Sunday, February 12, 2012

‘ಹರಿಜನ' ಎಂದರೆ 'ಸೂ... ಮಗನೇ' ಎಂದಂತೆ ನೆನಪಿರಲಿ !


ರಘೋತ್ತಮ ಹೊ.ಬ.


ಈ ದೇಶದಲ್ಲಿ ಎಂತೆಂತಹ ವ್ಯಂಗ್ಯಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಜನಾಂಗವೊಂದಕ್ಕೆ ಹೊಸ ಹೆಸರಿಡುವ ವ್ಯಂಗ್ಯವೂ ಕೂಡ ನಡೆದಿದೆ. ಒಂದರ್ಥದಲ್ಲಿ ಅದನ್ನು ದುರಂತವೆನ್ನಬಹುದು. ಯಾಕೆಂದರೆ ಯಾವೊಂದು ಸಮುದಾಯವನ್ನು ತಾವು ಕೀಳು, ಹೊಲಸು ಎಂದು ಮತ್ತೊಂದು ಸಮುದಾಯ ಭಾವಿಸಿತ್ತೋ ಅಂತಹ ಶತ್ರು ಸಮುದಾಯ ತನ್ನ ಅಧೀನ ಸಮುದಾಯಕ್ಕೆ ಇಟ್ಟ ಹೆಸರದು. ಅಂದಹಾಗೆ ಅಧೀನ ಸಮುದಾಯ ವಾಗಿರುವ ಆ ಅಸ್ಪಶ್ಯ ಸಮುದಾಯವೇನೂ ತನಗೆ ಹೊಸ ಹೆಸರು ನೀಡಿ ಎಂದು ತನ್ನ ವಿರುದ್ಧ ತೊಡೆ ತಟ್ಟಿದ್ದ ಆ ಪಟ್ಟಭದ್ರ ಸಮುದಾಯವನ್ನು ಗೋಗರೆದಿರಲಿಲ್ಲ ಅಥವಾ ಅರ್ಜಿ ಗುಜರಾಯಿಸಿರಲಿಲ್ಲ.

ಆದರೆ ಅಂಥಹದ್ದೊಂದು ನಾಮಕರಣ ಶಾಸ್ತ್ರ ನಡೆದುಹೋಯಿತು. ಅದು ಅಂತಿಂಥ ನಾಮಕರಣ ಶಾಸ್ತ್ರವಲ್ಲ. ಒಂದು ಬೃಹತ್ ಸಮುದಾಯಕ್ಕೆ ಅದರ ಸ್ಥಿತಿಗತಿಗಳನ್ನು, ಅದರ ವೇಷಭೂಷಣವನ್ನು, ಅದರ ರೂಪ-ಕುರೂಪವನ್ನು ನೋಡಿ ಇಟ್ಟ ಹೆಸರದು. ನಮ್ಮ ಕಡೆ ಮಗು ಕಪ್ಪಗಿದ್ದರೆ ಕರಗಯ್ಯ ಎಂದು, ಕೆಂಪಗಿದ್ದರೆ ಕೆಂಪಯ್ಯ ಎಂದು, ಕಾಡು ಮನುಷ್ಯನ ಥರ ಇದ್ದರೆ ಕಾಡಯ್ಯ ಎಂದು (ಸದ್ಯಕ್ಕೆ, ಆ ಟ್ರೆಂಡ್ ಇಲ್ಲ ಬಿಡಿ!) ಇಡುತ್ತಾರಲ್ಲ ಹಾಗೆ. ಅಸ್ಪಶ್ಯರ ದಯನೀಯ ಪರಿಸ್ಥಿತಿಯನ್ನು, ವೇಷಭೂಷಣವನ್ನು, ಆಚಾರ-ವಿಚಾರವನ್ನು ನೋಡಿ ಇಟ್ಟ ಹೆಸರದು. ಅಂದಹಾಗೆ ಅಸ್ಪಶ್ಯರಿಗೆ ಇಡ ಲಾದ ಆ ಹೆಸರು 'ಹರಿಜನ' ಎಂದು !

ಹೆಸರು ಇಡುವುದು ಎಂದ ಮೇಲೆ ಪುರೋಹಿತರೊಬ್ಬರು ಇರಲೇಬೇಕಲ್ಲವೇ? ಹೌದು, ಅಸ್ಪಶ್ಯರಿಗೆ 'ಹರಿಜನ' ಎಂದು ಹೆಸರಿಡಲಾದ ಆ ನಾಮಕರಣ ಶಾಸ್ತ್ರದ ಪೌರೋಹಿತ್ಯವನ್ನು ವಹಿಸಿದವರು ಸಾಕ್ಷಾತ್ ಮೋಹನದಾಸ್ ಕರಮಚಂದ ಗಾಂಧೀಜಿಯವರು. ಈ ದೇಶವಾಸಿಗಳಿಂದ ಗೌರವದಿಂದ 'ಹರಿಜನ' ಎಂದು ಕರೆಸಿಕೊಳ್ಳುವ ಬಾಪೂಜಿಯವರು. ಹಿನ್ನೆಲೆ: ಇರಲಿ, ಮೊದಲಿಗೆ ಅಸ್ಪಶ್ಯ ಎಂಬ ಆ ಬೃಹತ್ ಜನಸಮುದಾಯವನ್ನು ಏಕೆ ಹರಿಜನ ಎಂದು ನಾಮಾಂಕಿತಗೊಳಿಸಲಾಯಿತು, ಅದರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳುವ. ಅಸ್ಪಶ್ಯರಿಗೆ 'ಹರಿಜನ' ಎಂಬ ಆ ಹೆಸರಿಡಲಾದದ್ದು 1937ರ ನಂತರ. ತಮಾಷೆಯೆಂದರೆ ನಿಗದಿತ ದಿನಾಂಕ ಗೊತ್ತಿಲ್ಲ ! ಯಾಕೆಂದರೆ ಅಸ್ಪಶ್ಯರು ಸಾಮಾನ್ಯ ಅನಕ್ಷರಸ್ಥರು ತಾನೆ ! ಹುಟ್ಟಿದ್ದು ಯಾವಾಗ ಎಂದು ಕೇಳಿದರೆ "ಅದೇ ಅವತ್ತು ಅಮಾಸೆ ಸ್ವಾಮಿ. ದೀಪಾವಳಿ ಹಬ್ಬದ ಮಾರನೆ ದಿನ" ಎಂದು ಹೇಳುತ್ತಾರೆ.

ಹಾಗೆಯೇ ಆ ಮಗುವಿನ ತಿಥಿ ಬರೆದುಕೊಳ್ಳುವ ಮೇಸ್ಟರು ಒಂದು ಅಂದಾಜು ದಿನ ದಾಖಲಿಸಿಕೊಳ್ಳುತ್ತಾರೆ!. ಹೀಗೆಯೇ ಅಸ್ಪಶ್ಯರಿಗೆ ಹರಿಜನ ಎಂದು ದಾಖ ಲಿಸಿದ ಆ ಸಮಯ 1932 ಡಿಸೆಂಬರ್ ತಿಂಗಳ ಆಸುಪಾಸು. ಅರೆ, ಇದೇನಿದು? 1932 ಎಂದು ಒಂದು ಇಸವಿ ಮತ್ತೆ ಮತ್ತೆ ಕೇಳಿಬರುತ್ತಿದೆಯಲ್ಲಾ ಎಂದು ಹಲವರಿಗಾದರೂ ಅನ್ನಿಸಬಹುದು. ಹೌದು, ಅದು ನಿಜ. ಅದೆಂದರೆ ಈ ದೇಶದ ಅಸ್ಪಶ್ಯರಿಗೂ 1932ನೆ ಇಸವಿಗೂ ಒಂದು ಅವಿನಾಭಾವ ಸಂಬಂಧ. ಏಕೆಂದರೆ 1932ರ ಈ ಇಸವಿಯಲ್ಲಿಯೇ ಕುಪ್ರಸಿದ್ಧ 'ಪೂನಾ ಒಪ್ಪಂದ' ಜರುಗಿದ್ದು ಮತ್ತು ಅಂತಹ ಒಪ್ಪಂದದ ಮೂಲಕ ಅಸ್ಪಶ್ಯರನ್ನು ಶಾಶ್ವತ ಗುಲಾಮಗಿರಿಗೆ ತಳ್ಳಿದ್ದು. ಅಂದಹಾಗೆ ಅಂಥಹ ಗುಲಾಮಗಿರಿಗೆ ತಳ್ಳುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದವರು ಮತ್ತೊಮ್ಮೆ ಮತ್ತದೇ ಮಹಾತ್ಮ ಗಾಂಧೀಜಿಯವರು!

ಗುಲಾಮಗಿರಿಗೆ ಎಂದಾಕ್ಷಣ ಯಾವುದರ ಗುಲಾಮಗಿರಿಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೌದು, ಅಸ್ಪಶ್ಯರನ್ನು ಕಾಂಗ್ರೆಸ್‌ನ ಮತ್ತು ಹಿಂದೂಗಳ ಶಾಶ್ವತ ಗುಲಾಮಗಿರಿಗೆ ತಳ್ಳಲು ಗಾಂಧೀಜಿಯವರು 'ಹರಿಜನ' ಎಂಬ ಈ ಪದವನ್ನು ಹುಟ್ಟುಹಾಕಿದರು. ಯಾಕೆಂದರೆ ಪೂನಾ ಒಪ್ಪಂದದ ಸಂದರ್ಭ ದಲ್ಲಿ ಮಹಾತ್ಮರಿಗೆ ಅಂಬೇಡ್ಕರರ ನಿಜ ಸಾಮರ್ಥ್ಯ ಗೊತ್ತಾಗಿತ್ತು ಮತ್ತು ಹಾಗೆಯೇ ಅಂಬೇಡ್ಕರರು ಬಳಸುತ್ತಿದ್ದ 'ಶೋಷಿತವರ್ಗಗಳು' (depressed classes ) ಎಂಬ ಪದ ಈ ದೇಶದ ಅಸ್ಪಶ್ಯರನ್ನು ಒಟ್ಟಿಗೇ ಅಂಬೇಡ್ಕರರ ಜೊತೆ ಕೊಂಡೊಯ್ಯುತ್ತಿದ್ದುದು ಮತ್ತೆ ಹಾಗೆ ಕರೆಯಲ್ಪಟ್ಟಿದ್ದೇ ಆದರೆ ಶೋಷಿತ ವರ್ಗಗಳು ಎಂಬ ಆ ವರ್ಗಗಳು ಇನ್ನೆಂದಿಗೂ ಕಾಂಗ್ರೆಸ್‌ನ ತೆಕ್ಕೆಗೆ ಬರುವುದು ಸಾಧ್ಯವಿಲ್ಲ, ಹಿಂದೂ ಧರ್ಮದಲ್ಲಿಯೂ ಉಳಿಯುವುದಿಲ್ಲ ಎಂಬುದು ಗಾಂಧೀಜಿಯವರ ಅರಿವಿಗೆ ಬಂದಿತ್ತು. ಸಾಲದ್ದಕ್ಕೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಸ್ಪಶ್ಯರ ವಿರುದ್ಧ ಆ ಪರಿ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಸ್ವತಃ ಮಹಾತ್ಮಗಾಂಧೀಜಿಯವರಿಗೂ ಪಾಪಪ್ರಜ್ಞೆ ಕಾಡಿರಬೇಕು ! ಅಥವಾ ತನ್ನ ನಿಜಬಣ್ಣ ಬಯಲಾಯಿತಲ್ಲಾ ಎಂಬ ಅಳುಕು ಮತ್ತು ಅಂತಹ ಬಣ್ಣ ವನ್ನು ಮತ್ತೆ ಹಚ್ಚುವ ಪ್ರಯತ್ನವಾಗಿಯೂ ಅವರು ಕಂಡುಕೊಂಡ ಆ ಪದ 'ಹರಿಜನ' ಮತ್ತು ಅದರ ಹೆಸರಿನಲ್ಲಿಯ ಸಂಘ ಹಾಗೂ ಆ ಹೆಸರಿನ ಉದ್ಧಾರ ಅರ್ಥಾತ್ ಹರಿಜನೋದ್ಧಾರ ! ಇರಲಿ, 'ಹರಿಜನ' ಎಂದು ನಾಮಾಂಕಿತವಾ ದಾಕ್ಷಣ ಆ ಸಂದರ್ಭದಲ್ಲಿಯೇ ಇದ್ದ ಅಂಬೇಡ್ಕರ ರು ತಮ್ಮ ಅಭಿಪ್ರಾಯವನ್ನು ಹೇಳಿಯೇ ಹೇಳಿರುತ್ತಾರಲ್ಲವೆ? ಹೌದು, ಗಾಂಧೀಜಿ 'ಹರಿಜನ' ಎಂದರೆ ಅಸ್ಪಶ್ಯರು 'ದೇವರ ಮಕ್ಕಳು' ಎಂದಾ ಕ್ಷಣ ಅಂಬೇಡ್ಕರರು "ಹಾಗಿದ್ದರೆ ನೀವು ದೆವ್ವದ ಮಕ್ಕಳಾ?" ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಹಾಗೆಯೇ ಆ ಹೆಸರಿನ ತಲಸ್ಪರ್ಶಿ ವಿಮರ್ಶೆಗೆ ತೊಡಗುವ ಅವರು ತಮ್ಮ 'ಅಸ್ಪಶ್ಯರು ಯಾರು?' ಎಂಬ ಕೃತಿಯಲ್ಲಿ ಅದನ್ನು ದಾಖಲಿಸುತ್ತಾರೆ. ಅಂಬೇಡ್ಕರರ ವಿವರಣೆ ಇಂತಿದೆ: "ಗಾಂಧೀಜಿ ಶೋಷಿತವರ್ಗಗಳನ್ನು ಅಸ್ಪ ಶ್ಯರು ಎನ್ನುವ ಬದಲಾಗಿ 'ಹರಿಜನ' ಎಂದರು. ಸ್ವಜಾತಿ ಪ್ರೇಮಿಗಳಾಗಿದ್ದರಿಂದ ಗಾಂಧೀಜಿ ವೈಷ್ಣವಧರ್ಮ ಪ್ರಚಾರಕ್ಕೆ 'ಹರಿಜನ' ಎಂದು ಹೆಸರಿಟ್ಟರು. ಹಾಗೆ ಹೇಳುವುದಾದರೆ ಅಸ್ಪಶ್ಯರಿಗೆ ಹರಿಜನ ಎಂಬ ಆ ಪದ ಕಂಡರಾಗದು. ಅದರ ವಿರುದ್ಧ ಅನೇಕರು ದನಿ ಎತ್ತಿದ್ದಾರೆ.'ಹರಿಜನ' ಎನ್ನುವ ಆ ಹೆಸರು ದಯೆ ಅನುಕಂಪ ಸೂಚಿಸುವಂಥಾದ್ದು. ಯಹೂದಿಯರು ತಮ್ಮನ್ನು ದೇವರಿಂದ ಆರಿಸಲಾದ ಜನ ಎಂದು ಕರೆದುಕೊಳ್ಳುವ ಹಾಗೆ 'ಹರಿಜನ' ಎಂಬ ಆ ಶಬ್ಧವು ಅರ್ಥ ಪಡೆದಿದ್ದರೆ ಅದು ಬೇರೆಯೇ ವಿಷಯವಾಗುತ್ತಿತ್ತು. ಆದರೆ ದೇವರ ಮಕ್ಕಳು ಎಂದು ಕರೆಯಿಸಿಕೊಂಡು ತಮ್ಮ ಅಸಹಾಯಕತೆ, ಪರಾವ ಲಂಬನೆಯನ್ನು ತೋರಿಸಿ ತಮ್ಮನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುವವರಿಂದ ಅನುಕಂಪ ಬೇಡಿದಂತಾಗುತ್ತದೆ 'ಹರಿಜನ' ಎಂಬ ಆ ಪದ. ಸಾಲದ್ದಕ್ಕೆ ಅಸ್ಪಶ್ಯ ಗಣ್ಯರೆಲ್ಲರೂ ಈ ಹೆಸರಿನಲ್ಲಿ ಸೂಚಿತವಾಗಿರುವ ಅವಮಾನಕರ ಅರ್ಥಗಳನ್ನು ವಿರೋಧಿಸಿದ್ದಾರೆ.

ಈ ನಿಟ್ಟಿನಲ್ಲಿ ಈ ಹೊಸ ಹೆಸರಿನ ಬಗ್ಗೆ ಅಸ್ಪಶ್ಯರಿಗೆ ಅದೆಷ್ಟು ವಿರೋಧ ವಿದೆಯೆಂದರೆ ಮುಂಬೈ ಶಾಸಕಾಂಗ ಸಭೆಯಲ್ಲಿ 'ಹರಿಜನ' ಎಂಬ ಆ ಪದಕ್ಕೆ ಕಾನೂನಿನ ಸಮರ್ಥನೆ ನೀಡಲು ಕಾಂಗ್ರೆಸ್ ಸರಕಾರ ಮಸೂದೆ ಮಂಡಿಸಿದಾಗ ಎಲ್ಲ ಅಸ್ಪಶ್ಯ ಸದಸ್ಯರು ಪಕ್ಷ ಭೇದ ಮರೆತು ಸಭಾತ್ಯಾಗ ಮಾಡಿ ವಿರೋಧ ಸೂಚಿಸಿದರು ! ಗಾಂಧೀಜಿ ಯವರ ಹಾಗೂ ಅವರೇ ಸೃಷ್ಟಿಸಿದ ಕಾಂಗ್ರೆಸ್ ಸರಕಾರ ಪತನವಾಗುವವರೆಗೂ 'ಹರಿಜನ' ಎನ್ನುವ ಆ ಹೆಸರು ಹೋಗುವುದಿಲ್ಲ. ಈ ಹೆಸರನ್ನು ಗಾಂಧೀಜಿಯವರೇ ಅಸ್ಪಶ್ಯರ ಮೇಲೆ ಹೇರಿದ್ದು ಮತ್ತು ಈ ಹೆಸರಿನಿಂದ ಅಸ್ಪಶ್ಯರಿಗೆ ಒಳ್ಳೆಯದೇನೂ ಆಗಿಲ್ಲ ಎಂಬ ಬಗ್ಗೆ ಎರಡು ಮಾತಿಲ್ಲ. "ಅಂಬೇಡ್ಕರ್ ಒಬ್ಬ ಏಕಾಂಗಿ ವ್ಯಕ್ತಿಯಾಗಿ, ಶಕ್ತಿಯಾಗಿ ಗಾಂಧೀಜಿ ಮತ್ತು ಕಾಂಗ್ರೆಸ್ ಎಂಬ ಬೃಹತ್ ಶಕ್ತಿಗಳು 'ಹರಿಜನ' ಎಂಬ ಖೆಡ್ಡಾಕ್ಕೆ ಅಸ್ಪಶ್ಯರನ್ನು ತಳ್ಳುತ್ತಿರುವುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟು ಹೋಗಿದ್ದಾರೆ. ಹಾಗೆಯೇ ಆ ಬೃಹತ್ ಶಕ್ತಿಗಳು ಪತನವಾಗುವವರೆಗೆ ಆ ಹೆಸರು ಹೋಗುವುದಿಲ್ಲ ಎಂಬ ಗಂಭೀರ ಎಚ್ಚರಿಕೆಯನ್ನೂ ಸಹ ಅವರು ನೀಡಿದ್ದಾರೆ ! ಅಂದಹಾಗೆ ಅಂಬೇಡ್ಕರರ ಆ ವಿವರಣೆಯಲ್ಲಿ "ಗಾಂಧೀಜಿಯವರು ಸ್ವಜಾತಿ ಪ್ರೇಮಿಯಾಗಿದ್ದರಿಂದ ವೈಷ್ಣವ ಧರ್ಮದ ಪ್ರಚಾರಕ್ಕೆ 'ಹರಿಜನ' ಎಂಬ ಹೆಸರಿಟ್ಟರು" ಎಂದಿದ್ದಾರೆ. ಆಶ್ಚರ್ಯವೆಂದರೆ ನಮ್ಮ ಪೇಜಾವರ ಶ್ರೀಗಳೂ ಕೂಡ ಅಸ್ಪಶ್ಯರಿಗೆ ವೇಷ್ಣವ ದೀಕ್ಷೆ ನೀಡುತ್ತಿದ್ದಾರೆ.

ಸಂಘ ಪರಿವಾರದ ಆ ಸ್ವಾಮೀಜಿ ಅದಕ್ಕೆ ಪ್ರೇರಣೆಯನ್ನು ಗಾಂಧೀಜಿ ಯಿಂದ ಪಡೆದರೆ? ಅಥವಾ ಗಾಂಧೀಜಿ ಎಲ್ಲ ಹಿಂದೂ ಪರಿವಾರಗಳ ಮೂಲ ಗುರುವೇ? ಕಾಲವೇ ಉತ್ತರಿಸಬೇಕು ! ಮತ್ತೊಂದು ಅಂಬೇಡ್ಕರರ ವಿವರಣೆಯಲ್ಲಿ ಕಂಡುಬರುವುದು. ಅದೆಂದರೆ, ಗಾಂಧೀಜಿ 'ಹರಿಜನ' ಎಂದರೆ 'ದೇವರ ಮಕ್ಕಳು' ಎಂದು ವಿವರಣೆ ನೀಡಿದ್ದಾರೆ ಎಂಬುದಕ್ಕೆ. ದೇವದಾಸಿ ಪದ್ಧತಿ ಎಲ್ಲರಿಗೂ ತಿಳಿದದ್ದೆ. ಅದರಲ್ಲೂ ದೇವದಾಸಿಗಳಾಗುವವರು? ಬಹುತೇಕ ದಲಿತ ಹೆಣ್ಣುಮಕ್ಕಳು. ಆ ದೇವದಾಸಿ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳು ? ದೇವರ ಮಕ್ಕಳು ! ಹಾಗಿದ್ದರೆ 'ದೇವರ ಮಕ್ಕಳು' ಅರ್ಥಾತ್ 'ಹರಿಜನ' ರೆಂದರೆ 'ಸೂ... ಮಕ್ಕಳು' ಎಂದರ್ಥ ! ಖಂಡಿತ, ಅಸ್ಪಶ್ಯರು ಹರಿಜನ ಎಂಬ ಆ ಪದಕ್ಕೆ ಉಗ್ರ ವಿರೋಧ, ಆಕ್ರೋಶ ವ್ಯಕ್ತಪಡಿಸುವುದು ಈ ಕಾರಣಕ್ಕೆ. ಶತಶತಮಾನಗಳಿಂದ ಶೋಷಣೆ ಅನುಭವಿಸಿದವರನ್ನು, ಅಕ್ಷರ ಕಾಣದವರನ್ನು ಆ ಗುಂಪಿನಲ್ಲಿ ಅಕ್ಷರ ಕಂಡ ಒಬ್ಬನಿಂದ ತಪ್ಪಿಸಲು, ವಿಮೋಚನೆಗೊಳ್ಳುವುದನ್ನು ತಡೆಯಲು ಗಾಂಧೀಜಿ ಮತ್ತು ಕಾಂಗ್ರೆಸಿಗರು ಒಟ್ಟಾರೆ ಹಿಂದೂಗಳು ರೂಪಿಸಿದ ಆ ಪದವೇ 'ಹರಿಜನ' .

ಈ ನಿಟ್ಟಿನಲ್ಲಿ ಹಿಂದೂಗಳಿಂದ ವಿಮೋಚನೆಗೊಳ್ಳಲಿಲ್ಲ ಎಂದರೆ ಅಸ್ಪಶ್ಯರು ಅವರ ಅಡಿಯಾಳರಾದರೆಂದೇ (ರಾಜಕೀಯ) ಅರ್ಥ ! ಅಂದಹಾಗೆ ಒಮ್ಮೆ ಯಾವುದೇ ವ್ಯಕ್ತಿ ಅಥವಾ ಸಮುದಾಯ ರಾಜಕೀಯವಾಗಿ ಅಡಿಯಾಳಾದರೆ ಮುಗಿದುಹೋಯಿತು. ಆತ ಅಥವಾ ಆ ಸಮುದಾಯ ಇನ್ನೆಂದಿಗೂ ವಿಮೋಚನೆಗೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಸ್ಪಶ್ಯರಿಗೆ ಅಂತಹ ಗುಲಾಮಗಿರಿ ಬೇಕೆ? ತಮ್ಮನ್ನು ತಾವು 'ಹರಿಜನ' ಎಂಬ ಆ ಕೀಳು ಪದದಿಂದ ಕರೆದುಕೊಳ್ಳುವುದು ಬೇಕೆ ? ಅಕಸ್ಮಾತ್ ಹಾಗೆ ಕರೆದುಕೊಳ್ಳುವುದಾದರೆ ಅಸ್ಪಶ್ಯರು ಮಾದಿಗ, ಹೊಲೆಯ, ಜಾಡಮಾಲಿ ಹೀಗೆ ತಮ್ಮ ಜಾತಿಯ ಹೆಸರನ್ನು ನೇರ ಹೇಳಿಕೊಳ್ಳುವುದು ಸ್ವಾಭಿಮಾನಿ ಪ್ರಕ್ರಿಯೆ ಎನಿಸಿಕೊಳ್ಳುತ್ತದೆಯಲ್ಲವೇ? ಯಾಕೆ ಉನ್ನತ ಜಾತಿಗಳವರು ತಮ್ಮ ಜಾತಿಗಳನ್ನು ಗೌರವವಾಗಿ ಗೌಡ, ಪಟೇಲ ಎಂದು ಹೇಳಿಕೊಳ್ಳುತ್ತಾರೆ. ಅಸ್ಪಶ್ಯರು ಹಾಗೆ ಹೇಳಿಕೊಂಡರೆ ಪ್ರಾರಂಭದಲ್ಲಿ ಕಿರಿಕಿರಿ ಆಗಬಹುದು. ಆದರೆ ಅದು ಅಂದು ಚಳವಳಿಯ ರೂಪ ತಾಳಿದರೆ ? ಸ್ವಾಭಿಮಾನ ತಾನೇತಾನಾಗಿ ಹುಟ್ಟಿಬರುತ್ತದೆ. ಈ ಸಂದರ್ಭದಲ್ಲಿ ಕಾನೂನಿನ ವಿಷಯವೊಂದನು ತಿಳಿದುಕೊಳ್ಳುವುದು ಅತ್ಯಗತ್ಯ. ಅದೆಂದರೆ 1989ರ 'ಅಸ್ಪಶ್ಯತಾ ನಿಷೇಧ ಕಾಯಿದೆ'ಯಡಿ ಅಸ್ಪಶ್ಯರನ್ನು 'ಹರಿಜನ' ಎಂದು ಸಂಭೋದಿಸುವುದೂ ಕೂಡ ಶಿಕ್ಷಾರ್ಹ ಅಪರಾಧ. ಹಾಗಿದ್ದರೆ 'ಹರಿಜನ' ಎಂಬ ಆ ಪದವನ್ನು ಸೃಷ್ಟಿಸಿದವರು ? ಅವರೂ ಕೂಡ ಶಿಕ್ಷೆಗೆ ಅರ್ಹರಲ್ಲವೇ ? ಅದೇನೇ ಇರಲಿ, ಅಸ್ಪಶ್ಯರು ತಮ್ಮನ್ನು ತಾವು 'ಹರಿಜನ' ರೆಂದು ಹೇಳಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಬೇರೆಯವರು ಹಾಗೆ ಕರೆದರೂ ಅದನ್ನು ಪ್ರತಿಭಟಿಸಬೇಕು. ಈ ನಿಟ್ಟಿನಲ್ಲಿ 'ಹರಿಜನ' ಎಂಬ ಆ ಪದವನ್ನು ಸಂಪೂರ್ಣ ಕೈ ಬಿಡಬೇಕು. ಇಲ್ಲದಿದ್ದರೆ ನಾವು ಅಂಬೇಡ್ಕರರು ಹೇಳಿರುವ ಹಾಗೆ ಗಾಂಧೀಜಿ ಮತ್ತು ಕಾಂಗ್ರೆಸ್‌ನ ಆ ಮೂಲಕ ಹಿಂದೂಗಳ ಶಾಶ್ವತ ಗುಲಾಮರಾಗುತ್ತೇವಷ್ಟೆ.

ಅಧೀನ ಸಮುದಾಯವಾಗಿರುವ ಆ ಅಸ್ಪಶ್ಯ ಸಮುದಾಯವೇನೂ ತನಗೆ ಹೊಸ ಹೆಸರು ನೀಡಿ ಎಂದು ತನ್ನ ವಿರುದ್ಧ ತೊಡೆ ತಟ್ಟಿದ್ದ ಆ ಪಟ್ಟಭದ್ರ ಸಮುದಾಯವನ್ನು ಗೋಗರೆದಿರಲಿಲ್ಲ ಅಥವಾ ಅರ್ಜಿ ಗುಜರಾಯಿಸಿರಲಿಲ್ಲ. ಆದರೆ ಅಂಥಹದ್ದೊಂದು ನಾಮಕರಣ ಶಾಸ್ತ್ರ ನಡೆದುಹೋಯಿತು. ಅದು ಅಂತಿಂಥ ನಾಮಕರಣ ಶಾಸ್ತ್ರವಲ್ಲ. ಒಂದು ಬೃಹತ್ ಸಮುದಾಯಕ್ಕೆ ಅದರ ಸ್ಥಿತಿಗತಿಗಳನ್ನು, ಅದರ ವೇಶಭೂಷಣವನ್ನು, ಅದರ ರೂಪ ಕುರೂಪವನ್ನು ನೋಡಿ ಇಟ್ಟ ಹೆಸರದು.

                                                                                                               ಕೃಪೆ : ವಾರ್ತಾಭಾರತಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.