Tuesday, July 23, 2013

ಮ್ಹಾಳಸಾ : ಅಪರೂಪದ ಭಕ್ತೆ !

ಮೂಲ ಮರಾಠಿ : ಡಾ. ವಿನೋದ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
--------------------------------------------- 
(ಸಧ್ಯದಲ್ಲೇ ಪ್ರಕಟಗೊಳ್ಳುವ ನಾನು ಅನುವಾದಿಸಿದ ಸಾಯಿ ಕಥಾ ಆಧಾರಿತ ಮಹಾಕಾದಂಬರಿಯ ಒಂದು ಕತೆ)

ಮ್ಹಾಳಸಾ !
ಮ್ಹಾಳಿ...
ಕುಬ್ಜ ದೇಹ, ಕೆದರಿದ ಕೂದಲು, ಒಣಗಿದ ಮುಖ, ಹರಿದ ಬಟ್ಟೆ, ಅಲ್ಲಲ್ಲಿ ಚಿಂದಿ ಕಟ್ಟಿಕೊಂಡಿರುವ ಮ್ಹಾಳಸಾ...
ಹುಚ್ಚಳಂತೆ ಕಾಣುತ್ತಿದ್ದಳು... ಅಲ್ಲಲ್ಲ ಹುಚ್ಚಳೇ !
ತುಂಬ ಅಚ್ಚರಿಗೊಳ್ಳುವ ಹೃದಯ ಹಿಂಡುವ ಕತೆ ಆಕೆಯ ಬೆನ್ನಿಗಿತ್ತು...
ಸಂಗಮನೇರ ಊರಿನ ಸಮೀಪ ಕಸರವಾಡಿ ಸಣ್ಣ ಹಳ್ಳಿಯೊಂದಿದೆ. ಆ ಹಳ್ಳಿಯೇ ಮ್ಹಾಳಸಾಳ ಹುಟ್ಟೂರು... ಜಾತಿಯಿಂದ ಮರಾಠಾ ಹೆಣ್ಣುಮಗಳು...
ತಂದೆ-ತಾಯಿ ತುಂಬು ಪ್ರೀತಿಯಿಂದಲೇ ಆಕೆಗೆ ಹೆಸರಿಟ್ಟಿದ್ದರು...
ರಾಧಾ...
ಜನರೆಲ್ಲ ಮುದ್ದಿನಿಂದ ‘ರಾಧೀ’ ಎಂದೇ ಕರೆಯುತ್ತಿದ್ದರು...
ರಾಧಿ ತುಂಬ ಮಾತುಗಾರ್ತಿ, ಹಠಗಾರ್ತಿಯಾಗಿದ್ದರೂ ಎಲ್ಲ ಕೆಲಸವನ್ನೂ ಮಾಡಿ ಮುಗಿಸುತ್ತಿದ್ದಳು.
ಯಾರಾದರೂ ತನಗೆ ಕೆಲಸ ಹೇಳಬೇಕು... ತಾನು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು ಎಂಬ ಹಂಬಲ ಆಕೆಯದು ! ಬೇರೆಯವರ ಕೆಲಸ ಮಾಡುವುದರಲ್ಲೇ ಆಕೆ ಖುಷಿ ಪಡೆಯುತ್ತಿದ್ದಳು...
“ರಾಧೇ...”ಯಾರಾದರೂ ಕರೆಯುತ್ತಿದ್ದರು...
“ಏನ್ರೀಪಾ ?”
“ನೀ ಯಾರಾಕೀ ?”
“ನಾ ನಮ್ಮವ್ವನ ಪೈಕಿ ಅಲ್ಲ” ಆಕೆಯ ಉತ್ತರ ನೀಡುವ ರೀತಿಯೇ ವಿಚಿತ್ರವಾಗಿತ್ತು. ಸುತ್ತು ಬಳಸಿ ‘ತಾನು ಯಾರಾಕಿ’ ಎಂದು ಹೇಳುವ ಮೊದಲು ‘ತಾನು ಯಾರಾಕಿ ಅಲ್ಲ’ ಎಂಬುದನ್ನು ಹೇಳುವಲ್ಲಿ ಆಕೆಗೆ ಗಮ್ಮತ್ತೆನಿಸುತ್ತಿತ್ತು...
“ಮತ್ತ ಯಾರಾಕಿ ?”
“ನಾ ಅಪ್ಪನ ಪೈಕಿನೂ ಅಲ್ಲ !”
“ಮತ್ತ ?”
“ಕಾಕಾ-ಕಾಕೂನಾಕೀ ಅಲ್ಲ...”
“ಮತ್ತ ಯಾರಲೇ ನೀ ?”
ಆಕೆ ಮನುಷ್ಯರಿಂದ ಗಿಡ-ಮರಗಳತ್ತ, ಅಲ್ಲಿಂದ ಸೂರ್ಯ-ಚಂದ್ರ ಮೊದಲಾದ ಗ್ರಹ ತಾರೆಗಳತ್ತ ಹೊರಳುತ್ತಿದ್ದಳು... !
ಕೇಳುತ್ತಿರುವವರಿಗೆ ಏನೋ ಗಮ್ಮತ್ತಿಲ್ಲ ಎನಿಸಿ ಬೇಸರವಾಗಬೇಕು... ಅವರು ಅಲ್ಲಿಂದ ಜಾಗ ಖಾಲಿ ಮಾಡುವಾಗಲೇ ಆಕೆ ಅವರ ಕೈ ಹಿಡಿದು ಜಿಗಿಯುತ್ತ ಹೇಳುತ್ತಿದ್ದಳು... “ಹೆಂಗ ಗಮ್ಮತ್ತ ಮಾಡ್ನಿ ? ... ಆದರ ಈಗ ನಾ ಖರೇ ಖರೇನ ಹೇಳ್ತೇನ ಹ್ಞಾಂ...”
“ಹೇಳ ನೋಡೂಣು ?”
“ರಾಧಾ ಯಾರಾಕಿ ಇರ್ತಾಳು ?” ಆಕೆ ಮರಳಿ ಪ್ರಶ್ನೆ ಹಾಕುತ್ತಿದ್ದಳು...
“ಲೇ, ಇಲ್ಲಿ ನೋಡ... ನನಗೀಗ ವ್ಯಾಳಿ ಇಲ್ಲ... ಹೇಳೋದಿತ್ತಂದ್ರ ಸರಳ ಹೇಳ... ಇಲ್ಲಂದ್ರ ಹೇಳಬ್ಯಾಡ...ಆದರ ಉಲ್ಟಾ-ಸುಲ್ಟಾ ಪ್ರಶ್ನಾ ಮಾತ್ರ ಕೇಳಬ್ಯಾಡಾ...”
“ನಿಲ್ರಿ... ನಿಲ್ರಿ... ಕುದರ್ಗಿ ಭಾಳ ಅವಸ್ರ ನೋಡ... ! ನಾ ಹೇಳ್ತೇನಿ...”
“ಹೇಳ ...”
“ರಾಧಾ ಕೃಷ್ಣನಾಕಿ ಇರ್ತಾಳು...”
‘ಹ್ಞೂಂ !”
“ನಾನೂ ಸುದ್ದಾ ಕೃಷ್ಣನ ರಾಧಾ ಅದೇನಿ...” ಆಕೆ ಆಕಾಶದತ್ತ ನೋಡುತ್ತ ಎಲ್ಲಿಯೋ ಕಳೆದು ಹೋಗುತ್ತಿದ್ದಳು...
“ಆದರ ನಿನ್ನ ಕೃಷ್ಣ ಎಲ್ಲಿ ಅದಾನು ?”
ಆಕೆ ತಟ್ಟನೇ ವಾಸ್ತವಕ್ಕೆ ಬಂದು ಮರಳಿ ಹೇಳುತ್ತಿದ್ದಳು, “ಬರಾಂವ ಅದಾನು ನನ್ನ ಕೃಷ್ಣ... ನನ್ನ ದೇವ್ರು...”
“ಬರ್ತಾನಲೇ... ಖರೇನ ಬರ್ತಾನು ! ಈಗ ಮೊದಲ ನನ್ನ ಕೈ ಬಿಡ... ಹೋಗ್ತೇನ ನಾ...”
“ಹೋಗ್ರಿ”
ಹೀಗೆ ಹುಚ್ಚಿ ಎನಿಸುವ, ವಟಗುಟ್ಟುವ ರಾಧಾ ತುಂಬ ಮುದ್ದಾದ ಹುಡುಗಿ !
ಮನ ಸೆಳೆಯುವ ಪೋರಿ...
ಆದರೆ...
ಆಕೆಯ ಬದುಕಿನಲ್ಲಿ ಒಂದು ತಿರುವು ಬಂತು...
ಬಾಲ್ಯದಲ್ಲೇ ಆಕೆಗೆ ಮದುವೆಯಾಯಿತು...
ಆಕೆಯ ಮನದ ಧ್ಯಾನದಲ್ಲಿ ಕೃಷ್ಣ ಇದ್ದ... ಆದರೆ ಆಕೆಯ ಬದುಕಿನಲ್ಲಿ ನಾಮದೇವ ಆಬಾ ಸಾವಂತ ಹೆಸರಿನ ಅತ್ಯಂತ ಸಾಮಾನ್ಯ ಮತ್ತು ದುರಂಹಕಾರಿ ಮನುಷ್ಯ ಗಂಡನಾಗಿ ಬಂದ ! ಆಕೆಯ ಭಾವ ಜಗತ್ತು ಮುರಿದು ಬಿತ್ತು...
ಗಂಡನ ಮನೆಯಲ್ಲಿ ಆಕೆಯ ಹೆಸರೂ ಬದಲಾಯಿತು...
‘ರಾಧಾ’ ರೇವೂ’ ಆದಳು !
ರೇವೂ...
ಆಕೆಗೆ ಆ ಹೆಸರು ಇಷ್ಟವಾಗಲಿಲ್ಲ... ಗಂಡನೂ ಇಷ್ಟವಾಗಲಿಲ್ಲ... ಇಡೀ ಗಂಡನ ಮನೆಯೇ ಆಕೆಯನ್ನು ಹರಿದು ಮುಕ್ಕುವಂತಿತ್ತು...
ಹೀನಾಯವಾದ ವರ್ತನೆ...
ತಿಳುವಳಿಕೆರಹಿತ ನಡತೆ...
ಎಲ್ಲದಕ್ಕೂ ತಪ್ಪು ತಿಳುವಳಿಕೆ... ಅಜ್ಞಾನ...
ದನದಂತೆ ದುಡಿತ ಮತ್ತು ಮೈ ತುಂಬ ಹೊಡೆತ !
ಎಲ್ಲಿಯೂ ಹನಿ ಪ್ರೀತಿಯೂ ಇರಲಿಲ್ಲ...
ಒಂದಿಷ್ಟೂ ಆತ್ಮೀಯತೆಯ ಸೋಂಕು ಇರಲಿಲ್ಲ...
ಅಲ್ಲಿ ತನ್ನವರು ಎನ್ನುವವರು ಯಾರೂ ಇರಲಿಲ್ಲ...
ಮನುಷ್ಯರು ಇದ್ದರೂ ಮನುಷ್ಯತ್ವ ಇರಲಿಲ್ಲ...
ರಾಧಾ ಬೇಸರಿಸಿಕೊಂಡಳು... ನೊಂದುಕೊಂಡಳು...
ಒಂದು ಆಕೆ ತವರಿಗೆ ಬಂದವಳೇ ಇನ್ನೆಂದೂ ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಳು...
ಕೆಲವು ತಿಂಗಳು ಗತಿಸಿದವು...
ಒಂದು ದಿನ ಆಕೆಯ ಅಪ್ಪ ಆಕೆಯನ್ನು ಕರೆದ...
“ರಾಧೇ...”
“ಏನ ಬಾಬಾ ?”
“ನೀ ಗಂಡನ ಮನೀಗಿ ಮತ್ತ ಹೋಗೂದಿಲ್ಲೇನ... ?”
“ಇಲ್ಲ...”
“ಅದss ಯಾಕ ಅಂತೇನಿ ?”
“ಅದನ್ನss ಎಷ್ಟ ಸಲಾ ಹೇಳ್ಬೇಕ ಬಾಬಾ ? ನಿನಗೆಲ್ಲಾ ಗೊತ್ತss ಏತ್ಯಲ್ಲಾ ಬಾಬಾ ?”
“ಏತಿ ಪೋರಿ... ಎಲ್ಲಾ ಗೊತ್ತೇತಿ... ಆದ್ರ ಅದss ನಿನ್ನ ಖರೇ ಮನಿ !”
“ನನಗ ಹಂಗ ಅನ್ನಿಸೂದಿಲ್ಲ ಬಾಬಾ !”
“ಎಷ್ಟ ತಿಳಿಸಿ ಹೇಳಬೇಕವಾ ನಿನಗ ?”
“ಹೇಳಬ್ಯಾಡ್ರಿ ಬಿಡ್ರ್ಯಲಾ...”
“ಹಂಗಲ್ಲವಾ... ನಾನರೇ ಎಷ್ಟ ದಿವ್ಸ ಇರಾಂವದೇನಿ... ? ಲಗ್ನ ಆದ ಹೆಣ್ಮಗಳ ಮನ್ಯಾಗಿದ್ರ ಅಪ್ಪನ ಎದಿ ಮ್ಯಾಲೀನ ಕಲ್ಲ ಇದ್ದಾಂಗ !”
“ಬಾಬಾ, ನಾ ನಿನಗ ಭಾರ ಆಗೇನಿ ಅಂತ ಹೇಳಿ ಬಿಡಲಾ... ! ಅದ ದಿನಾ ನಾ ಮನಿ ಬಿಟ್ಟ ಹೋಗ್ತೇನಿ...!”
“ಎಲ್ಲಿಗ್ಯಂತ ಹೋಗ್ತೀ ಮಗಳ ?”
“ಎಲ್ಲ್ಯರೇ ಹೋಗ್ತೇನ ಬಿಡ...”
“ಹಂಗ ಅನ್ನಬಾರ್ದವಾ...”
“ಬಾಬಾ, ಮತ್ತ ಇನ್ನ ಬ್ಯಾರೆ ನಾ ಏನ ಹೇಳ್ಲಿ ?”
“ಗಂಡನ ಕಡೀ...”
“ಅಂವ್ನ ಹೆಸ್ರ ತೆಗಿಬ್ಯಾಡ... !” ಆಕೆ ಕೆಟ್ಟದಾಗಿ ಕಿರುಚಿದಳು. ಕೈ ಮೇಲೆ ಎತ್ತಿ ಥೈ ಥೈ ಎಂದು ಕುಣಿಯತೊಡಗಿದಳು...
ಕೆಳಗೆ ಬಿದ್ದು ಅಳತೊಡಗಿದಳು... ನಿಜಕ್ಕೂ ಆಕೆ ಆಗ ಅರಿವು ಕಳೆದುಕೊಂಡಳು... !
ಕೆಲ ವರ್ಷ ಹಾಗೆಯೇ ಕಳೆದು ಹೋದವು...
ಒಂದು ದಿನ ಊರು, ಮನೆ, ತಂದೆ, ತಾಯಿ... ಎಲ್ಲರನ್ನೂ... ಎಲ್ಲವನ್ನೂ ಬಿಟ್ಟು ಯಾರಿಗೂ ಹೇಳದೇ ಆಕೆ ಹೊರಟು ಹೋದಳು !
ಎಲ್ಲಿ ಹೋಗಬೇಕು ಎಂಬ ನಿರ್ಧಾರವಿರಲಿಲ್ಲ...
ಏನು ಮಾಡಬೇಕು ಎಂಬುದೂ ಗೊತ್ತಿರಲಿಲ್ಲ...
ಬೆಕ್ಕು-ನಾಯಿಗಳಿಗಾದರೂ ಒಂದು ಧ್ಯೇಯ ಇರುತ್ತದೆ...
ರಾಧೆಗೆ ಅದೂ ಇರಲಿಲ್ಲ... !
ಆದರೆ ಆಕೆಯ ಅಂತರಂಗದಲ್ಲಿ ಕೃಷ್ಣನಿದ್ದ...
ಆತ ಆಕೆಯೊಳಗೆ ಆಳಕ್ಕಿಳಿದು ಬಿಟ್ಟಿದ್ದ...
ಆಕೆ ಸಹಜವಾಗಿಯೇ ತೀರ್ಥಸ್ಥಳಗಳತ್ತ ನಡೆದಳು... ಅದರಲ್ಲೇ ಆಕೆ ನೆಮ್ಮದಿ ಕಾಣತೊಡಗಿದಳು...
ಪಂಢರಪುರ...
ಆಳಂದಿ...
ಜೇಜೂರಿ...
ನಿಧನೆ...
ನೇವಾಸೆ...
ಕೃಷ್ಣ, ವಿಠ್ಠಲ, ಮಹಾದೇವ, ಜ್ಞಾನದೇವ, ಚಾಂಗದೇವ...
ಆಕೆಯ ಭೇಟಿ ನಿರಂತರವಾಯಿತು...
ಮೈ ಮೇಲಿನ ಬಟ್ಟೆಗಳು ಹರಿದು  ಚಿಂದಿಯಾಗಿದ್ದವು...ಚಿಂದಿಗಳೂ ಹಾರಿ ಹೋದವು...
ವರ್ಷಗಳು ಮಾತ್ರ ಯಾವುದನ್ನೂ ತಲೆಗೇರಿಸಿಕೊಳ್ಳದೇ ಓಡುತ್ತಲೇ ಇದ್ದವು...
ಆಗ ರಾಧೆಯ ಕೂದಲು ಜಡೆಗಟ್ಟಿದ್ದವು...
ಮುಖದ ಮೇಲೆ ಸುರಿಯಾಕಾರದ ನೆರಿಗೆ ಮೂಡಿದ್ದವು...
ಬಾಯಿ ಮಾತ್ರ ನಿರಂತರವಾಗಿ ಏನನ್ನೋ ಬಡಬಡಿಸುತ್ತಿತ್ತು...
ಆಕೆಯ ಮಾತು-ವರ್ತನೆಗೆ ಯಾವುದೂ ತಳ-ಬುಡ ಇರಲಿಲ್ಲ ! ಯಾವುದೇ ವಿಷಯವಿರುತ್ತಿರಲಿಲ್ಲ... ಯಾವುದೇ ತರ್ಕವೂ ಇರಲಿಲ್ಲ...
ನಾಲಿಗೆ ಅಲ್ಲಾಡುತ್ತಿತ್ತು... ಕಂಠದಿಂದ ಧ್ವನಿ ಹೊರ ಬೀಳುತ್ತಿತ್ತು... ಆಮೇಲೆ ಬಡಬಡಿಕೆ ಹೆಚ್ಚಾಗುತ್ತಿತ್ತು !
ಆಕೆ ಎಲ್ಲಿ ಬೇಕಲ್ಲಿ ಕುಳಿತುಕೊಳ್ಳುತ್ತಿದ್ದಳು...
ಸಿಕ್ಕಿದ್ದನ್ನೇ ತಿನ್ನುತ್ತಿದ್ದಳು...
ಆದರೆ ಯಾವಾಗಲೂ ನಗುತ್ತಲೇ ಇರುತ್ತಿದ್ದಳು !
ಆಕೆಗೆ ದುಃಖದ ಅರಿವೆ ಇಲ್ಲವೇನೋ ಎನಿಸುತ್ತಿತ್ತು... ಅಥವಾ ಬದುಕಿನ ದುಃಖವನ್ನೆಲ್ಲ ಆಕೆ ಕಳೆದುಕೊಂಡಿದ್ದಳೇನೋ ಎನಿಸುತ್ತಿತ್ತು ... ಜೀರ್ಣಿಸಿಕೊಂಡಿದ್ದಳೇನೋ ಎನಿಸುತ್ತಿತ್ತು...
ದೇವರು ಆಕೆಗೆ ಕಾಣುತ್ತಿರಲಿಲ್ಲ ; ಭೇಟಿಯೂ ಆಗುತ್ತಿರಲಿಲ್ಲ...  ಮನಸ್ಸಿನ ಕಳವಳ ಒಮ್ಮೊಮ್ಮೆ ಹೆಚ್ಚಾಗುತ್ತಿತ್ತು... ಹೀಗಿರುವಾಗ ಆಕೆಗೆ ಯಾರೋ ಶಿರಡಿಯ ಸಾಯಿಬಾಬಾ ಬಗ್ಗೆ ಹೇಳಿದರು...
ಆಕೆಯ ಕಿವಿಗಳು ನೆಟ್ಟಗಾದವು...
ಸಾಯೀ...
ಸಾಯಿಬಾಬಾ...
ಆಕೆಯ ಮನದ ತಳದೊಳಗೆ ಅನುಭೂತಿಯ ಲಹರಿಗಳು ಹುಟ್ಟಿಕೊಂಡವು... ಆಕೆಗೆ ಏನೋ ಒಂದು ರೀತಿಯ ಸಮಾಧಾನ ಎನಿಸತೊಡಗಿತು... ಸಾಯಿಯೇ ನಿನ್ನೆಲ್ಲ ದುಃಖಗಳನ್ನು ಕಡಿಮೆ ಮಾಡಬಲ್ಲವನು ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿತ್ತು...
ಮತ್ತೇ...
ಆಕೆಯ ಹೆಜ್ಜೆಗಳು ಶಿರಡಿಯತ್ತ ಹೊರಳಿದವು...
ಆಕೆ ಶಿರಡಿ ತಲುಪಿದಳು...
ಆಕೆಯ ಅವತಾರ ನೋಡಿದರೆ ಹುಚ್ಚಿಯಂತೆಯೇ ಇತ್ತು... ಜನ ಆಕೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ...
ಆದರೆ...
ಸಾಯಿ ಆಕೆಯನ್ನು ನೋಡಿದರು...
ಇಬ್ಬರ ದೃಷ್ಟಿಗಳೂ ಸೇರಿದವು...
ಸಾಯಿ ನಗುತ್ತಲೇ ಹೇಳಿದರು... “ಶಾಮ್ಯಾ, ಮ್ಹಾಳಸಾ ಬಂದಳ ನೋಡೋ... ! ಕಾಲಿಗಿ ಚಿಂದಿ ಅರಿವಿ ಕಟ್ಕೊಂಡ ತಿರ್ಗಿ ತಿರ್ಗಿ ಆಕೀ ದಣಿದಾಳು... ಈಗ ಸೀದಾ ಇಲ್ಲಿಗೀ ಬಂದಾಳ ನೋಡ... ಮ್ಹಾಳೇss... ಮ್ಹಾಳೇ... ಬಾರss ಬಾ...”
ಆಕೆ ಸಾಯಿಯನ್ನು ನಿಟ್ಟಿಸಿದಳು...

(ಮುಂದಿನ ಕತೆಯನ್ನು ಕಾದಂಬರಿಯಲ್ಲಿಯೇ ಓದಿ)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.