Sunday, November 04, 2012

ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ !



- ರಘೋತ್ತಮ ಹೊ.ಬ, ಚಾಮರಾಜನಗರ

ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ಈ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ಅಂಬೇಡ್ಕರ ರಿಂದ ಸಂವಿಧಾನ ಶಿಲ್ಪಿ ಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು!

ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತಿದೆ. ಯಾಕೆಂದರೆ ಹಿಂದೆಲ್ಲಾ ಇದು ಅಂದರೆ ಅವರು ಇವರು ಎನ್ನುವುದು ಅಥವಾ ಇವರು ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ. ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ.

ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದ ಹಾಗೆ ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.ಯಾಕೆಂದರೆ ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು, ಇದು ಈ ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಅಲ್ಲ ಎಂದು ಸಾಧಿಸುವ ಈ ವ್ಯರ್ಥಾಲಾಪ. ಅಂದಹಾಗೆ ಅದುನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ “Our Constitution”  ಎಂಬ ಕೃತಿಯಲ್ಲಿ.ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬವವರು ಎಂದು!

ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್‌ರವರು ಪ್ರಥಮ ಕರಡು ರಚಿಸಿದರಂತೆ, ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್‌ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಶ್ಯಪ್ ತಮ್ಮ“Our Constitution” ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ.

ಆ ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ 1947 ಆಗಸ್ಟ್‌ರಿಂದ 1949 ಅಕ್ಟೋಬರ್‌ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್ ತಿಂಗಳಲ್ಲಿ, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ ತಾನೆ? ಅಂದಹಾಗೆ 1947ರ ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಆ ಎರಡು ವರ್ಷಗಳ ಸಮಯದಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ! (ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿರುವುದನ್ನೊರತು ಪಡಿಸಿದರೆ!).

ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಸಮಿತಿಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದಿಲ್ಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು. ಅಂದಹಾಗೆ ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್‌ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಆ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ?

ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು ಸ್ಪಷ್ಟಪಡಿಸಬೇಕು.ಸಂವಿಧಾನ ಅರ್ಪಿತವಾದ ಆ ಸಂಧರ್ಭದಲ್ಲಿ ಅಂದರೆ ನವೆಂಬರ್ 26,1949ರಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ಈ ದೇಶಕ್ಕೆ ನೀಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಈ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬು ರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು.

ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆ ಜೊತೆಯಲ್ಲೆ ಬೆಳೆದವರು, ಅರುಣ್ ಶೌರಿ ಮತ್ತು ಸುಭಾಷ್ ಕಶ್ಯಪ್‌ರ ಹಾಗೆ ಅದನ್ನು ಅದರ ಇತಿಹಾಸವನ್ನು ದೂರದಿಂದ ಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ? ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರವನ್ನು ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಎಲ್ಲಿಯೂ ಪ್ರಶ್ನಿಸುವುದಿಲ್ಲ! ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಆ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆ ಹೊತ್ತ ಕರಡು ಸಮಿತಿಯ ಅಧ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ ದೇಶಕ್ಕೆ ಸ್ವಾತಂತ್ರ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ಈ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ?

ಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನು ಸಂವಿಧಾನಶಿಲ್ಪಿ ಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, ಅಂಬೇಡ್ಕರ್ ಅಸ್ಪಶ್ಯರು ; ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲ ಎಂದು !
ಕೃಪೆ : ವಾರ್ತಾಭಾರತಿ
  
 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.