಥದ ಜೊತೆಗಿನ ವೀರಶೈವದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಲಿಂಗಾಯತರು ಪ್ರಯತ್ನಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ 12ನೆಯ ಶತಮಾನದ ಕ್ರಾಂತಿಕಾರಿ ವಿಚಾರಕ್ಕೆ ಮತ್ತು ಬಸವನಿಗೆ ಯಾವುದೇ ಸ್ಥಾನ – ಮಹತ್ವ ನೀಡಲಿಲ್ಲ.

ವರ್ಣ ರಚನೆಗೆ ಪ್ರತಿಯಾಗಿ ಲಿಂಗಾಯತ ಸಮುದಾಯವನ್ನು ಒಂದು ಕಡೆಯಲ್ಲಿ ವೀರಶೈವ ಬ್ರಾಹ್ಮಣ ಮತ್ತು ಇನ್ನೊಂದು ಕಡೆ ವೀರಶೈವ ಶೂದ್ರ ಎಂಬ ಅನುಕ್ರಮ ಸ್ಥಾಪಿಸುವ ಪ್ರಯತ್ನಗಳ ಕಾಲ ಮುಗಿಯಿತು. ಲಿಂಗಾಯತ ಸಮುದಾಯವು ಹೆಚ್ಚು ಸಂವೃತಗೊಂಡಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿವೆ. ವ್ಯಕ್ತಿಗತ ಮತಾಂತರ ಸಂಭವಿಸಬಹುದಾದರೂ ಸಹ ಜಾತಿಗಳೇ ಲಿಂಗಾಯತವಾಗಿ ಮತಾಂತರ ಹೊಂದುವ ಪರಿ ಇಂದು ಪೂರ್ಣವಾಗಿ ನಿಂತು ಹೋಗಿದೆ.

ಲಿಂಗಾಯತ ಸಮುದಾಯವು ಜಾತಿಯ ಎಲ್ಲ ಲಕ್ಷಣಗಳನ್ನೂ ಪ್ರದರ್ಶಿಸುತ್ತಿದೆ. ನಿಯಮದ ಪ್ರಕಾರ ಇಂದಿಗೂ ಅನ್ಯ ಜಾತಿಗಳ ಜೊತೆ ಆಹಾರ ಸ್ವೀಕಾರ ನಿಷಿದ್ಧ. ಆದರೆ ಇದು ಆಚರಣೆಯಲ್ಲಿ ಅಷ್ಟು ಕಟ್ಟುನಿಟ್ಟಾಗಿಲ್ಲ. ವಿವಾಹಗಳಲ್ಲಿ ತಮ್ಮದೇ ಜಾತಿಯೊಳಗೆ ಗಂಡು-ಹೆಣ್ಣುಗಳನ್ನು ಆರಿಸಲಾಗುತ್ತದೆ. ಉಳಿದೆಲ್ಲಾ ಜಾತಿಗಳಿಗಿಂತ ಲಿಂಗಾಯತರಲ್ಲಿ ಜಾತಿ ಮನೋಭಾವ ಅತಿಯಾಗಿದೆ ಎಂಬ ಹೆಗ್ಗಳಿಕೆಯೂ ಆ ಜಾತಿಗಿದೆ.

19ನೆಯ ಶತಮಾನದಲ್ಲಿ ಲಿಂಗಾಯತ ಸಮುದಾಯದಲ್ಲಿ ಕಂಡುಬಂದ ಛಿದ್ರೀಕರಣವು ಈಗ ಗತಕಾಲಕ್ಕೆ ಸೇರಿದ ಸಂಗತಿಯಾಗಿ ಬಿಟ್ಟಿತು. ಆದರೆ ಹುಟ್ಟಿನೊಂದಿಗೆ ಬಂದ ತರತಮಭಾವ ಇಂದಿಗೂ ಮುಂದುವರಿದಿದೆ. ಹೆಚ್ಚು ಕಡಿಮೆ ಲಿಂಗಾಯತ ಜಾತಿಯಲ್ಲಿ ಜನಿಸಿದವರನ್ನೆಲ್ಲಾ ಸಮಾಜವು ಲಿಂಗಾಯತ ಎಂದು ಪರಿಗಣಿಸುತ್ತಿದೆ. ಕರ್ನಾಟಕದಲ್ಲಿ ಅದೊಂದು ಸಂವೃತ ಸಮುದಾಯವಾಗಿ ಕಂಡು ಬಂದಿದೆ. ಹೀಗೆ ಜಾತಿಭೇದವನ್ನು ತಿರಸ್ಕರಿಸಿದ ಚಳುವಳಿಯೊಂದು ಅಂತಿಮ ಘಟ್ಟದಲ್ಲಿ ತಾನೇ ಒಂದು ಜಾತಿಯಾಗಿ ಬಿಟ್ಟಿತು.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.