Friday, August 10, 2012

ಚನ್ನಮ್ಮ ವಿವಿ ನೇಮಕಾತಿ ಕರ್ಮಕಾಂಡ !

  • ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪೂರ್ವ ನಿಗದಿತ ಪಟ್ಟಿಯಲ್ಲಿರುವವರೇ ಆಯ್ಕೆಯಾಗಿದ್ದು ಮೊದಲೇ ಹರಡಿದ್ದ ಸುದ್ದಿ ಖರೆ ಆಗಿದೆ..!

    ಖೇದದ ಸಂಗತಿ ಎಂದರೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿರುವ ಸುಳಿವನ್ನು ರಾಜ್ಯಪಾಲ, ವಿವಿ ಸಿಂಡಿಕೇಟ್‌ ಸದಸ್ಯರಿಗೆ ಲಿಖೀತವಾಗಿ ಮಾಹಿತಿ ನೀಡಿದರೂ ಅರ್ಹರಿಗೆ ಮಾತ್ರ ನ್ಯಾಯ ದೊರೆತಿಲ್ಲ. ವಿವಿ ಆಂತರಿಕ ಶಕ್ತಿಗಳೇ ಮೇಲುಗೈ ಸಾಧಿಸಿವೆ.

    ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಕೂಗನ್ನು ಯಾರೊಬ್ಬರೂ ಗಂಭೀರ ಪರಿಗಣಿಸದೇ ಹೋಗಿದ್ದರಿಂದ ಅರ್ಹತೆ, ಅನುಭವಗಳು ಗಾಳಿಗೆ ತೂರಲ್ಪಟ್ಟಿವೆ. ಹುದ್ದೆ ಪಡೆಯುತ್ತೇವೆಂದು ನಂಬಿದವರು, ಸಂದರ್ಶನದಲ್ಲಿ ಉತ್ತಮವಾಗಿ ಉತ್ತರ ನೀಡಿದ್ದೇವೆಂಬ ಆತ್ಮವಿಶ್ವಾಸ ಹೊಂದಿದರು ನಿರಾಸೆ ಪಡುವಂತಾಗಿದೆ. ಇಂತಹ ಹುದ್ದೆಗೆ ಇಂತಹವರೇ ನೇಮಕಾತಿ ಆಗುತ್ತಾರೆಂಬ ಸುದ್ದಿಯಲ್ಲಿ ಇದ್ದವರಿಗೇ ಪಟ್ಟ ನೀಡಿದ ಕೀರ್ತಿಗೆ ವಿವಿ ಭಾಜನವಾಗಿದೆ!

    ಅರ್ಹತೆ, ಅನುಭವದಿಂದ ಹುದ್ದೆ ದೊರೆಯುತ್ತದೆಂಬ ಆತ್ಮವಿಶ್ವಾಸ ಹೊಂದಿದವರು ತಮಗಿಂತ ಕಡಿಮೆ ಅರ್ಹರಾದವರಿಗೆ ಹುದ್ದೆ ಭಾಗ್ಯ ದೊರೆತಿದ್ದು ಕಂಡು ಮಾನಸಿಕವಾಗಿ ಕುಗ್ಗಿ ಹೋಗಿ ವಿವಿಗೆ ಹಿಡಿಶಾಪ ಹಾಕುವಂತಾಗಿದೆ.

    ಇದಕ್ಕೆ ಸಾಕ್ಷಿಯೆಂಬಂತೆ ಸಮಾಜಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಜ. 12ರಂದು ಸಂದರ್ಶನ ನಡೆದಿತ್ತು. ಸಂದರ್ಶನಕ್ಕೆ ಮೊದಲೇ ಈ ಎರಡೂ ಹುದ್ದೆಗಳಿಗೆ ಯಾರು ಆಯ್ಕೆ ಆಗುತ್ತಾರೆ ಎಂಬ ಸುದ್ದಿ ಹರಡಿತ್ತೋ ಅವರ ಹೆಸರುಗಳೆ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರೇ ಹುದ್ದೆ ಅಲಂಕರಿಸಿದ್ದಾರೆ.

    ವಿವಿಯಲ್ಲಿನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವರು ಜ. 16ರಂದೇ ವಿವಿಯ ಎಲ್ಲ ಸಿಂಡಿಕೇಟ್‌ ಸದಸ್ಯರಿಗೆ ಪತ್ರ ಬರೆದು ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹುದ್ದೆಗೆ ಇಂತಹವರೇ ಆಯ್ಕೆ ಆಗುತ್ತಾರೆ ಎಂಬ ಅನುಮಾನ ಇದೆ. ಆಯ್ಕೆಯ ಪೂರ್ವನಿರ್ಧಾರ ಆಗಿದ್ದರೆ, ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೇಕೆ? ಸಂದರ್ಶನದ ನಾಟಕ ಯಾಕೆ ಬೇಕು ಎಂದು ಪ್ರಶ್ನಿಸಿ ಮನದಾಳದ ನೋವು ತೋಡಿಕೊಂಡಿದ್ದರು.

    ಪತ್ರದಲ್ಲಿ ಆಯ್ಕೆಯಾಗಲಿರುವ ಅಭ್ಯರ್ಥಿ ಹೆಸರು ನಮೂದಿಸಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಜ. 17ರಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರಿಗೂ ಮನವಿ ಕಳುಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌.ಡಿ, ನೆಟ್‌-ಸೆಟ್‌ ಮುಗಿಸಿದ, 20 ವರ್ಷಕ್ಕಿಂತ ಹೆಚ್ಚಿನ ಬೋಧನಾ ಅನುಭವ ಹೊಂದಿದವರು ಸಂದರ್ಶನದಲ್ಲಿ ಭಾಗಿಯಾಗಿದ್ದರೂ, ಕೇವಲ ಸೆಟ್‌ ಮಾತ್ರ ಮುಗಿಸಿದ ವ್ಯಕ್ತಿ ಆಯ್ಕೆ ಆಗುವ ಸುದ್ದಿ ಹರಡಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

    ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಆಯ್ಕೆಯಾದವರ ಪಟ್ಟಿ ಮಂಡಿಸಲ್ಪಟ್ಟಾಗ ಯಾರು ಹುದ್ದೆ ಪಡೆಯುತ್ತಾರೆಂದು ಆರೋಪಿಸಲಾಗಿತ್ತೋ ಅವರೇ ಹುದ್ದೆಗೆ ಆಯ್ಕೆಯಾಗಿದ್ದುದು ದೃಢೀಕರಿಸಲ್ಪಟ್ಟಿತು!

    ಪೆನ್ಸಿಲ್‌ನಿಂದ ನಮೂದನೆ ಯಾಕೆ?: ರಾಣಿ ಚನ್ನಮ್ಮ ವಿವಿಯ ಹುದ್ದೆಗಳ ಆಯ್ಕೆಗೆ ನಡೆದ ಸಂದರ್ಶನ ಬಹುಶಃ ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಸಂದರ್ಶನಕ್ಕಿಂತಲೂ ಕಡೆಯಾಗಿ ನಡೆಯಿತು ಎಂದು ಹೇಳಲಾಗುತ್ತಿದೆ.

    ಮಹತ್ವದ ಹುದ್ದೆಗಳಿಗೆ ಅದಾಗಲೇ ಹೆಸರುಗಳು ನಿಗದಿಯಾಗಿದ್ದರಿಂದಲೋ ಏನೋ ನೇಮಕಾತಿ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳನ್ನು ತಲಾ ಕೆಲವೇ ನಿಮಿಷಗಳಂತೆ ಸಂದರ್ಶಿಸಿ ಕಳುಹಿಸಲಾಗಿದೆ. ಸಮಾಜಶಾಸ್ತ್ರ ವಿಭಾಗದಲ್ಲಿ 45 ಜನರನ್ನು ಕೇವಲ ಆರು ತಾಸಿನಲ್ಲಿ ಸಂದರ್ಶಿಸಿ ಕಳುಹಿಸಿರುವುದು ವಿವಿ ದಾಖಲೆಯೇ ಸರಿ ಎನ್ನುವುದು ಅಭ್ಯರ್ಥಿಗಳ ಅನಿಸಿಕೆ. ಇದರಲ್ಲಿ ಭೋಜನ ಸಮಯವೂ ಸೇರಿದೆ ಎನ್ನುತ್ತಾರೆ ಅಭ್ಯರ್ಥಿಗಳು.

    ಅರ್ಥಶಾಸ್ತ್ರ ವಿಭಾಗದಲ್ಲಿ ಸಂದರ್ಶನಕ್ಕೆ ಆಗಮಿಸಿದ್ದ ಅಭ್ಯರ್ಥಿಯೊಬ್ಬರನ್ನು ಸಂದರ್ಶಿಸಿದವರು, ಅಧ್ಯಯನ ಕೇಂದ್ರಗಳನ್ನು ಪದವಿ ಕಾಲೇಜುಗಳಲ್ಲಿಯೇ ವಿವಿ ಆರಂಭಿಸುತ್ತಿದೆ. ಹೀಗಿರುವಾಗ ಪಿಎಚ್‌ಡಿ ಆದ ನೀವು ಅಲ್ಲಿಯೇ ಪಾಠ ಮಾಡಿ. ಇಲ್ಲಿಗೆ ಯಾಕೆ ಬರುತ್ತೀರಿ ಎನ್ನುವುದಾಗಿ ಹೇಳಿ ವಾಪಸು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

    ಸಂದರ್ಶನಕ್ಕೆ ಹೋದ ಅಭ್ಯರ್ಥಿಗಳು ಮಂಡಿಸಿದ ಪ್ರಬಂಧಗಳ ದಾಖಲಾತಿಗಳನ್ನು, ಉಪನ್ಯಾಸದ ಮಾಹಿತಿಯನ್ನು, ವಿವಿಧ ಸಾಧನೆಗಳ ದಾಖಲೆಗಳನ್ನು ಪರಿಶೀಲಿಸುವಾಗ ನೋಂದಣಿಯನ್ನು ಪೆನ್ಸಿಲ್‌ನಿಂದ ಮಾಡಿಕೊಂಡು ಅಭ್ಯರ್ಥಿಗಳ ಸಹಿ ಪಡೆಯಲಾಗಿದೆ. ಪಿನ್ಸಿಲ್‌ನಿಂದ ನಮೂದಿಸಿರುವುದೇಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬುದು ಕೆಲ ಅಭ್ಯರ್ಥಿಗಳ ಅನಿಸಿಕೆ. ಸಂದರ್ಶನದಲ್ಲಿ ಉತ್ತಮವಾಗಿ ಉತ್ತರಿಸಿದ ಕೆಲ ಅಭ್ಯರ್ಥಿಗಳಿಗೆ ಹುದ್ದೆ ನೀಡಿದರೆ ಏನು ಅಭಿವೃದ್ಧಿ ಕೈಗೊಳ್ಳುತ್ತೀರಿ ಎಂಬ ನೀಲಿನಕ್ಷೆ ತೋರಿಸಿ ಎಂದು ಕೇಳಲಾಗಿದೆಯಂತೆ.

    ಡೀಸೆಂಟ್‌ ನೋಟ್‌ಗೂ ಡೋಂಟ್‌ ಕೇರ್‌: ವಿವಿಧ ವಿಷಯಗಳ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಅರ್ಹರಿಗೆ ಆದ ಅನ್ಯಾಯ, ಪಾರದರ್ಶಕತೆ ಕೊರತೆ ಬಗೆಗೆ ಆಕ್ಷೇಪವೆತ್ತಿ ಜ. 25ರಂದು ನಡೆದ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಐವರು ಸದಸ್ಯರು ಡೀಸೆಂಟ್‌ ನೋಟ್‌ ಸಲ್ಲಿಸಿದ್ದರು. ಕೆಲ ಸದಸ್ಯರು ಅಸಮರ್ಥರ ನೇಮಕಾತಿ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

    ಇದಾವುದನ್ನೂ ಗಂಭೀರವಾಗಿ ಪರಿಗಣಿಸದ ವಿವಿ ಕುಲಪತಿಯವರು ತಮ್ಮದೇ ನಿರ್ಧಾರ ಪ್ರಕಟಿಸಿ ನೇಮಕಾತಿ ಪಟ್ಟಿ ಮಂಡಿಸಿ ಅನ್ಯಾಯವಾದವರು ಬೇಕಾದರೆ ಕಾನೂನು ಮೊರೆ ಹೋಗಲಿ ಎಂಬ ಹೇಳಿಕೆ ನೀಡಿದರು ಎಂದು ಹೇಳಲಾಗುತ್ತಿದೆ.

    ಸಭೆ ನಂತರ ಡೀಸೆಂಟ್‌ ನೋಟ್‌ ಮಂಡಿಸಿದ ಸದಸ್ಯರ ಮನವೊಲಿಕೆಗೆ ಕುಲಪತಿ ಯತ್ನಿಸಿದರು ಎಂದು ಹೇಳಲಾಗುತ್ತಿದ್ದು, ಇಬ್ಬರು ಸದಸ್ಯರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಮೂವರು ಸದಸ್ಯರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಲಾಗುತ್ತಿದೆ.

    ನೇಮಕಾತಿ ಅನ್ಯಾಯದ ಬಗ್ಗೆ ರಾಜ್ಯಪಾಲರಿಗೂ ದೂರು ಹೋಗಿದೆ. ಆದರೆ, ಉತ್ತರ ಕರ್ನಾಟಕದ ವಿವಿಗಳ ಘಟಿಕೋತ್ಸವ ಇನ್ನಿತರ ಸಮಾರಂಭಗಳಿಂದ ದೂರವೇ ಉಳಿದಿರುವ ರಾಜ್ಯಪಾಲರು ಅನ್ಯಾಯದ ವಿರುದ್ಧದ ದೂರನ್ನು ದೂರವೇ ಇಟ್ಟು ಬಿಟ್ಟರೆ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ.
    ಅಮರೇಗೌಡ ಗೋನವಾರ, ಉದಯವಾಣಿ- | Jan 31, 2012

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.